ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ಹಿಮಾಚಲ ಪ್ರದೇಶದಲ್ಲಿ 13 ಕೋಟಿ 80 ಲಕ್ಷ ರೂ. ಮೂಲಸೌಕರ್ಯದ ಭಾರತ ಸರ್ಕಾರದ ಆಯವ್ಯಯ ಬೆಂಬಲ ಸೇರಿದಂತೆ ಎಸ್.ಜೆ.ವಿ.ಎನ್. ನಿಯಮಿತದಿಂದ ಅಂದಾಜು 2614.51 ಕೋಟಿ ರೂ. ವೆಚ್ಚದಲ್ಲಿ 382 ಮೆ.ವ್ಯಾ. ಸುನ್ನಿ ಅಣೆಕಟ್ಟೆ ಜಲ ವಿದ್ಯುತ್ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಜನವರಿ, 2022 ರವರೆಗೆ ಮಾಡಲಾಗಿರುವ ಸಂಚಿತ 246 ಕೋಟಿ ರೂ. ಮೊತ್ತಕ್ಕೆ ಪೂರ್ವಾನ್ವಯ ಅನುಮೋದನೆ ನೀಡಲಾಗಿದೆ.
ಯೋಜನಾ ವೆಚ್ಚ 2614 ಕೋಟಿ ರೂ.ಗಳಲ್ಲಿ ಯೋಜನೆಯ ಮೂಲ ವೆಚ್ಚ 2246.40 ಕೋಟಿ ರೂ, ನಿರ್ಮಾಣದ ಸಮಯದಲ್ಲಿನ ಬಡ್ಡಿ (ಐ.ಡಿ.ಸಿ.) ಮತ್ತು ಹಣಕಾಸು ಶುಲ್ಕಗಳು (ಎಫ್.ಸಿ.) ಅನುಕ್ರಮವಾಗಿ 358.96 ಕೋಟಿ ರೂ. ಮತ್ತು 9.15 ಕೋಟಿ ರೂ. ಸೇರಿವೆ. ಪ್ರಮಾಣದ ಬದಲಾವಣೆಗಳಿಂದಾಗಿ (ಸೇರ್ಪಡೆ/ಬದಲಾವಣೆಗಳು/ಹೆಚ್ಚುವರಿ ಐಟಂಗಳನ್ನು ಒಳಗೊಂಡಂತೆ) ಮತ್ತು ಸಮಯ ಕಳೆದ ಕಾರಣದಿಂದಾಗಿ ಮಿತಿಮೀರಿದ ವೆಚ್ಚದ ವ್ಯತ್ಯಾಸಗಳಿಗಾಗಿ ಪರಿಷ್ಕೃತ ವೆಚ್ಚದ ನಿರ್ಬಂಧಗಳನ್ನು ಮಂಜೂರಾದ ವೆಚ್ಚದ ಶೇ.10ಕ್ಕೆ ಮಿತಿಗೊಳಿಸಲಾಗಿದೆ.
ಆತ್ಮನಿರ್ಭರ ಭಾರತ ಅಭಿಯಾನದ ಗುರಿಗಳು ಮತ್ತು ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು, ಎಸ್.ಜೆ.ವಿ.ಎನ್. ನಿಂದ 382 ಮೆ.ವ್ಯಾ ಸುನ್ನಿ ಅಣೆಕಟ್ಟೆ ಎಚ್.ಇ.ಪಿ. ಸ್ಥಾಪನೆಗೆ ಪ್ರಸ್ತುತ ಪ್ರಸ್ತಾವನೆಯು ಸ್ಥಳೀಯ ಪೂರೈಕೆದಾರರಿಗೆ / ಸ್ಥಳೀಯ ಉದ್ಯಮಗಳಿಗೆ / ಎಂ.ಎಸ್.ಎಂ.ಇ.ಗಳಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಉದ್ಯೋಗವನ್ನು ಉತ್ತೇಜಿಸುವುದರ ಜೊತೆಗೆ ದೇಶದೊಳಗೆ ಉದ್ಯಮಶೀಲತೆಯ ಅವಕಾಶಗಳನ್ನು ಮತ್ತು ಪ್ರಾದೇಶಿಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನೂ ಉತ್ತೇಜಿಸುತ್ತದೆ. ಯೋಜನೆಯ ಅನುಷ್ಠಾನವು ಯೋಜನೆಯ ಗರಿಷ್ಠ ನಿರ್ಮಾಣದ ಸಮಯದಲ್ಲಿ ಸುಮಾರು 4000 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ.