ಬಾಂಗ್ಲಾದೇಶದ ಜನತಾ ಗಣರಾಜ್ಯ ಸರಕಾರದ ಪ್ರಧಾನ ಮಂತ್ರಿ ಗೌರವಾನ್ವಿತ ಶೇಖ್ ಹಸೀನಾ ಅವರ ಆಹ್ವಾನದ ಮೇರೆಗೆ ಭಾರತೀಯ ಗಣತಂತ್ರದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮಾರ್ಚ್ 26 ಹಾಗು 27 - ಎರಡುದಿನಗಳ ಅವಧಿಗೆ ಬಾಂಗ್ಲಾದೇಶಕ್ಕೆ ಅಧಿಕೃತ ಭೇಟಿ ನೀಡಿ ಬಾಂಗ್ಲಾ ದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದಲ್ಲಿ ಮತ್ತು ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮಶತಮಾನೋತ್ಸವ ಹಾಗು ಭಾರತ ಮತ್ತು ಬಾಂಗ್ಲಾದೇಶ ನಡುವೆ ರಾಜತಾಂತ್ರಿಕ ಬಾಂಧವ್ಯಗಳು ಸ್ಥಾಪನೆಯಾದ ಸುವರ್ಣ ಮಹೋತ್ಸವ ಆಚರಣಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಈ ಭೇಟಿಯು ಬಾಂಗ್ಲಾದೇಶ ಮತ್ತು ಭಾರತದ ನಡುವಣ ಅರ್ಧ ಶತಮಾನೋತ್ಸವದ ಸಹಭಾಗಿತ್ವವನ್ನು ಸಂಕೇತಿಸಿದೆ. ಈ ಅವಧಿಯಲ್ಲಿ ಉಭಯ ದೇಶಗಳ ನಡುವೆ ಸಹಭಾಗಿತ್ವ ಬಲಗೊಂಡಿದೆ, ಪಕ್ವವಾಗಿದೆ ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಸಂಬಂಧಿಸಿ ಇಡೀ ವಲಯಕ್ಕೆ ಒಂದು ಮಾದರಿಯಾಗಿ ಮೂಡಿಬಂದಿದೆ.
ತಮ್ಮ ಭೇಟಿಯಲ್ಲಿ ಭಾರತದ ಪ್ರಧಾನ ಮಂತ್ರಿ ಅವರು ಬಾಂಗ್ಲಾದೇಶದ ಗೌರವಾನ್ವಿತ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಮೊಹಮ್ಮದ್ ಅಬ್ದುಲ್ ಹಮೀದ್ ಅವರನ್ನು 2021ರ ಮಾರ್ಚ್ 27ರಂದು ಭೇಟಿಯಾದರು.ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಪರೇಡ್ ಮೈದಾನದಲ್ಲಿ 2021ರ ಮಾರ್ಚ್ 26ರಂದು ನಡೆದ ರಾಷ್ಟ್ರೀಯ ದಿನಾಚರಣೆ, ಮತ್ತು ಸುವರ್ಣ ಮಹೋತ್ಸವ ಆಚರಣೆ ಮತ್ತು ಮುಜೀಬ್ ಬೋರ್ಸೋ ಕಾರ್ಯಕ್ರಮಗಳಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡರು. ಬಾಂಗ್ಲಾದೇಶ ವಿದೇಶಾಂಗ ಸಚಿವ ಡಾ. ಎ.ಕೆ. ಅಬ್ದುಲ್ ಮೊಮೆನ್ ಅವರು ಭಾರತದ ಪ್ರಧಾನ ಮಂತ್ರಿ ಅವರನ್ನು 2021ರ ಮಾರ್ಚ್ 26ರಂದು ಭೇಟಿಯಾದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಕೊಡುಗೆ ಸ್ಮರಿಸುವ ಸಾವರದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು. ಅವರು ಗೋಪಾಲಗಂಜ್ ನ ತುಂಗಿಪಾರಾದಲ್ಲಿರುವ ಬಂಗಬಂಧು ಮೌಸೋಲಿಯಂನಲ್ಲಿ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕಕ್ಕೂ ಗೌರವ ಸಲ್ಲಿಸಿದರು.

ಭಾರತ-ಬಾಂಗ್ಲಾದೇಶ ಸಹಭಾಗಿತ್ವ

ಉಭಯ ದೇಶಗಳ ಪ್ರಧಾನಮಂತ್ರಿಗಳೂ 2021ರ ಮಾರ್ಚ್ 27ರಂದು ಚಹಾ ಕೂಟದಲ್ಲಿ ಪಾಲ್ಗೊಂಡರು ಆ ಬಳಿಕ ನಿಯೋಗ ಮಟ್ಟದ ಮಾತುಕತೆಗಳು ನಡೆದವು. ಉಭಯ ಮಾತುಕತೆಗಳೂ ಬಹಳ ಸೌಹಾರ್ದಯುತವಾಗಿ ಮತ್ತು ಹೃದಯಸ್ಪರ್ಷಿಯಾಗಿ ನಡೆದವು. ದ್ವಿಪಕ್ಷೀಯ ಸಂಬಂಧಗಳು ಅತ್ಯುತ್ತಮ ಸ್ಥಿತಿಯಲ್ಲಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವಣ ಸಂಬಂಧಗಳು ಆಳವಾದ ಚಾರಿತ್ರಿಕ ಮತ್ತು ಬ್ರಾತೃತ್ವದ ನೆಲೆಯನ್ನು ಆಧರಿಸಿದ್ದು, ಅವು ಸಮಾನತೆ, ನಂಬಿಕೆ ಮತ್ತು ವ್ಯೂಹಾತ್ಮಕ ಸಹಭಾಗಿತ್ವವಾಗಿಯೂ ಎಲ್ಲಾ ಆಯಾಮಗಳನ್ನು ಒಳಗೊಂಡಿವೆ
ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಚಾಲ್ತಿಯಲ್ಲಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಡುವೆಯೂ ತಮ್ಮ ಮೊಟ್ಟ ಮೊದಲ ವಿದೇಶ ಪ್ರವಾಸದಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದುದಕ್ಕಾಗಿ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡುದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಸರಕಾರ ಮತ್ತು ಭಾರತದ ಜನತೆ ನೀಡಿದ ಮುಕ್ತ ಮನಸ್ಸಿನ ಬೆಂಬಲವನ್ನು ಕೊಂಡಾಡಿದರಲ್ಲದೆ ಕೃತಜ್ಞತೆ ಸೂಚಿಸಿದರು. ಈ ಬೃಹತ್ ವಿಮೋಚನಾ ಯುದ್ಧದ ಸ್ಮರಣೆಯನ್ನು ಕಾಪಿಡುವ ಅಗತ್ಯವನ್ನು ಇಬ್ಬರು ಪ್ರಧಾನ ಮಂತ್ರಿಗಳೂ ಮನಗಂಡರು. 1971ರಲ್ಲಿ ನಡೆದ ಬಾಂಗ್ಲಾದೇಶದ ವಿಮೋಚನಾ ಹೋರಾಟದಲ್ಲಿ ಬಲಿದಾನ ಮಾಡಿದ ಭಾರತೀಯ ಸಶಸ್ತ್ರ ಪಡೆಗಳ ವೀರ ಸೈನಿಕರ ಸ್ಮರಣಾರ್ಥ ಅಶುಗಂಜ್ ನಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡುವ ನಿರ್ಧಾರಕ್ಕಾಗಿ ಬಾಂಗ್ಲಾದೇಶದ ಸರಕಾರಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದರು.

ಮುಜೀಬ್ ಬೊರೊಸೋ ಸಂದರ್ಭದಲ್ಲಿ ಮತ್ತು ಬಾಂಗ್ಲಾ ದೇಶದ ಸ್ವಾತಂತ್ರ್ಯೋತ್ಸವದ 50 ನೇ ವಾರ್ಷಿಕೋತ್ಸವ ಹಾಗು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಗಾಗಿ ಬಾಂಗ್ಲಾದೇಶದ ಜನತೆಯನ್ನು ಹೃದಯಸ್ಪರ್ಶಿಯಾಗಿ ಅಭಿನಂದಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಶೇಖ್ ಹಸೀನಾ ನಾಯಕತ್ವದಲ್ಲಿ ಬಾಂಗ್ಲಾದೇಶವು ಮಾನವ ಅಭಿವೃದ್ಧಿಯಲ್ಲಿ, ಬಡತನ ನಿವಾರಣೆಯಲ್ಲಿ, ಭಯೋತ್ಪಾದನೆ ದಮನದಲ್ಲಿ ಶ್ಲಾಘನೀಯ ಸಾಧನೆ ಮಾಡಿರುವುದಕ್ಕೆ ಮತ್ತು ಮತ್ತು ಗಮನೀಯ ಆರ್ಥಿಕ ಪ್ರಗತಿಯನ್ನು ಸಾಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರೂ ವಿವಿಧ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಭಾರತವು ನಿರಂತರ ಮುಂದುವರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
2019 ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತು 2020ರ ಡಿಸೆಂಬರ್ 17ರಂದು ಆಯೋಜಿಸಲಾಗಿದ್ದ ವರ್ಚುವಲ್ ಶೃಂಗದಲ್ಲಿ ಕೈಗೊಂಡ ವಿವಿಧ ನಿರ್ಧಾರಗಳ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಉಭಯ ಕಡೆಯವರೂ 2020ರ ಸೆಪ್ಟೆಂಬರ್ ತಿಂಗಳಲ್ಲಿ ಜಂಟಿ ಸಲಹಾ ಆಯೋಗದ ಆರನೆಯ ಸಭೆಯನ್ನು ಯಶಸ್ವಿಯಾಗಿ ನಡೆಸಿರುವುದನ್ನು ಸ್ಮರಿಸಿಕೊಂಡರಲ್ಲದೆ 2021ರ ಮಾರ್ಚ್ 4 ರಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಢಾಕಾಕ್ಕೆ ನೀಡಿದ ಭೇಟಿಯನ್ನು ಸ್ಮರಿಸಿಕೊಂಡರು.

ಉಭಯ ಕಡೆಯವರಲ್ಲೂ ಸಹಕಾರದ ವಿವಿಧ ಕ್ಷೇತ್ರಗಳ ಬಗ್ಗೆ ಉತ್ತಮ ತಿಳುವಳಿಕೆ ಮೂಡಿಸಲು ಕೈಗೊಳ್ಳಲಾಗುವ ಉನ್ನತ ಮಟ್ಟದ ವಿನಿಮಯ ಭೇಟಿಗಳ ಬಗ್ಗೆ ಇಬ್ಬರು ಪ್ರಧಾನ ಮಂತ್ರಿಗಳೂ ತೃಪ್ತಿ ವ್ಯಕ್ತಪಡಿಸಿದರು. ದ್ವಿಪಕ್ಷೀಯ ಸಂಬಂಧಗಳನ್ನು ಪೋಷಿಸಲು ಅದರಲ್ಲೂ ನಿರ್ದಿಷ್ಟವಾಗಿ ಕೋವಿಡ್ ಅವಧಿಯಲ್ಲಿ ನಿಯಮಿತವಾಗಿ ವಲಯವಾರು ಸಾಂಸ್ಥಿಕ ವ್ಯವಸ್ಥೆಗಳ ಸಭೆಯನ್ನು ನಿಯಮಿತವಾಗಿ ನಡೆಸುತ್ತಿದ್ದುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಾರಿತ್ರಿಕ ಸಂಪರ್ಕಗಳ ಜಂಟಿ ಆಚರಣೆಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಧುನಿಕ ಕಾಲದ ಪ್ರಮುಖ ಮತ್ತು ಶ್ರೇಷ್ಠ ನಾಯಕರಾದ ಬಂಗಬಂಧು ಮುಜಿಬುರ್ ರೆಹಮಾನ್ ಅವರ ಧೈರ್ಯ ಮತ್ತು ಬಂಗ್ಲಾದೇಶವು ಸಾರ್ವಭೌಮ ರಾಷ್ಟ್ರವಾಗಿ ಮೂಡಿ ಬರಲು ನೀಡಿದ ಮಹತ್ವದ ಕೊಡುಗೆಗಾಗಿ ಸ್ಮರಿಸಲ್ಪಡುತ್ತಾರೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಬಂಗಬಂಧು ಅವರು ಶಾಂತಿ, ಭದ್ರತೆ ಮತ್ತು ಈ ವಲಯದಲ್ಲಿ ಅಭಿವೃದ್ಧಿ ಸಾಧಿಸಲು ನೀಡಿದ ಕೊಡುಗೆಯನ್ನು ಪ್ರಧಾನ ಮಂತ್ರಿ ಸ್ಮರಿಸಿಕೊಂಡರು. 2020ರ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ಪರಿವರ್ತನೆಗಾಗಿ ಅಹಿಂಸಾ ಮತ್ತು ಇತರ ಗಾಂಧಿ ಮಾರ್ಗಗಳ ಮೂಲಕ ಸಾಧಿಸಿರುವುದನ್ನು ಪರಿಗಣಿಸಿ ಅವರಿಗೆ ಪುರಸ್ಕರಿಸಿರುವುದಕ್ಕೆ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಭಾರತಕ್ಕೆ ಧನ್ಯವಾದ ಸಲ್ಲಿಸಿದರು.

ಢಾಕಾದಲ್ಲಿ ಬಂಗಬಂಧು-ಬಾಪು ಡಿಜಿಟಲ್ ವಸ್ತುಪ್ರದರ್ಶನವನ್ನು ಉಭಯ ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು. ಇದು ಈ ಆದರ್ಶ ನಾಯಕರ ಜೀವನ ಮತ್ತು ಬದುಕನ್ನು ಅನಾವರಣ ಮಾಡುತ್ತದೆ. ಈ ಇಬ್ಬರು ಶ್ರೇಷ್ಠ ನಾಯಕರ ಆದರ್ಶಗಳು ಮತ್ತು ಆಡಳಿತವನ್ನು, ಜೀವನ ವಿಧಾನವನ್ನು ಪ್ರಶಂಸಿಸಿದ ಇಬ್ಬರು ಪ್ರಧಾನಿಗಳು ಈ ನಾಯಕರ ತತ್ವಾದರ್ಶಗಳು ಜಗತ್ತಿನಾದ್ಯಂತ ಅದರಲ್ಲೂ ನಿರ್ದಿಷ್ಟವಾಗಿ ಯುವಜನತೆಯನ್ನು ದಬ್ಬಾಳಿಕೆಯ ವಿರುದ್ಧ ಸದಾ ಪ್ರೇರೇಪಿಸುತ್ತವೆ ಎಂದರು.
ಭಾರತ-ಬಾಂಗ್ಲಾದೇಶ ಬಾಂಧವ್ಯದ 50 ನೇ ವಾರ್ಷಿಕೋತ್ಸವವನ್ನು ಸಂಕೇತಿಸುವ ಕಾರ್ಯಕ್ರಮದ ಅಂಗವಾಗಿ ಉಭಯ ಕಡೆಯವರೂ ಆಯಾ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು. ಡಿಸೆಂಬರ್ ಆರನ್ನು ಮೈತ್ರಿ ದಿವಸವನ್ನಾಗಿ ಆಚರಿಸುವುದಕ್ಕೆ ತೀರ್ಮಾನಿಸಲಾಯಿತು. 1971ರಲ್ಲಿ ಭಾರತವು ಈ ದಿನದಂದು ಬಾಂಗ್ಲಾದೇಶಕ್ಕೆ ಮನ್ನಣೆಯನ್ನು ನೀಡಿತ್ತು. ಭಾರತದ ವತಿಯಿಂದ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಬಂಗಬಂಧು ಪೀಠದ ಸ್ಥಾಪನೆಯನ್ನು ಘೋಷಿಸಲಾಯಿತು. ಬಾಂಗ್ಲಾದೇಶದ ಸ್ವಾತಂತ್ರ್ಯೋತ್ಸವದ 50 ನೇ ವರ್ಷಾಚರಣೆಯ ಅಂಗವಾಗಿ ಮತ್ತು ದ್ವಿಪಕ್ಷೀಯ ಸಂಬಂಧಗಳ ಸ್ಥಾಪನೆಯ ಅಂಗವಾಗಿ ಉಭಯ ಕಡೆಯವರೂ ಈ ಚಾರಿತ್ರಿಕ ಘಟನೆಗಳನ್ನು ಆಯ್ದ 19 ದೇಶಗಳಲ್ಲಿ ಜಂಟಿಯಾಗಿ ಆಚರಿಸಲು ಒಪ್ಪಿಕೊಂಡಿವೆ.
ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಬಯೋಪಿಕ್ ಚಿತ್ರೀಕರಣ ಭಾರತೀಯ ಚಲನ ಚಿತ್ರ ನಿರ್ದೇಶಕ ಶ್ಯಾಂ ಬೆನಗಲ್ ಅವರ ನಿರ್ದೇಶನದಲ್ಲಿ ಆರಂಭಗೊಂಡಿರುವುದಕ್ಕೆ ಮತ್ತು ಅದು ಪೂರ್ವ ನಿರ್ಧರಿತ ಸಮಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇರುವುದಕ್ಕೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ಸಾಧ್ಯವಿರುವಷ್ಟು ತ್ವರಿತವಾಗಿ ವಿಮೋಚನಾ ಯುದ್ಧದ ಸಾಕ್ಷ್ಯ ಚಿತ್ರಕ್ಕೆ ಸಂಬಂಧಿಸಿದ ಕೆಲಸವನ್ನು ಆರಂಭಿಸುವ ಅಗತ್ಯವನ್ನು ಉಭಯ ಕಡೆಯವರೂ ಒತ್ತಿ ಹೇಳಿದರು.
ಭಾರತದ 2020ರ ಗಣರಾಜ್ಯೋತ್ಸವ ದಿನ ಆಚರಣೆಯಂದು ಬಾಂಗ್ಲಾದೇಶದ ಸಶಸ್ತ್ರ ಪಡೆಗಳ ಮೂರೂ ಸೇವೆಗಳ 122 ಸದಸ್ಯರ ತಂಡ ಭಾಗವಹಿಸಿರುವುದನ್ನು ಗಮನಕ್ಕೆ ತೆಗೆದುಕೊಂಡ ಉಭಯ ಕಡೆಯವರೂ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರಲ್ಲಿ ರಾಜತಾಂತ್ರಿಕ ಸಂಬಂಧಗಳ ಸುವರ್ಣ ಮಹೋತ್ಸವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತಕ್ಕೆ ಬರುವಂತೆ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರಿಗೆ ಆಹ್ವಾನ ನೀಡಿದರು.
ಉಭಯ ಕಡೆಯವರೂ ಭಾರತೀಯ ನೌಕಾ ಹಡಗು ಸುಮೇಧಾ ಮತ್ತು ಕುಲಿಶ್ ಗಳು ಚಾರಿತ್ರಿಕ ಸಂದರ್ಭದ ಸ್ಮರಣಾರ್ಥ ಬಾಂಗ್ಲಾದೇಶದ ಆಹ್ವಾನದ ಮೇರೆಗೆ 2021 ರ ಮಾರ್ಚ್ 08-10ರ ಅವಧಿಯಲ್ಲಿ ಮೋಂಗ್ಲಾ ಬಂದರಿಗೆ ಭೇಟಿ ನೀಡಿದ್ದನ್ನು ಸ್ವಾಗತಿಸಿದರು. ಭಾರತೀಯ ನೌಕಾ ಸೇನೆಯ ಹಡಗುಗಳು ಮೊಂಗ್ಲಾ ಬಂದರಿಗೆ ಭೇಟಿ ನೀಡಿರುವುದು ಇದೇ ಮೊದಲು. ಜಂಟಿ ಆಚರಣೆಯ ಅಂಗವಾಗಿ ಬಾಂಗ್ಲಾದೇಶದ ನೌಕಾ ಪಡೆಯ ಹಡಗು ವಿಶಾಖಪಟ್ಟಣಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ.
ಬಾಂಗ್ಲಾದೇಶದ ವಿದ್ಯಾರ್ಥಿಗಳಿಗೆ 1000 ಶುಬೋರ್ನೋ ಜಯಂತಿ ವಿದ್ಯಾರ್ಥಿ ವೇತನಗಳನ್ನು ಭಾರತದಲ್ಲಿ ಶಿಕ್ಷಣವನ್ನು ಕೈಗೊಳ್ಳುವುದಕ್ಕಾಗಿ ನೀಡಲು ಭಾರತ ಸರಕಾರ ತೀರ್ಮಾನಿಸಿರುವುದನ್ನು ಬಾಂಗ್ಲಾದೇಶದ ವತಿಯಿಂದ ಸ್ವಾಗತಿಸಲಾಯಿತು.

ಬಾಂಗ್ಲಾದೇಶ- ಭಾರತ ಗಡಿಯಲ್ಲಿರುವ ಮುಜೀಬ್ ನಗರ ಮತ್ತು ನಾಡಿಯಾವನ್ನು ಜೋಡಿಸುವ ಚಾರಿತ್ರಿಕ ರಸ್ತೆಯನ್ನು ಬಾಂಗ್ಲಾ ದೇಶ ವಿಮೋಚನಾ ಯುದ್ಧದ ಚಾರಿತ್ರಿಕ ಮಹತ್ವದ ಸ್ಮರಣಾರ್ಥ “ಶಾಧಿನೋಟಾ ಶೊರೋಕ್” ಎಂದು ಮರು ನಾಮಕರಣ ಮಾಡುವುದಕ್ಕೆ ಬಾಂಗ್ಲಾದೇಶ ಮಂಡಿಸಿದ ಪ್ರಸ್ತಾಪವನ್ನು ಭಾರತ ಪರಿಗಣಿಸಲು ಒಪ್ಪಿರುವುದಕ್ಕೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಅವರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಜಂಟಿ ಆಚರಣೆಯ ಅಂಗವಾಗಿ ಈ ರಸ್ತೆಯ ಉದ್ಘಾಟನೆಯನ್ನು ಉಭಯ ಕಡೆಯವರೂ ಎದುರು ನೋಡುತ್ತಿದ್ದಾರೆ.

ಜಲ ಸಂಪನ್ಮೂಲ ಸಹಕಾರ

ಈ ಮೊದಲಿನ ಸಮಾಲೋಚನೆಗಳನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಟೀಸ್ಟಾ ನದಿ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿ ಮದ್ಯಂತರ ಒಪ್ಪಂದ ಪೂರ್ಣಗೊಳಿಸುವುದೂ ಸಹಿತ ಸುಧೀರ್ಘ ಕಾಲದಿಂದ ಬಾಕಿಯುಳಿದಿರುವ ಬಾಂಗ್ಲಾದೇಶದ ಬೇಡಿಕೆಯನ್ನು ಪುನರುಚ್ಚರಿಸಿದರು. ಟೀಸ್ಟಾ ನದಿ ಜಲಾನಯನ ಪ್ರದೇಶವನ್ನು ಅವಲಂಬಿಸಿರುವ ಮಿಲಿಯಾಂತರ ಜನರ ಜೀವನೋಪಾಯವನ್ನು ರಕ್ಷಿಸಲು ಮತ್ತು ಜನರ ಸಮಸ್ಯೆಗಳ ನಿವಾರಣೆಗೆ ಇದು ಅವಶ್ಯ ಎಂದು ಬಲವಾಗಿ ಪ್ರತಿಪಾದಿಸಿದ ಅವರು ಬಾಂಗ್ಲಾದೇಶ ಟೀಸ್ಟಾ ನದಿಯ ನೀರಿನಲ್ಲಿ ತನ್ನ ನ್ಯಾಯಯುತ ಪಾಲನ್ನು ಪಡೆದುಕೊಳ್ಳುವುದು ಅವಶ್ಯ, ಇದಕ್ಕಾಗಿ 2011ರಲ್ಲಿ ಮಾಡಲಾದ ಕರಡು ಒಪ್ಪಂದವನ್ನು ಉಭಯ ಸರಕಾರಗಳು ಒಪ್ಪಿಕೊಂಡಿವೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತದ ಪ್ರಾಮಾಣಿಕ ಬದ್ಧತೆಯನ್ನು ಪುನರುಚ್ಚರಿಸಿದರಲ್ಲದೆ ಸಂಬಂಧಿತ ಭಾಗೀದಾರರ ಜೊತೆ ಸಲಹೆ ಪಡೆದು ಈ ಒಪ್ಪಂದವನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡುವುದಾಗಿ ಪುನರುಚ್ಚರಿಸಿದರು. ಫೆನಿ ನದಿ ನೀರಿನ ಹಂಚಿಕೆ ಕುರಿತಂತೆ ಮಧ್ಯಂತರ ಒಪ್ಪಂದದ ಕರಡನ್ನು ಬೇಗನೆ ಅಂತಿಮಗೊಳಿಸುವಂತೆ ಭಾರತದ ಪರವಾಗಿ ಕೋರಿಕೊಳ್ಳಲಾಯಿತು. ಇದು ಬಾಂಗ್ಲಾದೇಶದ ವತಿಯಿಂದ ಬಾಕಿಯಾಗಿದೆ. 2011ರಲ್ಲಿ ಉಭಯ ಕಡೆಯವರೂ ಇದಕ್ಕೆ ಒಪ್ಪಿಕೊಂಡಿದ್ದರು.

ಇಬ್ಬರು ನಾಯಕರೂ ತಮ್ಮ ತಮ್ಮ ಜಲಸಂಪನ್ಮೂಲ ಸಚಿವಾಲಯಗಳಿಗೆ ಅರು ಸಾಮಾನ್ಯ ನದಿಗಳಾದ ಮನು, ಮುಹುರಿ, ಖೋವಾಯಿ, ಗುಮ್ಟಿ, ಧಾರ್ಲಾ ಮತ್ತು ದೂಧ್ ಕುಮಾರ್ ಗಳ ನೀರನ್ನು ಹಂಚಿಕೊಳ್ಳುವ ಕುರಿತಂತೆ ಮಧ್ಯಂತರ ಒಪ್ಪಂದದ ಚೌಕಟ್ಟನ್ನು ಸಾಧ್ಯವಾದಷ್ಟು ಬೇಹ ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾರ್ಯಮಗ್ನವಾಗುವಂತೆ ನಿರ್ದೇಶನ ನೀಡಿದರು.
ಸುರ್ಮಾ ಕುಶಿಯಾರ ಮೇಲ್ದಂಡೆ ಯೋಜನೆಯ ಕುಶಿಯಾರ ನದಿ ನೀರಿನ ಬಳಕೆಗಾಗಿ ರಹೀಂಪುರ ಖಾಲ್ ನಲ್ಲಿ ಬಾಕಿ ಉಳಿದಿರುವ ಭಾಗದಲ್ಲಿ ಉತ್ಖನನಕ್ಕೆ ತುರ್ತಾಗಿ ಅವಕಾಶ ನೀಡಬೇಕು ಎಂದು ಬಾಂಗ್ಲಾದೇಶದ ವತಿಯಿಂದ ಪುಅನರುಚ್ಚರಿಸಲಾಯಿತು. ಈ ಯೋಜನೆ ಬಾಂಗ್ಲಾದೇಶದ ಆಹಾರ ಭದ್ರತೆಗೆ ನೇರವಾಗಿ ಸಂಬಂಧಿಸಿದೆ ಎಂದು ಅದು ಹೇಳಿತು. ಈ ನಿಟ್ಟಿನಲ್ಲಿ ಭಾರತದಿಂದ ಉಭಯ ದೇಶಗಳು ಕುಶಿಯಾರ ನದಿಯಿಂದ ನೀರೆತ್ತುವುದಕ್ಕೆ ಸಂಬಂಧಿಸಿದ ಉದ್ದೇಶಿತ ಎಂ.ಒ.ಯು. ಗೆ ಸಹಿ ಹಾಕುವುದಕ್ಕೆ ಒಪ್ಪಿಗೆಯನ್ನು ಕೋರಲಾಯಿತು. ಈ ಕುರಿತ ಒಪ್ಪಂದ ಅಂಕಿತಕ್ಕೆ ಬಾಕಿ ಇದೆ. ಭಾರತದ ವತಿಯಿಂದ ಸಂಬಂಧಿತ ರಾಜ್ಯಗಳ ಜೊತೆಯಲ್ಲಿ ಸಮಾಲೋಚನೆ ನಡೆಯುತ್ತಿದ್ದು, ಎಂ.ಒ.ಯು. ಪರಿಶೀಲನೆಯಲ್ಲಿದೆ ಎಂದು ತಿಳಿಸಲಾಯಿತು.

2019ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಕಿತ ಹಾಕಲಾದ ಫೆನಿ ನದಿಯಿಂದ 1.82 ಕ್ಯುಸೆಕ್ಸ್ ನೀರೆತ್ತುವ ಕುರಿತ ಎಂ.ಒ.ಯು. ವನ್ನು ನೆನಪಿಸಿದ ಭಾರತ ಈ ಎಂ.ಒ.ಯು.ವನ್ನು ತ್ವರಿತವಾಗಿ ಜಾರಿಗೆ ತರುವಂತೆ ಮನವಿ ಮಾಡಿತು.
ಗಂಗಾ ಪದ್ಮಾ ಬ್ಯಾರೇಜ್ ಮತ್ತು ಗಂಗಾ ನದಿ ನೀರು ಹಂಚಿಕೆ ಒಪ್ಪಂದ 1996 ರನ್ವಯ ಗಂಗಾ ನದಿಯಿಂದ ಬಾಂಗ್ಲಾದೇಶ ಪಡೆಯುವ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವುದಕ್ಕೆ ಅನುಕೂಲವಾಗುವಂತೆ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಯ ತ್ವರಿತವಾಗಿ ಅಧ್ಯಯನವನ್ನು ಆರಂಭಿಸುವಂತೆ ಈ ಉದ್ದೇಶಕ್ಕಾಗಿ ರಚಿಸಲಾದ ಜಂಟಿ ತಾಂತ್ರಿಕ ಸಮಿತಿಗೆ ಉಭಯ ಪ್ರಧಾನ ಮಂತ್ರಿಗಳು ನಿರ್ದೇಶನ ನೀಡಿದರು.
ಜಂಟಿ ನದಿಗಳ ಆಯೋಗದ ಧನಾತ್ಮಕ ಕೊಡುಗೆಗಳನ್ನು ನೆನಪಿಸಿಕೊಂಡ ಉಭಯ ನಾಯಕರು ಇತ್ತೀಚೆಗೆ ಮುಕ್ತಾಯಗೊಂಡ ಉಭಯ ದೇಶಗಳ ಜಲ ಸಂಪನ್ಮೂಲ ಸಚಿವಾಲಯಗಳ ಕಾರ್ಯದರ್ಶಿ ಮಟ್ಟದ ಸಭೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಬೆಳವಣಿಗೆಗಾಗಿ ವ್ಯಾಪಾರ

ಉಭಯ ದೇಶಗಳ ನಡುವೆ ವ್ಯಾಪಾರ ಉತ್ತೇಜಿಸಲು ಉಭಯ ಪ್ರಧಾನ ಮಂತ್ರಿಗಳೂ ತೆರಿಗೆಯೇತರ ತಡೆಗಳನ್ನು ತೆಗೆದುಹಾಕುವ ಅವಶ್ಯಕತೆಯನ್ನು ಒತ್ತಿ ಹೇಳಿದರು. ಬಾಂಗ್ಲಾದೇಶದ ವತಿಯಿಂದ ಭಾರತೀಯ ಕಸ್ಟಮ್ಸ್ ನ ಹೊಸ ನೀತಿಯಾದ ಬಾಂಗ್ಲಾದೇಶದಿಂದ ನೀಡಲಾದ ಸರಕುಗಳ ಮೂಲ ಕುರಿತ ಪ್ರಮಾಣಪತ್ರವನ್ನು ಪರಿಶೀಲನೆ ನಡೆಸುವ ನೀತಿಯನ್ನು ಕೈಬಿಡಬೇಕು ಎಂದು ಕೋರಿಕೆ ಮಂಡಿಸಲಾಯಿತು. ಹೊಸ ಕಸ್ಟಮ್ಸ್ ನಿಯಮಗಳ ಪ್ರಸ್ತಾವನೆಯ ಪ್ರಕಾರ ಈ ನಿಯಮಗಳಲ್ಲಿ ಬಿಕ್ಕಟ್ಟು ತಲೆದೋರಿದರೆ , ಮತ್ತು ವ್ಯಾಪಾರ ಒಪ್ಪಂದದ ಮೂಲದ ನಿಯಮಗಳಲ್ಲಿ ಸಂಘರ್ಷ ತಲೆದೋರಿದರೆ ವ್ಯಾಪಾರದ ಒಪ್ಪಂದದ ಮೂಲದ ನಿಯಮಗಳ ಪ್ರಸ್ತಾವನೆಗಳು ಜಾರಿಯಲ್ಲಿರುತ್ತವೆ ಎಂದು ಭಾರತದ ವತಿಯಿಂದ ತಿಳಿಸಲಾಯಿತು. ಮುಂದುವರಿದು, ದ್ವಿಪಕ್ಷೀಯ ವ್ಯಾಪಾರ ಬೆಳೆಯಲು ವ್ಯಾಪಾರ ನೀತಿಗಳ ಊಹನಾಸಾಮರ್ಥ್ಯ, ನಿಯಮಾವಳಿಗಳು ಮತ್ತು ಪ್ರಕ್ರಿಯೆಗಳು ಅವಶ್ಯ ಎಂದು ಉಭಯ ನಾಯಕರೂ ಅಭಿಪ್ರಾಯಪಟ್ಟರು.
ಭೂ ಕಸ್ಟಮ್ಸ್ ಠಾಣೆಗಳ (ಎಲ್.ಸಿ.ಎಸ್.) /ಭೂ ಬಂದರುಗಳ ಮೂಲಸೌಕರ್ಯ ಮತ್ತು ಸೌಲಭ್ಯಗಳು ಉಭಯ ದೇಶಗಳ ನಡುವೆ ವ್ಯಾಪಾರಕ್ಕೆ ಉತ್ತೇಜನ ನೀಡುವಂತೆ ಸಮನ್ವಯ ಮಾದರಿಯಲ್ಲಿ ಮೇಲ್ದರ್ಜೆಗೆ ಏರಬೇಕಾದ ತುರ್ತು ಅವಶ್ಯಕತೆಯನ್ನು ಉಭಯ ಪ್ರಧಾನ ಮಂತ್ರಿಗಳೂ ಒತ್ತಿ ಹೇಳಿದರು.
ಭಾರತದ ಈಶಾನ್ಯ ವಲಯದಲ್ಲಿ (ಅನುಕೂಲತೆಗಳಿದ್ದಲ್ಲಿ ಮತ್ತು ಹಣಕಾಸು ದೃಷ್ಟಿಯಿಂದ ಸಾಧ್ಯ ಇರುವಲ್ಲಿ ) ಸುಲಭದಲ್ಲಿ ಮಾರುಕಟ್ಟೆ ಲಭ್ಯವಾಗುವಂತೆ ಐ.ಸಿ.ಪಿ.ಅಗರ್ತಲಾ-ಅಖೌರಾದಿಂದ ಆರಂಭಗೊಂಡಂತೆ ಕನಿಷ್ಟ ಒಂದು ಪ್ರಮುಖ ಭೂ ಬಂದರನ್ನಾದರೂ ಬಂದರು ನಿರ್ಬಂಧಗಳಿಲ್ಲದೆ ಅಥವಾ ನಿರ್ಬಂಧಗಳ ಪಟ್ಟಿ ಇಲ್ಲದ ಬಂದರನ್ನಾಗಿಸಬೇಕು ಎಂಬ ತನ್ನ ಕೋರಿಕೆಯನ್ನು ಭಾರತದ ವತಿಯಿಂದ ಪುನರುಚ್ಚರಿಸಲಾಯಿತು
ಉಭಯ ಪ್ರಧಾನ ಮಂತ್ರಿಗಳೂ ಒಪ್ಪಂದಗಳ ಗುಣಮಾನಕಗಳನ್ನು ಸುಸಂಗತ ಮಾಡುವ ಮತ್ತು ಪರಸ್ಪರ ಮಾನ್ಯತೆ ನೀಡುವ ಹಾಗು ದ್ವಿಪಕ್ಷೀಯ ವ್ಯಾಪಾರ ಹೆಚ್ಚಳಕ್ಕಾಗಿ ಪ್ರಮಾಣ ಪತ್ರಗಳ ಮಹತ್ವವನ್ನು ಪುನರುಚ್ಚರಿಸಿದರು. ಉಭಯ ದೇಶಗಳ ನಡುವಣ ವ್ಯಾಪಾರವನ್ನು ಉದಾರೀಕರಣ ಮಾಡುವ ಸ್ಫೂರ್ತಿಯಲ್ಲಿ ಬಾಂಗ್ಲಾದೇಶದ ಗುಣಮಾನಕಗಳು ಮತ್ತು ಪರೀಕ್ಷಾ ಸಂಸ್ಥೆ (ಬಿ.ಎಸ್.ಟಿ.ಯು.) ಮತ್ತು ಭಾರತೀಯ ಗುಣಮಾನಕಗಳ ಬ್ಯೂರೋ (ಬಿ.ಐ.ಎಸ್.) ಗಳು ಜೊತೆಗೂಡಿ ಸಾಮರ್ಥ್ಯ ವರ್ಧನೆ ಮತ್ತು ಪರೀಕ್ಷಾ ಹಾಗು ಪ್ರಯೋಗಾಲಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಒಪ್ಪಿಕೊಳ್ಳಲಾಯಿತು.
ಎಲ್.ಡಿ.ಸಿ. ಸ್ಥಿತಿಯಿಂದ ಮೇಲ್ದರ್ಜೆಗೆ ಏರಿದುದಕ್ಕಾಗಿ ಭಾರತದ ವತಿಯಿಂದ ಬಾಂಗ್ಲಾದೇಶವನ್ನು ಅಭಿನಂದಿಸಲಾಯಿತು. ದ್ವಿಪಕ್ಷೀಯ ಆರ್ಥಿಕ ಮತ್ತು ವಾಣಿಜ್ಯಿಕ ಒಪ್ಪಂದಗಳ, ಬಾಂಧವ್ಯಗಳ ಭಾರೀ ಸಾಮರ್ಥ್ಯವನ್ನು ಗುರುತಿಸಿಕೊಂಡಿರುವ ಉಭಯ ಕಡೆಯವರೂ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಸಿ.ಇ.ಪಿ.ಎ.) ಮಾಡಿಕೊಳ್ಳುವ ಸಾಧ್ಯಾ ಸಾಧ್ಯತೆಯ ಬಗ್ಗೆ ನಡೆಯುತ್ತಿರುವ ಜಂಟಿ ಅಧ್ಯಯನವನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ಎರಡೂ ಕಡೆಯವರು ಹೆಚ್ಚಿನ ಒತ್ತು ನೀಡಿದರು.
ಸೆಣಬು ವಲಯವು ಬಾಂಗ್ಲಾದೇಶದ ಆರ್ಥಿಕತೆಯಲ್ಲಿ ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಮನಗಂಡು ಬಾಂಗ್ಲಾದೇಶದ ವತಿಯಿಂದ ಬಾಂಗ್ಲಾದೇಶದ ಸೆಣಬು ಕಾರ್ಖಾನೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಭಾರತೀಯ ಹೂಡಿಕೆಯನ್ನು ಆಹ್ವಾನಿಸಲಾಯಿತು. ವೈವಿಧ್ಯಮಯ ಸೆಣಬಿನ ಉತ್ಪನ್ನಗಳನ್ನು ತಯಾರಿಸುವ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ದೇಶದಿಂದ ಸೆಣಬಿನ ಗಿರಣಿಗಳ ಪುನಶ್ಚೇತನ ಮತ್ತು ಆಧುನೀಕರಣಗೊಳಿಸುವ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಈ ಆಹ್ವಾನ ನೀಡಲಾಗಿದೆ. ಈ ನಿಟ್ಟಿನಲ್ಲಿ ಈ ವಲಯದಲ್ಲಿ ಉಭಯ ದೇಶಗಳ ನಡುವೆ ಹೆಚ್ಚು ಅರ್ಥಪೂರ್ಣ ಸಹಕಾರವನ್ನು ಕೋರಲಾಯಿತು ಮತ್ತು ಬಾಂಗ್ಲಾದೇಶದ ವತಿಯಿಂದ 2017ರಿಂದ ಬಾಂಗ್ಲಾದೇಶದಿಂದ ರಫ್ತಾಗುತ್ತಿರುವ ಸೆಣಬಿನ ಉತ್ಪನ್ನಗಳ ಮೇಲೆ ವಿಧಿಸಲಾಗುತ್ತಿರುವ ಕರಗಳನ್ನು ಹಿಂಪಡೆಯುವಂತೆ ಭಾರತವನ್ನು ಆಗ್ರಹಿಸಲಾಯಿತು. ಭಾರತದ ವತಿಯಿಂದ ಸೆಣಬಿನ ಕ್ಷೇತ್ರದಲ್ಲಿ ಸಹಕಾರವನ್ನು ಸ್ವಾಗತಿಸಲಾಯಿತು. ಸೆಣಬಿನ ಮೇಲಿನ ಕರವನ್ನು ಕುರಿತ ವಿಷಯವನ್ನು ಪರಿಶೀಲಿಸಲು ಭಾರತ ಒಪ್ಪಿಕೊಂಡಿತು.
ಬಾಂಗ್ಲಾದೇಶ ಸರಕಾರದ ವಿವಿಧ ಸಚಿವಾಲಯಗಳು ಮತ್ತು ಏಜೆನ್ಸಿಗಳು ಆಹ್ವಾನಿಸುವ ಟೆಂಡರ್ ಗಳಲ್ಲಿ ಭಾರತೀಯ ಕಂಪೆನಿಗಳು ಪಾಲ್ಗೊಳ್ಳುವುದನ್ನು ತಡೆಯುವ ಈಗಿರುವ ಪದ್ಧತಿಯನ್ನು ತೆಗೆದುಹಾಕುವಂತೆ ಭಾರತದ ವತಿಯಿಂದ ಮನವಿ ಮಾಡಲಾಯಿತು. ಬಾಂಗ್ಲಾದೇಶದ ವತಿಯಿಂದ ನಿರ್ದಿಷ್ಟ ದೇಶವನ್ನು ಪರಿಗಣಿಸಿಕೊಂಡು ನಿರ್ಬಂಧಿಸುವ ಪ್ರಕ್ರಿಯೆ ಇಲ್ಲವೆಂದು ತಿಳಿಸಲಾಯಿತು.
ಒಪ್ಪಿಕೊಂಡ ಸ್ಥಳಗಳಲ್ಲಿ ಹೊಸ ಗಡಿ ಹಾಥ್ (ಮಾರುಕಟ್ಟೆ) ಗಳನ್ನು ತೆರೆಯುವುದನ್ನು ಉಭಯ ಪ್ರಧಾನ ಮಂತ್ರಿಗಳೂ ಸ್ವಾಗತಿಸಿದರು. ಮತ್ತು ಅವುಗಳು ಪರಸ್ಪರ ದುರ್ಗಮ ಮತ್ತು ಉಭಯ ದೇಶಗಳ ತಲುಪಲಾಗದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಆರ್ಥಿಕ ಅಭಿವೃದ್ಧಿಗೆ ಪ್ರಯೋಜನಕಾರಿಯಾಗುತ್ತವೆ ಎಂಬ ಬಗ್ಗೆ ಭರವಸೆ ವ್ಯಕ್ತಪಡಿಸಲಾಯಿತು.

ವಿದ್ಯುತ್ ಮತ್ತು ಇಂಧನ ವಲಯದಲ್ಲಿ ಸಹಕಾರ ಮತ್ತು ಸಹಭಾಗಿತ್ವದ ಅಭಿವೃದ್ಧಿ

ಉಭಯ ಕಡೆಯವರೂ ಉನ್ನತ ಮಟ್ಟದ ನಿಗಾ ಸಮಿತಿಯ ಮೊದಲ ಸಭೆಯ ಟಿಪ್ಪಣಿಗಳನ್ನು ಗಮನಿಸಿದರಲ್ಲದೆ ಸಮಿತಿಗೆ ಯೋಜನೆಗಳನ್ನು ಗುಣಾಂಕಗಳ ಆಧಾರದಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಲು ಶಿಫಾರಸುಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದರು.
ಖಾಸಗಿ ವಲಯಗಳು ಒಳಗೊಂಡಂತೆ ವಿದ್ಯುತ್ ಮತ್ತು ಇಂಧನ ವಲಯದಲ್ಲಿ ಬಲಿಷ್ಠ ಸಹಕಾರಕ್ಕಾಗಿ ಉಭಯ ಕಡೆಯವರೂ ತೃಪ್ತಿ ವ್ಯಕ್ತಪಡಿಸಿದರು. ನೇಪಾಳ ಮತ್ತು ಭೂತಾನ ಸಹಿತ ಉಪ ಪ್ರಾದೇಶಿಕ ಮಟ್ಟದಲ್ಲಿ ಸಹಕಾರವನ್ನು ಬಲಪಡಿಸಲು ಒಪ್ಪಲಾಯಿತು ಮತ್ತು ಇಂಧನ ವಲಯದಲ್ಲಿ ಹೆಚ್ಚಿನ ಆದ್ಯತೆ ನೀಡಲೂ ನಿರ್ಧರಿಸಲಾಯಿತು. ಭಾರತದ ವತಿಯಿಂದ ವಿದ್ಯುತ್ತಿನ ಗಡಿಯಾಚೆಗಿನ ವ್ಯಾಪಾರಕ್ಕೆ ಸಂಬಂಧಿಸಿ ಮಾರ್ಗದರ್ಶಿಗಳು ಮತ್ತು ನಿಯಂತ್ರಣ ನಿಯಮಾವಳಿಗಳನ್ನು ಅಂತಿಮಗೊಳಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು ಮತ್ತು ಇದರಿಂದ ಉಪ ಪ್ರಾದೇಶಿಕ ಸಹಕಾರ ಹೆಚ್ಚುತ್ತದೆ ಎಂದು ಪ್ರತಿಪಾದಿಸಲಾಯಿತು.. ಕತಿಹಾರ್-ಪರ್ಬೋತಿಪುರ್-ಬೋರ್ ನಗರ್ ಗಡಿಯಾಚೆಗಿನ ವಿದ್ಯುತ್ ಅಂತರ್ ಸಂಪರ್ಕದ ಮಾದರಿಗಳನ್ನು ಸಾಧ್ಯವಾದಷ್ಟು ಬೇಗ ಅಂತಿಮಗೊಳಿಸಿ ಅನುಷ್ಠಾನಗೊಳಿಸಲು ಭಾರತ ಕೋರಿಕೊಂಡಿತು. ಈ ನಿಟ್ಟಿನಲ್ಲಿ ಅಧ್ಯಯನ ತಂಡವನ್ನು ರಚಿಸಿರುವುದನ್ನು ಉಭಯ ಕಡೆಯವರೂ ಸ್ವಾಗತಿಸಿದರು. ಭಾರತ- ಬಾಂಗ್ಲಾದೇಶ್ ಗೆಳೆತನ ಕೊಳವೆ ಮಾರ್ಗ ಮತ್ತು ಮೈತ್ರಿ ಸೂಪರ್ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯ ಘಟಕ -1 ರ ಅನುಷ್ಠಾನದ ಪ್ರಗತಿಯನ್ನು ಉಭಯ ಕಡೆಯವರೂ ಅವಲೋಕಿಸಿದರು. ಮತ್ತು ಈ ಯೋಜನೆಗಳು ಶೀಘ್ರವೇ ಕಾರ್ಯಾರಂಭ ಮಾಡುವ ಭರವಸೆಯನ್ನು ವ್ಯಕ್ತಪಡಿಸಿದವು.
ಹೈಡ್ರೋಕಾರ್ಬನ್ ವಲಯದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಚೌಕಟ್ಟಿಗೆ 2021ರ ಡಿಸೆಂಬರ್ ತಿಂಗಳಲ್ಲಿ ಅಂಕಿತ ಹಾಕಿರುವುದನ್ನು ನೆನಪಿಸಿಕೊಂಡ ಉಭಯ ನಾಯಕರೂ ಸಾಧ್ಯವಾದಷ್ಟು ಬೇಗ ಸಾಂಸ್ಥಿಕ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಕೋರಿದರು. ಇದರಿಂದ ಈ ಪ್ರಮುಖ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ಇನ್ನಷ್ಟು ವರ್ಧಿಸಲಿದೆ.

ಸಮೃದ್ಧಿಗಾಗಿ ಸಂಪರ್ಕ

  1. ಉಭಯ ಪ್ರಧಾನ ಮಂತ್ರಿಗಳೂ ಭಾಗಿಯಾಗಿರುವ ಎಲ್ಲಾ ಪಕ್ಷಗಳ ಪ್ರಯೋಜನಕ್ಕಾಗಿ ಪ್ರಾದೇಶಿಕ ಆರ್ಥಿಕ ಸಮಗ್ರತೆಯನ್ನು ಉತ್ತೇಜಿಸುವುದಕ್ಕಾಗಿ ಸಂಪರ್ಕವನ್ನು ಹೆಚ್ಚಿಸುವ ಮಹತ್ವವನ್ನು ಪುನರುಚ್ಚರಿಸಿದರು. 1965 ಕ್ಕೆ ಪೂರ್ವದಲ್ಲಿದ್ದ ರೈಲ್ವೇ ಸಂಪರ್ಕವನ್ನು ಪುನರುಜ್ಜೀವಗೊಳಿಸುವ ನಿಟ್ಟಿನಲ್ಲಿ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಉಪಕ್ರಮಕ್ಕೆ ಭಾರತವು ಕೃತಜ್ಞತೆ ಸಲ್ಲಿಸಿತು.  ಮತ್ತು ರೈಲು, ರಸ್ತೆ ಹಾಗು ಜಲ ಮಾರ್ಗಗಳ ಮೂಲಕ ಹಲವಾರು ಸಂಪರ್ಕ ಉಪಕ್ರಮಗಳಿಗಾಗಿ ಬಾಂಗ್ಲಾದೇಶದ ಬೆಂಬಲಕ್ಕೆ ಭಾರತ ಕೃತಜ್ಞತೆ ಸಲ್ಲಿಸಿತು. ಅದೇ ಸ್ಫೂರ್ತಿಯಲ್ಲಿ ಬಾಂಗ್ಲಾದೇಶ ಕೂಡಾ ಭಾರತ-ಮ್ಯಾನ್ಮಾರ್-ಥೈಲ್ಯಾಂಡ್  ತ್ರಿಪಕ್ಷೀಯ ಹೆದ್ದಾರಿ ಯೋಜನೆಗಳಲ್ಲಿ ತಾನೂ ಸಹಭಾಗಿಯಾಗುವ ಬಗ್ಗೆ ಆಸಕ್ತಿಯನ್ನು ಪುನರುಚ್ಚರಿಸಿತು.  ಉಭಯ ದೇಶಗಳ ನಡುವೆ ಪ್ರಯಾಣಿಕರ ಚಲನೆಯನ್ನು ಸರಳಗೊಳಿಸಲು ಮತ್ತು ಸರಕು ಸಾಗಾಣಿಕೆಯನ್ನು ಸುರಳಿತಗೊಳಿಸಲು ಉತ್ತಮ ಸಂಪರ್ಕಕ್ಕೆ ಅನುಕೂಲ ಒದಗಿಸುವುದಕ್ಕೆ ಬಿ.ಬಿ.ಐ.ಎನ್. ಮೋಟಾರು ವಾಹನಗಳ ಒಪ್ಪಂದವನ್ನು ಕಾರ್ಯರೂಪಕ್ಕೆ ತರಲು ಬಾಂಗ್ಲಾದೇಶ, ಭಾರತ ಮತ್ತು ನೇಪಾಳಗಳ ನಡುವೆ ತ್ವರಿತವಾಗಿ ಎಂ.ಒ.ಯು.ಗೆ ಅಂಕಿತ ಹಾಕುವ ನಿಟ್ಟಿನಲ್ಲಿ  ಮುಂದುವರಿಯಲು ಉಭಯ ನಾಯಕರೂ ಒಪ್ಪಿಕೊಂಡರು. ಈ ಎಂ.ಒ.ಯು. ಮುಂದಿನ ಹಂತದಲ್ಲಿ ಭೂತಾನಿಗೆ ಸೇರ್ಪಡೆಯ ಅವಕಾಶವನ್ನು ಇಟ್ಟುಕೊಂಡು ಬಾಂಗ್ಲಾದೇಶ, ಭಾರತ ಮತ್ತು ನೇಪಾಳಗಳಲ್ಲಿ ಸರಕು ಸಾಗಾಟ ಮತ್ತು ಪ್ರಯಾಣಿಕರ ಸಾರಿಗೆ ಆರಂಭಕ್ಕೆ ಅನುಕೂಲ ಮಾಡಿಕೊಡುತ್ತದೆ.
  2. ಭದ್ರಾಪುರ-ಭೈರಾಗಿ, ಗಾಲ್ಗಾಲಿಯಾ, ಬಿರಾಟ್ ನಗರ-ಜೋಗಮನಿ ಮತ್ತು ಭೈರಗಂಜ್-ರಾಕ್ಸೌಲ್ ಗಳನ್ನು ಬಂಗ್ಲಾಬಂಧ-ಫುಲ್ಬರಿ ಮತ್ತು ಬಿರೋಲ್-ರಾಧಿಕಾಪುರಗಳ ಜೊತೆ ರಸ್ತೆ ಸಂಪರ್ಕವನ್ನು ಪರ್ಯಾಯ ಸಂಪರ್ಕ ಮಾರ್ಗಗಳಾಗಿ ಹೆಚ್ಚುವರಿಯಾಗಿ ಅಭಿವೃದ್ಧಿ ಮಾಡಬೇಕು ಎಂಬ ಬಾಂಗ್ಲಾದೇಶದ ಪ್ರಸ್ತಾಪವನ್ನು ಧನಾತ್ಮಕವಾಗಿ ಪರಿಗಣಿಸಬೇಕು ಎಂದು ಬಾಂಗ್ಲಾದೇಶದ ಕಡೆಯಿಂದ ಕೋರಿಕೆ ಮಂಡಿಸಲಾಗಿದೆ. ಬಿರೋಲ್ –ರಾಧಿಕಾನಗರ್ ಮತ್ತು ರೋಹಾನ್ ಪುರ-ಸಿಂಗಾಬಾದ್ ರೈಲ್ ಅಂತರವಿನಿಮಯಗಳನ್ನು ಬಿರಾಟನಗರ –ಜೋಗಿಮನಿಯೊಂದಿಗೆ ಸಂಪರ್ಕಿಸಬೇಕು ಎಂಬ ಪ್ರಸ್ತಾಪವನ್ನು ಪರಿಗಣಿಸಬೇಕು ಎಂದು  ಭಾರತವು ಕೋರಿಕೆಯನ್ನು ಮುಂದಿಟ್ಟಿದೆ. ಇದರಿಂದ ಬಾಂಗ್ಲಾದೇಶದಿಂದ ನೇಪಾಳಕ್ಕೆ ರೈಲು ಮೂಲಕ ಸರಕು ಸಾಗಾಟಕ್ಕೆ ವೆಚ್ಚದಲ್ಲಿ ಮತ್ತು ದೂರದಲ್ಲಿ  ಉಳಿತಾಯವಾಗುತ್ತದೆ ಎಂದು ಭಾರತ ಹೇಳಿದೆ. ಬಾಂಗ್ಲಾದೇಶದ ಕಡೆಯವರು ಹೊಸದಾಗಿ ಉದ್ಘಾಟನೆಯಾದ ಚಿಲಾಹಟಿ-ಹಲ್ದಿಬಾರಿ ಮಾರ್ಗವನ್ನು ಭೂತಾನದ ಜೊತೆ ರೈಲ್ವೇ ಸಂಪರ್ಕದ ಅನುಕೂಲತೆಗಾಗಿ ಭೂತಾನದ ಜೊತೆ ಬೆಸೆಯಬೇಕು ಎಂದು ಕೋರಿಕೆ ಸಲ್ಲಿಸಿದರು. ಗುವಾಹಟಿ ಮತ್ತು ಚಟ್ಟೋಗ್ರಾಮ ಹಾಗು ಮೇಘಾಲಯದ ಮಹೇಂದ್ರಗಂಜ್ ನಿಂದ ಪಶ್ಚಿಮ ಬಂಗಾಳದ ಹಿಲಿಯ ನಡುವೆ ಸಂಪರ್ಕ ಸ್ಥಾಪಿಸಲು ಬಾಂಗ್ಲಾದೇಶದ ಸಹಕಾರವನ್ನು ಭಾರತದ ಕಡೆಯವರು ಕೋರಿದರು. ಬಾಂಗ್ಲಾದೇಶದ ಕಡೆಯವರು ಈ ನಿಟ್ಟಿನಲ್ಲಿ ವಿವರವಾದ ಪ್ರಸ್ತಾವನೆಯನ್ನು ಭಾರತದ ಕಡೆಯಿಂದ ಕೋರಿದರು.
  3. ಸಂಪರ್ಕದ ಪ್ರಯೋಜನಗಳನ್ನು ಮತ್ತು ಭಾರತೀಯ ಸರಕುಗಳನ್ನು ಕೋಲ್ಕೊತ್ತಾದಿಂದ ಅಗರ್ತಾಲಾಕ್ಕೆ ಚಟ್ಟೋಗ್ರಾಮ್ ಮೂಲಕ ವರ್ಗಾಯಿಸುವ ಪ್ರಯೋಗಾತ್ಮಕ ವ್ಯವಸ್ಥೆಯ ಲಾಭಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಭಾರತವು ಚಟ್ಟೋಗ್ರಾಮ್ ಮತ್ತು ಮೊಂಗ್ಲಾ ಬಂದರುಗಳನ್ನು ಸರಕುಗಳನ್ನು ಭಾರತದಿಂದ ಮತ್ತು ಭಾರತಕ್ಕೆ ಸಾಗಿಸುವುದಕ್ಕಾಗಿ ಬಳಸುವುದಕ್ಕೆ ಸಂಬಂಧಿಸಿದ ಒಪ್ಪಂದವನ್ನು ಸಾಧ್ಯವಾದಷ್ಟು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು ಮತ್ತು ವೆಚ್ಚದಾಯಕವಲ್ಲದ ದರ ನಿಗದಿ ಹಾಗು ನಿಯಂತ್ರಣ ಆದೇಶಗಳನ್ನು ಅಂತಿಮಗೊಳಿಸಬೇಕು  ಎಂದು ಮನವಿ ಮಾಡಿತು.
  4. ಮುನ್ಸಿಗಂಜ್ ಮತ್ತು ಪಾಂಗಾನ್ ಗಳಲ್ಲಿ ಒಳನಾಡು ಜಲ ಸಾರಿಗೆ ಮತ್ತು ವ್ಯಾಪಾರ ಶಿಷ್ಟಾಚಾರದ ಅಂಗವಾಗಿ ಹಡಗು ಮೂಲಕ ವರ್ಗಾವಣೆ/ಸಾಗಾಣಿಕೆ ವ್ಯವಸ್ಥೆಗಾಗಿ ಭಾರತದ ವತಿಯಿಂದ  ಮನವಿ ಮಾಡಲಾಯಿತು. ದ್ವಿಪಕ್ಷೀಯ ಯೋಜನೆಯಾದ ಅಶುಗಂಜ್ ಕಂಟೈನರ್ ಟರ್ಮಿನಲ್ ಅಭಿವೃದ್ಧಿ ಮಾಡುವ ಯೋಜನೆ ಪೂರ್ಣಗೊಳ್ಳುವವರೆಗೆ ಈ ಪರ್ಯಾಯ ವ್ಯವಸ್ಥೆಗಾಗಿ ಭಾರತ ಮನವಿ ಮಾಡಿತು. ಈ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಗಳ ಮಿತಿ ಇದೆ ಎಂದು ಬಾಂಗ್ಲಾ ದೇಶ ತಿಳಿಸಿತಲ್ಲದೆ ಈ ಸೌಲಭ್ಯಗಳನ್ನು ಉನ್ನತೀಕರಿಸುವ ಕಾಮಗಾರಿಯನ್ನು ಯೋಜಿಸಲಾಗುತ್ತಿದೆ ಎಂದೂ ತಿಳಿಸಿತು.
  5. ಫೆನಿ ನದಿ ಮೇಲಣ ಇತ್ತೀಚಿನ ಮೈತ್ರಿ ಸೇತು ಉದ್ಘಾಟನೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ  ಮೋದಿ ಸ್ಮರಿಸಿಕೊಂಡರಲ್ಲದೆ ಈ ನಿರ್ಣಾಯಕ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಬಾಂಗ್ಲಾದೇಶ ನೀಡಿದ ಸಹಕಾರವನ್ನು ಶ್ಲಾಘಿಸಿದರು. ಫೆನಿ ಸೇತುವೆಯ ಉದ್ಘಾಟನೆಯು ಸಂಪರ್ಕವನ್ನು ಬಲಪಡಿಸುವ ಮತ್ತು ಈ ವಲಯದಲ್ಲಿ ಆರ್ಥಿಕ ಸಮಗ್ರತೆಯನ್ನು ಸಾಧಿಸುವ ಅದರಲ್ಲೂ ಈಶಾನ್ಯ ಭಾರತದಲ್ಲಿ ಆರ್ಥಿಕತೆಯನ್ನು ಸಮಗ್ರಗೊಳಿಸುವ ಅದರ ನಿರಂತರ ಬದ್ಧತೆಗೆ ಸಾಕ್ಷಿ ಎಂದು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಬಣ್ಣಿಸಿದರು. ಈ ಹೊಸ ಸೇತುವೆಯ ಪ್ರಯೋಜನವನ್ನು ಗರಿಷ್ಠ ಪ್ರಮಾಣದಲ್ಲಿ ಪಡೆಯಲು ಉಳಿದ ವ್ಯಾಪಾರ ಮತ್ತು ಸಂಚಾರಿ ಮೂಲಸೌಕರ್ಯವನ್ನು ಅಭಿವೃದ್ಧಿ ಮಾಡಲು ಉಭಯ ಕಡೆಯವರೂ  ಒಪ್ಪಿಕೊಂಡರು.
  6. ಬಾಂಗ್ಲಾದೇಶದ ಪ್ರಧಾನ ಮಂತ್ರಿ ಅವರು ಚಟ್ಟೋಗ್ರಾಮ್ ಮತ್ತು ಸಿಲ್ಹಾಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಈಶಾನ್ಯ ಭಾರತದ  ಜನತೆ ಅದರಲ್ಲೂ ತ್ರಿಪುರಾದ ಜನತೆ ಬಳಸುವುದಕ್ಕೆ  ಅನುವು ಮಾಡಿಕೊಡುವುದಾಗಿ ಹೇಳಿದರು. ಸೈದಾಪುರ ವಿಮಾನ ನಿಲ್ದಾಣವನ್ನು ಈ ವಲಯದ ಜನತೆಯ ಬಳಕೆಗಾಗಿ ಪ್ರಾದೇಶಿಕ ವಿಮಾನ ನಿಲ್ದಾಣವಾಗಿ ಅಭಿವೃದ್ಧಿ ಮಾಡಲಾಗುವುದೆಂದು ಬಾಂಗ್ಲಾದೇಶವು ತಿಳಿಸಿತು.
  7. ಉಭಯ ದೇಶಗಳಲ್ಲಿಯೂ ಲಸಿಕಾ ಕಾರ್ಯಕ್ರಮವು ಭಾರೀ ಬಿರುಸಿನಿಂದ ನಡೆಯುತ್ತಿರುವುದರಿಂದ ನಿಯಮಿತ ವಾಯು ಸಂಚಾರವನ್ನು ಪುನರಾರಂಭಿಸುವ ಸಾಧ್ಯತೆಯನ್ನು ಅನ್ವೇಷಿಸುವ ಬಗ್ಗೆ ಹಾಗು ಸಾಧ್ಯವಾದಷ್ಟು ಬೇಗ ಭೂಮಿ ಮತ್ತು ಬಂದರುಗಳ ಮೂಲಕ ಚಲನೆಯ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ತೆರವು ಮಾಡಿ ರೈಲು ಮತ್ತು ಬಸ್ ಸೇವೆಗಳನ್ನು ಉಭಯ ದೇಶಗಳ ನಡುವೆ ಪುನರಾರಂಭಿಸುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವುದಕ್ಕೂ ಉಭಯ ದೇಶಗಳು ಒಪ್ಪಿಕೊಂಡವು
  8. ಶಿಕ್ಷಣ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಈಗಿರುವ ಸಹಕಾರವನ್ನು ಪರಿಗಣಿಸಿ ಈ ಸಹಕಾರವನ್ನು ಪರಸ್ಪರ ಪ್ರಯೋಜನಕ್ಕಾಗಿ ಇನ್ನಷ್ಟು ವಿಸ್ತಾರ ಮಾಡಲು ಉಭಯ ಪ್ರಧಾನ ಮಂತ್ರಿಗಳೂ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಉಭಯ ದೇಶಗಳ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವಣ ಸಹಯೋಗದ ವ್ಯವಸ್ಥೆಗಳನ್ನು ಅವರು ಮೆಚ್ಚಿಕೊಂಡರು. ಶೈಕ್ಷಣಿಕ ಅರ್ಹತೆಗಳ ಪರಸ್ಪರ ಮಾನ್ಯತೆಗೆ ಸಂಬಂಧಿಸಿ ಎಂ.ಒ.ಯು. ವನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಿತ ಪ್ರಾಧಿಕಾರಿಗಳಿಗೆ ಉಭಯ ಪ್ರಧಾನ ಮಂತ್ರಿಗಳೂ ನಿರ್ದೇಶನ ನೀಡಿದರು.ಮೀನುಗಾರಿಕೆ, ಕೃಷಿ, ವಿಪತ್ತು ನಿರ್ವಹಣೆ, ಎಸ್.ಎಂ.ಇ. ಗಳು ಮತ್ತು ಮಹಿಳಾ ಸಶಕ್ತೀಕರಣ ಕ್ಷೇತ್ರಗಳಲ್ಲಿ ಭಾರತದ ಆಸಕ್ತ ಯುವ ಜನತೆಗಾಗಿ ಅಲ್ಪಾವಧಿಯ ವಿನಿಮಯ ಕಾರ್ಯಕ್ರಮಗಳನ್ನು ಸಂಘಟಿಸಲು ಬಾಂಗ್ಲಾದೇಶವು ಪ್ರಸ್ತಾಪಗಳನ್ನು ಮಂಡಿಸಿತು. ಸಂಸ್ಕೃತಿ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಯುವ ಜನತೆ ಮತ್ತು ಕ್ರೀಡೆ ಹಾಗು ಸಮೂಹ ಮಾಧ್ಯಮಗಳ ಉತ್ತೇಜನಕ್ಕೆ ನಿಯಮಿತವಾಗಿ ವಿನಿಮಯಗಳನ್ನು ಮುಂದುವರೆಸಿಕೊಂಡು ಹೋಗುವ ಆಶಯವನ್ನು ಉಭಯ ಕಡೆಯವರೂ ಪುನರುಚ್ಚರಿಸಿದರು.

ಸಾರ್ವಜನಿಕ ಆರೋಗ್ಯದಲ್ಲಿ ಸಹಕಾರ

  1. ತಮ್ಮ ತಮ್ಮ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಬಗ್ಗೆ ಹಾಗು ಸ್ಥಿತಿ ಗತಿಯ ಬಗ್ಗೆ ಉಭಯ ಕಡೆಯವರೂ ಅಭಿಪ್ರಾಯಗಳನ್ನು ಹಂಚಿಕೊಂಡರು. ಮತ್ತು ಈ ಬಿಕ್ಕಟ್ಟಿನ ನಡುವೆಯೂ ಉಭಯ ದೇಶಗಳು ಸುಸ್ಥಿರ ಬಾಂಧವ್ಯವನ್ನು ಮುಂದುವರಿಸಿಕೊಂಡು ಬಂದಿರುವ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು. ಭಾರತದಲ್ಲಿ ತಯಾರಾದ ಆಕ್ಸ್ ಫರ್ಡ್ ಆಸ್ಟ್ರಾ ಜೆನಿಕಾ ಕೊವಿಶೀಲ್ಡ್ ಲಸಿಕೆಯ 3.2 ಮಿಲಿಯನ್ ಡೋಸ್ ನಷ್ಟು ಲಸಿಕೆಯನ್ನು ಒದಗಿಸಿರುವುದಕ್ಕೆ ಬಾಂಗ್ಲಾದೇಶವು ಭಾರತ ಸರಕಾರಕ್ಕೆ ಧನ್ಯವಾದ ಹೇಳಿತಲ್ಲದೆ ಮೊದಲ ಹಂತದಲ್ಲಿ 5 ಮಿಲಿಯನ್ ಡೋಸ್ ಗಳನ್ನು ಪೂರೈಕೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತು. ಭಾರತದ ಸೀರಂ ಇನಸ್ಟಿಟ್ಯೂಟ್ ನಿಂದ ಬಾಂಗ್ಲಾದೇಶವು ಪಡೆದುಕೊಂಡಿರುವ  ಲಸಿಕೆಯ ಉಳಿದ ದಾಸ್ತಾನನ್ನು ನಿಯಮಿತವಾಗಿ ಪೂರೈಕೆ ಮಾಡುವಂತೆ ಬಾಂಗ್ಲಾದೇಶವು ಭಾರತವನ್ನು ಕೋರಿಕೊಂಡಿತು. ಭಾರತವು ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ಬದ್ಧತೆಗಳಿಗೆ ಅನ್ವಯಿಸಿ ಅದರನ್ವಯ ಉತ್ತಮ ಸಹಕಾರ ನೀಡುವ ಭರವಸೆ ನೀಡಿತು.
  2. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಣಾಮವಾಗಿ ಸಾರ್ವಜನಿಕ ಆರೋಗ್ಯ ವಲಯದ ಮೇಲೆ ಅದರಲ್ಲೂ ನಿರ್ದಿಷ್ಟವಾಗಿ ಆರೋಗ್ಯ ರಕ್ಷಣಾ ಸೇವೆಗಳು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಇನ್ನಷ್ಟು ಬಲವಾದ ಸಹಯೋಗ ಉಭಯ ದೇಶಗಳ ನಡುವೆ ಆಗಬೇಕಾಗಿರುವುದನ್ನು ಉಭಯ ದೇಶಗಳ ಪ್ರಧಾನ ಮಂತ್ರಿಗಳು ಮನಗಂಡರು. ತರಬೇತಿ, ಸಾಮರ್ಥ್ಯ ವರ್ಧನೆ, ಮತ್ತು ತಂತ್ರಜ್ಞಾನ ವರ್ಗಾವಣೆಯತ್ತ ಗಮನ ಕೇಂದ್ರೀಕರಿಸಿ ಪರಸ್ಪರ ಸಹಕಾರ ಹೆಚ್ಚಬೇಕು ಎಂದು ಬಾಂಗ್ಲಾದೇಶದ ವತಿಯಿಂದ ಕೋರಿಕೊಳ್ಳಲಾಯಿತು. ಬಾಂಗ್ಲಾ ದೇಶದ ವತಿಯಿಂದ ಜೈವಿಕ ಭದ್ರತೆ ಸಹಕಾರದ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು ಮತ್ತು ಅರ್ಥಪೂರ್ಣ ಜೈವಿಕ ಭದ್ರತೆ ಕ್ರಮಗಳಿಲ್ಲದೆ ಆರ್ಥಿಕ ಪ್ರಗತಿ ಸಾಧ್ಯವಾಗದು ಎಂಬ ಸಂದೇಶವನ್ನು ಕೋವಿಡ್ -19 ಅನಾವರಣ ಮಾಡಿದ್ದು, ಈ ವಲಯದಲ್ಲಿ ಉಭಯ ದೇಶಗಳು ಸಹಕಾರವನ್ನು ಅನ್ವೇಷಿಸಬಹುದು, ಗಡಿಗಳನ್ನು ಮೀರಿ  ವ್ಯಾಪಾರ ಇರುವ ಕಾರಣಕ್ಕೆ  ಹಾಗು ಉಭಯ ದೇಶಗಳ ನಡುವಿನಲ್ಲಿ  ಜನತೆ ಮತ್ತು ಜನತೆ ನಡುವೆ ಸಂಪರ್ಕ ಇರುವ ಕಾರಣಕ್ಕೆ ಇದು ಅವಶ್ಯ ಎಂದು ಪ್ರತಿಪಾದಿಸಲಾಯಿತು. ಉಭಯ ಪ್ರಧಾನ ಮಂತ್ರಿಗಳೂ ಸಹಯೋಗ ಮತ್ತು ವಿವಿಧ ಸ್ಥರಗಳಲ್ಲಿ ಭಾರತದ  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಬಾಂಗ್ಲಾದೇಶದ ಬಾಂಗ್ಲಾದೇಶ ವೈದ್ಯಕೀಯ ಸಂಶೋಧನಾ ಮಂಡಳಿ ನಡುವಣ ಸಕ್ರಿಯ ಸಹಕಾರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಗಡಿ ನಿರ್ವಹಣೆ ಮತ್ತು ಭದ್ರತಾ ಸಹಕಾರ

  1. ಉಭಯ ನಾಯಕರೂ ಸಮರ್ಪಕ ಗಡಿ ನಿರ್ವಹಣೆಯ ಮಹತ್ವದ ಬಗ್ಗೆ ಒತ್ತು ನೀಡಿದರು. ಸ್ಥಿರ ಮತ್ತು ಅಪರಾಧ ಮುಕ್ತ ಗಡಿಯನ್ನು ಖಾತ್ರಿಪಡಿಸುವ ಬಗ್ಗೆ ಅವರು ಆದ್ಯತೆ ನೀಡಿದರು. ಗಡಿಯಲ್ಲಿ ಯಾವುದೇ ಸಾವು ಕೂಡಾ ಕಳವಳದ ಸಂಗತಿ ಎಂಬುದನ್ನು ಒಪ್ಪಿಕೊಂಡ ಉಭಯ ನಾಯಕರೂ ಸಂಬಂಧಿತ ಗಡಿ ರಕ್ಷಣಾ ಪಡೆಗಳಿಗೆ ಗಡಿ ಭದ್ರತೆಯನ್ನು ಖಾತ್ರಿಪಡಿಸಲು ಜನಕೇಂದ್ರಿತ ಕ್ರಮಗಳನ್ನು ಹೆಚ್ಚು ಹೆಚ್ಚು ಕೈಗೊಳ್ಳುವಂತೆ ಹಾಗು ನಾಗರಿಕರ ಸಾವಿನ ಸಂಖ್ಯೆಯನ್ನು  ಶೂನ್ಯಕ್ಕೆ ಇಳಿಸಬೇಕು ಎಂದು ನಿರ್ದೇಶಿಸಲು ಒಪ್ಪಿಕೊಂಡರು. ಬಾಂಗ್ಲಾದೇಶದ ವತಿಯಿಂದ ಮಾನವೀಯ ನೆಲೆಯಲ್ಲಿ ರಾಜಶಾಹಿ ಜಿಲ್ಲೆಯ ಬಳಿ ಪದ್ಮಾ ನದಿಯ ಮೂಲಕ 1.3 ಕಿಲೋ ಮೀಟರ್ ಉದ್ದದ ಮುಗ್ಧರಿಗೆ ಸಾಗಿ ಹೋಗಲು ಅನುಕೂಲತೆ ಒದಗಿಸುವ ಹಾದಿಯ ಬಗ್ಗೆ ತನ್ನ ಕೋರಿಕೆಯನ್ನು ಪುನರುಚ್ಚರಿಸಲಾಯಿತು. ಕೋರಿಕೆಯನ್ನು ಪರಿಶೀಲಿಸುವ ಬಗ್ಗೆ ಭಾರತದ ವತಿಯಿಂದ ಭರವಸೆ ನೀಡಲಾಯಿತು. ಸಾಧ್ಯವಿರುವಷ್ಟು ಬೇಗ ಭಾರತದ ತ್ರಿಪುರಾ-ಬಾಂಗ್ಲಾದೇಶ ಸೆಕ್ಟರ್ ಒಳಗೊಂಡಂತೆ ಅಂತಾರಾಷ್ಟ್ರೀಯ ಗಡಿಯಲ್ಲಿ ಬಾಕಿ ಇರುವ ಎಲ್ಲಾ ವಲಯಗಳಲ್ಲಿ ಗಡಿ ಬೇಲಿಯನ್ನು ಪೂರ್ಣಗೊಳಿಸುವ ಬಗ್ಗೆ ಭಾರತದ ವತಿಯಿಂದ ಬಾಂಗ್ಲಾದೇಶವನ್ನು ಕೋರಲಾಯಿತು. ಈ ವಿಷಯದ ಬಗ್ಗೆ ಗಮನ ಹರಿಸುವುದಾಗಿ ಬಾಂಗ್ಲಾದೇಶದ ವತಿಯಿಂದ ಭರವಸೆ ನೀಡಲಾಯಿತು.
  2. ಉಭಯ ದೇಶಗಳ ನಡುವೆ ಇರುವ ರಕ್ಷಣಾ ಸಹಕಾರದ ಬಗ್ಗೆ ಉಭಯ ಕಡೆಯವರೂ ತೃಪ್ತಿ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಆಗಾಗ ಕಾರ್ಯಕ್ರಮಗಳ ವಿನಿಮಯ ಮತ್ತು ತರಬೇತಿಯಲ್ಲಿ  ಸಹಕಾರದ ಹೆಚ್ಚಳ ಮತ್ತು ಸಾಮರ್ಥ್ಯ ವರ್ಧನೆಯ ಬಗ್ಗೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಭಾರತದ ವತಿಯಿಂದ ಡಿಫೆನ್ಸ್ ಲೈನ್ ಆಫ್ ಕ್ರೆಡಿಟ್ ನ ತ್ವರಿತ ಕಾರ್ಯಾರಂಭಕ್ಕೆ ಕೋರಿಕೆ ಮಂಡಿಸಲಾಯಿತು.
  3. ಉಭಯ ದೇಶಗಳೂ ವಿಪತ್ತು ನಿರ್ವಹಣೆ, ಪುನಶ್ಚೇತನ ಮತ್ತು ನಿವಾರಣೆ ಕುರಿತ ಎಂ.ಒ.ಯು.ಗೆ ಅಂಕಿತ ಹಾಕಿರುವುದನ್ನು ಉಭಯ ಕಡೆಯವರೂ ಸಾಗತಿಸಿದರು. ಇದು ನೈಸರ್ಗಿಕ ವಿಪತ್ತುಗಳನ್ನು ತಡೆಯಲು ಸಾಂಸ್ಥಿಕ ಸಹಕಾರವನ್ನು ಒಗ್ಗೂಡಿಸುತ್ತದೆ ಎಂದು ಅಭಿಪ್ರಾಯಪಡಲಾಗಿದೆ.
  4. ಭಯೋತ್ಪಾದನೆಯು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅಪಾಯವಾಗಿ ಉಳಿದಿರುವುದನ್ನು ಪರಿಗಣಿಸಿದ ಉಭಯ ದೇಶಗಳ ನಾಯಕರು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪದಲ್ಲಿ ಮತ್ತು ಅದರ ಎಲ್ಲಾ ರೂಪದ ಅಭಿವ್ಯಕ್ತಿಗಳನ್ನು  ನಿರ್ಮೂಲನೆ ಮಾಡುವ ಬಗ್ಗೆ ತಮ್ಮ ಕಟಿಬದ್ಧತೆಯನ್ನು ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಮೋದಿ ಅವರು ಭದ್ರತಾ ಸಂಬಂಧಿ ವಿಷಯಗಳಲ್ಲಿ ಬಾಂಗ್ಲಾದೇಶ ನೀಡಿರುವ ಸಹಕಾರಕ್ಕೆ ಭಾರತದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಸಹಕಾರದ ಹೊಸ ವಲಯಗಳು

  1. ಬಾಂಗ್ಲಾದೇಶವು ತನ್ನ ಮೊದಲ ಉಪಗ್ರಹ, ಬಂಗಬಂಧು ಉಪಗ್ರಹ (ಬಿ.ಎಸ್, -1) ವನ್ನು 2017ರಲ್ಲಿ ಉಡಾವಣೆ ಮಾಡಿದ್ದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ ಹಸೀನಾ ಶೇಖ್ ಬಾಂಗ್ಲಾದೇಶವು ಎರಡನೆ ಉಪಗ್ರಹವನ್ನು ಶೀಘ್ರದಲ್ಲಿಯೇ ಗಗನಕ್ಕೆ ಉಡಾಯಿಸಲಿದೆ ಎಂದರು. ಈ ನಿಟ್ಟಿನಲ್ಲಿ ಬಾಹ್ಯಾಕಾಶದಲ್ಲಿ ಮತ್ತು ಉಪಗ್ರಹ ಸಂಶೋಧನೆಯಲ್ಲಿ ತಂತ್ರಜ್ಞಾನ ವರ್ಗಾವಣೆ ಹಾಗು ಇನ್ನಷ್ಟು ಸಹಯೋಗಕ್ಕೆ ಉಭಯ ಪ್ರಧಾನ ಮಂತ್ರಿಗಳೂ ಒಪ್ಪಿಕೊಂಡರು.
  2. ದ್ವಿಪಕ್ಷೀಯ ಸಹಕಾರದಲ್ಲಿ ಹೊಸ ಹೊಸ ಕ್ಷೇತ್ರಗಳಿಗೆ ಸಾಮರ್ಥ್ಯ ಮತ್ತು ಅವಕಾಶ ಇರುವುದನ್ನು ಮನಗಂಡ ಉಭಯ ಕಡೆಯವರೂ ವಿಜ್ಞಾನ, ಕೃತಕ ಬುದ್ಧಿಮತ್ತೆ, ಅಣು ತಂತ್ರಜ್ಞಾನದ ಶಾಂತಿಯುತ ಬಳಕೆ, ಬೃಹತ್ ದತ್ತಾಂಶಗಳು ಮತ್ತು ಆರೋಗ್ಯ ಹಾಗು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಕೇಂದ್ರಿತ ಸೇವೆಗಳು ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಯನ್ನು ಕ್ರೋಡೀಕರಿಸುವಂತೆ ಉಭಯ ದೇಶಗಳ ಪ್ರಧಾನ ಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಲು ಒಪ್ಪಿಕೊಂಡರು. ಉಭಯ ದೇಶಗಳ ನಡುವೆ ಯುವ ವಿನಿಮಯ ಕಾರ್ಯಕ್ರಮಗಳನ್ನು ಇನ್ನಷ್ಟು  ಉತ್ತೇಜಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ 50 ಮಂದಿ ಯುವ ಉದ್ಯಮಿಗಳನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದರಲ್ಲದೆ ಅವರ ಚಿಂತನೆಗಳನ್ನು ಹೂಡಿಕೆದಾರರ ಎದುರು ಮಂಡಿಸಲು ಹೇಳಿದರು.
  3. ಭೇಟಿಯ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾಶೋರ್ ನಲ್ಲಿಯ ಜಶೋರೇಶ್ವರಿ ದೇವಿ ದೇವಾಲಯಕ್ಕೆ ಮತ್ತು ಗೋಪಾಲಗಂಜ್ ನಲ್ಲಿರುವ ಓರಾಕಾಂಡಿ ದೇವಾಲಯಕ್ಕೆ 2021ರ ಮಾರ್ಚ್ 27ರಂದು ಭೇಟಿ ನೀಡಿದರು. ಪ್ರಧಾನ ಮಂತ್ರಿ ಅವರು ಇಲ್ಲಿರುವ ಧಾರ್ಮಿಕ ಸೌಹಾರ್ದದ ಪರಂಪರೆಯನ್ನು ಕೊಂಡಾಡಿದರು.

ಮ್ಯಾನ್ಮಾರಿನ ರಾಖಿನೇ ರಾಜ್ಯದಿಂದ ಬಲವಂತವಾಗಿ ಸ್ಥಳಾಂತರಿತರಾಗಿ ನಿರಾಶ್ರಿತರಾದ ವ್ಯಕ್ತಿಗಳು

  1. ಮ್ಯಾನ್ಮಾರಿನ ರಾಖಿನೇ ರಾಜ್ಯದಿಂದ ಬಲವಂತವಾಗಿ ಹೊರಹಾಕಲ್ಪಟ್ಟ 1.1 ಮಿಲಿಯನ್ ನಿರಾಶ್ರಿತರಿಗೆ ಆಶ್ರಯ ನೀಡಿದ ಮತ್ತು ಮಾನವೀಯ ನೆಲೆಯಲ್ಲಿ ಸಹಾಯ ನೀಡಿರುವ ಬಾಂಗ್ಲಾದೇಶದ ಔದಾರ್ಯದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಸುರಕ್ಷೆ, ಹಾಗು ಈ ವಲಯದ ಹೆಚ್ಚಿನ ಭದ್ರತೆಗಾಗಿ ಅವರು ತಾಯ್ನಾಡಿಗೆ ತ್ವರಿತವಾಗಿ ಹಾಗು ಸುಸ್ಥಿರ ಹಿಂತಿರುಗುವಿಕೆಯ ಪ್ರಾಮುಖ್ಯವನ್ನು ಉಭಯ ದೇಶಗಳ ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು.  ಪ್ರಧಾನ ಮಂತ್ರಿ ಶೇಖ್  ಹಸೀನಾ ಅವರು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿ ಭಾರತವು ನಿರಾಶ್ರಿತ ರೊಹಿಂಗ್ಯಾ ಗಳು ಮ್ಯಾನ್ಮಾರ್ ಗೆ ಮರಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಭಾರತಕ್ಕೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ತನ್ನ ನಿರಂತರ ಬೆಂಬಲ ಇರುವ ಬಗ್ಗೆ  ಭಾರತವು ಭರವಸೆ ನೀಡಿತು.

ವಲಯದಲ್ಲಿ ಮತ್ತು ವಿಶ್ವದಲ್ಲಿ ಸಹಭಾಗಿಗಳು

  1. ಉಭಯ ದೇಶಗಳು ವಿಶ್ವ ಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಸಾಮಾನ್ಯ ಉದ್ದೇಶಗಳ ಮೇಲೆ ನಿರಂತರ ಕೆಲಸ ಮಾಡುವುದಕ್ಕೆ ಒಪ್ಪಿಕೊಂಡವು.
  2. ಪ್ರಾದೇಶಿಕ ಸಂಘಟನೆಗಳಾದ ಸಾರ್ಕ್ ಮತ್ತು ಬಿ.ಐ.ಎಂ.ಎಸ್.ಟಿ.ಇ.ಸಿ. ಗಳಂತಹವು ಕೋವಿಡ್ -19 ಜಾಗತಿಕ ಸಾಂಕ್ರಾಮಿಕೋತ್ತರ ಪರಿಸ್ಥಿತಿಯಲ್ಲಿ ಪ್ರಮುಖ ಪಾತ್ರ ವಹಿಸಲಿರುವುದನ್ನು ಉಭಯ ನಾಯಕರೂ ಒತ್ತಿ ಹೇಳಿದರು. ಬಾಂಗ್ಲಾದೇಶದ ಪ್ರಧಾನ ಮಂತ್ರಿ ಅವರು ಸಾರ್ಕ್ ನಾಯಕರ ವೀಡಿಯೋ ಸಮ್ಮೇಳನವನ್ನು 2020ರ ಮಾರ್ಚ್ ನಲ್ಲಿ ನಡೆಸಿದುದಕ್ಕಾಗಿ ಮತ್ತು ದಕ್ಷಿಣ ಏಷಿಯಾ ವಲಯದಲ್ಲಿ ಜಾಗತಿಕ ಸಾಂಕ್ರಾಮಿಕದ ಪರಿಣಾಮಗಳನ್ನು ತಡೆಗಟ್ಟಲು  ಸಾರ್ಕ್ ತುರ್ತು ಪ್ರತಿಕ್ರಿಯಾ ನಿಧಿಯ ಸ್ಥಾಪನೆಯನ್ನು ಪ್ರಸ್ತಾಪಿಸಿದುದಕ್ಕಾಗಿ ಭಾರತದ ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಸಲ್ಲಿಸಿದರು.
  3. ಉಭಯ ನಾಯಕರೂ ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ವೇದಿಕೆಗಳಲ್ಲಿ ಆದ್ಯತೆಯಾಧಾರದಲ್ಲಿ ಸಹಕಾರ ವಿಸ್ತರಿಸಲು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ ಗುರಿ ಸಾಧನೆಗಾಗಿ ಅವರು ಎಲ್ಲಾ ಸದಸ್ಯ ರಾಷ್ಟ್ರಗಳ ಸಾಮೂಹಿಕ ಸಮೃದ್ಧಿಯನ್ನು ಸಾಧಿಸುವ ಉದ್ದೇಶದಿಂದ ಅಂತರ ಪ್ರಾದೇಶಿಕ ಸಹಕಾರಕ್ಕಾಗಿ ಬಿ.ಐ.ಎಂ.ಎಸ್.ಟಿ.ಇ.ಸಿ.ಯನ್ನು ಇನ್ನಷ್ಟು ಕ್ರಿಯಾಶೀಲ ವಾಹನವನ್ನಾಗಿ ರೂಪಿಸಲು ಒಪ್ಪಿಕೊಂಡರು.
  4. 2021ರ ಅಕ್ಟೋಬರ್ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶವು ಐ.ಒ.ಆರ್.ಎ.ಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಿರುವುದರತ್ತ ಗಮನ ಸೆಳೆದ ಬಾಂಗ್ಲಾದೇಶವು ಹೆಚ್ಚಿನ ನಾವಿಕ ಸುರಕ್ಷೆ ಮತ್ತು ಭಾರತೀಯ ಸಾಗರ ವಲಯದಲ್ಲಿ ಭದ್ರತೆಗಾಗಿ ಕೆಲಸ ಮಾಡುವುದಕ್ಕಾಗಿ ಭಾರತದ ಬೆಂಬಲವನ್ನು ಕೋರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶವನ್ನು ಅಭಿನಂದಿಸಿದರಲ್ಲದೆ ಈ ನಿಟ್ಟಿನಲ್ಲಿ ಭಾರತದ ಸಹಕಾರದ ಭರವಸೆ ನೀಡಿದರು.
  5. ಡಬ್ಲ್ಯು.ಎಚ್.ಒ.ದಲ್ಲಿ 2023ರಲ್ಲಿ ಆಗ್ನೇಯ ಏಷಿಯಾ ಪ್ರಾದೇಶಿಕ ಕಚೇರಿಯ ನಿರ್ದೇಶಕ ಹುದ್ದೆಗೆ ಬಾಂಗ್ಲಾದೇಶದ ಅಭ್ಯರ್ಥಿಯನ್ನು ಬೆಂಬಲಿಸುವುದನ್ನು ದೃಢಪಡಿಸಿರುವುದಕ್ಕೆ ಭಾರತ ಸರಕಾರಕ್ಕೆ  ಬಾಂಗ್ಲಾದೇಶದ ವತಿಯಿಂದ  ಧನ್ಯವಾದ ಸಲ್ಲಿಸಲಾಯಿತು.
  6. ಬಾಂಗ್ಲಾದೇಶವು ವಿಪತ್ತು ಪುನಶ್ಚೇತನ ಮೂಲಸೌಕರ್ಯ ಮಿತ್ರಕೂಟಕ್ಕೆ (ಸಿ.ಡಿ.ಆರ್.ಐ.) ಗೆ ಸೇರ್ಪಡೆಗೊಳ್ಳುವ ಬಗ್ಗೆ ಭಾರತದ ವತಿಯಿಂದ ಆಶಾವಾದವನ್ನು ವ್ಯಕ್ತಪಡಿಸಲಾಯಿತು. ಇದು ಬಾಂಗ್ಲಾದೇಶಕ್ಕೆ ಮೂಲಸೌಕರ್ಯ ಅಪಾಯ ನಿಭಾವಣೆ, ಗುಣಮಾನಕಗಳು, ಹಣಕಾಸು ಮತ್ತು ಪುನಶ್ಚೇತನಾ ವ್ಯವಸ್ಥೆಯ ಬಗ್ಗೆ ಇತರ ಸದಸ್ಯ ರಾಷ್ಟ್ರಗಳ ಜೊತೆ ತನ್ನ ಅನುಭವವನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಒದಗಿಸಲಿದೆ.
  7. ಹೊಸ ಅಭಿವೃದ್ಧಿ ಬ್ಯಾಂಕಿಗೆ ಸೇರ್ಪಡೆಗೊಳ್ಳುವ ಬಾಂಗ್ಲಾದೇಶದ ನಿರ್ಧಾರವನ್ನು ಭಾರತದ ವತಿಯಿಂದ ಸ್ವಾಗತಿಸಲಾಯಿತು.

        ದ್ವಿಪಕ್ಷೀಯ ದಾಖಲೆಗಳಿಗೆ ಅಂಕಿತ ಮತ್ತು ಯೋಜನೆಗಳ ಉದ್ಘಾಟನೆ.

  1. ಭೇಟಿಯ ಅವಧಿಯಲ್ಲಿ ಈ ಕೆಳಗಿನ ದ್ವಿಪಕ್ಷೀಯ ದಾಖಲೆಗಳಿಗೆ ಅಂಕಿತ ಹಾಕಲಾಗಿದೆ ಮತ್ತು ವಿನಿಮಯ ಮಾಡಿಕೊಳ್ಳಲಾಗಿದೆ.

i. ವಿಪತ್ತು ನಿರ್ವಹಣೆ, ಪುನಶ್ಚೇತನ ಮತ್ತು ನಿವಾರಣೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಎಂ.ಒ.ಯು.

ii. ಬಾಂಗ್ಲಾದೇಶ್ ನ್ಯಾಶನಲ್ ಕೆಡೆಟ್ ಕಾರ್ಪ್ಸ್ (ಬಿ.ಎನ್.ಸಿ.ಸಿ.) ಮತ್ತು ಭಾರತದ ನ್ಯಾಶನಲ್ ಕೆಡೆಟ್ ಕಾರ್ಪ್ಸ್ (ಐ.ಎನ್.ಸಿ.ಸಿ.) ನಡುವೆ ಎಂ.ಒ.ಯು.

iii. ಬಾಂಗ್ಲಾದೇಶ ಮತ್ತು ಭಾರತ ನಡುವಣ ವ್ಯಾಪಾರ ಪರಿಹಾರ ಕ್ರಮಗಳ ಕ್ಷೇತ್ರದಲ್ಲಿ ಸಹಕಾರದ ಚೌಕಟ್ಟು ಸ್ಥಾಪನೆಗಾಗಿ ಎಂ.ಒ.ಯು.

iv. ಬಾಂಗ್ಲಾದೇಶ್ –ಭಾರೋತ್ ಡಿಜಿಟಲ್ ಸೇವೆಗಳು ಮತ್ತು ಉದ್ಯೋಗ ತರಬೇತಿ (ಬಿ.ಡಿ.ಎಸ್.ಇ.ಟಿ.) ಕೇಂದ್ರಕ್ಕೆ ಐ.ಸಿ.ಟಿ. ಉಪಕರಣಗಳು, ಕೋರ್ಸ್ ಸಂಬಂಧಿ ಸಾಮಗ್ರಿಗಳು ಮತ್ತು ಪರಾಮರ್ಶನ ಗ್ರಂಥಗಳು ಒದಗಿಸಲು ತ್ರಿಪಕ್ಷೀಯ ಎಂ.ಒ.ಯು.

v. ರಾಜಾಶಾಹಿ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರೀಡಾ ಸೌಲಭ್ಯಗಳ ಸ್ಥಾಪನೆಗೆ ತ್ರಿಪಕ್ಷೀಯ ತಿಳುವಳಿಕಾ ಒಡಂಬಡಿಕೆ (ಎಂ.ಒ.ಯು.)

  1. ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಉಭಯ ದೇಶಗಳ ಪ್ರಧಾನ ಮಂತ್ರಿಗಳು ಈ ಕೆಳಗಿನ ಘೋಷಣೆಗಳನ್ನು ಮಾಡಿದರು, ಅನಾವರಣ/  ಉದ್ಘಾಟನೆಗಳನ್ನು ನೆರವೇರಿಸಿದರು.

i. ದ್ವಿಪಕ್ಷೀಯ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯ 50 ನೇ ವರ್ಷಾಚರಣೆಯ ಸ್ಮರಣಾರ್ಥ ಭಾರತ-ಬಾಂಗ್ಲಾದೇಶ್ ಸ್ನೇಹಸೌಹಾರ್ದದ  ಅಂಚೆ ಚೀಟಿಗಳ ಬಿಡುಗಡೆ.

ii. 1971ರ ವಿಮೋಚನಾ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಭಾರತೀಯ ಸಶಸ್ತ್ರ ಪಡೆಗಳ ಹುತಾತ್ಮ ಯೋಧರ ಗೌರವಾರ್ಥ ಬ್ರಹ್ಮನ್ ಬಾರಿಯಾದ ಅಶುಗಂಜ್ ನಲ್ಲಿ ಸ್ಮಾರಕಕ್ಕೆ ಶಿಲಾನ್ಯಾಸ ಕಾರ್ಯಕ್ರಮ.

iii. ಐದು ಪ್ಯಾಕೇಜ್ ಗಳ (ಅಮೀನ್ ಬಜಾರ್-ಕಾಲಿಯಾಕೊಯಿರ್, ರೂಪ್ಪೂರ್-ಢಾಕ್ಕಾ, ರೂಪ್ಪೂರ್-ಗೋಪಲಗಂಜ್, ರೂಪ್ಪೂರ್ –ಧಾಮರೈ,  ರೂಪ್ಪೂರ್ –ಬೋಗ್ರಾ) ರೂಪ್ಪೂರ್ ಇಂಧನ ಉತ್ಖನನ ಯೋಜನೆಗೆ ಶಿಲಾನ್ಯಾಸ.

iv. ಮೂರು ಗಡಿ ಹಾತ್ ಗಳ ಉದ್ಘಾಟನೆ-ನಾಲಿಕಟ್ಟ (ಭಾರತ)-ಸಾಯ್ದಾಬಾದ್ (ಬಾಂಗ್ಲಾದೇಶ್); ರಿಂಗ್ಕು (ಭಾರತ) –ಬಗಾನ್ ಬಾರಿ (ಬಾಂಗ್ಲಾದೇಶ್) ಮತ್ತು ಭೋಲಾಗುಂಜ್ (ಭಾರತ) –ಭೋಲಾಗುಂಜ್ (ಬಾಂಗ್ಲಾದೇಶ)

v. ಕುಥಿಬಾರಿಯಲ್ಲಿ ರಬೀಂದ್ರ ಭವನ್ ಸೌಲಭ್ಯಗಳ ಉದ್ಘಾಟನೆ.

vi. ಢಾಕಾದಿಂದ ಹೊಸ ಜಲ್ ಪೈಗುರಿ-ಢಾಕ್ಕಾ ಮಾರ್ಗದಲ್ಲಿ ಚಿಲಾಹಟಿ-ಹಲ್ದಿಬಾರಿ ರೈಲ್ ಲಿಂಕ್ ಮೂಲಕ “ಮಿಥಾಲಿ ಎಕ್ಸ್ ಪ್ರೆಸ್” ಪ್ರಯಾಣಿಕ ರೈಲು  ಉದ್ಘಾಟನೆ.

vii. ಮುಜೀಬ್ ನಗರ್ ಮತ್ತು ನಾಡಿಯಾ ನಡುವಣ ಚಾರಿತ್ರಿಕ ರಸ್ತೆಯ ಜೋಡಣೆ ಘೋಷಣೆ ಮತ್ತು ಶಾಧಿನೋಟಾ ಶೊರೊಕ್ ಎಂದು ಅದರ ಮರುನಾಮಕರಣ.

  1. ಪ್ರಧಾನ ಮಂತ್ರಿ ಶ್ರೀ ನರೇಂದ್ರ  ಮೋದಿ ಅವರು ಬಾಂಗ್ಲಾದೇಶದಲ್ಲಿ ವಾಸ್ತವ್ಯದ ಸಮಯದಲ್ಲಿ ತಮಗೆ ಮತ್ತು ತಮ್ಮ ನಿಯೋಗದ ಸದಸ್ಯರಿಗೆ ನೀಡಿದ ಹೃದಯಸ್ಪರ್ಶೀ ಮತ್ತು ಹಾರ್ದಿಕ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.