The country was saddened by the insult to the Tricolour on the 26th of January in Delhi: PM Modi
India is undertaking the world’s biggest Covid Vaccine Programme: PM Modi
India has vaccinated over 30 lakh Corona Warriors: PM Modi
Made in India vaccine is, of course, a symbol of India’s self-reliance: PM Modi
India 75: I appeal to all countrymen, especially the young friends, to write about freedom fighters, incidents associated with freedom, says PM Modi
The best thing that I like in #MannKiBaat is that I get to learn and read a lot. In a way, indirectly, I get an opportunity to connect with you all: PM
Today, in India, many efforts are being made for road safety at the individual and collective level along with the Government: PM

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ನಾನು ಮನದ ಮಾತುಗಳನ್ನು ಆಡುವಾಗ, ನಿಮ್ಮ ಮಧ್ಯದಲ್ಲಿ, ನಾನು ನಿಮ್ಮ ಕುಟುಂಬದ ಓರ್ವ ಸದಸ್ಯನಾಗಿರುವಂತೆ  ನನಗೆ ಭಾಸವಾಗುತ್ತದೆ.  ನಮ್ಮ ಚಿಕ್ಕ ಚಿಕ್ಕ ಮಾತುಗಳು, ಪರಸ್ಪರರಿಗೆ ಸ್ವಲ್ಪ ಕಲಿಸುವಂತಹ, ಮನಸ್ಫೂರ್ತಿಯಾಗಿ ಜೀವಿಸುವ ಪ್ರೇರಣೆ ನೀಡುವ ಜೀವನದ ಹುಳಿ–ಸಿಹಿ ಅನುಭವ ಇದೇ ಅಲ್ಲವೇ ಮನದ ಮಾತುಗಳು.

ಇಂದು ಜನವರಿ ತಿಂಗಳ ಕೊನೆಯ ದಿನ. ನೀವು ಕೂಡಾ ನನ್ನಂತೆಯೇ ಕೆಲವೇ ದಿನಗಳ ಹಿಂದೆ 2021 ಶುರುವಾಯಿತೆಂದು ಯೋಚಿಸುತ್ತಿದ್ದೀರಾ? ಜನವರಿಯ ತಿಂಗಳು ಪೂರ್ತಿ ಕಳೆದುಹೋಯಿತೆಂದು ಅನಿಸುವುದೇ ಇಲ್ಲ – ಇದನ್ನೇ ಅಲ್ಲವೇ ಸಮಯದ ಚಲನೆ ಎಂದು ಕರೆಯುವುದು.  ನಾವು ಪರಸ್ಪರರಿಗೆ ಶುಭಾಶಯ ಕೋರಿದ್ದು ಕೆಲವು ದಿನಗಳ ಹಿಂದೆಯಷ್ಟೇ ಅಲ್ಲವೇ, ನಂತರ ನಾವು ಲೋರಿ ಆಚರಿಸಿದೆವು, ಮಕರ ಸಂಕ್ರಾಂತಿ ಆಚರಿಸಿದೆವು, ಪೊಂಗಲ್, ಬಿಹು ಆಚರಿಸಿದೆವು. ದೇಶದ ಬೇರೆ ಬೇರೆ ಭಾಗಗಳಲ್ಲಿ ಹಬ್ಬದ ಸಡಗರವಿತ್ತು. ಜನವರಿ 23 ರಂದು ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನದ ರೂಪದಲ್ಲಿ ಆಚರಿಸಿದೆವು ಮತ್ತು ಜನವರಿ 26 ರಂದು ಗಣರಾಜ್ಯೋತ್ಸವದ ಅದ್ಭುತ ಪಥಸಂಚಲನವನ್ನೂ ನೋಡಿದೆವು. 

ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ‘ಬಜೆಟ್ ಅಧಿವೇಶನ’ ಕೂಡಾ ಆರಂಭವಾಗಿದೆ.   ಇವುಗಳ ನಡುವೆಯೇ ನಾವೆಲ್ಲರೂ ಬಹಳವಾಗಿ ನಿರೀಕ್ಷಿಸುತ್ತಿದ್ದ ಮತ್ತೊಂದು ಕೆಲಸವೂ ನಡೆಯಿತು – ಅದೆಂದರೆ ಪದ್ಮ ಪ್ರಶಸ್ತಿಗಳ ಘೋಷಣೆ.  ಅಸಾಧಾರಣ ಕೆಲಸ ಮಾಡಿದ ಜನರ ಸಾಧನೆಗಾಗಿ ಮತ್ತು ಮಾನವೀಯತೆಯ ನಿಟ್ಟಿನಲ್ಲಿ ಅವರು ನೀಡಿದ ಕೊಡುಗೆಗಾಗಿ ರಾಷ್ಟ್ರ ಅವರನ್ನು ಸನ್ಮಾನಿಸಿತು.  ಈ ವರ್ಷ ಕೂಡಾ,  ಪ್ರಶಸ್ತಿಗೆ ಭಾಜನರಾದವರಲ್ಲಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಧಾರಣ ಕಾರ್ಯ ಮಾಡಿದವರು, ತಮ್ಮ ಕಾರ್ಯಗಳಿಂದ ಬೇರೆಯವರ ಜೀವನ ಬದಲಾಯಿಸಿದವರು, ದೇಶವನ್ನು ಮುನ್ನಡೆಸಿದವರು ಸೇರಿದ್ದಾರೆ.  ಅಂದರೆ, ತಳ ಮಟ್ಟದಲ್ಲಿ ಕಾರ್ಯ  ನಿರ್ವಹಿಸುವ ಪ್ರಚಾರಕ್ಕೆ ಬಾರದ ಹೀರೋಗಳಿಗೆ ಪದ್ಮ ಪ್ರಶಸ್ತಿ ನೀಡುವ ಸಂಪ್ರದಾಯವನ್ನು  ದೇಶ ಕೆಲ ವರ್ಷಗಳ ಹಿಂದೆ ಪ್ರಾರಂಭಿಸಿತ್ತು, ಇದನ್ನು ಈಗಲೂ ಕೂಡಾ ಮುಂದುವರಿಸಿಕೊಂಡು ಬರಲಾಗಿದೆ. ಈ ಜನರ ಬಗ್ಗೆ, ಅವರು ನೀಡಿದ ಕೊಡುಗೆಯ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಿ, ಕುಟುಂಬದಲ್ಲಿ ಅವರ ಬಗ್ಗೆ ಚರ್ಚಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ.  ಇದರಿಂದ ಎಲ್ಲರಿಗೂ ಎಷ್ಟು ಪ್ರೇರಣೆ ದೊರೆಯುತ್ತದೆ ಎಂದು ನೋಡಿ.

ಈ ಬಾರಿ ಕ್ರಿಕೆಟ್ ಮೈದಾನದಿಂದಲೂ ಬಹಳ ಉತ್ತಮ ಸಮಾಚಾರ ಬಂತು. ನಮ್ಮ ಕ್ರಿಕೆಟ್ ತಂಡವು ಆರಂಭಿಕ ತೊಂದರೆಗಳ ನಂತರ, ಪುನಃ ಉತ್ತಮತೆ ತಂದುಕೊಂಡು ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವು ಸಾಧಿಸಿತು. ನಮ್ಮ ಆಟಗಾರರ ಕಠಿಣ ಶ್ರಮ ಮತ್ತು ಟೀಮ್ ವರ್ಕ್, ಪ್ರೇರಣೆ ಒದಗಿಸುವಂತಹದ್ದಾಗಿದೆ. ಇವುಗಳ ನಡುವೆಯೇ ಜನವರಿ 26 ರಂದು ದೆಹಲಿಯಲ್ಲಿ ತ್ರಿವರ್ಣ ಧ್ವಜಕ್ಕಾದ ಅವಮಾನವನ್ನು ನೋಡಿದ ದೇಶ ಬಹಳ ದುಃಖಿಯೂ ಆಯಿತು. ಮುಂಬರುವ ಸಮಯವನ್ನು ನಾವು ಹೊಸ ಭರವಸೆ ಮತ್ತು ನಾವೀನ್ಯತೆಯಿಂದ ತುಂಬಬೇಕು. ನಾವು ಕಳೆದ ವರ್ಷ ಅಸಾಧಾರಣ ಸಹನೆ ಮತ್ತು ಸಾಹಸದ ಪರಿಚಯ ನೀಡಿದೆವು. ಈ ವರ್ಷ ಕೂಡಾ ನಾವು ಕಠಿಣ ಪರಿಶ್ರಮದಿಂದ ನಮ್ಮ ಸಂಕಲ್ಪಗಳನ್ನು ಸಾಬೀತುಪಡಿಸಬೇಕು. ನಮ್ಮ ದೇಶವನ್ನು  ಕ್ಷಿಪ್ರ ಗತಿಯಿಂದ ಮುಂದೆ ಕೊಂಡೊಯ್ಯಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ,  ಈ ವರ್ಷದ ಆರಂಭದೊಂದಿಗೇ, ಕೊರೋನಾ ವಿರುದ್ಧದ ನಮ್ಮ ಹೋರಾಟಕ್ಕೆ ಕೂಡಾ ಸುಮಾರು ಒಂದು ವರ್ಷ ಪೂರ್ಣವಾಯಿತು. ಕೊರೋನಾ ವಿರುದ್ಧ ಭಾರತದ ಸಮರ ಯಾವರೀತಿ ಒಂದು ಉದಾಹರಣೆಯಾಯಿತೋ ಅದೇ ರೀತಿಯಲ್ಲಿ, ಈಗ ನಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮ ಕೂಡಾ ಪ್ರಪಂಚದಲ್ಲಿ ಒಂದು ನಿದರ್ಶನವಾಗುತ್ತಿದೆ.  ಇಂದು ಭಾರತ ವಿಶ್ವದ ಅತಿ ದೊಡ್ಡ ಕೋವಿಡ್ ವ್ಯಾಕ್ಸಿನ್ ಕಾರ್ಯಕ್ರಮ ನಡೆಸುತ್ತಿದೆ.  ಇದಕ್ಕಿಂತ ಹೆಮ್ಮೆಯ ವಿಷಯ ಇನ್ನೇನಿದೆ ಎಂದು ನಿಮಗೆ ತಿಳಿದೇ ಇದೆ.  ನಾವು ಅತಿ ದೊಡ್ಡ ವ್ಯಾಕ್ಸಿನ್ ಕಾರ್ಯಕ್ರಮದೊಂದಿಗೇ ವಿಶ್ವದಲ್ಲಿ ಎಲ್ಲರಿಗಿಂತ ವೇಗವಾಗಿ ನಮ್ಮ ನಾಗರಿಕರಿಗೆ ಲಸಿಕೆ ನೀಡುತ್ತಿದ್ದೇವೆ.  ಕೇವಲ 15 ದಿನಗಳಲ್ಲಿ, ಭಾರತ ತನ್ನ 30 ಲಕ್ಷಕ್ಕೂ ಅಧಿಕ ಕೊರೋನಾ ಯೋಧರಿಗೆ ಲಸಿಕೆ ನೀಡಿಯಾಗಿದೆ.  ಆದರೆ ಅಮೇರಿಕಾದಂತಹ ಶ್ರೀಮಂತ ದೇಶಕ್ಕೆ ಇದೇ ಕಾರ್ಯದಲ್ಲಿ, 18 ದಿನಗಳು ಬೇಕಾದವು ಮತ್ತು ಬ್ರಿಟನ್ ಗೆ 36 ದಿನಗಳು ಬೇಕಾದವು.

