ಇತ್ತೀಚಿನ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಸರಾಸರಿ 70% ರಷ್ಟು ಜನರು ನಿಯಮಿತವಾಗಿ #MannKiBaat ಕೇಳುವ ಜನರಿದ್ದಾರೆ ಮತ್ತು ಅದನ್ನು ಕೇಳುವ ಹೆಚ್ಚಿನ ಜನರಿಗೆ ಇದರಿಂದ ಸಮಾಜದಲ್ಲಿ ಸಕಾರಾತ್ಮಕತೆ ಹೆಚ್ಚಿದೆ ಎಂಬ ಅಭಿಪ್ರಾಯವಿದೆ : ಪ್ರಧಾನಿ ಮೋದಿ
#MannKiBaat ಆರಂಭಿಸಿದಾಗಲೇ ಇದರಲ್ಲಿ ರಾಜಕೀಯವಾಗಲಿ ಅಥವಾ ಸರ್ಕಾರದ ಗುಣಗಾನವಾಗಲಿ ಇರುವುದಿಲ್ಲ, ಎಲ್ಲಿಯೂ ಮೋದಿ ಕೂಡಾ ಇರಬಾರದು ಎಂದು ನಿರ್ಧರಿಸಿದ್ದೆ : ಪ್ರಧಾನಿ
#MannKiBaat ಸರ್ಕಾರಿ ಮಾತಲ್ಲ. ಇದು ಸಮಾಜದ ಮಾತು. ಮನ್ ಕಿ ಬಾತ್ ಒಂದು ಮಹತ್ವಾಕಾಂಕ್ಷಿ ಭಾರತದ ಮಾತಾಗಿದೆ : ಪ್ರಧಾನಿ ಮೋದಿ
ಭಾರತದಂತಹ ದೇಶದ ಉಜ್ವಲ ಭವಿಷ್ಯಕ್ಕಾಗಿ ಜನಸಾಮಾನ್ಯರ ಪ್ರತಿಭೆ ಮತ್ತು ಸಾಧನೆಗಳಿಗೆ ಉತ್ತಮ ಸ್ಥಾನಮಾನ ದೊರಕಿಸಿಕೊಡುವುದು ಎಂಬುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. #MannKiBaat ಈ ದಿಕ್ಕಿನಲ್ಲಿ ಒಂದು ಪುಟ್ಟ ವಿನಮ್ರ ಪ್ರಯತ್ನವಾಗಿದೆ : ಪ್ರಧಾನಿ ಮೋದಿ
#MannKiBaat ಸಲಹೆಗಾಗಿ ,ಯಾವುದಾದರೂ ಪತ್ರವನ್ನು ಓದಿದಾಗ / ಪತ್ರವನ್ನು ಬರೆದವರ ಪರಿಸ್ಥಿತಿ, ಅವರ ಭಾವನೆಗಳು, ನನ್ನ ವಿಚಾರದ ಅಂಗವಾಗಿಬಿಡುತ್ತವೆ : ಪ್ರಧಾನಿ ಮೋದಿ
ಸ್ವಚ್ಛತೆ, ರಸ್ತೆ ಸುರಕ್ಷತೆ, ಮಾದಕ ವಸ್ತು ಮುಕ್ತ ಭಾರತ, selfie with daughter ಮೊದಲಾದ ವಿಷಯಗಳನ್ನು ಮಾಧ್ಯಮಗಳು ನವೀನ ಶೈಲಿಯಲ್ಲಿ ಒಂದು ಅಭಿಯಾನದ ರೂಪವನ್ನೇ ನೀಡಿ ಮುನ್ನಡೆಸುವ ಕೆಲಸ ಮಾಡಿವೆ : #MannKiBaat ನಲ್ಲಿ ಪ್ರಧಾನಿ ಮೋದಿ
ನಿರೀಕ್ಷೆಯ ಬದಲಾಗಿ ಒಪ್ಪಿಕೊಳ್ಳುವ, ತಿರಸ್ಕರಿಸುವ ಬದಲು ಚರ್ಚಿಸುವುದರಿಂದ , ಪರಸ್ಪರ-ಸಂವಾದ ಪ್ರಭಾವಿ ಆಗುತ್ತದೆ : #MannKiBaat ನಲ್ಲಿ ಪ್ರಧಾನಿ ಮೋದಿ
ಸಾಮಾಜಿಕ ತಾಣಗಳ ಮೂಲಕ ಯುವಕರೊಡನೆ ಮಾತನಾಡುವ ನನ್ನ ಪ್ರಯತ್ನ ನಿರಂತರವಾಗಿರುತ್ತದೆ. ನಾನು ಯಾವಾಗಲೂ ಅವರಿಂದ ಕಲಿಯುತ್ತೇನೆ : #MannKiBaat ನಲ್ಲಿ ಪ್ರಧಾನಿ ನರೇಂದ್ರ ಮೋದಿ
ನಾವು ಯುವಕರ ವಿಚಾರಧಾರೆಯನ್ನು ಮೂಲಭೂತವಾಗಿ ಅಭಿವ್ಯಕ್ತಗೊಳಿಸಲು ಮುಕ್ತ ವಾತಾವರಣ ಒದಗಿಸಿದರೆ, ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತಾರೆ : #MannKiBaat ನಲ್ಲಿ ಪ್ರಧಾನಮಂತ್ರಿ
ನಮ್ಮ ಸಂವಿಧಾನದ ವೈಶಿಷ್ಠ್ಯತೆಯೆಂದರೆ ಹಕ್ಕು ಮತ್ತು ಕರ್ತವ್ಯವನ್ನು ವಿಚಾರವಾಗಿ ವಿಸ್ತೃತವಾಗಿ ವಿವರಿಸಲಾಗಿದೆ . ನಾಗರಿಕ ಜೀವನದಲ್ಲಿ ಇವೆರಡೂ ಅಂಶಗಳ ಸಮತೋಲನವೇ ದೇಶವನ್ನು ಮುನ್ನಡೆಸುತ್ತದೆ : #MannKiBaat ನಲ್ಲಿ ಪ್ರಧಾನಮಂತ್ರಿ
ಸಂವಿಧಾನವನ್ನು ರಚಿಸುವ ಐತಿಹಾಸಿಕ ಕಾರ್ಯವನ್ನು ಪೂರ್ಣಗೊಳಿಸಲು, ಸಂವಿಧಾನ ಸಭೆ ಕೇವಲ 2 ವರ್ಷ, 11 ತಿಂಗಳು ಮತ್ತು 17 ದಿನಗಳನ್ನು ತೆಗೆದುಕೊಂಡಿತು : #MannKiBaat ನಲ್ಲಿ ಪ್ರಧಾನಮಂತ್ರಿ
ನಾವೆಲ್ಲಾ ನಮ್ಮ ಸಂವಿಧಾನದ ಮೌಲ್ಯಗಳನ್ನು ಬಲಪಡಿಸೋಣ. ನಮ್ಮ ದೇಶದಲ್ಲಿ ಶಾಂತಿ, ಉನ್ನತಿ ಮತ್ತು ಸಮೃದ್ಧಿಯನ್ನು ಸುನಶ್ಚಿತಗೊಳಿಸೋಣ : #MannKiBaat ನಲ್ಲಿ ಪ್ರಧಾನಮಂತ್ರಿ
ಸಂವಿಧಾನ ಸಭೆಯ ಕೇಂದ್ರಬಿಂದುವಾಗಿದ್ದ ಪೂಜ್ಯನೀಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆಯನ್ನು ಮರೆಯಲು ಸಾಧ್ಯವಾಗುವುದೇ ಇಲ್ಲ: #MannKiBaat ನಲ್ಲಿ ಪ್ರಧಾನಮಂತ್ರಿ
ಪ್ರಜಾಪ್ರಭುತ್ವ ಎಂಬುದು ಬಾಬಾ ಸಾಹೇಬರ ಸ್ವಭಾವದಲ್ಲಿ ಅಂತರ್ನಿಹಿತವಾಗಿತ್ತು : #MannKiBaat ನಲ್ಲಿ ಪ್ರಧಾನಮಂತ್ರಿ
ಡಾ. ಬಾಬಾಸಾಹೇಬ್ ಅಂಬೆಡ್ಕರ್ ಅವರ ಮೂಲಮಂತ್ರ India first ಎಂಬುದಾಗಿತ್ತು : #MannKiBaat ನಲ್ಲಿ ಪ್ರಧಾನಮಂತ್ರಿ
ಗುರು ನಾನಕ್ ದೇವ್ ಜಿ ಅನವರತವಾಗಿ ಸಮಾಜಕ್ಕೆ ಸತ್ಯ, ಕರ್ಮ, ಸೇವೆ, ಕರುಣೆ ಮತ್ತು ಸೌಹಾರ್ದತೆಯ ಪಥದ ಮಾರ್ಗದರ್ಶಿಯಾಗಿದ್ದಾರೆ : #MannKiBaat ನಲ್ಲಿ ಪ್ರಧಾನಮಂತ್ರಿ

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. 2014 ರ ಅಕ್ಟೋಬರ್ 3 ವಿಜಯದಶಮಿಯ ಪವಿತ್ರ ದಿನ. ಮನದ ಮಾತಿನ ಮಾಧ್ಯಮದ ಮೂಲಕ ನಾವೆಲ್ಲರೂ ಒಂದು ಯಾತ್ರೆಯನ್ನು ಆರಂಭಿಸಿದ್ದೆವು. ಮನದ ಮಾತಿನ ಈ ಯಾತ್ರೆಗೆ ಇಂದು 50 ಕಂತುಗಳು ಪೂರ್ಣಗೊಂಡಿವೆ. ಈ ರೀತಿ ಇಂದಿನ ಈ ಗೋಲ್ಡನ್ ಜ್ಯುಬಿಲಿ ಕಂತು ಸ್ವರ್ಣಮಯವಾದದ್ದಾಗಿದೆ. ಈ ಬಾರಿ ನನಗೆ ಬಂದ ನಿಮ್ಮ ಪತ್ರಗಳು ಮತ್ತು ದೂರವಾಣಿ ಕರೆಗಳು ಈ 50 ಕಂತುಗಳಿಗೆ ಸಂಬಂದಿಸಿದ್ದೇ ಆಗಿವೆ. ಮೈ ಗೌ ಗೆ ದೆಹಲಿಯ ಅಂಶುಕುಮಾರ್, ಅಮರ್ ಕುಮಾರ್ ಮತ್ತು ಪಾಟ್ನಾದಿಂದ ವಿಕಾಸ್ ಯಾದವ್, ಹಾಗೆಯೇ ನರೇಂದ್ರ ಮೋದಿ ಆಪ್ ಗೆ ದೆಹಲಿಯ ಮೋನಿಕಾ ಜೈನ್, ಪಶ್ಚಿಮ ಬಂಗಾಳದ ಬರ್ಧವಾನ್ ದಿಂದ ಪ್ರಸನ್ಜಿತ್ ಸರ್ಕಾರ್ ಮತ್ತು ನಾಗ್ಪುರದ ಸಂಗೀತಾ ಶಾಸ್ತ್ರಿ ಇವರೆಲ್ಲರೂ ಒಂದೇ ಬಗೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಹೇಳುವುದೇನೆಂದರೆ ‘ಸಾಮಾನ್ಯವಾಗಿ ಜನರು ನಿಮ್ಮನ್ನು ಸಂಪರ್ಕಿಸಲು ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳು ಮತ್ತು ಮೋಬೈಲ್ ಆಪ್ಗಳನ್ನು ಬಳಸುತ್ತಾರೆ ಆದರೆ ನೀವು ಜನರೊಂದಿಗೆ ಸಂಪರ್ಕ ಹೊಂದಲು ರೇಡಿಯೋವನ್ನು ಏಕೆ ಆಯ್ದುಕೊಂಡಿರಿ?’ ನಿಮ್ಮ ಈ ಜಿಜ್ಞಾಸೆ ಬಹಳ ಸಹಜವಾದದ್ದು. ಇಂದಿನ ಯುಗದಲ್ಲಿ ರೇಡಿಯೋವನ್ನು ಹೆಚ್ಚು ಕಡಿಮೆ ಜನ ಮರೆತೇ ಹೋಗಿದ್ದರು ಎನ್ನುವಾಗ ಮೋದಿಯವರು ಏಕೆ ರೇಡಿಯೋದೊಂದಿಗೆ ಬಂದರು? ನಾನು ನಿಮಗೆ ಒಂದು ಘಟನೆ ಬಗ್ಗೆ ಹೇಳಬಯಸುತ್ತೇನೆ. ಇದು 1998 ರ ಸಂಗತಿ, ನಾನು ಭಾರತೀಯ ಜನತಾ ಪಾರ್ಟಿಯ ಸಂಘಟನೆಯ ಕಾರ್ಯಕರ್ತನಾಗಿ ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೆ. ಅದು ಮೇ ತಿಂಗಳು ಮತ್ತು ನಾನು ಸಂಜೆ ವೇಳೆ       ಪಯಣಿಸುತ್ತಾ ಬೇರೊಂದು ಸ್ಥಳಕ್ಕೆ ಹೊರಟಿದ್ದೆ.  ಹಿಮಾಚಲ ಪ್ರದೇಶದ ಬೆಟ್ಟಗಳ ಮೇಲೆ ಸಂಜೆ ವೇಳೆ ಚಳಿ ಹೆಚ್ಚಿರುತ್ತದೆ. ಹಾಗಾಗಿ ಆಗ ಒಂದು ಧಾಬಾದಲ್ಲಿ ಚಹಾ ಸೇವನೆಗೆ ನಿಂತೆ ಮತ್ತು ಚಹಾಗಾಗಿ ಆರ್ಡರ್ ಮಾಡಿದೆ. ಅದೊಂದು ಪುಟ್ಟ ಧಾಬಾ ಆಗಿತ್ತು ಮತ್ತು ಅಲ್ಲಿ ಒಬ್ಬನೇ ವ್ಯಕ್ತಿ ಚಹಾ ತಯಾರಿಸುತ್ತಿದ್ದ ಮತ್ತು ಮಾರುತ್ತಿದ್ದ. ಅದಕ್ಕೆ ಸೂರು ಇರಲಿಲ್ಲ. ರಸ್ತೆ ಬದಿಗೆ ತಳ್ಳೋ ಗಾಡಿಯಲ್ಲಿ ಚಹಾ ಮಾರುತ್ತಿದ್ದ. ಆತನ ಬಳಿಯಿರುವ ಗಾಜಿನ ಜರಡಿಯಿಂದ ಲಡ್ಡುವೊಂದನ್ನು ಹೊರತೆಗೆದ, ಸರ್ ಚಹಾ ನಂತರ ಕುಡಿಯಿರಿ ಮೊದಲು ಲಡ್ಡು ತಿನ್ನಿರಿ, ಬಾಯಿ ಸಿಹಿ ಮಾಡಿಕೊಳ್ಳಿ ಎಂದು ಹೇಳಿದ. ನನಗೂ ಆಶ್ಚರ್ಯವಾಯಿತು ‘ ಏನು ಸಮಾಚಾರ, ಮನೆಯಲ್ಲಿ ಮದುವೆ ಮುಂಜಿ ಇಲ್ಲ ಯಾವುದಾದರೂ ಸಂತೋಷದ ವಿಷಯವಿದೆಯೇ ಎಂದು ಕೇಳಿದೆ. ಆತ ಹೇಳಿದ ಇಲ್ಲ ಅಣ್ಣ ನಿಮಗೆ ಗೊತ್ತಿಲ್ಲವೇ? ಬಹಳ ಸಂತೋಷದ ವಿಷಯವೇ ಇದೆ’ ಎಂದು ಕುಣಿದು ಕುಪ್ಪಳಿಸುತ್ತಿದ್ದ. ಅವನ ಉತ್ಸಾಹ ಕಂಡು ಏನಾಯ್ತಪ್ಪ ಎಂದು ಕೇಳಿದೆ. ಇಂದು ಭಾರತ ಬಾಂಬ್ ಸ್ಫೋಟಿಸಿದೆ ಎಂದ. ಭಾರತ ಬಾಂಬ್ ಸ್ಫೋಟಿಸಿತು ಎಂಬುದು ನನಗೆ ಅರ್ಥವಾಗಲಿಲ್ಲ ಎಂದೆ. ಅದಕ್ಕೆ ಅವನು ರೇಡಿಯೋ ಕೇಳಿ ಸರ್ ಎಂದ. ಆಗ ರೇಡಿಯೋದಲ್ಲಿ ಅದರದ್ದೇ ಚರ್ಚೆ ನಡೆದಿತ್ತು. ಅದು ಪರಮಾಣು ಪರೀಕ್ಷೆಯ ದಿನವಾಗಿತ್ತು. ನಮ್ಮ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಆಗ ಪರಮಾಣು ಪರೀಕ್ಷೆಯ ಕುರಿತು ಮಾಧ್ಯಮದವರ ಮುಂದೆ ಘೋಷಿಸಿದ್ದರು. ಅದನ್ನು ಕೇಳಿದ್ದ ಆ ಚಹಾ ಅಂಗಡಿಯಾತ ಸಂತೋಷದಿಂದ ಕುಣಿಯುತ್ತಿದ್ದ. ಕಾಡಿನ ನಿರ್ಜನ ಪ್ರದೇಶದಲ್ಲಿ, ಮಂಜಿನಿಂದಾವೃತವಾದ ಬೆಟ್ಟಗಳ ನಡುವೆ, ಚಹಾ ಗಾಡಿಯನ್ನು ಇಟ್ಟುಕೊಂಡು ಹೊಟ್ಟೆ ಹೊರೆಯುತ್ತಿರುವ ಒಬ್ಬ ಸಾಮಾನ್ಯ ಮನುಷ್ಯ ದಿನಪೂರ್ತಿ ರೇಡಿಯೋ ಕೇಳುತ್ತಿರಬಹುದು, ಆ ರೇಡಿಯೋದಲ್ಲಿ ಬಿತ್ತರಗೊಂಡ ಸುದ್ದಿ ಅವನ ಮೇಲೆ ಎಂಥ ಅಗಾಧ ಪರಿಣಾಮ ಬೀರಿತ್ತು, ಎಷ್ಟು ಪ್ರಭಾವ ಬೀರಿತ್ತು ಎಂದರೆ ಅಂದಿನಿಂದ ರೇಡಿಯೋ ಜನಮಾನಸದಲ್ಲಿ ಮನೆಮಾಡಿದೆ ಮತ್ತು ರೇಡಿಯೋ ಬಹಳ ಶಕ್ತಿಯುತ ಮಾಧ್ಯಮವಾಗಿದೆ ಎಂಬುದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತು. ಅತಿ ಹೆಚ್ಚು ವ್ಯಾಪ್ತಿಗೆ ತಲುಪಬಲ್ಲ ಮತ್ತು ಹೆಚ್ಚು ಪ್ರಭಾವಯುತವಾದ ಸಂವಹನ ಮಾಧ್ಯಮದಲ್ಲಿ ರೇಡಿಯೋಗೆ ಸಮನಾದದ್ದು ಬೇರಾವುದೂ ಇಲ್ಲ ಎಂಬುದು ಅಂದಿನಿಂದ ನನ್ನ ಮನಸ್ಸನ್ನು ತುಂಬಿದೆ ಮತ್ತು ಅದರ ಶಕ್ತಿ ಎಷ್ಟೆಂಬುದನ್ನು ನಾನು ಅಂದಾಜಿಸಬಲ್ಲೆ. ಈಗ ನಾನು ಪ್ರಧಾನಮಂತ್ರಿ ಮಂತ್ರಿ ಆದ ಮೇಲೆ ಅತ್ಯಂತ ಪ್ರಭಾವಯುತ ಮಾಧ್ಯಮದತ್ತ ನನ್ನ ಗಮನ ಹೋಗುವುದು ಸಾಮಾನ್ಯವೇ ಆಗಿತ್ತು. ದೇಶದ ಏಕತೆ, ನಮ್ಮ ಭವ್ಯ ಇತಿಹಾಸ, ಅದರ ಶೌರ್ಯ, ಭಾರತದ ವಿವಿಧತೆ, ನಮ್ಮ ಸಾಂಸ್ಕೃತಿಕ ವೈವಿಧ್ಯತೆ, ನಮ್ಮ ಸಮಾಜದ ಕಣ ಕಣದಲ್ಲೂ ಹುದುಗಿರುವ ಉತ್ತಮ ವಿಚಾರಗಳು, ಜನರ ಮಾನವೀಯತೆ, ಹುಮ್ಮಸ್ಸು, ತ್ಯಾಗ, ತಪಸ್ಸು ಈ ಎಲ್ಲ ವಿಷಯಗಳು ಭಾರತದ ಪ್ರತಿಯೊಬ್ಬ ಮನುಷ್ಯನಿಗೂ ತಲುಪಬೇಕು ಎಂಬುದು 2014 ರ ಮೇ ತಿಂಗಳಲ್ಲಿ ನಾನು ಪ್ರಧಾನ ಸೇವಕನಾಗಿ ಕರ್ತವ್ಯ ನಿಭಾಯಿಸಲಾರಂಭಿಸಿದ ದಿನದಿಂದಲೇ ನನ್ನ ಮನಸ್ಸಿನಲ್ಲಿ ಮೂಡಿದ ಆಸೆಯಾಗಿತ್ತು.  ದೇಶದ ದೂರದ ಗ್ರಾಮಗಳಿಂದ ಹಿಡಿದು ಮೆಟ್ರೋ ನಗರಗಳವರೆಗೆ ರೈತರಿಂದ ಯುವ ವೃತ್ತಿಪರರವರೆಗೆ ತಲುಪುವ ಉದ್ದೇಶದಿಂದ ಈ ಮನ್ ಕಿ ಬಾತ್ ಯಾತ್ರೆ ಆರಂಭವಾಯಿತು.  ಪ್ರತಿ ತಿಂಗಳು ಲಕ್ಷಾಂತರ ಪತ್ರಗಳನ್ನು ಓದುತ್ತಾ, ದೂರವಾಣಿ ಕರೆಗಳನ್ನು ಕೇಳುತ್ತಾ, ಆಪ್ ಮತ್ತು ಮೈ ಗೌ ನಲ್ಲಿ ಅನಿಸಿಕೆಗಳನ್ನು ನೋಡುತ್ತಾ ಈ ಎಲ್ಲವನ್ನೂ ಒಂದು ಸೂತ್ರದಲ್ಲಿ ಪೋಣಿಸಿ, ಸಣ್ಣ ಪುಟ್ಟ ಮಾತುಗಳನ್ನು ಆಡುತ್ತಲೇ ನಾವೆಲ್ಲರೂ 50 ಕಂತುಗಳನ್ನು ಪೂರೈಸಿದ್ದೇವೆ. ಇತ್ತೀಚೆಗೆ ಆಕಾಶವಾಣಿ ಮನ್ ಕಿ ಬಾತ್ ಕುರಿತಾದ ಸಮೀಕ್ಷೆ ನಡೆಸಿತ್ತು. ಅವುಗಳಲ್ಲಿ ಕೆಲವು ಬಹಳ ಆಸಕ್ತಿದಾಯಕ ಫೀಡ್ ಬ್ಯಾಕ್ ಗಳನ್ನು ನಾನು ಗಮನಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಸರಾಸರಿ 70% ರಷ್ಟು ಜನರು ನಿಯಮಿತವಾಗಿ ಮನ್ ಕಿ ಬಾತ್ ಕೇಳುವ ಜನರಿದ್ದಾರೆ. ಮನ್ ಕಿ ಬಾತ್ ಕೇಳುವ ಹೆಚ್ಚಿನ ಜನರಿಗೆ ಇದರಿಂದ ಸಮಾಜದಲ್ಲಿ ಸಕಾರಾತ್ಮಕತೆ ಹೆಚ್ಚಿದೆ ಎಂಬ ಅಭಿಪ್ರಾಯವಿದೆ. ಮನ್ ಕಿ ಬಾತ್ ಮೂಲಕ ದೊಡ್ಡ ಪ್ರಮಾಣದಲ್ಲಿ ಜನಾಂದೋಲನಕ್ಕೆ ಉತ್ತೇಜನ ದೊರೆತಿದೆ. ಹ್ಯಾಶ್ ಟ್ಯಾಗ್ ಇಂಡಿಯಾ ಪಾಸಿಟಿವ್ ಕುರಿತು ವ್ಯಾಪಕ ಚರ್ಚೆಯೂ ಆಗಿದೆ. ಇದು ನಮ್ಮ ದೇಶಬಾಂಧವರ ಮನದಲ್ಲಿ ಹುದುಗಿರುವ ಧನಾತ್ಮಕ ಭಾವನೆಯ, ಸಕಾರಾತ್ಮಕ ಭಾವನೆಯ ಒಂದು ನೋಟವಾಗಿದೆ. ಮನ್ ಕಿ ಬಾತ್ ನಿಂದಾಗಿ ಸ್ವ ಇಚ್ಛೆಯಿಂದ ಕೆಲಸ ಮಾಡುವ ಭಾವನೆ ಹೆಚ್ಚಿದೆ, ಸಮಾಜ ಸೇವೆಗೆ ಜನರು ಏನಾದರೂ ಮಾಡಬೇಕೆಂದು ನಾ ಮುಂದು ತಾ ಮುಂದು ಎಂದು ಮುಂದೆ ಬರುವಂಥ ಭಾವನೆ ಹೆಚ್ಚಿದೆ ಎಂದು ಜನರು ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಮನ್ ಕಿ ಬಾತ್ ನಿಂದಾಗಿ ರೇಡಿಯೋ ಮತ್ತಷ್ಟು ಜನಪ್ರಿಯಗೊಳ್ಳುತ್ತಿದೆ ಎಂಬುದನ್ನು ಕೇಳಿ ನನಗೆ ಸಂತೋಷವಾಯಿತು. ಆದರೆ ಕೇವಲ ರೇಡಿಯೋ ಮಾಧ್ಯಮದಿಂದ ಮಾತ್ರ ಜನರು ಈ ಕಾರ್ಯಕ್ರಮದೊಂದಿಗೆ ಬೆರೆತಿಲ್ಲ. ಜನರು ಟಿ ವಿ, ಎಫ್ ಎಂ, ರೇಡಿಯೋ, ಮೊಬೈಲ್, ಇಂಟರ್ನೆಟ್, ಫೇಸ್ಬುಕ್ ಲೈವ್ ಮತ್ತು ಪೆರಿಸ್ಕೋಪ್ ಜೊತೆ ಜೊತೆಗೆ ನರೇಂದ್ರ ಮೋದಿ ಆಪ್ ಮೂಲಕವೂ ಮನ್ ಕಿ ಬಾತ್ ನಲ್ಲಿ ಪಾಲ್ಗೊಳ್ಳುವುದನ್ನು ದೃಢಪಡಿಸುತ್ತಿದ್ದಾರೆ. ನಾನು ಮನ್ ಕಿ ಬಾತ್ ಕುಟುಂಬದ ಎಲ್ಲ ಸದಸ್ಯರಾದ ನಿಮಗೆ ಇದರ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಮತ್ತು ಇದರಲ್ಲಿ ಪಾಲ್ಗೊಂಡಿದ್ದಕ್ಕೆ ಮನಃ ಪೂರ್ವಕವಾಗಿ ಧನ್ಯವಾದ ತಿಳಿಸುತ್ತೇನೆ.

