ಜಪಾನ್ ನ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಕಿಶಿದಾ ಫುಮಿಯೋ ತಮ್ಮ ಚೊಚ್ಚಲ ಭಾರತ ಪ್ರವಾಸ ಕೈಗೊಂಡು, 2022ರ ಮಾರ್ಚ್ 19ರಿಂದ 20ರವರೆಗಿನ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಯಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ 14ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮತ್ತು ಭಾರತವು ತನ್ನ ಸ್ವಾತಂತ್ರ್ಯೋತ್ಸವ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಮಹತ್ವದ ಶೃಂಗಸಭೆಯು ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಕಳೆದ ವಾರ್ಷಿಕ ಶೃಂಗಸಭೆಯ ನಂತರದ ಬೆಳವಣಿಗೆಗಳನ್ನು ಪರಾಮರ್ಶಿಸಿದರು ಮತ್ತು ಸಹಕಾರದ ವಿಸ್ತೃತ ಕ್ಷೇತ್ರಗಳ ಕುರಿತು ಚರ್ಚಿಸಿದರು.

ಭಾರತ ಮತ್ತು ಜಪಾನ್ ನಡುವಿನ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಗಳು 2018 ರಲ್ಲಿ ಹೊರಡಿಸಲಾದ ಭಾರತ-ಜಪಾನ್ ಮುನ್ನೋಟದ ಹೇಳಿಕೆಯಲ್ಲಿ ವಿವರಿಸಲಾದ ಹಂಚಿಕೆಯ ಮೌಲ್ಯಗಳು ಮತ್ತು ತತ್ವಗಳು ಪ್ರಸ್ತುತ ಸಂದರ್ಭದಲ್ಲಿ ವಿಶೇಷವಾಗಿ ಪ್ರಸ್ತುತವಾಗಿವೆ,  ವಿಶೇಷವಾಗಿ ಹೆಚ್ಚು ತೀವ್ರವಾಗಿರುವ ಸವಾಲುಗಳನ್ನು ಎದುರಿಸಲು ಜಾಗತಿಕ ಸಹಕಾರವು ಹೆಚ್ಚು ಅಗತ್ಯವಿದೆ ಎಂದು ಒಪ್ಪಿಕೊಂಡರು. ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ನಿಯಮಾಧಾರಿತ ಆದೇಶದ ಆಧಾರದ ಮೇಲೆ ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಜಗತ್ತು ನಿರ್ಮಾಣ ನಿಟ್ಟಿನಲ್ಲಿ  ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಬೆದರಿಕೆ ಅಥವಾ ಬಲದ ಬಳಕೆ ಅಥವಾ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ಆಶ್ರಯಿಸದೆ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಎಲ್ಲಾ ದೇಶಗಳು ಅಂತಾರಾಷ್ಟ್ರೀಯ ವಿವಾದಗಳಿಗೆ ಅನುಗುಣವಾಗಿ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು ಆ ನಿಟ್ಟಿನಲ್ಲಿ ಅವರು ಬಲಾತ್ಕಾರದಿಂದ ಮುಕ್ತವಾದ, ಮುಕ್ತ ಮತ್ತು ಉಚಿತ ಸಾಮಾನ್ಯ ದೂರದೃಷ್ಟಿಯನ್ನು ಹೊಂದುವ ಅಗತ್ಯವಿದೆ ಎಂದು ಪುನರುಚ್ಚರಿಸಿದರು. ಅಂತಹ ಜಗತ್ತಿನಲ್ಲಿ ಎರಡೂ ದೇಶಗಳ ಆರ್ಥಿಕತೆಗಳು ದೃಢವಾದ ದ್ವಿಪಕ್ಷೀಯ ಹೂಡಿಕೆ ಮತ್ತು ವ್ಯಾಪಾರದ ಹರಿವುಗಳನ್ನು ವೈವಿಧ್ಯಮ, ಚೇತರಿಸಿಕೊಳ್ಳುವ, ಪಾರದರ್ಶಕ, ಮುಕ್ತ, ಸುರಕ್ಷಿತ ಮತ್ತು ಸಂಭಾವ್ಯ ಜಾಗತಿಕ ಪೂರೈಕೆ ಸರಪಳಿ ಮೂಲಕ ತಮ್ಮ ಜನರ ಆರ್ಥಿ ಭದ್ರತೆ ಮತ್ತು ಸಮೃದ್ಧಿಯನ್ನು ಒದಗಿಸುತ್ತವೆ ಎಂಬ ಅಭಿಪ್ರಾಯವನ್ನು ವಿನಿಮಯ ಮಾಡಿಕೊಂಡರು. ಈ ಹಂಚಿಕೆಯ ಉದ್ದೇಶಗಳನ್ನು ಸಾಕಾರಗೊಳಿಸಲು ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂಬ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸಲು ನಿರ್ಧರಿಸಿದರು.

ಎಲ್ಲವನ್ನೂ ಒಳಗೊಳ್ಳುವಿಕೆ ಮತ್ತು ನಿಯಮಗಳ-ಆಧಾರಿತ ಆದೇಶದ ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್‌ಗಾಗಿ ಸಹಭಾಗಿತ್ವ

ಭದ್ರತೆ ಮತ್ತು ರಕ್ಷಣಾ ಸಹಕಾರದಲ್ಲಿ ಸಾಧಿಸಿರುವ ಮಹತ್ವದ ಪ್ರಗತಿಯ ಕುರಿತು ಪ್ರಧಾನ ಮಂತ್ರಿಗಳು ಶ್ಲಾಘಿಸಿದರು ಮತ್ತು ಅದನ್ನು ಇನ್ನಷ್ಟು ತೀವ್ರಗೊಳಿಸುವ ತಮ್ಮ ಬಯಕೆ ಪುನರುಚ್ಚರಿಸಿದರು. ನವೆಂಬರ್ 2019 ರಲ್ಲಿ ನವದೆಹಲಿಯಲ್ಲಿ ನಡೆದ ತಮ್ಮ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ ಮೊದಲ 2+2 ಸಭೆಯನ್ನು ಅವರು ಸ್ವಾಗತಿಸಿದರು ಮತ್ತು ಟೋಕಿಯೊದಲ್ಲಿ ಆದಷ್ಟು ಶೀಘ್ರ ಅವಕಾಶ ಮಾಡಿಕೊಂಡು ಎರಡನೇ ಸಭೆಯನ್ನು ನಡೆಸುವಂತೆ ಅವರು ತಮ್ಮ ಸಚಿವರಿಗೆ ಸೂಚನೆ ನೀಡಿದರು. ಜಪಾನ್ ಸ್ವ-ರಕ್ಷಣಾ ಪಡೆಗಳು ಮತ್ತು ಭಾರತೀಯ ಸಶಸ್ತ್ರ ಪಡೆಗಳ ನಡುವೆ ಸರಬರಾಜು ಮತ್ತು ಸೇವೆಗಳ ಪರಸ್ಪರ ಪೂರೈಕೆಗೆ ಸಂಬಂಧಿಸಿದ ಒಪ್ಪಂದದ ಕಾರ್ಯಾಚರಣೆ ಆರಂಭವನ್ನು ಅವರು ಸ್ವಾಗತಿಸಿದರು. ಅಲ್ಲದೆ, ಅವರು ಕ್ರಮವಾಗಿ "ಧರ್ಮ ಗಾರ್ಡಿಯನ್" ಮತ್ತು "ಮಲಬಾರ್" ಸೇರಿದಂತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಮರಾಭ್ಯಾಸಗಳನ್ನು ಮುಂದುವರೆಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು, ಇದೇ ವೇಳೆ ಮಿಲನ್ ಅಭ್ಯಾಸದಲ್ಲಿ ಮೊದಲ ಬಾರಿಗೆ ಜಪಾನ್ ಭಾಗವಹಿಸುತ್ತಿರುವುದನ್ನು ಅವರು ಸ್ವಾಗತಿಸಿದರು ಮತ್ತು ಭವಿಷ್ಯದಲ್ಲಿ ಅವುಗಳ ಸಂಕೀರ್ಣತೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಿದರು. ಜಪಾನ್ ಸ್ವಯಂ ರಕ್ಷಣಾ ಪಡೆ ಮತ್ತು ಭಾರತೀಯ ವಾಯುಪಡೆ ನಡುವೆ ಯುದ್ದ ಸಮರಾಭ್ಯಾಸ  ಸಮನ್ವಯದೊಂದಿಗೆ ಮುಂದುವರಿಯುವ ನಿರ್ಧಾರವನ್ನು ಅವರು ಪುನರುಚ್ಚರಿಸಿದರು ಮತ್ತು ಅಭ್ಯಾಸವನ್ನು ಸಾಧ್ಯವಾದಷ್ಟು ಬೇಗ ನಡೆಸುವ ಪ್ರಯತ್ನಗಳನ್ನು ಸ್ವಾಗತಿಸಿದರು. ಅನ್ ಮ್ಯಾನ್ಡ್ ಗ್ರೌಂಡ್ ವೆಹಿಕಲ್- ಮಾನವರಹಿತ ನೆಲದ ವಾಹನ (ಯುಜಿವಿ) ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಯೋಗವನ್ನು ಅವರು ಒಪ್ಪಿಕೊಂಡರು ಮತ್ತು ರಕ್ಷಣಾ ಸಾಧನಗಳು ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಭವಿಷ್ಯದ ಸಹಕಾರಕ್ಕಾಗಿ ಮತ್ತಷ್ಟು ಸಮಗ್ರ ಕ್ಷೇತ್ರಗಳನ್ನು ಗುರುತಿಸಲು ತಮ್ಮ ಸಚಿವರುಗಳಿಗೆ ನಿರ್ದೇಶನ ನೀಡಿದರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ತಮ್ಮ ಬದ್ಧತೆಯೊಂದಿಗೆ, ಪ್ರಧಾನ ಮಂತ್ರಿಗಳು ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕಾ (ಕ್ವಾಡ್) ರಾಷ್ಟ್ರಗಳ ನಡುವಿನ ಚತುಷ್ಕೋಣ ಸಹಕಾರ ಸೇರಿದಂತೆ ಪ್ರದೇಶದ ಸಮಾನ ಮನಸ್ಕ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಭಾಗಿತ್ವದ ಅಗತ್ಯತೆಯನ್ನು ಪುನರುಚ್ಚರಿಸಿದರು.  2021ರ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ನಡೆದ ಕ್ವಾಡ್ ನಾಯಕರ ಶೃಂಗಸಭೆಗಳನ್ನು ಅವರು ಸ್ವಾಗತಿಸಿದರು ಮತ್ತು ಕ್ವಾಡ್‌ನ ಸಕಾರಾತ್ಮಕ ಮತ್ತು ರಚನಾತ್ಮಕ ಕಾರ್ಯಸೂಚಿಯಲ್ಲಿ, ವಿಶೇಷವಾಗಿ ಕೋವಿಡ್  ಲಸಿಕೆಗಳು, ನಿರ್ಣಾಯಕ ಮತ್ತು ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನಗಳು, ಹವಾಮಾನ ಕ್ರಿಯೆ, ಮೂಲಸೌಕರ್ಯ ಸಮನ್ವಯ, ಸೈಬರ್‌ ಸುರಕ್ಷತೆ, ಬಾಹ್ಯಾಕಾಶ ಮತ್ತು ಶಿಕ್ಷಣದ ಮೇಲೆ ಸ್ಪಷ್ಟ ಫಲಿತಾಂಶ ನೀಡುವ ಕುರಿತು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಮುಂಬರುವ ತಿಂಗಳುಗಳಲ್ಲಿ ಜಪಾನ್‌ನಲ್ಲಿ ನಡೆಯುವ ಮುಂದಿನ ಕ್ವಾಡ್ ನಾಯಕರ ಶೃಂಗಸಭೆಯ ಮೂಲಕ ಕ್ವಾಡ್ ಸಹಕಾರವನ್ನು ಮುಂದುವರಿಸಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು.

 ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ರಲ್ಲಿ  ಘೋಷಿಸಿದ ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮವನ್ನು (ಐಪಿಒಐ) ಪ್ರಧಾನಮಂತ್ರಿ ಕಿಶಿದಾ ಸ್ವಾಗತಿಸಿದರು. ಐಪಿಒಐ ಮತ್ತು ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್ (ಎಫ್‌ಒಐಪಿ) ನಡುವಿನ ಸಹಕಾರ ಬೆಳೆಸುವ ಅಗತ್ಯತೆ ಹೆಚ್ಚುತ್ತಿರುವುದನ್ನು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ಐಪಿಒಐನ ಸಂಪರ್ಕ ಸ್ತಂಭದಲ್ಲಿ ಪ್ರಮುಖ ಪಾಲುದಾರನಾಗಿ ಜಪಾನ್‌ನ ಪಾಲ್ಗೊಳ್ಳುತ್ತಿರುವುದನ್ನು ಭಾರತ ಶ್ಲಾಘಿಸಿತು.  ಆಸಿಯಾನ್‌ನ ಏಕತೆ ಮತ್ತು ಕೇಂದ್ರೀಕರಣಕ್ಕೆ ತಮ್ಮ ಬಲವಾದ ಬೆಂಬಲವನ್ನು ಪುನರುಚ್ಚರಿಸಿದರು ಮತ್ತು ಕಾನೂನಿನ ನಿಯಮ, ಮುಕ್ತತೆ, ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆಯಂತಹ ತತ್ವಗಳನ್ನು ಎತ್ತಿಹಿಡಿಯುವ "ಆಸಿಯಾನ್ ಔಟ್‌ಲುಕ್ ಆನ್ ದಿ ಇಂಡೋ-ಪೆಸಿಫಿಕ್ (ಎಒಐಪಿ)" ಗೆ ತಮ್ಮ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿದರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಎರಡು ಪ್ರಮುಖ ಶಕ್ತಿಗಳಾಗಿ  ಭಾರತ ಮತ್ತು ಜಪಾನ್, ಸಾಗರ ಸುರಕ್ಷತೆ  ವಲಯ ಮತ್ತು ಸುರಕ್ಷತೆ,  ನ್ಯಾವಿಗೇಷನ್ ಸ್ವಾತಂತ್ರ್ಯ ಮತ್ತು ಓವರ್‌ಫ್ಲೈಟ್,  ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯ ಮತ್ತು ವಿವಾದಗಳನ್ನು ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಕಾನೂನು ಮತ್ತು ರಾಜತಾಂತ್ರಿಕ ಪ್ರಕ್ರಿಯೆಗಳಿಗೆ ಸಂಪೂರ್ಣ ಗೌರವ ನೀಡುವ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಲು  ಆಸಕ್ತಿ ಹೊಂದಿವೆ ಎಂದು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು.

ಅಂತರಾಷ್ಟ್ರೀಯ ಕಾನೂನಿನ ಪಾತ್ರಕ್ಕೆ ಆದ್ಯತೆ ನೀಡುವುದನ್ನು ವಿಶೇಷವಾಗಿ ಸಾಗರ ಕಾನೂನುಗಳ ಮೇಲಿನ ವಿಶ್ವಸಂಸ್ಥೆಯ ಸಮಾವೇಶ (ಯುಎನ್ ಸಿಎಲ್ ಒಎಸ್), ಮುಂದುವರಿಸಲು ಅವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಪೂರ್ವ ಹಾಗೂ ದಕ್ಷಿಣ ಚೀನಾ ಸಾಗರದ ವಿಷಯದಲ್ಲಿ ನಿಯಮ-ಆಧಾರಿತ ಸಾಗರ ಆದೇಶದ ವಿರುದ್ಧ ಸವಾಲುಗಳನ್ನು ಎದುರಿಸಲು ಸಾಗರ ಭದ್ರತೆ ಸಹಯೋಗವನ್ನು ಸುಗಮಗೊಳಿಸಲಿದೆ. ಮಿಲಿಟರಿ ರಹಿತ ಮತ್ತು ಸ್ವಯಂ ಸಂಯಮದ ಮಹತ್ವವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ದಕ್ಷಿಣ ಚೀನಾ ಸಮುದ್ರದಲ್ಲಿ ಪಕ್ಷಗಳ ನಡವಳಿಕೆಯ ಘೋಷಣೆಯ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಅವರು ಕರೆ ನೀಡಿದರು ಮತ್ತು ಯಾವುದೇ ಪೂರ್ವಾಗ್ರಹವಿಲ್ಲದೆ, ಈ ಸಮಾಲೋಚನೆಗಳಲ್ಲಿ ಭಾಗವಹಿಸಿರುವವರು  ಸೇರಿದಂತೆ ಎಲ್ಲಾ ರಾಷ್ಟ್ರಗಳ ಹಕ್ಕುಗಳು ಮತ್ತು ಹಿತಾಸಕ್ತಿ ಹಾಗೂ ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ, ವಿಶೇಷವಾಗಿ ಯುಎನ್ ಸಿಎಲ್ ಒಎಸ್ ಗೆ ಅನುಗುಣವಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ವಸ್ತುನಿಷ್ಠ ಮತ್ತು ಪರಿಣಾಮಕಾರಿ ನೀತಿ ಸಂಹಿತೆ ಶೀಘ್ರ ಅಂತಿಮಗೊಳಿಸಬೇಕೆಂದು ಕರೆ ನೀಡಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು (ಯುಎನ್ ಎಸ್ ಸಿಆರ್) ಉಲ್ಲಂಘಿಸಿ ಉತ್ತರ ಕೊರಿಯಾವನ್ನು ಅಸ್ಥಿರಗೊಳಿಸುವ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ್ದನ್ನು ಪ್ರಧಾನ ಮಂತ್ರಿಗಳು ಖಂಡಿಸಿದರು. ಸಂಬಂಧಿತ ಯುಎನ್‌ಎಸ್‌ಸಿಆರ್‌ಗಳಿಗೆ ಅನುಗುಣವಾಗಿ ಉತ್ತರ ಕೊರಿಯಾದ ಸಂಪೂರ್ಣ ಅಣು ನಿಶಸ್ತ್ರೀಕರಣಕ್ಕೆ ಮತ್ತು ಉತ್ತರ ಕೊರಿಯಾದ ಪ್ರಸರಣ ಸಂಬಂಧಗಳಿಗೆ ಸಂಬಂಧಿಸಿದ ಕಾಳಜಿಯನ್ನು ಪರಿಹರಿಸುವ ಪ್ರಾಮುಖ್ಯತೆಯನ್ನು ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು ಸಂಬಂಧಿತ ಯುಎನ್‌ಎಸ್‌ಸಿಆರ್‌ಗಳ ಅಡಿಯಲ್ಲಿ ತನ್ನ ಅಂತಾರಾಷ್ಟ್ರೀಯ ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸಲು ಮತ್ತು ಅಪಹರಣ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲು ಅವರು ಉತ್ತರ ಕೊರಿಯಾವನ್ನು ಒತ್ತಾಯಿಸಿದರು.

ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಅತ್ಯಂತ ನಿಕಟವಾಗಿ ಸಹಕರಿಸುವ ತಮ್ಮ ಉದ್ದೇಶವನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು ಮತ್ತು ಮಾನವೀಯ ಬಿಕ್ಕಟ್ಟು ಪರಿಹಾರ, ಮಾನವ ಹಕ್ಕುಗಳನ್ನು ಉತ್ತೇಜಿಸುವುದು ಮತ್ತು ನಿಜವಾದ ಪ್ರತಿನಿಧಿ ಮತ್ತು ಅಂತರ್ಗತ ರಾಜಕೀಯ ವ್ಯವಸ್ಥೆಯ ಸ್ಥಾಪನೆಯನ್ನು ಖಾತ್ರಿಪಡಿಸುವ ಮಹತ್ವವನ್ನು ಬಲವಾಗಿ ಪ್ರತಿಪಾದಿಸಿದರು. ಅಲ್ಲದೆ, ಯುಎನ್‌ಎಸ್‌ಸಿಆರ್ 2593 (2021) ರ ಪ್ರಾಮುಖ್ಯತೆಯನ್ನು ಅವರು ಪುನರುಚ್ಚರಿಸಿದರು, ಇದು ಅಫ್ಘನ್ ಪ್ರದೇಶವನ್ನು ಭಯೋತ್ಪಾದಕ ಕೃತ್ಯಗಳಿಗೆ ಆಶ್ರಯ, ತರಬೇತಿ, ನಿಯೋಜನೆ ಅಥವಾ ಹಣಕಾಸು ಒದಗಿಸಲು ಬಳಸಬಾರದು ಎಂದು ನಿಸ್ಸಂದೇಹವಾಗಿ ಒತ್ತಾಯಿಸುತ್ತದೆ ಮತ್ತು ಯುಎನ್‌ಎಸ್‌ಸಿಯಿಂದ ನಿರ್ಭಂಧಿಸಿರುವ ಸಂಘಟನೆಗಳು ಸೇರಿದಂತೆ ಎಲ್ಲಾ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸಂಘಟಿತ ಕ್ರಮಕ್ಕೆ ಕರೆ ನೀಡಿದರು.

ಭಯೋತ್ಪಾದನೆಯ ಅಪಾಯ ಬೆದರಿಕೆಯ ಬಗ್ಗೆ ಪ್ರಧಾನ ಮಂತ್ರಿಗಳು ಗಂಭೀರ ಕಳವಳ ವ್ಯಕ್ತಪಡಿಸಿದರು ಮತ್ತು ಭಯೋತ್ಪಾದನೆಯನ್ನು ಸಮಗ್ರ ಮತ್ತು ನಿರಂತರ ರೀತಿಯಲ್ಲಿ ಎದುರಿಸಲು ಅಂತರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ಭಯೋತ್ಪಾದಕರ ಸುರಕ್ಷಿತ ಸ್ವರ್ಗಗಳು ಮತ್ತು ಮೂಲಸೌಕರ್ಯಗಳನ್ನು ಬೇರುಸಹಿತ ಕಿತ್ತೊಗೆಯಲು, ಭಯೋತ್ಪಾದಕ ಜಾಲಗಳು ಮತ್ತು ಅವರ ಹಣಕಾಸು ಮಾರ್ಗಗಳಿಗೆ ತಡೆಯೊಡ್ಡಲು ಮತ್ತು ಭಯೋತ್ಪಾದಕರ ಗಡಿಯಾಚೆಗಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಲು ಅವರು ಕರೆ ನೀಡಿದರು. ಇದೇ ವೇಳೆ ಎಲ್ಲಾ ದೇಶಗಳು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶವನ್ನು ಭಯೋತ್ಪಾದಕ ದಾಳಿಗಳನ್ನು ನಡೆಸಲು ಬಳಸದಂತೆ ಖಚಿತಪಡಿಸಿಕೊಳ್ಳಲು, ಅಂತಹ ದಾಳಿಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಕ್ಕೆ ಒಳಪಡಿಸಬೇಕೆಂದು ಅವರು ಕರೆ ನೀಡಿದರು. 26/11 ಮುಂಬೈ ಮತ್ತು ಪಠಾಣ್‌ಕೋಟ್ ದಾಳಿ ಸೇರಿದಂತೆ ಭಾರತದ ಮೇಲಿನ ಭಯೋತ್ಪಾದಕ ದಾಳಿಗಳ ಖಂಡನೆಯನ್ನು ಅವರು ಪುನರುಚ್ಚರಿಸಿದರು ಮತ್ತು ಪಾಕಿಸ್ತಾನವು ತನ್ನ ಭೂಪ್ರದೇಶದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳ ವಿರುದ್ಧ ದೃಢ ಮತ್ತು ನಿಲುವು ಬದಲಿಸದ ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ಎಫ್ ಎಟಿಎಫ್ ಸೇರಿದಂತೆ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಸಂಪೂರ್ಣವಾಗಿ ಅನುಸರಿಸಬೇಕು ಎಂದು ಅವರು ಕರೆ ನೀಡಿದರು. ಬಹುಪಕ್ಷೀಯ ವೇದಿಕೆಗಳಲ್ಲಿ ಭಯೋತ್ಪಾದನೆ ನಿಗ್ರಹ ಪ್ರಯತ್ನಗಳನ್ನು ಬಲಪಡಿಸಲು ಮತ್ತು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಸಮಾವೇಶವನ್ನು (ಸಿಸಿಐಟಿ ) ಶೀಘ್ರವಾಗಿ ಅಳವಡಿಸಿಕೊಳ್ಳುವಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯತೆಯನ್ನೂ ಸಹ ಅವರು ಒಪ್ಪಿಕೊಂಡರು.

ಮ್ಯಾನ್ಮಾರ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು, ಬಂಧಿತರೆಲ್ಲರನ್ನು ಬಿಡುಗಡೆ ಮಾಡಲು ಮತ್ತು ಪ್ರಜಾಪ್ರಭುತ್ವ ಪುನರ್ ಸ್ಥಾಪನೆಗೆ ಕರೆ ನೀಡಿದರು. ಮ್ಯಾನ್ಮಾರ್‌ನಲ್ಲಿ ಪರಿಹಾರವನ್ನು ಹುಡುಕುವ ಆಸಿಯಾನ್ ಪ್ರಯತ್ನಗಳಿಗೆ ಅವರು ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು ಮತ್ತು ಬಿಕ್ಕಟ್ಟು ಪರಿಹಾರಕ್ಕೆ ಆಸಿಯಾನ್ ಅಧ್ಯಕ್ಷರಾಗಿ ಕಾಂಬೋಡಿಯಾದ ಸಕ್ರಿಯ ಕಾರ್ಯಗಳನ್ನು ಸ್ವಾಗತಿಸಿದರು. ಆಸಿಯಾನ್‌ನ ಐದು ಅಂಶಗಳ ಒಮ್ಮತದ ಕಾರ್ಯತಂತ್ರವನ್ನು ತುರ್ತಾಗಿ ಜಾರಿಗೆ ತರಲು ಅವರು ಮ್ಯಾನ್ಮಾರ್‌ಗೆ ಕರೆ ನೀಡಿದರು.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಪ್ರಧಾನ ಮಂತ್ರಿಗಳು ತೀವ್ರ ಕಳವಳವನ್ನು ವ್ಯಕ್ತಪಡಿಸಿದರು ಮತ್ತು ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅದರಿಂದ ಆಗುತ್ತಿರುವ ವ್ಯಾಪಕ ಪರಿಣಾಮಗಳನ್ನು ಪರಿಶೀಲಿಸಿದರು. ಸಮಕಾಲೀನ ಜಾಗತಿಕ ಕ್ರಮವನ್ನು ವಿಶ್ವಸಂಸ್ಥೆಯ ಒಪ್ಪಂದ, ಅಂತಾರಾಷ್ಟ್ರೀಯ ಕಾನೂನು ಮತ್ತು ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಗೌರವದ ಮೇಲೆ ನಿರ್ಮಿಸಲಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.  ಅವರು ಉಕ್ರೇನ್‌ನಲ್ಲಿನ ಪರಮಾಣು ಸೌಲಭ್ಯಗಳ ಸುರಕ್ಷತೆ ಮತ್ತು ಭದ್ರತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ಅದರ ಕಡೆಗೆ ಐಎಇಎ ಯ ಸಕ್ರಿಯ ಪ್ರಯತ್ನಗಳನ್ನು ಒಪ್ಪಿಕೊಂಡರು. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಅವರು ತಮ್ಮ ಕರೆಯನ್ನು ಪುನರುಚ್ಚರಿಸಿದರು ಮತ್ತು ಸಂಘರ್ಷದ ಪರಿಹಾರಕ್ಕಾಗಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಹೊರತುಪಡಿಸಿ ಬೇರೆ ಆಯ್ಕೆ ಇಲ್ಲ ಎಂದು ಗಮನಿಸಿದರು. ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ನಾಯಕರು ದೃಢಪಡಿಸಿದರು.

 "ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆ: ಕಡಲ ಭದ್ರತೆ" ಮೇಲಿನ ಉನ್ನತ ಮಟ್ಟದ ಮುಕ್ತ ಚರ್ಚೆಯಲ್ಲಿ ಯುಎನ್ ಎಸ್ ಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯನ್ನು ಒಳಗೊಂಡಂತೆ 2021 ರ ಆಗಸ್ಟ್ ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಯಶಸ್ವಿ ಅಧ್ಯಕ್ಷತೆಗಾಗಿ ಪ್ರಧಾನಮಂತ್ರಿ ಕಿಶಿದಾ ಭಾರತವನ್ನು ಅಭಿನಂದಿಸಿದರು. 2023-2024ರ ಅವಧಿಗೆ ಯುಎನ್‌ಎಸ್‌ಸಿಯಲ್ಲಿ ಕಾಯೇಂತರ ಸದಸ್ಯತ್ವಕ್ಕಾಗಿ ಜಪಾನ್‌ನ ಉಮೇದುವಾರಿಕೆಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು, ಅದಕ್ಕೆ ಪ್ರಧಾನಿ ಕಿಶಿದಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಭಾರತ ಮತ್ತು ಜಪಾನ್‌ನ ತಮ್ಮ ತಮ್ಮ ಅಧಿಕಾರಾವಧಿಯಲ್ಲಿ ಯುಎನ್ ಎಸ್ ಸಿ ಯಲ್ಲಿನ ವಿಷಯಗಳ ಬಗ್ಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಅವರು ಒಪ್ಪಿಕೊಂಡರು. 21 ನೇ ಶತಮಾನದ ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸಲು ಯುಎನ್ ಎಸ್ ಸಿಯಲ್ಲಿ ಶೀಘ್ರ ಸುಧಾರಣೆಗಾಗಿ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಪ್ರಧಾನಮಂತ್ರಿಗಳು ನಿರ್ಧರಿಸಿದರು. ನಿಗದಿತ ಸಮಯದ ಚೌಕಟ್ಟಿನಲ್ಲಿ ಸಮಗ್ರ ಫಲಿತಾಂಶಗಳನ್ನು ಸಾಧಿಸುವ ಒಟ್ಟಾರೆ ಉದ್ದೇಶದೊಂದಿಗೆ ಅಂತರ-ಸರ್ಕಾರಿ ಸಮಾಲೋಚನೆಗಳಲ್ಲಿ (ಐಜಿಎನ್) ವಿಷಯ ಆಧಾರಿತ ಮಾತುಕತೆಗಳ ಪ್ರಾರಂಭದ ಮೂಲಕ ಅದರ ಪ್ರಕ್ರಿಯೆಯ ವೇಗವರ್ಧನೆಗೆ ಅವರು ನಿರ್ಣಯ ಕೈಗೊಂಡರು. ವಿಸ್ತರಿತ ಯುಎನ್ ಎಸ್ ಸಿಯಲ್ಲಿ ಕಾಯಂ ಸದಸ್ಯತ್ವಕ್ಕಾಗಿ ಭಾರತ ಮತ್ತು ಜಪಾನ್ ಕಾನೂನು ಬದ್ಧ/ಅರ್ಹ ಅಭ್ಯರ್ಥಿಗಳು ಎಂಬ ತಮ್ಮ ಹಂಚಿಕೆಯ ಮಾನ್ಯತೆಯನ್ನು ಅವರು ಪುನರುಚ್ಚರಿಸಿದರು.

ಪರಮಾಣು ಶಸ್ತ್ರಾಸ್ತ್ರಗಳ ಸಂಪೂರ್ಣ ನಿರ್ಮೂಲನೆಗೆ ತಮ್ಮ ಹಂಚಿಕೆಯ ಬದ್ಧತೆಯನ್ನು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು ಮತ್ತು ಪರಮಾಣು ಪ್ರಸರಣ ಮತ್ತು ಪರಮಾಣು ಭಯೋತ್ಪಾದನೆಯ ಸವಾಲುಗಳನ್ನು ಎದುರಿಸಲು ಅಂತರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಕಾರ್ಯದಲ್ಲಿ ದೃಢನಿಶ್ಚಯ ಹೊಂದಿವುದಾಗಿ ಹೇಳಿದರು. ಪ್ರಧಾನಮಂತ್ರಿ ಕಿಶಿದಾ ಅವರು ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದದ (ಸಿಟಿಬಿಟಿ) ಜಾರಿಯ ಪ್ರಾಮುಖ್ಯತೆಯನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಶಾನನ್ ಆದೇಶದ ಆಧಾರದ ಮೇಲೆ ನಿಶ್ಯಸ್ತ್ರೀಕರಣದ ಸಮ್ಮೇಳನದಲ್ಲಿ ತಾರತಮ್ಯರಹಿತ, ಬಹುಪಕ್ಷೀಯ ಮತ್ತು ಅಂತಾರಾಷ್ಟ್ರೀಯವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಶೀಲಿಸಬಹುದಾದ ಫಿಸ್ಸೈಲ್ ಮೆಟೀರಿಯಲ್ ಕಟ್-ಆಫ್ ಟ್ರೀಟಿ (ಎಫ್‌ಎಂಸಿಟಿ) ಕುರಿತು ಮಾತುಕತೆಗಳನ್ನು ತಕ್ಷಣವೇ ಪ್ರಾರಂಭಿಸಲು ಮತ್ತು ಶೀಘ್ರವಾಗಿ ಮುಕ್ತಾಯಗೊಳಿಸಬೇಕೆಂದು ಕರೆ ನೀಡಿದರು. ಜಾಗತಿಕ ಪ್ರಸರಣ ರಹಿತ ಪ್ರಯತ್ನಗಳನ್ನು ಬಲಪಡಿಸುವ ಉದ್ದೇಶದಿಂದ ಪರಮಾಣು ಪೂರೈಕೆದಾರರ ಗುಂಪಿನ ಭಾರತದ ಸದಸ್ಯತ್ವಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಅವರು ಸಂಕಲ್ಪ ಮಾಡಿದರು.

