ಐರೋಪ್ಯ ಒಕ್ಕೂಟ ಮಂಡಳಿಯ ಅಧ್ಯಕ್ಷ ಶ್ರೀ ಚಾರ್ಲ್ಸ್ ಮೈಖೆಲ್ ಆಹ್ವಾನದ ಮೇರೆಗೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 8ರಂದು ಭಾರತ-ಐರೋಪ್ಯ ಒಕ್ಕೂಟ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರಗಳ ನಾಯಕರು, ಐರೋಪ್ಯ ಒಕ್ಕೂಟ ಮಂಡಳಿಯ ಅಧ್ಯಕ್ಷರು ಮತ್ತು ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷರು ಭಾಗವಹಿಸಿದ್ದ ಈ ಸಭೆ ಸಂಯೋಜನಾ ಸ್ವರೂಪದಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ಐರೋಪ್ಯ ಒಕ್ಕೂಟ ಮಂಡಳಿ, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರಗಳನ್ನು ಸೇರಿಸಿಕೊಂಡು ಇಯು+27 ಸ್ವರೂಪದಲ್ಲಿ ಈ ಸಮಾವೇಶ ಆಯೊಜಿಸಿತ್ತು. ಪೋರ್ಚುಗಲ್ ಅಧ್ಯಕ್ಷರು ಶೃಂಗಸಭೆಯ ನೇತೃತ್ವ ವಹಿಸಿದ್ದರು.
ಪ್ರಜಾಪ್ರಭುತ್ವದ ಹಂಚಿತ ಬದ್ಧತೆ, ಮೂಲಭೂತ ಸ್ವಾತಂತ್ರ್ಯ, ಪರಸ್ಪರ ಕಾನೂನು ನಿಯಮಗಳು ಮತ್ತು ಬಹುಪಕ್ಷೀಯತೆ ಆಧಾರದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾಯಕರು ಸಮಾವೇಶದಲ್ಲಿ ಇಚ್ಛೆ ವ್ಯಕ್ತಪಡಿಸಿದರು. ಪ್ರಮುಖ ಮೂರು ವಿಷಯಾಧರಿತ ವಲಯಗಳಾದ
1. ವಿದೇಶಾಂಗ ನೀತಿ ಮತ್ತು ಭದ್ರತೆ, 2. ಕೋವಿಡ್-19 ಪರಿಸ್ಥಿತಿಯ ಸಮರ್ಥ ನಿರ್ವಹಣೆ, ಹವಾಮಾನ ಬದಲಾವಣೆ ಮತ್ತು ಪರಿಸರ ನಿರ್ವಹಣೆ ಮತ್ತು
3. ವ್ಯಾಪಾರ, ಸಂಪರ್ಕ ಮತ್ತು ತಂತ್ರಜ್ಞಾನ ರಂಗದಲ್ಲಿ ಸಂಬಂಧ ಬಲವರ್ಧನೆ ಕುರಿತು ನಾಯಕರು ತಮ್ಮ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ವಿರುದ್ಧ ಸಂಘಟಿತ ಹೋರಾಟ ಮತ್ತು ಆರ್ಥಿಕ ಚೇತರಿಕೆಗೆ ನಿಕಟ ಸಹಕಾರ ಹೊಂದಲು ನಾಯಕರು ಚರ್ಚೆ ನಡೆಸಿದರು. ಅಲ್ಲದೆ, ಹವಾಮಾನ ಬದಲಾವಣೆಯ ಪ್ರತೀಕೂಲಗಳನ್ನು ಹತ್ತಿಕ್ಕಲು ಮತ್ತು ಬಹುಪಕ್ಷೀಯ ಸಾಂಸ್ಥಿಕ ಸುಧಾರಣೆಗೆ ನಾಯಕರು ಒತ್ತು ನೀಡಿದರು. ಕೊರೊನಾ 2ನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಐರೋಪ್ಯ ಒಕ್ಕೂಟ ಮತ್ತು ಸದಸ್ಯ ದೇಶಗಳು ನೀಡಿದ ಪ್ರಾಮಾಣಿಕ ನೆರವು ಮತ್ತು ಸಹಾಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು, ಮೆಚ್ಚುಗೆ ವ್ಯಕ್ತಪಡಿಸಿದರು.
ಸಮತೋಲಿತ ಮತ್ತು ಸಮಗ್ರ ಮುಕ್ತ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳ ಸಂಧಾನ ಪುನಾರಂಭಿಸಲು ತೆಗೆದುಕೊಂಡಿರುವ ನಿರ್ಧಾರಗಳನ್ನು ನಾಯಕರು ಸಭೆಯಲ್ಲಿ ಸ್ವಾಗತಿಸಿದರು.
ವ್ಯಾಪಾರ ಮತ್ತು ಹೂಡಿಕೆಯ ಎರಡೂ ಒಪ್ಪಂದಗಳನ್ನು ಜತೆ ಜತೆಗೆ ಆದಷ್ಟು ಬೇಗ ಪೂರ್ಣಗೊಳಿಸುವ ಉದ್ದೇಶದಿಂದ ಪರ್ಯಾಯ ಮಾರ್ಗಗಳಲ್ಲಿ ಸಂಧಾನ ನಡೆಸಲು ನಿರ್ಧರಿಸಲಾಗಿದೆ. ಉಭಯ ರಾಷ್ಟ್ರಗಳು ಆರ್ಥಿಕ ಸಹಭಾಗಿತ್ವದ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಅನುವು ಮಾಡಿಕೊಡುವ ಈ ಸಂಧಾನವು ಮಹತ್ವದ ಮೈಲಿಗಲ್ಲಾಗಲಿದೆ. ವಿಶ್ವ ವ್ಯಾಪಾರ ಒಪ್ಪಂದದ ನಾನಾ ಅಡೆತಡೆಗಳು, ನಿಯಂತ್ರಕ ಸಹಕಾರ, ಮಾರುಕಟ್ಟೆ ಲಭ್ಯತೆ ವಿವಾದಗಳು, ಪೂರೈಕೆ ಸರಪಳಿಯ ಸಮಸ್ಯೆಗಳು, ಆರ್ಥಿಕ ಪಾಲುದಾರಿಕೆಯನ್ನು ವೈವಿಧ್ಯಮಯಗೊಳಿಸಲು ಮತ್ತು ಹೆಚ್ಚಿಸಲು ಅಗತ್ಯವಾದ ಸಮರ್ಪಿತ ಮಾತುಕತೆ ನಡೆಸುವುದಾಗಿ ಸಹ ಭಾರತ-ಐರೋಪ್ಯ ಒಕ್ಕೂಟ ಪ್ರಕಟಿಸಿವೆ.
ಡಿಜಿಟಲ್, ಇಂಧನ, ಸಾರಿಗೆ ಮತ್ತು ಜನರ ನಡುವೆ ಸಂಪರ್ಕ ಸಾಧಿಸುವ ಮಹತ್ವಾಕಾಂಕ್ಷೆಯ ಮತ್ತು ಸಮಗ್ರ ಸಂಪರ್ಕ ಪಾಲುದಾರಿಕೆಯನ್ನು ಭಾರತ ಮತ್ತು ಐರೋಪ್ಯ ಒಕ್ಕೂಟ ಅನಾವರಣಗೊಳಿಸಿವೆ. ಸಾಮಾಜಿಕ, ಆರ್ಥಿಕ, ವಿತ್ತೀಯ, ಹವಾಮಾನ ಮತ್ತು ಪರಿಸರ ಸುಸ್ಥಿರತೆಯ ಹಂಚಿತ ತತ್ವಗಳ ಆಧಾರದಲ್ಲಿ ಮತ್ತು ಅಂತಾರಾಷ್ಟ್ರೀಯ ಕಾನೂನು ಮತ್ತು ಬದ್ಧತೆ ಗೌರವಿಸಿ ಈ ಪಾಲುದಾರಿಕೆ ಹೊಂದಲಾಗಿದೆ. ಪಾಲುದಾರಿಕೆಯ ಈ ಸಂಪರ್ಕ ಯೋಜನೆಗಳಿಗೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆ ಹರಿದುಬರಲಿದೆ. ಇಂಡೋ-ಪೆಸಿಫಿಕ್ ವಲಯ ಸೇರಿದಂತೆ ತೃತೀಯ ರಾಷ್ಟ್ರಗಳ ಸಂಪರ್ಕ ಯೋಜನೆಗಳಿಗೆ ಈ ಪಾಲುದಾರಿಕೆ ವರವಾಗಲಿದೆ.
ಹವಾಮಾನ ಬದಲಾವಣೆಯ ಪ್ಯಾರಿಸ್ ಒಪ್ಪಂದದ ಗುರಿ ಸಾಧಿಸುವ ಬದ್ಧತೆಯನ್ನು ಭಾರತ-ಐರೋಪ್ಯ ಒಕ್ಕೂಟ ಪುನರುಚ್ಚರಿಸಿವೆ. ಹವಾಮಾನ ಬದಲಾವಣೆಯ ಪ್ರತೀಕೂಲಗಳನ್ನು ಸಮರ್ಥವಾಗಿ ಹತ್ತಿಕ್ಕಲು ಅಗತ್ಯವಾದ ಜಂಟಿ ಪ್ರಯತ್ನಗಳನ್ನು ಹೆಚ್ಚಿಸಲು ಸಹ ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಪ್ಯಾರಿಸ್ ಒಪ್ಪಂದ ಜಾರಿಗೆ ಅಗತ್ಯವಾದ ಹಣಕಾಸು ನೆರವು ಒದಗಿಸಲು ಸಹ ಸಹಮತಿ ಸೂಚಿಸಿವೆ. ವಿಕೋಪ ನಿರ್ವಹಣೆಯ ಮೂಲಸೌಕರ್ಯ ಒಕ್ಕೂಟ – ಸಿಡಿಆರ್’ಐ ಸೇರ್ಪಡೆ ಆಗುವ ಐರೋಪ್ಯ ಒಕ್ಕೂಟದ ನಿರ್ಧಾರವನ್ನು ಭಾರತ ಸ್ವಾಗತಿಸಿದೆ. 5ಜಿ, ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಹೈ ಪರ್ಫಾರ್ಮನ್ಸ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ಇನ್ವೆಸ್ಟ್ಮೆಂಟ್ ಫೋರಮ್ ಮತ್ತಿತರ ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನ ವಲಯದಲ್ಲಿ ಭಾರತ ಜತೆ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಐರೋಪ್ಯ ಒಕ್ಕೂಟ ಒಪ್ಪಿಗೆ ಸೂಚಿಸಿದೆ. ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ ಮತ್ತು ಸಾಗರ ಸಹಕಾರದ ಪ್ರಾದೇಶಿಕ ಮತ್ತು ಜಾಗತಿಕ ವಿವಾದಗಳ ಪರಿಹಾರಕ್ಕೆ ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಸಹಕಾರಕ್ಕೆ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. ಮುಕ್ತ, ಎಲ್ಲರನ್ನೂ ಒಳಗೊಂಡ, ನಿಯಾಮಾಧರಿತ ಇಂಡೋ-ಪೆಸಿಫಿಕ್ ವಲಯದ ಸಹಭಾಗಿತ್ವ ಮತ್ತು ಸಹಕಾರ ಅತ್ಯಗತ್ಯ ಎಂದು ನಾಯಕರು ಪ್ರತಿಪಾದಿಸಿದರು.
ಭಾರತ-ಐರೋಪ್ಯ ಒಕ್ಕೂಟ ನಾಯಕರ ಶೃಂಗಸಭೆಯ ಸಮಾಪನದೊಂದಿಗೆ, ಹವಾಮಾನ, ಡಿಜಿಟಲ್ ಮತ್ತು ಆರೋಗ್ಯ ಸಂರಕ್ಷಣೆ ಕ್ಷೇತ್ರದಲ್ಲಿ ಇರುವ ಸಹಕಾರ ಮತ್ತು ಸಹಭಾಗಿತ್ವ ಮಾರ್ಗಗಳನ್ನು ಎತ್ತಿ ಹಿಡಿಯಲು ಭಾರತ-ಇಯು ಉದ್ಯಮ ವ್ಯವಹಾರದ ದುಂಡು ಸುತ್ತಿನ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪುಣೆ ಮೆಟ್ರೊ ರೈಲು ಯೋಜನೆಗೆ 150 ದಶಲಕ್ಷ ಯೂರೊ ಹಣಕಾಸು ನೆರವು ಪಡೆಯುವ ಒಪ್ಪಂದಕ್ಕೆ ಭಾರತ ಸರ್ಕಾರದ ಹಣಕಾಸು ಸಚಿವಾಲಯ ಮತ್ತು ಯೂರೋಪಿನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ನಡುವೆ ಸಹಿ ಬಿತ್ತು.
ಭಾರತ-ಇಯು ನಾಯಕರ ಸಭೆಯು ಕಾರ್ಯತಂತ್ರ ಪಾಲುದಾರಿಕೆಗೆ ಹೊಸ ದಿಕ್ಕು ತೋರುವ ಜತೆಗೆ, 2020 ಜುಲೈನಲ್ಲಿ ನಡೆದ 15 ನೇ ಭಾರತ-ಇಯು ಶೃಂಗಸಭೆಯಲ್ಲಿ ಅಂಗೀಕರಿಸಿದ ಮಹತ್ವಾಕಾಂಕ್ಷೆಯ ಭಾರತ-ಇಯು ಮಾರ್ಗಸೂಚಿಗಳನ್ನು 2025ರ ಭಾರತ-ಇಯು ಶೃಂಗಸಭೆಯಲ್ಲಿ ಕಾರ್ಯಗತಗೊಳಿಸಲು ಹೊಸ ಮೈಲಿಗಲ್ಲು ಸ್ಥಾಪಿಸಿದೆ.