ಸ್ನೇಹಿತರೇ, ‘ಭಾರತದಲ್ಲಿ ತಯಾರಿಸಲಾದ ಲಸಿಕೆ’ (‘Made-in-India Vaccine’) ಇಂದು ಭಾರತದ ಸ್ವಾವಲಂಬನೆಯ ಸಂಕೇತವಾಗಿದೆ ಮಾತ್ರವಲ್ಲದೆ ಭಾರತದ ಆತ್ಮಗೌರವದ ಪ್ರತೀಕವೂ ಆಗಿದೆ. NaMo App ನಲ್ಲಿ ಉತ್ತರ ಪ್ರದೇಶದ ಸೋದರ ಹಿಮಾಂಶು ಯಾದವ್ ಅವರು, ಭಾರತದಲ್ಲಿ ತಯಾರಿಸಲಾದ ಲಸಿಕೆಯಿಂದ ಮನಸ್ಸಿನಲ್ಲಿ ಒಂದು ಹೊಸ ಆತ್ಮವಿಶ್ವಾಸ ಮೂಡಿದೆ ಎಂದು ಬರೆದಿದ್ದಾರೆ. ಮಧುರೈನಿಂದ ಕೀರ್ತಿ ಅವರು, ವಿದೇಶದಲ್ಲಿರುವ ತಮ್ಮ  ಅನೇಕ ಸ್ನೇಹಿತರು, ಸಂದೇಶ ಕಳುಹಿಸುತ್ತಾ, ಭಾರತಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆಂದು ಬರೆದಿದ್ದಾರೆ.  ಭಾರತ ಯಾವರೀತಿ ಕೊರೋನಾದೊಂದಿಗಿನ ಹೋರಾಟದಲ್ಲಿ ವಿಶ್ವದ ಸಹಾಯ ಮಾಡುತ್ತಿದೆಯೋ, ಅದರಿಂದಾಗಿ ಭಾರತದ ಬಗ್ಗೆ, ಅವರ ಮನಸ್ಸಿನಲ್ಲಿ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಕೀರ್ತಿಯವರ ಸ್ನೇಹಿತರು ಅವರಿಗೆ ಬರೆದಿದ್ದಾರೆ.  ಕೀರ್ತಿ ಅವರೆ, ದೇಶದ ಈ ಗೌರವಗಾನ ಕೇಳಿ, ಮನದ ಮಾತಿನ ಶ್ರೋತೃಗಳಿಗೆ ಕೂಡಾ ಹೆಮ್ಮೆ ಎನಿಸುತ್ತದೆ. ಈ ನಡುವೆ ಬೇರೆ ಬೇರೆ ದೇಶಗಳ ರಾಷ್ಟ್ರಾಧ್ಯಕ್ಷರು ಹಾಗೂ ಪ್ರಧಾನ ಮಂತ್ರಿಗಳ ಕಡೆಯಿಂದ ಭಾರತಕ್ಕೆ ಇಂತಹದ್ದೇ ಸಂದೇಶಗಳು ನನಗೆ ಕೂಡಾ ಬರುತ್ತಿವೆ. ನೀವು ಕೂಡಾ ನೋಡಿರಬಹುದು, ಈಗ ಬ್ರೆಜಿಲ್ ನ ರಾಷ್ಟ್ರಾಧ್ಯಕ್ಷರು ಟ್ವೀಟ್ ಮೂಲಕ ಭಾರತಕ್ಕೆ ಧನ್ಯವಾದ ಹೇಳಿರುವ ರೀತಿಯನ್ನು ನೋಡಿ ಪ್ರತಿ ಭಾರತೀಯನಿಗೆ ಎಷ್ಟು ಹೆಮ್ಮೆಯೆನಿಸುತ್ತದೆ.  ಸಾವಿರಾರು ಕಿಲೋಮೀಟರ್ ದೂರ, ಪ್ರಪಂಚದ ಮೂಲೆ ಮೂಲೆಯಲ್ಲಿರುವ ನಿವಾಸಿಗಳಿಗೆ ರಾಮಾಯಣದ ಆ ಸಂದರ್ಭದ ಬಗ್ಗೆ ಬಹಳ  ಆಳವಾದ ಅರಿವಿದೆ, ಅವರ ಮನದಲ್ಲಿ ಆಳವಾದ ಪ್ರಭಾವವಿದೆ – ಇದು ನಮ್ಮ ಸಂಸ್ಕೃತಿಯ ವೈಶಿಷ್ಠ್ಯವಾಗಿದೆ.  

ಸ್ನೇಹಿತರೆ, ಈ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ,  ನೀವು ಮತ್ತೊಂದು ವಿಷಯದ ಬಗ್ಗೆ ಖಂಡಿತಾ ಗಮನ ಹರಿಸಿರಬಹುದು. ಸಂಕಷ್ಟದ ಸಮಯದಲ್ಲಿ ಭಾರತ ಏಕೆ ವಿಶ್ವಕ್ಕೆ ಸೇವೆ ಸಲ್ಲಿಸುತ್ತಿದೆಯೆಂದರೆ, ಭಾರತ ಇಂದು ಔಷಧಗಳು ಮತ್ತು ಲಸಿಕೆಯ ವಿಷಯದಲ್ಲಿ  ಸಮರ್ಥವಾಗಿದೆ ಮತ್ತು ಸ್ವಾವಲಂಬಿಯಾಗಿದೆ. ಸ್ವಾವಲಂಬಿ ಭಾರತ ಅಭಿಯಾನದ ಚಿಂತನೆಯೂ ಇದೇ ಆಗಿದೆ. ಭಾರತ ಎಷ್ಟು ಸಮರ್ಥವಾಗುತ್ತದೆಯೋ, ಅಷ್ಟು ಅಧಿಕವಾಗಿ ಮಾನವಿಯತೆಗೆ ಸೇವೆ ಸಲ್ಲಿಸುತ್ತದೆ, ಇದರಿಂದ ಪ್ರಪಂಚಕ್ಕೆ ಅಷ್ಟೇ ಪ್ರಯೋಜನವೂ ದೊರೆಯುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೆ, ನನಗೆ ಪ್ರತಿಬಾರಿಯೂ ನಿಮ್ಮ ಅನೇಕ ಪತ್ರಗಳು ಕೈಸೇರುತ್ತವೆ. ನಮೋ ಆಪ್ ನಲ್ಲಿ ಮತ್ತು ಮೈ ಗೌ ನಲ್ಲಿ ನಿಮ್ಮ ಸಂದೇಶಗಳು, ದೂರವಾಣಿ ಕರೆಗಳ ಮೂಲಕ ನಿಮ್ಮ ಮಾತುಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆಯುತ್ತದೆ.  ಈ ಸಂದೇಶಗಳ ಪೈಕಿ ಒಂದು ಸಂದೇಶ ನನ್ನ ಗಮನ ಸೆಳೆಯಿತು – ಆ ಸಂದೇಶವೆಂದರೆ, ಸೋದರಿ ಪ್ರಿಯಾಂಕಾ ಪಾಂಡೆಯ ಅವರಿಂದ ಬಂದಂತಹ ಸಂದೇಶ.   23  ವರ್ಷ ವಯಸ್ಸಿನ ಪುತ್ರಿ ಪ್ರಿಯಾಂಕ ಹಿಂದಿ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾರೆ, ಮತ್ತು ಬಿಹಾರದ ಸೀವಾನ್ ನಲ್ಲಿ ವಾಸವಾಗಿದ್ದಾರೆ.  ಪ್ರಿಯಾಂಕ ಅವರು ನಮೋ ಆಪ್ ನಲ್ಲಿ ಹೀಗೆ ಬರೆದಿದ್ದಾರೆ – ದೇಶದ, ತಾವಿರುವ ಸ್ಥಳಕ್ಕೆ ಸಮೀಪವಿರುವಂತಹ ದೇಶದ  15  ಪ್ರವಾಸಿ ತಾಣಗಳಿಗೆ ಹೋಗಿ ಬನ್ನಿ ಎನ್ನುವ ನನ್ನ ಸಲಹೆಯಿಂದ ತುಂಬಾ ಪ್ರೇರಿತರಾಗಿದ್ದು,  ಜನವರಿ 1 ರಂದು ಬಹಳ ವಿಶೇಷವಾಗಿದ್ದ ತಾಣವೊಂದಕ್ಕೆ ತೆರಳಿದರು. ಆ ಸ್ಥಳ ಅವರ ಮನೆಯಿಂದ 15 ಕಿಲೋಮೀಟರ್ ದೂರದಲ್ಲಿತ್ತು ಮತ್ತು ಅದು ದೇಶದ ಮೊದಲ ರಾಷ್ಟ್ರಪತಿ ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರ ಪೂರ್ವಜರ ನಿವಾಸವಾಗಿತ್ತು. ಪ್ರಿಯಾಂಕಾ ಅವರು, ನಮ್ಮ ದೇಶದ ಮಹಾನ್ ವ್ಯಕ್ತಿತ್ವಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಇದು ಅವರ ಮೊದಲ ಹೆಜ್ಜೆ ಎಂಬ ಸುಂದರ ವಿಷಯವನ್ನು ಬರೆದಿದ್ದಾರೆ. ಪ್ರಿಯಾಂಕಾ ಅವರಿಗೆ ಅಲ್ಲಿ ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರು ಬರೆದ ಪುಸ್ತಕಗಳು ದೊರಕಿದವು, ಅನೇಕ ಐತಿಹಾಸಿಕ ಚಿತ್ರಗಳು ದೊರೆತವು. ನಿಜಕ್ಕೂ, ಪ್ರಿಯಾಂಕಾ ಅವರೆ ನಿಮ್ಮ ಈ ಅನುಭವ, ಬೇರೆಯವರಿಗೆ ಕೂಡಾ ಸ್ಫೂರ್ತಿಯಾಗುತ್ತದೆ.

