ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಮತ್ತು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 13, 2024 ರಂದು ಅಬುಧಾಬಿಯಲ್ಲಿ ಭೇಟಿಯಾದರು. ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಯುಎಇಗೆ ಸ್ವಾಗತಿಸಿದರು ಮತ್ತು ಫೆಬ್ರವರಿ 14, 2024 ರಂದು ದುಬೈನಲ್ಲಿ ನಡೆದ ವಿಶ್ವ ಸರ್ಕಾರದ ಶೃಂಗಸಭೆ 2024 ರಲ್ಲಿ ಮಾತನಾಡಲು ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ಯುಎಇಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಏಳನೇ ಭೇಟಿ ಇದಾಗಿದೆ ಎನ್ನುವ ವಿಷಯವನ್ನು ಉಭಯ ನಾಯಕರು ಒತ್ತಿ ಹೇಳಿದರು. ದುಬೈನಲ್ಲಿ ನಡೆದ ಯುಎನ್ಎಫ್ಸಿಸಿಸಿ ಸಿಒಪಿ 28 ಸಮ್ಮೇಳನದಲ್ಲಿ ಭಾಗವಹಿಸಲು ಪ್ರಧಾನಮಂತ್ರಿಯವರು ಕಡೆಯ ಬಾರಿ ಯುಎಇಗೆ ಡಿಸೆಂಬರ್ 1, 2023 ರಂದು ಭೇಟಿ ನೀಡಿದ್ದರು, ಅಲ್ಲಿ ಅವರು ಯುಎಇ ಅಧ್ಯಕ್ಷ  ಗೌರವಾನ್ವಿತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿದ್ದರು. ಭೇಟಿಯ ಸಮಯದಲ್ಲಿ, "ಸಿಒಪಿ ಫಾರ್ ಆಕ್ಷನ್" ಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಮತ್ತು "ಯುಎಇ ಒಮ್ಮತಕ್ಕೆ"   ಸಿಒಪಿ 28ರ ಅಧ್ಯಕ್ಷತೆಯನ್ನು ಭಾರತವು ಶ್ಲಾಘಿಸಿತ್ತು. ಪ್ರಧಾನಮಂತ್ರಿಯವರು ಸಿಒಪಿ 28ರ ಅಧ್ಯಕ್ಷತೆಯ "ಟ್ರಾನ್ಸ್ಫಾರ್ಮಿಂಗ್ ಕ್ಲೈಮೇಟ್ ಫೈನಾನ್ಸ್" ನಲ್ಲಿ ಭಾಗವಹಿಸಿದರು ಮತ್ತು ಯುಎಇ ಅಧ್ಯಕ್ಷರೊಂದಿಗೆ ಶೃಂಗಸಭೆಯ ಸಂದರ್ಭದಲ್ಲಿ 'ಗ್ರೀನ್ ಕ್ರೆಡಿಟ್ಸ್ ಪ್ರೋಗ್ರಾಂ' ಎನ್ನುವ ಉನ್ನತ ಮಟ್ಟದ ಕಾರ್ಯಕ್ರಮವನ್ನು  ಜೊತೆಯಾಗಿ ಆಯೋಜಿಸಿದ್ದರು. ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕಳೆದ ಎಂಟು ವರ್ಷಗಳಲ್ಲಿ ನಾಲ್ಕು ಸಲ ಭಾರತಕ್ಕೆ ಭೇಟಿ ನೀಡಿದ್ದರು, ಅದರಲ್ಲಿ ಇತ್ತೀಚಿನದು ಜನವರಿ 9-10, 2024 ರಂದು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 10 ನೇ ಆವೃತ್ತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಮತ್ತು ಆ ಸಂದರ್ಭದಲ್ಲಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಹೂಡಿಕೆ ಸಹಕಾರದ ಕುರಿತು ಹಲವಾರು ತಿಳುವಳಿಕೆ ಒಪ್ಪಂದಗಳಿಗೆ ಸಾಕ್ಷಿಯಾದರು.

2017 ರಲ್ಲಿ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ನಾಯಕರು ಭಾರತ ಯುಎಇ ದ್ವಿಪಕ್ಷೀಯ ಸಂಬಂಧವನ್ನು ಔಪಚಾರಿಕವಾಗಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ  ಏರಿಸಿದರು.  ಎರಡು ದೇಶಗಳ ನಡುವಿನ ಪಾಲುದಾರಿಕೆಯು ವರ್ಷಗಳಲ್ಲಿ ಗಮನಾರ್ಹವಾಗಿ ವಿಸ್ತರಿಸುತ್ತಿರುವುದನ್ನು ಗಮನಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಗೆ ಇಬ್ಬರೂ ತೃಪ್ತಿ ವ್ಯಕ್ತಪಡಿಸಿದರು. 

ಅಧ್ಯಕ್ಷ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಕೆಳಗಿನ ಒಪ್ಪಂದಗಳಿಗೆ ಸಾಕ್ಷಿಯಾದರು:

I. ದ್ವಿಪಕ್ಷೀಯ ಹೂಡಿಕೆ ಒಪ್ಪಂದ
II. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEEC) ಕುರಿತ ಅಂತರ-ಸರ್ಕಾರಿ ಚೌಕಟ್ಟಿನ ಒಪ್ಪಂದ
III. ಡಿಜಿಟಲ್ ಮೂಲಸೌಕರ್ಯ ಯೋಜನೆಗಳ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದ
IV. ವಿದ್ಯುತ್ ಸಂಪರ್ಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ತಿಳುವಳಿಕೆ ಒಪ್ಪಂದ.
V. ಗುಜರಾತಿನ ಲೋಥಾಲ್ ನ ರಾಷ್ಟ್ರೀಯ ಸಾಗರ ಪರಂಪರೆಯ ಸಂಕೀರ್ಣದೊಂದಿಗೆ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದ.
VI. ಯುಎಇಯ ನ್ಯಾಷನಲ್ ಲೈಬ್ರರಿ ಮತ್ತು ಆರ್ಕೈವ್ಸ್ ಮತ್ತು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ನಡುವಿನ ಸಹಕಾರ ಮಾರ್ಗಸೂಚಿ.

VII. ತ್ವರಿತ ಪಾವತಿ ವ್ಯವಸ್ಥೆಗಳಾದ UPI (ಭಾರತ) ಮತ್ತು AANI (ಯುಎಇ) ಗಳ ಪರಸ್ಪರ ಜೋಡಣೆಗಾಗಿ  ಒಪ್ಪಂದ.
 
VIII. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಪರಸ್ಪರ ಜೋಡಣೆಗಾಗಿ ಒಪ್ಪಂದ -  ರುಪೇ (ಭಾರತ) ಮತ್ತು ಜೈವಾನ್ (ಯುಎಇ)  

ಭೇಟಿಗಿಂತ ಮುಂಚಿತವಾಗಿ, ಆರ್ ಐಟಿಇಎಸ್   ಲಿಮಿಟೆಡ್ ಸಂಸ್ಥೆಯು ಅಬುಧಾಬಿ ಪೋರ್ಟ್ಸ್ ಕಂಪನಿ ಮತ್ತು ಗುಜರಾತ್ ಮ್ಯಾರಿಟೈಮ್ ಬೋರ್ಡ್ ಅಬುಧಾಬಿ ಪೋರ್ಟ್ಸ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಇವು ಬಂದರು ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ಉಭಯ ದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ನೆರವಾಗುತ್ತದೆ.

