- ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಶ್ರೀಲಂಕಾದ ಗೌರವಾನ್ವಿತ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಅವರೊಂದಿಗೆ ಇಂದು ವರ್ಚುವಲ್ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದರು. ಅವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳು ಹಾಗೂ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದರು.
- ಆಗಸ್ಟ್ 2020ರಲ್ಲಿ ಶ್ರೀಲಂಕಾದಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ನಿರ್ಣಾಯಕ ಜನಾದೇಶ ಪಡೆದು, ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸುವ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು. ಶುಭ ಹಾರೈಕೆಗಾಗಿ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಅತ್ಯಂತ ನಿಕಟವಾಗಿ ಕಾರ್ಯನಿರ್ವಹಿಸುವ ಉತ್ಸುಕತೆ ಹೊಂದಿರುವ ವಿಷಯವನ್ನು ತಿಳಿಸಿದರು.
- ಉಭಯ ನಾಯಕರು ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಅವರು, ಕ್ರಮವಾಗಿ 2019ರ ನವೆಂಬರ್ ಮತ್ತು 2020ರ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ಈ ಭೇಟಿಗಳು ಸ್ಪಷ್ಟ ರಾಜಕೀಯ ದಿಕ್ಸೂಚಿಯನ್ನು ಮತ್ತು ಉಭಯ ದೇಶಗಳ ನಡುವಿನ ಸಂಬಂಧದ ಭವಿಷ್ಯದ ದೂರದೃಷ್ಟಿಯನ್ನು ನೀಡಿದವು.
- ಕೋವಿಡ್–19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೋರಿದ ಬಲಿಷ್ಠ ನಾಯಕತ್ವವನ್ನು ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಶ್ಲಾಘಿಸಿದರು ಮತ್ತು ಈ ಪ್ರದೇಶದ ರಾಷ್ಟ್ರಗಳ ನೆರವು ಮತ್ತು ಪರಸ್ಪರ ಬೆಂಬಲದ ದೂರದೃಷ್ಟಿಯಿಂದಾಗಿ ಸಾಂಕ್ರಾಮಿಕವನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದರು. ದ್ವಿಪಕ್ಷೀಯ ಸಂಬಂಧಗಳಿಗೆ ಇನ್ನಷ್ಟು ಒತ್ತು ನೀಡುವ ಜೊತೆಗೆ ಪ್ರಸಕ್ತ ಸನ್ನಿವೇಶ ಹೊಸ ಅವಕಾಶವನ್ನು ಸೃಷ್ಟಿಸಿದೆ ಎಂಬುದನ್ನು ಉಭಯ ನಾಯಕರು ಒಪ್ಪಿದರು. ಕೋವಿಡ್–19 ಸಾಂಕ್ರಾಮಿಕ ನಿಯಂತ್ರಣಕ್ಕೆ ಭಾರತ ಮತ್ತು ಶ್ರೀಲಂಕಾ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಇಬ್ಬರೂ ನಾಯಕರು ಸಂತೋಷ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಾಂಕ್ರಾಮಿಕದಿಂದಾಗಿ ಶ್ರೀಲಂಕಾದ ಮೇಲಾಗುವ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ಕನಿಷ್ಠಗೊಳಿಸಲು ಎಲ್ಲಾ ಸಂಭಾವ್ಯ ಬೆಂಬಲ ನೀಡುವ ಭಾರತದ ಬದ್ಧತೆಯನ್ನು ಪುನರುಚ್ಛರಿಸಿದರು.
- ದ್ವಿಪಕ್ಷೀಯ ಸಂಬಂಧಗಳಿಗೆ ಮತ್ತಷ್ಟು ಒತ್ತು ನೀಡುವ ಉದ್ದೇಶದಿಂದ ಉಭಯ ನಾಯಕರು ಈ ಕೆಳಗಿನ ಅಂಶಗಳಿಗೆ ಒಪ್ಪಿಕೊಂಡರು.
- ಗುಪ್ತಚರ, ಮಾಹಿತಿ ವಿನಿಯಮ, ಉಗ್ರವಾದ ತಡೆ ಮತ್ತು ಸಾಮರ್ಥ್ಯವೃದ್ಧಿ ಸೇರಿದಂತೆ ಭಯೋತ್ಪಾದನೆ ನಿಗ್ರಹ ಹಾಗೂ ಮಾದಕದ್ರವ್ಯ ತಡೆಗೆ ಸಹಕಾರ ಸಂಬಂಧ ವೃದ್ಧಿಸುವುದು.
- ಶ್ರೀಲಂಕಾ ಸರ್ಕಾರ ಮತ್ತು ಜನರು ಗುರುತಿಸಿರುವ ಆದ್ಯತಾ ವಲಯಗಳ ಅನುಸಾರ ಫಲಪ್ರದ ಮತ್ತು ಪರಿಣಾಮಕಾರಿ ಅಭಿವೃದ್ಧಿ ಸಹಭಾಗಿತ್ವವನ್ನು ಮುಂದುವರಿಸುವುದು ಹಾಗೂ 2020-25ನೇ ಸಾಲಿಗೆ ಭಾರೀ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳು(ಎಚ್ಐಸಿಡಿಪಿ) ಕೈಗೊಳ್ಳಲು ಒಪ್ಪಂದದ ಅನುಸಾರ ದ್ವೀಪ ರಾಷ್ಟ್ರದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವುದು.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2017ರ ಮೇ ತಿಂಗಳಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ ವೇಳೆ ಮಾಡಿದ್ದ ಘೋಷಣೆಯಂತೆ ಪ್ಲಾಂಟೇಷನ್ ಪ್ರದೇಶದಲ್ಲಿ ಸುಮಾರು 10,000 ವಸತಿ ಘಟಕಗಳ ನಿರ್ಮಾಣ ಕಾರ್ಯವನ್ನು ಕ್ಷಿಪ್ರ ಗತಿಯಲ್ಲಿ ಪೂರ್ಣಗೊಳಿಸಲು ಕಾರ್ಯೋನ್ಮುಖವಾಗುವುದು.
- ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ವಾತಾವರಣ ಸೃಷ್ಟಿಗೆ ಪರಸ್ಪರ ಪೂರಕ ಕ್ರಮಗಳನ್ನು ಕೈಗೊಳ್ಳುವುದು. ಕೋವಿಡ್–19 ಸಾಂಕ್ರಾಮಿಕ ಒಡ್ಡಿರುವ ಸವಾಲಿನ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಪೂರೈಕೆ ಸರಣಿಯನ್ನು ಇನ್ನಷ್ಟು ಸದೃಢಗೊಳಿಸುವುದು.
- ಬಂದರು ವಲಯ ಸೇರಿದಂತೆ ಮೂಲಸೌಕರ್ಯ ಮತ್ತು ಸಂಪರ್ಕ ಯೋಜನೆಗಳ ತ್ವರಿತ ಕಾರ್ಯಾಚರಣೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಮತ್ತು ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಒಡಂಬಡಿಕೆಗಳ ಪ್ರಕಾರ ಇಂಧನ ಕುರಿತಂತೆ ನಿಕಟ ಸಮಾಲೋಚನೆಗಳನ್ನು ನಡೆಸುವುದು ಮತ್ತು ಎರಡೂ ದೇಶಗಳ ನಡುವೆ ಪರಸ್ಪರ ಅನುಕೂಲವಾಗುವ ಅಭಿವೃದ್ಧಿ ಸಹಕಾರ ಸಹಭಾಗಿತ್ವವನ್ನು ಸಾಧಿಸಿ, ಬಲಿಷ್ಠ ಬದ್ಧತೆ ತೋರುವುದು
- ಭಾರತದಿಂದ 100 ಮಿಲಿಯನ್ ಡಾಲರ್ ಸಾಲದ ನೆರವು ಪಡೆದು, ಸೌರಶಕ್ತಿ ಯೋಜನೆಗಳಿಗೆ ವಿಶೇಷ ಒತ್ತು ನೀಡುವುದಲ್ಲದೆ, ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಳವಾದ ಸಹಕಾರ ಸಾಧಿಸುವುದು.
- ಕೃಷಿ, ಪಶುಸಂಗೋಪನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಆಯುಷ್(ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಸೇರಿದಂತೆ ಹಲವು ವಲಯಗಳಲ್ಲಿ ತಾಂತ್ರಿಕ ಸಹಕಾರ ಸಂಬಂಧ ಬಲವರ್ಧನೆಗೊಳಿಸುವುದು ಅಲ್ಲದೆ, ಕೌಶಲ್ಯಾಭಿವೃದ್ಧಿಯಿಂದ ವೃತ್ತಿಪರರಿಗೆ ತರಬೇತಿ ಹೆಚ್ಚಿಸುವುದು. ಆ ಮೂಲಕ ಉಭಯ ದೇಶಗಳ ಜನಸಂಖ್ಯೆಯ ಪೂರ್ಣ ಸಾಮರ್ಥ್ಯವನ್ನು ಅರಿತು, ಅದರ ಲಾಭ ಮಾಡಿಕೊಳ್ಳುವ ಬಗ್ಗೆ ಕಾರ್ಯೋನ್ಮುಖವಾಗುವುದು.
- ಬೌದ್ಧ ಧರ್ಮ, ಆಯುರ್ವೇದ, ಯೋಗ ಸೇರಿದಂತೆ ನಾಗರಿಕ ಸಂಬಂಧಗಳು ಮತ್ತು ಸಾಮಾನ್ಯ ಪರಂಪರೆಯ ವಲಯಗಳಲ್ಲಿ ಅವಕಾಶಗಳ ಅನ್ವೇಷಣೆ ಮೂಲಕ ಜನರ ನಡುವಿನ ಸಂಪರ್ಕ ಮತ್ತಷ್ಟು ಬಲವರ್ಧನೆಗೊಳಿಸುವುದು. ಭಾರತ ಸರ್ಕಾರ ಪವಿತ್ರ ನಗರಿ, ಖುಷಿ ನಗರಕ್ಕೆ ಶ್ರೀಲಂಕಾದಿಂದ ಅಂತಾರಾಷ್ಟ್ರೀಯ ವಿಮಾನದ ಮೂಲಕ ಆಗಮಿಸುವ ಬೌದ್ಧ ಯಾತ್ರಾರ್ಥಿಗಳ ನಿಯೋಗಕ್ಕೆ ನೆರವಿನ ಕ್ರಮಗಳನ್ನು ಭಾರತ ಸರ್ಕಾರ ಕೈಗೊಳ್ಳಲಿದೆ. ಇತ್ತೀಚೆಗೆ ಬೌದ್ಧ ಧರ್ಮದ ಮಹತ್ವವನ್ನು ಅರಿತು, ಖುಷಿ ನಗರದ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲಾಯಿತು.
- ಎರಡೂ ದೇಶಗಳ ನಡುವೆ ವಿಮಾನಯಾನ ಸಂಚಾರ ಪುನರಾರಂಭಕ್ಕೆ ಏರ್ ಬಬಲ್ ಅನ್ನು ಶೀಘ್ರವಾಗಿ ಸ್ಥಾಪಿಸಲು ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೆ ಸಂಪರ್ಕ ವೃದ್ಧಿಗೆ ಶ್ರಮಿಸುವುದು. ಕೋವಿಡ್–19 ಸಾಂಕ್ರಾಮಿಕ ಒಡ್ಡಿರುವ ಅಪಾಯಗಳನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
- ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಸೇರಿದಂತೆ ಹಂಚಿಕೆ ಮಾಡಿಕೊಂಡ ಗುರಿಗಳು ಹಾಗೂ ಹಾಲಿ ಇರುವ ನೀತಿಯಡಿ ದ್ವಿಪಕ್ಷೀಯ ಮಾರ್ಗಗಳ ಮೂಲಕ ನಿರಂತರ ಸಮಾಲೋಚನೆಗಳನ್ನು ನಡೆಸಿ, ಮೀನುಗಾರರು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ನಿರಂತರ ಸಮಾಲೋಚನೆಗಳನ್ನು ನಡೆಸುವುದು
- ಪರಸ್ಪರ ವಿನಿಮಯ, ಭೇಟಿ, ಸಾಗರ ಭದ್ರತಾ ಸಹಕಾರ, ರಕ್ಷಣಾ ಮತ್ತು ಭದ್ರತಾ ವಲಯಗಳಲ್ಲಿ ಶ್ರೀಲಂಕಾಗೆ ಅಗತ್ಯ ನೆರವು ನೀಡುವುದು ಸೇರಿದಂತೆ ಎರಡೂ ದೇಶಗಳ ಸಶಸ್ತ್ರ ಪಡೆಗಳ ನಡುವೆ ಸಹಕಾರ ಸಂಬಂಧ ಬಲವರ್ಧನೆಗೊಳಿಸುವುದು.
- ಎರಡೂ ದೇಶಗಳ ನಡುವಿನ ಬೌದ್ಧ ಧರ್ಮದ ಸಂಬಂಧಗಳನ್ನು ಉತ್ತೇಜಿಸಲು ಭಾರತ 15 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿರುವ ಘೋಷಣೆಯನ್ನು ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಸ್ವಾಗತಿಸಿದರು. ಈ ಅನುದಾನ ಬೌದ್ಧ ಧರ್ಮ ಸೇರಿದಂತೆ ಎರಡೂ ದೇಶಗಳ ನಡುವೆ ಜನಸಂಪರ್ಕವೃದ್ಧಿಗೆ ಈ ಅನುದಾನವನ್ನು ಬಳಸಿಕೊಳ್ಳಲಾಗುವುದು. ಇದರಲ್ಲಿ ಬೌದ್ಧ ಧರ್ಮದ ವಿದ್ವಾಂಸರು ಮತ್ತು ಬಿಕ್ಷುಗಳನ್ನು ಒಳಗೊಂಡಂತೆ ಬೌದ್ಧರ ಬಲವರ್ಧನೆ, ಬೌದ್ಧರ ಸ್ಥೂಪಗಳ/ನಿರ್ಮಾಣ/ನವೀಕರಣ, ಸಾಮರ್ಥ್ಯವೃದ್ಧಿ, ಸಾಂಸ್ಕೃತಿಕ ವಿನಿಯಮ, ಪುರಾತತ್ವ ಸಹಕಾರ ಅಂಶಗಳು ಸೇರಿವೆ.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮಿಳು ಜನರ ಆಶೋತ್ತರಗಳಿಗೆ ಅನುಗುಣವಾಗಿ ಸಮಗ್ರ ಶ್ರೀಲಂಕಾದೊಳಗೆ ಸಮಾನತೆ, ನ್ಯಾಯ, ಶಾಂತಿಯನ್ನು ಗೌರವಿಸುವಂತೆ ಕೆಲಸ ಮಾಡಬೇಕಿದೆ. ಇದರಲ್ಲಿ ಶ್ರೀಲಂಕಾದ ಸಂವಿಧಾನಕ್ಕೆ ಮಾಡಿದ 13ನೇ ತಿದ್ದುಪಡಿಯಿಂದಾಗಿ ರಾಜಿಸಂದಾನ ಪ್ರಕ್ರಿಯೆ ಅನುಷ್ಠಾನಗೊಳಿಸಲಾಗುತ್ತಿದೆ. ಶ್ರೀಲಂಕಾದ ಜನರ ಜನಾದೇಶದಂತೆ ರಾಜಿಸಂದಾನ ಬೆಳೆಸುವುದು ಮತ್ತು ಸಾಂವಿಧಾನಿಕ ಅಂಶಗಳನ್ನು ಜಾರಿಗೊಳಿಸುವುದು, ತಮಿಳರು ಸೇರಿದಂತೆ ಎಲ್ಲ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸಿಕೊಂಡು ಹೋಗುವ ಕೆಲಸ ಮಾಡಲಾಗುವುದು ಎಂದು ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ವಿಶ್ವಾಸ ವ್ಯಕ್ತಪಡಿಸಿದರು.
- ಪರಸ್ಪರ ಹಿತಾಸಕ್ತಿಯ ಸಾರ್ಕ್, ಬಿಮ್ ಸ್ಟೆಕ್, ಐಒಆರ್ ಎ ಮತ್ತು ವಿಶ್ವಸಂಸ್ಥೆಯ ಪರಸ್ಪರ ಭಾಗಿದಾರಿಕೆ ಸೇರಿದಂತೆ ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ವಿಷಯಗಳ ಕುರಿತಂತೆ ಸಂಬಂಧ ವೃದ್ಧಿಸಿಕೊಳ್ಳಲು ಉಭಯ ದೇಶಗಳು ಒಪ್ಪಿದವು.
- ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಪೂರ್ವ ಏಷ್ಯಾ ನಡುವೆ ಪ್ರಾದೇಶಿಕ ಸಹಕಾರ ಸಂಬಂಧಕ್ಕೆ ಬಿಮ್ ಸ್ಟೆಕ್ ಅತ್ಯಂತ ಪ್ರಮುಖ ವೇದಿಕೆಯಾಗಿದೆ ಎಂಬುದನ್ನು ಗುರುತಿಸಲಾಯಿತು. ಶ್ರೀಲಂಕಾದ ಅಧ್ಯಕ್ಷತೆಯನ್ನು ಮತ್ತು ಆತಿಥ್ಯದಲ್ಲಿ ಯಶಸ್ವಿ ಬಿಮ್ ಸ್ಟೆಕ್ ಶೃಂಗಸಭೆ ನಡೆಸುವುದರ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಉಭಯ ನಾಯಕರು ಒಪ್ಪಿದರು.
- 2020-21ನೇ ಸಾಲಿಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂಯೇತರ ಸದಸ್ಯತ್ವ ಹೊಂದಲು ಅಂತಾರಾಷ್ಟ್ರೀಯ ಸಮುದಾಯದಿಂದ ಬಲಿಷ್ಠ ಬೆಂಬಲ ಪಡೆದಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಅಭಿನಂದಿಸಿದರು.