ಆಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಸಲಾಹುದ್ದೀನ್ ರಬ್ಬಾನಿ ಅವರಿಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.
ಆಫ್ಘಾನಿಸ್ತಾನದೊಂದಿಗಿನ ಬಾಂಧವ್ಯಕ್ಕೆ ಭಾರತವು ಉನ್ನತ ಆದ್ಯತೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಸ್ಪಷ್ಟಪಡಿಸಿದರು. ಆಫ್ಘಾನಿಸ್ತಾನ ಮತ್ತು ಅದರ ಜನತೆಯ ಮೇಲೆ ಎರಗಿರುವ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಭಾರತದ ಬಲವಾದ ಬೆಂಬಲವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಶಾಂತಿಯುತ, ಸಂಘಟಿತ, ಜನಸತ್ತಾತ್ಮಕ ಮತ್ತು ಪ್ರಗತಿಪರ ರಾಷ್ಟ್ರ ನಿರ್ಮಾಣ ಮಾಡುವ ಆಫ್ಘಾನಿಸ್ತಾನದ ಸರ್ಕಾರ ಮತ್ತು ಜನತೆಯ ಪ್ರಯತ್ನಕ್ಕೆ ಮಾನವೀಯ ಮತ್ತು ಅಭಿವೃದ್ಧಿ ನೆರವು ಸೇರಿದಂತೆ ಸಂಪೂರ್ಣ ಬೆಂಬಲವನ್ನು ಭಾರತ ನೀಡಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.
ವಿದೇಶಾಂಗ ಸಚಿವ ರಬ್ಬಾನಿ ಆಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಯವರಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಆಫ್ಘನ್ ಶಾಂತಿ ಪ್ರಕ್ರಿಯೆಯು ಆಫ್ಘನ್ ನೇತೃತ್ವದ, ಆಫ್ಘನ್ ನಿಯಂತ್ರಿತ ಮತ್ತು ಆಫ್ಘನ್ ಸ್ವಾಮ್ಯದ್ದಾಗಿರಬೇಕು ಎಂಬುದಕ್ಕೆ ಇಬ್ಬರೂ ನಾಯಕರು ಸಮ್ಮತಿಸಿದರು.
ವಿದೇಶಾಂಗ ಸಚಿವ ರಬ್ಬಾನಿ ಅವರು ಭಾರತ – ಆಫ್ಘಾನಿಸ್ತಾನದ ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿಯ 2ನೇ ಸಭೆಗಾಗಿ ಭಾರತದಲ್ಲಿದ್ದು, ಅದರಲ್ಲಿ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ಸಹ ಅಧ್ಯಕ್ಷತೆ ವಹಿಸಲಿದ್ದಾರೆ.