1. ಮಾಲ್ಡವೀಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಡಿಸೆಂಬರ್ 16 ರಿಂದ 18ರ 2018 ವರೆಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.
2. ಅಧ್ಯಕ್ಷ ಸೋಲಿಹ್ 2018ರ ನವೆಂಬರ್ 17ರಂದು ಮಾಲ್ಡವೀಸ್ ಗಣರಾಜ್ಯದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶಿ ಭೇಟಿಯಾಗಿದೆ. ಮಾಲ್ಡವೀಸ್ ಅಧ್ಯಕ್ಷರ ಜೊತೆ ಅವರ ಪತ್ನಿ ಮೊದಲ ಮಹಿಳೆ ಫಜ್ನ ಅಹಮದ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಶಾಹೀದ್, ಹಣಕಾಸು ಸಚಿವ ಇಬ್ರಾಹಿಂ ಅಮೀರ್, ರಾಷ್ಟ್ರೀಯ ಯೋಜನಾ ಮತ್ತು ಮೂಲಸೌಕರ್ಯ ಸಚಿವ ಮೊಹಮ್ಮದ್ ಅಸ್ಲಾಂ, ಸಾರಿಗೆ ಮತ್ತು ನಾಗರಿಕ ವಿಮಾನಯಾನ ಸಚಿವ ಐಸತ್ ನಹುಲ್ಲಾ, ಆರ್ಥಿಕ ಅಭಿವೃದ್ಧಿ ಸಚಿವ ಉಜ್ ಫಯಾಜ್ ಇಸ್ಮಾಯಿಲ್, ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ವಾಣಿಜ್ಯ ನಿಯೋಗವನ್ನೊಳಗೊಂಡ ಉನ್ನತ ಮಟ್ಟದ ನಿಯೋಗ ಅವರ ಜೊತೆ ಇತ್ತು.
3. ಅಧ್ಯಕ್ಷ ಸೋಲಿಹ್ ಅವರು, ರಾಷ್ಟ್ರಪತಿ ಅವರ ವಿಶೇಷ ಅತಿಥಿಯಾಗಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಇದು ಭಾರತ ಮತ್ತು ಮಾಲ್ಡವೀಸ್ ನಡುವಿನ ನಿಕಟ ಬಾಂಧವ್ಯವನ್ನು ತೋರುತ್ತದೆ ಮತ್ತು ಎರಡು ಸರ್ಕಾರಗಳ ಪರಸ್ಪರ ಗೌರವ ಮತ್ತು ಆತ್ಮೀಯತೆಯನ್ನು ಪ್ರದರ್ಶಿಸುತ್ತದೆ.
4. ಭಾರತದ ರಾಷ್ಟ್ರಪತಿ ಅವರು, ಮಾಲ್ಡವೀಸ್ ಅಧ್ಯಕ್ಷರನ್ನು 2018ರ ಡಿಸೆಂಬರ್ 17ರಂದು ಭೇಟಿಯಾಗಿದ್ದರು ಮತ್ತು ಅದೇ ದಿನ ಸಂಜೆ ಅವರು ಅಧ್ಯಕ್ಷ ಸೋಲಿಹ್ ಅವರ ಗೌರವಾರ್ಥ ಔತಣಕೂಟ ಆಯೋಜಿಸಿದ್ದರು. ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಮಾಲ್ಡವೀಸ್ ಅಧ್ಯಕ್ಷರನ್ನು ಭೇಟಿಯಾಗಿದ್ದರು.
5. ಭಾರತದ ಪ್ರಧಾನಮಂತ್ರಿ ಮತ್ತು ಮಾಲ್ಡವೀಸ್ ಅಧ್ಯಕ್ಷರು 2018ರ ಡಿಸೆಂಬರ್ 17ರಂದು ಅಧಿಕೃತ ಮಾತುಕತೆಯನ್ನು ಆತ್ಮೀಯ, ಸೌಹಾರ್ದ ಮತ್ತು ಗೆಳೆತನದ ವಾತಾವರಣದಲ್ಲಿ ನಡೆಸಿದರು. ಇದು ಎರಡೂ ದೇಶಗಳ ನಡುವಿನ ವಿಶೇಷ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಮತ್ತು ಅವರ ಜೊತೆ ಬಂದಿದ್ದ ನಿಯೋಗಕ್ಕೆ ಅಧಿಕೃತ ಭೋಜನಕೂಟ ಆಯೋಜಿಸಿದ್ದರು.
