12 ದೇಶಗಳ ಸಚಿವರ ಮಟ್ಟದ ಪ್ರತಿನಿಧಿಗಳು ರೈಸಿನಾ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಲಾಟ್ವಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಎಡ್ಗರ್ಸ್ ರಿಂಕೆವಿಕ್ಸ್, ಉಜ್ಬೇಕಿಸ್ತಾನ್ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಅಬ್ದುಲಜೀಜ್ ಕಮಿಲೋವ್, ಹಂಗೇರಿಯ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಸಚಿವ ಶ್ರೀ ಪೀಟರ್ ಸಿಜ್ಜಾರ್ಟೊ, ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಡಾ. ಹಮ್ದುಲ್ಲಾ ಮೊಹಿಬ್, ಜೆಕ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವ ತೋಮಸ್ ಪೆಟ್ರಿಸೆಕ್, ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಅಬ್ದುಲ್ಲಾ ಶಾಹಿದ್, ಬಾಂಗ್ಲಾದೇಶದ ಮಾಹಿತಿ ಸಚಿವ ಡಾ.ಹಸನ್ ಮಹಮೂದ್, ಎಸ್ಟೋನಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಉರ್ಮಾಸ್ ರೀನ್ಸಲು, ದಕ್ಷಿಣ ಆಫ್ರಿಕಾದ ಅಂತರರಾಷ್ಟ್ರೀಯ ಸಂಬಂಧ ಮತ್ತು ಸಹಕಾರ ಸಚಿವ ಡಾ. ನಲೇದಿ ಪಂಡೋರ್, ಡೆನ್ಮಾರ್ಕ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಜೆಪ್ಪೆ ಕೊಫೊಡ್, ಕಾಮನ್‌ವೆಲ್ತ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪೆಟ್ರೀಷಿಯಾ ಸ್ಕಾಟ್ಲೆಂಡ್, ಶಾಂಘೈ ಸಹಕಾರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವ್ಲಾಡಿಮಿರ್ ನೊರೊವ್ ಅವರು ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿಯವರು ಈ ನಾಯಕರನ್ನು ಭಾರತಕ್ಕೆ ಸ್ವಾಗತಿಸಿದರು ಮತ್ತು ರೈಸಿನಾ ಮಾತುಕತೆ 2020 ರಲ್ಲಿ ಭಾಗವಹಿಸುತ್ತಿರುವುದಕ್ಕೆ ಶ್ಲಾಘಿಸಿದರು. ತ್ವರಿತ ಮತ್ತು ಅಂತರ್ಗತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ಕೈಗೊಂಡ ಬೃಹತ್ ಪ್ರಮಾಣದ ಪ್ರಯತ್ನಗಳ ಬಗ್ಗೆ ಪ್ರಧಾನಿಯವರು ಮಾತನಾಡಿದರು. ಪ್ರಮುಖ ಜಾಗತಿಕ ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಯಲ್ಲಿ ಅವರ ಮಹತ್ವದ ಬಗ್ಗೆ ತಿಳಿಸಿದರು.