ಸುಭದ್ರವಾದ ಆರ್ಥಿಕ ಮತ್ತು ವಾಣಿಜ್ಯ ಸಹಕಾರವನ್ನು ಬಲಪಡಿಸಲು ಮತ್ತು ಸಹಯೋಗದ ಹೊಸ ಕ್ಷೇತ್ರಗಳನ್ನು ಅನ್ವೇಷಿಸಲು ಎರಡೂ ಕಡೆಯ ಪ್ರಯತ್ನಗಳನ್ನು ಇಬ್ಬರು ನಾಯಕರು ಅನುಮೋದಿಸಿದರು. ಮೇ 1, 2022 ರಂದು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಜಾರಿಗೆ ಬಂದ ನಂತರ ಯುಎಇ-ಭಾರತ ವ್ಯಾಪಾರ ಸಂಬಂಧಗಳಲ್ಲಿನ ದೃಢವಾದ ಬೆಳವಣಿಗೆಯನ್ನು ಅವರು ಸ್ವಾಗತಿಸಿದರು. ಪರಿಣಾಮವಾಗಿ, ಯುಎಇ ವರ್ಷ2022-23 ಕ್ಕೆ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದೆ ಮತ್ತು ಭಾರತದ ಎರಡನೇ ಅತಿ ದೊಡ್ಡ ರಫ್ತು ತಾಣವಾಗಿದೆ. 2022-23ರಲ್ಲಿ ದ್ವಿಪಕ್ಷೀಯ ವ್ಯಾಪಾರವು  85 ಶತಕೋಟಿ ಡಾಲರುಗಳಿಗೆ ಏರುವುದರೊಂದಿಗೆ ಭಾರತವು  ಯುಎಇ ದೇಶದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದೆ. ಈ ನಿಟ್ಟಿನಲ್ಲಿ, 2030ರ ಗುರಿಯ ವರ್ಷಕ್ಕಿಂತ ಮುಂಚಿತವಾಗಿ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರುಗಳಿಗೆ ಏರಿಸುವ ಬಗ್ಗೆ ನಾಯಕರು ಆಶಾವಾದವನ್ನು ವ್ಯಕ್ತಪಡಿಸಿದರು.  ದ್ವಿಪಕ್ಷೀಯ ವ್ಯಾಪಾರ ಪಾಲುದಾರಿಕೆಯಲ್ಲಿ ಮಹತ್ವದ  ಬೆಳವಣಿಗೆಯಾಗಿರುವ ನಿಂತಿರುವ ಯುಎಇ-ಇಂಡಿಯಾ ಸಿಇಪಿಎ ಕೌನ್ಸಿಲ್ (ಯುಐಸಿಸಿ) ನ ಔಪಚಾರಿಕ ಅನಾವರಣ ಕುರಿತು ಉಭಯ ನಾಯಕರು ಮಾತನಾಡಿದರು.

ದ್ವಿಪಕ್ಷೀಯ ಹೂಡಿಕೆ ಒಪ್ಪಂದವು ಎರಡೂ ದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸಲು ಪ್ರಮುಖವಾಗಿ ನೆರವಾಗುತ್ತವೆ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟರು.  ಯುಎಇ ದೇಶವು 2023ರಲ್ಲಿ ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ಹೂಡಿಕೆ ಮಾಡುವ ದೇಶವಾಗಿದ್ದು ಮತ್ತು ಒಟ್ಟಾರೆ ವಿದೇಶಿ ನೇರ ಹೂಡಿಕೆಯ ಏಳನೇ ಅತಿದೊಡ್ಡ ಮೂಲವಾಗಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಒಪ್ಪಂದವು ಅನನ್ಯತೆ ಮತ್ತು ಆಳವನ್ನು ಪ್ರತಿಬಿಂಬಿಸುವ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ಯುಎಇಯೊಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಎರಡಕ್ಕೂ ಭಾರತವು ಸಹಿ ಹಾಕಿದೆ ಎಂದು ಅವರು ಎತ್ತಿ ತೋರಿಸಿದರು.

ಜಾಗತಿಕ ಆರ್ಥಿಕ ಸಮೃದ್ಧಿ ಮತ್ತು ಚೇತರಿಕೆಯನ್ನು ಉತ್ತೇಜಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಸಮಾನವಾದ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಪ್ರಾಮುಖ್ಯತೆಯ ಬಗ್ಗೆ ಉಭಯ ನಾಯಕರು ಒತ್ತಿಹೇಳಿದರು ಮತ್ತು ಎಲ್ಲಾ ಡಬ್ಲ್ಯೂ ಟಿ ಒ ಸದಸ್ಯರ ಹಿತಾಸಕ್ತಿಗಳನ್ನು ಪೂರೈಸುವ ಮತ್ತು ನಿಯಮಗಳ-ಆಧಾರಿತ ವ್ಯಾಪಾರ ಕ್ರಮವನ್ನು ಬಲಪಡಿಸುವ ಅರ್ಥಪೂರ್ಣ ಸಾಧನೆಯನ್ನು ಸಾಧಿಸಲು 26 ರಿಂದ 29 ಫೆಬ್ರವರಿ 2024 ರವರೆಗೆ ಅಬುಧಾಬಿಯಲ್ಲಿ ನಡೆಯುತ್ತಿರುವ 13 ನೇ ವಿಶ್ವ ವಾಣಿಜ್ಯ ಸಂಸ್ಥೆ (WTO) ಯ ಸಚಿವರ ಸಮ್ಮೇಳನದ ಮಹತ್ವವನ್ನು ಹೇಳಿದರು.
 
ಜೆಬೆಲ್ ಅಲಿಯಲ್ಲಿ ಭಾರತ್ ಮಾರ್ಟ್ ಅನ್ನು ರಚಿಸುವ ನಿರ್ಧಾರವನ್ನು ನಾಯಕರು ಸ್ವಾಗತಿಸಿದರು, ಇದು ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಜೆಬೆಲ್ ಅಲಿ ಬಂದರಿನ ಆಯಕಟ್ಟಿನ ಸ್ಥಳವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸಿಇಪಿಎ ಬಳಕೆಯನ್ನು ಹೆಚ್ಚಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಭಾರತ್ ಮಾರ್ಟ್ ಭಾರತದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ ಅಂತರರಾಷ್ಟ್ರೀಯ ಖರೀದಿದಾರರನ್ನು ತಲುಪಲು ಮತ್ತು ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಯುರೇಷಿಯಾದಾದ್ಯಂತ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಪರಿಣಾಮಕಾರಿ ವೇದಿಕೆಯನ್ನು ಒದಗಿಸುವ ಮೂಲಕ ಬೆಂಬಲಿಸುತ್ತದೆ ಎಂದು ಅವರು ಗಮನಿಸಿದರು.

ಹಣಕಾಸು ವಲಯದಲ್ಲಿ ಆರ್ಥಿಕ ತೊಡಗಿಸಿಕೊಳ್ಳುವಿಕೆ ಹೆಚ್ಚಾಗುತ್ತಿರುವುದನ್ನು ನಾಯಕರು ಶ್ಲಾಘಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಯುಎಇ ದೇಶದ ಕಾರ್ಡ್ ಯೋಜನೆ ಜಯವಾನ್ ಗೆ ಚಾಲನೆ ನೀಡಿದ್ದಕ್ಕಾಗಿ  ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಅಭಿನಂದಿಸಿದರು.  ಇದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಯುಎಇಯ ಸೆಂಟ್ರಲ್ ಬ್ಯಾಂಕ್ ನೊಂದಿಗೆ ಹಂಚಿಕೊಂಡ ಡಿಜಿಟಲ್ ರುಪೇ ಸ್ಟಾಕ್ ನಿಂದ ಕಾರ್ಯನಿರ್ವಹಿಸುತ್ತದೆ. ದೇಶಗಳ ಪಾವತಿ ವೇದಿಕೆಗಳಾದ ಯುಪಿಐ (ಭಾರತ) ಮತ್ತು ಎಎಎನ್ ಐ (ಯುಎಇ) ಗಳನ್ನು ಪರಸ್ಪರ ಜೋಡಿಸುವ ಒಪ್ಪಂದವನ್ನು ಅವರು ಸ್ವಾಗತಿಸಿದರು, ಇದು ಉಭಯ ದೇಶಗಳ ನಡುವೆ ತಡೆರಹಿತ ಹಣದ ವಹಿವಾಟಿಗೆ ಅನುಕೂಲವಾಗಲಿದೆ.

