ಯುರೋಪಿಯನ್ ಸಂಸತ್ತಿನ ಸದಸ್ಯರು ಇಂದು ನವದೆಹಲಿಯ ನಂ.7, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಸಂಸದರು ತಮ್ಮ ಅವಧಿಯ ಆರಂಭದಲ್ಲಿಯೇ ಭೇಟಿ ನೀಡುವ ಮೂಲಕ ಭಾರತದೊಂದಿಗಿನ ತಮ್ಮ ಸಂಬಂಧಕ್ಕೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದನ್ನು ಪ್ರಧಾನ ಮಂತ್ರಿಯವರು ಶ್ಲಾಘಿಸಿದರು.
ಐರೋಪ್ಯ ಒಕ್ಕೂಟದೊಂದಿಗಿನ ಭಾರತದ ಸಂಬಂಧವು ಹಂಚಿಕೊಂಡ ಹಿತಾಸಕ್ತಿಗಳು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸಾಮಾನ್ಯ ಬದ್ಧತೆಯನ್ನು ಆಧರಿಸಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ನ್ಯಾಯಯುತ ಮತ್ತು ಸಮತೋಲಿತ ಬಿಟಿಐಎ ಯ ಶೀಘ್ರ ತೀರ್ಮಾನವು ಸರ್ಕಾರಕ್ಕೆ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಐರೋಪ್ಯ ಒಕ್ಕೂಟದ ಜೊತೆಗಿನ ಒಪ್ಪಂದವನ್ನು ಬಲಪಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಭಯೋತ್ಪಾದನೆ ವಿರುದ್ಧ ಹೋರಾಡಲು ನಿಕಟ ಅಂತರರಾಷ್ಟ್ರೀಯ ಸಹಕಾರದ ಮಹತ್ವವನ್ನು ತಿಳಿಸಿದರು. ಜಾಗತಿಕ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಬೆಳವಣಿಗೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಪ್ರಧಾನಮಂತ್ರಿಯವರು ಭಾರತಕ್ಕೆ ನಿಯೋಗವನ್ನು ಸ್ವಾಗತಿಸುತ್ತಾ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಅವರು ನೀಡುವ ಫಲಪ್ರದವಾಗಿರುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ನಿಯೋಗದ ಭೇಟಿಯು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಪ್ರದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ ಮತ್ತು ಆ ಪ್ರದೇಶದ ಅಭಿವೃದ್ಧಿ ಮತ್ತು ಆಡಳಿತದ ಆದ್ಯತೆಗಳ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.
ವ್ಯವಹಾರ ಮಾಡಲು ಅನುಕೂಲತೆ ಶ್ರೇಯಾಂಕದಲ್ಲಿ ಭಾರತದ ಸ್ಥಾನವು 2014 ರಲ್ಲಿ 142 ರಿಂದ ಪ್ರಸ್ತುತ 63 ಕ್ಕೆ ಏರಿದೆ ಎಂದು ಪ್ರಧಾನ ಮಂತ್ರಿಯವರು ಎತ್ತಿ ತೋರಿಸಿದರು. ಭಾರತದಂತಹ ದೊಡ್ಡ ಗಾತ್ರದ, ಜನಸಂಖ್ಯೆಯಲ್ಲಿ ಮತ್ತು ವೈವಿಧ್ಯತೆಯಲ್ಲಿ ಅಗಾಧವಾದ ದೇಶಕ್ಕೆ ಇದು ಒಂದು ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು. ಆಡಳಿತ ವ್ಯವಸ್ಥೆಗಳು ಇಂದು ಜನರು ಮಹತ್ವಾಕಾಂಕ್ಷೆಯ ದಿಕ್ಕಿನಲ್ಲಿ ಸಾಗಲು ಅನುವು ಮಾಡಿಕೊಡುತ್ತಿವೆ ಎಂದು ಹೇಳಿದರು.
ಎಲ್ಲಾ ಭಾರತೀಯರಿಗೆ ಸುಲಭವಾದ ಜೀವನವನ್ನು ಖಾತರಿಪಡಿಸುವ ಬಗ್ಗೆ ಇರುವ ಸರ್ಕಾರದ ಉದ್ದೇಶವನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ಸ್ವಚ್ಛ ಭಾರತ ಮತ್ತು ಆಯುಷ್ಮಾನ್ ಭಾರತ್ ಸೇರಿದಂತೆ ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ಯಶಸ್ಸಿನ ಬಗ್ಗೆ ಅವರು ಪ್ರಸ್ತಾಪಿಸಿದರು. ಜಾಗತಿಕ ಗುರಿಗಿಂತ ಐದು ವರ್ಷಗಳ ಮೊದಲು 2025 ರ ವೇಳೆಗೆ ಕ್ಷಯ ರೋಗವನ್ನು ತೊಡೆದುಹಾಕಲು ಇರುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ನವೀಕರಿಸಬಹುದಾದ ಇಂಧನದ ಗುರಿಗಳು ಮತ್ತು ಏಕ ಬಳಕೆಯ ಪ್ಲಾಸ್ಟಿಕ್‌ಗಳ ವಿರುದ್ಧದ ಜಾಗೃತಿಯನ್ನು ಮೂಡಿಸುವುದು ಸೇರಿದಂತೆ ಪರಿಸರ ಸಂರಕ್ಷಣೆ ಮತ್ತು ಪೋಷಣೆಗಾಗಿ ಕೈಗೊಂಡ ಕ್ರಮಗಳ ಕುರಿತು ಅವರು ಮಾತನಾಡಿದರು.