ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಫೆಬ್ರವರಿ 16 ರಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿದ್ದ ಪ್ರಧಾನಿ ಮೋದಿಯವರು, ರಿಕ್ಷಾ ಎಳೆಯುವ ಮಂಗಲ್ ಕೇವತ್ ಅವರನ್ನು ಭೇಟಿ ಮಾಡಿದರು. ಕೇವತ್ ಪ್ರಧಾನಿ ಮೋದಿಯವರಿಗೆ ತಮ್ಮ ಮಗಳ ವಿವಾಹದ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದರು.
ಕೇವತ್ ಅವರು ಪ್ರಧಾನಮಂತ್ರಿ ಕಚೇರಿಯಲ್ಲಿ ವೈಯಕ್ತಿಕವಾಗಿ ಆಹ್ವಾನ ಪತ್ರಿಕೆಯನ್ನು ನೀಡಿದ್ದರು. ಈ ವಿಷಯದ ಬಗ್ಗೆ ತಿಳಿದ ಪ್ರಧಾನಿ ಮೋದಿ ಸ್ವತಃ ಕೇವತ್ ಅವರಿಗೆ ಉತ್ತರಿಸಿದ್ದರು. ಪ್ರಧಾನಿಯವರು ಕೇವತ್ ಅವರ ಮಗಳ ಮದುವೆಗೆ ಶುಭಾಶಯಗಳನ್ನು ತಿಳಿಸಿ ಪತ್ರವೊಂದನ್ನು ಬರೆದಿದ್ದರು. ಇದರಿಂದ ಕೇವತ್ ಮತ್ತು ಅವರ ಕುಟುಂಬ ಸಂತೋಷಗೊಂಡಿತು.
ಪ್ರಧಾನಿಯವರನ್ನು ಭೇಟಿಯಾಗಲು ಬಯಸಿದ್ದ ಕೇವತ್ ಗೆ, ವಾರಣಾಸಿ ಭೇಟಿಯ ಸಮಯದಲ್ಲಿ ಸ್ವತಃ ಪ್ರಧಾನಿ ಮೋದಿಯವರೇ ಭೇಟಿಯಾದ್ದರಿಂದ ಇನ್ನಷ್ಟು ಸಂತಸಗೊಂಡಿದ್ದಾರೆ.
ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತರಾದ ಮಂಗಲ್ ಕೇವತ್, ತಮ್ಮ ಹಳ್ಳಿ ಡೊಮ್ರಿಯಲ್ಲಿ ಗಂಗಾ ನದಿಯ ಘಟ್ಟಗಳನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಗಂಗಾ ಮಾತೆಯ ಭಕ್ತರೂ ಆಗಿರುವ ಕೇವತ್, ತಮ್ಮ ಆದಾಯದ ಒಂದು ಭಾಗವನ್ನು ನದಿಯ ಸ್ವಚ್ಛತೆಗಾಗಿ ವಿನಿಯೋಗಿಸುತ್ತಾರೆ.