1. ಉಗಾಂಡ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಯೊವೇರಿ ಕಗುತ ಮುಸೆವೇನಿ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 2018ರ ಜುಲೈ 24 ರಿಂದ 25ರ ವರೆಗೆ ಉಗಾಂಡ ಪ್ರವಾಸ ಕೈಗೊಂಡಿದ್ದರು. ಅವರೊಂದಿಗೆ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ನಿಯೋಗ ಹಾಗೂ ವಾಣಿಜ್ಯೋದ್ಯಮಿಗಳ ನಿಯೋಗವೂ ಕೂಡ ಇತ್ತು. ಕಳೆದ 21 ವರ್ಷಗಳಲ್ಲಿ ಭಾರತೀಯ ಪ್ರಧಾನಮಂತ್ರಿಯೊಬ್ಬರು ಉಗಾಂಡಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

 

2. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಉನ್ನತಮಟ್ಟದ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅವರ ಭೇಟಿ ವೇಳೆ 2018ರ ಜುಲೈ 24ರಂದು ಬುಧವಾರ ಎಂಟಿಬ್ಬೆಯ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ಮುಸೆವೇನಿ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆಗಳು ನಡೆದವು. ಪ್ರಧಾನಮಂತ್ರಿ ಅವರ ಭೇಟಿಯ ಗೌರವಾರ್ತ ಅಧ್ಯಕ್ಷ ಮುಸೆವೇನಿ ಅವರು, ಔತಣಕೂಟ ಆಯೋಜಿಸಿದ್ದರು.

 

3. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಅವರು ಉಗಾಂಡ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡುವುದು ಕೂಡ ಸೇರಿತ್ತು. ಅವರ ಭಾಷಣವನ್ನು ಭಾರತದಲ್ಲಿ ಮಾತ್ರವಲ್ಲದೆ, ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ಉಗಾಂಡದ ಸಂಸತ್ತನ್ನುದ್ದೇಶಿಸಿ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿ ಭಾಷಣ ಮಾಡಿದರು. ಉಗಾಂಡಾದ ಖಾಸಗಿ ವಲಯದ ಫೌಂಡೇಶನ್(ಪಿಎಸ್ಎಫ್ ಯು) ಮತ್ತು ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ) ಆಯೋಜಿಸಿದ್ದ ಜಂಟಿ ವಾಣಿಜ್ಯ ಸಭೆಯನ್ನುದ್ದೇಶಿಸಿ ಉಭಯ ನಾಯಕರು ಮಾತನಾಡಿದರು. ಉಗಾಂಡದಲ್ಲಿ ಆಯೋಜಿಸಿದ್ದ ಭಾರೀ ಸಂಖ್ಯೆಯ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ ಮಾಡಿದರು.

 

4. ಸಮಾಲೋಚನೆ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಮುಸೆವೇನಿ ಇಬ್ಬರೂ ಸಹ ಭಾರತ ಮತ್ತು ಉಗಾಂಡ ನಡುವಿನ ನಿಕಟ ಮತ್ತು ಸಾಂಪ್ರದಾಯಿಕ ಬಾಂಧವ್ಯವನ್ನು ಒತ್ತಿ ಹೇಳಿದರು. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಉಭಯ ದೇಶಗಳು ಒಪ್ಪಿದವು ಮತ್ತು ರಾಜಕೀಯ, ಆರ್ಥಿಕ, ವಾಣಿಜ್ಯ, ರಕ್ಷಣೆ, ತಂತ್ರಜ್ಞಾನ, ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಹಕಾರ ಸಂಬಂಧಗಳ ಬಲವರ್ಧನೆಗೆ ಉಭಯ ದೇಶಗಳು ತಮ್ಮ ನಿಲುವು ಪುನರುಚ್ಚರಿಸಿದವು. ಉಗಾಂಡದ ರಾಷ್ಟ್ರೀಯ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ 30 ಸಾವಿರ ಬಲಿಷ್ಠ ಅನಿವಾಸಿ ಭಾರತೀಯರು ನೆರವು ನೀಡಿರುವುದಕ್ಕೆ ಅಧ್ಯಕ್ಷ ಮುಸೆವೇನಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಂತ್ಯದಲ್ಲಿ ಸ್ಥಿರತೆ ಮತ್ತು ಶಾಂತಿಯನ್ನು ಕಾಯ್ದುಕೊಳ್ಳಲು ಮತ್ತು ಆರ್ಥಿಕ ಏಕೀಕರಣಕ್ಕಾಗಿ ಉಗಾಂಡ ವಹಿಸುತ್ತಿರುವ ಮಹತ್ವದ ಪಾತ್ರದ ಬಗ್ಗೆ ಭಾರತ ಮೆಚ್ಚುಗೆ ಸೂಚಿಸಿತು.