6. ಅಧ್ಯಕ್ಷರ ಭೇಟಿ ವೇಳೆ, ಎರಡೂ ದೇಶಗಳಿಂದ ಈ ಕೆಳಗಿನ ಒಪ್ಪಂದಗಳು/ ತಿಳುವಳಿಕೆ ಪತ್ರ/ಜಂಟಿ ಘೋಷಣೆಗಳಿಗೆ ಸಹಿ ಹಾಕಿದವು.
· ವೀಸಾ ವ್ಯವಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಕುರಿತಾದ ಒಪ್ಪಂದ.
· ಸಾಂಸ್ಕೃತಿಕ ಸಹಕಾರ ಕುರಿತಾದ ತಿಳುವಳಿಕೆ ಪತ್ರ.
· ಕೃಷಿ ವ್ಯಾಪಾರಕ್ಕೆ ಪೂರಕ ವಾತಾವರಣ ಸುಧಾರಿಸುವ ಪರಸ್ಪರ ಸಹಕಾರ ಸಾಧಿಸುವ ಕುರಿತಾದ ತಿಳುವಳಿಕೆ ಪತ್ರ.
· ಮಾಹಿತಿ ಮತ್ತು ಸಂವಹನ ಹಾಗೂ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ವಲಯಗಳಲ್ಲಿ ಸಹಕಾರ ಹೊಂದುವ ಕುರಿತಾದ ಜಂಟಿ ಘೋಷಣೆ.
ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಲು ಅಗತ್ಯವಾದ ಸಾಂಸ್ಥಿಕ ಸಂಪರ್ಕಗಳನ್ನು ಸೃಷ್ಟಿಸಲು ಮತ್ತು ಈ ಕೆಳಗಿನ ವಲಯಗಳಲ್ಲಿ ಕೆಲಸ ಮಾಡಲು ಸಹಕಾರ ನೀತಿಯನ್ನು ಸ್ಥಾಪಿಸಲು ಒಪ್ಪಿದವು.
· ಆರೋಗ್ಯ ಸಹಕಾರ ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆ
· ಅಪರಾಧ ವಿಷಯಗಳಲ್ಲಿ ಪರಸ್ಪರ ಕಾನೂನಿನ ನೆರವು
· ಬಂಡವಾಳ ಹೂಡಿಕೆ ಉತ್ತೇಜನ
· ಮಾನವ ಸಂಪನ್ಮೂಲ ಅಭಿವೃದ್ಧಿ
· ಪ್ರವಾಸೋದ್ಯಮ
7. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇತ್ತೀಚೆಗೆ ನಡೆದ ಅಧ್ಯಕ್ಷ ಸೋಲಿಹ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವಿಶೇಷ ಅತಿಥಿಯಾಗಿ ಭೇಟಿನೀಡಿದ್ದನ್ನು ಆತ್ಮೀಯವಾಗಿ ನೆನಪು ಮಾಡಿಕೊಂಡರು. ಮಾಲ್ಡವೀಸ್ ನಡುವಿನ ಸಂಬಂಧಕ್ಕೆ ಭಾರತ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಅವರು ಪುನರುಚ್ಚರಿಸಿದರು.
8. ಉಭಯ ನಾಯಕರು ಭಾರತ ಮತ್ತು ಮಾಲ್ಡವೀಸ್ ನಡುವಿನ ಸಾಂಪ್ರದಾಯಿಕವಾಗಿ ಬಲಿಷ್ಠವಾಗಿರುವ ಮತ್ತು ಸ್ನೇಹ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಬಲವಾದ ಬದ್ಧತೆಯನ್ನು ಪುನರ್ ಪ್ರತಿಪಾದಿಸಿದರು. ಎರಡೂ ದೇಶಗಳ ಜನರ ನಡುವೆ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಐತಿಹಾಸಿಕ, ಭೌಗೋಳಿಕ ಮತ್ತು ಜನಾಂಗೀಯ ಸಂಬಂಧಗಳಿವೆ. ಅಲ್ಲದೆ, ಉಭಯ ದೇಶಗಳು ಪ್ರಜಾಪ್ರಭುತ್ವ, ಅಭಿವೃದ್ಧಿ ಮತ್ತು ಶಾಂತಿಯುತ ಸಹಬಾಳ್ವೆಯಲ್ಲಿ ಇಟ್ಟಿರುವ ಅಪರಿಮಿತ ನಂಬಿಕೆಯನ್ನು ಪುನರುಚ್ಚರಿಸಿದವು.
9. ಭಾರತದ ಪ್ರಧಾನಮಂತ್ರಿಯವರು ಯಶಸ್ವಿ ಮತ್ತು ಶಾಂತಿಯುತ ರೀತಿಯಲ್ಲಿ ಪ್ರಜಾಪ್ರಭುತ್ವ ಬದಲಾವಣೆ ತಂದಿದ್ದಕ್ಕೆ ಮಾಲ್ಡವೀಸ್ ಜನರನ್ನು ಅಭಿನಂದಿಸಿದರು. ಅವರು ಮಾಲ್ಡವೀಸ್ ಅಧ್ಯಕ್ಷರ ಸುಸ್ಥಿರ ಅಭಿವೃದ್ಧಿ, ಜನ ಕೇಂದ್ರಿತ ಆಡಳಿತ, ಅಧಿಕಾರ ವಿಕೇಂದ್ರೀಕರಣ ಮತ್ತು ಸಮಗ್ರ ಅಭಿವೃದ್ಧಿಯ ಮುನ್ನೋಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಸರ್ಕಾರದ ‘ನೆರೆಯ ರಾಷ್ಟ್ರ ಮೊದಲು’ ನೀತಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಾಲ್ಡವೀಸ್ ಗೆ ತನ್ನೆಲ್ಲ ಸಾಮಾಜಿಕ – ಆರ್ಥಿಕ ಅಭಿವೃದ್ಧಿಯ ಆಶೋತ್ತರಗಳನ್ನು ಸಾಕಾರಗೊಳಿಸಲು ಮತ್ತು ಪ್ರಜಾಪ್ರಭುತ್ವ ಬಲವರ್ಧನೆ ಹಾಗೂ ಸ್ವತಂತ್ರ ಸಂಸ್ಥೆಗಳ ರಕ್ಷಣೆಗೆ ಭಾರತ ಸಾಧ್ಯವಾದ ಎಲ್ಲ ನೆರವು ನೀಡಲಿದೆ ಎಂದು ಪುನರುಚ್ಛರಿಸಿದರು.
10. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು, 1.4 ಬಿಲಿಯನ್ ಅಮೆರಿಕನ್ ಡಾಲರ್ ಬಜೆಟ್ ಬೆಂಬಲ ಹಾಗೂ ಹಣಕಾಸಿನ ನೆರವನ್ನು ವಿನಾಯಿತಿ ದರದ ಸಾಲದ ರೂಪದಲ್ಲಿ ನೀಡುವುದಾಗಿ ಪ್ರಕಟಿಸಿದರು. ಮಾಲ್ಡವೀಸ್ ನ ಸಾಮಾಜಿಕ – ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಈಡೇರಿಸಿಕೊಳ್ಳಲು ಈ ಹಣವನ್ನು ರಿಯಾಯಿತಿ ದರದ ಸಾಲದ ರೂಪದಲ್ಲಿ ನೀಡುವುದಾಗಿ ತಿಳಿಸಿದರು.
11. ಅಧ್ಯಕ್ಷ ಸೋಲಿಹ್ ಅವರು, ‘ಭಾರತ-ಮೊದಲ ನೀತಿ’ಗೆ ತಮ್ಮ ಸರ್ಕಾರದ ಬದ್ಧವಿದೆ ಎಂದು ಪ್ರಕಟಿಸಿ, ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುವ ಬದ್ಧತೆ ವ್ಯಕ್ತಪಡಿಸಿದರು. ಮಾಲ್ಡವೀಸ್ ಗೆ ಭಾರತ ಸರ್ಕಾರ ಉದಾರವಾಗಿ ನೆರವು ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಸತಿ, ಮೂಲಸೌಕರ್ಯ, ನೀರು ಮತ್ತು ದ್ವೀಪದ ಹೊರಗೆ ಒಳಚರಂಡಿ ವ್ಯವಸ್ಥೆ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಮತ್ತಿತರ ವಲಯಗಳಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕಾರ ಸಾಧಿಸಬಹುದಾಗಿದೆ ಎಂಬುದನ್ನು ಗುರುತಿಸಿರುವುದಾಗಿ ತಿಳಿಸಿದರು.
12. ಉಭಯ ನಾಯಕರು ಎರಡೂ ದೇಶಗಳ ನಡುವೆ ಮೂಲಸೌಕರ್ಯ ಹೆಚ್ಚಿಸುವ ಮೂಲಕ ಸಂಪರ್ಕ ಸುಧಾರಣೆ ತರುವ ಅಗತ್ಯತೆಯನ್ನು ಒತ್ತಿ ಹೇಳಿದರು. ಆ ಮೂಲಕ ಸರಕು ಮತ್ತು ಸೇವೆಗಳ ಮಾಹಿತಿ, ಆದರ್ಶ, ಸಂಸ್ಕೃತಿ ಮತ್ತು ಜನರ ವಿನಿಮಯಕ್ಕೆ ಉತ್ತೇಜನ ಸಿಗಲಿದೆ ಎಂದರು.
13. ಪ್ರಧಾನಮಂತ್ರಿ ಅವರು, ಭಾರತ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಒಂದು ಸಾವಿರ ಹೆಚ್ಚುವರಿ ಸ್ಲಾಟ್ ಗಳನ್ನು ನಾನಾ ವಲಯಗಳಲ್ಲಿ ತರಬೇತಿ ಮತ್ತು ಸಾಮರ್ಥ್ಯವೃದ್ಧಿಗೆ ಒದಗಿಸಲಿದೆ. ಅವುಗಳಲ್ಲಿ ನ್ಯಾಯಾಂಗ, ಪೊಲೀಸ್ ವ್ಯವಸ್ಥೆ, ಕಾನೂನು ಜಾರಿ, ಲೆಕ್ಕ ಪರಿಶೋಧನೆ ಮತ್ತು ಹಣಕಾಸು ನಿರ್ವಹಣೆ, ಸ್ಥಳೀಯ ಸರ್ಕಾರ, ಸಮುದಾಯದ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಇ-ಆಡಳಿತ, ಕ್ರೀಡೆ, ಮಾಧ್ಯಮ, ಯುವಜನ ಮತ್ತು ಮಹಿಳಾ ಸಬಲೀಕರಣ, ನಾಯಕತ್ವ, ಆವಿಷ್ಕಾರ ಮತ್ತು ಉದ್ಯಮಶೀಲತೆ, ಕಲೆ ಮತ್ತು ಸಂಸ್ಕೃತಿ ವಲಯಗಳೂ ಸೇರಿವೆ.
14. ಜನರ ನಡುವಿನ ವಿನಿಮಯ ಮತ್ತು ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ಅಗತ್ಯತೆಯನ್ನು ಗುರುತಿಸಿದ ಉಭಯ ನಾಯಕರು ಇಂದು ಸಹಿ ಹಾಕಲಾದ ಹೊಸ ವೀಸಾಗೆ ನೆರವು ನೀಡುವ ಒಪ್ಪಂದವನ್ನು ಸ್ವಾಗತಿಸಿದರು. ಪ್ರಧಾನಮಂತ್ರಿ ಅವರು, ಈ ಒಪ್ಪಂದ ಎರಡೂ ದೇಶಗಳ ಸಾಮಾನ್ಯ ಆತಂಕಗಳನ್ನು ಬಗೆಹರಿಸಲಿವೆ ಮತ್ತು ಇದರಿಂದ ಜನರ ನಡುವಿನ ಸಂಪರ್ಕ ವೃದ್ಧಿಯಾಗಲಿದೆ ಎಂದರು. ಭಾರತ ಕೆಲವೇ ಕೆಲವು ರಾಷ್ಟ್ರಗಳೊಂದಿಗೆ ಉಚಿತ ವೀಸಾ ಒಪ್ಪಂದ ಹೊಂದಿದ್ದು, ಅವುಗಳಲ್ಲಿ ಮಾಲ್ಡವೀಸ್ ಒಂದಾಗಿದೆ.
15. ಈ ಒಪ್ಪಂದಕ್ಕೆ ಸಹಿ ಹಾಕಿರುವ ಬಗ್ಗೆ ಅಧ್ಯಕ್ಷ ಸೋಲಿಹ್ ತೀವ್ರ ಸಂತೋಷ ವ್ಯಕ್ತಪಡಿಸಿದ್ದು, ಇದರಿಂದಾಗಿ ಶಾಲಾ ಶಿಕ್ಷಣಕ್ಕಾಗಿ ಮಕ್ಕಳನ್ನು ಭಾರತಕ್ಕೆ ಕಳುಹಿಸುವ ಮಾಲ್ಡವೀಸ್ ಪ್ರಜೆಗಳು, ಇನ್ನು ಅವರ ಜೊತೆ ಭಾರತಕ್ಕೆ ಸುಲಭವಾಗಿ ಬರಬಹುದಾಗಿದೆ ಎಂದರು. ಈ ಒಪ್ಪಂದದಿಂದಾಗಿ ಮಾಲ್ಡವೀಸ್ ಪ್ರಜೆಗಳು ಮತ್ತು ಅವರ ಕುಟುಂಬದವರಿಗೆ ಸುಲಭವಾಗಿ ವೀಸಾ ವ್ಯವಸ್ಥೆ ದೊರಕಲಿದ್ದು, ಅವರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರಬಹುದಾಗಿದೆ. ಈ ಒಪ್ಪಂದ ಉಭಯ ದೇಶಗಳ ನಡುವೆ ಜನರು ಯಾವುದೇ ಅಡೆತಡೆ ಇಲ್ಲದೆ ಸಂಚಾರ ಮಾಡುವುದನ್ನು ಖಾತ್ರಿಪಡಿಸುತ್ತದೆ ಎಂದು ಉಭಯ ನಾಯಕರು ಪ್ರತಿಪಾದಿಸಿದರು.
16. ಉಭಯ ನಾಯಕರು ಇಂಡಿಯನ್ ಓಶನ್ ಪ್ರಾಂತ್ಯದಲ್ಲಿ ಶಾಂತಿ ಮತ್ತು ಭದ್ರತೆ ಕಾಯ್ದುಕೊಳ್ಳುವ ಪ್ರಾಮುಖ್ಯತೆಯನ್ನು ಒಪ್ಪಿಕೊಂಡರು. ಈ ಪ್ರಾಂತ್ಯದೊಂದಿಗೆ ಎರಡೂ ದೇಶಗಳ ಭದ್ರತಾ ಹಿತಾಸಕ್ತಿಗಳು ಗುರುತಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಾಂತ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಇಬ್ಬರೂ ಪರಸ್ಪರ ಕೆಲಸ ಮಾಡುವ ಮತ್ತು ತಮ್ಮ ತಮ್ಮ ಭೂಪ್ರದೇಶದಲ್ಲಿ ಪರಸ್ಪರ ಸಹಾಯವಾಗುವ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಸಮ್ಮತಿಸಿದವು. ಇಂಡಿಯನ್ ಓಶನ್ (ಹಿಂದೂ ಮಹಾಸಾಗರ) ಪ್ರಾಂತ್ಯದಲ್ಲಿ ಕಡಲ ಭದ್ರತೆಯನ್ನು ಕಾಯ್ದುಕೊಳ್ಳಲು ಗಸ್ತು ನಿರ್ವಹಣೆ, ವೈಮಾನಿಕ ಸಮೀಕ್ಷೆ, ಮಾಹಿತಿ ವಿನಿಮಯ ಮತ್ತು ಸಾಮರ್ಥ್ಯವೃದ್ಧಿ ಮತ್ತಿತರ ಸಮನ್ವಯಿತ ಕೆಲಸಗಳ ಮೂಲಕ ಭದ್ರತೆ ಕಾಯ್ದುಕೊಳ್ಳಲು ಸಹಕಾರ ಸಂಬಂಧ ಬಲವರ್ಧನೆಗೆ ಉಭಯ ನಾಯಕರು ಒಪ್ಪಿದರು.
17. ಪ್ರಾಂತ್ಯದೊಳಗೆ ಮತ್ತು ಹೊರಗೆ ಎಲ್ಲ ಬಗೆಯ, ಎಲ್ಲ ವಿಧದ ಭಯೋತ್ಪಾದನೆಯನ್ನು ಹತ್ತಿಕ್ಕಲು ಹೆಚ್ಚಿನ ಬದ್ಧತೆ ಮತ್ತು ಸಹಕಾರ ಹೆಚ್ಚಳಕ್ಕೆ ಉಭಯ ನಾಯಕರು ಸಮ್ಮತಿ ಸೂಚಿಸಿದರು. ಅಲ್ಲದೆ ಮಾನವ ಕಳ್ಳಸಾಗಣೆ, ಮಾದಕ ದ್ರವ್ಯ ಕಳ್ಳಸಾಗಣೆ, ಮಾದಕವಸ್ತುಗಳ ಕಳ್ಳಸಾಗಣೆ, ಸಂಘಟಿತ ಅಪರಾಧ, ಭಯೋತ್ಪಾದನೆ, ಪೈರಸಿ ಸಾಮಾನ್ಯ ಸಮಸ್ಯೆಗಳನ್ನು ಹತ್ತಿಕ್ಕುವಲ್ಲಿ ದ್ವಿಪಕ್ಷೀಯ ಸಹಕಾರ ಬಲವರ್ಧನೆಗೆ ಉಭಯ ದೇಶಗಳು ಒಪ್ಪಿದವು. ಅಲ್ಲದೆ, ಮಾಲ್ಡವೀಸ್ ಪೊಲೀಸ್ ಸೇವೆಗಳು ಮತ್ತು ಮಾಲ್ಡವೀಸ್ ರಾಷ್ಟ್ರೀಯ ರಕ್ಷಣಾ ಪಡೆಗಳ ತರಬೇತಿ ಮತ್ತು ಸಾಮರ್ಥ್ಯವೃದ್ಧಿ ನಿಟ್ಟಿನಲ್ಲಿ ಸಹಕಾರ ಹೆಚ್ಚಳಕ್ಕೂ ಸಹ ನಿರ್ಧರಿಸಿದವು.
18. ಉಭಯ ನಾಯಕರು ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಸಂಬಂಧಗಳ ಉತ್ತೇಜನ ಪ್ರಯತ್ನಗಳನ್ನು ಅವಲೋಕಿಸಿದರು. ಭಾರತದ ಪ್ರಧಾನಮಂತ್ರಿಗಳು, ಭಾರತೀಯ ಕಂಪನಿಗಳು, ಮಾಲ್ಡವೀಸ್ ನಲ್ಲಿ ಬೇರೆ ಬೇರೆ ವಲಯಗಳಲ್ಲಿ ಹೂಡಿಕೆ ಮಾಡುತ್ತಿರುವುದು ಎರಡೂ ರಾಷ್ಟ್ರಗಳ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು. ಮಾಲ್ಡವೀಸ್ ಸರ್ಕಾರದ ಪಾರದರ್ಶಕ ಹೊಣೆಗಾರಿಕೆಯ ಮತ್ತು ಆಡಳಿತ ಆಧಾರಿತ ದೂರದೃಷ್ಟಿ ಭಾರತೀಯ ವಾಣಿಜ್ಯೋದ್ಯಮಿಗಳಿಗೆ ಮತ್ತೆ ವಿಶ್ವಾಸ ಮೂಡಿಸುವಲ್ಲಿ ಸೂಕ್ತ ಸಂದೇಶ ರವಾನಿಸಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಉಭಯ ನಾಯಕರು, ಮೀನುಗಾರಿಕೆ ಅಭಿವೃದ್ಧಿ, ಪ್ರವಾಸೋದ್ಯಮ, ಸಾರಿಗೆ, ಸಂಪರ್ಕ, ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಸಂವಹನ ವಲಯಗಳಲ್ಲಿ ನಿಕಟ ಆರ್ಥಿಕ ಸಹಕಾರ ಉತ್ತೇಜನಕ್ಕೆ ಉಭಯ ನಾಯಕರು ಒಪ್ಪಿದರು.
19. ಉಭಯ ನಾಯಕರು ಜಾಗತಿಕ ಸವಾಲುಗಳನ್ನು ಎದುರಿಸಲು ಪರಿಣಾಮಕಾರಿ ಬಹುಹಂತದ ಪರಿಣಾಮಕಾರಿ ವ್ಯವಸ್ಥೆಯ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪುನಶ್ಚೇತನ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಸ್ತರಣೆ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ತರುವ ಅಗತ್ಯವಿದೆ. ಎಂದು ಹೇಳಿದರು.
20. ಮಾಲ್ಡವೀಸ್ ಅಧ್ಯಕ್ಷರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಗೆ ಮತ್ತು ಅದರಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಲು ತಮ್ಮ ದೇಶದ ಬೆಂಬಲವಿದೆ ಎಂದು ಪುನರುಚ್ಚರಿಸಿದರು. 2020-21ನೇ ಸಾಲಿನಲ್ಲಿ ಭಾರತವನ್ನು ಕಾಯಂಯೇತರ ಸದಸ್ಯ ಸ್ಥಾನಕ್ಕೆ ಮಾಲ್ಡವೀಸ್ ತನ್ನ ಬೆಂಬಲ ವ್ಯಕ್ತಪಡಿಸಿತು.
21. ಭಾರತದ ಪ್ರಧಾನಮಂತ್ರಿಗಳು, ಮಾಲ್ಡವೀಸ್ ನ ಮತ್ತೆ ಕಾಮನ್ವೆಲ್ತ್ ಸೇರುವ ನಿರ್ಧಾರವನ್ನು ಸ್ವಾಗತಿಸಿದರು. ಇಂಡಿಯನ್ ಓಶನ್ ರಿಮ್ ಅಸೋಸಿಯೇಶನ್ ನ ನೂತನ ಸದಸ್ಯ ರಾಷ್ಟ್ರವಾಗಿರುವ ಮಾಲ್ಡವೀಸ್ ಕ್ರಮವನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು.
22. ಹವಾಮಾನ ವೈಪರೀತ್ಯ ಪರಿಣಾಮಗಳನ್ನು ವಿಶೇಷವಾಗಿ ಅಭಿವೃದ್ಧಿ ರಾಷ್ಟ್ರಗಳು ಮತ್ತು ಸಣ್ಣ ದ್ವೀಪ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಎದುರಿಸುವ ಅಗತ್ಯತೆಯನ್ನು ಉಭಯ ನಾಯಕರು ಒಪ್ಪಿದರು ಮತ್ತು ಹವಾಮಾನ ವೈಪರೀತ್ಯ ಕುರಿತಂತೆ ಜಾಗತಿಕ ಪ್ರತಿಕ್ರಿಯೆಯನ್ನು ಬಲವರ್ಧನೆಗೊಳಿಸಲು ಪ್ಯಾರಿಸ್ ಒಪ್ಪಂದ ಮತ್ತು ಯುಎನ್ಎಫ್ ಸಿಸಿಸಿ ಮೂಲಕ ಕಾರ್ಯನಿರ್ವಹಿಸಲು ಸಮ್ಮತಿಸಿದವು.
23. ಅಂತಾರಾಷ್ಟ್ರೀಯ ಹಣಕಾಸು ನಿರ್ಧಾರ ಕೈಗೊಳ್ಳುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲ್ಗೊಳ್ಳುವಿಕೆ ಮತ್ತು ಅವುಗಳ ಧ್ವನಿ ಹೆಚ್ಚಳಕ್ಕೆ ಬಹುಹಂತದ ಹಣಕಾಸು ಸಂಸ್ಥೆಗಳ ಸುಧಾರಣೆ ಮತ್ತು ಬಲವರ್ಧನೆ ಅಗತ್ಯತೆಯನ್ನು ಉಭಯ ನಾಯಕರು ಬಲವಾಗಿ ಪ್ರತಿಪಾದಿಸಿದರು.
24. ತಮ್ಮ ಭೇಟಿಯ ವೇಳೆ ತಮಗೆ ಹಾಗೂ ತಮ್ಮ ನಿಯೋಗದ ಸದಸ್ಯರಿಗೆ ಆತ್ಮೀಯ ಸೌಹಾರ್ದಯುತ ಮತ್ತು ಮನಃಪೂರ್ವಕ ಆತಿಥ್ಯ ನೀಡಿದ್ದಕ್ಕಾಗಿ ಮಾಲ್ಡವೀಸ್ ಅಧ್ಯಕ್ಷರು, ಭಾರತದ ಪ್ರಧಾನಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಿದರು.
25. ಭಾರತದ ರಾಷ್ಟ್ರಪತಿಯವರನ್ನು ಮಾಲ್ಡವೀಸ್ ಗೆ ಭೇಟಿ ನೀಡುವಂತೆ ಮಾಲ್ಡವೀಸ್ ಅಧ್ಯಕ್ಷರು ಆಹ್ವಾನ ನೀಡಿದರು. ಅದೇ ರೀತಿ ಭಾರತದ ಪ್ರಧಾನಮಂತ್ರಿಯವರಿಗೂ ಸಹ ಮಾಲ್ಡವೀಸ್ ಗೆ ಭೇಟಿ ನೀಡುವಂತೆ ಮಾಲ್ಡವೀಸ್ ಅಧ್ಯಕ್ಷರು ಆಮಂತ್ರಣ ನೀಡಿದರು, ಪ್ರಧಾನಮಂತ್ರಿ ಅವರು ಅದಕ್ಕೆ ಸಮ್ಮತಿಸಿದರು.