ತೈಲ, ಅನಿಲ ಮತ್ತು ನವೀಕರಿಸಬಹುದಾದ ಇಂಧನವನ್ನು ಒಳಗೊಂಡಿರುವ ಇಂಧನ ವಲಯದಲ್ಲಿ ತಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಉಭಯ ದೇಶಗಳ ನಾಯಕರು ಚರ್ಚಿಸಿದರು. ಎಡಿಎನ್ ಒಸಿ  ಗ್ಯಾಸ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಜಿಎಐಎಲ್) ನಡುವೆ ಕ್ರಮವಾಗಿ 1.2 ಎಂಎಂಟಿಪಿಎ ಮತ್ತು 0.5 ಎಂಎಂಟಿಪಿಎ ಗಾಗಿ ಎರಡು ಹೊಸ ದೀರ್ಘಾವಧಿಯ ಎಲ್ ಎನ್ ಜಿ  ಪೂರೈಕೆ ಒಪ್ಪಂದಗಳಿಗೆ ಇತ್ತೀಚೆಗೆ ಸಹಿ ಹಾಕಿರುವುದನ್ನು ಅವರು  ಹೇಳಿದರು. ಈ ಒಪ್ಪಂದಗಳು ಉಭಯ ದೇಶಗಳ ನಡುವಿನ ಇಂಧನ ಪಾಲುದಾರಿಕೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿವೆ ಮತ್ತು ಅಂತಹ ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಲು ಇಬ್ಬರೂ ನಾಯಕರು ಕಂಪನಿಗಳನ್ನು ಪ್ರೋತ್ಸಾಹಿಸಿದರು. ಇದಲ್ಲದೆ, ಜಲಜನಕ, ಸೌರ ಶಕ್ತಿ ಮತ್ತು ಗ್ರಿಡ್ ಸಂಪರ್ಕದಲ್ಲಿ ತಮ್ಮ ಸಹಕಾರವನ್ನು ಮುಂದೆ ತರಲು ಇಬ್ಬರೂ ಒಪ್ಪಿಕೊಂಡರು.

 ಇಂದು ಸಹಿ ಹಾಕಲಾದ ಎಲೆಕ್ಟ್ರಿಸಿಟಿ ಇಂಟರ್ ಕನೆಕ್ಷನ್ ಮತ್ತು ಟ್ರೇಡ್ ಕ್ಷೇತ್ರದಲ್ಲಿನ ತಿಳುವಳಿಕೆ ಒಪ್ಪಂದವು ಉಭಯ ದೇಶಗಳ ನಡುವೆ ಇಂಧನ ಸಹಕಾರದ ಹೊಸ ಕ್ಷೇತ್ರವನ್ನು ತೆರೆಯುತ್ತದೆ ಎಂದು ನಾಯಕರು ಒಪ್ಪಿಕೊಂಡರು. ಸಿಒಪಿ26 ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದ  ಗ್ರೀನ್ ಗ್ರಿಡ್ ಗಳಾದ - ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ (OSOWOG) ಉಪಕ್ರಮಕ್ಕೆ ಚೈತನ್ಯ ತುಂಬುತ್ತದೆ. ತಿಳಿವಳಿಕೆ ಒಪ್ಪಂದವು ಎರಡೂ ದೇಶಗಳ ನಡುವೆ ಇಂಧನ ಸಹಕಾರ ಮತ್ತು ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಬುಧಾಬಿಯಲ್ಲಿ ಬಿಎಪಿಎಸ್ ಮಂದಿರ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಲ್ಲಿ ಅವರ ಉದಾತ್ತತೆ ಮತ್ತು ವೈಯಕ್ತಿಕ ಬೆಂಬಲಕ್ಕಾಗಿ ಅಧ್ಯಕ್ಷ ಅಧ್ಯಕ್ಷ  ಗೌರವಾನ್ವಿತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಧನ್ಯವಾದ ಅರ್ಪಿಸಿದರು. ಬಿಎಪಿಎಸ್ ಮಂದಿರವು ಯುಎಇ ಮತ್ತು ಭಾರತದ ಸ್ನೇಹದ ಆಚರಣೆಯಾಗಿದೆ, ಎರಡೂ ದೇಶಗಳನ್ನು ಒಂದುಗೂಡಿಸುವ ಆಳವಾದ ಬೇರೂರಿರುವ ಸಾಂಸ್ಕೃತಿಕ ಸಂಬಂಧಗಳು ಮತ್ತು ಸಾಮರಸ್ಯ, ಸಹನೆ ಮತ್ತು ಶಾಂತಿಯುತ ಸಹಬಾಳ್ವೆಗೆ ಯುಎಇಯ ಜಾಗತಿಕ ಬದ್ಧತೆಯ ಸಾಕಾರವಾಗಿದೆ ಎಂದು ಎರಡೂ ಕಡೆಯವರು ಗಮನಿಸಿದರು.

ಉಭಯ ದೇಶಗಳ ರಾಷ್ಟ್ರೀಯ ದಾಖಲೆಗಳ ನಡುವಿನ ಸಹಕಾರದ ಮಾರ್ಗದರ್ಶನ ಮತ್ತು ಗುಜರಾತಿನ ಲೋಥಾಲ್ನಲ್ಲಿರುವ ರಾಷ್ಟ್ರೀಯ ಸಾಗರ ಪರಂಪರೆಯ ಸಂಕೀರ್ಣದ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದವು  ಭಾರತ ಮತ್ತು ಯುಎಇ ಸಂಬಂಧದ ಶತಮಾನಗಳ ಹಳೆಯ ಬೇರುಗಳನ್ನು ಮರುಸ್ಥಾಪಿಸಲು ಮತ್ತು ಹಂಚಿಕೆಯ ಇತಿಹಾಸದ ಸಂಪತ್ತನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಇಬ್ಬರೂ ನಾಯಕರು ತೋರಿಸಿದರು.

ಮಧ್ಯಪ್ರಾಚ್ಯದಲ್ಲಿ ಮೊದಲ ಐಐಟಿ ಅಬುಧಾಬಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿಯಿಂದ ಇಂಧನ ಪರಿವರ್ತನೆ ಮತ್ತು ಸುಸ್ಥಿರತೆಯ ಮೊದಲ ಮಾಸ್ಟರ್ಸ್ ಕಾರ್ಯಕ್ರಮವನ್ನು ಉಭಯ ನಾಯಕರು ಶ್ಲಾಘಿಸಿದರು. ಸುಧಾರಿತ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ ಮತ್ತು ಸುಸ್ಥಿರ ಇಂಧನದ ಮೇಲೆ ಕೇಂದ್ರೀಕರಿಸಿ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸಹಕಾರಕ್ಕಾಗಿ ಎರಡೂ ದೇಶಗಳ ಹಂಚಿಕೆಯ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಉಭಯ ನಾಯಕರು ಯುಎಇ-ಇಂಡಿಯಾ ಕಲ್ಚರ್ ಕೌನ್ಸಿಲ್ ಫೋರಮ್ ಸ್ಥಾಪನೆಯ ಪ್ರಗತಿ ಮತ್ತು ಎರಡೂ ಕಡೆಯಿಂದ ಕೌನ್ಸಿಲ್ ನ ಸದಸ್ಯತ್ವವನ್ನು ಪರಿಶೀಲಿಸಿದರು. ಉಭಯ ರಾಷ್ಟ್ರಗಳಿಗೆ ಲಾಭದಾಯಕವಾದ ಆಳವಾದ ಪರಸ್ಪರ ತಿಳುವಳಿಕೆಯನ್ನು ರೂಪಿಸುವಲ್ಲಿ ಸಾಂಸ್ಕೃತಿಕ ಮತ್ತು ಜ್ಞಾನದ ರಾಜತಾಂತ್ರಿಕತೆಯ ಪಾತ್ರವನ್ನು ಉಭಯ ನಾಯಕರು ಒತ್ತಿ ಹೇಳಿದರು.

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್  (ಐಎಂಇಇಸಿ) ನಲ್ಲಿ ಭಾರತ ಮತ್ತು ಯುಎಇ ನಡುವೆ ಅಂತರ ಸರ್ಕಾರಿ ಚೌಕಟ್ಟನ್ನು ರಚಿಸುವ ತಿಳುವಳಿಕೆ ಒಪ್ಪಂದವನ್ನು ಉಭಯ ನಾಯಕರು ಸ್ವಾಗತಿಸಿದರು, ಇದು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವಲ್ಲಿ ಯುಎಇ ಮತ್ತು ಭಾರತವು ತೆಗೆದುಕೊಂಡ ಮುನ್ನಡೆಯನ್ನು ಪ್ರತಿಬಿಂಬಿಸುತ್ತದೆ.  ಚೌಕಟ್ಟಿನ ಮುಖ್ಯ ಅಂಶಗಳು ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಒಳಗೊಂಡಂತೆ ಲಾಜಿಸ್ಟಿಕ್ಸ್ ಪ್ಲಾಟ್ಫಾರ್ಮ್ ನ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಒಳಗೊಂಡಿವೆ ಮತ್ತು ಐಎಂಇಇಸಿ ಯನ್ನು ಸಕ್ರಿಯಗೊಳಿಸಲು ಎಲ್ಲಾ ರೀತಿಯ ಸಾಮಾನ್ಯ ಸರಕು, ಬೃಹತ್, ಕಂಟೇನರ್ ಗಳು ಮತ್ತು ಬೃಹತ್ ದ್ರವ ಪದಾರ್ಥಗಳನ್ನು ನಿರ್ವಹಿಸಲು ಪೂರೈಕೆ ಸರಪಳಿ ಸೇವೆಗಳನ್ನು ಒದಗಿಸುವುದು. ಐಎಂಇಇಸಿ ಉಪಕ್ರಮದ ಅಡಿಯಲ್ಲಿ ಇದು ಮೊದಲ ಒಪ್ಪಂದವಾಗಿದ್ದು, ಇದು ನವದೆಹಲಿಯಲ್ಲಿ ಜಿ20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಪ್ರಾರಂಭಿಸಲಾಗಿತ್ತು.

ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಸಹಕಾರವನ್ನು ಜಂಟಿಯಾಗಿ ಅನ್ವೇಷಿಸಲು, ಮೌಲ್ಯಮಾಪನ ಮಾಡಲು ಮತ್ತು ಪರಿಣಾಮ ನಿರ್ಧರಿಸಲು  ಮಾಡಿಕೊಂಡಿರುವ ತಿಳುವಳಿಕೆ ಒಪ್ಪಂದವನ್ನು  ಉಭಯ ದೇಶಗಳ ನಾಯಕರು ಸ್ವಾಗತಿಸಿದರು. ಯುಎಇ ಮತ್ತು ಭಾರತದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ನಿರ್ಮಿಸುವ ಮೂಲಕ ಬಲವಾದ ಮತ್ತು ಪರಿಣಾಮಕಾರಿ ಸಹಯೋಗವನ್ನು ರಚಿಸುವತ್ತ ಗಮನಹರಿಸಲು ಯುಎಇಯ ಹೂಡಿಕೆ ಸಚಿವಾಲಯ ಮತ್ತು ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಭಾರತದಲ್ಲಿ ಸೂಪರ್ ಕಂಪ್ಯೂಟರ್ ಕ್ಲಸ್ಟರ್ ಮತ್ತು ಭಾರತದಲ್ಲಿ ಡೇಟಾ ಸೆಂಟರ್ ಪ್ರಾಜೆಕ್ಟ್ ಅನ್ನು ಸ್ಥಾಪಿಸುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಮತ್ತು ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮಗೆ ಮತ್ತು ಭಾರತೀಯ ನಿಯೋಗಕ್ಕೆ ನೀಡಿದ ಆದರಾತಿಥ್ಯಕ್ಕಾಗಿ ಅಧ್ಯಕ್ಷ  ಗೌರವಾನ್ವಿತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ  ಧನ್ಯವಾದಗಳನ್ನು ಅರ್ಪಿಸಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi