ತಮ್ಮ ತಾಯಿ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವನಾತ್ಮಕ ಬ್ಲಾಗ್ ಬರೆದಿದ್ದಾರೆ. ಅವರು ತಮ್ಮ ತಾಯಿಯೊಂದಿಗೆ ಕಳೆದ ತಮ್ಮ ಬಾಲ್ಯದ ಕೆಲವು ವಿಶೇಷ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಅವರು ಬೆಳೆದಂತೆ ಅವರ ತಾಯಿ ಮಾಡಿದ ಹಲವಾರು ತ್ಯಾಗಗಳನ್ನು ನೆನಪಿಸಿಕೊಂಡಿದ್ದಾರೆ ಮತ್ತು ಅವರ ಮನಸ್ಸು, ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸಿದ ತಾಯಿಯ ನಾನಾ ಗುಣಗಳನ್ನು ಕುರಿತು ಪ್ರಸ್ತಾಪಿಸಿದ್ದಾರೆ.
“ಇಂದು, ನನ್ನ ತಾಯಿ ಶ್ರೀಮತಿ ಹೀರಾಬಾ ಮೋದಿ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಎಂದು ಹಂಚಿಕೊಳ್ಳಲು ನಾನು ತುಂಬಾ ಸಂತೋಷವಾಗುತ್ತಿದೆ ಮತ್ತು ನನಗೆ ಅಂತಹ ಅದೃಷ್ಟ ಸಿಕ್ಕಿದೆ. ಇದು ಅವರ ಜನ್ಮ ಶತಮಾನೋತ್ಸವ ವರ್ಷವಾಗಲಿದೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬರೆದಿದ್ದಾರೆ.
ಪುಟಿದೇಳುವ ಸಂಕೇತ
ತಮ್ಮ ಬಾಲ್ಯದಲ್ಲಿ ತಮ್ಮ ತಾಯಿ ಎದುರಿಸಿದ ಕಷ್ಟಗಳನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, “ನನ್ನ ತಾಯಿ ಎಷ್ಟು ಅಸಾಮಾನ್ಯರೋ, ಇತರೆ ತಾಯಂದಿರಂತೆ ಅಷ್ಟೇ ಸರಳ” ಎಂದು ಹೇಳಿದ್ದಾರೆ. ಬಾಲ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ತಮ್ಮ ತಾಯಿಯನ್ನು ಕಳೆದು ಕೊಂಡಿದ್ದರು. “ಆಕೆಗೆ ನನ್ನ ಅಜ್ಜಿಯ ಮುಖವೂ ಕೂಡ ನೆನಪಿನಲ್ಲಿಲ್ಲ ಅಥವಾ ಆಕೆಯ ಮಡಿಲಲ್ಲಿ ಮಲಗಿದ್ದು ನೆನಪಿಲ್ಲ. ಆಕೆ ತನ್ನ ಇಡೀ ಬಾಲ್ಯವನ್ನು ತಾಯಿಯಿಲ್ಲದೆ ಕಳೆದರು” ಎಂದು ಹೇಳಿದರು.
ವಡ್ನಗರದಲ್ಲಿ ಮಣ್ಣಿನ ಗೋಡೆಗಳು ಮತ್ತು ಮೇಲ್ಛಾವಣಿಗೆ ಮಣ್ಣಿನ ಹೆಂಚು ಹೊಂದಿದ್ದ ಪುಟ್ಟ ಮನೆಯಲ್ಲಿ ಪೋಷಕರು ಹಾಗೂ ಒಡಹುಟ್ಟಿದವರೊಂದಿಗೆ ಜತೆ ವಾಸಿಸುತ್ತಿದ್ದುದನ್ನು ಅವರು ಸ್ಮರಿಸಿದ್ದಾರೆ. ಪ್ರತಿ ದಿನ ತಮ್ಮ ತಾಯಿ ಎದುರಿಸುತ್ತಿದ್ದ ಹಲವು ಅಡೆತಡೆಗಳು ಮತ್ತು ಅದರಿಂದ ಅವರು ಯಶಸ್ವಿಯಾಗಿ ಹೊರಬರುತ್ತಿದ್ದ ಹಲವು ಘಟನೆಗಳನ್ನು ಉಲ್ಲೇಖಿಸಿದ್ದಾರೆ.