(ಫೋನ್ ಕಾಲ್ – 1)

ಗೌರವಯುತ ಪ್ರಧಾನ ಮಂತ್ರಿಗಳೇ, ನಮಸ್ಕಾರ! ನನ್ನ ಹೆಸರು ಶಾಲಿನಿ, ನಾನು ಹೈದರಾಬಾದ್ ನಿಂದ ಮಾತನಾಡುತ್ತಿದ್ದೇನೆ. ‘ಮನ್ ಕಿ ಬಾತ್’ ಕಾರ್ಯಕ್ರಮ ಜನರಲ್ಲಿ  ಅತಿ ಜನಪ್ರಿಯ ಕಾರ್ಯಕ್ರಮವಾಗಿದೆ. ಆರಂಭದಲ್ಲಿ ಈ ಕಾರ್ಯಕ್ರಮವೂ ಒಂದು ರಾಜಕೀಯ ವೇದಿಕೆಯಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿತ್ತು ಮತ್ತು ಚರ್ಚೆಯ ವಿಷಯವೂ ಆಗಿತ್ತು. ಆದರೆ ಕಾರ್ಯಕ್ರಮ ಮುಂದುವರಿದಂತೆ ಸಾಮಾಜಿಕ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಕೇಂದ್ರೀಕೃತವಾಗಿತ್ತು ಎಂಬುದನ್ನು ನಾವು ಗಮನಿಸಿದ್ದೇವೆ. ಹೀಗೆ ಕೋಟ್ಯಾಂತರ ಸಾಮಾನ್ಯ ಜನರೊಂದಿಗೆ ಇದು ಸಂಪರ್ಕದ ಸಾಧನವಾಯಿತು. ನಿಧಾನವಾಗಿ ರಾಜಕೀಯ ವೇದಿಕೆ ಎಂಬ ಚರ್ಚೆಗಳು ನಿಂತು ಹೋದವು. ನೀವು ಈ ಕಾರ್ಯಕ್ರಮವನ್ನು ರಾಜಕೀಯದಿಂದ ದೂರ ಇರುವಂತೆ ಮಾಡುವಲ್ಲಿ ಹೇಗೆ ಸಫಲರಾದಿರಿ ಎಂಬುದು ನನ್ನ ಪ್ರಶ್ನೆ. ಈ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಬಹುದು ಎಂದು ನಿಮಗೆ ಅನ್ನಿಸಲಿಲ್ಲವೆ? ಇಲ್ಲವೆ ಈ ವೇದಿಕೆಯ ಮೂಲಕ ನಿಮ್ಮ ಸರ್ಕಾರದ ಸವಲತ್ತುಗಳ ಕುರಿತು ಮಾತನಾಡಬೇಕೆಂದು ಅನ್ನಿಸಲಿಲ್ಲವೆ? ಧನ್ಯವಾದ.”  ( ಫೋನ್ ಕಾಲ್ ಮುಕ್ತಾಯ)

ನಿಮ್ಮ ದೂರವಾಣಿ ಕರೆಗೆ ಅನಂತಾನಂತ ಧನ್ಯವಾದಗಳು. ನಿಮ್ಮ ಅನುಮಾನ ಸರಿಯಾದದ್ದೇ. ನೇತಾರರಿಗೆ ಮೈಕ್ ಸಿಕ್ಕರೆ, ಅದರಲ್ಲೂ ಲಕ್ಷಾಂತರ, ಕೋಟ್ಯಾಂತರ ಜನರು ಕೇಳುಗರಿದ್ದರೆ, ಅದಕ್ಕಿಂತ ಹೆಚ್ಚೇನು ಬೇಕು? ಕೆಲ ಯುವ ಮಿತ್ರರು ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಲಾದ  ವಿಷಯಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಅವರು ಎಲ್ಲ ಕಂತುಗಳ ಶಾಬ್ದಿಕ ವಿಶ್ಲೇಷಣೆ ಕೈಗೊಂಡರು ಮತ್ತು ಯಾವ ಶಬ್ದವನ್ನು ಎಷ್ಟು ಬಾರಿ ಹೇಳಲಾಗಿದೆ, ಯಾವ ಶಬ್ದಗಳನ್ನು ಪದೇ ಪದೇ ಬಳಸಲಾಗಿದೆ ಎಂಬುದನ್ನು ಅಭ್ಯಸಿಸಿದ್ದಾರೆ. ಅವರ ಶೋಧನೆಯಂತೆ ಈ ಕಾರ್ಯಕ್ರಮ ರಾಜಕೀಯರಹಿತವಾಗಿತ್ತು. ಮನ್ ಕಿ ಬಾತ್ ಆರಂಭಿಸಿದಾಗಲೇ ಇದರಲ್ಲಿ ರಾಜಕೀಯವಾಗಲಿ ಅಥವಾ ಸರ್ಕಾರದ ಗುಣಗಾನವಾಗಲಿ ಇರುವುದಿಲ್ಲ, ಎಲ್ಲಿಯೂ ಮೋದಿ ಕೂಡಾ ಇರಬಾರದು ಎಂದು ನಿರ್ಧರಿಸಿದ್ದೆ. ನನ್ನ ಈ ಸಂಕಲ್ಪವನ್ನು ನಿಭಾಯಿಸಲು ಹೆಚ್ಚಿನ ಶಕ್ತಿ ಮತ್ತು ಪ್ರೇರಣೆ ನಿಮ್ಮಿಂದಲೇ ದೊರೆಯಿತು. ಪ್ರತಿ ಮನ್ ಕಿ ಬಾತ್ ಗಿಂತ ಮೊದಲು ಬರುವಂತಹ ಪತ್ರಗಳನ್ನು, ಆನ್ ಲೈನ್ ಪ್ರತಿಕ್ರಿಯೆಗಳು. ದೂರವಾಣಿ ಕರೆಗಳು. . . ಇವುಗಳಲ್ಲಿ ಶೋತೃಗಳ ಆಶೋತ್ತರಗಳು ಸ್ಪಷ್ಟವಾಗಿರುತ್ತವೆ. ಮೋದಿ ಬರುತ್ತಾರೆ ಮತ್ತು ಹೊರಟು ಹೋಗುತ್ತಾರೆ, ಆದರೆ ಈ ದೇಶ ಅಚಲವಾಗಿರುತ್ತದೆ. ನಮ್ಮ ಸಂಸ್ಕೃತಿ ಅಮರವಾಗಿರುತ್ತದೆ. 130 ಕೋಟಿ ದೇಶ ಬಾಂಧವರ ಸಣ್ಣ ಪುಟ್ಟ ಕಥೆಗಳು ಎಂದಿಗೂ ಜೀವಂತವಾಗುಳಿತ್ತವೆ. ಈ ದೇಶವನ್ನು ಹೊಸ ಪ್ರೇರಣೆಯೊಂದಿಗೆ, ಉತ್ಸಾಹದೊಂದಿಗೆ, ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿರುತ್ತದೆ. ನಾನು ಆಗಾಗ ಹಿಂದಿರುಗಿ ನೋಡಿದರೆ ನನಗೂ ಬಹಳ ಆಶ್ಚರ್ಯವಾಗುತ್ತದೆ. ಒಮ್ಮೆ ದೇಶದ ಒಂದು ಮೂಲೆಯಿಂದ ಯಾರೋ ಪತ್ರ ಬರೆದು –  ಚಿಲ್ಲರೆ ವ್ಯಾಪಾರಿಗಳ, ಆಟೋ ಚಾಲಕರ, ತರಕಾರಿ ಮಾರುವಂಥವರೊಂದಿಗೆ ಹೆಚ್ಚು ಚೌಕಾಶಿ ಮಾಡಬಾರದು ಎಂದು ಹೇಳುತ್ತಾರೆ. ನಾನು ಪತ್ರ ಓದುತ್ತೇನೆ. ಇಂಥದೇ ವಿಚಾರ ಇನ್ನಾವುದೋ ಪತ್ರದಲ್ಲಿ ಬಂದಿದ್ದರೆ ಇದರೊಂದಿಗೆ ಅದನ್ನೂ ಜೋಡಿಸುತ್ತೇನೆ. ನನ್ನ ಅನುಭವದ ಒಂದೆರಡು ಮಾತುಗಳನ್ನೂ ಅದರೊಂದಿಗೆ ಒಗ್ಗೂಡಿಸಿ, ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ನಂತರ ಈ ಮಾತು ಯಾವಾಗ ಸಾಮಾಜಿಕ ಜಾಲತಾಣ ತಲುಪುತ್ತದೆಯೋ, ಯಾವಾಗ ವಾಟ್ಸ್ ಅಪ್ ಹರಿದಾಡುತ್ತದೆಯೋ ಆಗ ಒಂದು ಪರಿವರ್ತನೆಯತ್ತ ಸಾಗುತ್ತಿರುತ್ತದೆ. ನೀವು ಕಳುಹಿಸಿದ ಸ್ವಚ್ಛತೆಯ ಕಥೆಗಳು, ಸಾಮಾನ್ಯ ಜನರ ಹಲವಾರು ಉದಾಹರಣೆಗಳು ಮನೆಮನೆಯಲ್ಲಿಯೂ ಓರ್ವ ಪುಟ್ಟ ಸ್ವಚ್ಛತಾ ರಾಯಭಾರಿಯನ್ನು ಸೃಷ್ಟಿಸಿದೆ, ಆತ ಮನೆಯವರನ್ನೂ ಎಚ್ಚರಿಸುತ್ತಾನೆ ಮತ್ತು ಆಗಾಗ ದೂರವಾಣಿ ಕರೆಯ ಮೂಲಕ ಪ್ರಧಾನ ಮಂತ್ರಿಗಳಿಗೂ ಆದೇಶ ನೀಡುತ್ತಾನೆ. “ಸೆಲ್ಫಿ ವಿತ್ ಡಾಟರ್” ಎಂಬ ಅಭಿಯಾನ ಹರಿಯಾಣದ ಒಂದು ಪುಟ್ಟ ಗ್ರಾಮದಿಂದ ಆರಂಭವಾಗಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಗೂ ಪಸರಿಸಿದಂಥ ಶಕ್ತಿಯನ್ನು ಯಾವ ಸರ್ಕಾರ ಸಾಧಿಸಬಲ್ಲದು? ಸಮಾಜದ ಪ್ರತಿ ವರ್ಗ, ಪ್ರತಿಷ್ಠಿತ ವ್ಯಕ್ತಿಗಳು ಎಲ್ಲರೂ ಒಗ್ಗೂಡಲಿ ಮತ್ತು ಸಮಾಜದಲ್ಲಿ ವಿಚಾರಗಳ-ಪರಿವರ್ತನೆಯ ಒಂದು ಹೊಸ ಭಾಷೆಯಲ್ಲಿ ಇಂದಿನ ಪೀಳಿಗೆ ಅರ್ಥ ಮಾಡಿಕೊಳ್ಳುವಂತಹ ಕ್ರಾಂತಿಯಾಗಲಿ. ಕೆಲವೊಮ್ಮೆ ಮನ್ ಕಿ ಬಾತ್ ಬಗ್ಗೆ ತಮಾಷೆಯ ಮಾತುಗಳೂ ಕೇಳಿಬರುತ್ತವೆ. ಆದರೆ ನನ್ನ ಮನದಲ್ಲಿ ಯಾವತ್ತೂ ದೇಶದ 130 ಕೋಟಿ ಜನತೆ ಸ್ಥಿರವಾಗಿರುತ್ತಾರೆ. ಅವರ ಮನಸ್ಸೇ ನನ್ನ ಮನಸ್ಸು. ಮನದ ಮಾತು ಸರ್ಕಾರಿ ಮಾತಲ್ಲ. ಇದು ಸಮಾಜದ ಮಾತು. ಮನ್ ಕಿ ಬಾತ್ ಒಂದು ಮಹತ್ವಾಕಾಂಕ್ಷಿ ಭಾರತದ ಮಾತಾಗಿದೆ.  ಭಾರತದ  ಜೀವಾಳ ರಾಜನೀತಿಯಲ್ಲ.   ಭಾರತದ  ಜೀವಾಳ ರಾಜಶಕ್ತಿಯೂ ಅಲ್ಲ. ಭಾರತದ  ಜೀವಾಳ ಸಮಾಜ ನೀತಿ ಮತ್ತು ಸಮಾಜ ಶಕ್ತಿಯಾಗಿದೆ. ಸಾಮಾಜಿಕ ಜೀವನಕ್ಕೆ ಹಲವಾರು ಮಗ್ಗುಲುಗಳಿವೆ. ಅದರಲ್ಲಿ ರಾಜಕೀಯವೂ ಒಂದಾಗಿದೆ. ರಾಜಕೀಯವೇ ಸರ್ವಸ್ವ ಎಂಬುದು ಆರೋಗ್ಯಕರ ಸಮಾಜಕ್ಕೆ ಒಳ್ಳೆಯದಲ್ಲ. ಕೆಲವೊಮ್ಮೆ ರಾಜಕೀಯ ಘಟನೆಗಳು ಮತ್ತು ರಾಜಕೀಯದಲ್ಲಿ ತೊಡಗಿರುವವರು ಎಷ್ಟು ಪ್ರಬಲವಾಗಿರುತ್ತಾರೆ ಎಂದರೆ ಸಮಾಜದ ಇತರ ಪ್ರತಿಭೆಗಳು, ಸಾಧನೆಗಳು ಮರೆಮಾಚಲ್ಪಡುತ್ತವೆ. ಭಾರತದಂತಹ ದೇಶದ ಉಜ್ವಲ ಭವಿಷ್ಯಕ್ಕಾಗಿ ಜನಸಾಮಾನ್ಯರ ಪ್ರತಿಭೆ ಮತ್ತು ಸಾಧನೆಗಳಿಗೆ ಉತ್ತಮ ಸ್ಥಾನಮಾನ ದೊರಕಿಸಿಕೊಡುವುದು ಎಂಬುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಮನ್ ಕಿ ಬಾತ್ ಈ ದಿಕ್ಕಿನಲ್ಲಿ ಒಂದು ಪುಟ್ಟ ವಿನಮ್ರ ಪ್ರಯತ್ನವಾಗಿದೆ.

ಫೋನ್ ಕಾಲ್ -2

“ ಪ್ರಧಾನ ಮಂತ್ರಿಗಳೇ ನಮಸ್ಕಾರ! ನಾನು ಮುಂಬೈಯಿಂದ ಪ್ರೋಮಿತಾ ಮುಖರ್ಜಿ ಮಾತನಾಡುತ್ತಿದ್ದೇನೆ. ಸರ್ ‘ಮನ್ ಕಿ ಬಾತ್’ ನ ಪ್ರತಿ ಕಂತು ಗಾಢವಾದ ಆಂತರ್ಯ, ಮಾಹಿತಿ, ಸಕಾರಾತ್ಮಕ ಕಥೆಗಳು ಮತ್ತು ಜನ ಸಾಮಾನ್ಯರ ಉತ್ತಮ ಕೆಲಸಗಳ ವಿವರಗಳಿಂದ ಕೂಡಿರುತ್ತದೆ. ನೀವು ಪ್ರತಿ ಕಾರ್ಯಕ್ರಮದ ಮೊದಲು ಎಷ್ಟು ಸಿದ್ಧತೆ  ಮಾಡಿಕೊಳ್ಳುತ್ತೀರಿ? ಎಂದು ನಾನು ನಿಮ್ಮನ್ನು ಕೇಳಲು ಇಷ್ಟಪಡುತ್ತೇನೆ.

ಫೋನ್ ಕಾಲ್ ಮುಕ್ತಾಯ

ದೂರವಾಣಿ ಕರೆಗಾಗಿ ನಿಮಗೆ ಅನಂತಾನಂತ ಧನ್ಯವಾದಗಳು. ನೀವು ಕೇಳಿದ ಪ್ರಶ್ನೆ ಆತ್ಮೀಯತೆಯಿಂದ ಕೇಳಿದ್ದಾಗಿದೆ. ಮನ್ ಕಿ ಬಾತ್ ನ 50 ನೇ ಕಂತಿನ ಅತಿ ದೊಡ್ಡ ಸಾಧನೆಯೇನೆಂದರೆ ನೀವು ಪ್ರಧಾನ ಮಂತ್ರಿಯವರಿಗಲ್ಲ ನೀವು ನಿಮ್ಮ ಆತ್ಮೀಯ ಸ್ನೇಹಿತರಿಗೆ ಪ್ರಶ್ನೆ ಕೇಳುತ್ತಿದ್ದೀರಿ ಎಂಬುದೇ ಆಗಿದೆ. ಹೌದು ಇದೇ ಪ್ರಜಾ ಪ್ರಭುತ್ವ. ನೀವು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡುವುದಾದರೆ. ಯಾವ ಪೂರ್ವ ತಯಾರಿ ಮಾಡಿಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ಮನ್ ಕಿ ಬಾತ್ ನನಗೆ ಒಂದು ಸುಲಭವಾದ ಕೆಲಸ. ಪ್ರತಿ ಬಾರಿಯ ಮನ್ ಕಿ ಬಾತ್ ಗೆ ಮೊದಲು ಜನರಿಂದ ಪತ್ರಗಳು ಬರುತ್ತವೆ. ಮೈ ಗೌ, ನರೇಂದ್ರ ಮೋದಿ ಮೊಬೈಲ್ ಆಪ್ನಲ್ಲಿ ಜನರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಒಂದು ಟೋಲ್ ಫ್ರೀ ನಂಬರ್ 1800117800  ಕೂಡಾ ಇದೆ. ಈ ಸಂಖ್ಯೆಗೆ ಕರೆ ಮಾಡಿ ಜನರು ತಮ್ಮ ಧ್ವನಿಯಲ್ಲಿ ತಮ್ಮ ಸಂದೇಶವನ್ನು ಧ್ವನಿಮುದ್ರಿಸುತ್ತಾರೆ.  ಮನ್ ಕಿ ಬಾತ್ ಗೆ ಮೊದಲು ಹೆಚ್ಚೆಚ್ಚು ಪತ್ರಗಳನ್ನು ಮತ್ತು ಸಲಹೆ ಸೂಚನೆಗಳನ್ನು ಸ್ವತಃ ಓದುವ ಪ್ರಯತ್ನ ಮಾಡುತ್ತೇನೆ. ನಾನು ಸಾಕಷ್ಟು ದೂರವಾಣಿ ಕರೆಗಳನ್ನು ಕೇಳುತ್ತೇನೆ. ಪ್ರವಾಸದಲ್ಲಿದ್ದಾಗ ಮನ್ ಕಿ ಬಾತ್ ಕಂತು ಹತ್ತಿರ ಬರುತ್ತಿರುವಂತೆ ನೀವು ಕಳುಹಿಸಿದ ವಿಚಾರಗಳು ಮತ್ತು ಸಲಹೆ ಸೂಚನೆಗಳನ್ನು ಬಹಳ ಗಮನವಿಟ್ಟು ಓದುತ್ತೇನೆ.

ಪ್ರತಿಕ್ಷಣದಲ್ಲೂ ನನ್ನ ದೇಶವಾಸಿ ಪ್ರಜೆಗಳು  ನನ್ನ ಮನದಲ್ಲಿ ಅಂತರ್ನಿಹಿತರಾಗಿರುತ್ತಾರೆ. ಆದ್ದರಿಂದಲೇ ಯಾವುದಾದರೂ ಪತ್ರವನ್ನು ಓದಿದಾಗ / ಪತ್ರವನ್ನು ಬರೆದವರ ಪರಿಸ್ಥಿತಿ, ಅವರ ಭಾವನೆಗಳು, ನನ್ನ ವಿಚಾರದ ಅಂಗವಾಗಿಬಿಡುತ್ತವೆ. ಆ ಪತ್ರ ನನಗೆ ಕೇವಲ ಕಾಗದದ ತುಂಡು ಎನಿಸುವುದಿಲ್ಲ. ಅಂದಹಾಗೆ, ಅಖಂಡವಾಗಿ ಸುಮಾರು 40-45 ವರ್ಷಗಳ ಕಾಲ ನಾನು ಸನ್ಯಾಸಿಯಂತೆ ಜೀವನ ನಡೆಸಿದ್ದೇನೆ. ದೇಶದ ಬಹುತೇಕ ಜಿಲ್ಲೆಗಳಿಗೆ ಹೋಗಿದ್ದೇನೆ. ದೇಶದ ಬಹÅದೂರದ ಜಿಲ್ಲೆಗಳಲ್ಲೂ ಸಾಕಷ್ಟು ಸಮಯ ಕಳೆದಿದ್ದೇನೆ. ಈ ಕಾರಣದಿಂದ, ಯಾವಾಗ ನಾನು ಪತ್ರವನ್ನು ಓದುತ್ತೇನೋ, ಆಗ ಆ ಸ್ಥಾನ ಮತ್ತು ಸಂದರ್ಭದೊಂದಿಗೆ ಬಹಳ ಸುಲಭವಾಗಿ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತೇನೆ.  ನಂತರ ನಾನು ಕೆಲವು ವಾಸ್ತವಿಕ ಅಂಶಗಳನ್ನು ಅಂದರೆ ಆ ಹಳ್ಳಿ, ವ್ಯಕ್ತಿಯ ಹೆಸರು, ಇಂತಹ ಅಂಶಗಳನ್ನು ಗುರುತುಮಾಡಿಕೊಳ್ಳುತ್ತೇನೆ. ನಿಜವಾಗಿ ಹೇಳಬೇಕೆಂದರೆ, ‘ಮನದ ಮಾತಿನಲ್ಲಿ’ ಧ್ವನಿ ನನ್ನದು ಆದರೆ ಉದಾಹರಣೆಗಳು, ಭಾವನೆಗಳು ಮತ್ತು ಸ್ಫೂರ್ತಿ ನನ್ನ ದೇಶವಾಸಿಗಳದ್ದೇ ಆಗಿವೆ. ಮನ್ ಕಿ ಬಾತ್ ಗೆ  ಕೊಡುಗೆ ನೀಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸಬಯಸುತ್ತೇನೆ. ಇಂತಹ ಲಕ್ಷಾಂತರ ಜನರಿದ್ದಾರೆ. ಆದರೆ ಅವರ ಹೆಸರನ್ನು ನಾನು ಇದುವರೆಗೂ ‘ಮನ್ ಕಿ ಬಾತ್’ನಲ್ಲಿ ತೆಗೆದುಕೊಳ್ಳಲಾಗಲಿಲ್ಲ, ಆದರೆ ಅವರು ನಿರಾಶರಾಗದೆ, ತಮ್ಮ ಪತ್ರ, ತಮ್ಮ ಟೀಕೆ-ಟಿಪ್ಪಣಿ ಕಳಿಸುತ್ತಾರೆ. ನಿಮ್ಮ ವಿಚಾರಧಾರೆ, ನಿಮ್ಮ ಭಾವನೆಗಳು ನನ್ನ ಜೀವನದಲ್ಲಿ ಬಹು ಮಹತ್ವಪೂರ್ಣವಾಗಿವೆ. ನಿಮ್ಮೆಲ್ಲರ ವಿಚಾರಗಳು ಹಿಂದಿಗಿಂತಲೂ ಎಷ್ಟೋ ಪಟ್ಟು ಅಧಿಕವಾಗಿ ನನಗೆ ದೊರಕುತ್ತವೆ. ಮನದಮಾತನ್ನು ಮತ್ತಷ್ಟು ರೋಚಕವಾಗಿ, ಪ್ರಭಾವಿಯಾಗಿ, ಉಪಯೋಗಿಯಾಗಿಸುತ್ತದೆ ಎಂಬ ಪೂರ್ಣ ಭರವಸೆ ನನಗಿದೆ.ಯಾವ ಪತ್ರ ‘ಮನದ ಮಾತಿ’ನಲ್ಲಿ ಸೇರ್ಪಡೆಯಾಗಿಲ್ಲವೋ ಆ ಪತ್ರಗಳು ಮತ್ತು ಅದರಲ್ಲಿನ ಸಲಹೆಗಳಿಗೆ ಸಂಬಂಧಪಟ್ಟ ವಿಭಾಗಗಳು ಗಮನನೀಡುವಂತೆ ಪ್ರಯತ್ನ ಮಾಡಲಾಗುವುದು.

 

ನಾನು ಆಕಾಶವಾಣಿ, ಎಫ್.ಎಮ್.ರೇಡಿಯೋ, ದೂರದರ್ಶನ, ಇತರೆ ಟಿ.ವಿ. ಚಾನಲ್ಗಳು, ಸಾಮಾಜಿಕ ತಾಣಗಳಲ್ಲಿನ ನನ್ನ ಸ್ನೇಹಿತರಿಗೂ ಧನ್ಯವಾದ ಅರ್ಪಿಸಬಯಸುತ್ತೇನೆ. ಅವರ ಪರಿಶ್ರಮದಿಂದಾಗಿ ‘ಮನದ ಮಾತು’ ಹೆಚ್ಹೆಚ್ಚು ಜನರನ್ನು ತಲಪುತ್ತದೆ.ಆಕಾಶವಾಣಿಯ ತಂಡ ಪ್ರತಿ ಕಂತನ್ನೂ ಸಹ ಬಹಳಷ್ಟು ಭಾಷೆಗಳಲ್ಲಿ ಪ್ರಸಾರ ಮಾಡಲು ತಯಾರಿ ನಡೆಸುತ್ತದೆ. ಕೆಲವರಂತೂ ಮೋದಿಯ ಧ್ವನಿಗೆ ಹೋಲುವ ಧ್ವನಿಯಲ್ಲಿ ಅದೇ ಕಂಠದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಮನದ ಮಾತನ್ನು ಕೇಳಿಸುತ್ತಾರೆ.ಈ ರೀತಿಯಾಗಿ ಅವರು ಆ ಮೂವತ್ತು ನಿಮಿಷಗಳ ಕಾಲ ನರೇಂದ್ರಮೋದಿಯೇ ಆಗಿಬಿಡುತ್ತಾರೆ. ನಾನು ಅವರನ್ನೂ, ಅವರ ಪ್ರತಿಭೆ, ಕೌಶಲವನ್ನು ಅಭಿನಂದಿಸುತ್ತೇನೆ. ಧನ್ಯವಾದವನ್ನೂ ಅರ್ಪಿಸುತ್ತೇನೆ. ನಿಮ್ಮ ಪ್ರಾದೇಶಿಕ, ಸ್ಥಳೀಯ ಭಾಷೆಯಲ್ಲಿ ಅವಶ್ಯವಾಗಿ ಕೇಳಬೇಕೆಂದು ತಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಯಾರು ತಮ್ಮ-ತಮ್ಮ ಚಾನಲ್ಗಳಲ್ಲಿ ನಿಯಮಿತವಾಗಿ ಮನದ ಮಾತನ್ನು ಪ್ರಸಾರ ಮಾಡಿದ್ದಾರೆ ಆ ನನ್ನ ಎಲ್ಲಾ ಮಾಧ್ಯಮ ಮಿತ್ರರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.  ಯಾವುದೇ ರಾಜಕೀಯ ವ್ಯಕ್ತಿಯೂ ಸಹ ಮಾಧ್ಯಮಗಳಿಂದ ತಮಗೆ ಕಡಿಮೆ ಕವರೇಜ್ ಸಿಗುತ್ತದೆ. ಕವರೇಜ್ ಸಿಕ್ಕರೂ ಅದು ನೇತ್ಯಾತ್ಮಕವಾಗಿಯೇ ಇರುತ್ತದೆ ಎಂಬ ಕಾರಣಕ್ಕೆ ಮಾಧ್ಯಮಗಳ ವಿಚಾರವಾಗಿ ಸಂತಸದಿಂದ ಇರುವುದಿಲ್ಲ.   ಆದರೆ ಮನದ ಮಾತಿನಲ್ಲಿ ಪ್ರಸ್ತಾಪಿಸಲಾದ ವಿಷಯಗಳನ್ನು ಮಾಧ್ಯಮಗಳು ತಮ್ಮದಾಗಿಸಿಕೊಂಡಿವೆ. ಸ್ವಚ್ಛತೆ, ರಸ್ತೆ ಸುರಕ್ಷತೆ, ಮಾದಕ ವಸ್ತು ಮುಕ್ತ ಭಾರತ, selfie with daughter ಮೊದಲಾದ ವಿಷಯಗಳನ್ನು ಮಾಧ್ಯಮಗಳು ನವೀನ ಶೈಲಿಯಲ್ಲಿ ಒಂದು ಅಭಿಯಾನದ ರೂಪವನ್ನೇ ನೀಡಿ ಮುನ್ನಡೆಸುವ ಕೆಲಸ ಮಾಡಿವೆ. ಟಿ.ವಿ. ಚಾನಲ್ಗಳು ಇದನ್ನು  most heard radio programme ಮಾಡಿಬಿಟ್ಟಿವೆ. ನಾನು ಮಾಧ್ಯಮಕ್ಕೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ತಮ್ಮ ಸಹಕಾರವಿಲ್ಲದೆ ‘ಮನದ ಮಾತಿನ’ ಯಾತ್ರೆ ಅಪೂರ್ಣವೇ ಆಗುತ್ತಿತ್ತು.

 

[ಫೋನ್ ಕರೆ -3 ]

 

“ನಮಸ್ತೆ ಮೋದೀಜಿ ಉತ್ತರಾಖಂಡ್ನ ಮಸೂರಿಯಿಂದ ನಾನು ನಿಧಿ ಬಹುಗುಣಾ ಮಾತಾಡ್ತಾ ಇದೀನಿ.ನಾನು ಯುವಾವಸ್ಥೆಯ ಇಬ್ಬರು ಮಕ್ಕಳ ತಾಯಿ. ನಾನು ಆಗಾಗ ಗಮನಿಸಿದ್ದೀನಿ.ಈ ವಯೋಮಾನದ ಮಕ್ಕಳು ‘ಅವರೇನು ಮಾಡಬೇಕು?’ಎಂಬುದನ್ನು ಅವರ ಶಿಕ್ಷಕರು ಇರಬಹ್ದು, ಅವರ ತಾಯಿ-ತಂದೆ ಇರಬಹ್ದು ಯಾರ್ಹೇಳೋದನ್ನೂ ಅವರು ಇಷ್ಟಪಡೋದಿಲ್ಲ. ಆದರೆ ‘ಮನದ ಮಾತಿನಲ್ಲಿ’ ತಾವು ಮಕ್ಕಳಿಗೆ ಏನಾದರೂ ಹೇಳಿದರೆ, ಅವರು ಹೃದಯಪೂರ್ವಕವಾಗಿ ಅರ್ಥಮಾಡಿಕೊಳ್ತಾರೆ ಮತ್ತು ಅದರ ಪಾಲನೆ ಕೂಡ ಮಾಡ್ತಾರೆ.ತಾವು ಇದರ ರಹಸ್ಯವನ್ನು ನಮ್ಮೊಡನೆ ಹಂಚಿಕೊಳ್ಳುವಿರಾ? ತಾವು ಹೇಳುವ ರೀತಿಯಿಂದ, ತಾವು ವಿಷಯಗಳನ್ನು ಆರಿಸಿಕೊಳ್ಳುವ ಪರಿಯಿಂದ ಮಕ್ಕಳು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.ಜೊತೆಗೆ ಕಾರ್ಯಗತಗೊಳಿಸುತ್ತಾರೆ ಕೂಡ. ಧನ್ಯವಾದ.

 

ನಿಧಿಯವರೆ, ನಿಮ್ಮ ಫೋನ್ ಕರೆಗಾಗಿ ಅನಂತಾನಂತ ಧನ್ಯವಾದಗಳು.ವಾಸ್ತವವಾಗಿ ನನ್ನ ಬಳಿ ಯಾವ ರಹಸ್ಯವೂ ಇಲ್ಲ. ನಾನು ಯಾವುದನ್ನು ಮಾಡುತ್ತಿದ್ದೇನೆ, ಪ್ರಾಯಶಃ ಅದು ಎಲ್ಲಾ ಕುಟುಂಬದಲ್ಲೂ ನಡೆಯುತ್ತಲೇ ಇರಬಹುದು. ಸರಳ ಭಾಷೆಯಲ್ಲಿ ಹೇಳುವುದಾದರೆ, ನನ್ನನ್ನು ನಾನು ಯುವಕರ ಮನಸ್ಸಿನ ಒಳಹೊಕ್ಕು ನೋಡುವ ಪ್ರಯತ್ನ ಮಾಡುತ್ತೇನೆ. ನನ್ನನ್ನೇ ಅವರ ಪರಿಸ್ಥಿತಿಗಳಿಗೆ ಒಡ್ಡಿಕೊಂಡು, ಅವರ ವಿಚಾರಧಾರೆಗಳ ಜೊತೆ ಸಾಮರಸ್ಯ ಮೂಡಿಸುವ, ಒಂದು ವೇವ್ ಲೆನ್ತ್ ಹೊಂದಿಸುವ ಪ್ರಯತ್ನ ಮಾಡುತ್ತೇನೆ.ಅವು ನಮ್ಮದೇ ಜೀವನದ ಹಿಂದಿನ ಸರಕುಗಳು. ಅವು ನಮ್ಮ ಮಧ್ಯದಲ್ಲಿ ಬರದೇ ಹೋದರೆ, ಯಾರನ್ನೇ ಆದರೂ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಕೆಲವೊಮ್ಮೆ ನಮ್ಮ ಪೂರ್ವಾಗ್ರಹವೇ ಪರಸ್ಪರ ಮಾತುಕತೆಗೆ ದೊಡ್ಡ ಅಡ್ಡಿಯಾಗುತ್ತದೆ. ನಾನು ಇನ್ನೊಬ್ಬರ ಮಾತನ್ನು ಒಪ್ಪಿಕೊಳ್ಳುವ, ಒಪ್ಪಿಕೊಳ್ಳದಿರುವ ಅಥವಾ ಪ್ರತಿಕ್ರಿಯೆ ನೀಡುವುದಕ್ಕಿಂತ ಮಿಗಿಲಾಗಿ ಅರ್ಥಮಾಡಿಕೊಳ್ಳುವುದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತೇನೆ. ಈ ಕಾರಣದಿಂದ ನಮ್ಮ ಮನವೊಲಿಸಲು ಪರಿ ಪರಿಯಾಗಿ ತರ್ಕ ಮತ್ತು ಒತ್ತಡಗಳನ್ನು ಬಳಸುವ ಬದಲಾಗಿ ನಮ್ಮ ಮನೋಭಾವಕ್ಕೆ ಅನುಗುಣವಾಗಿಸಲು ಪ್ರಯತ್ನಿಸುತ್ತಾರೆ ಎಂಬುದು ನನ್ನ ಅನುಭವಕ್ಕೆ ಬಂದಿದೆ.  ಇದರಿಂದಲೇ ಪರಸ್ಪರ ವಿಚಾರ ವಿನಿಮಯ ಅಂತರ ಇಲ್ಲವಾಗುತ್ತದೆ. ಜೊತೆಗೆ ಒಂದು ಬಗೆಯಲ್ಲಿ ಅದೇ ವಿಚಾರದಲ್ಲಿ ನಾವಿಬ್ಬರೂ ಸಹಯಾತ್ರಿಗಳಾಗಿಬಿಡುತ್ತೇವೆ. ಇಬ್ಬರಲ್ಲೂ ಯಾವಾಗ? ಹೇಗೆ? ತನ್ನ ವಿಚಾರವನ್ನು ಕೈಬಿಟ್ಟು, ಮತ್ತೊಬ್ಬರ ವಿಚಾರವನ್ನು ಸ್ವೀಕರಿಸಿದೆ? ನನ್ನದಾಗಿಸಿಕೊಂಡೆ? ಎಂಬುದು ಗೊತ್ತಾಗುವುದೇ ಇಲ್ಲ.

ಇಂದಿನ ಯುವಪೀಳಿಗೆಯಲ್ಲಿರುವ ವೈಶಿಷ್ಟ್ಯವೇನೆಂದರೆ, ಯಾವುದೇ ಕಾರ್ಯದಲ್ಲಿ ಅವರಿಗೆ ನಂಬಿಕೆ ಬಾರದಿದ್ದರೆ, ಅದನ್ನು ಅವರು ಮಾಡುವುದೇ ಇಲ್ಲ. ಯಾವಾಗ ಅವರಿಗೆ ಯಾವ ವಿಷಯದಲ್ಲಿ ವಿಶ್ವಾಸ ಮೂಡುತ್ತದೋ, ಅವರು ಅದಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿಯಾದರೂ ಸರಿ ಅದರ ಬೆನ್ನುಬೀಳುತ್ತಾರೆ. ಬಹಳಷ್ಟು ಬಾರಿ ಜನರು ಕುಟುಂಬದಲ್ಲಿನ ಹಿರಿಯರ-ಹದಿಹರೆಯದವರ ನಡುವಿನ ಸಂವಹನದ ಅಂತರದ ಕುರಿತು ಮಾತನಾಡುತ್ತಾರೆ.ಆದರೆ ವಾಸ್ತವವಾಗಿ ಬಹುತೇಕ ಕುಟುಂಬಗಳಲ್ಲಿ ಹದಿಹರೆಯದವರೊಡನೆ ಆಗುವ ಮಾತುಕತೆಯ ವ್ಯಾಪ್ತಿ ಬಹಳ ಸೀಮಿತವಾಗಿರುತ್ತದೆ.ಹೆಚ್ಚಿನ ಸಮಯ ವ್ಯಾಸಂಗ ಅಥವಾ ಅಭ್ಯಾಸಗಳು, ಜೊತೆಗೆ ಜೀವನಶೈಲಿಯ ವಿಚಾರಗಳನ್ನು ಉಲ್ಲೇಖಿಸಿ, ‘ಹೀಗೆ ಮಾಡು-ಹೀಗೆ ಮಾಡಬೇಡ’ ಎಂಬ ಮಾತುಗಳು ನಡೆಯುತ್ತವೆ. ಯಾವುದೇ ನಿರೀಕ್ಷೆಯಿಲ್ಲದ ಮುಕ್ತಮನಸ್ಸಿನ ಮಾತುಗಳು, ಕುಟುಂಬಗಳಲ್ಲಿ ನಿಧಾನವಾಗಿ ಕಡಿಮೆಯಾಗುತ್ತ ಬರುತ್ತಿದೆ. ಇದು ಚಿಂತೆಯ ವಿಷಯವೇ.

ನಿರೀಕ್ಷೆಯ ಬದಲಾಗಿ ಒಪ್ಪಿಕೊಳ್ಳುವ, / ತಿರಸ್ಕರಿಸುವ ಬದಲು ಚರ್ಚಿಸುವುದರಿಂದ / ಪರಸ್ಪರ-ಸಂವಾದ ಪ್ರಭಾವಿ ಆಗುತ್ತದೆ. ಪ್ರತ್ಯೇಕ ಕಾರ್ಯಕ್ರಮಗಳಲ್ಲಿ, ಸಾಮಾಜಿಕ ತಾಣಗಳ ಮೂಲಕ ಯುವಕರೊಡನೆ ಮಾತನಾಡುವ ನನ್ನ ಪ್ರಯತ್ನ ನಿರಂತರವಾಗಿರುತ್ತದೆ.ಅವರೇನು ಮಾಡುತ್ತಿದ್ದಾರೆ? ಏನು ಯೋಚಿಸುತ್ತಿದ್ದಾರೆ? ಎಂಬ ಚಿಂತನೆಗಳ ಮೂಲಕ ಕಲಿಯುವ ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಅವರ ಬಳಿ ಹೊಸ ವಿಚಾರಗಳ ಭಂಡಾರವೇ ಇರುತ್ತದೆ. ಅವು ಅತ್ಯಂತ ಶಕ್ತಿಯುತವೂ, ಹೊಸತನದಿಂದ ಕೂಡಿದ್ದೂ, ವಿಚಾರ ಕೇಂದ್ರಿತವಾದದ್ದೂ ಆಗಿರುತ್ತದೆ. ‘ಮನದ ಮಾತಿನ’ ಮೂಲಕ ನಾನು ಯುವಕರ ಪ್ರಯತ್ನಶೀಲತೆಗಳನ್ನು, ಅವರ ಮಾತುಗಳನ್ನೂ, ಹೆಚ್ಹೆಚ್ಚು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಯಾವಾಗಲೂ ಒಂದು ದೂರು ಇದ್ದೇ ಇರುತ್ತದೆ – ಯುವಕರು ಹೆಚ್ಚು ಪ್ರಶ್ನೆ ಕೇಳುತ್ತಾರೆ ಎಂಬುದು.  ನಾನು ಹೇಳುತ್ತೇನೆ –ಯುವಕರು ಪ್ರಶ್ನಿಸುವುದು ಒಳ್ಳೆಯದೇ. ಇದೇಕೆ ಒಳ್ಳೆಯದು ಎಂದರೆ, ಅವರು ಎಲ್ಲ ವಿಚಾರಗಳನ್ನೂ ಮೂಲದಿಂದ ಪರೀಕ್ಷಿಸಬಯಸುತ್ತಾರೆ. ಯುವಕರಿಗೆ ಧೈರ್ಯವಿಲ್ಲ ಎಂಬುದು ಕೆಲವರ ಅಭಿಪ್ರಾಯ. ಆದರೆ ಯುವಕರ ಬಳಿ ವ್ಯರ್ಥಮಾಡುವಷ್ಟು ಸಮಯವೇ ಇಲ್ಲ ಎಂಬುದು ನನ್ನ ನಂಬಿಕೆ. ಇದುವೇ ಇಂದಿನ ಯುವಕರನ್ನು ಅಧಿಕ ಕ್ರಿಯಾಶೀಲರನ್ನಾಗಿಟ್ಟಿರುವುದಕ್ಕೆ ಸಹಕಾರಿಯಾಗಿದೆ. ಏಕೆಂದರೆ ಅವರು ಕೆಲಸಗಳನ್ನು ಶೀಘ್ರಗತಿಯಲ್ಲಿ ಮಾಡಬಯಸುತ್ತಾರೆ. ಇಂದಿನ ಯುವಪೀಳಿಗೆಯವರು ಬಹಳ ಮಹತ್ವಾಕಾಂಕ್ಷಿಗಳು,  ಜೊತೆಗೆ ಬೃಹತ್ ವಿಷಯಗಳ ಬಗ್ಗೆ ಯೋಚಿಸುತ್ತಾರೆ ಒಳ್ಳೆಯದು. / ದೊಡ್ಡದಾಗಿ ಕನಸು ಕಾಣಲಿ. ಅಧಿಕ ಯಶಸ್ಸನ್ನು ಸಾಧಿಸಲಿ. ಹೌದು ಇದುವೆ ನವಭಾರತ.

