ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪಂನಲ್ಲಿ ನಡೆದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ – ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆ (ITU-WTSA) 2024 ರ ಸಂದರ್ಭದಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ನ 8 ನೇ ಆವೃತ್ತಿಯನ್ನು ಉದ್ಘಾಟಿಸಿದರು. ಡಬ್ಲ್ಯು ಟಿ ಎಸ್ ಎ ಎಂಬುದು ಡಿಜಿಟಲ್ ತಂತ್ರಜ್ಞಾನಗಳಿಗಾಗಿನ ವಿಶ್ವ ಸಂಸ್ಥೆಯ ಏಜೆನ್ಸಿಯಾದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಪ್ರಮಾಣೀಕರಣ ಕಾರ್ಯಕ್ಕಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಆಡಳಿತ ಸಮ್ಮೇಳನವಾಗಿದೆ. ಇದೇ ಮೊದಲ ಬಾರಿಗೆ ಐಟಿಯು – ಡಬ್ಲ್ಯುಟಿಎಸ್ಎ ಅನ್ನು ಭಾರತ ಮತ್ತು ಏಷ್ಯಾ-ಪೆಸಿಫಿಕ್ನಲ್ಲಿ ಆಯೋಜಿಸಲಾಗಿದೆ. ಇದು ದೂರಸಂಪರ್ಕ, ಡಿಜಿಟಲ್ ಮತ್ತು ಐಸಿಟಿ ವಲಯಗಳನ್ನು ಪ್ರತಿನಿಧಿಸುತ್ತಿರುವ 190 ಕ್ಕೂ ಹೆಚ್ಚು ದೇಶಗಳ 3,000 ಕ್ಕೂ ಹೆಚ್ಚು ಉದ್ಯಮ ನಾಯಕರು, ನೀತಿ-ನಿರೂಪಕರು ಮತ್ತು ತಂತ್ರಜ್ಞಾನ ತಜ್ಞರನ್ನು ಒಟ್ಟುಗೂಡಿಸಿರುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವು ಭಾರತದ ಡಿಜಿಟಲ್ ರೂಪಾಂತರಕ್ಕೆ ಗಮನಾರ್ಹ ವೇಗ ನೀಡಿದೆ ಎಂದು ರಿಲಯನ್ಸ್ ಜಿಯೋ – ಇನ್ಫೋಕಾಮ್ ಲಿಮಿಟೆಡ್ ನ ಅಧ್ಯಕ್ಷರಾದ ಶ್ರೀ ಆಕಾಶ್ ಅಂಬಾನಿ ಅವರು ಶ್ಲಾಘಿಸಿದ್ದಾರೆ. ಮೂರನೇ ಆಡಳಿತಾವಧಿಯಲ್ಲಿ ಶ್ರೀ ಮೋದಿಯವರು ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC) ಅನ್ನು ನಾವಿನ್ಯತೆ ಮತ್ತು ಸಹಯೋಗಕ್ಕಾಗಿನ ಮಹತ್ವದ ವೇದಿಕೆಯಾಗಿಸಿದ್ದು, ಇದು ಡಿಜಿಟಲ್ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆಗೆ ಚಾಲನೆ ನೀಡಿದೆ ಎಂದು ಅವರು ಹೇಳಿದರು. ಭಾರತವು 2ಜಿ ವೇಗದೊಂದಿಗೆ ಹೋರಾಡುತ್ತಿದ್ದ ರಾಷ್ಟ್ರದಿಂದ ವಿಶ್ವದ ಅತಿದೊಡ್ಡ ಡಾಟಾ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿದೆ ಎಂದು ಶ್ರೀ ಅಂಬಾನಿ ತಿಳಿಸಿದರು. ಮೊಬೈಲ್ ಬ್ರಾಡ್ಬ್ಯಾಂಡ್ ಅಳವಡಿಕೆಯಲ್ಲಿ 155 ನೇ ಸ್ಥಾನದಿಂದ ಪ್ರಸ್ತುತದ ಸ್ಥಿತಿಯತ್ತ ಭಾರತದ ಪ್ರಯಾಣವು ಸರ್ಕಾರ ಮತ್ತು ಉದ್ಯಮ ಎರಡರ ಸಹಯೋಗದ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಮಹಿಳೆಯರೇ ಹೆಚ್ಚು ಭಾಗಿದಾರರಾಗಿರುವ ಜನ್ ಧನ್ ಖಾತೆಗಳಂತಹ ಉಪಕ್ರಮಗಳ ಮೂಲಕ 530 ದಶಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಯನ್ನೇ ತೆರೆದಿರದ ಭಾರತೀಯರನ್ನು ಸೇರ್ಪಡೆಗೊಳಿಸಲಾದ ಕ್ರಮಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.
"ನಾವಿನ್ಯತೆಗೆ ಮೋದಿ ಅವರ ಬದ್ಧತೆಯು ಯಾರನ್ನೂ ಬಿಡದೇ ತಂತ್ರಜ್ಞಾನವು ನಮ್ಮ ರಾಷ್ಟ್ರದ ಮೂಲೆ ಮೂಲೆಯನ್ನು ತಲುಪುವುದನ್ನು ಖಾತ್ರಿಪಡಿಸಿದೆ" ಎಂದು ಶ್ರೀ ಅಂಬಾನಿ ಹೇಳಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವ ಗುರಿಯ ಸಾಕಾರಕ್ಕೆ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅನ್ನು ಪರಿವರ್ತಕ ಸಾಧನವಾಗಿ ಬಳಸಿಕೊಳ್ಳುವ ಬಗ್ಗೆ ಅವರು ಪ್ರಸ್ತಾಪಿಸಿದರು ಮತ್ತು ಸದೃಢ ಎಐ ವ್ಯವಸ್ಥೆಯನ್ನು ಪೋಷಿಸುತ್ತಾ ದೇಶದೊಳಗೆ ಭಾರತೀಯ ಡಾಟಾವನ್ನು ಉಳಿಸಿಕೊಳ್ಳಲು ಡಾಟಾ ಸೆಂಟರ್ ನೀತಿಗೆ ಪರಿಷ್ಕರಣೆಗಳಿಗೆ ಅವರು ಮನವಿ ಮಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾದ ದೃಷ್ಟಿಕೋನವನ್ನು ಒತ್ತಿ ಹೇಳುತ್ತಾ, ಭಾರ್ತಿ ಏರ್‌ಟೆಲ್ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಶ್ರೀ ಸುನೀಲ್ ಭಾರ್ತಿ ಮಿತ್ತಲ್ ಅವರು ಭಾರತದ ದೂರಸಂಪರ್ಕ ವಲಯದ ಪ್ರಯಾಣದ ಬಗ್ಗೆ ತಿಳಿಸುತ್ತಾ ದೂರಸಂಪರ್ಕ ಮೂಲಸೌಕರ್ಯ ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಪರಿವರ್ತನಕಾರಿ ಪ್ರಗತಿಯ ಬಗ್ಗೆ ಒತ್ತಿಹೇಳಿದರು. “2014 ರಲ್ಲಿ ಪ್ರಧಾನಮಂತ್ರಿ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ದೂರದೃಷ್ಟಿಯು 4ಜಿ ಕ್ರಾಂತಿಯನ್ನು ಹೊತ್ತಿಸಿದಾಗ ನಿಜವಾದ ಪರಿವರ್ತನೆ ಪ್ರಾರಂಭವಾಯಿತು. ಇದು ನಮ್ಮ ಗ್ರಾಮೀಣ ಪ್ರದೇಶಗಳು ಸೇರಿದಂತೆ ಲಕ್ಷಾಂತರ ಜನರಿಗೆ ಸ್ಮಾರ್ಟ್‌ಫೋನ್ ಮತ್ತು ಅಗತ್ಯ ಡಿಜಿಟಲ್ ಸೇವೆಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.” ಗ್ರಾಮೀಣ ಪ್ರದೇಶಗಳಲ್ಲಿ ಸೇರಿದಂತೆ ಲಕ್ಷಾಂತರ ಜನರಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಡಿಜಿಟಲ್ ಸೇವೆಗಳು ಲಭ್ಯವಾಗಲು ಸಾಧ್ಯವಾಗಿದೆ ಎಂದು 4ಜಿ ತಂತ್ರಜ್ಞಾನದ ಪರಿವರ್ತಕ ಪರಿಣಾಮದ ಬಗ್ಗೆ ಅವರು ವಿಷದವಾಗಿ ತಿಳಿಸಿದರು.
ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಮೂಲಕ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುತ್ತಾ ಭಾರತವನ್ನು ಟೆಲಿಕಾಂ ಉಪಕರಣಗಳ ಉತ್ಪಾದನಾ ಕೇಂದ್ರವಾಗಿಸಿದ ಸರ್ಕಾರದ ಉಪಕ್ರಮಗಳ ಮಹತ್ವವನ್ನು ಅವರು ತಿಳಿಸಿದರು. "ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನಾವು ಬದ್ಧರಾಗಿದ್ದೇವೆ. ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ನಂತಹ ಉಪಕ್ರಮಗಳೊಂದಿಗೆ, ನಾವು ಭಾರತವನ್ನು ದೂರಸಂಪರ್ಕ ಉಪಕರಣಗಳ ತಯಾರಿಕಾ ಕೇಂದ್ರವನ್ನಾಗಿ ಪರಿವರ್ತಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಭವಿಷ್ಯದ ಗುರಿಗಳನ್ನು ಚರ್ಚಿಸುತ್ತಾ, ಮುಂದಿನ 12 ರಿಂದ 18 ತಿಂಗಳೊಳಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 5ಜಿ ಚಾಲನೆಯೊಂದಿಗೆ ಭಾರತವು 5ಜಿ ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಮಿತ್ತಲ್ ಅವರು ಘೋಷಿಸಿದರು. ಅವರು ಲೋ ಅರ್ಥ್ ಆರ್ಬಿಟ್ (LEO) ಜಾಲಗಳ ಸಾಮರ್ಥ್ಯದ ಬಗ್ಗೆ ಚರ್ಚಿಸಿದರು, " ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಸಂಪರ್ಕದ ಅಂತರವನ್ನು ಈ ಜಾಲಗಳು ಕಡಿಮೆ ಮಾಡಲಿದ್ದು, ಎಲ್ಲಾ ಭಾರತೀಯರಿಗೆ ವೇಗದ ಅಂತರ್ಜಾಲ ಸೇವೆಯ ಲಭ್ಯತೆಯನ್ನು ಖಾತರಿಪಡಿಸುತ್ತದೆ." ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡಿಜಿಟಲ್ ಸಂಪರ್ಕದ ಪ್ರಾಮುಖ್ಯತೆಯನ್ನು ಸತತವಾಗಿ ಗುರುತಿಸುವಲ್ಲಿ ಮತ್ತು ಭಾರತವನ್ನು ಇನ್ನಷ್ಟು ಸಂಪರ್ಕಿತ, ಸಶಕ್ತ ಮತ್ತು ಒಳಗೊಳ್ಳುವಿಕೆಯ ಡಿಜಿಟಲ್ ರಾಷ್ಟ್ರವಾಗುವತ್ತ ಕೊಂಡೊಯ್ಯಲು ಕಾಲಕ್ರಮೇಣ ಹಲವಾರು ಸುಧಾರಣೆಗಳನ್ನು ಪರಿಚಯಿಸುವಲ್ಲಿ ಸರ್ಕಾರದ ದೃಢವಾದ ಬೆಂಬಲದ ಬಗ್ಗೆ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಶ್ರೀ ಕುಮಾರ್ ಮಂಗಳಂ ಬಿರ್ಲಾ ಅವರು ತಿಳಿಸಿದರು. ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸಲು ಹಾಗೂ ಜನರು ಮತ್ತು ಉದ್ಯಮಗಳು ಡಿಜಿಟಲ್ ಅಳವಡಿಕೆಯನ್ನು ಸಮಾನವಾಗಿ ವೇಗಗೊಳಿಸಲು ಸರ್ಕಾರದ ನಿರಂತರ ಕ್ರಮಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗರಿಷ್ಠ ಬೆಂಬಲ ಎಂಬ ಎಂಎಸ್‌ಎಂಇ ಕುರಿತ ಪ್ರಧಾನಮಂತ್ರಿಯವರ ಉಲ್ಲೇಖವನ್ನು ನೆನಪಿಸಿಕೊಂಡ ಶ್ರೀ ಬಿರ್ಲಾ ಅವರು, ಭಾರತದ ಕಿರು ಉದ್ಯಮಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಮೂಲಕ ಗರಿಷ್ಠ ಬೆಂಬಲವನ್ನು ನೀಡಲು ಬದ್ಧ ಎಂದು ಹೇಳಿದರು. 5ಜಿ, ಐಒಟಿ, ಎಐ ಮತ್ತು ಕ್ಲೌಡ್ ಸೇವೆಗಳಂತಹ ತಂತ್ರಜ್ಞಾನಗಳ ಮೇಲೆ ಗಮನಹರಿಸಬೇಕು ಎಂದು ಒತ್ತಿ ಹೇಳಿದ ಅವರು, ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸಲು ಭಾರತದ ಎಂಎಸ್ಎಂಇಗಳನ್ನು ಸಬಲಗೊಳಿಸುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರೂಪಿಸಬಹುದು ಎಂದು ಅವರು ವಿಶ್ವಾಸವ್ಯಕ್ತಪಡಿಸಿದರು. ಟೆಲಿ ಮೆಡಿಸಿನ್‌ನಲ್ಲಿ ಭಾರತವು 10 ಕೋಟಿ ದೂರಸಂಪರ್ಕ ಸಮಾಲೋಚನೆಗಳೊಂದಿಗೆ ಗಮನಾರ್ಹ ಸಾಧನೆಯನ್ನು ಸಾಧಿಸಿದೆ ಮತ್ತು ಇದು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷದಲ್ಲಿ ಸರ್ಕಾರಿ ನಿಯಂತ್ರಕ ಮತ್ತು ಉದ್ಯಮದ ನಡುವಿನ ಅತ್ಯಂತ ಕ್ಲಿಷ್ಟಕರ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾ, ಶ್ರೀ ಬಿರ್ಲಾ ಅವರು ಸ್ಪ್ಯಾಮ್ ನಿಯಂತ್ರಣ ಮತ್ತು ವಂಚನೆ ರಕ್ಷಣೆಯ ಅಗತ್ಯತೆಯನ್ನು ವಿವರಿಸಿದರು. ಭಾರತೀಯ ಟೆಲಿಕಾಂ ವಲಯದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅವರು ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ದಿಟ್ಟ ಉಪಕ್ರಮವನ್ನು ಕೊಂಡಾಡಿದರು. ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಭವಿಷ್ಯವನ್ನು ಸಾಕಾರಗೊಳಿಸಲು ಸರ್ಕಾರದ ನಿರಂತರ ಬೆಂಬಲದೊಂದಿಗೆ ತಮ್ಮ ಪಾತ್ರವನ್ನು ನಿಭಾಯಿಸಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವರ್ಷವನ್ನು ನಿಜವಾಗಿಯೂ ಅತ್ಯದ್ಭುತವಾಗಿಸಿದ ಸರ್ಕಾರ, ಪಾಲುದಾರರು ಮತ್ತು ಇಡೀ ದೂರಸಂಪರ್ಕ ಸಮುದಾಯಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
2024ರ ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆ ಮತ್ತು ಇಂಡಿಯಾ ಮೊಬೈಲ್ ಕಾಂಗ್ರೆಸ್ ನ ಜಂಟಿ ಸಮಾರಂಭದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಭಾಗಿಯಾಗಿರುವುದು ಅತ್ಯಂತ ಧನ್ಯತಾ ಕ್ಷಣವಾಗಿದೆ ಎಂದು ಐಟಿಯು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಡೊರೀನ್ ಬೊಗ್ಡಾನ್ ಮಾರ್ಟಿನ್ ಅವರು ಹೇಳಿದ್ದಾರೆ. ಇದು ಐಟಿಯು ಮತ್ತು ಭಾರತದ ನಡುವಿನ ಆಳವಾದ ಬಾಂಧವ್ಯದ ಸಶಕ್ತ ಸಂಕೇತವಾಗಿದೆ ಎಂದು ಹೇಳಿದ ಅವರು, ಕಳೆದ ವರ್ಷ ಐಟಿಯು ಪ್ರದೇಶ ಕಚೇರಿ ಮತ್ತು ನಾವಿನ್ಯತಾ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯೊಂದಿಗೆ ನಡೆಸಿದ ಅರ್ಥಪೂರ್ಣ ಸಂಭಾಷಣೆಯನ್ನು ನೆನಪಿಸಿಕೊಂಡರು. ನ್ಯೂಯಾರ್ಕ್‌ನಲ್ಲಿ ಕೆಲವು ವಾರಗಳ ಹಿಂದೆ ಡಿಜಿಟಲ್ ಭವಿಷ್ಯದ ಬಗ್ಗೆ ಜಗತ್ತಿಗೆ ಪ್ರಬಲ ಸಂದೇಶ ರವಾನಿಸಿದ ವಿಶ್ವ ನಾಯಕರು ಒಗ್ಗೂಡಿ ಭವಿಷ್ಯದ ಒಪ್ಪಂದ ಅಳವಡಿಸಿಕೊಂಡ ಬಗ್ಗೆ ಮತ್ತು ಅದರ ಜಾಗತಿಕ ಡಿಜಿಟಲ್ ಮಹತ್ವದ ಬಗ್ಗೆ ಅವರು ಮಾತನಾಡಿದರು. ಜಾಗತಿಕ ಡಿಜಿಟಲ್ ಆಡಳಿತದ ಅಗತ್ಯಕ್ಕೆ ಪ್ರಧಾನಮಂತ್ರಿಯವರು ನೀಡಿದ ಆದ್ಯತೆಯನ್ನು ಅವರು ನೆನಪಿಸಿಕೊಂಡರು ಹಾಗೂ ಇಡೀ ಪ್ರಪಂಚದೊಂದಿಗೆ ಅದರ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹಂಚಿಕೊಳ್ಳಲು ಮತ್ತು ಮುನ್ನಡೆಸುವ ಭಾರತದ ಮಹತ್ವಾಕಾಂಕ್ಷೆಯನ್ನು ಅವರು ಉದಾಹರಣೆ ಮೂಲಕ ಹೇಗೆ ಸ್ಪಷ್ಟಪಡಿಸಿದರು ಎಂಬುದನ್ನು ವಿವರವಾಗಿ ಹೇಳಿದರು.
ಡಿಪಿಐಗೆ ಭಾರಿ ಆದ್ಯತೆ ನೀಡಿದ್ದ ಭಾರತದ ಜಿ20 ಅಧ್ಯಕ್ಷತೆಯನ್ನು ಉಲ್ಲೇಖಿಸಿದ ಬೊಗ್ಡಾನ್ ಮಾರ್ಟಿನ್ ಅವರು ಐಟಿಯು ಜ್ಞಾನದ ಪಾಲುದಾರವಾಗಲಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಏಕೀಕೃತ ಪಾವತಿ ವೇದಿಕೆಗೆ ಸಂಬಂಧಿಸಿದಂತೆ ಭಾರತದ ಸಾಧನೆಗಳಿಂದ ಜಗತ್ತು ಕಲಿಯಲು ಬಹಳಷ್ಟಿದೆ ಎಂದು ಅವರು ಒತ್ತಿ ಹೇಳಿದರು. ಮಾನದಂಡಗಳು ನಂಬಿಕೆಯನ್ನು ನೀಡುತ್ತವೆ ಮತ್ತು ಅವುಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡುತ್ತಾ ಮೊಬೈಲ್ ಸಾಧನ ಲಭ್ಯತೆಯ ಮೂಲಕ ಪ್ರತಿಯೊಬ್ಬ ಭಾರತೀಯನ ಜೀವನವನ್ನು ಬದಲಾಯಿಸುವ ಸೇವೆಗಳನ್ನು ಒದಗಿಸುತ್ತಾ ಅಂತಹ ವೇದಿಕೆಗಳಿಗೆ ಈ ಮಾನದಂಡಗಳು ಶಕ್ತಿ ತುಂಬುವ ಎಂಜಿನ್ ಆಗಿವೆ ಎಂದು ಅವರು ಪ್ರತಿಪಾದಿಸಿದರು. ನಂಬಿಕೆಯು ಒಳಗೊಳ್ಳುವಿಕೆಯನ್ನು ಪೋಷಿಸುತ್ತದೆ ಮತ್ತು ಈ ಒಳಗೊಳ್ಳುವಿಕೆಯು ಡಿಜಿಟಲ್ ಮತ್ತು ಹೊರಹೊಮ್ಮುತ್ತಿರುವ ತಂತ್ರಜ್ಞಾನಗಳ ಸಂಪೂರ್ಣ ಸಾಮರ್ಥ್ಯವನ್ನು ಎಲ್ಲರಿಗೂ ಅಂದರೆ ಇನ್ನೂ ಅಂತರ್ಜಾಲ ಲೋಕಕ್ಕೆ ತೆರೆಯದೇ ಇರುವ ಮೂರನೇ ಒಂದು ಭಾಗದಷ್ಟು ಜನರೂ ಸೇರಿದಂತೆ ಎಲ್ಲರಿಗೂ ತೆರೆಯಬಲ್ಲದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಏಷ್ಯಾದಲ್ಲಿ ಇದು ಇಂತಹ ಮೊದಲ ರೀತಿಯ ಸಭೆಯಾಗಿದೆ ಎಂದು ಹೇಳಿದ ಅವರು ದಿಟ್ಟ ಸಾಮೂಹಿಕ ಕ್ರಮಕ್ಕೆ ಕರೆ ನೀಡಿದರು. ಮುಂದಿನ 10 ದಿನಗಳಲ್ಲಿ ಜಾಗತಿಕ ಡಿಜಿಟಲ್ ಆಡಳಿತದ ತಳಹದಿಯಾಗಿ ಅಂತಾರಾಷ್ಟ್ರೀಯ ಮಾನದಂಡಗಳ ಪಾತ್ರವನ್ನು ಬಲಪಡಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಕೃತಕ ಬುದ್ಧಿಮತ್ತೆ ಎಐನ ನೈತಿಕ ಬಳಕೆಯ ಬಗ್ಗೆ ಸಹ ಪ್ರಸ್ತಾಪಿಸಿದರು ಮತ್ತು ಡಿಜಿಟಲ್ ಸೇರ್ಪಡೆಯೊಂದಿಗೆ ತಾಂತ್ರಿಕ ಪ್ರಗತಿಯನ್ನು ಸಂಯೋಜಿಸುವಂತೆ ಕರೆ ನೀಡಿದರು.