 

5. ಭಾರತ ಮತ್ತು ಉಗಾಂಡ ನಡುವಿನ ಮಾತುಕತೆಯ ನಂತರ ಈ ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

 

·                    ಹಾಲಿ ಇರುವ ದ್ವಿಪಕ್ಷೀಯ ಸಹಕಾರ ಸಂಬಂಧಗಳ ಸಾಧನೆಗಳನ್ನು ಮತ್ತು ಯಶಸ್ಸನ್ನು ಆಧರಿಸಿ ಮತ್ತಷ್ಟು ಬಲವರ್ಧನೆಗೊಳಿಸುವ ಬದ್ಧತೆಯನ್ನು ಪುನರ್ ಪ್ರತಿಪಾದಿಸಲಾಯಿತು.

 

·                    ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ವ್ಯಾಪಾರಿ ಸಂಬಂಧಗಳ ಪ್ರಾಮುಖ್ಯತೆಯನ್ನು ಪ್ರತಿಪಾದಿಸಲಾಯಿತು. ಉಭಯ ನಾಯಕರು ಪ್ರಸ್ತುತ ಇರುವ ದ್ವಿಪಕ್ಷೀಯ ವ್ಯಾಪಾರ ಮಟ್ಟದ ಬಗ್ಗೆ ಉಲ್ಲೇಖಿಸಿ ಅದನ್ನು ಇನ್ನಷ್ಟು ಹೆಚ್ಚಿಸುವ ಮತ್ತು ವ್ಯಾಪಾರ ವಲಯವನ್ನು ವಿಸ್ತರಿಸುವ ಜತೆಗೆ ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ ಉತ್ತೇಜನಕ್ಕೆ ಮತ್ತು ವ್ಯಾಪಾರ ಸಮತೋಲನ ಕಾಯ್ದುಕೊಳ್ಳಲು ಒತ್ತು ನೀಡಲು ಒಲವು ವ್ಯಕ್ತಪಡಿಸಿದರು.

 

·                    ಹಲವು ಪ್ರಮುಖ ವಲಯಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆ ಉತ್ತೇಜನದ ಅಗತ್ಯತೆಯನ್ನು ಒತ್ತಿ ಹೇಳಲಾಯಿತು ಮತ್ತು ಪರಸ್ಪರ ವ್ಯಾಪಾರ ಸಂಬಂಧಗಳ ವಿಸ್ತರಣೆ ಮತ್ತು ಹೆಚ್ಚಳಕ್ಕೆ ಲಭ್ಯವಿರುವ ಅವಕಾಶಗಳನ್ನು ಪ್ರತಿಪಾದಿಸಲಾಯಿತು.

 

·                    ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ(ಐಟಿಇಸಿ) ಭಾರತೀಯ ಆಫ್ರಿಕಾ ಫೋರಂ ಸಮಿಟ್(ಐಎಎಫ್ಎಸ್) ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ(ಐಸಿಸಿಆರ್) ಅಡಿಯಲ್ಲಿ ಉಗಾಂಡದವರಿಗೆ ಶಿಷ್ಯವೇತನ ನೀಡುವುದು ಮತ್ತು  ಅವರನ್ನು ತರಬೇತಿಗೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಮೆಚ್ಚುಗೆ ಮೂಲಕ ಉಲ್ಲೇಖಸಲಾಯಿತು.

