ನಮ್ಮ ಎಲ್ಲ ಆಟಗಾರರಿಗೆ ನಮ್ಮ ಶುಭಾಶಯಗಳನ್ನು ತಿಳಿಸಿ ಅವರನ್ನು ಪ್ರೋತ್ಸಾಹಿಸೋಣ: ಪ್ರಧಾನಿ ಮೋದಿ
ಕಾರ್ಗಿಲ್ ಯುದ್ಧವು ಭಾರತೀಯ ಪಡೆಗಳ ಶೌರ್ಯ ಮತ್ತು ಸಂಯಮದ ಸಂಕೇತವಾಗಿದೆ, ಇದು ಇಡೀ ಜಗತ್ತು ಸಾಕ್ಷಿಯಾಗಿದೆ: ಪ್ರಧಾನಿ ಮೋದಿ
ಅಮೃತ್ ಮಹೋತ್ಸವ್ 'ಸರ್ಕಾರದ ಅಥವಾ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದು ಭಾರತದ ಜನರ ಕಾರ್ಯಕ್ರಮ: ಪ್ರಧಾನಿ ಮೋದಿ
#MyHandloomMyPride: ಖಾದಿ ಮತ್ತು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಲು ನಾಗರಿಕರಲ್ಲಿ ಪ್ರಧಾನಿ ಮೋದಿ ಮನವಿ
ಮನ್ ಕಿ ಬಾತ್ 'ಸಕಾರಾತ್ಮಕತೆ ಮತ್ತು ಸೂಕ್ಷ್ಮತೆಯನ್ನು ಹೊಂದಿದೆ. ಇದು ಸಾಮೂಹಿಕ ಪಾತ್ರವನ್ನು ಹೊಂದಿದೆ: ಪ್ರಧಾನಿ ಮೋದಿ
ಮನ್ ಕಿ ಬಾತ್‌ಗೆ ಸುಮಾರು 75% ಸಲಹೆಗಳು 35 ವರ್ಷದೊಳಗಿನವರು ಎಂದು ತಿಳಿದಿರುವುದು ಸಂತೋಷವಾಗಿದೆ: ಪ್ರಧಾನಿ ಮೋದಿ
ಪ್ರತಿ ಹನಿ ನೀರನ್ನು ಉಳಿಸುವುದು, ಯಾವುದೇ ರೀತಿಯ ನೀರು ವ್ಯರ್ಥವಾಗುವುದನ್ನು ತಡೆಯುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು: ಪ್ರಧಾನಿ ಮೋದಿ

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ!

ಎರಡು ದಿನಗಳ ಹಿಂದೆ ಕೆಲವು ಅದ್ಭುತ ಚಿತ್ರಗಳು, ಕೆಲವು ಅಚ್ಚಳಿಯದ ನೆನಪುಗಳು, ಈಗಲೂ ನನ್ನ ಕಣ್ಣ ಮುಂದೆ ಅಚಲವಾಗಿವೆ. ಆದ್ದರಿಂದ, ಈ ಬಾರಿಯ ಮನದ ಮಾತನ್ನು ಆ ಕ್ಷಣಗಳೊಂದಿಗೆ ಆರಂಭಿಸೋಣ. Tokyo Olympics ನಲ್ಲಿ ಭಾರತೀಯ ಕ್ರೀಡಾಳಗಳು ತ್ರಿವರ್ಣ ಧ್ವಜವನ್ನು ಹಿಡಿದು ಪಥ ಸಂಚಲನದಲ್ಲಿ ಭಾಗವಹಿಸುವುದನ್ನು ನೋಡಿ ನಾನು ಮಾತ್ರವಲ್ಲ ಸಂಪೂರ್ಣ ದೇಶ ಪುಳಕಿತಗೊಂಡಿತು. ಸಂಪೂರ್ಣ ರಾಷ್ಟ್ರ ಒಗ್ಗೂಡಿ ಈ ಯೋಧರಿಗೆ

ವಿಜಯೀ ಭವ ವಿಜಯೀ ಭವ

ಎಂದು ಹೇಳಿದಂತಿತ್ತು.  ಈ ಕ್ರೀಡಾಳುಗಳು ಭಾರತದಿಂದ ಹೊರಡುತ್ತಿದ್ದಾಗ ನನಗೆ ಅವರೊಂದಿಗೆ ಮಾತನಾಡುವ ಮತ್ತು ಅವರ ಬಗ್ಗೆ ತಿಳಿದುಕೊಳ್ಳುವ ಮತ್ತು ದೇಶಕ್ಕೆ ಈ ಬಗ್ಗೆ ತಿಳಿಸುವ ಅವಕಾಶ ಸಿಕ್ಕಿತ್ತು. ಈ ಕ್ರೀಡಾಳುಗಳು ಜೀವನದ ಅನೇಕ ಸವಾಲುಗಳನ್ನು ಎದುರಿಸುತ್ತಾ ಇಲ್ಲಿಗೆ ತಲುಪಿದ್ದಾರೆ. ಇಂದು ಅವರ ಬಳಿ ನಿಮ್ಮ ಪ್ರೀತಿ ಮತ್ತು ಸಹಕಾರದ ಶಕ್ತಿಯಿದೆ – ಆದ್ದರಿಂದ ಬನ್ನಿ ಜೊತೆಗೂಡಿ ನಮ್ಮ ಸ್ಪರ್ಧಾಳುಗಳಿಗೆ ಶುಭ ಹಾರೈಸೋಣ ಮತ್ತು ಅವರಿಗೆ ಸ್ಪೂರ್ತಿ ತುಂಬೋಣ. ಸಾಮಾಜಿಕ ಜಾಲತಾಣದಲ್ಲಿ ಒಲಿಂಪಿಕ್ ಕ್ರೀಡಾಳುಗಳಿಗೆ ಪ್ರೋತ್ಸಾಹಿಸಲು ನಮ್ಮ Victory Punch Campaign ಆರಂಭವಾಗಿದೆ. ನೀವು ನಿಮ್ಮ ತಂಡದೊಂದಿಗೆ ನಿಮ್ಮ Victory Punch share ಮಾಡಿ ಮತ್ತು ಭಾರತವನ್ನು ಪ್ರೋತ್ಸಾಹಿಸಿ.

ಸ್ನೇಹಿತರೆ, ಯಾರು ದೇಶಕ್ಕಾಗಿ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುತ್ತಾರೋ ಅವರ ಬಗ್ಗೆ ಮನಸ್ಸು ಗೌರವ, ಹೆಮ್ಮೆಯಿಂದ ತುಂಬಿ ಹೋಗುವುದು ಸಹಜ. ದೇಶಭಕ್ತಿಯ  ಭಾವನೆ ನಮ್ಮನ್ನು ಒಗ್ಗೂಡಿಸುತ್ತದೆ. ನಾಳೆ ಅಂದರೆ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವೂ ಹೌದು. ಕಾರ್ಗಿಲ್ ಯುದ್ಧ ಇಡೀ ವಿಶ್ವವೇ ಕಂಡಂತಹ ಭಾರತೀಯ ಸೇನೆಯ ಶೌರ್ಯ ಮತ್ತು ಸಂಯಮದ ಪ್ರತೀಕವಾಗಿದೆ. ಈ ಬಾರಿ ಈ ಗೌರವಯುತ ದಿನವನ್ನು ಅಮೃತಮಹೋತ್ಸವದ ಸಂದರ್ಭದಲ್ಲಿಯೇ ಆಚರಿಸಲಾಗುವುದು. ಆದ್ದರಿಂದ ಇದು ಮತ್ತಷ್ಟು ವಿಶೇಷವೆನಿಸುತ್ತದೆ. ನೀವು ರೋಮಾಂಚಕಾರಿ ಕಾರ್ಗಿಲ್ ಯುದ್ಧದ ಕಥನವನ್ನು ಖಂಡಿತ ಓದಿರಿ ಎಂದು ನಾನು ಬಯಸುತ್ತೇನೆ. ಕಾರ್ಗಿಲ್ ವೀರರಿಗೆ ನಾವೆಲ್ಲ ನಮಿಸೋಣ.  

ಸ್ನೇಹಿತರೆ, ಈ ಬಾರಿ ಅಗಸ್ಟ್ 15 ರಂದು ದೇಶ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಅಡಿಯಿರಿಸುತ್ತಿದೆ. ದೇಶ ದಶಕಗಳವರೆಗೆ ನಿರೀಕ್ಷಿಸಿದಂತಹ ಸ್ವಾತಂತ್ರ್ಯದ 75 ನೇ ಸಂಭ್ರಮದ ವರ್ಷವನ್ನು ನಾವು ಆಚರಿಸುತ್ತಿರುವುದು ನಮ್ಮ ಸೌಭಾಗ್ಯವೇ ಆಗಿದೆ. ಸ್ವಾತಂತ್ರ್ಯದ 75 ನೇ ಸಂಭ್ರಮಾಚರಣೆಗೆ ಮಾರ್ಚ್ 12 ರಂದು ಸಾಬರಮತಿಯ ಬಾಪು ಅವರ ಆಶ್ರಮದಿಂದ ಚಾಲನೆ ನೀಡಲಾಗಿತ್ತು ಎಂಬುದು ನಿಮಗೆ ನೆನಪಿರಬಹುದು. ಇದೇ ದಿನದಂದು ಬಾಪು ಅವರ ದಾಂಡಿ ಯಾತ್ರೆಯ ಆರಂಭದ ನೆನಪನ್ನೂ ಪುನರುಜ್ಜೀವನಗೊಳಿಸಲಾಗಿತ್ತು. ಅಂದಿನಿಂದ ಜಮ್ಮು ಕಾಶ್ಮೀರದಿಂದ ಪುದುಚೇರಿವರೆಗೆ ಮತ್ತು ಗುಜರಾತ್ ನಿಂದ ಈಶಾನ್ಯ ಭಾರತದವರೆಗೆ ದೇಶಾದ್ಯಂತ ಅಮೃತ ಮಹೋತ್ಸವ ಸಂಬಂಧಿತ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವೊಂದು ಘಟನೆಗಳು ಮತ್ತು ಸ್ವಾತಂತ್ರ್ಯ ಯೋಧರ ಕೊಡುಗೆ ಅಪಾರವಾಗಿದ್ದರೂ ಅವರ ಬಗ್ಗೆ, ಆ ಸ್ಥಳದ ಬಗ್ಗೆ ಅಷ್ಟೊಂದು ಚರ್ಚೆಯಾಗಿಲ್ಲ. ಇಂದು ಜನರು ಆ ಕುರಿತು ತಿಳಿಯುತ್ತಿದ್ದಾರೆ.  ಈಗ ಮೊಯಿರಾಂಗ್ ಡೆ ಯನ್ನೇ ತೆಗೆದುಕೊಳ್ಳಿ. ಇದು ಮಣಿಪುರದ ಒಂದು ಪುಟ್ಟ ಗ್ರಾಮ. ಹಿಂದೊಮ್ಮೆ ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಅಂದರೆ ಐ ಎನ್ ಎ ಯ ಒಂದು ಪ್ರಮುಖ ತಾಣವಾಗಿತ್ತು. ಸ್ವಾತಂತ್ರ್ಯಕ್ಕೂ ಮೊದಲು ಇಲ್ಲಿ ಐ ಎನ್ ಎ ಯ ಕರ್ನಲ್ ಶೌಕತ್ ಮಲ್ಲಿಕ್ ಅವರು ಬಾವುಟ ಹಾರಿಸಿದ್ದರು. ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ 14 ಏಪ್ರಿಲ್ ಗೆ ಅದೇ ಮೊಯಿರಾಂಗ್ ನಲ್ಲಿ ಮತ್ತೊಮ್ಮೆ ತ್ರಿವರ್ಣ ಧ್ವಜ ಹಾರಿಸಲಾಯಿತು. ಹೀಗೆ ಅಮೃತ ಮಹೋತ್ಸವದಲ್ಲಿ ದೇಶ ಸ್ಮರಿಸುತ್ತಿರುವ ಅದೆಷ್ಟೋ ಸ್ವಾತಂತ್ರ್ಯ ಸೇನಾನಿಗಳು ಮತ್ತು ಮಹಾಪುರುಷರಿದ್ದಾರೆ. ಸರ್ಕಾರ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳ ಪರವಾಗಿ ಕೂಡಾ ನಿರಂತರವಾಗಿ ಇಂಥ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂಥ ಕಾರ್ಯಕ್ರಮವನ್ನು ಅಗಸ್ಟ್ 15 ರಂದು ಆಯೋಜಿಸಲಾಗುತ್ತಿದೆ. ರಾಷ್ಟ್ರಗೀತೆಗೆ ಸಂಬಂಧಿಸಿದ ಒಂದು ಪ್ರಯತ್ನ ಇದಾಗಿದೆ. ಅಂದು ಹೆಚ್ಚೆಚ್ಚು ಭಾರತೀಯರು ಒಗ್ಗೂಡಿ ರಾಷ್ಟ್ರ ಗೀತೆಯನ್ನು ಹಾಡಲಿ ಎಂಬುದು ಸಾಂಸ್ಕೃತಿಕ ಸಚಿವಾಲಯದ ಪ್ರಯತ್ನವಾಗಿದೆ, ಇದಕ್ಕೆಂದು ಒಂದು ಜಾಲತಾಣವನ್ನು ಆರಂಭಿಸಲಾಗಿದೆ –rashtragana.in. ಈ  ಜಾಲತಾಣದ ಮೂಲಕ ನೀವು ರಾಷ್ಟ್ರಗೀತೆ ಹಾಡಿರುವುದನ್ನು ಧ್ವನಿಮುದ್ರಿಸಬಹುದಾಗಿದೆ ಮತ್ತು ಈ ಅಭಿಯಾನದೊಂದಿಗೆ ಕೈಜೋಡಿಸಬಹುದಾಗಿದೆ. ಈ ವಿಶಿಷ್ಟ ಅಭಿಯಾನದಲ್ಲಿ ನೀವು ಖಂಡಿತ ಪಾಲ್ಗೊಳ್ಳುತ್ತೀರೆಂದು ನನಗೆ ವಿಶ್ವಾಸವಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಬಹಳಷ್ಟು ಕಾರ್ಯಕ್ರಮಗಳು ಮತ್ತು ಬಹಳಷ್ಟು ಪ್ರಯತ್ನಗಳು ನಿಮಗೆ ನೋಡಲು ಲಭಿಸುತ್ತವೆ. ‘ಅಮೃತ ಮಹೋತ್ಸವ’ ಯಾವುದೇ ಸರ್ಕಾರಿ ಕಾರ್ಯಕ್ರಮ ಅಲ್ಲ. ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದು ಕೋಟ್ಯಾಂತರ ಭಾರತೀಯರ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬ ಸ್ವತಂತ್ರ ಮತ್ತು ಕೃತಜ್ಞ ಭಾರತೀಯ ಸ್ವಾತಂತ್ರ್ಯ ಸೇನಾನಿಗಳಿಗೆ ಸಲ್ಲಿಸುವ ನಮನವಾಗಿದೆ ಮತ್ತು ಈ ಉತ್ಸವದ ಮೂಲಭಾವನೆಯ ವಿಸ್ತಾರ, ಬಹಳ ವಿಶಾಲವಾಗಿದೆ – ಅದೇನೆಂದರೆ ನಮ್ಮ ಸ್ವಾತಂತ್ರ್ಯ ಯೋಧರು ನಡೆದ ಪಥದಲ್ಲಿ ನಡೆಯುವುದು ಮತ್ತು ಅವರ ಕನಸಿನ ಭಾರತ ನಿರ್ಮಿಸುವುದು. ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ಹೇಗೆ ಒಗ್ಗೂಡಿದ್ದರೋ ಹಾಗೆಯೇ ದೇಶದ ಅಭಿವೃದ್ಧಿಗೆ ನಾವೆಲ್ಲ ಒಗ್ಗೂಡಬೇಕಿದೆ. ದೇಶಕ್ಕಾಗಿಯೇ ಜೀವಿಸಬೇಕು, ದೇಶಕ್ಕಾಗಿ ದುಡಿಯಬೇಕು ಮತ್ತು ಇದರಲ್ಲಿ ಸಣ್ಣ ಪುಟ್ಟ ಪ್ರಯತ್ನಗಳು ಬಹುದೊಡ್ಡ ಪ್ರತಿಫಲ ನೀಡುತ್ತವೆ. ನಿತ್ಯದ ಕೆಲಸ ಕಾರ್ಯಗಳೊಂದಿಗೆ ನಾವು ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬಹುದು. ಉದಾಹರಣಗೆ Vocal for Local. ನಮ್ಮ ದೇಶದ ಸ್ಥಳೀಯ ಉದ್ಯಮಿಗಳು, ಕಲಾವಿದರು, ಶಿಲ್ಪ ಕಲಾವಿದರು, ನೇಕಾರರನ್ನು ಪ್ರೋತ್ಸಾಹಿಸುವುದು ನಮ್ಮ ಸಹಜ ಸ್ವಭಾವವಾಗಬೇಕು. ಅಗಸ್ಟ್ 7 ರಂದು ಆಯೋಜಿಸಲಾಗಿರುವ National Handloom Day ಯಂದು ನಾವು ಇಂಥ ಪ್ರಯತ್ನ ಮಾಡಬಹುದಾಗಿದೆ. National Handloom Day ಗೆ  ಐತಿಹಾಸಿಕ ಹಿನ್ನೆಲೆಯಿದೆ. ಈ ದಿನದಂದು 1905 ರಲ್ಲಿ ಸ್ವದೇಶಿ ಚಳುವಳಿ ಆರಂಭವಾಗಿತ್ತು. 

ಸ್ನೇಹಿತರೆ, ನಮ್ಮ ದೇಶದ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೈಮಗ್ಗ, ಉಪಜೀವನದ ಬಹುದೊಡ್ಡ ಸಾಧನವಾಗಿದೆ. ಇದು ಲಕ್ಷಾಂತರ ಮಹಿಳೆಯರು, ನೇಕಾರರು,  ಲಕ್ಷಾಂತರ ಶಿಲ್ಪಿಗಳು ಒಗ್ಗೂಡಿದಂತಹ ಕ್ಷೇತ್ರವಾಗಿದೆ. ನಿಮ್ಮ ಸಣ್ಣ ಪುಟ್ಟ ಪ್ರಯತ್ನಗಳು, ನೇಕಾರರಲ್ಲಿ ಹೊಸ ಆಶಾಭಾವವನ್ನು ಹುಟ್ಟು ಹಾಕುತ್ತದೆ. ನೀವು ಸ್ವತಃ ಏನಾದರೂ ಖರೀದಿಸಿ ಮತ್ತು ಇತರರನ್ನೂ ಪ್ರೋತ್ಸಾಹಿಸಿ. ಸೋದರರೆ, ನಾವು ಸ್ವಾತಂತ್ರ್ಯದ 75 ನೇ ಸಂಭ್ರಮಾಚರಣೆಯಲ್ಲಿರುವಾಗ ಇಷ್ಟಾದರೂ ಮಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. 2014 ರ ನಂತರ ಮನದ ಮಾತಿನಲ್ಲಿ ನಾವು ಖಾದಿ ಬಗ್ಗೆ ಮಾತನಾಡುವುದನ್ನು ನೀವು ಗಮನಿಸಿರಬಹುದು. ಇಂದು ದೇಶದಲ್ಲಿ ಖಾದಿ ವ್ಯಾಪಾರ ಬಹಳಷ್ಟು ಹೆಚ್ಚಾಗಿರುವುದು ನಿಮ್ಮದೇ ಪ್ರಯತ್ನದಿಂದಾಗಿದೆ. ಖಾದಿಯ ಒಂದು ಮಳಿಗೆಯಿಂದ ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚು ವ್ಯಾಪಾರವಾಗಬಲ್ಲದು ಎಂದು ಯಾರಾದರೂ ಊಹಿಸಿದ್ದರೆ! ಆದರೆ ನೀವು ಇದನ್ನು ಮಾಡಿ ತೋರಿದಿರಿ. ನೀವು ಎಲ್ಲಿಯೇ ಆಗಲಿ ಖಾದಿ ಖರೀದಿಸುತ್ತೀರಿ ಎಂದರೆ, ಅದರ ಲಾಭ ನಮ್ಮ ನೇಕಾರ ಸೋದರ ಸೋದರಿಯರಿಗೆ ಲಭಿಸುತ್ತದೆ. ಹಾಗಾಗಿ ಖಾದಿ ಖರೀದಿ ಒಂದು ರೀತಿಯಲ್ಲಿ ಜನಸೇವೆಯೂ ಆಗಿದೆ ಮತ್ತು ದೇಶ ಸೇವೆಯೂ ಆಗಿದೆ. ಸೋದರ ಸೋದರಿಯರೇ ಗ್ರಾಮೀಣ ಭಾಗದಲ್ಲಿ ಸಿದ್ಧಗೊಳ್ಳುವ ಕೈಮಗ್ಗದ ಉತ್ಪನ್ನಗಳನ್ನು ಖಂಡಿತ ಖರೀದಿಸಿ ಮತ್ತು ಅವನ್ನು #MyHandloomMyPride ನಲ್ಲಿ ಶೇರ್ ಮಾಡಿ ಎಂದು ನಿಮ್ಮನ್ನು ವಿನಂತಿಸುತ್ತೇನೆ.

ಸ್ನೇಹಿತರೇ, ಸ್ವಾತಂತ್ರ್ಯ ಚಳುವಳಿ ಮತ್ತು ಖಾದಿಯ ವಿಷಯ ಬಂದಾಗ, ಪೂಜ್ಯ ಬಾಪೂ ಅವರ ನೆನಪು ಬರುವುದು ಸಹಜ –ಯಾವರೀತಿ, ಬಾಪೂ ಅವರ ನೇತೃತ್ವದಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳುವಳಿ ನಡೆಯಿತೋ, ಅಂತೆಯೇ ಇಂದು ಪ್ರತಿಯೊಬ್ಬ ಭಾರತೀಯನೂ ‘ಭಾರತವನ್ನು ಒಂದುಗೂಡಿಸಿ’ ಚಳುವಳಿಯ ನೇತೃತ್ವ ವಹಿಸಬೇಕಾಗಿದೆ. ವೈವಿಧ್ಯತೆಗಳಿಂದ ನಮ್ಮ ಭಾರತವನ್ನು ಒಂದುಗೂಡಿಸುವಂತಹ ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾದರೆ ಬನ್ನಿ, ದೇಶವೇ ನಮ್ಮ ಅತ್ಯಂತ ದೊಡ್ಡ ನಂಬಿಕೆ ಅತ್ಯಂತ ದೊಡ್ಡ ಆದ್ಯತೆ ಎಂಬ ಈ ಅಮೃತ ಸಂಕಲ್ಪವನ್ನು‘ಅಮೃತ ಮಹೋತ್ಸವದಲ್ಲಿ’ ಮಾಡೋಣ.“Nation First, Always First”ಮಂತ್ರದೊಂದಿಗೆ ನಾವು ಮುಂದೆ ಸಾಗಬೇಕಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮನದ ಮಾತು ಆಲಿಸುತ್ತಿರುವ ನನ್ನ ಯುವ ಸ್ನೇಹಿತರಿಗೆ ವಿಶೇಷ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ. ಈಗ ಕೆಲವು ದಿನಗಳ ಹಿಂದೆಯಷ್ಟೇ, ಮೈ ಗೌ ಪರವಾಗಿ ಮನದ ಮಾತು ಶ್ರೋತೃಗಳ ಬಗ್ಗೆ ಒಂದು ಅಧ್ಯಯನ ನಡೆಸಲಾಯಿತು. ಮನದ ಮಾತಿಗಾಗಿ ಸಂದೇಶ ಮತ್ತು ಸಲಹೆಗಳನ್ನು ಕಳುಹಿಸುವವರ ಪೈಕಿ ಪ್ರಮುಖವಾಗಿ ಇರುವವರು ಯಾರು ಎಂದು ನೋಡಲಾಯಿತು. ಸಂದೇಶ ಮತ್ತು ಸಲಹೆಗಳನ್ನು ಕಳುಹಿಸುವವರಲ್ಲಿ ಸುಮಾರು ಶೇಕಡಾ 75 ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅಧ್ಯಯನದ ನಂತರ ತಿಳಿದುಬಂದಿತು, ಅಂದರೆ, ಭಾರತದ ಯುವಶಕ್ತಿ ಮನದ ಮಾತಿಗೆ ದಾರಿ ತೋರಿಸುತ್ತಿದೆ ಎಂದಾಯಿತು. ನಾನು ಇದನ್ನು ಬಹಳ ಉತ್ತಮ ಸಂಕೇತದ ರೂಪದಲ್ಲಿ ನೋಡುತ್ತೇನೆ. ಸಕಾರಾತ್ಮಕತೆ–ಸಂವೇದನಾಶೀಲತೆ ಇರುವಂತಹ ಮಾಧ್ಯಮ ಮನ್ ಕಿ ಬಾತ್ ಆಗಿದೆ.  ಮನದ ಮಾತಿನಲ್ಲಿ ನಾವು ಸಕಾರಾತ್ಮಕ ಮಾತುಗಳನ್ನು ಆಡುತ್ತೇವೆ. ಇದರ Character collective ಆಗಿದೆ. ಸಕಾರಾತ್ಮಕ ಚಿಂತನೆಗಳು ಮತ್ತು ಸಲಹೆಗಳಿಗಾಗಿ ಭಾರತದ ಯುವಜನತೆಯ ಈ ಕ್ರಿಯಾಶೀಲತೆ ನನಗೆ ಸಂತೋಷವನ್ನುಂಟುಮಾಡುತ್ತದೆ. “ಮನದ ಮಾತು” ಮಾಧ್ಯಮದ ಮೂಲಕ ನನಗೆ ಯುವಜನತೆಯ ಮನಸ್ಸನ್ನು ಅರಿಯುವ ಅವಕಾಶ ದೊರೆತಿರುವುದು ನನಗೆ ಸಂತೋಷದ ವಿಚಾರವಾಗಿದೆ.

ಸ್ನೇಹಿತರೇ, ನಿಮ್ಮಿಂದ ದೊರೆಯುವ ಸಲಹೆ ಸೂಚನೆಗಳೇ ಮನದ ಮಾತಿನ ನಿಜವಾದ ಶಕ್ತಿಯಾಗಿದೆ. ನಿಮ್ಮ ಸಲಹೆಗಳೇ ಮನದ ಮಾತಿನ ಮೂಲಕ ಭಾರತದ ವೈವಿಧ್ಯತೆಗಳನ್ನು ತೋರಿಸುತ್ತದೆ, ಭಾರತೀಯರ ಸೇವೆ ಮತ್ತು ತ್ಯಾಗದ ಸುಗುಂಧವನ್ನು ನಾಲ್ಕೂ ದಿಕ್ಕುಗಳಲ್ಲಿ ಹರಡುತ್ತದೆ, ಶ್ರಮವಹಿಸಿ ದುಡಿಯುವ ನಮ್ಮ ಯುವಜನತೆಯ ಆವಿಷ್ಕಾರದಿಂದ ಎಲ್ಲರಿಗೂ ಪ್ರೇರಣೆ ದೊರೆಯುತ್ತದೆ.  ಮನದ ಮಾತಿನಲ್ಲಿ ನೀವು ಅನೇಕ ರೀತಿಯ ವಿಚಾರಗಳನ್ನು ಕಳುಹಿಸುತ್ತೀರಿ. ನಾವು ಎಲ್ಲದರ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಅವುಗಳಲ್ಲಿ ಬಹಳಷ್ಟು ಐಡಿಯಾಗಳನ್ನು ನಾನು ಸಂಬಂಧಿತ ಇಲಾಖೆಗಳಿಗೆ ಖಂಡಿತವಾಗಿಯೂ ಕಳುಹಿಸಿಕೊಡುತ್ತೇನೆ, ಏಕೆಂದರೆ ಅವುಗಳ ಕುರಿತು ಭವಿಷ್ಯದಲ್ಲಿ ಕೆಲಸ ಮಾಡಬಹುದಾಗಿದೆ.

ಸ್ನೇಹಿತರೆ, ನಾನು ನಿಮಗೆ “ಸಾಯಿ ಪ್ರಣೀತ್” ಅವರ ಪ್ರಯತ್ನಗಳ ಬಗ್ಗೆ ಹೇಳಲು ಬಯಸುತ್ತೇನೆ. ಸಾಯಿ ಪ್ರಣೀತ್ ಅವರು ಓರ್ವ ಸಾಫ್ಟ್ ವೇರ್ ಇಂಜನಿಯರ್ ಆಗಿದ್ದಾರೆ ಇವರು ಆಂಧ್ರಪ್ರದೇಶದ ನಿವಾಸಿಯಾಗಿದ್ದಾರೆ. ಕಳೆದ ವರ್ಷ ಅಲ್ಲಿ ಪ್ರತಿಕೂಲ ಹವಾಮಾನದ ಹೊಡೆತದಿಂದಾಗಿ ರೈತರಿಗೆ ಬಹಳಷ್ಟು ನಷ್ಟವಾಗಿದ್ದನ್ನು ಇವರು ನೋಡಿದರು. ಹವಾಮಾನ ವಿಜ್ಞಾನದಲ್ಲಿ ಇವರಿಗೆ ಬಹಳ ವರ್ಷಗಳಿಂದ ಆಸಕ್ತಿ ಇತ್ತು. ಆದ್ದರಿಂದ ಇವರು ತಮ್ಮ ಆಸಕ್ತಿ ಮತ್ತು ಪ್ರತಿಭೆಯನ್ನು ರೈತರ ಒಳಿತಿಗಾಗಿ ಉಪಯೋಗಿಸಬೇಕೆಂದು ನಿರ್ಧಾರ ಮಾಡಿದರು. ಅವರು ಈಗ ಬೇರೇ ಬೇರೆ ದತ್ತಾಂಶ ಮೂಲಗಳಿಂದ ಹವಾಮಾನ ದತ್ತಾಂಶ ಖರೀದಿಸುತ್ತಾರೆ, ಅದನ್ನು ವಿಶ್ಲೇಷಿಸುತ್ತಾರೆ ಮತ್ತು ಸ್ಥಳೀಯ ಭಾಷೆಯಲ್ಲಿ ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ ಅಗತ್ಯ ಮಾಹಿತಿಯನ್ನು ತಲುಪಿಸುತ್ತಾರೆ. ಹವಾಮಾನ ಅಪ್ಡೇಟ್ ಗಳು ಮಾತ್ರವಲ್ಲದೇ, ಪ್ರಣೀತ್ ಅವರು ವಿವಿಧ ವಾತಾವರಣ ಪರಿಸ್ಥಿತಿಗಳಲ್ಲಿ ಜನರು ಏನು ಮಾಡಬೇಕೆಂಬ ಕುರಿತು ಮಾರ್ಗದರ್ಶನ ಕೂಡಾ ನೀಡುತ್ತಾರೆ. ವಿಶೇಷವಾಗಿ ಪ್ರವಾಹದಿಂದ ರಕ್ಷಿಸಿಕೊಳ್ಳಲು ಅಥವಾ ಚಂಡಮಾರುತ ಅಪ್ಪಳಿಸಿದಾಗ ಅಥವಾ ಸಿಡಿಲು ಬಡಿದಾಗ ಯಾವರೀತಿ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂಬ ಕುರಿತು ಇವರು ಜನರಿಗೆ ತಿಳಿಸುತ್ತಿರುತ್ತಾರೆ.

ಸ್ನೇಹಿತರೇ, ಒಂದೆಡೆ ಈ ಯುವ ಸಾಫ್ಟ್ ವೇರ್ ಇಂಜಿನಿಯರ್ ನ  ಪ್ರಯತ್ನ ಮನಮುಟ್ಟುವಂತಿದ್ದರೆ ಮತ್ತೊಂದೆಡೆ ನಮ್ಮ ಇನ್ನೊಬ್ಬ ಸ್ನೇಹಿತ ಮಾಡಿರುವ ತಂತ್ರಜ್ಞಾನದ ಬಳಕೆ ಕೂಡಾ ನಿಮ್ಮನ್ನು ಆಶ್ಟರ್ಯಚಕಿತರನ್ನಾಗಿಸುತ್ತದೆ. ಒಡಿಶ್ಶಾದ ಸಂಬಲ್ಪುರ್ ಜಿಲ್ಲೆಯ ಒಂದು ಗ್ರಾಮದ ನಿವಾಸಿ ಶ್ರೀಮಾನ್ ಇಸಾಕ್ ಮುಂಡಾ ಅವರೇ ಈ ಸ್ನೇಹಿತ. ಇಸಾಕ್ ಅವರು ಮೊದಲು ದಿನಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಆದರೆ ಅವರು ಈಗ ಒಂದು ಇಂಟರ್ನೆಟ್ ಸೆನ್ಸೇಷನ್ ಆಗಿಬಿಟ್ಟಿದ್ದಾರೆ. ತಮ್ಮ ಯೂಟ್ಯೂಬ್ ವಾಹಿನಿಯ ಮೂಲಕ ಅವರು ಅಪಾರ ಹಣ ಗಳಿಸುತ್ತಿದ್ದಾರೆ. ಅವರು ತಮ್ಮ ವಿಡಿಯೋಗಳಲ್ಲಿ ಸ್ಥಳೀಯ ತಿನಿಸು, ಸಾಂಪ್ರದಾಯಿಕ ಅಡುಗೆ ಮಾಡುವ ವಿಧಾನ, ತಮ್ಮ ಗ್ರಾಮ, ತಮ್ಮ ಜೀವನ ಶೈಲಿ, ಕುಟುಂಬ ಮತ್ತು ತಿಂಡಿ-ತಿನಿಸುಗಳ ಹವ್ಯಾಸವನ್ನು ಪ್ರಮುಖವಾಗಿ ತಿಳಿಸುತ್ತಾರೆ. ಒಡಿಶ್ಸಾದ ಪ್ರಸಿದ್ಧ ತಿನಿಸು ಪಖಾಲ್ ಸಂಬಂಧಿತ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದಾಗ, ಓರ್ವ ಯೂಟ್ಯೂಬರ್ ರೂಪದಲ್ಲಿ ಅವರ ಪಯಣ 2020 ರ ಮಾರ್ಚ್ ತಿಂಗಳಲ್ಲಿ ಆರಂಭವಾಯಿತು, ಆಗಿನಿಂದ ಅವರು ನೂರಾರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ಈ ಪ್ರಯತ್ನ ಅನೇಕ ಕಾರಣಗಳಿಂದಾಗಿ ವಿಭಿನ್ನವೆನಿಸಿದೆ. ಇದಕ್ಕೆ ವಿಶೇಷ ಕಾರಣವೆಂದರೆ ಇದರಿಂದಾಗಿ ನಗರಗಳಲ್ಲಿ ವಾಸಿಸುವ ಜನರಿಗೆ ತಮಗೆ ಸ್ವಲ್ಪ ಮಾತ್ರವೂ ತಿಳಿದಿರದ ಆ ಜೀವನ ಶೈಲಿ ನೋಡುವ ಅವಕಾಶ ದೊರೆಯುತ್ತದೆ. ಇಸಾಕ್ ಮುಂಡಾ ಅವರು ಸಂಸ್ಕೃತಿ ಮತ್ತು ಪಾಕಪದ್ಧತಿ ಎರಡನ್ನೂ ಸಮಾನವಾಗಿ ಬೆರೆಸಿ ಸೆಲೆಬ್ರೇಟ್ ಮಾಡುತ್ತಿದ್ದಾರೆ ಮತ್ತು ನಮ್ಮೆಲ್ಲರಿಗೂ ಸ್ಫೂರ್ತಿಯನ್ನೂ ನೀಡುತ್ತಿದ್ದಾರೆ.  

ಸ್ನೇಹಿತರೇ, ನಾವು ತಂತ್ರಜ್ಞಾನ ಕುರಿತು ಚರ್ಚಿಸುತ್ತಿರುವಾಗ, ಮತ್ತೊಂದು ಆಸಕ್ತಿದಾಯಕ ವಿಷಯ ಹೇಳಲು ನಾನು ಬಯಸುತ್ತೇನೆ. ಇತ್ತೀಚೆಗೆ ಐಐಟಿ ಮದ್ರಾಸಿನ ವಿದ್ಯಾರ್ಥಿ ಆರಂಭಿಸಿದ ಒಂದು ಸ್ಟಾರ್ಟ್ ಅಪ್ ಕಂಪೆನಿಯು ಒಂದು 3D printed house  ಮಾಡಿರುವ ವಿಷಯ ಕುರಿತು ನೀವು ಓದಿರಬಹುದು, ನೋಡಿರಬಹುದು. 3D printing ಮಾಡಿ ಮನೆಯ ನಿರ್ಮಾಣ, ಇದು ಸಾಧ್ಯವಾಗಿದ್ದಾದರೂ ಹೇಗೆ? ವಾಸ್ತವದಲ್ಲಿ ಈ start-up ಎಲ್ಲಕ್ಕಿಂತ ಮೊದಲು 3D printer ನಲ್ಲಿ ಒಂದು 3 ಆಯಾಮಗುಳುಳ್ಳ ವಿನ್ಯಾಸವನ್ನು ಫೀಡ್ ಮಾಡಿತು ಮತ್ತು ನಂತರ ವಿಶೇಷ ರೀತಿಯಲ್ಲಿ concrete ಮೂಲಕ ಒಂದರ ಮೇಲೆ ಒಂದರಂತೆ ಒಂದು 3D structure fabricate ಮಾಡಲಾಯಿತು. ದೇಶಾದ್ಯಂತ ಈ ರೀತಿಯ ಅನೇಕ ಪ್ರಯೋಗಗಳು ನಡೆಯುತ್ತಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಸಣ್ಣ ಸಣ್ಣ ಕಟ್ಟಡ ನಿರ್ಮಾಣಗಳಿಗೂ ಕೂಡಾ ವರ್ಷಗಳ ಸಮಯ ಹಿಡಿಯುತ್ತಿದ್ದಂತಹ ಕಾಲವೊಂದಿತ್ತು. ಆದರೆ ಈಗ ತಂತ್ರಜ್ಞಾನದ ಕಾರಣದಿಂದಾಗಿ, ಭಾರತದ ಸ್ಥಿತಿ ಬದಲಾಗುತ್ತಿದೆ. ಕೆಲವು ದಿನಗಳ ಹಿಂದೆ ನಾವು ಇಂತಹ ವಿಶ್ವದ ಆವಿಷ್ಕಾರಕ ಕಂಪೆನಿಗಳನ್ನು ಆಹ್ವಾನಿಸಲು ಒಂದು Global Housing Technology Challenge launch ಮಾಡಿದೆವು. ಇದು ದೇಶದಲ್ಲಿ ತನ್ನದೇ ಆದ ಬೇರೆ ಬೇರೆ ರೀತಿಯ ವಿಶೇಷ ಪ್ರಯಾಸವಾಗಿತ್ತು, ಆದ್ದರಿಂದ ನಾವು ಇದಕ್ಕೆ Light House Projects ಎಂಬ ಹೆಸರನ್ನು ಇಟ್ಟೆವು. ಪ್ರಸಕ್ತವಾಗಿ ದೇಶದಲ್ಲಿ 6 ಬೇರೆ ಬೇರೆ ಸ್ಥಳಗಳಲ್ಲಿ Light House Projects ಗಳಲ್ಲಿ ಶೀಘ್ರಗತಿಯಲ್ಲಿ ಕೆಲಸ ನಡೆಯುತ್ತಿದೆ. ಈ Light House Projectsನಲ್ಲಿ  ನವೀನ ತಂತ್ರಜ್ಞಾನ ಮತ್ತು ಆವಿಷ್ಕಾರಾತ್ಮಕ ವಿಧಾನಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ನಿರ್ಮಾಣದ ಸಮಯಾವಧಿ ಕಡಿಮೆಯಾಗುತ್ತದೆ. ಇದರೊಂದಿಗೆ ನಿರ್ಮಾಣವಾಗುವ ಮನೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ, ಖರ್ಚು ಕಡಿಮೆ ಇರುತ್ತದೆ ಮತ್ತು ಆರಾಮದಾಯಕವಾಗಿರುತ್ತವೆ. ನಾನು ಇತ್ತೀಚೆಗೆ ಡ್ರೋನ್ ಗಳ ಮೂಲಕ ಈ ಯೋಜನೆಗಳನ್ನು ಪರಿಶೀಲಿಸಿದೆ ಮತ್ತು ಕಾರ್ಯದ ಪ್ರಗತಿಯನ್ನು ನೇರವಾಗಿ ವೀಕ್ಷಿಸಿದೆ.

ಇಂದೋರ್ ನ project ನಲ್ಲಿ ಇಟ್ಟಿಗೆ ಮತ್ತು ಮಾರ್ಟರ್ ಗೋಡೆಗಳ ಜಾಗದಲ್ಲಿ Pre-Fabricated Sandwich Panel System ನ ಉಪಯೋಗ ಮಾಡಲಾಗುತ್ತಿದೆ. ರಾಜ್ ಕೋಟ್ ನಲ್ಲಿ Light House, French Technology ನಿಂದ ತಯಾರಾಗುತ್ತಿದೆ ಇದರಲ್ಲಿ ಸುರಂಗದ ಮೂಲಕ Monolithic Concrete construction technology ಉಪಯೋಗಿಸಲಾಗುತ್ತಿದೆ. ಈ ತಂತ್ರಜ್ಞಾನದಿಂದ ತಯಾರಿಸಲಾಗುವ ಮನೆಯು ಆಪತ್ತುಗಳನ್ನು ಎದುರಿಸಲು ಹೆಚ್ಚು ಸಮರ್ಥವಾಗಿರುತ್ತವೆ. ಚೆನ್ನೈನಲ್ಲಿ ಅಮೆರಿಕಾ ಮತ್ತು ಫಿನ್ಲ್ಯಾಂಡ್ ಗಳ ತಂತ್ರಜ್ಞಾನಗಳು, Pre-Cast Concrete System ಗಳ ಉಪಯೋಗ ಮಾಡಲಾಗುತ್ತಿದೆ. ಇದರಿಂದಾಗಿ ಮನೆಗಳು ಶೀಘ್ರವಾಗಿ ನಿರ್ಮಾಣವಾಗುತ್ತವೆ ಮತ್ತು ತಗಲುವ ವೆಚ್ಚ ಕೂಡಾ ಕಡಿಮೆ ಇರುತ್ತದೆ. ರಾಂಚಿಯಲ್ಲಿ ಜರ್ಮನಿಯ 3DConstruction System ಉಪಯೋಗಿಸಿ ಮನೆ ನಿರ್ಮಾಣವಾಗುತ್ತದೆ. ಇದರಲ್ಲಿ ಪ್ರತಿಯೊಂದು ಕೋಣೆಯನ್ನು ಭಿನ್ನವಾಗಿ ತಯಾರಿಸಲಾಗುತ್ತದೆ ಹೇಗೆಂದರೆ ಸಂಪೂರ್ಣ ನಿರ್ಮಾಣವನ್ನು ಬ್ಲಾಕ್ ಟಾಯ್ಸ್ ಜೋಡಿಸಿದ ರೀತಿಯಲ್ಲಿ ನಿರ್ಮಿಸಲಾಗುತ್ತದೆ. ಅಗರ್ತಲಾದಲ್ಲಿನ್ಯೂ ಜಿಲ್ಯಾಂಡ್ ನ ತಂತ್ರಜ್ಞಾನ ಉಪಯೋಗಿಸಿ, ಸ್ಟೀಲ್ ಫ್ರೇಮ್ ನಿಂದ ಮನೆಯನ್ನು ನಿರ್ಮಿಸಲಾಗುತ್ತದೆ ಇದು ಭಾರೀ ಭೂಕಂಪವನ್ನು ಕೂಡಾ ತಾಳಿಕೊಳ್ಳುತ್ತದೆ. ಹಾಗೆಯೇ ಲಕ್ನೋದಲ್ಲಿ ಕೆನಡಾದ ತಂತ್ರಜ್ಞಾನ ಉಪಯೋಗಿಸಲಾಗುತ್ತಿದೆ. ಇದರಲ್ಲಿ ಪ್ಲಾಸ್ಟರ್ ಮತ್ತು ಪೈಂಟ್ ನ ಅಗತ್ಯವಿರುವುದಿಲ್ಲ ಮತ್ತು ಮನೆಯನ್ನು ವೇಗವಾಗಿ ನಿರ್ಮಿಸಲು ಮೊದಲೆ ತಯಾರಿಸಲಾದ ಗೋಡೆಗಳನ್ನು ಉಪಯೋಗಿಸಲಾಗುತ್ತದೆ.

ಸ್ನೇಹಿತರೇ, ಇಂದು ಈ project Incubation Centres ನಂತೆ ಕೆಲಸ ಮಾಡಬೇಕೆಂದು ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಇದರಿಂದ ನಮ್ಮ Planners, Architects, Engineers ಮತ್ತು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಕುರಿತು ತಿಳಿದುಕೊಳ್ಳಬಹುದು ಮತ್ತು ಅವುಗಳನ್ನು ಪ್ರಯೋಗ ಮಾಡಿ ನೋಡಲೂ ಬಹುದು. ರಾಷ್ಟ್ರದ ಹಿತದೃಷ್ಟಿಯಿಂದ ನಮ್ಮ ಯುವಕರನ್ನು ತಂತ್ರಜ್ಞಾನದ ಹೊಸ ಕ್ಷೇತ್ರಗಳಲ್ಲಿ ಪ್ರೋತ್ಸಾಹಿಸಲು ನಾನು ನಾನು ಈ ಮಾತನ್ನು ವಿಶೇಷವಾಗಿ ನಮ್ಮ ಯುವ ಜನತೆಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನನ್ನ ಪ್ರಿಯ ದೇಶಬಾಂಧವರೆ, ನೀವು “To Learn is to Grow” ಎಂಬ ಇಂಗ್ಲೀಷ್ ನಾನ್ನುಡಿಯೊಂದನ್ನು ಕೇಳಿರಬಹುದು. ಅಂದರೆ ಕಲಿಕೆಯೇ ಅಭಿವೃದ್ಧಿಗೆ ಸೋಪಾನ. ನಾವು ಏನನ್ನಾದರೂ ಹೊಸತನ್ನು ಕಲಿತಾಗ ನಮಗೆ ಅಭಿವೃದ್ಧಿಯ ಹೊಸ ಮಾರ್ಗಗಳು ತೆರೆದುಕೊಳ್ಳಲಾರಂಭಿಸುತ್ತವೆ. ನಾವು ಗುಂಪಿನಿಂದ ಭಿನ್ನವಾಗಿ ಏನನ್ನಾದರೂ ಹೊಸತನ್ನು ಮಾಡುವ ಪ್ರಯತ್ನ ಮಾಡಿದಾಗಲೆಲ್ಲ ಮಾನವ ಕುಲಕ್ಕೆ ಹೊಸ ಮಾರ್ಗಗಳು ತೆರೆದುಕೊಂಡಿವೆ. ಒಂದು ನವಯುಗದ ಆರಂಭವಾಗಿದೆ. ಎಲ್ಲಿಯೇ ಹೊಸತು ಕಂಡುಬಂದಾಗ ಅದರ ಪರಿಣಾಮ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ ಎಂಬುದನ್ನು ನೀವು ನೋಡಿರಬಹದು.

ಸೇಬು -Apple ನೊಂದಿಗೆ ಸಂಬಂಧ ಕಲ್ಪಿಸುವ ಯಾವ ರಾಜ್ಯವಿದೆ ಎಂದು ನಾನು ನಿಮ್ಮನ್ನ ಕೇಳಿದರೆ, ಖಂಡಿತ ನಿಮ್ಮ ಮನದಲ್ಲಿ ಎಲ್ಲಕ್ಕಿಂತ ಮೊದಲು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದ ಹೆಸರು ಹೊಳೆಯುತ್ತದೆ. ಆದರೆ ಈ ಪಟ್ಟಿಯಲ್ಲಿ ಮಣಿಪುರವನ್ನೂ ಸೇರಿಸಿ ಎಂದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ಹೊಸತೇನಾದರೂ ಮಾಡಬೇಕೆಂಬ ಹುರುಪಿನಿಂದ ಕೆಲ ಯುವಕರು ಮಣಿಪುರದಲ್ಲಿ ಇಂಥ ಸಾಹಸವನ್ನು ಮಾಡಿ ತೋರಿದ್ದಾರೆ. ಈ ಮಧ್ಯೆ ಮಣಿಪುರದ ಉಕ್ರೂಲ್ ಜಿಲ್ಲೆಯಲ್ಲಿ “ಸೇಬು ಕೃಷಿ” ವೇಗ ಪಡೆದುಕೊಂಡಿದೆ. ಇಲ್ಲಿಯ ರೈತರು ತಮ್ಮ ತೋಟಗಳಲ್ಲಿ ಸೇಬನ್ನು ಬೆಳೆಯುತ್ತಿದ್ದಾರೆ. ಇವರು ಹಿಮಾಚಲ ಪ್ರದೇಶಕ್ಕೆ ತೆರಳಿ ಸೇಬು ಕೃಷಿಯಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಟಿ ಎಸ್ ರಿಂಗ್ ಫಾಮೀ ಯಂಗ್ ಅವರು ಕೂಡಾ ಒಬ್ಬರು. ಇವರು ವೃತ್ತಿಯಿಂದ ಒಬ್ಬ Aeronautical Engineer. ತಮ್ಮ ಪತ್ನಿ ಟಿ ಎಸ್ ಎಂಜೆಲ್ ಅವರೊಂದಿಗೆ ಸೇರಿ ಸೇಬು ಕೃಷಿ ಕೈಗೊಂಡಿದ್ದಾರೆ. ಇದೇ ರೀತಿ ಅವುಂಗ್ಶಿ ಶಿಮರೆ ಆಗಸ್ಟೀನಾ (Avungshee Shimre Augasteena) ಅವರು ಕೂಡಾ ತಮ್ಮ ತೋಟದಲ್ಲಿ ಸೇಬನ್ನು ಬೆಳೆದಿದ್ದಾರೆ. ಅವುಂಗ್ಶಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಅದನ್ನು ತೊರೆದು ತಮ್ಮ ಗ್ರಾಮಕ್ಕೆ ಹಿಂದಿರುಗಿ ಸೇಬು ಕೃಷಿ ಆರಂಭಿಸಿದರು. ಮಣಿಪುರದಲ್ಲಿ ಇಂದು ಇಂಥ ಹಲವಾರು ಸೇಬು ಕೃಷಿಕರು ಹೊಸತನ್ನು ಮಾಡಿ ತೋರಿಸಿದ್ದಾರೆ. 

ಸ್ನೇಹಿತರೆ, ನಮ್ಮ ಬುಡಕಟ್ಟು ಸಮುದಾಯದಲ್ಲಿ, ಬೋರೆಹಣ್ಣು ಬಹಳ ಜನಪ್ರಿಯ. ಬುಡಕಟ್ಟು ಸಮುದಾಯದವರು ಸದಾ ಬೋರೆಹಣ್ಣು ಕೃಷಿ ಕೈಗೊಳ್ಳುತ್ತಲೇ ಇದ್ದಾರೆ. ಕೊವಿಡ್ – 19 ಸಾಂಕ್ರಮಿಕ ರೋಗದ ನಂತರ ಈ ಕೃಷಿ ವಿಶೇಷವಾಗಿ ಹೆಚ್ಚುತ್ತಲೇ ಸಾಗಿದೆ. ತ್ರಿಪುರಾದ “ಉನಾಕೋಟಿ” ಯ ಇಂಥ 32 ರ ವಯೋಮಾನದ ನಮ್ಮ ಯುವ ಸ್ನೇಹಿತ ವಿಕ್ರಂಜೀತ್ ಚಕಮಾ ಅವರು ಬೋರೆಹಣ್ಣಿನ ಕೃಷಿ ಆರಂಭಿಸಿ ಬಹಳ ಆದಾಯವನ್ನೂ ಗಳಿಸಿದ್ದಾರೆ ಮತ್ತು ಇತರರನ್ನೂ ಬೋರೆಹಣ್ಣಿನ ಕೃಷಿ ಕೈಗೊಳ್ಳುವಂತೆ ಪ್ರೇರೆಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಇಂಥವರ ಸಹಾಯಕ್ಕಾಗಿ ಮುಂದೆ ಬಂದಿದೆ. ಬೋರೆಹಣ್ಣಿನ ಕೃಷಿಕರ ಬೇಡಿಕೆಯನ್ನು ಪೂರೈಸಲೆಂದೇ ಸರ್ಕಾರ ಇದಕ್ಕೆಂದೇ ವಿಶೇಷ ನರ್ಸರಿಗಳನ್ನು ಸಿದ್ಧಪಡಿಸಿದೆ. ಈ ಕೃಷಿಯಲ್ಲಿ ಆವಿಷ್ಕಾರಗಳು ಆಗುತ್ತಿರುವಂತೆ ಉಪ ಉತ್ಪನ್ನಗಳ ತಯಾರಿಕೆಯಲ್ಲೂ ಕ್ರೀಯಾಶೀಲತೆ ಕಂಡುಬರುತ್ತಿದೆ. 

ಸ್ನೇಹಿತರೆ, ನನಗೆ ಉತ್ತರ ಪ್ರದೇಶದ ಲಖೀಂಪುರ್ ಖೀರಿಯಲ್ಲಿ ಕೈಗೊಳ್ಳಲಾದ ಒಂದು ಪ್ರಯತ್ನದ ಬಗ್ಗೆ ತಿಳಿದುಬಂದಿದೆ. ಕೊವಿಡ್ ಸಮಯದಲ್ಲಿ ಲಖೀಂಪುರ್ ಖೀರಿಯಲ್ಲಿ ಒಂದು ವಿನೂತನ ಪ್ರಯತ್ನ ನಡೆದಿದೆ. ಅಲ್ಲಿ ಮಹಿಳೆಯರಿಗೆ ಬಾಳೆಯ ತ್ಯಾಜ್ಯ ದಿಂಡುಗಳಿಂದ ನಾರು ಸಿದ್ಧಪಡಿಸುವ ತರಬೇತಿ ನೀಡಲಾಗುತ್ತಿದೆ. ಕಸದಿಂದ ರಸ ತಯಾರಿಸುವ ಮಾರ್ಗ ಇದಾಗಿದೆ. ಬಾಳೆ ದಿಂಡುಗಳನ್ನು ಕತ್ತರಿಸಿ ಯಂತ್ರದ ಸಹಾಯದಿಂದ ಬಾಳೆ ನಾರು ಸಿದ್ಧಪಡಿಸಲಾಗುತ್ತದೆ. ಇದು ಸೆಣಬಿನಂತಿರುತ್ತದೆ. ಈ ನಾರಿನಿಂದ handbag, ಚಾಪೆ, ಕಾರ್ಪೆಟ್ (ಕಂಬಳಿ) ಇಂಥ ಹಲವಾರು ವಸ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಿಂದ ಕೃಷಿ ತ್ಯಾಜ್ಯದ ಉಪಯೋಗ ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮೀಣ ನಮ್ಮ ಸೋದರಿಯರು ಹೆಣ್ಣು ಮಕ್ಕಳಿಗೆ ಮತ್ತೊಂದು ದುಡಿಮೆಯ ಮಾರ್ಗ ದೊರೆತಿದೆ. ಬಾಳೆ ನಾರಿನ ಈ ಕೆಲಸದಿಂದ ಸ್ಥಳೀಯ ಮಹಿಳೆಯರಿಗೆ ದಿನಕ್ಕೆ 400 ರಿಂದ 600 ರೂಪಾಯಿಯ ದುಡಿಮೆ ಲಭಿಸುತ್ತದೆ.  ಲಖೀಂಪುರ್ ಖೀರಿಯಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಬಾಳೆ ಕೃಷಿ ಕೈಗೊಳ್ಳಲಾಗುತ್ತದೆ.  ಬಾಳೆ ಕೃಷಿ ನಂತರ ಬಾಳೆ ದಿಂಡನ್ನು ಕತ್ತರಿಸಿ ಸಾಗಿಸಲು ಕೃಷಿಕರು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತಿತ್ತು. ಈಗ ಅವರಿಗೆ ಈ ಹಣ ಉಳಿತಾಯವಾಗುತ್ತದೆ. ಅಂದರೆ ಆಮ್ ಕೆ ಆಮ್ ಗುಟಲಿಯೋಂಕೆ ದಾಮ್ (ಮಾವಿನ ಹಣ್ಣಿನ ಜೊತೆಗೆ ವಾಟೆಯೂ ಲಾಭ ನೀಡಿದಂತೆ) ಎಂಬ ನಾಣ್ಣುಡಿ ಇಲ್ಲಿ ಸೂಕ್ತವೆನಿಸುತ್ತದೆ.

ಸ್ನೇಹಿತರೆ, ಒಂದೆಡೆ ಬಾಳೆ ನಾರಿನಿಂದ ಉತ್ಪನ್ನವನ್ನು ತಯಾರಿಸಲಾಗುತ್ತಿದ್ದರೆ ಮತ್ತೊಂದೆಡೆ ಬಾಳೆ ಹಿಟ್ಟಿನಿಂದ ದೋಸೆ ಮತ್ತು ಗುಲಾಬ್ ಜಾಮೂನ್ ನಂತಹ ಸ್ವಾದಿಷ್ಟ ತಿಂಡಿಗಳನ್ನೂ ಸಿದ್ಧಪಡಿಸಲಾಗುತ್ತಿದೆ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಹಿಳೆಯರು ಈ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಈ ಕೆಲಸವೂ ಕೊರೊನಾ ಸಮಯದಲ್ಲೇ ಆರಂಭವಾಯಿತು. ಈ ಮಹಿಳೆಯರು ಬಾಳೆ ಹಿಟ್ಟಿನಿಂದ ಕೇವಲ ದೋಸೆ ಮತ್ತು ಗುಲಾಬ್ ಜಾಮೂನ್ ನಂತಹ ಖಾದ್ಯಗಳನ್ನು ಸಿದ್ಧಪಡಿಸುವುದಲ್ಲದೆ ಇದರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದರು. ಹೆಚ್ಚೆಚ್ಚು ಜನರಿಗೆ ಬಾಳೆ ಹಿಟ್ಟಿನ ಬಗ್ಗೆ ತಿಳಿದಾಗ ಅದರ ಬೇಡಿಕೆಯೂ ಹೆಚ್ಚಿತು ಮತ್ತು ಈ ಮಹಿಳೆಯರ ಆದಾಯವೂ ಹೆಚ್ಚಿತು. ಲಖೀಂ ಪುರ್ ಖೀರಿಯಂತೆ ಇಲ್ಲಿಯೂ ಈ ಆವಿಷ್ಕಾರಿ ಯೋಜನೆಯ ನಾಯಕತ್ವವನ್ನು ಮಹಿಳೆಯರೇ ವಹಿಸಿದ್ದಾರೆ.

ಸ್ನೇಹಿತರೆ, ಇಂಥ ಉದಾಹರಣೆಗಳು ಜೀವನದಲ್ಲಿ ಹೊಸತನ್ನು ಮಾಡುವ ಪ್ರೇರಣೆ ನೀಡುತ್ತವೆ. ನಿಮ್ಮ ಸುತ್ತ ಮುತ್ತ ಇಂಥ ಬಹಳಷ್ಟು ಜನರಿರಬಹುದು. ನಿಮ್ಮ ಕುಟುಂಬ ಮನದ ಮಾತನ್ನಾಡುವಾಗ ಇವರನ್ನೂ ನಿಮ್ಮ ಮಾತುಕತೆಯಲ್ಲಿ ಸೇರಿಸಿ. ಕಾಲಾವಕಾಶ ಮಾಡಿಕೊಂಡು ಮಕ್ಕಳೊಂದಿಗೆ ಇಂಥ ಪ್ರಯತ್ನಗಳನ್ನು ನೋಡಿ ಬನ್ನಿ. ಅವಕಾಶ ಸಿಕ್ಕರೆ ನೀವೂ ಇಂಥದ್ದನ್ನು ಮಾಡಿ. ಹಾಂ ಇದೆಲ್ಲವನ್ನು ನೀವು ನನ್ನ ಜೊತೆ, ನಮೋ ಆಪ್ ಅಥವಾ ಮೈ ಗೌ ನಲ್ಲಿ ಹಂಚಿಕೊಂಡರೆ ನನಗೆ ಅಪಾರ ಸಂತೋಷವಾಗುತ್ತದೆ.       

ನನ್ನ ಪ್ರಿಯ ದೇಶಬಾಂಧವರೆ, ನಮ್ಮ ಸಂಸ್ಕೃತ ಗ್ರಂಥಗಳಲ್ಲಿ ಒಂದು ಶ್ಲೋಕವಿದೆ.

ಆತ್ಮಾರ್ಥಂ ಜೀವ ಲೋಕೆ ಅಸ್ಮಿನ್, ಕೊ ನ ಜೀವತಿ ಮಾನವಃ.

ಪರಮ್ ಪರೋಪಕಾರಾರ್ಥಂ, ಯೋ ಜೀವತಿ ಸ ಜೀವತಿ.

ಅಂದರೆ, ತಮಗಾಗಿ ಈ ಲೋಕದಲ್ಲಿ ಎಲ್ಲರೂ ಜೀವಿಸುತ್ತಾರೆ. ಆದರೆ ಯಾರು ಪರೋಪಕಾರಕ್ಕಾಗಿ ಜೀವಿಸುತ್ತಾರೋ ಅವರೇ ವಾಸ್ತವದಲ್ಲಿ ಜೀವಿಸಿದಂತೆ, ಭಾರತ ಮಾತೆಯ ಮಕ್ಕಳ ಪರೋಪಕಾರದ ಪ್ರಯತ್ನಗಳ ಮಾತೇ – ‘ಮನದ ಮಾತು’. ಇಂದು ಇಂಥ ಮತ್ತಷ್ಟು ಸ್ನೇಹಿತರ ಬಗ್ಗೆ ಮಾತನಾಡೋಣ. ಒಬ್ಬ ಸ್ನೇಹಿತರು ಚಂಡೀಗಡದವರಾಗಿದ್ದಾರೆ. ಚಂಡೀಗಡದಲ್ಲಿ ನಾನು ಕೆಲ ವರ್ಷಗಳು ವಾಸವಿದ್ದೆ. ಇದು ಬಹಳ ಸುಂದರ ಮತ್ತು ಆರಾಮದಾಯಕ ನಗರವಾಗಿದೆ. ಇಲ್ಲಿ ನೆಲೆಸಿರುವ ಜನರು ಹೃದಯವೈಶಾಲ್ಯ ಉಳ್ಳವರು. ನೀವು ಖಾದ್ಯಪ್ರಿಯರಾಗಿದ್ದರೆ ನಿಮಗೆ ಇಲ್ಲಿ ಪರಮಾನಂದವಾಗುತ್ತದೆ. ಇದೇ ಚಂಡೀಗಢದ ಸೆಕ್ಟರ್ 29 ರಲ್ಲಿ ಸಂಜಯ್ ರಾಣಾ ಅವರು ಆಹಾರ ಮಳಿಗೆ ಇಟ್ಟುಕೊಂಡಿದ್ದಾರೆ. ಸೈಕಲ್ ಮೇಲೆ ಛೋಲೆ ಬಟುರಾ ಮಾರಾಟ ಮಾಡುತ್ತಾರೆ. ಒಂದು ದಿನ ಅವರ ಮಗಳು ರಿದ್ಧಿಮಾ ಮತ್ತು ಸೋದರ ಸೊಸೆ ರಿಯಾ ಒಂದು ಆಲೋಚನೆಯೊಂದಿಗೆ ಅವರ ಬಳಿ ಬಂದರು. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತವಾಗಿ ಛೋಲೆ ಬಟುರಾ ವಿತರಿಸುವಂತೆ ಇಬ್ಬರೂ ಹೇಳಿದರು. ಇದಕ್ಕೆ ಅವರು ಸಂತೋಷದಿಂದ ಒಪ್ಪಿದರು. ಕೂಡಲೇ ಈ ಸತ್ಕಾರ್ಯವನ್ನು ಆರಂಭಿಸಿದರು. ಸಂಜಯ್ ರಾಣಾ ಅವರ ಛೋಲೆ ಬಟುರಾವನ್ನು  ಉಚಿತವಾಗಿ ಸವಿಯಲು ಅಂದೇ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದು ತೋರಿಸಬೇಕು. ಲಸಿಕೆ ಸಂದೇಶವನ್ನು ತೋರಿಸಿದ ಕೂಡಲೇ ನಿಮಗೆ ಅವರು ಸ್ವಾದಿಷ್ಟವಾದ ಛೋಲೆ ಬಟುರಾ ಸವಿಯಲು ನೀಡುತ್ತಾರೆ. ಸಮಾಜದ ಒಳಿತಿಗೆ ಹಣಕ್ಕಿಂತ ಹೆಚ್ಚು ಸೇವಾ ಮನೋಭಾವ, ಕರ್ತವ್ಯಪರತೆ ಹೆಚ್ಚು ಅವಶ್ಯಕ ಎಂದು ಹೇಳಲಾಗುತ್ತದೆ. ನಮ್ಮ ಸೋದರ ಸಂಜಯ್ ಇದು ಸರಿ ಎಂದು ಸಾಬೀತುಪಡಿಸುತ್ತಿದ್ದಾರೆ.

ಸ್ನೇಹಿತರೆ, ಮತ್ತೊಂದು ಕೆಲಸದ ಬಗ್ಗೆ ನಾನು ಇಂದು ಚರ್ಚಿಸಲು ಬಯಸುತ್ತೇನೆ. ಈ ಕೆಲಸ ನಡೆಯುತ್ತಿರುವುದು ತಮಿಳುನಾಡಿನ ನೀಲಗಿರಿಯಲ್ಲಿ. ಅಲ್ಲಿ ರಾಧಿಕಾ ಶಾಸ್ರ್ತಿ ಅವರು AmbuRx(ಆಂಬುರೆಕ್ಸ್) ಯೋಜನೆ ಆರಂಭಿಸಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ಸುಲಭವಾದ ಸಾರಿಗೆ ವ್ಯವಸ್ಥೆ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ರಾಧಿಕಾ ಅವರು ಕೂನೂರಿನಲ್ಲಿ ಒಂದು Cafe ನಡೆಸುತ್ತಾರೆ. ಅವರು ತಮ್ಮ ಕೆಫೆಯ AmbuRx ಗಾಗಿ ಹಣ ಸಂಗ್ರಹಿಸಿದರು. ಇಂದು ನೀಲಗಿರಿಯ ಗುಡ್ಡಗಳಲ್ಲಿ 6 AmbuRx ಸೇವಾ ನಿರತವಾಗಿವೆ ಮತ್ತು ತುರ್ತು ಸಮಯದಲ್ಲಿ ದೂರದೂರದ ರೋಗಿಗಳಿಗೂ ಸೇವೆ ನೀಡುತ್ತಿವೆ. ಆಂಬುರೆಕ್ಸ್ ನಲ್ಲಿ Stretcher, Oxygen Cylinder, First Aid Box ನಂತಹ ಅನೇಕ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಗಿದೆ.

ಸ್ನೇಹಿತರೇ, ಸಂಜಯ್ ಆಗಲಿ ಅಥವಾ ರಾಧಿಕಾ ಅವರೇ ಆಗಲಿ, ನಾವು ನಮ್ಮ ಕೆಲಸ, ನಮ್ಮ ಉದ್ಯೋಗ ಮಾಡುತ್ತಲೇ ಸೇವಾ ಕಾರ್ಯ ಕೂಡಾ ಮಾಡಬಹುದು ಎನ್ನುವುದು ಇಂತಹ ಉದಾಹರಣೆಗಳಿಂದ ನಮಗೆ ತಿಳಿದುಬರುತ್ತದೆ.

ಸ್ನೇಹಿತರೇ, ಕೆಲವು ದಿನಗಳ ಹಿಂದೆ ಅತ್ಯಂತ ಆಸಕ್ತಿದಾಯಕ ಮತ್ತು ಭಾವನಾತ್ಮಕ ಘಟನೆಯೊಂದು ನಡೆಯಿತು, ಇದರಿಂದಾಗಿ ಭಾರತ-ಜಾರ್ಜಿಯಾ ಮೈತ್ರಿಗೆ ಒಂದು ಶಕ್ತಿ ತುಂಬಿದಂತಾಗಿದೆ. ಈ ಸಮಾರಂಭದಲ್ಲಿ ಭಾರತವು ಸೈಂಟ್ ಕ್ವೀನ್ ಕೆಟೆವಾನ್ (Saint Queen Ketevan) ಅವರ ಪವಿತ್ರ ರೆಲಿಕ್ (Holy Relic) ಅಂದರೆ ಅವರ ಪವಿತ್ರ ಸ್ಮರಣ ಚಿಹ್ನೆಯನ್ನು ಜಾರ್ಜಿಯಾ ಸರ್ಕಾರ ಮತ್ತು ಅದರ ಜನತೆಗೆ ಹಸ್ತಾಂತರಿಸಿತು, ಇದಕ್ಕಾಗಿ ನಮ್ಮ ವಿದೇಶಾಂಗ ಸಚಿವರು ಸ್ವತಃ ಅಲ್ಲಿಗೆ ತೆರಳಿದ್ದರು.  ಬಹಳ ಭಾವನಾತ್ಮಕ ವಾತಾವರಣದಲ್ಲಿ ನಡೆದ ಈ ಸಮಾರಂಭದಲ್ಲಿ ಜಾರ್ಜಿಯಾದ ರಾಷ್ಟ್ರಪತಿ, ಪ್ರಧಾನಮಂತ್ರಿ, ಅನೇಕ ಧರ್ಮ ಗುರುಗಳು, ಮತ್ತು ಭಾರೀ ಸಂಖ್ಯೆಯಲ್ಲಿ ಜಾರ್ಜಿಯಾದ ಜನತೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರಶಂಸಿಸುತ್ತಾ ಆಡಿದ ಮಾತುಗಳು, ಬಹಳ ಸ್ಮರಣೀಯವಾಗಿವೆ. ಈ ಒಂದು ಸಮಾರಂಭವು ಉಭಯ ದೇಶಗಳೊಂದಿಗೆ, ಗೋವಾ ಮತ್ತು ಜಾರ್ಜಿಯಾ ನಡುವಿನ ಸಂಬಂಧವನ್ನು ಕೂಡಾ ಬಲಪಡಿಸಿದೆ. ಏಕೆಂದರೆ, ಸೈಂಟ್ ಕ್ವೀನ್ ಕೆಟೆವಾನ್ (Saint Queen Ketevan) ರವರ ಈ ಪವಿತ್ರ ಅವಶೇಷ 2005 ರಲ್ಲಿ ಗೋವಾದ Saint Augustine Church ನಿಂದ ದೊರೆತಿತ್ತು.

ಸ್ನೇಹಿತರೇ, ಇವೆಲ್ಲವೂ ಏನು, ಯಾವಾಗ ಮತ್ತು ಹೇಗಾಯಿತು ಎಂಬ ಪ್ರಶ್ನೆ ನಿಮ್ಮ ಮನದಲ್ಲಿರಬಹುದು. ವಾಸ್ತವದಲ್ಲಿ ಇದು ಸುಮಾರು ನಾಲ್ಕುನೂರರಿಂದ ಐದು ನೂರು ವರ್ಷಗಳಷ್ಟು ಹಳೆಯ ಮಾತು. ರಾಣಿ ಕೆಟೆವಾನ್ ಅವರು ಜಾರ್ಜಿಯಾದ ರಾಜಪರಿವಾರದ ಪುತ್ರಿಯಾಗಿದ್ದರು. ಹತ್ತು ವರ್ಷಗಳ ಕಾರಾಗೃಹವಾಸದ ನಂತರ ಅವರು 1624 ರಲ್ಲಿ ಹುತಾತ್ಮರಾದರು. ಒಂದು ಪ್ರಾಚೀನ ಪೋರ್ಚುಗೀಸ್ ದಾಖಲೆಯ ಪ್ರಕಾರ Saint Queen Ketevan ಅವರ ಚಿತಾಭಸ್ಮವನ್ನು ಹಳೆಯ ಗೋವಾದ Saint Augustine Convent  ನಲ್ಲಿ ಇರಿಸಲಾಗಿತ್ತು. ಆದರೆ, ಗೋವಾದಲ್ಲಿ ಸಮಾಧಿ ಮಾಡಲಾದ ಅವರ  ಅವಶೇಷಗಳು 1930 ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಕಾಣೆಯಾದವು ಎಂದು ಬಹಳ ಕಾಲದಿಂದ ನಂಬಲಾಗಿತ್ತು.

ಭಾರತ ಸರ್ಕಾರ ಮತ್ತು ಜಾರ್ಜಿಯಾದ ಇತಿಹಾಸ ತಜ್ಞರು, ಸಂಶೋಧಕರು, ಪುರಾತತ್ವ ಶಾಸ್ತ್ರಜ್ಞರು ಮತ್ತು ಜಾರ್ಜಿಯಾದ ಚರ್ಚಿನ ದಶಕಗಳ ದಣಿವರಿಯದ ಪ್ರಯತ್ನಗಳ ನಂತರ 2005 ರಲ್ಲಿ ಆ ಪವಿತ್ರ ಅವಶೇಷಗಳನ್ನು ಕಂಡುಹಿಡಿಯುವಲ್ಲಿ ಸಫಲತೆ ದೊರೆಯಿತು. ಇದು ಜಾರ್ಜಿಯಾದ ಜನತೆಗೆ ಬಹಳ ಭಾವನಾತ್ಮಕ ವಿಷಯವಾಗಿದೆ. ಆದ್ದರಿಂದ ಅವರ ಐತಿಹಾಸಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಈ ಅವಶೇಷಗಳ ಒಂದು ಭಾಗವನ್ನು ಜಾರ್ಜಿಯಾದ ಜನತೆಗೆ ಉಡುಗೊರೆಯಾಗಿ ನೀಡುವ ನಿರ್ಣಯ ಕೈಗೊಂಡಿತು. ಭಾರತ ಮತ್ತು ಜಾರ್ಜಿಯಾದ ಇತಿಹಾಸದ ಈ ವಿಶಿಷ್ಟ ಭಾಗವನ್ನು ಕಾಪಾಡಿಕೊಂಡಿದ್ದಕ್ಕಾಗಿ ನಾನು ಇಂದು ಗೋವಾದ ಜನತೆಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಗೋವಾ ಅನೇಕ ಮಹಾನ್ ಆಧ್ಯಾತ್ಮಿಕ ಪರಂಪರೆಯುಳ್ಳ ಭೂಮಿಯಾಗಿದೆ. Saint Augustine Church, UNESCOದ ವಿಶ್ವ ಪಾರಂಪರಿಕ ತಾಣ – ಗೋವಾದ ಚರ್ಚ್ ಗಳು ಮತ್ತು ಕಾನ್ವೆಂಟ್ ಗಳ ಒಂದು ಭಾಗವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೆ, ನಾನು ಈಗ ನಿಮ್ಮನ್ನು ಜಾರ್ಜಿಯಾದಿಂದ ನೇರವಾಗಿ ಸಿಂಗಪುರಕ್ಕೆ ಕರೆದೊಯ್ಯುತ್ತೇನೆ. ಇಲ್ಲಿ ಈ ತಿಂಗಳ ಆರಂಭದಲ್ಲಿ ಮತ್ತೊಂದು ಗೌರವನೀಯ ಅವಕಾಶ ಎದುರಾಯಿತು. ಸಿಂಗಪುರದ ಪ್ರಧಾನಮಂತ್ರಿ ನನ್ನ ಮಿತ್ರ ಲೀ ಸೇನ್ ಲೂಂಗ್ (Lee Hsien Loong)ಅವರು ಇತ್ತೀಚೆಗೆ ನವೀಕರಿಸಲಾದ ಸಿಲಾಟ್ ರೋಡ್ ಗುರುದ್ವಾರವನ್ನು ಉದ್ಘಾಟಿಸಿದರು. ಅವರು ಸಾಂಪ್ರದಾಯಿಕ ಸಿಖ್ ಪೇಟಾ ಕೂಡಾ ಧರಿಸಿದ್ದರು. ಈ ಗುರುದ್ವಾರವನ್ನು ಸುಮಾರು ನೂರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಮತ್ತು ಇಲ್ಲಿ  ಸೋದರ ಮಹಾರಾಜ್ ಸಿಂಗ್ ಅವರಿಗೆ ಸಮರ್ಪಿಸಲಾದ ಒಂದು ಸ್ಮಾರಕ ಕೂಡಾ ಇದೆ. ಸೋದರ ಮಹಾರಾಜಾ ಸಿಂಗ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದರು ಮತ್ತು ಭಾರತ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಸಂದರ್ಭದಲ್ಲಿ ಇದು ಮತ್ತಷ್ಟು ಪ್ರೇರಣಾದಾಯಕವಾಗಿದೆ. ಇಂತಹ ವಿಚಾರಗಳು, ಇಂತಹ ಪ್ರಯತ್ನಗಳು ಎರಡು ದೇಶಗಳ ನಡುವೆ, ಮತ್ತು ಜನತೆ ನಡುವಿನ ಸಂಪರ್ಕಕ್ಕೆ ಮತ್ತಷ್ಟು ಬಲ ತುಂಬುತ್ತವೆ. ಸೌಹಾರ್ದಪೂರ್ಣ ವಾತಾವರಣದಲ್ಲಿ ಜೀವಿಸುವುದು ಮತ್ತು ಪರಸ್ಪರರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಎಷ್ಟೊಂದು ಮಹತ್ವದ ವಿಷಯವಾಗಿರುತ್ತದೆ ಎನ್ನುವುದು ಇದರಿಂದ ತಿಳಿದುಬರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು 'ಮನದ ಮಾತಿನಲ್ಲಿ' ನಲ್ಲಿ ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ನನ್ನ ಮನಸ್ಸಿಗೆ ಬಹಳ ನಿಕಟವಾಗಿರುವ ಮತ್ತೊಂದು ವಿಷಯವಿದೆ, ಅದೆಂದರೆ ನೀರಿನ ಸಂರಕ್ಷಣೆಯ ವಿಷಯ. ನಾನು ನನ್ನ ಬಾಲ್ಯವನ್ನು ಕಳೆದ ಸ್ಥಳದಲ್ಲಿ ನೀರಿನ ಕೊರತೆ ಯಾವಾಗಲೂ ಇದ್ದೇ ಇರುತ್ತಿತ್ತು. ನಾವು ಮಳೆಗಾಗಿ ಹಂಬಲಿಸುತ್ತಿದ್ದೆವು ಮತ್ತು ಆದ್ದರಿಂದ ಪ್ರತಿಯೊಂದು ಹನಿ ನೀರನ್ನೂ ಉಳಿಸುವುದು ನಮ್ಮ ಸಂಸ್ಕಾರದ ಒಂದು ಭಾಗವಾಗಿದೆ. ಈಗ "ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ನೀರಿನ ಸಂರಕ್ಷಣೆ" ಎಂಬ ಈ ಮಂತ್ರವು ಅಲ್ಲಿನ ಜನಜೀವನದ ಚಿತ್ರವನ್ನೇ ಬದಲಾಯಿಸಿ ಬಿಟ್ಟಿದೆ. ನೀರಿನ ಪ್ರತಿಯೊಂದು ಹನಿಯನ್ನೂ ಉಳಿಸುವುದು, ಮತ್ತು ಯಾವುದೇ ರೀತಿಯಲ್ಲಿ ನೀರು ವ್ಯರ್ಥವಾಗುವುದನ್ನು ತಡೆಯುವುದು, ಇದು ನಮ್ಮ ಜೀವನ ಶೈಲಿಯ ಸಹಜ ಭಾಗವಾಗಬೇಕು. ನಮ್ಮ ಕುಟುಂಬಗಳಲ್ಲಿ ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹ ಇಂತಹ ಸಂಪ್ರದಾಯ ಆಚರಣೆಯಾಗಬೇಕು.

ಸ್ನೇಹಿತರೇ, ಪ್ರಕೃತಿ ಮತ್ತು ಪರಿಸರದ ರಕ್ಷಣೆ ಭಾರತದ ಸಾಂಸ್ಕೃತಿಕ ಜೀವನದಲ್ಲಿ, ನಮ್ಮ ದೈನಂದಿನ ಜೀವನದಲ್ಲಿ, ಹಾಸುಹೊಕ್ಕಾಗಿದೆ. ಹಾಗೆಯೇ, ಮಳೆ ಮತ್ತು ಮುಂಗಾರು ಯಾವಾಗಲೂ ನಮ್ಮ ಚಿಂತನೆಗಳಲ್ಲಿ, ನಮ್ಮ ತತ್ವಶಾಸ್ತ್ರದಲ್ಲಿ ಮತ್ತು ನಮ್ಮ ನಾಗರಿಕತೆಯನ್ನು ರೂಪಿಸುತ್ತಾ ಬಂದಿದೆ. ಋತುಸಂಹಾರ ಮತ್ತು ಮೇಘದೂತದಲ್ಲಿ ಮಹಾಕವಿ ಕಾಳಿದಾಸ ಮಳೆಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ. ಸಾಹಿತ್ಯ ಪ್ರೇಮಿಗಳ ನಡುವೆ ಈ ಕವಿತೆಗಳು ಇಂದಿಗೂ ಬಹಳ ಜನಪ್ರಿಯವಾಗಿವೆ. ಋಗ್ವೇದದ ಪರ್ಜನ್ಯ ಸೂಕ್ತಂನಲ್ಲಿ ಮಳೆಯ ಸೌಂದರ್ಯದ ಬಹಳ ಸುಂದರವಾದ ವರ್ಣನೆಯಿದೆ. ಇದೇ ರೀತಿ, ಶ್ರೀಮದ್ಭಾಗವತದಲ್ಲಿ ಕೂಡಾ ಕಾವ್ಯಾತ್ಮಕವಾಗಿ ಭೂಮಿ, ಸೂರ್ಯ ಮತ್ತು ಮಳೆಯ ನಡುವಿನ ಸಂಬಂಧಗಳ ಕುರಿತು ವಿಸ್ತಾರವಾಗಿ ವಿವರಿಸಲಾಗಿದೆ. 

ಅಷ್ಟೌ ಮಾಸಾನ್ ನಿಪೀತಂ ಯದ್ಧ್, ಭೂಮ್ಯಾಃ, ಚ, ಓದ್-ಮಯಮ್ ವಸು.

ಸ್ವರ್ಗೋಭಿಃ ಮೋಕ್ತುಮ್ ಆರೇಭೇ, ಪರ್ಜನ್ಯಃ ಕಾಲ ಆಗತೇ.

(अष्टौ मासान् निपीतं यद्, भूम्याः च, ओद-मयम् वसु |

स्वगोभिः मोक्तुम् आरेभे, पर्जन्यः काल आगते ||)

ಅಂದರೆ, ಸೂರ್ಯನು ಎಂಟು ತಿಂಗಳ ಕಾಲ ನೀರಿನ ರೂಪದಲ್ಲಿ ಭೂಮಿಯ ಸಂಪತ್ತನ್ನು ಸಂಗ್ರಹಿಸಿದ್ದನು, ಈಗ ಮುಂಗಾರು ಋತುವಿನಲ್ಲಿ, ಸೂರ್ಯ ಈ ಸಂಗ್ರಹಗೊಂಡ ಸಂಪತ್ತನ್ನು ಭೂಮಿಗೆ ಹಿಂದಿರುಗಿಸುತ್ತಿದ್ದಾನೆ. ವಾಸ್ತವದಲ್ಲಿ, ಮುಂಗಾರು ಮತ್ತು ಮಳೆಯ ಋತು ಕೇವಲ ಸುಂದರ ಮತ್ತು ಆಹ್ಲಾದಕರ ಮಾತ್ರವಲ್ಲ, ಇದು ಪೋಷಣೆ ನೀಡುವ, ಜೀವನ ನೀಡುವಂತಹದ್ದೂ ಕೂಡಾ ಆಗಿದೆ. ನಮಗೆ ದೊರೆಯುವ ಮಳೆಯ ನೀರನ್ನು ನಮ್ಮ ಭಾವೀ ಪೀಳಿಗೆಗಾಗಿ ಉಳಿಸಬೇಕು ಈ ಅಂಶವನ್ನು ನಾವು ಯಾವಾಗಲೂ ಮರೆಯಬಾರದು.

ಇಂದಿನ ಮಾತನ್ನು ಇಂತಹ ರೋಚಕ ವಿಷಯಗಳೊಂದಿಗೆ ಏಕೆ ಮುಗಿಸಬಾರದೆಂದು ನನಗೆ ಅನ್ನಿಸಿತು, ನಿಮ್ಮೆಲ್ಲರಿಗೂ ಮುಂಬರುವ ಹಬ್ಬಗಳಿಗಾಗಿ ಅನೇಕಾನೇಕ ಶುಭಾಶಯಗಳು. ಹಬ್ಬ ಮತ್ತು ಉತ್ಸವಾಚರಣೆಗಳ ಸಮಯದಲ್ಲಿ, ಕೊರೋನಾ ಇನ್ನೂ ನಮ್ಮ ಮಧ್ಯದಿಂದ ಹೋಗಿಲ್ಲ ಎಂಬುದನ್ನು ಖಂಡಿತಾ ನೆನಪಿಟ್ಟುಕೊಳ್ಳಿ. ಕೊರೋನಾ ಸಂಬಂಧಿತ ಶಿಷ್ಠಾಚಾರಗಳನ್ನು ನೀವು ಮರೆಯಬಾರದು. ನೀವೆಲ್ಲರೂ ಆರೋಗ್ಯವಾಗಿರಿ ಮತ್ತು ಸಂತೋಷವಾಗಿ ಇರಿ.

ಅನೇಕಾನೇಕ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Waqf Law Has No Place In The Constitution, Says PM Modi

Media Coverage

Waqf Law Has No Place In The Constitution, Says PM Modi
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.