ಯುವಕರು ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡಲು ಬಯಸುತ್ತಾರೆ ಎಂದೂ ಕೆಲವರು ಹೇಳುತ್ತಾರೆ. ಇದರಲ್ಲೇನು ತಪ್ಪು? ಬಹುಕಾಯಕಗಳಲ್ಲಿ ಅವರು ನಿಷ್ಣಾತರು. ಆದ್ದರಿಂದಲೇ ಹಾಗೆ ಮಾಡುತ್ತಾರೆ. ನಾವು ನಮ್ಮ ಸುತ್ತ-ಮುತ್ತ ದೃಷ್ಟಿಹಾಯಿಸಿದರೆ, ಅದು ಸಾಮಾಜಿಕ ಉದ್ಯಮಶೀಲತೆ ಇರಬಹುದು, start ups ಇರಬಹುದು, ಕ್ರೀಡೆ ಅಥವಾ ಇನ್ನಿತರ ಕ್ಷೇತ್ರಗಳಲ್ಲಿ, ಸಮಾಜದಲ್ಲಿ ಬದಲಾವಣೆ ತರುವುದಾಗಿರಬಹುದು ಪ್ರಶ್ನೆಗಳನ್ನು ಕೇಳುವುದಾಗಿರಬಹುದು, ದೊಡ್ಡ ಕನಸುಗಳನ್ನು ಕಾಣುವ ಸಾಹಸ ತೋರಿಸಬಹುದಾಗಿರಬಹುದು ಇದೆಲ್ಲವನ್ನು ಮಾಡುವವರು ಯುವಕರೇ ಆಗಿರುತ್ತಾರೆ. ನಾವು ಯುವಕರ ವಿಚಾರಧಾರೆಯನ್ನು ಮೂಲಭೂತವಾಗಿ ಅಭಿವ್ಯಕ್ತಗೊಳಿಸಲು ಮುಕ್ತ ವಾತಾವರಣ ಒದಗಿಸಿದರೆ, ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತಾರೆ. ಅವರು ಹಾಗೆ ಮಾಡುತ್ತಲೂ ಇದ್ದಾರೆ.

 

ನನ್ನ ದೇಶವಾಸಿಗಳೆ,

ಗುರುಗ್ರಾಮದಿಂದ ವಿನೀತಾ ಅವರು MyGov.ನಲ್ಲಿ ಬರೆದಿದ್ದಾರೆ ‘ಮನದ ಮಾತಿನಲ್ಲಿ’ ನಾನು ನಾಳೆಯ ಅಂದರೆ ನವಂಬರ್ 26ರ ‘ಸಂವಿಧಾನ ದಿವಸ್’ ಕುರಿತು ಮಾತನಾಡಬೇಕು ಎಂದಿದ್ದಾರೆ. ನಾವು ಸಂವಿಧಾನವನ್ನು ಅಳವಡಿಸಿಕೊಂಡು 70ನೇ ವರ್ಷಕ್ಕೆ ಪ್ರವೇಶಿಸುತ್ತಿದ್ದೇವೆ ಇದು ಇಂದಿನ ವಿಶೇಷ ಎನ್ನುವುದು ಅವರ ಮಾತಾಗಿದೆ.

 

ವಿನೀತಾರವರೆ, ತಮ್ಮ ಸಲಹೆಗಾಗಿ ತಮಗೆ ಅನಂತಾನಂತ ಧನ್ಯವಾದ.

 

ನಿಜ. ನಾಳೆ ‘ಸಂವಿಧಾನ ದಿವಸ’. ನಮ್ಮ ಸಂವಿಧಾನದ ಸೃಷ್ಟಿಗೆ ಕಾರಣಕರ್ತರಾದ ವಿಭೂತಿಪುರುಷರನ್ನು ನೆನೆಯಬೇಕಾದ ದಿನ. 1949 ರ ನವೆಂಬರ್ 26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಗಿತ್ತು. ಸಂವಿಧಾನದ ಕರಡು ಸಿದ್ಧಪಡಿಸುವ ಐತಿಹಾಸಿಕ ಕೆಲಸವನ್ನು ಪೂರ್ಣಗೊಳಿಸಲು ಸಂವಿಧಾ ರಚನಾ ಸಭೆಗೆ ಎರಡು ವರ್ಷ ಹನ್ನೊಂದು ತಿಂಗಳು ಹದಿನೇಳು ದಿವಸಗಳು ಹಿಡಿದವು. ಒಮ್ಮೆ ಕಲ್ಪನೆ ಮಾಡಿಕೊಳ್ಳಿ –‘ಮೂರೇ ವರ್ಷಗಳೊಳಗೆಈ ಮಹಾಪುರುಷರು ನಮಗೆ ಇಷ್ಟು ವಿಸ್ತಾರವಾದ, ವ್ಯಾಪಕವಾದ ಸಂವಿಧಾನವನ್ನು ನೀಡಿದ್ದಾರೆ. ಇವರೇನು ಅಸಾಧಾರಣ ವೇಗದಲ್ಲಿ ಸಂವಿಧಾನ ರಚನೆ ಮಾಡಿದ್ದಾರೆ, ಅದು ಇಂದಿಗೂ ಸಹ ಸಮಯ ನಿರ್ವಹಣೆ ಮತ್ತು ಕರ್ತೃತ್ವಕ್ಷಮತೆ ಒಂದು ಉದಾಹರಣೆಯೇ ಆಗಿದೆ. ಇದು ನಮಗೂ ಸಹ ನಮ್ಮ ಜವಾಬ್ದಾರಿಯನ್ನು ಒಂದು ದಾಖಲೆಯ ಸಮಯದಲ್ಲಿಯೇ ಪೂರ್ಣಗೊಳಿಸಲು ಪ್ರೇರೇಪಿಸುತ್ತದೆ. ಸಂವಿಧಾನ ಸಭೆ ದೇಶದ ಮಹಾನ್ ಪ್ರತಿಭೆಗಳ ಸಂಗಮವೇ ಆಗಿತ್ತು. ಅದರಲ್ಲಿ ಪ್ರತಿಯೊಬ – ‘ಭಾರತೀಯನೂ ಸಶಕ್ತನಾಗಬೇಕು. ಕಡುಬಡವನೂ ಸಹ ಸಮರ್ಥನಾಗಬೇಕು’  ಎಂಬ ಆಶಯದಿಂದ ಸಂವಿಧಾನವನ್ನು ನೀಡಲು ಬದ್ಧರಾಗಿದ್ದರು.

ನಮ್ಮ ಸಂವಿಧಾನದ ವೈಶಿಷ್ಠ್ಯತೆಯೆಂದರೆ ಹಕ್ಕು ಮತ್ತು ಕರ್ತವ್ಯ ಅಂದರೆ rights & duties ವಿಚಾರವಾಗಿ ವಿಸ್ತೃತವಾಗಿ ವಿವರಿಸಲಾಗಿದೆ. ನಾಗರಿಕ ಜೀವನದಲ್ಲಿ ಇವೆರಡೂ ಅಂಶಗಳ ಸಮತೋಲನವೇ ದೇಶವನ್ನು ಮುನ್ನಡೆಸುತ್ತದೆ. ನಾವು ಇನ್ನೊಬ್ಬರ ಹಕ್ಕನ್ನು ಗೌರವಿಸಿದರೆ, ನಮ್ಮ ಹಕ್ಕಿನ ರಕ್ಷಣೆ ತಂತಾನೇ ಆಗುತ್ತದೆ. ಅದೇ ರೀತಿ ಒಂದುವೇಳೆ ನಾವು  ಸಂವಿಧಾನದತ್ತ ಕರ್ತವ್ಯಗಳಪಾಲನೆ ಮಾಡಿದರೆ, ಆಗಲೂ ನಮ್ಮ ಹಕ್ಕುಗಳ ರಕ್ಷಣೆ ತಾನಾಗಿಯೇ ಆಗುವುದು.  2010ರಲ್ಲಿ ಭಾರತ ಗಣತಂತ್ರದ ಅರವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಗುಜರಾತ್ನಲ್ಲಿ ಸಂವಿಧಾನದ ಪ್ರತಿಯನ್ನು ಆನೆಯ ಮೇಲೆ ಇಟ್ಟು ಮೆರವಣಿಗೆ ನಡೆಸಿದ್ದು ನನಗೀಗಲೂ ನೆನಪಿದೆ. ಯುವಕರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಅವರಿಗೆ ಸಂವಿಧಾನದ ಮಜಲಲ್ಲಿ ಜೋಡಿಸಲು ಒಂದು ಸ್ಮರಣೀಯ ಪ್ರಸಂಗವಾಗಿತ್ತು. 2020ರಲ್ಲಿ ಒಂದು ಗಣತಂತ್ರವಾಗಿ ಎಪ್ಪತ್ತು ವರ್ಷಗಳನ್ನು ಪೂರ್ಣಗೊಳಿಸಲಿದ್ದೇವೆ ಮತ್ತು 2022ರಲ್ಲಿ ನಮ್ಮ ಸ್ವಾತಂತ್ರ್ಯಕ್ಕೂ ಎಪ್ಪತ್ತೈದು ವರ್ಷಗಳು ಪೂರ್ಣವಾಗುತ್ತವೆ.

 

ಬನ್ನಿ, ನಾವೆಲ್ಲಾ ನಮ್ಮ ಸಂವಿಧಾನದ ಮೌಲ್ಯಗಳನ್ನು ಬಲಪಡಿಸೋಣ. ನಮ್ಮ ದೇಶದಲ್ಲಿ peace, progression, prosperity ಅಂದರೆ, ಶಾಂತಿ, ಉನ್ನತಿ ಮತ್ತು ಸಮೃದ್ಧಿಯನ್ನು ಸುನಶ್ಚಿತಗೊಳಿಸೋಣ.

 

ನನ್ನ ಪ್ರಿಯ ದೇಶವಾಸಿಗಳೆ,

ಸಂವಿಧಾನ ಸಭೆಯ ಬಗ್ಗೆ ಮಾತನಾಡುವಾಗ ಸಂವಿಧಾನ ಸಭೆಯ ಕೇಂದ್ರಬಿಂದುವಾಗಿದ್ದ ಆ ಮಹಾಪುರುಷನ ಕೊಡುಗೆಯನ್ನು ಮರೆಯಲು ಸಾಧ್ಯವಾಗುವುದೇ ಇಲ್ಲ. ಈ ಮಹಾಪುರುಷರೇ ಪೂಜ್ಯನೀಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್.  ಡಿಸೆಂಬರ್ 6 ಅವರ ಮಹಾಪರಿನಿರ್ವಾಣ ದಿನ. ನಾನು ದೇಶವಾಸಿಗಳೆಲ್ಲರ ಪರವಾಗಿ, ಕೋಟ್ಯಂತರ ಭಾರತೀಯರಿಗೆ ಗೌರವದಿಂದ ಬಾಳುವ ಹಕ್ಕನ್ನು ಒದಗಿಸಿದ ಬಾಬಾ ಸಾಹೇಬರಿಗೆ ನಮನ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ ಎಂಬುದು ಬಾಬಾ ಸಾಹೇಬರ ಸ್ವಭಾವದಲ್ಲಿ ಅಂತರ್ನಿಹಿತವಾಗಿತ್ತು. ಅವರು “ಭಾರತದ ಪ್ರಜಾಪ್ರಭುತ್ವದ ಮೌಲ್ಯ ಹೊರಗಿನಿಂದ ಬಂದದ್ದಲ್ಲ” ಎಂದೇ ಹೇಳುತ್ತಿದ್ದರು.  ಗಣತಂತ್ರವೆಂದರೇನು? ಸಂಸದೀಯ ವ್ಯವಸ್ಥೆ ಹೇಗಿರುತ್ತದೆ ಎಂಬುದು ಭಾರತಕ್ಕೆ ಹೆÇಸತೇನಲ್ಲ. ಸಂವಿಧಾನ ಸಭೆಯಲ್ಲಿ ಅವರು ‘ಇಷ್ಟು ಸಂಘರ್ಷದ ನಂತರ ದೊರೆತಿರುವ ಸ್ವಾತಂತ್ರ್ಯವನ್ನು ನಮ್ಮ ರಕ್ತದ ಕೊನೆಯ ಹನಿ ಇರುವವರೆಗೂ ರಕ್ಷಿಸಬೇಕು’ ಎಂದು ಅತ್ಯಂತ ಭಾವುಕರಾಗಿ ಮನವಿ ಮಾಡಿದ್ದರು. ನಾವು ಭಾರತೀಯರು ವಿಭಿನ್ನ ಹಿನ್ನೆಲೆಯವರಿರಬಹುದು ಆದರೆ ಉಳಿದೆಲ್ಲ ವಿಚಾರಗಳಿಗಿಂತ ದೇಶದ ಹಿತವೇ ಮುಖ್ಯವಾಗಬೇಕು ಎಂದು ಅವರು ಹೇಳಿದ್ದರು. ಡಾ. ಬಾಬಾಸಾಹೇಬ್ ಅಂಬೆಡ್ಕರ್ ಅವರ ಮೂಲಮಂತ್ರ India first ಎಂಬುದಾಗಿತ್ತು ಮತ್ತೊಮ್ಮೆ ಪೂಜ್ಯ ಬಾಬಾ ಸಾಹೇಬರಿಗೆ ವಿನಮ್ರ ಶ್ರದ್ಧಾಂಜಲಿ.

ನನ್ನ ಪ್ರಿಯ ದೇಶವಾಸಿಗಳೆ,

 

ಕಳೆದೆರಡು ದಿನಗಳ ಹಿಂದೆ ನವಂಬರ್ 23ರಂದು ನಾವೆಲ್ಲಾ ಗುರುನಾನಕ್ ದೇವ್ಜಿ ಅವರ ಜಯಂತಿ ಆಚರಿಸಿದ್ದೇವೆ. ಮುಂದಿನ ವರ್ಷ ಅಂದರೆ 2019ರಲ್ಲಿ ಗುರುನಾನಕರ 550ನೇ ಪ್ರಕಾಶ-ಪರ್ವ ಆಚರಿಸಲಿದ್ದೇವೆ,  ಗುರುನಾನಕರು ಯಾವಾಗಲೂ ಇಡೀ ಮಾನವ ಕುಲದ ಅಭಿವೃದ್ಧಿಗಾಗಿಯೇ ಚಿಂತಿಸಿದ್ದಾರೆ. ಅವರು ಅನವರತವಾಗಿ ಸಮಾಜಕ್ಕೆ ಸತ್ಯ, ಕರ್ಮ, ಸೇವೆ, ಕರುಣೆ ಮತ್ತು ಸೌಹಾರ್ದತೆಯ ಪಥದ ಮಾರ್ಗದರ್ಶಿಯಾಗಿದ್ದಾರೆ. ದೇಶದಲ್ಲಿ ಮುಂದಿನ ವರ್ಷ ನಾನಕ್ ದೇವ್ ಅವರ 550ನೇ ಜಯಂತಿ ಸಮಾರಂಭವನ್ನು ವೈಭವದಿಂದ ಆಚರಿಸಲಾಗುವುದು. ಇದರ ಪ್ರಭೆ ಕೇವಲ ದೇಶದಲ್ಲಷ್ಟೇ ಅಲ್ಲ, ಪ್ರಪಂಚದಲ್ಲೆಲ್ಲಾ ಪಸರಿಸುತ್ತದೆ. ಎಲ್ಲಾ ರಾಜ್ಯಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳವರನ್ನೂ ಈ ಸಮಯದಲ್ಲಿ ಅದ್ದೂರಿಯಿಂದ ಆಚರಿಸಲು ವಿನಂತಿಮಾಡಲಾಗಿದೆ. ಇದೇ ರೀತಿ ಗುರುನಾನಕರ 550ನೇ ಪ್ರಕಾಶ-ಪರ್ವವನ್ನು ಪ್ರಪಂಚದ ಎಲ್ಲಾ ದೇಶಗಳಲ್ಲೂ ಆಚರಿಸಲಾಗುವುದು. ಇದರ ಜೊತೆಗೆ ಗುರುನಾನಕರೊಂದಿಗೆ ಬೆಸೆದುಕೊಂಡಿರುವ ಪವಿತ್ರ ಸ್ಥಳಗಳ ಮಾರ್ಗದಲ್ಲಿ ರೈಲು ಸೇವೆ ಆರಂಭಿಸಲಾಗುವುದು. ನಾನು ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಸಭೆ ನಡೆಸುತ್ತಿದ್ದ ಸಮಯದಲ್ಲೇ ನನಗೆ ಲಖಪತ್ ಸಾಹಿಬ್ ಗುರುದ್ವಾರದ ನೆನಪಾಯಿತು.   2001ರಲ್ಲಿ ಆದ ಗುಜರಾತ್ನ ಭೂಕಂಪದ ಸಮಯದಲ್ಲಿ ಆ ಗುರುದ್ವಾರಕ್ಕೆ ದೊಡ್ಡ ನಷ್ಟವೇ ಉಂಟಾಗಿತ್ತು. ಆದರೆ ಯಾವ ರೀತಿ ಸ್ಥಳೀಯ ಜನರ ಜೊತೆ ರಾಜ್ಯ ಸರ್ಕಾರವೂ ಬೆರೆತು ಅದರ ಜೀರ್ಣೋದ್ಧಾರ ಮಾಡಿತು. ಅದು ಇಂದಿಗೂ ಸಹ ಒಂದು ದೃಷ್ಟಾಂತವೇ ಸರಿ.

ಭಾರತ ಸರ್ಕಾರವು ‘ಕರ್ತಾರ್ಪುರ್ ಕಾರಿಡಾರ್’ ನಿರ್ಮಿಸುವ ಬೃಹತ್ತಾದ ಮಹತ್ವಪೂರ್ಣ ನಿರ್ಣಯ ಕೈಗೊಂಡಿದೆ. ಇದರಿಂದ ನಮ್ಮ ದೇಶದ ಯಾತ್ರಿಗಳು ಸುಲಭವಾಗಿ ಪಾಕಿಸ್ತಾನದ, ಕರ್ತಾರ್ಪುರ್ನಲ್ಲಿ ಗುರುನಾನಕರ ಪವಿತ್ರ ಸ್ಥಳಗಳ ದರ್ಶನ ಮಾಡಬಹುದಾಗಿದೆ.

ನನ್ನ ಪ್ರಿಯ ದೇಶವಾಸಿಗಳೆ,

ಐವತ್ತು ಕಂತುಗಳ ನಂತರ ಮತ್ತೊಮ್ಮೆ ಮತ್ತೊಂದು ‘ಮನದ ಮಾತಿನ’ಲ್ಲಿ ಭೇಟಿಯಾಗೋಣ. ಮೊದಲ ಬಾರಿಗೆ,  ಈ ಕಾರ್ಯಕ್ರಮದ ಹಿಂದಿರುವ ಭಾವನೆಗಳನ್ನು, ತಮ್ಮೆದುರು ಇಡುವ ಅವಕಾಶ ದೊರಕಿತು. ಏಕೆಂದರೆ ತಾವು ಇದೇ ರೀತಿ ಪ್ರಶ್ನೆಗಳನ್ನು ಕೇಳಿದ್ದೀರಿ, ಆದರೆ ನಮ್ಮ ಯಾತ್ರೆ ಸಾಗುತ್ತಿರುತ್ತದೆ ಎಂಬ ವಿಶ್ವಾಸ ನನಗಿದೆ. ತಮ್ಮ ಒಡನಾಟ ಎಷ್ಟು ಹೆಚ್ಚು ಸಮ್ಮಿಳಿತವಾಗುತ್ತದೋ, ನಮ್ಮ ಈ ಯಾತ್ರೆ ಅಷ್ಟೇ ಗಂಭೀರವಾಗಿ ಸಾಗುತ್ತದೆ. ಮತ್ತು ಎಲ್ಲರಿಗು ಸಂತೋಷವನ್ನೂ ನೀಡುತ್ತದೆ. ಕೆಲವೊಮ್ಮೆ ಜನರ ಮನದಲ್ಲಿ ‘ಮನದ ಮಾತಿನಿಂದ’ ನನಗೇನು ಲಾಭವಾಯಿತು ಎಂಬ ಪ್ರಶ್ನೆ ಏಳುತ್ತದೆ. ಇದರ ಬಗ್ಗೆ ಇಂದು ಹೇಳುತ್ತೇನೆ.  ‘ಮನದ ಮಾತಿನ ಬಗ್ಗೆ’ ಪ್ರತಿಕ್ರಿಯೆಗಳು ಬರುವುದನ್ನು ಗಮನಿಸಿದಾಗ, ಅದರಲ್ಲಿ ಒಂದು ಮಾತು ನನ್ನ ಮನಸ್ಸನ್ನು ನಾಟುತ್ತದೆ.  ಹೆಚ್ಚಿನ ಜನರಿಗೆ – “ನಾವು ಕುಟುಂಬ ಸಮೇತರಾಗಿ ಕುಳಿತು ಮನದ ಮಾತನ್ನು ಕೇಳುತ್ತಿರುವಾಗ, ನಮಗೆ  ನಮ್ಮ ಕುಟುಂಬದ ಮುಖ್ಯಸ್ಥ ನಮ್ಮ ನಡುವೆಯೇ ಕುಳಿತು ನಮ್ಮದೇ ಮಾತುಗಳನ್ನು ನಮ್ಮೊಡನೆಯೇ ಹಂಚಿಕೊಳ್ಳುತ್ತಿದ್ದಾರೆ ಅನಿಸುತ್ತದೆ”  ಈ ಮಾತು ವ್ಯಾಪಕವಾಗಿ ಕೇಳಿಬಂದಾಗ ನನಗೆ ಸಂತೋಷವಾಯಿತು. ‘ನಾನು ನಿಮ್ಮವನು.  ನಿಮ್ಮಲ್ಲೊಬ್ಬ. ನಿಮ್ಮ ನಡುವೆಯೇ ಇದ್ದೇನೆ. ನೀವೇ ನನ್ನನ್ನು ಬೆಳೆಸಿದ್ದೀರಿ. ಒಂದು ರೀತಿಯಲ್ಲಿ ನಾನು ನಿಮ್ಮ ಪರಿವಾರದ ಸದಸ್ಯನ ರೂಪದಲ್ಲಿಯೇ ‘ಮನದ ಮಾತಿನ’ ಮಾಧ್ಯಮದ ಮೂಲಕ ಮತ್ತೆ ಮತ್ತೆ ಬರುತ್ತಲೇ ಇರುತ್ತೇನೆ ಹಾಗೂ ನಿಮ್ಮೊಡನೆ ಬೆರೆಯುತ್ತಲೇ ಇರುತ್ತೇನೆ. ನಿಮ್ಮ ಸುಖ-ದುಃಖವೇ, ನನ್ನ ಸುಖ-ದುಃಖ,   ನಿಮ್ಮ ಆಕಾಂಕ್ಷೆಗಳೇ ನನ್ನ ಆಕಾಂಕ್ಷೆಗಳು.   ನಿಮ್ಮ ಮಹತ್ವಾಕಾಂಕ್ಷೆಯೇ – ನನ್ನ ಮಹತ್ವಾಕಾಂಕ್ಷೆ.

ಬನ್ನಿ.  ಈ ಯಾತ್ರೆಯನ್ನು ನಾವು ಮತ್ತಷ್ಟು ಮುನ್ನಡೆಸೋಣ.

ಅನಂತಾನಂತ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Prime Minister meets with Crown Prince of Kuwait
December 22, 2024

​Prime Minister Shri Narendra Modi met today with His Highness Sheikh Sabah Al-Khaled Al-Hamad Al-Mubarak Al-Sabah, Crown Prince of the State of Kuwait. Prime Minister fondly recalled his recent meeting with His Highness the Crown Prince on the margins of the UNGA session in September 2024.

Prime Minister conveyed that India attaches utmost importance to its bilateral relations with Kuwait. The leaders acknowledged that bilateral relations were progressing well and welcomed their elevation to a Strategic Partnership. They emphasized on close coordination between both sides in the UN and other multilateral fora. Prime Minister expressed confidence that India-GCC relations will be further strengthened under the Presidency of Kuwait.

⁠Prime Minister invited His Highness the Crown Prince of Kuwait to visit India at a mutually convenient date.

His Highness the Crown Prince of Kuwait hosted a banquet in honour of Prime Minister.