ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿಎಸ್ಟಿಯ ಜಾರಿಗೆ ಸಂಬಂಧಿಸಿದಂತೆ 2016ರ ಸೆಪ್ಟೆಂಬರ್ 14ರಂದು ಸಭೆಯೊಂದನ್ನು ಕರೆದು ಪರಾಮರ್ಶೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು, ಹಣಕಾಸು ಖಾತೆಯ ಇಬ್ಬರೂ ಸಹಾಯಕ ಸಚಿವರು, ಹಣಕಾಸು ಸಚಿವಾಲಯ ಮತ್ತು ಪ್ರಧಾನಮಂತ್ರಿಯವರ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
2017ರ ಏಪ್ರಿಲ್ 1ರಿಂದ ಜಿಎಸ್ಟಿ ಜಾರಿಯ ದಿನಾಂಕದಲ್ಲಿ ಯಾವುದೇ ವಿಳಂಬ ಆಗದಂತೆ ಖಾತ್ರಿ ಪಡಿಸಿಕೊಳ್ಳಲು, ಪ್ರಧಾನಮಂತ್ರಿಯವರು ಮಾದರಿ ಜಿಎಸ್ಟಿ ಕಾನೂನು ಮತ್ತು ನಿಯಮಗಳನ್ನು ರೂಪಿಸುವ, ಕೇಂದ್ರ ಮತ್ತು ರಾಜ್ಯಗಳಿಗೆ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಸ್ಥಾಪಿಸುವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ತರಬೇತಿ ನೀಡುವ ಮತ್ತು ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಅರಿವು ಮೂಡಿಸುವುದಕ್ಕೆ ಸೇರಿದಂತೆ ಜಿಎಸ್ಟಿಯ ಜಾರಿಗೆ ಅಗತ್ಯವಾದ ವಿವಿಧ ಕ್ರಮಗಳ ಪ್ರಗತಿಯ ಪರಾಮರ್ಶೆ ನಡೆಸಿದರು. ಎಲ್ಲ ಕ್ರಮಗಳೂ 2017ರ ಏಪ್ರಿಲ್ 1ಕ್ಕೆ ಮೊದಲೇ ಪೂರ್ಣಗೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ನಿರ್ದೇಶನ ನೀಡಿದರು. ಮಾದರಿ ಜಿಎಸ್ಟಿ ಕಾನೂನುಗಳು, ಜಿಎಸ್ಟಿ ದರಗಳು, ಜಿಎಸ್ಟಿಯಿಂದ ವಿನಾಯಿತಿ ಪಡೆಯಬಹುದಾದ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಶಿಫಾರಸು ಮಾಡಲು, 279 ಎ ವಿಧಿಯಲ್ಲಿ ಒದಗಿಸಿರುವಂತೆ ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಾಲಾನುಕ್ರಮದ ಶಿಫಾರಸುಗಳನ್ನು ಮಾಡಲು ಜಿಎಸ್ಟಿ ಮಂಡಳಿಯು ವ್ಯಾಪಕವಾದ ಸಭೆಗಳನ್ನು ನಡೆಸುವ ಅಗತ್ಯವನ್ನು ಪ್ರಧಾನಿಯವರು ಪ್ರಸ್ತಾಪಿಸಿದರು.