ಮೊರೋಕ್ಕೊ ದೇಶದ ಕೈಗಾರಿಕಾ, ಹೂಡಿಕೆ, ವ್ಯಾಪಾರ ಮತ್ತು ಡಿಜಿಟಲ್ ಆರ್ಥಿಕ ಸಚಿವಾಲಯದ ವಿದೇಶೀ ವ್ಯಾಪಾರ ಉಸ್ತುವಾರಿ ರಾಜ್ಯ ಕಾರ್ಯದರ್ಶಿ ಶ್ರೀಮತಿ ರಖಿಯಾ ಎಡ್ಡರ್ ಹಾಂ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಶ್ರೀಮತಿ ರಖಿಯಾ ಎಡ್ಡರ್ ಹಾಂ ಅವರು ಮೊರೊಕ್ಕೋದ ಗೌರವಾನ್ವಿತ ದೊರೆಯ ಶುಭಾಶಯಗಳನ್ನು ಪ್ರಧಾನಮಂತ್ರಿ ಅವರಿಗೆ ತಿಳಿಸಿದರು. ಗೌರವಾನ್ವಿತ ದೊರೆಯ ಜೊತೆ ತಮ್ಮ ಈ ಮೊದಲಿನ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಗಳು ಗೌರವಾನ್ವಿತ ದೊರೆಗೆ ಉತ್ತಮ ಆರೋಗ್ಯ , ಸುಖ ಹಾಗು ಮೊರೊಕ್ಕೋ ಜನತೆಗೆ ಶಾಂತಿ, ಸಮೃದ್ದಿಯ ಶುಭ ಸಂದೇಶಗಳನ್ನು ತಿಳಿಸಿದರು.
ಶ್ರೀಮತಿ ರಖಿಯಾ ಎಡ್ಡರ್ ಹಾಂ ಅವರು ಹಿಂದಿನ ವರ್ಷಗಳಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿ ಆಗಿರುವ ಗಣನೀಯ ಪ್ರಗತಿಯನ್ನು ಅವಲೋಕಿಸಿದರು. ನಿರ್ದಿಷ್ಟವಾಗಿ ಕಾನೂನು ಸಹಕಾರ, ಸೈಬರ್ ಭದ್ರತೆ, ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿರುವುದನ್ನು ಮನಗಂಡರು. ಪ್ರಧಾನಮಂತ್ರಿ ಅವರು ಉಭಯದೇಶಗಳ ನಡುವಿನ ಚಾರಿತ್ರಿಕವಾಗಿ ಬಲಿಷ್ಟವಾಗಿರುವ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಮತ್ತು ವಿಸ್ತರಿಸುವ ಪ್ರಯತ್ನಗಳನ್ನು , ಜೊತೆಗೆ ಗುಜರಾತ್ ರಾಜ್ಯದ ಜೊತೆ ಮೊರೋಕ್ಕೋದ ವ್ಯಾಪಾರ ಮತ್ತು ಹೂಡಿಕೆಯ ಬಾಂಧವ್ಯವನ್ನು ಅವರು ಸ್ವಾಗತಿಸಿದರು.