 

·                    ರಕ್ಷಣಾ ವಲಯದಲ್ಲಿ ಭಾರತ ಮತ್ತು ಉಗಾಂಡ ನಡುವಿನ ಸಹಕಾರ ಸಂಬಂಧ ವೃದ್ಧಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಲಾಯಿತು. ವಿಶೇಷವಾಗಿ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರದಡಿ ಭಾರತದ ಹಲವು ಸೇನಾ ತರಬೇತಿ ಕೇಂದ್ರಗಳಲ್ಲಿ ಉಗಾಂಡಾದ ಜನ ರಕ್ಷಣಾ ಪಡೆ(ಯುಪಿಡಿಎಫ್)ಗೆ ತರಬೇತಿ ನೀಡುವುದು ಮತ್ತು ಉಗಾಂಡಾದ ಕಿಮ್ಕಾದಲ್ಲಿನ ಸೀನಿಯರ್ ಕಮಾಂಡ್ ಮತ್ತು ಸ್ಟಾಫ್ ಕಾಲೇಜ್(ಎಸ್ ಸಿ ಎಸ್ ಸಿ)ಯಲ್ಲಿ ಭಾರತೀಯ ಮಿಲಿಟರಿ ತರಬೇತಿ ತಂಡವನ್ನು ನಿಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

 

·                    ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಲಯದಲ್ಲಿ ಭಾರತ ಮತ್ತು ಉಗಾಂಡ ನಡುವೆ ಸಹಭಾಗಿತ್ವಕ್ಕೆ ಬೆಂಬಲ ನೀಡಲು ನಿರ್ಧರಿಸಲಾಯಿತು.  ಪ್ರಮುಖ ಸಾರ್ವಜನಿಕ ಯೋಜನೆಗಳ ಅನುಷ್ಠಾನದಲ್ಲಿ ಭಾರತದ ಡಿಜಿಟಲ್ ಒಳಗೊಳ್ಳುವಿಕೆಯ ಹಲವು ಯೋಜನೆಗಳನ್ನು ಅನುಕರಿಸಿ, ಅಳವಡಿಸಿಕೊಳ್ಳಲು ಉಗಾಂಡ ಒಲವು ತೋರಿತು.

 

6. ಭಯೋತ್ಪಾದನೆ, ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಗಂಡಾಂತರವಾಗಿದೆ ಎಂಬುದನ್ನು ಒಪ್ಪಿದ ಉಭಯ ನಾಯಕರು ಎಲ್ಲ ತರಹದ ಎಲ್ಲ ರೂಪದ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಬದ್ಧತೆ ತೋರುವ ನಿರ್ಧಾರವನ್ನು ಪುನರುಚ್ಚರಿಸಿದರು. ಯಾವುದೇ ಆಧಾರವನ್ನು ಮುಂದಿಟ್ಟುಕೊಂಡು ನಡೆಸುವ ಭಯೋತ್ಪಾದನಾ ಕೃತ್ಯಗಳಿಗೆ ಯಾವುದೇ ಸಮರ್ಥನೆಗಳಿಲ್ಲ ಎಂಬುದನ್ನು ಉಭಯ ನಾಯಕರು ಪ್ರತಿಪಾದಿಸಿದರು.

 

7. ಭಯೋತ್ಪಾದಕರು, ಭಯೋತ್ಪಾದನಾ ಸಂಘಟನೆಗಳು ಅವುಗಳ ಸಂಪರ್ಕಜಾಲ ಮತ್ತು ಅಂತಹ ಸಂಘಟನೆಗಳನ್ನು ಉತ್ತೇಜಿಸುವ, ಬೆಂಬಲಿಸುವ ಮತ್ತು ಹಣಕಾಸು ನೆರವು ನೀಡುವ ಹಾಗೂ ಭಯೋತ್ಪಾದನಾ ಗುಂಪುಗಳಿಗೆ ನೆಲೆ ಒದಗಿಸುವುದರ ವಿರುದ್ಧ ಸಾಧ್ಯವಾದ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲು ಉಭಯ ನಾಯಕರು ಸಮರ್ಥಿಸಿದರು. ಭಯೋತ್ಪಾದನಾ ಸಂಘಟನೆಗಳು ಯಾವುದೇ ರೀತಿಯ ಡಬ್ಲ್ಯೂಎಂಡಿ ಅಥವಾ ತಂತ್ರಜ್ಞಾನಗಳಿಗೆ ಲಭ್ಯವಾಗದಂತೆ ನೋಡಿಕೊಳ್ಳುವ ಅಗತ್ಯತೆಯನ್ನು ಖಾತ್ರಿಪಡಿಸಬೇಕೆಂದು ಹೇಳಿದರು ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಸಮಗ್ರ ಒಪ್ಪಂದ(ಸಿಸಿಐಟಿ) ಶೀಘ್ರ ಅಳವಡಿಕೆಗೆ ಸಹಕಾರ ನೀಡುವ ಬದ್ಧತೆಯನ್ನು ತೋರಿದವು.

 

8. ಪರಸ್ಪರ ಹಿತಾಸಕ್ತಿ ಮತ್ತು ಕಾಳಜಿ ಇರುವ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ನಿಕಟವಾಗಿ ಸಂಪರ್ಕ ಹೊಂದುವ ಅಗತ್ಯತೆಗೆ ಉಭಯ ನಾಯಕರು ಒಪ್ಪಿದರು.

 

9.ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆ ಅದನ್ನು ಇನ್ನೂ ಹೆಚ್ಚು ಪ್ರಾತಿನಿಧಿಕಗೊಳಿಸುವುದು, ಹೊಣೆಗಾರಿಕೆ ಹೆಚ್ಚಿಸುವುದು, ಪರಿಣಾಮಕಾರಿಗೊಳಿಸುವುದು ಹಾಗೂ 21ನೇ ಶತಮಾನದ ರಾಜಕೀಯ ಭೌಗೋಳಿಕ ವಾಸ್ತವತೆಗಳಿಗೆ ತಕ್ಕಂತೆ ಅದರಲ್ಲಿ ಸಮಗ್ರ ಸುಧಾರಣೆಗಳನ್ನು ತರುವುದಕ್ಕೆ ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.  ವಿಶ್ವಸಂಸ್ಥೆಯಲ್ಲಿನ ತಮ್ಮ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಬದ್ಧತೆಯನ್ನು ಪುನಃ ಪ್ರತಿಪಾದಿಸಿದ ನಾಯಕರು ಹವಾಮಾನ ವೈಪರೀತ್ಯ, ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸುರಕ್ಷತೆ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಹಲವು ವಲಯಗಳಲ್ಲಿ ಪರಸ್ಪರ ಸಹಕಾರವನ್ನು ಮುಂದುವರಿಸಲು ಎರಡು ರಾಷ್ಟ್ರಗಳು ಒಪ್ಪಿದವು.

 

10. ವಿದೇಶ ವಿದೇಶಾಂಗ ವ್ಯವಹಾರಗಳ ಸಚಿವರ ಮಟ್ಟ ಸೇರಿದಂತೆ ದ್ವಿಪಕ್ಷೀಯ ಮಾತುಕತೆಗಳು ನಿರಂತರವಾಗಿ ನಡೆಯುವ ಅಗತ್ಯತೆಯನ್ನು ಪ್ರತಿಪಾದಿಸಿದ ಇಬ್ಬರೂ ನಾಯಕರು ಆರ್ಥಿಕ ಮತ್ತು ಅಭಿವೃದ್ಧಿ ಸಹಕಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪರಿಶೀಲನೆ ಅಗತ್ಯತೆ ಪ್ರತಿಪಾದಿಸಿದರು.

 

11. ಪ್ರಧಾನಮಂತ್ರಿ ಭೇಟಿಯ ವೇಳೆ ಈ ಕೆಳಗಿನ ಒಡಂಬಡಿಕೆ/ದಾಖಲೆಗಳಿಗೆ ಸಹಿ ಹಾಕಲಾಯಿತು.

 

·                    ರಕ್ಷಣಾ ಸಹಕಾರ ಕುರಿತಂತೆ ಒಡಂಬಡಿಕೆ ಪತ್ರ.

 

·                    ರಾಜತಾಂತ್ರಿಕ ಮತ್ತು ಅಧಿಕೃತ ಪಾಸ್ ಪೋರ್ಟ್ ಹೊಂದಿರುವವರಿಗೆ ವೀಸಾ ವಿನಾಯಿತಿ ನೀಡುವ ಒಪ್ಪಂದ.

 

·                    ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಕುರಿತ ಒಪ್ಪಂದ.

 

·                    ಭೌತಿಕ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಕುರಿತ ತಿಳುವಳಿಕೆ ಪತ್ರ.

 

12. ಉಭಯ ನಾಯಕರು ಈ ಒಪ್ಪಂದಗಳನ್ನು ಅಂತಿಮಗೊಳಿಸಿದ್ದನ್ನು ಸ್ವಾಗತಿಸಿ, ಹಾಲಿ ಚಾಲ್ತಿಯಲ್ಲಿರುವ ಒಪ್ಪಂದಗಳು,  ತಿಳುವಳಿಕೆ ಪತ್ರಗಳು ಮತ್ತು ಸಹಕಾರದ ಒಡಂಬಡಿಕೆಗಳ ತ್ವರಿತ  ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

 

13. ಉಗಾಂಡ ಭೇಟಿಯ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಕೆಳಗಿನ ಕೊಡುಗೆಗಳ ಪ್ರಕಟಣೆ ಹೊರಡಿಸಿದರು.

 

·                    ಎರಡು ಸಾಲದ ಯೋಜನೆಗಳು; 1. ವಿದ್ಯುತ್ ಮಾರ್ಗ ಮತ್ತು ಉಪಕೇಂದ್ರಗಳ ನಿರ್ಮಾಣಕ್ಕೆ 141 ಮಿಲಿಯನ್ ಅಮೆರಿಕನ್ ಡಾಲರ್ ನೆರವು. 2. ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ಧಿಗೆ 64 ಮಿಲಿಯನ್ ಅಮೆರಿಕನ್ ಡಾಲರ್ ನೆರವು

 

·                    ಜಿಂಜಾದಲ್ಲಿ ಮಹಾತ್ಮ ಗಾಂಧಿ ಪಾರಂಪರಿಕ ಕೇಂದ್ರ ಸ್ಥಾಪನೆಗೆ ಆರ್ಥಿಕ ನೆರವು.

 

·                    ಪ್ರಸ್ತುತ ಉಗಾಂಡ ನೇತೃತ್ವ ವಹಿಸಿರುವ ಪೂರ್ವ ಏಷ್ಯಾ ಕಮ್ಯುನಿಟಿ(ಇಎಸಿ) ಮೂಲಸೌಕರ್ಯವೃದ್ಧಿ ಬೆಂಬಲಕ್ಕೆ ಮತ್ತು ಸಾಮರ್ಥ್ಯವೃದ್ಧಿಗೆ 929.705 ಅಮೆರಿಕನ್ ಡಾಲರ್ ಆರ್ಥಿಕ ನೆರವು.

 

·                    ಹೈನೋದ್ಯಮ ವಲಯದಲ್ಲಿ ಸಹಕಾರ ಸಂಬಂಧ ಬಲವರ್ಧನೆ ಉದ್ದೇಶದಿಂದ ಹೈನುಗಾರಿಕೆ ಕ್ಷೇತ್ರದಲ್ಲಿ ಐಟಿಇಸಿ ಯೋಜನೆಯಡಿ ತರಬೇತಿಗಾಗಿ 25 ಸ್ಲಾಟ್ ಮೀಸಲು.

 

·                    ಉಗಾಂಡ ಸರ್ಕಾರಕ್ಕೆ ನಾಗರಿಕ ಬಳಕೆಗಾಗಿ 44 ಮತ್ತು ಉಗಾಂಡಾದ ಜನರಕ್ಷಣಾ ಪಡೆ(ಯುಪಿಡಿಎಫ್)ಗೆ 44 ಸೇರಿದಂತೆ 88 ವಾಹನಗಳ ಕೊಡುಗೆ.

 

·                    ಉಗಾಂಡಾದಲ್ಲಿ ಕ್ಯಾನ್ಸರ್ ಕಾಯಿಲೆ ನಿರ್ಮೂಲನೆಗೆ ಕೈಗೊಂಡಿರುವ ಪ್ರಯತ್ನಗಳಿಗೆ ಸಹಕಾರ ನೀಡಲು ಬಾಬಾರ್ಥಾನ್  ಕ್ಯಾನ್ಸರ್ ಥೆರಪಿ ಯಂತ್ರದ ಉಡುಗೊರೆ.

 

·                    ಉಗಾಂಡಾದಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಹತ್ತು ಲಕ್ಷ ಎನ್ ಸಿ ಇ ಆರ್ ಟಿ ಪುಸ್ತಕಗಳ ಕೊಡುಗೆ.

 

·                    ಕೃಷಿ ಅಭಿವೃದ್ಧಿಗೆ ಉಗಾಂಡ ಕೈಗೊಂಡಿರುವ ಪ್ರಯತ್ನಗಳಿಗೆ ಸಹಕಾರ ನೀಡಲು ಆ ದೇಶಕ್ಕೆ ನೂರು ಸೌರ ವಿದ್ಯುತ್ ಚಾಲಿತ ನೀರಾವರಿ ಪಂಪ್ ಗಳ ಉಡುಗೊರೆ.

 

14. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಈ ಕೊಡುಗೆಗಳನ್ನು ಸ್ವಾಗತಿಸಿದ ಗೌರವಾನ್ವಿತ ಅಧ್ಯಕ್ಷ ಮುಸೆವೇನಿ, ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ ಮತ್ತು ಇನ್ನಷ್ಟು ಗಟ್ಟಿಯಾಗುವ ಬದ್ಧತೆಯನ್ನು ಇದು ತೋರುತ್ತದೆ ಎಂದು ಖಚಿತಪಡಿಸಿದರು.

15. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧ್ಯಕ್ಷ ಮುಸೆವೇನಿ ಅವರು ತಮಗೆ ಹಾಗೂ ತಮ್ಮ ನಿಯೋಗಕ್ಕೆ  ತೋರಿದ ಆತ್ಮೀಯ ಆತಿಥ್ಯಕ್ಕೆ ಕೃತಜ್ಞತೆಗಳನ್ನು ತಿಳಿಸಿದರು ಮತ್ತು ಭಾರತಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಅಧ್ಯಕ್ಷ ಮುಸವೇನಿ ಅವರು ಆದರದಿಂದ ಆಹ್ವಾನವನ್ನು ಒಪ್ಪಿದರು. ಅವರ ಭಾರತ ಭೇಟಿಯ ದಿನಾಂಕ, ರಾಜತಾಂತ್ರಿಕ ಮಾರ್ಗಗಳ ಮೂಲಕ ಅಂತಿಮಗೊಳ್ಳಲಿದೆ.

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi