
2021-22 ರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಅಖಿಲ ಭಾರತ ಕೋಟಾದಡಿ [ಎಐಕ್ಯೂ] ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ/ ದಂತ ವೈದ್ಯಕೀಯ [ಎಂ.ಬಿ.ಬಿ.ಎಸ್/ ಎಂಡಿ/ ಡಿಪ್ಲೊಮ/ ಬಿಡಿಎಸ್/ ಎಂ.ಡಿ.ಎಸ್] ಕೋರ್ಸ್ ಗಳಿಗೆ ಒಬಿಸಿ 27% ರಷ್ಟು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 10% ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೆಗ್ಗುರುತಿನ ನಿರ್ಧಾರ ಕೈಗೊಂಡಿದೆ.
2021 ರ ಜುಲೈ 26 [ಸೋಮವಾರ] ರಂದು ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ವಿಷಯಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಲಾಗಿತ್ತು.
ಈ ತೀರ್ಮಾನದಿಂದ ಪ್ರತಿವರ್ಷ 1500 ಮಂದಿ ಒಬಿಸಿಗಳಿಗೆ ಎಂ.ಬಿ.ಬಿ.ಎಸ್ ಮತ್ತು 2,500 ಒಬಿಸಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 550 ಇ.ಡ.ಬ್ಲ್ಯೂಎಸ್ ವಲಯದ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಮತ್ತು 1000 ಇ.ಡಬ್ಲ್ಯೂ.ಎಸ್ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅನುಕೂಲವಾಗಲಿದೆ.
ಅಖಿಲ ಭಾರತ ಕೋಟಾ [ಎ.ಐ.ಕ್ಯೂ] ಕಾರ್ಯಕ್ರಮವನ್ನು 1986 ರಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪರಿಚಯಿಸಲಾಯಿತು. ಯಾವುದೇ ರಾಜ್ಯದ ವಿದ್ಯಾರ್ಥಿಗಳಿಗೆ ಬೇರೆ ರಾಜ್ಯದಲ್ಲಿರುವ ಉತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಆಕಾಂಕ್ಷಿಗಳಿಗೆ ಅರ್ಹತೆ ಆಧಾರದ ಮೇಲೆ ಪ್ರವೇಶದ ಅವಕಾಶಗಳನ್ನು ಇದು ಒದಗಿಸುತ್ತದೆ. ಅಖಿಲ ಭಾರತ ಕೋಟಾದಡಿ ಪದವಿ ಪೂರ್ವ – ಯುಜಿ ಅಡಿ ಶೇ 15 ರಷ್ಟು ಸೀಟುಗಳಿವೆ ಮತ್ತು ಸ್ನಾತಕೋತ್ತರದ ವೈದ್ಯಕೀಯ ವಲಯದಲ್ಲಿ ಶೇ 50 ರಷ್ಟು ಸೀಟುಗಳು ದೊರೆಲಿವೆ. ಆರಂಭಿಕವಾಗಿ 2007 ರ ವರೆಗೆ ಎಐಕ್ಯೂ ವಲಯದಲ್ಲಿ ಮೀಸಲಾತಿ ಇರಲಿಲ್ಲ. 2007 ರಲ್ಲಿ ಎಐಕ್ಯೂ ಕಾರ್ಯಕ್ರಮದಡಿ 15% ರಷ್ಟು ಎಸ್.ಸಿಗಳು ಮತ್ತು 7.5% ರಷ್ಟು ಎಸ್.ಟಿ. ಮೀಸಲಾತಿಯನ್ನು ಜಾರಿಗೊಳಿಸುವಂತೆ ಆದೇಶಿಸಿತು. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ 27% ಮೀಸಲಾತಿ ಜಾರಿಗೊಳಿಸುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ [ಪ್ರವೇಶದಲ್ಲಿ ಮೀಸಲಾತಿ] ಕಾಯ್ದೆ 2007 ರಲ್ಲಿ ಜಾರಿಗೆ ಬಂತು. ಇದು ಸಪ್ದರ್ ಜಂಗ್ ಆಸ್ಪತ್ರೆಗಳು, ಲೇಡಿ ಹಾರ್ಡನಿಂಗ್ ವೈದ್ಯಕೀಯ ಕಾಲೇಜು, ಅಲಿಘರ್ ಮುಸ್ಲೀಂ ವಿಶ‍್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ಯೂನಿವರ್ಸಿಟಿ ಮತ್ತಿತರೆ ಕಡೆಗಳಲ್ಲಿ ಜಾರಿಗೆ ತರಲಾಯಿತು. ಆದಾಗ್ಯೂ ಇದನ್ನು ರಾಜ್ಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೆ ವಿಸ್ತರಿಸಿಲ್ಲ.
ಹಾಲಿ ಸರ್ಕಾರ ಹಿಂದುಳಿದ ವರ್ಗವಷ್ಟೇ ಅಲ್ಲದೇ ಇ.ಡಬ್ಲ್ಯೂ.ಎಸ್ ವಲಯಕ್ಕೆ ಮೀಸಲಾತಿ ಕಲ್ಪಿಸಲು ಬದ್ಧವಾಗಿದೆ. ಇದೀಗ ಕೇಂದ್ರ ಸರ್ಕಾರ ಎಐಕ್ಯೂ ಕೋಟಾದಡಿ ಇ.ಡಬ್ಲ್ಯೂ.ಎಸ್ ಗೆ 10% ರಷ್ಟು ಮೀಸಲಾತಿ ಮತ್ತು ಒಬಿಸಿ ವಲಯಕ್ಕೆ 27% ರಷ್ಟು ಮೀಸಲಾತಿ ಕಲ್ಪಿಸುವ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಎಐಕ್ಯೂ ಕಾರ್ಯಕ್ರಮದಡಿ ಯಾವುದೇ ರಾಜ್ಯದ ಒಬಿಸಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಸೀಟುಗಳನ್ನು ಪಡೆಯಬಹುದಾಗಿದೆ. ಕೇಂದ್ರೀಯ ಯೋಜನೆಯಡಿ ಕೇಂದ್ರೀಯ ಪಟ್ಟಿಯಲ್ಲಿರುವ ಒಬಿಸಿಗಳು ಈ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಸುಮಾರು 1,500 ಒಬಿಸಿಗಳು ಎಂ.ಬಿ.ಬಿ.ಎಸ್ ಮತ್ತು 2,500 ಸ್ನಾತಕೋತ್ತರ ಕೋರ್ಸ್ ಗಳ ಸೀಟುಗಳ ಸೌಲಭ್ಯ ಪಡೆಯಬಹುದಾಗಿದೆ.
ಎ.ಡಬ್ಲ್ಯೂ.ಎಸ್ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಪ್ರವೇಶ ಪಡೆಯಬಹುದಾಗಿದೆ. ಇದಕ್ಕಾಗಿ 2019 ರಲ್ಲಿ ಸಾಂವಿಧಾನಿಕ ತಿದ್ದುಪಡಿ ಮಾಡಲಾಗಿದ್ದು, ಇ.ಡಬ್ಲ್ಯೂ.ಎಸ್ ವಲಯದಲ್ಲಿ 10% ರಷ್ಟು ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಇದಕ್ಕೆ ಅನುಗುಣವಾಗಿ ವೈದ್ಯಕೀಯ/ ದಂತ ವೈದ್ಯಕೀಯ ವಲಯದಲ್ಲಿ 2019 -20 ಮತ್ತು 2020 – 21 ರಲ್ಲಿ ಎರಡು ವರ್ಷಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಇ.ಡಬ್ಲ್ಯೂ.ಎಸ್ ವಲಯದಲ್ಲಿ 10% ರಷ್ಟು ಸೀಟುಗಳ ಸಂಖ್ಯೆ ಹೆಚ್ಚಾಗಿದ್ದು, ಮೀಸಲಾತಿ ವ್ಯಾಪ್ತಿಗೆ ಒಳಪಡದ ಸೀಟುಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಆದಾಗ್ಯೂ ಎಐಕ್ಯೂ ಸೀಟುಗಳ ಸೌಲಭ್ಯವನ್ನು ಈ ವರೆಗೆ ವಿಸ್ತರಿಸಲಿಲ್ಲ. ಆದ್ದರಿಂದ 2021 – 22 ರ ಸಾಲಿನಿಂದ ಪದವಿಪೂರ್ವ/ ಸ್ನಾತಕೋತ್ತರ ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್ ಗಳ ಎಐಕ್ಯೂ ವಲಯದಲ್ಲಿ ಒಬಿಸಿಗಳಿಗೆ ಶೇ 27 ರಷ್ಟು, ಎ.ಡಬ್ಲ್ಯೂ.ಎಸ್ ಗಳಿಗೆ ಶೇ 10 ರಷ್ಟು ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಇದರಿಂದ ಪ್ರತಿವರ್ಷ 550 ಇ.ಡಬ್ಲ್ಯೂ.ಎಸ್ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಮತ್ತು ಪಿ.ಜಿ. ವೈದ್ಯಕೀಯ ಕೋರ್ಸ್ ಗಳಲ್ಲಿ 1000 ವಿದ್ಯಾರ್ಥಿಗಳಿಗೆ ಲಾಭ ದೊರೆಯಲಿದೆ. ಇ.ಡಬ್ಲ್ಯೂ.ಎಸ್ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಸರ್ಕಾರದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಈ ನಿರ್ಧಾರ 2014 ರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಮಹತ್ವದ ಸುಧಾರಣೆಗಳೊಂದಿಗೆ ಸಂಪರ್ಕ ಹೊಂದಿದೆ. ಕಳೆದ ಆರು ವರ್ಷಗಳಲ್ಲಿ ಎಂ.ಬಿ.ಬಿ.ಎಸ್ ಸೀಟುಗಳ ಪ್ರಮಾಣ 56% ರಷ್ಟು ಹೆಚ್ಚಳವಾಗಿದೆ. 2014 ರಲ್ಲಿ 54,348 ರಷ್ಟಿದ್ದ ಸೀಟುಗಳ ಸಂಖ್ಯೆ 2020 ರ ವೇಳೆಗೆ 84,649 ಕ್ಕೆ ಏರಿಕೆಯಾಗಿದೆ. ಪಿಜಿ ಸೀಟುಗಳ ಪ್ರಮಾಣದಲ್ಲಿ 80% ರಷ್ಟು ಏರಿಕೆ ಕಂಡಿದ್ದು, 2014 ರಲ್ಲಿ 30,191 ರಿಂದ 2020 ರ ವೇಳೆಗೆ 54,275 ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 179 ವೈದ್ಯಕೀಯ ಕಾಲೇಜುಗಳಿತ್ತು ಮತ್ತು ಇದೀಗ ದೇಶದಲ್ಲಿ 558 [289 ಸರ್ಕಾರಿ, 269 ಖಾಸಗಿ] ವೈದ್ಯಕೀಯ ಕಾಲೇಜುಗಳಿವೆ.