ಸ್ನೇಹಿತರೆ, ಈ ವರ್ಷದಿಂದ ಭಾರತ ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆ – ಅಮೃತ ಮಹೋತ್ಸವವನ್ನು ಪ್ರಾರಂಭಿಸಲಿದೆ. ಇಂತಹದರಲ್ಲಿ, ನಮಗೆ ಸ್ವಾತಂತ್ರ್ಯ ಲಭಿಸಲು ಕಾರಣೀಭೂತರಾದ ಮಹಾನ್ ನಾಯಕರಿಗೆ ಸಂಬಂಧಿಸಿದ ಸ್ಥಳೀಯ ಜಾಗಗಳನ್ನು ಅನ್ವೇಷಿಸುವ ಅತ್ಯುತ್ತಮ ಸಮಯ ಇದಾಗಿದೆ.

ಸ್ನೇಹಿತರೆ, ನಾವು ಸ್ವಾತಂತ್ರ್ಯದ ಆಂದೋಲನ ಮತ್ತು ಬಿಹಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದೇವೆ ಆದ್ದರಿಂದ ನಾನು ನಮೋ ಆಪ್ ನಲ್ಲಿ ಬಂದಿರುವ ಮತ್ತೊಂದು ಟಿಪ್ಪಣಿಯ ಬಗ್ಗೆ ಚರ್ಚಿಸಲು ಬಯಸುತ್ತೇನೆ.  ಮುಂಗೇರ್ ನ ನಿವಾಸಿಯಾದ ಜಯರಾಮ್ ವಿಪ್ಲವ್ ಅವರು ನನಗೆ ತಾರಾಪುರ್ ಹುತಾತ್ಮ ದಿನದ ಬಗ್ಗೆ ಬರೆದಿದ್ದಾರೆ. 1932 ರ ಫೆಬ್ರವರಿ 15ರಂದು ದೇಶ ಭಕ್ತರ ಒಂದು ಗುಂಪಿನ ಅನೇಕ ವೀರ ಯೋಧರನ್ನು ಬ್ರಿಟಿಷರು ಬಹಳ ಕ್ರೂರವಾಗಿ ಹತ್ಯೆಗೈದಿದ್ದರು. ‘ವಂದೇ ಮಾತರಂ’ ಮತ್ತು ‘ಭಾರತ ಮಾತೆಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದುದೇ ಅವರು ಮಾಡಿದ್ದ ಒಂದೇ ಒಂದು ಅಪರಾಧ.  ನಾನು ಆ ಹುತಾತ್ಮರಿಗೆ ನಮನ ಸಲ್ಲಿಸುತ್ತೇನೆ ಮತ್ತು ಅವರ ಸಾಹಸವನ್ನು ಶ್ರದ್ಧಾಪೂರ್ವಕವಾಗಿ ಸ್ಮರಿಸುತ್ತೇನೆ. ನಾನು ಜಯರಾಮ್ ವಿಪ್ಲವ್ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಎಷ್ಟು ಚರ್ಚೆಯಾಗಬೇಕೋ ಅಷ್ಟು ಚರ್ಚೆಯಾಗದ ಘಟನೆಯೊಂದನ್ನು ದೇಶದ ಮುಂದೆ ತಂದಿದ್ದಾರೆ.

ನನ್ನ  ಪ್ರೀತಿಯ ದೇಶವಾಸಿಗಳೇ,  ಭಾರತದ ಪ್ರತಿಯೊಂದು ಭಾಗದಲ್ಲೂ, ಪ್ರತಿ ನಗರ, ತಾಲ್ಲೂಕು ಮತ್ತು ಗ್ರಾಮದಲ್ಲೂ ಸ್ವಾತಂತ್ರ್ಯದ ಸಂಗ್ರಾಮವನ್ನು ಸಂಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡಲಾಯಿತು. ಭರತ ಭೂಮಿಯ ಪ್ರತಿ ಮೂಲೆಯಲ್ಲಿ ಇಂತಹ ಮಹಾನ್ ಪುತ್ರರು ಮತ್ತು ವೀರಾಂಗನೆಯರು ಜನ್ಮ ತಾಳಿದ್ದಾರೆ, ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರ ಹೋರಾಟ ಮತ್ತು ಅದಕ್ಕೆ ಸಂಬಂಧಿಸಿದ ನೆನಪುಗಳನ್ನು ನಾವು ಸಂರಕ್ಷಿಸಿ ಇಡಬೇಕಾಗಿರುವುದು ಬಹಳ ಮುಖ್ಯವಾಗಿದೆ. ಮತ್ತು ಇದಕ್ಕಾಗಿ ಅವರ ಬಗ್ಗೆ ಬರೆದು ನಮ್ಮ ಮುಂದಿನ ಪೀಳಿಗೆಗಾಗಿ ಅವರ ಸ್ಮೃತಿಗಳನ್ನು ಜೀವಂತವಾಗಿ ಇರಿಸಬಹುದಾಗಿದೆ.  ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ಬರೆಯಿರೆಂದು ನಾನು ಎಲ್ಲಾ ದೇಶವಾಸಿಗಳಲ್ಲಿ ಮತ್ತು ವಿಶೇಷವಾಗಿ ನನ್ನ ಯುವ ಸ್ನೇಹಿತರಿಗೆ ಕರೆ ನೀಡುತ್ತೇನೆ.  ನಿಮ್ಮ ಪ್ರದೇಶದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆಗಳ ಬಗ್ಗೆ ಪುಸ್ತಕ ಬರೆಯಿರಿ. ಭಾರತ ತನ್ನ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಮಾಡುವಾಗ, ನಿಮ್ಮ ಲೇಖನವು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಅತ್ಯುತ್ತಮ ಶ್ರದ್ಧಾಂಜಲಿ ಎನಿಸುತ್ತದೆ. ಯುವ ಲೇಖಕರಿಗಾಗಿ ಭಾರತ ಎಪ್ಪತ್ತೈದು (India Seventy Five) ಅಭಿಯಾನ ಆರಂಭಿಸಲಾಗುತ್ತಿದೆ. ಇದರಲ್ಲಿ ಎಲ್ಲಾ ರಾಜ್ಯಗಳ ಮತ್ತು ಭಾಷೆಗಳ ಯುವ ಲೇಖಕರಿಗೆ ಉತ್ತೇಜನ ದೊರೆಯುತ್ತದೆ.  ದೇಶದಲ್ಲಿ ಇಂತಹ ವಿಷಯಗಳ ಬಗ್ಗೆ ಬರೆಯುವ ಲೇಖಕರು ಅಪಾರ ಸಂಖ್ಯೆಯಲ್ಲಿ ಸಿದ್ಧರಾಗುತ್ತಾರೆ, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಯಲಿದೆ. ಇಂತಹ ಉದಯೋನ್ಮುಖ ಪ್ರತಿಭೆಗಳಿಗೆ ನಾವು ಪೂರ್ಣ ಸಹಕಾರ ಒದಗಿಸಬೇಕು. ಇದರಿಂದ  ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಚಿಂತನಾ ನಾಯಕರ ಪಡೆ ಸಿದ್ಧವಾಗುತ್ತದೆ. ನನ್ನ ಯುವ ಸ್ನೇಹಿತರನ್ನು ಈ ಉಪಕ್ರಮದ ಭಾಗವಾಗಲು ಮತ್ತು ತಮ್ಮ ಸಾಹಿತ್ಯಕ ನೈಪುಣ್ಯವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸುವುದಕ್ಕಾಗಿ ನಾನು ಆಹ್ವಾನಿಸುತ್ತಿದ್ದೇನೆ.  ಇದಕ್ಕೆ ಸಂಬಂಧಿಸಿ ಮಾಹಿತಿ ಶಿಕ್ಷಣ ಸಚಿವಾಲಯದ ಜಾಲತಾಣದಲ್ಲಿ ಪಡೆದುಕೊಳ್ಳಬಹುದು.      

ನನ್ನ ಪ್ರೀತಿಯ ದೇಶವಾಸಿಗಳೇ, ಮನದ ಮಾತಿನ ಕೇಳುಗರಿಗೆ ಏನು ಇಷ್ಟವಾಗುತ್ತದೆ ಎನ್ನುವುದು ನಿಮಗೇ ಚೆನ್ನಾಗಿ ಗೊತ್ತು. ಆದರೆ, ಮನದ ಮಾತಿನಲ್ಲಿ ನನಗೆ ಅತ್ಯಂತ ಇಷ್ಟವಾಗುವುದು ಏನೆಂದರೆ,  ನನಗೆ ಬಹಳಷ್ಟು ವಿಷಯಗಳನ್ನು ಅರಿಯುವ, ಕಲಿಯುವ ಮತ್ತು ಓದುವ ಅವಕಾಶ ದೊರೆಯುತ್ತದೆ.  ಒಂದು ರೀತಿಯಲ್ಲಿ ಪರೋಕ್ಷವಾಗಿ, ನಿಮ್ಮೆಲ್ಲರೊಂದಿಗೆ ಸೇರುವ ಅವಕಾಶ ದೊರೆಯುತ್ತದೆ.  ಕೆಲವರ ಪ್ರಯತ್ನ, ಕೆಲವರ ಉತ್ಸಾಹ,  ದೇಶಕ್ಕಾಗಿ ಏನನ್ನಾದರೂ ಮಾಡಿ ಹೋಗಬೇಕೆಂಬ ಸಂಕಲ್ಪ –ಇವುಗಳೆಲ್ಲವೂ ನನಗೆ ಬಹಳ ಸ್ಫೂರ್ತಿ ನೀಡುತ್ತವೆ, ನನ್ನಲ್ಲಿ ಉತ್ಸಾಹ ತುಂಬುತ್ತವೆ.

ಹೈದರಾಬಾದ್ ನ ಬೋಯಿನಪಲ್ಲಿಯಲ್ಲಿ ಒಂದು ಸ್ಥಳೀಯ ತರಕಾರಿ ಮಾರುಕಟ್ಟೆ ಯಾವರೀತಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದೆ ಎಂದು ಓದಿ ನನಗೆ ಬಹಳ ಸಂತೋಷವೆನಿಸಿತು. ತರಕಾರಿ ಮಾರುಕಟ್ಟೆಗಳಲ್ಲಿ ಅನೇಕ ಕಾರಣಗಳಿಂದ ಸಾಕಷ್ಟು ತರಕಾರಿ ಹಾಳಾಗುತ್ತವೆ ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಈ ತರಕಾರಿ ಅಲ್ಲಿ ಇಲ್ಲಿ ಹರಡಿ ಹೋಗಿರುತ್ತದೆ, ಕೊಳಕೂ ಹರಡುತ್ತದೆ ಆದರೆ, ಬೋಯಿನಪಲ್ಲಿಯ ತರಕಾರಿ ಮಾರುಕಟ್ಟೆಯು, ಪ್ರತಿ ದಿನ ಉಳಿಯುವಂತಹ ಇಂತಹ ತರಕಾರಿಗಳನ್ನು ಈ ರೀತಿ ಬಿಸಾಡಬಾರದೆಂದು ನಿರ್ಧರಿಸಿತು. ತರಕಾರಿ ಮಾರುಕಟ್ಟೆಗೆ ಸಂಬಂಧಿಸಿದ ವ್ಯಕ್ತಿಗಳು, ಇದರಿಂದ ವಿದ್ಯುಚ್ಛಕ್ತಿ ತಯಾರಿಸಬೇಕೆಂದು ನಿರ್ಧರಿಸಿದರು. ತ್ಯಾಜ್ಯವೆಂದು ಎಸೆಯುವ ತರಕಾರಿಗಳಿಂದ ವಿದ್ಯುತ್ ತಯಾರಿಸುವ ಕುರಿತು ನೀವು ಅಷ್ಟೇನೂ ಕೇಳಿರಲಾರಿರಿ. –ಇದೇ ಆವಿಷ್ಕಾರದ ಸಾಮರ್ಥ್ಯ. ಇಂದು ಬೋಯನಪಲ್ಲಿಯ ಮಾರುಕಟ್ಟೆಯಲ್ಲಿ ಮೊದಲು ತ್ಯಾಜ್ಯವಾಗಿದ್ದುದು ಈಗ ಅದರಿಂದಲೇ ಸಂಪತ್ತು ಸೃಷ್ಟಿಯಾಗುತ್ತಿದೆ. – ಇದೇ ಕಸವನ್ನು ರಸವಾಗಿಸುವ ಪ್ರಯಾಣವಾಗಿದೆ. ಅಲ್ಲಿ ಪ್ರತಿನಿತ್ಯ ಸುಮಾರು 10 ಟನ್ ತ್ಯಾಜ್ಯ ಹೊರಬೀಳುತ್ತದೆ. ಇದನ್ನು ಒಂದು ಘಟಕದಲ್ಲಿ ಒಟ್ಟುಗೂಡಿಸಲಾಗುತ್ತದೆ. ಘಟಕದಲ್ಲಿ  ಇಂತಹ ತ್ಯಾಜ್ಯದಿಂದ ಪ್ರತಿದಿನ 500 ಯೂನಿಟ್ ವಿದ್ಯುತ್ ತಯಾರಾಗುತ್ತದೆ ಮತ್ತು ಸುಮಾರು 30 ಕಿಲೋ ಜೈವಿಕ ಅನಿಲ ಕೂಡಾ ತಯಾರಾಗುತ್ತದೆ. ಈ ವಿದ್ಯುತ್ತಿನಿಂದಲೇ ತರಕಾರಿ ಮಾರುಕಟ್ಟೆ ಬೆಳಗುತ್ತದೆ ಮತ್ತು ತಯಾರಾಗುವ ಜೈವಿಕ ಇಂಧನದಿಂದ ಮಾರುಕಟ್ಟೆಯ ಪಾಕಶಾಲೆಯಲ್ಲಿ ಅಡುಗೆ ತಯಾರಿಸಲಾಗುತ್ತದೆ. – ಅದ್ಭುತ ಪ್ರಯತ್ನವಲ್ಲವೇ!

ಇಂತಹದ್ದೇ ಒಂದು ಅದ್ಭುತ ಸಾಧನೆಯನ್ನು, ಹರಿಯಾಣಾದ ಪಂಚಕುಲಾದ ಬಡೌತ್ ಗ್ರಾಮ ಪಂಚಾಯಿತಿ ಮಾಡಿ ತೋರಿಸಿದೆ. ಈ ಪಂಚಾಯತ್ ಕ್ಷೇತ್ರದಲ್ಲಿ, ಕೊಳಚೆ ನೀರಿನ ಸಮಸ್ಯೆ ಇತ್ತು. ಈ ಕಾರಣದಿಂದಾಗಿ ಕೊಳಕು ನೀರು ಅಲ್ಲಿ ಇಲ್ಲಿ ಹರಿದಾಡುತ್ತಿತ್ತು. ರೋಗ ವ್ಯಾಪಿಸುತ್ತಿತ್ತು. ಆದರೆ,  ಬಡೌತ್ ನ ಜನರು ಈ ತ್ಯಾಜ್ಯ ನೀರಿನಿಂದ ಕೂಡಾ ಸಂಪತ್ತು ಸೃಷ್ಟಿಸೋಣವೆಂದು ನಿರ್ಧರಿಸಿದರು. ಗ್ರಾಮ ಪಂಚಾಯಿತಿಯು ಇಡೀ ಗ್ರಾಮದಿಂದ ಬರುವ ಒಟ್ಟಾರೆ ಕೊಳಕು ನೀರನ್ನು ಒಂದು ಜಾಗದಲ್ಲಿ ಸಂಗ್ರಹಿಸಿ ಶೋಧಿಸಲು ಆರಂಭಿಸಿತು, ಮತ್ತು ಶೋಧಿಸಲ್ಪಟ್ಟ ನೀರನ್ನು ಈಗ ಗ್ರಾಮದ ರೈತರು ಹೊಲಗಳಲ್ಲಿ ನೀರಾವರಿಗಾಗಿ ಉಪಯೋಗಿಸುತ್ತಿದ್ದಾರೆ ಅಂದರೆ ಮಾಲಿನ್ಯ, ಕೊಳಚೆ ಮತ್ತು ರೋಗಗಳಿಂದ ಮುಕ್ತಿಯೂ ದೊರೆತಿದೆ ಮತ್ತು ಹೊಲಗಳಲ್ಲಿ ನೀರಾವರಿಯೂ ವ್ಯವಸ್ಥೆಯೂ ಆಗಿದೆ .

ಗೆಳೆಯರೆ, ಪರಿಸರದ ರಕ್ಷಣೆಯಿಂದ ಆದಾಯದ ಮಾರ್ಗ ಯಾವರೀತಿ ತೆರೆದುಕೊಳ್ಳುತ್ತದೆ ಎನ್ನುವ ಉದಾಹರಣೆ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಕೂಡಾ ನೋಡಲು ದೊರೆತಿದೆ. ಅರುಣಾಚಲ ಪ್ರದೇಶದ ಈ ಗುಡ್ಡಗಾಡು ಪ್ರದೇಶದಲ್ಲಿ ‘ಮೋನ ಶುಗು’ ಹೆಸರಿನ ಕಾಗದವನ್ನು ಶತಮಾನದಿಂದಲೂ ತಯಾರಿಸಲಾಗುತ್ತಿದೆ. ಈ ಕಾಗದ ಇಲ್ಲಿನ ಸ್ಥಳೀಯ ಶುಗು ಶೇಂಗ್ ಹೆಸರಿನ ಒಂದು ಮರದ ತೊಗಟೆಯಿಂದ ತಯಾರಿಸಲಾಗುತ್ತದೆ, ಆದ್ದರಿಂದ ಈ ಕಾಗದವನ್ನು ತಯಾರಿಸಲು ಮರಗಳನ್ನು ಕಡಿಯಬೇಕಾಗುವುದಿಲ್ಲ. ಅಷ್ಟೇ ಅಲ್ಲ ಇದರ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕದ ಬಳಕೆ ಕೂಡಾ ಮಾಡಲಾಗುವುದಿಲ್ಲ. ಅಂದರೆ, ಈ ಕಾಗದ ಪರಿಸರಕ್ಕೆ ಕೂಡಾ ಸುರಕ್ಷಿತವಾಗಿದೆ ಮತ್ತು ಆರೋಗ್ಯಕ್ಕೆ ಕೂಡಾ. ಈ ಕಾಗದವನ್ನು ರಫ್ತು ಮಾಡುತ್ತಿದ್ದ ಸಮಯವೂ ಒಂದಿತ್ತು, ಆದರೆ ನವೀನ ತಂತ್ರಜ್ಞಾನದ ಸಹಾಯದಿಂದ ದೊಡ್ಡ ಪ್ರಮಾಣದಲ್ಲಿ ಕಾಗದ ತಯಾರಿಕೆ ಶುರುವಾದಾಗ, ಈ ಸ್ಥಳೀಯ ಕಲೆ ಅಳಿವಿನ ಅಂಚಿಗೆ ಬಂದಿತು. ಈಗ ಓರ್ವ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಗೊಂಬು ಅವರು ಈ ಕಲೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಮಾಡಿದ್ದು, ಇದರಿಂದ ಬುಡಕಟ್ಟು ಸೋದರ–ಸೋದರಿಯರಿಗೆ ಉದ್ಯೋಗ ಕೂಡಾ ದೊರೆಯುತ್ತಿದೆ.

ನಾವೆಲ್ಲರೂ ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವಂತೆ ಮಾಡುವ ಮತ್ತೊಂದು ವಿಷಯವನ್ನು ಕೇರಳದಲ್ಲಿ ನೋಡಿದ್ದೇನೆ. ಕೇರಳದ ಕೊಟ್ಟಾಯಂನಲ್ಲಿ ಓರ್ವ ದಿವ್ಯಾಂಗ ವೃದ್ಧರಿದ್ದಾರೆ – ಅವರ ಹೆಸರು ಎನ್ ಎಸ್. ರಾಜಪ್ಪನ್ ಸಾಹಬ್. ರಾಜಪ್ಪನ್ ಅವರು ಪಾರ್ಶ್ವವಾಯುವಿನ ಕಾರಣದಿಂದಾಗಿ ನಡೆಯಲು ಅಸಮರ್ಥರಾಗಿದ್ದಾರೆ, ಆದರೆ ಇದರಿಂದಾಗಿ ಸ್ವಚ್ಛತೆಯ ವಿಷಯವಾಗಿ ಅವರ ಸಮರ್ಪಣಾ ಭಾವನೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಅವರು ಕಳೆದ ಅನೇಕ ವರ್ಷಗಳಿಂದ ದೋಣಿಯಲ್ಲಿ ವೆಂಬನಾಡ್ ಸರೋವರಕ್ಕೆ ಹೋಗುತ್ತಾರೆ ಮತ್ತು ಸರೋವರದಲ್ಲಿ ಎಸೆಯಲಾಗಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಹೊರಗೆ ತೆಗೆದುಕೊಂಡು ಬರುತ್ತಾರೆ. ರಾಜಪ್ಪನ್ ಅವರ ಯೋಚನೆ ಎಷ್ಟು ಉತ್ಕೃಷ್ಠವಾಗಿದೆ ಯೋಚಿಸಿ, ನಾವು ಕೂಡಾ ರಾಜಪ್ಪನ್ ಅವರಿಂದ ಪ್ರೇರೇಪಿತರಾಗಿ, ಸ್ವಚ್ಛತೆಗಾಗಿ, ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿ ನಮ್ಮ ಕೊಡುಗೆ ನೀಡಬೇಕು

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಮೊದಲು, ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಆಗಮಿಸಿದ ತಡೆರಹಿತ ವಿಮಾನವೊಂದನ್ನು ಭಾರತದ ನಾಲ್ವರು ಮಹಿಳಾ ಪೈಲೆಟ್‌ ಗಳು ನಿಭಾಯಿಸಿದ್ದರು. ಈ ಬಗ್ಗೆ ತಾವು ತಿಳಿದಿರಬಹುದು. ಹತ್ತು ಸಾವಿರ ಕಿಲೋಮೀಟರ್‌ ಗೂ ಅಧಿಕ ದೂರವನ್ನು ಕ್ರಮಿಸಿ ಈ ವಿಮಾನ ಸುಮಾರು ಇನ್ನೂರ ಇಪ್ಪತೈದಕ್ಕೂ ಹೆಚ್ಚು ಪ್ರಯಾಣಿಕರನ್ನು ಭಾರತಕ್ಕೆ ಕರೆತಂದಿತು. ತಾವು ಈ ಬಾರಿಯ ಜನವರಿ 26ರ ಪಥಸಂಚಲನದಲ್ಲೂ ಗಮನಿಸಿದ್ದಿರಬಹುದು, ಅಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಮಹಿಳಾ ಪೈಲೆಟ್‌ ಗಳು ಇತಿಹಾಸ ಸೃಷ್ಟಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ದೇಶದ ಮಹಿಳೆಯರ ಸಹಭಾಗಿತ್ವ ನಿರಂತರವಾಗಿ ಏರಿಕೆಯಾಗುತ್ತಿದೆ. ಆದರೆ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಬದಲಾವಣೆಗಳ ಬಗ್ಗೆ ಅಷ್ಟು ಚರ್ಚೆ ನಡೆಯುವುದಿಲ್ಲ ಎನ್ನುವುದನ್ನು ನಾವು ಪ್ರತಿದಿನ ನೋಡುತ್ತೇವೆ. ಹೀಗಾಗಿ, ಮಧ್ಯಪ್ರದೇಶದ ಜಬಲ್ಪುರದ ಒಂದು ಸುದ್ದಿ ಕೇಳಿದಾಗ “ಮನದ ಮಾತುʼ ಕಾರ್ಯಕ್ರಮದಲ್ಲಿ ಅದನ್ನು ಅಗತ್ಯವಾಗಿ ಹಂಚಿಕೊಳ್ಳಬೇಕೆಂದೆನಿಸಿತು. ಈ ಸುದ್ದಿ ಬಹಳ ಪ್ರೇರಣೆ ನೀಡುವಂಥದ್ದಾಗಿದೆ. ಜಬಲ್ಪುರದ ಚಿಚಗಾಂವ್‌ ಎಂಬಲ್ಲಿ ಕೆಲವು ಆದಿವಾಸಿ ಮಹಿಳೆಯರು ಒಂದು ಅಕ್ಕಿ ಗಿರಣಿಯಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕೊರೋನಾ ಜಾಗತಿಕ ಮಹಾಮಾರಿ ಹೇಗೆ ವಿಶ್ವದ ಪ್ರತಿ ವ್ಯಕ್ತಿಯ ಮೇಲೆ ಪರಿಣಾಮ ಬೀರಿತೋ, ಅದೇ ರೀತಿ ಈ ಮಹಿಳೆಯರ ಮೇಲೂ ಪರಿಣಾಮ ಬೀರಿತು. ಅವರ ಅಕ್ಕಿ ಗಿರಣಿ ಕೆಲಸ ಸ್ಥಗಿತಗೊಳಿಸಿತು. ಸ್ವಾಭಾವಿಕವಾಗಿ ಇವರ ದೈನಂದಿನ ಬದುಕಿಗೂ ಸಮಸ್ಯೆ ಎದುರಾಯಿತು. ಆದರೆ, ಇವರು ನಿರಾಶರಾಗಲಿಲ್ಲ, ಸೋಲನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ, ಎಲ್ಲರೂ ಜತೆಗೂಡಿ ತಾವೇ ಖುದ್ದಾಗಿ ಅಕ್ಕಿ ಗಿರಣಿ ಆರಂಭಿಸಬೇಕೆಂದು ನಿರ್ಧರಿಸಿಕೊಂಡರು. ಯಾವ ಗಿರಣಿಯಲ್ಲಿ ಇವರೆಲ್ಲ  ಕೆಲಸ ಮಾಡುತ್ತಿದ್ದರೋ ಅವರು ತಮ್ಮ ಯಂತ್ರಗಳನ್ನು ಸಹ ಮಾರಾಟ ಮಾಡಲು ಮುಂದಾಗಿದ್ದರು. ಇವರಲ್ಲಿ ಮೀನಾ ರಾಹಂಗಡಾಲೆ ಎನ್ನುವವರು ಎಲ್ಲ ಮಹಿಳೆಯರನ್ನೂ ಒಂದುಗೂಡಿಸಿ “ಸ್ವಸಹಾಯ ಸಮೂಹʼ ರಚಿಸಿದರು. ಮತ್ತು ಎಲ್ಲರೂ ತಾವು ಉಳಿಸಿದ ಹಣವನ್ನು ಇದಕ್ಕೆ ಹಾಕಿದರು. ಕಡಿಮೆ ಬಿದ್ದ ಹಣಕ್ಕಾಗಿ ಅವರು “ಆಜೀವಿಕಾ ಮಿಷನ್‌ʼ ಅಡಿಯಲ್ಲಿ ಬ್ಯಾಂಕ್‌ ನಿಂದ ಸಾಲ ಪಡೆದರು. ಈಗ ಇವರನ್ನು ನೋಡಿ. ಮೊದಲು ತಾವು ಕೆಲಸ ಮಾಡುತ್ತಿದ್ದ ಅಕ್ಕಿ ಗಿರಣಿಯನ್ನೇ ಈ ಆದಿವಾಸಿ ಮಹಿಳೆಯರು ಖರೀದಿಸಿದ್ದಾರೆ. ಇಷ್ಟು ದಿನಗಳಲ್ಲೇ ಈ ಗಿರಣಿ ಸರಿಸುಮಾರು ಮೂರು ಲಕ್ಷ ರೂಪಾಯಿಗಳಷ್ಟು ಲಾಭವನ್ನೂ ಗಳಿಸಿದೆ. ಈ ಲಾಭದ ಹಣದಿಂದ ಮೀನಾ ಮತ್ತು ಅವರ ಜತೆಗಾರರು ಎಲ್ಲಕ್ಕಿಂತ ಮೊದಲು ಬ್ಯಾಂಕ್‌ ಸಾಲ ತೀರಿಸಿದರು. ಹಾಗೂ ತಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಪಡಿಸಲು ಸಿದ್ಧತೆ ನಡೆಸಿದ್ದಾರೆ. ಕೊರೋನಾ ಸೋಂಕು ನಿರ್ಮಿಸಿದ ಪರಿಸ್ಥಿತಿ ಎದುರಿಸಲು ದೇಶದ ಮೂಲೆಮೂಲೆಯಲ್ಲಿ ಇಂಥ ಅದ್ಭುತ ಕೆಲಸಗಳು ನಡೆದಿವೆ.

ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾನೊಮ್ಮೆ ಬುಂದೇಲಖಂಡದ ಬಗ್ಗೆ ಹೇಳಿದರೆ ತಮ್ಮ ಮನಸ್ಸಿನಲ್ಲಿ ಅದೆಂಥ ಭಾವನೆ ಮೂಡಬಹುದು ಎನಿಸುತ್ತದೆ. ಇತಿಹಾಸದಲ್ಲಿ ಆಸಕ್ತಿ ಇರುವವರು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಜತೆಗೆ ಇವರನ್ನೂ ಹೋಲಿಸಬಹುದು. ಹಾಗೆಯೇ ಕೆಲವು ಜನ ಸುಂದರ ಮತ್ತು ಶಾಂತ ಓರ್ಚಾ ಬಗ್ಗೆ ಯೋಚಿಸಬಹುದು. ಇನ್ನು ಕೆಲವರಿಗೆ ಈ ಪ್ರದೇಶದ ಅತ್ಯಧಿಕ ತಾಪಮಾನದ ನೆನಪೂ ಬರಬಹುದು. ಆದರೆ, ಈ ದಿನ, ಇಲ್ಲಿ ಅತ್ಯಂತ ಉತ್ಸಾಹ ಮೂಡಿಸುವಂಥ ಬೇರೆಯದೇ ಚಟುವಟಿಕೆ ನಡೆಯುತ್ತಿದೆ. ಮತ್ತು ಇದರ ಬಗ್ಗೆ ನಾವು ಅಗತ್ಯವಾಗಿ ತಿಳಿದುಕೊಳ್ಳಬೇಕಿದೆ. ಕಳೆದ ಕೆಲ ದಿನಗಳ ಹಿಂದೆ  ಝಾನ್ಸಿಯಲ್ಲಿ ಒಂದು ತಿಂಗಳವರೆಗೆ ನಡೆಯುವ “ಸ್ಟ್ರಾಬೆರಿ ಹಬ್ಬʼ ಆರಂಭವಾಗಿದೆ. “ಸ್ಟ್ರಾಬೆರಿ ಮತ್ತು ಬುಂದೇಲ್‌ ಖಂಡʼ ಎಂದು  ಪ್ರತಿಯೊಬ್ಬರಿಗೂ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಈಗ ಬುಂದೇಲಖಂಡದಲ್ಲಿ ಸ್ಟ್ರಾಬೆರಿ ಕೃಷಿಯ ಉತ್ಸಾಹ ವರ್ಧಿಸುತ್ತಿದೆ. ಮತ್ತು ಇದರಲ್ಲಿ ಝಾನ್ಸಿಯ ಓರ್ವ ಪುತ್ರಿ ಮಹತ್ವದ ಪಾತ್ರ ನಿಭಾಯಿಸಿದ್ದಾಳೆ. ಆಕೆ, ಗುರ್ಲೀನ್‌ ಚಾವ್ಲಾ. ಕಾನೂನು ಓದುತ್ತಿರುವ ಗುರ್ಲೀನ್‌ ಮೊದಲು ತಮ್ಮ ಮನೆ ಹಾಗೂ ತಮ್ಮ ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆಯ ಪ್ರಯೋಗ ಮಾಡಿ ಯಶಸ್ವಿಯಾದರು. ಝಾನ್ಸಿಯಲ್ಲೂ ಸ್ಟ್ರಾಬೆರಿ ಬೆಳೆ ಬೆಳೆಯಬಹುದೆನ್ನುವ ವಿಶ್ವಾಸ ಮೂಡಿಸಿದರು. ಈಗ ಝಾನ್ಸಿಯ “ಸ್ಟ್ರಾಬೆರಿ ಹಬ್ಬʼವು “ಮನೆಯಲ್ಲೇ ಇದ್ದುಕೊಂಡು ಕೆಲಸ ಮಾಡುವʼ ಸಿದ್ಧಾಂತಕ್ಕೆ STAY AT HOME CONCEPT  ಗೆ ಆದ್ಯತೆ ನೀಡುತ್ತದೆ. ಈ ಮಹೋತ್ಸವದ ಮೂಲಕ ಸ್ಥಳೀಯ ರೈತರು ಮತ್ತು ಯುವಕರಿಗೆ ತಮ್ಮ ಮನೆಯ ಹಿಂಭಾಗದಲ್ಲಿರುವ ಖಾಲಿ ಸ್ಥಳ ಮತ್ತು ಮನೆಯ ಮೇಲ್ಛಾವಣಿಯಲ್ಲಿ ಟೆರೇಸ್ ಉದ್ಯಾನ ನಿರ್ಮಿಸಿ ಸ್ಟ್ರಾಬೆರಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ನೂತನ ತಂತ್ರಜ್ಞಾನಗಳ ಮೂಲಕ ಇಂಥ ಹಲವಾರು ಪ್ರಯತ್ನಗಳು ದೇಶದ ಇತರ ಭಾಗಗಳಲ್ಲೂ ನಡೆಯುತ್ತಿವೆ. ಈ ಮೊದಲು ಗುಡ್ಡಗಾಡಿನ ಗುರುತಾಗಿದ್ದ ಸ್ಟ್ರಾಬೆರಿ, ಈಗ ಕಛ್ ಪ್ರದೇಶದ ಮರುಳುಮಿಶ್ರಿತ ಜಮೀನಿನಲ್ಲೂ ಬೆಳೆಯಬಹುದಾಗಿದ್ದುದರಿಂದ ರೈತರ ಆದಾಯ ಹೆಚ್ಚುತ್ತಿದೆ.

ಜತೆಗಾರರೇ, ಸ್ಟ್ರಾಬೆರಿ ಹಬ್ಬದಂಥ ಪ್ರಯೋಗ ಆವಿಷ್ಕಾರದ ಸ್ಥೈರ್ಯವನ್ನು ತೋರುತ್ತದೆ. ಜತೆಗೇ, ನಮ್ಮ ದೇಶದ ಕೃಷಿ ಕ್ಷೇತ್ರ ನೂತನ ತಂತ್ರಜ್ಞಾನವನ್ನು ಹೇಗೆ ತನ್ನದಾಗಿಸಿಕೊಳ್ಳುತ್ತಿದೆ ಎನ್ನುವುದನ್ನೂ ತೋರಿಸಿಕೊಡುತ್ತಿದೆ.

ಜತೆಗಾರರೇ, ಕೃಷಿಯನ್ನು ಆಧುನಿಕಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮತ್ತು ಈ ದಿಸೆಯಲ್ಲಿ ಹೆಜ್ಜೆಯನ್ನೂ ಇಟ್ಟಿದೆ. ಸರ್ಕಾರದ ಈ ಪ್ರಯತ್ನ ಮುಂದೆಯೂ ಜಾರಿಯಲ್ಲಿರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ ನಾನೊಂದು ವಿಡಿಯೋ ನೋಡಿದೆ. ಆ ವಿಡಿಯೋ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ “ನಯಾ ಪಿಂಗ್ಲಾʼ ಗ್ರಾಮದ ಚಿತ್ರ ಕಲಾವಿದ ಸರಮುದ್ದೀನ್‌ ಅವರದ್ದಾಗಿತ್ತು. ರಾಮಾಯಣ ಕುರಿತು ರಚಿಸಿದ್ದ  ಅವರ ಪೇಂಟಿಂಗ್‌ ಎರಡು ಲಕ್ಷ ರೂಪಾಯಿಗೆ ಮಾರಾಟವಾಗಿದ್ದರ ಬಗ್ಗೆ ವಿಡಿಯೋದಲ್ಲಿ ಅವರು ಸಂತಸ ವ್ಯಕ್ತಪಡಿಸಿದ್ದರು. ಇದರಿಂದ ಗ್ರಾಮದ ಬಹುಜನರಿಗೂ ಬಹಳ ಸಂತಸವಾಗಿದೆ. ಈ ವಿಡಿಯೋ ನೋಡಿದ ಬಳಿಕ ಇದರ ಬಗ್ಗೆ ಇನ್ನಷ್ಟು ಅರಿತುಕೊಳ್ಳುವ ಉತ್ಸುಕತೆ ನನ್ನಲ್ಲಿ ಮೂಡಿತು. ಇದರ ಫಲವಾಗಿ ಪಶ್ಚಿಮ ಬಂಗಾಲದೊಂದಿಗೆ ಗುರುತಿಸಿಕೊಂಡಿರುವ ಅತ್ಯಂತ ಉತ್ತಮ ವಿಚಾರದ ಬಗ್ಗೆ ನನಗೆ ಮಾಹಿತಿ ದೊರಕಿತು. ಅದನ್ನು ನಾನು ತಮ್ಮೊಂದಿಗೆ ಅಗತ್ಯವಾಗಿ ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಪ್ರವಾಸೋದ್ಯಮ ಸಚಿವಾಲಯದ ವಲಯ ಕಚೇರಿಯು ಈ ತಿಂಗಳ ಆರಂಭದಲ್ಲೇ ಬಂಗಾಳದ ಗ್ರಾಮಗಳಲ್ಲಿ ಒಂದು “ಇನ್‌ ಕ್ರೆಡಿಬಲ್‌ ಇಂಡಿಯಾ–WEEK END GATEWAYʼ ಕಾರ್ಯಕ್ರಮವನ್ನು ಆರಂಭಿಸಿದೆ. ಇದರಲ್ಲಿ ಪಶ್ಚಿಮ ಮಿಡ್ನಾಪುರ, ಬಾಂಕುರಾ, ಬಿರ್ಭೂಮ್‌, ಪುರೂಲಿಯಾ, ಪೂರ್ವ ವರ್ಧಮಾನ್‌ ಗಳ ಶಿಲ್ಪ ಕಲಾವಿದರಿಂದ ಕರಕುಶಲ ಮೇಳವನ್ನು ಆಯೋಜಿಸಲಾಯಿತು. ಈ ಇನ್‌ ಕ್ರೆಡಿಬಲ್‌ ಇಂಡಿಯಾ –WEEK END GATEWAY ಕಾರ್ಯಕ್ರಮದ ಮೂಲಕ ಕರಕುಶಲ ವಸ್ತುಗಳ ಮಾರಾಟ ಅತ್ಯುತ್ತಮವಾಗಿ ನಡೆಯಿತು ಎಂದು ನನಗೆ ತಿಳಿಸಲಾಗಿದೆ. ಇದು ಕರಕುಶಲ ಕಲಾವಿದರಿಗೆ ಪ್ರೋತ್ಸಾಹ ನೀಡುವ ಅತ್ಯುತ್ತಮ ಕಾರ್ಯಕ್ರಮವಾಗಿದೆ. ದೇಶದೆಲ್ಲೆಡೆಯ ಜನರು ಕೂಡ ಹೊಸ ಹೊಸ ವಿಧಾನಗಳ ಮೂಲಕ ನಮ್ಮ ಕಲೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ.

ಒಡಿಶಾದ ರಾವುರ್ಕೆಲಾದ ಭಾಗ್ಯಶ್ರೀ ಸಾಹೂ ಎಂಬಾಕೆಯನ್ನೇ ನೋಡಿ. ಈಕೆ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿ. ಆದರೆ, ಕಳೆದ ಕೆಲವು ತಿಂಗಳಿಂದ ಪಟಚಿತ್ರ ಕಲೆಯನ್ನು ಕಲಿತುಕೊಳ್ಳಲು ಆರಂಭಿಸಿದರು  ಹಾಗೂ ಅದರಲ್ಲಿ ನೈಪುಣ್ಯತೆಯನ್ನೂ ಗಳಿಸಿದರು. ಆದರೆ, ಅವರು ಎಲ್ಲಿ ಪೇಂಟ್‌ ಮಾಡಿದ್ದಾರೆಂದು ತಮಗೆ ಗೊತ್ತೇ? ಅವರು ಮಾಡಿರುವುದು ಮೃದುವಾದ ಶಿಲೆಗಳ ಮೇಲೆ! ಮೃದುವಾದ ಶಿಲೆಗಳ ಮೇಲೆ. ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಭಾಗ್ಯಶ್ರೀಗೆ ಮೃದುವಾದ ಶಿಲೆಗಳು ದೊರೆತವು. ಅವುಗಳನ್ನು ಅವರು ಒಂದೆಡೆ ಕೂಡಿಸಿ ಸ್ವಚ್ಛಗೊಳಿಸಿದರು. ನಂತರ, ಪ್ರತಿದಿನವೂ ಗಂಟೆಗಳ ಕಾಲ ಶಿಲೆಗಳ ಮೇಲೆ ಪಚಿತ್ರ ಮಾದರಿಯಲ್ಲಿ ಪೇಂಟಿಂಗ್‌ ಮಾಡಿದರು. ಶಿಲೆಗಳ ಮೇಲೆ ಮಾಡಿದ ಪೇಂಟಿಂಗ್‌ ಗಳನ್ನು ತಮ್ಮ ಸ್ನೇಹಿತರಿಗೆ ಉಡುಗೊರೆ ನೀಡಲು ಆರಂಭಿಸಿದರು. ಲಾಕ್‌ ಡೌನ್‌ ಅವಧಿಯಲ್ಲಿ ಅವರು ಬಾಟಲಿಗಳ ಮೇಲೆಯೂ ಪೇಂಟಿಂಗ್‌ ಮಾಡಲು ಪ್ರಾರಂಭಿಸಿದರು. ಈಗ ಅವರು ಈ ಕಲೆಯ ಮೇಲೆ ಕಾರ್ಯಾಗಾರವನ್ನೂ ಆಯೋಜಿಸುತ್ತಾರೆ. ಕೆಲವು ದಿನಗಳ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ  ಜಯಂತಿಯಂದು ಭಾಗ್ಯಶ್ರೀ ಅವರು ಶಿಲೆಯ ಪೇಂಟಿಂಗ್‌ ಮೂಲಕವೇ ವಿಶಿಷ್ಟ ಮಾದರಿಯಲ್ಲಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭವಿಷ್ಯದ ಅವರ ಪ್ರಯತ್ನಗಳಿಗೆ ನಾನು ಶುಭಕಾಮನೆಗಳನ್ನು ಕೋರುತ್ತೇನೆ. ಕಲೆ ಮತ್ತು ಬಣ್ಣಗಳಲ್ಲಿ ಬಹಳಷ್ಟು ಹೊಸತನ್ನು ಕಲಿಯಲು ಸಾಧ್ಯ, ಮಾಡಲು ಸಾಧ್ಯ.

ಜಾರ್ಖಂಡ್‌ ರಾಜ್ಯದ ದುಮ್ಕಾ ಎಂಬಲ್ಲಿ ಮಾಡಲಾದ ಇಂಥದ್ದೇ ಅನುಪಮ ಪ್ರಯತ್ನದ ಕುರಿತು ನನಗೆ ತಿಳಿದುಬಂದಿದೆ. ಇಲ್ಲಿ ಮಾಧ್ಯಮಿಕ ಶಾಲೆಯ ಒಬ್ಬರು ಮುಖ್ಯೋಪಾಧ್ಯಾಯರು ಹಳ್ಳಿಯ ಮಕ್ಕಳಿಗೆ ಶಿಕ್ಷಣ ನೀಡಲೆಂದು, ಕಲಿಸಲೆಂದು ಹಳ್ಳಿಗಳ ಗೋಡೆಗಳ ಮೇಲೆಯೇ ಹಿಂದಿ ಮತ್ತು ಇಂಗ್ಲಿಷ್‌ ಅಕ್ಷರಗಳಲ್ಲಿ ಪೇಂಟಿಂಗ್‌ ಮಾಡಿಸಿದ್ದಾರೆ. ಜತೆಗೇ, ವಿಭಿನ್ನ ಚಿತ್ರಗಳನ್ನೂ ರಚಿಸಿದ್ದಾರೆ. ಇದರಿಂದ ಗ್ರಾಮದ ಮಕ್ಕಳ ಸಹಾಯವೂ ಸಾಕಷ್ಟು ದೊರೆಯುತ್ತಿದೆ. ಇಂತಹ ಪ್ರಯತ್ನಗಳಲ್ಲಿ ನಿರತರಾಗಿರುವ  ಎಲ್ಲ ಜನರನ್ನು ನಾನು ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದಿಂದ ಸಾವಿರಾರು ಕಿಲೋಮೀಟರ್‌ ದೂರದಲ್ಲಿ, ಹಲವು  ಮಹಾಸಾಗರಗಳು, ಮಹಾದ್ವೀಪಗಳ ಆಚೆ ಚಿಲಿ ದೇಶವಿದೆ. ಭಾರತದಿಂದ ಚಿಲಿ ತಲುಪಲು ಬಹಳ ಸಮಯ ತಗುಲುತ್ತದೆ. ಆದರೆ, ಅಲ್ಲಿ ಬಹಳ ಹಿಂದಿನಿಂದಲೂ ಭಾರತೀಯ ಸಂಸ್ಕೃತಿಯ ಪರಿಮಳ ಪಸರಿಸುತ್ತಿದೆ. ಇನ್ನೊಂದು ಮುಖ್ಯವಾದ ಮಾತೆಂದರೆ, ಅಲ್ಲಿ ಯೋಗವು ಬಹಳ ಜನಪ್ರಿಯವಾಗಿದೆ. ತಮಗೆ ಈ ಸಂಗತಿ ತಿಳಿದರೆ ಖುಷಿಯಾಗಬಹುದು, ಚಿಲಿಯ ರಾಜಧಾನಿ ಸ್ಯಾಂಟಿಯಾಗೋದಲ್ಲಿ 30ಕ್ಕೂ ಹೆಚ್ಚು ಯೋಗ ವಿದ್ಯಾಲಯಗಳಿವೆ. ಚಿಲಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಹ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಚಿಲಿಯ ಸಂಸತ್ತಿನ ಹೌಸ್‌ ಆಫ್‌ ಡೆಪ್ಯೂಟಿಸ್‌ ನಲ್ಲಿ ಯೋಗ ದಿನದಂದು ಉತ್ಸಾಹದಾಯಕ ವಾತಾವರಣ ಇರುತ್ತದೆ ಎಂದು ನನಗೆ ಮಾಹಿತಿ ಇದೆ. ಕೊರೋನಾ ಸೋಂಕಿನ ಈ ಕಾಲದಲ್ಲಿ ರೋಗನಿರೋಧಕ ಶಕ್ತಿಗೆ ಒತ್ತು ನೀಡುವಲ್ಲಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಲ್ಲಿ ಯೋಗದ ತಾಕತ್ತನ್ನು ನೋಡಿ ಯೋಗದ ವಿಷಯವಾಗಿ ಅವರು ಇನ್ನಷ್ಟು ಮಹತ್ವ ನೀಡುತ್ತಿದ್ದಾರೆ. ಚಿಲಿಯ ಕಾಂಗ್ರೆಸ್‌ ಅಂದರೆ ಅಲ್ಲಿನ ಸಂಸತ್ತು ಒಂದು ಪ್ರಸ್ತಾವ ಮಂಡಿಸಿತ್ತು, ಫಲವಾಗಿ, ಅಲ್ಲಿ ನವೆಂಬರ್‌ 4ರಂದು ರಾಷ್ಟ್ರೀಯ ಯೋಗ ದಿನವೆಂದು ಘೋಷಿಸಲಾಗಿದೆ. ನವೆಂಬರ್‌ 4ರಂದು ಅಂಥದ್ದೇನಿದೆ ಎಂದು ನೀವು ಯೋಚಿಸುತ್ತಿರಬಹುದು. 1962 ರ ನವೆಂಬರ್‌ 4ರಂದೇ ಚಿಲಿಯ ಪ್ರಥಮ ಯೋಗ ಸಂಸ್ಥಾನ ಹೋಜೆ  ರಫಾಲ್‌ ಎಸ್ಟ್ರಡಾ ಅವರಿಂದ ಸ್ಥಾಪನೆಯಾಗಿತ್ತು. ಈ ದಿನವನ್ನು ರಾಷ್ಟ್ರೀಯ ಯೋಗ ದಿನವೆಂದು ಪ್ರಕಟಿಸುವ ಮೂಲಕ ಎಸ್ಟ್ರಡಾ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚಿಲಿಯ ಸಂಸತ್ತಿನ ಮೂಲಕ ಇದೊಂದು ವಿಶೇಷ ಗೌರವ ಸಂದಿರುವುದು ಪ್ರತಿಯೋರ್ವ ಭಾರತೀಯನೂ ಹೆಮ್ಮೆ ಪಡುವಂಥದ್ದಾಗಿದೆ. ಅಂದ ಹಾಗೆ, ಚಿಲಿಯ ಸಂಸದರ ಕುರಿತಾದ ಇನ್ನೊಂದು ವಿಚಾರ ತಮ್ಮ ಮನಸೂರೆಗೊಳ್ಳಬಹುದು. ಚಿಲಿಯ ಸೆನೇಟ್‌ ನ ಉಪಾಧ್ಯಕ್ಷರ ಹೆಸರು ರವೀಂದ್ರನಾಥ ಕ್ವಿಂಟೆರಾಸ್‌ ಎಂದು. ವಿಶ್ವಕವಿ ಗುರುದೇವ ಟ್ಯಾಗೋರ್‌ ಅವರಿಂದ ಪ್ರೇರಿತರಾಗಿ ಅವರಿಗೆ ಈ ಹೆಸರು ಇಡಲಾಗಿದೆ.

ನನ್ನ ಪ್ರೀತಿಯ ಸಹವಾಸಿಗಳೇ, “ಮನದ ಮಾತುʼ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯ ಕುರಿತಾಗಿಯೂ ಮಾತಾಡುವಂತೆ ಮಹಾರಾಷ್ಟ್ರದ ಜಾಲ್ನಾದ ಡಾ.ಸ್ವಪ್ನಿಲ್‌ ಮಂತ್ರಿ ಹಾಗೂ ಕೇರಳದ ಪಾಲಕ್ಕಾಡ್‌ ನ ಪ್ರಹ್ಲಾದ ರಾಜಗೋಪಾಲನ್‌ ಅವರು “ಮೈಗವ್‌ʼ ವೇದಿಕೆಯ ಮೂಲಕ ಒತ್ತಾಯಿಸಿದ್ದಾರೆ. ಈ ತಿಂಗಳ 18ರಿಂದ ಫೆಬ್ರವರಿ 17ರವರೆಗೆ ನಮ್ಮ ದೇಶ “ರಸ್ತೆ ಸುರಕ್ಷತಾ ಮಾಸಿಕʼವನ್ನು ಆಚರಿಸುತ್ತಿದೆ. ರಸ್ತೆ ಅಪಘಾತಗಳು ಇಂದು ನಮ್ಮ ದೇಶದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲಿ ಚಿಂತೆಯ ವಿಷಯವಾಗಿದೆ. ಇಂದು ಭಾರತದಲ್ಲಿ ರಸ್ತೆ ಸುರಕ್ಷತೆಗಾಗಿ ಸರ್ಕಾರದೊಂದಿಗೆ ವ್ಯಕ್ತಿಗತ ಹಾಗೂ ಸಾಮೂಹಿಕ ಸ್ತರದಲ್ಲೂ ಹಲವಾರು ರೀತಿಯ ಪ್ರಯತ್ನಗಳು ಜಾರಿಯಲ್ಲಿವೆ. ಜೀವ ರಕ್ಷಿಸುವ ಈ ಪ್ರಯತ್ನದಲ್ಲಿ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದೆ.

ಜತೆಗಾರರೇ, Border road organization ನಿರ್ಮಿಸುವ ರಸ್ತೆಗಳಲ್ಲಿ ಪ್ರಯಾಣಿಸುವಾಗ ಅತ್ಯಂತ ಆವಿಷ್ಕಾರಿ, ಅನ್ವೇಷಣಾತ್ಮಕ ಘೋಷವಾಕ್ಯಗಳು ಅಲ್ಲಲ್ಲಿ ಕಾಣುವುದು ತಮ್ಮ ಗಮನಕ್ಕೆ ಬಂದಿರಬಹುದು. “THIS IS HIGHWAY NOT RUNWAYʼ, ಅಥವಾ “Be Mr.Late than Late Mr. ʼ ಎನ್ನುವಂಥ ಘೋಷವಾಕ್ಯಗಳನ್ನು ನೋಡಿರಬಹುದು. ಇಂಥ ಘೋಷವಾಕ್ಯಗಳು ರಸ್ತೆಗಳಲ್ಲಿ ಸಮಾಧಾನದಿಂದ ಚಲಿಸಬೇಕು ಎನ್ನುವ ಜಾಗೃತಿಯನ್ನು ಜನರಲ್ಲಿ ಮೂಡಿಸಲು ಪ್ರಭಾವಿಯಾಗಿರುತ್ತವೆ. ಈಗ ತಾವೂ ಸಹ ಅನ್ವೇಷಣಾತ್ಮಕ ಘೋಷಣೆಗಳು ಅಥವಾ ಗಮನ ಸೆಳೆಯುವ ನುಡಿಗಟ್ಟುಗಳನ್ನು ಕೇಂದ್ರ ಸರ್ಕಾರದ “ಮೈಗವ್‌ʼ ವೇದಿಕೆಗೆ ಕಳುಹಿಸಬಹುದು. ತಮ್ಮ ಅತ್ಯುತ್ತಮ ಘೋಷವಾಕ್ಯಗಳನ್ನು ಈ ಅಭಿಯಾನದಲ್ಲಿ ಬಳಸಿಕೊಳ್ಳಲಾಗುವುದು.

ಜತೆಗಾರರೇ, ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡುವಾಗ ನಮೋ ಆ್ಯಪ್ ನಲ್ಲಿ ಕೋಲ್ಕತ್ತಾದ ಅಪರ್ಣಾ ದಾಸ್‌ ಅವರು ಮಾಡಿರುವ ಒಂದು ಸಂದೇಶದ ಬಗ್ಗೆ ನಾನು ಚರ್ಚೆ ಮಾಡಲು ಬಯಸುತ್ತೇನೆ. ಅಪರ್ಣಾ ಅವರು ನನಗೆ ಫಾಸ್ಟ್‌ ಟ್ಯಾಗ್‌ ಕಾರ್ಯಕ್ರಮದ ಬಗ್ಗೆ ಮಾತನಾಡಲು ಸಲಹೆ ನೀಡಿದ್ದಾರೆ. ಫಾಸ್ಟ್‌ ಟ್ಯಾಗ್‌ ನಿಂದ ಪ್ರಯಾಣದ ಅನುಭವವೇ ಬದಲಾಗಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಸಮಯದ ಉಳಿತಾಯವಂತೂ ಆಗುತ್ತದೆ, ಜತೆಗೇ, ಟೋಲ್‌ ಪ್ಲಾಜಾಗಳಲ್ಲಿ ನಿಲ್ಲುವ, ನಗದು ಹಣ ಪಾವತಿ ಮಾಡುವ ಚಿಂತೆಗಳೆಲ್ಲ ದೂರವಾಗಿವೆ ಎಂದಿದ್ದಾರೆ, ಅಪರ್ಣಾ ಅವರ ಮಾತು ಸತ್ಯವಾದದ್ದು. ಮೊದಲು ನಮ್ಮ ಟೋಲ್‌ ಪ್ಲಾಜಾಗಳಲ್ಲಿ ಒಂದು ವಾಹನ ಸುಮಾರು 7ರಿಂದ 8 ನಿಮಿಷ ನಿಲ್ಲಬೇಕಾಗುತ್ತಿತ್ತು. ಈಗ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಜಾರಿಯಾದಾಗಿನಿಂದ ಕಾಯಬೇಕಾದ ಸಮಯ ಈಗ ಎರಡೂವರೆ ನಿಮಿಷಗಳಿಗೆ ಇಳಿಕೆಯಾಗಿದೆ. ಕಾದು ನಿಲ್ಲಬೇಕಾದ ಸಮಯ ಕಡಿಮೆಯಾಗಿರುವುದರಿಂದ ವಾಹನಗಳ ಇಂಧನವೂ ಉಳಿತಾಯವಾಗುತ್ತಿದೆ. ಇದರಿಂದ ನಾಗರಿಕರ ಸರಿಸುಮಾರು 21 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ಅಂದರೆ, ಹಣದಲ್ಲೂ ಉಳಿತಾಯ, ಸಮಯದಲ್ಲೂ ಉಳಿತಾಯ. ಎಲ್ಲರೂ ರಸ್ತೆ ಮಾರ್ಗಸೂಚಿಗಳನ್ನು ಪಾಲನೆ ಮಾಡುವಾಗ ತಮ್ಮ ಬಗ್ಗೆಯೂ ಗಮನ ನೀಡಿ ಹಾಗೂ ಇನ್ನೊಬ್ಬರ ಜೀವನವನ್ನೂ ರಕ್ಷಿಸಿ ಎನ್ನುವುದು ನನ್ನ ಆಗ್ರಹ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮಲ್ಲಿ “ಜಲಬಿಂದು ನಿಪಾತೇನ ಕ್ರಮಶಃ ಪೂರ್ಯತೇ ಘಟಃ – ಹನಿಹನಿಗೂಡಿದರೆ ಹಳ್ಳʼ ಎನ್ನುವ ಒಂದು ಮಾತಿದೆ. ನಮ್ಮ ಒಂದೊಂದು ಪ್ರಯತ್ನಗಳಿಂದಲೇ ನಮ್ಮ ಸಂಕಲ್ಪವು ಈಡೇರುತ್ತದೆ. ಇದರಿಂದಾಗಿ,2021ರ ಆರಂಭದಲ್ಲಿ ನಾವು ಯಾವ ಗುರಿ ನಿಗದಿಪಡಿಸಿಕೊಂಡಿದ್ದೇವೋ ನಾವೆಲ್ಲರೂ ಸೇರಿ ಅವುಗಳನ್ನು ಈಡೇರಿಸಿಕೊಳ್ಳಬೇಕಾಗಿದೆ. ಬನ್ನಿ, ನಾವೆಲ್ಲರೂ ಸೇರಿ ಈ ವರ್ಷವನ್ನು ಸಾರ್ಥಕವನ್ನಾಗಿಸುವ ನಿಟ್ಟಿನಲ್ಲಿ ನಮ್ಮ ನಮ್ಮ ಹೆಜ್ಜೆಗಳನ್ನಿರಿಸೋಣ. ತಾವು ತಮ್ಮ ಸಂದೇಶ, ತಮ್ಮ ವಿಚಾರಗಳನ್ನು ಅಗತ್ಯವಾಗಿ ಕಳುಹಿಸುತ್ತಿರಿ. ಮುಂದಿನ ತಿಂಗಳು ಮತ್ತೆ ಭೇಟಿಯಾಗೋಣ.

ಇತಿ– ಪುನರ್ಮಿಲನಕ್ಕಾಗಿ ವಿದಾಯ!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”