ತಮ್ಮ ತಾಯಿ ಮನೆಯ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತಿದ್ದುದಲ್ಲದೆ, ಕುಟುಂಬದ ಅಲ್ಪ ಆದಾಯಕ್ಕೆ ಪೂರಕವಾಗಿಯೂ ಕೆಲಸ ಮಾಡುತ್ತಿದ್ದರು. ಆಕೆ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು ಮತ್ತು ಮನೆ ಖರ್ಚುಗಳನ್ನು ನಿಭಾಯಿಸಲು ಚರಕ ತಿರುಗಿಸಲು ಸಮಯ ಹೊಂದಿಸಿಕೊಳ್ಳುತ್ತಿದ್ದರು.
“ಮಳೆ ಬಂದಾಗ ನಮ್ಮ ಮನೆಯ ಛಾವಣಿ ಸೋರುತ್ತಿತ್ತು ಮತ್ತು ಮನೆಯಲ್ಲಿ ಪ್ರವಾಹ ಏರ್ಪಡುತ್ತಿತ್ತು. ನನ್ನ ತಾಯಿ ಮಳೆ ನೀರನ್ನು ಸಂಗ್ರಹಿಸಲು ನೀರು ಸೋರುತ್ತಿದ್ದ ಜಾಗದಲ್ಲಿ ಬಕೆಟ್ ಹಾಗೂ ಪಾತ್ರೆಗಳನ್ನು ಇಡುತ್ತಿದ್ದರು. ಇಂತಹ ಪ್ರತಿಕೂಲ ಸಂದರ್ಭಗಳಲ್ಲೂ ನನ್ನ ತಾಯಿ ಪುಟಿದೇಳುವ ಅಥವಾ ಸ್ಥೈರ್ಯದ ಸಂಕೇತವಾಗಿದ್ದಾರೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಲುಕು ಹಾಕಿದ್ದಾರೆ.
ಸ್ವಚ್ಛತೆಯಲ್ಲಿ ತೊಡಗಿರುವವರ ಬಗ್ಗೆ ಭಾರಿ ಗೌರವ
ಸ್ವಚ್ಛತೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ತಮ್ಮ ತಾಯಿ ಸದಾ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದರು ಎಂದು ಹೇಳಿದ್ದಾರೆ. ಶುಚಿತ್ವ ಕಾಯ್ದುಕೊಳ್ಳುವಲ್ಲಿ ತಮ್ಮ ತಾಯಿಯ ಪಾತ್ರದ ಕುರಿತು ಹಲವು ಪ್ರಸಂಗಗಳನ್ನು ಅವರು ಹಂಚಿಕೊಂಡಿದ್ದಾರೆ.
ಸ್ವಚ್ಛತೆ ಮತ್ತು ನೈರ್ಮಲೀಕರಣದಲ್ಲಿ ತೊಡಗಿರುವವರ ಬಗ್ಗೆ ತಮ್ಮ ತಾಯಿಗೆ ಭಾರೀ ಗೌರವವಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಡ್ನಾಗರದಲ್ಲಿ ತಮ್ಮ ಮನೆಗೆ ಹೊಂದಿಕೊಂಡಿದ್ದ ಚರಂಡಿಯನ್ನು ಶುಚಿಗೊಳಿಸಲು ಯಾರಾದರು ಬಂದರೆ ಅವರಿಗೆ ಚಹಾ ನೀಡದೆ ಅವರನ್ನು ಕಳುಹಿಸುತ್ತಿರಲಿಲ್ಲ.
ಇತರೆಯವರ ಆನಂದದಲ್ಲಿ ತಮ್ಮ ಸಂತೋಷ ಕಾಣುತ್ತಿದ್ದರು
ತಮ್ಮ ತಾಯಿ ಇತರೆಯವರ ಆನಂದದಲ್ಲಿ ತಾವು ಸಂತೋಷವನ್ನು ಕಾಣುತ್ತಿದ್ದರು ಮತ್ತು ತುಂಬಾ ವಿಶಾಲ ಹೃದಯ ಹೊಂದಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ. ಅವರು ‘ನಮ್ಮ ತಂದೆಯ ಅತ್ಯಂತ ನಿಕಟ ಸ್ನೇಹಿತ, ಸಮೀಪದ ಗ್ರಾಮದಲ್ಲಿ ನೆಲೆಸಿದ್ದರು. ಅವರ ಅಕಾಲಿಕ ಮರಣದ ನಂತರ ನನ್ನ ತಂದೆ ತನ್ನ ಸ್ನೇಹಿತನ ಮಗ ಅಬ್ಬಾಸ್ ನನ್ನು ನಮ್ಮ ಮನೆಗೆ ಕರೆ ತಂದರು. ಆತ ನಮ್ಮೊಡನೆ ವಾಸ್ತವ್ಯ ಹೂಡಿದ್ದ ಮತ್ತು ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದನು. ತಾಯಿ ನನ್ನ ಇತರೆ ಒಡಹುಟ್ಟಿದವರಿಗಾಗಿ ತೋರುತ್ತಿದ್ದ ಪ್ರೀತಿ ಹಾಗೂ ಆರೈಕೆಯನ್ನು ಅಬ್ಬಾಸಗೂ ತೋರುತ್ತಿದ್ದರು. ಪ್ರತಿ ವರ್ಷ ಈದ್ ವೇಳೆ ಆತನಿಗೆ ಇಷ್ಟವಾದ ಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದರು. ಹಬ್ಬಗಳ ವೇಳೆ ನೆರೆಹೊರೆಯ ಎಲ್ಲ ಮಕ್ಕಳು ನಮ್ಮ ಮನೆಗೆ ಬಂದು ಸೇರುತ್ತಿದ್ದುದು ಸಾಮಾನ್ಯವಾಗಿತ್ತು. ತಾಯಿ ಮಾಡುತ್ತಿದ್ದ ವಿಶೇಷ ಅಡುಗೆಗಳನ್ನು ಎಲ್ಲರೂ ಆಸ್ವಾದಿಸುತ್ತಿದ್ದೆವು” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಎರಡು ಸಂದರ್ಭಗಳಲ್ಲಿ ಮಾತ್ರ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ
ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ಬ್ಲಾಗ್ ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ತಮ್ಮೊಂದಿಗೆ ತಮ್ಮ ತಾಯಿ ಎರಡು ಬಾರಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಒಂದು ಏಕತಾ ಯಾತ್ರೆ ಪೂರ್ಣಗೊಳಿಸಿ, ಲಾಲ್ ಛೌಕದಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ, ಶ್ರೀನಗರದಿಂದ ವಾಪಸ್ ಆದ ಬಳಿಕ ಅಹಮದಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ತಾಯಿ ನನ್ನ ಹಣೆಗೆ ತಿಲಕವನ್ನಿಟ್ಟಿದ್ದರು. ಎರಡನೇ ಬಾರಿ 2001ರಲ್ಲಿ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ.
ತಮ್ಮ ತಾಯಿಯಿಂದ ಜೀವನ ಪಾಠ ಕಲಿತ ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಔಪಚಾರಿಕವಾಗಿ ಶಿಕ್ಷಣವಿಲ್ಲದೆಯೂ ಕಲಿಯಲು ಸಾಧ್ಯ ಎಂಬುದನ್ನು ನಮ್ಮ ತಾಯಿ ನನಗೆ ಅರ್ಥ ಮಾಡಿಸಿದ್ದಾರೆ ಎಂದು ಬರೆದಿದ್ದಾರೆ. ಅವರು ನನ್ನ ಅತಿ ದೊಡ್ಡ ಶಿಕ್ಷಕಿ - ತಾಯಿ ಸೇರಿದಂತೆ ಎಲ್ಲ ಶಿಕ್ಷಕರನ್ನು ಸಾರ್ವಜನಿಕವಾಗಿ ಗೌರವಿಸಲು ಬಯಸಿದ್ದಾಗ ನಡೆದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಆದರೆ ಅವರ ತಾಯಿ ‘ನೋಡು ನಾನು ಸಾಮಾನ್ಯ ವ್ಯಕ್ತಿ, ನಾನು ನಿನಗೆ ಜನ್ಮ ನೀಡಿರಬಹುದು. ಆದರೆ ನೀವು ಆ ದೇವರಿಂದ ಬೆಳೆಸಲ್ಪಟ್ಟೆ ಮತ್ತು ಕಲಿಸಲ್ಪಟ್ಟೆ’’ ಹೇಳಿ ಅದನ್ನು ಎಂದು ತಿರಸ್ಕರಿಸಿದ್ದರು.
ತಮ್ಮ ತಾಯಿ ಈ ಕಾರ್ಯಕ್ರಮಕ್ಕೆ ಬಾರದಿದ್ದರೂ ಸಹ, ತಮ್ಮ ಸ್ಥಳೀಯ ಶಿಕ್ಷಕಿ ಅಕ್ಷರ ಕಲಿಸಿದ ಜೀಥಾಭಾಯಿ ಜೋಶಿ ಜಿ ಕುಟುಂಬದಿಂದ ಒಬ್ಬರನ್ನು ಕರೆಸಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದರು. “ಅವರ ಚಿಂತನಾ ಪ್ರಕ್ರಿಯೆ ಮತ್ತು ದೂರದೃಷ್ಟಿಯ ಆಲೋಚನೆ ಸದಾ ನನಗೆ ಆಶ್ಚರ್ಯವನ್ನುಂಟು ಮಾಡುತ್ತಿತ್ತು’’ ಎಂದು ಅವರು ಹೇಳಿದ್ದಾರೆ.
ಕರ್ತವ್ಯ ನಿಷ್ಠ ನಾಗರಿಕ
ತಮ್ಮ ತಾಯಿ ಒಬ್ಬ ಕರ್ತವ್ಯನಿಷ್ಠ ಪ್ರಜೆಯಾಗಿದ್ದಾರೆ. ಅವರು ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಚುನಾವಣೆಗಳು ಆರಂಭವಾದಾಗಿನಿಂದಲೂ ಪ್ರತಿಯೊಂದು ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅತ್ಯಂತ ಸರಳ ಜೀವನ ಶೈಲಿ ಪಾಲನೆ
ತಮ್ಮ ತಾಯಿಯ ಅತ್ಯಂತ ಸರಳ ಜೀವನಶೈಲಿ ಪಾಲನೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂದಿಗೂ ಸಹ ತಮ್ಮ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿಗಳಿಲ್ಲ ಎಂದು ಬರೆದಿದ್ದಾರೆ. “ಆಕೆ ಎಂದೂ ಚಿನ್ನದ ಒಡವೆಗಳನ್ನು ಧರಿಸಿದ್ದನ್ನು ನಾನು ನೋಡಿಲ್ಲ ಮತ್ತು ಆಕೆಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ. ಆಕೆ ಹಿಂದಿನಂತೆಯೇ ತನ್ನ ಸಣ್ಣ ಕೋಣೆಯೊಳಗೆ ಅತ್ಯಂತ ಸರಳ ಜೀವನವನ್ನು ಮುಂದುವರಿಸಿದ್ದಾರೆ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಪ್ರಸಕ್ತ ಬೆಳವಣಿಗೆಗಳ ಬಗ್ಗೆ ತಿಳಿಯುವಲ್ಲಿ ಹಿಂದೆಬಿದ್ದಿಲ್ಲ
ಜಗತ್ತಿನ ಸದ್ಯದ ಬೆಳವಣಿಗೆಗಳ ಬಗ್ಗೆ ತಿಳಿಯುವಲ್ಲಿ ತಮ್ಮ ತಾಯಿ ಹಿಂದೆಬಿದ್ದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ತಮ್ಮ ಬ್ಲಾಗ್ ನಲ್ಲಿ “ಇತ್ತೀಚೆಗೆ ನಾನು ಆಕೆಯನ್ನು ಪ್ರತಿ ದಿನ ಎಷ್ಟು ಸಮಯ ಟಿವಿ ನೋಡುತ್ತೀಯ ಎಂದು ಕೇಳಿದ್ದೆ. ಆಕೆ ಟಿವಿಯಲ್ಲಿನ ಬಹುತೇಕ ಜನರು ತಮ್ಮ ತಮ್ಮ ನಡುವೆ ಜಗಳದಲ್ಲೇ ಮುಳುಗಿರುತ್ತಾರೆ ಎಂದು ಪ್ರತಿಕ್ರಿಯಿಸಿದ್ದರು ಹಾಗೂ ತಾನು ಅತ್ಯಂತ ತಾಳ್ಮೆಯಿಂದ ಸುದ್ದಿಯನ್ನು ಓದುವ ಮತ್ತು ಪ್ರತಿಯೊಂದನ್ನು ವಿವರಿಸುವ ಟಿವಿಯನ್ನು ಮಾತ್ರ ನೋಡುತ್ತೇನೆ ಎಂದು ಹೇಳಿದರು. ಆಗ ನನ್ನ ತಾಯಿ ಇಷ್ಟು ಸಂಗತಿಗಳ ಬಗ್ಗೆ ನಿಗಾ ಇಟ್ಟಿದ್ದಾರಲ್ಲಾ ಎಂದು ತಿಳಿದು ಅಚ್ಚರಿಯಾಯಿತು’’ ಎಂದು ಹೇಳಿದ್ದಾರೆ.
ವಯಸ್ಸಾಗಿದ್ದರೂ ಬುದ್ದಿ ಚುರುಕು
ವಯಸ್ಸಾಗಿದ್ದರೂ ತಮ್ಮ ತಾಯಿ ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ತೋರಿಸುವ 2017ರ ಮತ್ತೊಂದು ನಿದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. 2017ರಲ್ಲಿ ಪ್ರಧಾನಿ ಮೋದಿ ಕಾಶಿಯಿಂದ ನೇರವಾಗಿ ಅವರನ್ನು ಭೇಟಿಯಾಗಲು ಹೋಗಿದ್ದರು ಮತ್ತು ಪ್ರಸಾದ ತಂದಿದಿದ್ದರು. “ನಾನು ತಾಯಿಯನ್ನು ಭೇಟಿಯಾದಾಗ, ಅವರು ಕಾಶಿ ವಿಶ್ವನಾಥ ಮಹಾದೇವನಿಗೆ ಪೂಜೆ ಸಲ್ಲಿಸಿದ್ದೀಯಾ ಎಂದು ತಕ್ಷಣ ನನ್ನನ್ನು ಕೇಳಿದರು. ತಾಯಿ ಇನ್ನೂ ಪೂರ್ಣ ಹೆಸರು ಕಾಶಿ ವಿಶ್ವನಾಥ ಮಹಾದೇವವನ್ನು ಬಳಸುತ್ತಾರೆ. ನಂತರ ಮಾತುಕತೆ ವೇಳೆ, ಯಾರದೋ ಮನೆಯ ಆವರಣದಲ್ಲಿ ದೇವಸ್ಥಾನವಿದೆ ಎಂದು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗಗಳು ಇನ್ನೂ ಒಂದೇ ಆಗಿವೆಯೇ ಎಂದು ಅವರು ನನ್ನನ್ನು ಕೇಳಿದರು, ನನಗೆ ಆಶ್ಚರ್ಯವಾಯಿತು ಮತ್ತು ಆಕೆಯನ್ನು ದೇವಸ್ಥಾನಕ್ಕೆ ಯಾವಾಗ ಭೇಟಿ ನೀಡಿದ್ದೆ ಎಂದು ಕೇಳಿದ್ದೆ, ಆಕೆ ತಾನು ಹಲವು ವರ್ಷಗಳ ಹಿಂದೆ ಕಾಶಿಗೆ ಹೋಗಿದ್ದೆ ಎಂದರು. ಆದರೆ ಆಶ್ಚರ್ಯಕರವಾಗಿ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇತರೆಯವರ ಆಯ್ಕೆಗೆ ಗೌರವ
ತನ್ನ ತಾಯಿ ಇತರರ ಆಯ್ಕೆಗಳನ್ನು ಗೌರವಿಸುವುದು ಮಾತ್ರವಲ್ಲದೆ ತನ್ನ ಆದ್ಯತೆಗಳನ್ನು ಹೇರುವುದನ್ನು ತಡೆಯುತ್ತಾರೆ ಎಂದು ಪ್ರಧಾನಿ ಮೋದಿ ವಿವರಿಸಿದರು. “ನನ್ನ ವಿಷಯದಲ್ಲಿ ವಿಶೇಷವಾಗಿ, ಆಕೆ ನನ್ನ ನಿರ್ಧಾರಗಳನ್ನು ಗೌರವಿಸಿದಳು, ಯಾವುದೇ ಅಡೆತಡೆಗಳನ್ನು ಸೃಷ್ಟಿಸಲಿಲ್ಲ ಮತ್ತು ನನ್ನನ್ನು ಪ್ರೋತ್ಸಾಹಿಸಿದಳು. ಬಾಲ್ಯದಿಂದಲೂ, ನನ್ನೊಳಗೆ ವಿಭಿನ್ನ ಮನಸ್ಥಿತಿ ಬೆಳೆದಿದೆ ಎಂದು ಅವಳು ಭಾವಿಸುತ್ತಿದ್ದಳು’’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ಮೋದಿಯವರು ಮನೆ ಬಿಡಲು ನಿರ್ಧರಿಸಿದಾಗ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದು ಅವರ ತಾಯಿ. ನನ್ನ ಆಸೆಗಳನ್ನು ಅರ್ಥಮಾಡಿಕೊಂಡು ನನ್ನ ತಾಯಿ “ನಿನ್ನ ಮನಸ್ಸಿಗೆ ತೋಚಿದಂತೆ ಮಾಡು’’ ಎಂದು ಆಶೀರ್ವದಿಸಿದಳು.
ಬಡವರ ಕಲ್ಯಾಣಕ್ಕೆ ಆದ್ಯತೆ
ಬಡವರ ಕಲ್ಯಾಣಕ್ಕೆ ದೃಢ ಹೊಂದಲು ಮತ್ತು ಅತ್ತ ಹೆಚ್ಚಿನ ಗಮನಹರಿಸಲು ತನ್ನ ತಾಯಿ ಸದಾ ಸ್ಫೂರ್ತಿ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಅವರು 2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಘೋಷಿಸಲ್ಪಟ್ಟ ಪ್ರಸಂಗವನ್ನು ಹಂಚಿಕೊಂಡಿದ್ದಾರೆ. ಗುಜರಾತ್ ತಲುಪಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ತಮ್ಮ ತಾಯಿಯನ್ನು ಭೇಟಿಯಾಗಲು ತೆರಳಿದರು. ಅವಳು ಅತ್ಯಂತ ಭಾವಪರವಶಳಾಗಿದ್ದಳು ಮತ್ತು ಆಕೆ ಹೇಳಿದಳು, "ನನಗೆ ಸರ್ಕಾರದಲ್ಲಿ ನಿನ್ನ ಕೆಲಸ ಅರ್ಥವಾಗುವುದಿಲ್ಲ, ಆದರೆ ನೀನು ಎಂದಿಗೂ ಲಂಚ ತೆಗೆದುಕೊಳ್ಳಬಾರದೆಂದು ನಾನು ಬಯಸುತ್ತೇನೆ’’ ಎಂದು ಹೇಳಿದ್ದರು.
ನಾನು ಆಕೆಯ ಬಗ್ಗೆ ಚಿಂತಿಸಬಾರದು ಮತ್ತು ದೊಡ್ಡ ಜವಾಬ್ದಾರಿಗಳತ್ತ ಗಮನಹರಿಸಬೇಕೆಂದು ತನ್ನ ತಾಯಿ ಸದಾ ನನಗೆ ಭರವಸೆ ನೀಡುತ್ತಾರೆ. ನಾನು ಆಕೆಯೊಂದಿಗೆ ಯಾವಾಗ ದೂರವಾಣಿಯಲ್ಲಿ ಮಾತನಾಡಿದರೂ ತಾಯಿ ಹೇಳುತ್ತಾಳೆ, “ಯಾರೊಂದಿಗೂ ಯಾವುದೇ ತಪ್ಪು ಅಥವಾ ಯಾವುದೇ ಕೆಟ್ಟದ್ದನ್ನು ಮಾಡಬೇಡ ಮತ್ತು ಬಡವರಿಗಾಗಿ ಕೆಲಸ ಮಾಡಿ’’ ಎಂದು.
ಪರಿಶ್ರಮವೇ- ಜೀವನದ ಮಂತ್ರ
ತನ್ನ ತಂದೆ-ತಾಯಿಯ ಪ್ರಾಮಾಣಿಕತೆ ಮತ್ತು ಸ್ವಾಭಿಮಾನ ಅವರ ದೊಡ್ಡ ಗುಣಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಡತನ ಮತ್ತು ಅದರ ಜೊತೆಗಿರುವ ಸವಾಲುಗಳ ಹೊರತಾಗಿಯೂ, ಅವರ ಪೋಷಕರು ಎಂದಿಗೂ ಪ್ರಾಮಾಣಿಕತೆಯ ಹಾದಿಯನ್ನು ತೊರೆಯಲಿಲ್ಲ ಅಥವಾ ಅವರ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಯಾವುದೇ ಸವಾಲನ್ನು ಜಯಿಸಲು ನಿರಂತರ ಪರಿಶ್ರಮಪಡಬೇಕು ಎಂಬುದು ಅವರ ಪ್ರಮುಖ ಮಂತ್ರವಾಗಿತ್ತು!
ಮಾತೃಶಕ್ತಿಯ ಪ್ರತೀಕ
ಪ್ರಧಾನಿ ನರೇಂದ್ರ ಮೋದಿ ಅವರು, “ತನ್ನ ತಾಯಿಯ ಜೀವನಗಾಥೆಯಲ್ಲಿ, ನಾನು ಭಾರತದ ಮಾತೃಶಕ್ತಿಯ ತಪಸ್ಸು, ತ್ಯಾಗ ಮತ್ತು ಕೊಡುಗೆಯನ್ನು ಕಾಣುತ್ತೇನೆ. ನನ್ನ ತಾಯಿ ಮತ್ತು ಅವರಂತಹ ಕೋಟಿಗಟ್ಟಲೆ ಮಹಿಳೆಯರನ್ನು ನೋಡಿದಾಗ, ಭಾರತೀಯ ಮಹಿಳೆಯರಿಗೆ ಸಾಧಿಸಲಾಗದ್ದ ಯಾವುದೂ ಇಲ್ಲ ಎಂದು ನಾನು ಕಂಡುಕೊಂಡಿದ್ದೇನೆ’’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯ ಸ್ಪೂರ್ತಿದಾಯಕ ಜೀವನಗಾಥೆಯನ್ನು ಕೆಲವು ಪದಗಳಲ್ಲಿ ವರ್ಣಿಸಿದ್ದಾರೆ.
“ಪ್ರತಿಯೊಂದು ಕೊರತೆಯ ಕಥೆಯ ನಡುವೆಯೂ, ತಾಯಿಯ ಅದ್ಭುತ ಕತೆಯಿದೆ.
ಪ್ರತಿತೊಂದು ಹೋರಾಟದ ಹಿಂದೆಯೂ, ತಾಯಿಯ ದೃಢ ಸಂಕಲ್ಪವಿದೆ’’
Took blessings of my mother today as she enters her 100th year... pic.twitter.com/lTEVGcyzdX
— Narendra Modi (@narendramodi) June 18, 2022
मां, ये सिर्फ एक शब्द नहीं है, जीवन की वो भावना है, जिसमें स्नेह, धैर्य, विश्वास, कितना कुछ समाया है।
— Narendra Modi (@narendramodi) June 18, 2022
मेरी मां, हीराबा आज 18 जून को अपने सौवें वर्ष में प्रवेश कर रही हैं, उनका जन्म शताब्दी वर्ष प्रारंभ हो रहा है। मैं अपनी खुशी और सौभाग्य साझा कर रहा हूं। https://t.co/4YHk1a59RD
Maa…this isn’t a mere word but it captures a range of emotions. Today, 18th June is the day my Mother Heeraba enters her 100th year. On this special day, I have penned a few thoughts expressing joy and gratitude. https://t.co/KnhBmUp2se
— Narendra Modi (@narendramodi) June 18, 2022