ಕೋವಿಡ್ ನಂತರದ ಜಗತ್ತಿನಲ್ಲ್ಲಿ ಸುಸ್ಥಿರ ಬೆಳವಣಿಗೆಗಾಗಿ ಪಾಲುದಾರಿಕೆ

ಕೋವಿಡ್-19 ಅನ್ನು ಎದುರಿಸಲು ಮತ್ತು ಜನರ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸಲು ಜಾಗತಿಕ ಪ್ರಯತ್ನಗಳಿಗೆ ಭಾರತ ಮತ್ತು ಜಪಾನ್ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಇಂಡೋ-ಪೆಸಿಫಿಕ್ ಮತ್ತು ಅದರಾಚೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳಿಗೆ ಸಮಾನ ಲಭ್ಯತೆಯನ್ನು ಹೆಚ್ಚಿಸಲು ಕ್ವಾಡ್ ಲಸಿಕೆ ಪಾಲುದಾರಿಕೆಯ ಅಡಿಯಲ್ಲಿ ಮಾಡಿದ ಪ್ರಗತಿಯನ್ನು ಅವರು ಸ್ವಾಗತಿಸಿದರು. ಕೋವಿಡ್-19 ಅನ್ನು ಎದುರಿಸಲು ಮತ್ತು ಸಾಮಾಜಿಕ ರಕ್ಷಣೆಯನ್ನು ಒದಗಿಸಲು ಭಾರತ ಸರ್ಕಾರದ ಪ್ರಯತ್ನಗಳಿಗೆ ಜಪಾನ್ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ, ವಿಶೇಷವಾಗಿ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳ ಪೂರೈಕೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ಲಸಿಕೆ ಮೈತ್ರಿ ಉಪಕ್ರಮದ ಮೂಲಕ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳನ್ನು ಒದಗಿಸುವಲ್ಲಿ ಭಾರತದ ಉಪಕ್ರಮಗಳನ್ನು ಪ್ರಧಾನ ಮಂತ್ರಿ ಕಿಶಿದಾ ಶ್ಲಾಘಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ಮತ್ತು ಸಮನ್ವಯದ ಪಾತ್ರ ಮತ್ತು ಅದರ ಸುಧಾರಣೆ ಸೇರಿದಂತೆ ಜಾಗತಿಕ ಆರೋಗ್ಯ ಸ್ವರೂಪವನ್ನು ಬಲವರ್ಧನೆಗೊಳಿಸಲು ಆರೋಗ್ಯ-ಸಂಬಂಧಿತ  ಸುಸ್ಥಿರ ಅಭಿವೃದ್ಧಿ ಗುರಿ ಸೇರಿದಂತೆ ನಿರ್ದಿಷ್ಟವಾಗಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ಸಾಧಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಸಿಒಪಿ 26 ಫಲಿತಾಂಶವನ್ನು ಆಧರಿಸಿ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಪ್ರಾಮುಖ್ಯತೆ ಮತ್ತು ಅಗತ್ಯವನ್ನು ಪ್ರಧಾನಮಂತ್ರಿ ಅವರು ಗುರುತಿಸಿದರು ಮತ್ತು ವಿವಿಧ ರಾಷ್ಟ್ರೀಯ ಸಂದರ್ಭಗಳನ್ನು ಮತ್ತು ಜಾಗತಿಕ ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸಲು ನಿರಂತರ ಆವಿಷ್ಕಾರವನ್ನು ಪ್ರತಿಬಿಂಬಿಸುವ ಪ್ರಾಯೋಗಿಕ ಶಕ್ತಿ ಪರಿವರ್ತನೆಗಳಿಗೆ ವಿವಿಧ ಮಾರ್ಗಗಳ ಪ್ರಾಮುಖ್ಯವನ್ನು ಹಂಚಿಕೊಂಡರು.ಎಲೆಕ್ಟ್ರಿಕ್ ವಾಹನಗಳು (ಇವಿ), ಬ್ಯಾಟರಿಗಳು ಸೇರಿದಂತೆ ಸಂಗ್ರಹಣಾ ವ್ಯವಸ್ಥೆಗಳು, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮೂಲಸೌಕರ್ಯ (ಇವಿಸಿಐ), ಸೌರ ಶಕ್ತಿ, ಹಸಿರು ಹೈಡ್ರೋಜನ್/ಅಮೋನಿಯಾ ಸೇರಿದಂತೆ ಶುದ್ಧ, ಪವನ ಶಕ್ತಿ, ಸಂಬಂಧಿತ ಶಕ್ತಿ ಪರಿವರ್ತನೆ ಯೋಜನೆಗಳ ವೀಕ್ಷಣೆಗಳ ವಿನಿಮಯ, ಶಕ್ತಿ ದಕ್ಷತೆ, ಸಿಸಿಯುಎಸ್ (ಕಾರ್ಬನ್ ಡೈಆಕ್ಸೈಡ್ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ) ಮತ್ತು ಕಾರ್ಬನ್ ಮರುಬಳಕೆಗಳಂತಹ ಕ್ಷೇತ್ರಗಳಲ್ಲಿ ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು, ಹವಾಮಾನ ಬದಲಾವಣೆಯನ್ನು ಪರಿಹರಿಸಲು ಮತ್ತು ಇಂಧನ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಸಹಕಾರಕ್ಕಾಗಿ ಭಾರತ-ಜಪಾನ್ ಶುದ್ಧ ಇಂಧನ ಪಾಲುದಾರಿಕೆ (ಸಿಇಪಿ) ಅನ್ನು ಅವರು ಸ್ವಾಗತಿಸಿದರು. ಪ್ಯಾರಿಸ್ ಒಪ್ಪಂದದ ಕಲಂ 6 ರ ಅನುಷ್ಠಾನಕ್ಕಾಗಿ ಭಾರತ ಮತ್ತು ಜಪಾನ್ ನಡುವೆ ಜಂಟಿ ಸಾಲ ಕಾರ್ಯತಂತ್ರ (ಜೆಸಿಎಂ) ಸ್ಥಾಪಿಸಲು ಹೆಚ್ಚಿನ ಚರ್ಚೆಯನ್ನು ಮುಂದುವರಿಸಲು ಅವರು ಬದ್ಧರಾಗಿದ್ದಾರೆ. ಇತರ ಕ್ಷೇತ್ರಗಳಲ್ಲಿ ಪರಿಸರ ಸಹಕಾರವನ್ನು ಉತ್ತೇಜಿಸುವ ತಮ್ಮ ನಿರ್ಣಯವನ್ನು ಅವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ವಿಕೇಂದ್ರೀಕೃತ ದೇಶೀಯ ತ್ಯಾಜ್ಯನೀರಿನ ನಿರ್ವಹಣೆಯಲ್ಲಿ ಸಹಕಾರಕ್ಕಾಗಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ವಾರಾಣಸಿ, ಅಹಮದಾಬಾದ್ ಮತ್ತು ಚೆನ್ನೈನಲ್ಲಿ ಸ್ಮಾರ್ಟ್ ಸಿಟಿ ಮಿಷನ್‌ಗಳಿಗಾಗಿ ಹಿಂದಿನ ಮತ್ತು ಸದ್ಯ ಜಪಾನ್ ನೀಡುತ್ತಿರುವ ಸಹಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಈ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರವನ್ನು ಎದುರು ನೋಡುತ್ತಿದ್ದೇವೆ ಎಂದರು. ಪ್ರಧಾನ ಮಂತ್ರಿ ಕಿಶಿದಾ ಅವರು ಅಂತಾರಾಷ್ಟ್ರೀಯ ಸೌರ ಮೈತ್ರಿ (ಐಎಸ್ ಎ) ಮತ್ತು ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟ (ಸಿಡಿಆರ್ ಐ) ನಂತಹ ಭಾರತದ ಉಪಕ್ರಮಗಳನ್ನು ಶ್ಲಾಘಿಸಿದರು ಮತ್ತು ಭಾರೀ ಉದ್ಯಮ ಪರಿವರ್ತನೆಯನ್ನು ಉತ್ತೇಜಿಸಲು ಜಪಾನ್ ಭಾರತೀಯ-ಸ್ವೀಡಿಷ್ ಹವಾಮಾನ ಉಪಕ್ರಮದ ಲೀಡ್ ಐಟಿಗೆ ಸೇರಿಕೊಳ್ಳಲಿದೆ ಎಂದು ತಿಳಿಸಿದರು. ಸುಸ್ಥಿರ ನಗರಾಭಿವೃದ್ಧಿ ಕುರಿತ ಸಹಕಾರ ಒಡಂಬಡಿಕೆಗೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

 ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲೂಟಿಒ) ಅದರ ಪ್ರಮುಖ ಕೇಂದ್ರದಲ್ಲಿ ನಿಯಮ-ಆಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಎತ್ತಿಹಿಡಿಯುವ ಮತ್ತು ಬಲಪಡಿಸುವ ತಮ್ಮ ಬದ್ಧತೆಯನ್ನು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು ಮತ್ತು 12 ನೇ ಡಬ್ಲೂಟಿಒ ಸಚಿವರ ಸಮ್ಮೇಳನ ( ಎಂಸಿ12)ದಲ್ಲಿ ಅರ್ಥಪೂರ್ಣ ಫಲಿತಾಂಶಗಳನ್ನು ಸಾಧಿಸಲು ಪರಸ್ಪರ ನಿಕಟವಾಗಿ ಕೆಲಸ ಮಾಡಲು ಪರಸ್ಪರ ಸಮ್ಮತಿಸಿದರು. ಬಲವಂತದ ಆರ್ಥಿಕ ನೀತಿಗಳು ಮತ್ತು ಈ ವ್ಯವಸ್ಥೆಗೆ ವಿರುದ್ಧವಾದ ಪದ್ದತಿಗಳಿಗೆ ತಮ್ಮ ವಿರೋಧವನ್ನು ಅವರು ಹಂಚಿಕೊಂಡರು ಮತ್ತು ಅಂತಹ ಕ್ರಮಗಳ ವಿರುದ್ಧ ಜಾಗತಿಕ ಆರ್ಥಿಕ ಕ್ಷಮತೆ ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿರುವುದಾಗಿ ಹೇಳಿದರು.

ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಗೆ ಸಂಬಂಧಗಳನ್ನು ಹೆಚ್ಚಿಸಿರುವುದರಿಂದ ಆರ್ಥಿಕ ಸಹಕಾರದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ ಎಂದು ಪ್ರಧಾನಮಂತ್ರಿಗಳು ಮೆಚ್ಚುಗೆ ಸೂಚಿಸಿದರು. 2014 ರಲ್ಲಿ ಘೋಷಿಸಲಾದ ಜೆಪಿವೈ 3.5 ಟ್ರಿಲಿಯನ್ ಹೂಡಿಕೆ ಗುರಿಯನ್ನು ಸಾಧಿಸಲಾಗಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು. ಭಾರತದಲ್ಲಿ ಜಪಾನಿನ ಹೂಡಿಕೆದಾರರಿಗೆ ವ್ಯಾಪಾರದ ವಾತಾವರಣವನ್ನು ಸುಧಾರಿಸಲು ಭಾರತವು ಕೈಗೊಂಡ ಕ್ರಮಗಳನ್ನು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಇತರ ಕ್ರಮಗಳನ್ನು ಉಲ್ಲೇಖಿಸಿದ ಅವರು ಜೆಪಿವೈ 5 ಟ್ರಿಲಿಯನ್ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಸಾಧಿಸಲು ತಮ್ಮ ಹಂಚಿಕೆಯ ಉದ್ದೇಶವನ್ನು ವ್ಯಕ್ತಪಡಿಸಿದರು ಮತ್ತು ಮುಂದಿನ ಐದು ವರ್ಷಗಳಲ್ಲಿ ಜಪಾನ್‌ನಿಂದ ಭಾರತಕ್ಕೆ ಹಣಕಾಸು ಒದಗಿಸುವುದು, ಪರಸ್ಪರ ಆಸಕ್ತಿಯ ಸೂಕ್ತ ಸಾರ್ವಜನಿಕ ಮತ್ತು ಖಾಸಗಿ ಯೋಜನೆಗಳಿಗೆ ಹಣಕಾಸು  ಹೂಡಿಕೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತದೊಂದಿಗೆ ಆರ್ಥಿಕ ಸಹಕಾರವನ್ನು ಬಲಪಡಿಸಲು ಜಪಾನ್ ಕೈಗೊಂಡಿರುವ ವಿವಿಧ ಉಪಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿಗಳು 2021ರ ನವೆಂಬರ್ ನಲ್ಲಿ ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕ ಪಾಲುದಾರಿಕೆ (ಐಜೆಐಸಿಪಿ) ಸ್ಥಾಪನೆಯನ್ನು ನೆನಪಿಸಿಕೊಂಡರು ಮತ್ತು ಎಂಎಸ್ ಎಂಇ ವಲಯ  (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು), ಉತ್ಪಾದನೆ ಮತ್ತು ಪೂರೈಕೆ ಸರಪಳಿ ಸೇರಿದಂತೆ ಉಭಯ ದೇಶಗಳ ನಡುವೆ ಕೈಗಾರಿಕಾ ಸಹಕಾರವನ್ನು ಮತ್ತಷ್ಟು ಉತ್ತೇಜಿಸಲು ಐಜೆಐಸಿಪಿಯಡಿಯಲ್ಲಿ ಮಾರ್ಗಸೂಚಿಯನ್ನು ರೂಪಿಸುವುದನ್ನು ಸ್ವಾಗತಿಸಿದರು. ವಿಶ್ವಾಸಾರ್ಹ, ಸ್ಥಿತಿಸ್ಥಾಪಕ, ಸಮರ್ಥ ಪೂರೈಕೆ ಸರಪಳಿಗಳ ಕಡೆಗೆ ಒಟ್ಟಾಗಿ ಕೆಲಸ ಮಾಡುವ ಬಯಕೆಯನ್ನು ದೃಢಪಡಿಸಿದರು ಮತ್ತು ಉತ್ತಮ ಪದ್ಧತಿಗಳ ವಿನಿಮಯ ಕ್ಷೇತ್ರಗಳಲ್ಲಿ ಆ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಸ್ವಾಗತಿಸಿದರು. ಕ್ವಾಡ್ ಮೂಲಕ ಸೇರಿದಂತೆ ನಿರ್ಣಾಯಕ ಮೂಲಸೌಕರ್ಯಗಳ ರಕ್ಷಣೆಯನ್ನು ಬಲಪಡಿಸಲು ಅಕ್ರಮ ತಂತ್ರಜ್ಞಾನ ವರ್ಗಾವಣೆಗಳನ್ನು ಪರಿಹರಿಸಲು, ಚೇತರಿಸಿಕೊಳ್ಳುವ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಸಹಯೋಗದ ಪ್ರಾಮುಖ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು. 75 ಶತಕೋಟಿ ಅಮೆರಿಕನ್ ಡಾಲರ್  ತಮ್ಮ ದ್ವಿಪಕ್ಷೀಯ ಕರೆನ್ಸಿ ಸ್ವಾಪ್ ಒಪ್ಪಂದದ ನವೀಕರಣವನ್ನು ಅವರು ಸ್ವಾಗತಿಸಿದರು. ಅವರು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಅಗತ್ಯವನ್ನು ಗುರುತಿಸಿದರು ಮತ್ತು ಭಾರತ-ಜಪಾನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಅಡಿಯಲ್ಲಿ ಭಾರತ ಮತ್ತು ಜಪಾನ್ ನಡುವೆ ಮೀನು ಸುರಿಮಿ ವ್ಯಾಪಾರವನ್ನು ಉತ್ತೇಜಿಸುವ ತಿದ್ದುಪಡಿಯನ್ನು ಸ್ವಾಗತಿಸಿದರು. ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಪ್ರಾಮುಖ್ಯವನ್ನು ಬಲವಾಗಿ ಪ್ರತಿಪಾದಿಸಿದ ಅವರು, ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಮೂಲಕ ಸಿಇಪಿಎ ಅನುಷ್ಠಾನವನ್ನು ಮತ್ತಷ್ಟು ಪರಿಶೀಲಿಸಲು ಅವರು ಪ್ರೋತ್ಸಾಹಿಸಿದರು. ಜಪಾನಿನ ಸೇಬುಗಳ ಆಮದು ಮತ್ತು ಜಪಾನ್‌ಗೆ ಭಾರತೀಯ ಮಾವು ರಫ್ತು ಕಾರ್ಯವಿಧಾನಗಳ ಸಡಿಲಿಕೆಗೆ ಭಾರತದ ಅನುಮೋದನೆಯನ್ನು ಅವರು ಸ್ವಾಗತಿಸಿದರು.

ಕೋವಿಡ್ ನಂತರದ ಜಗತ್ತಿನಲ್ಲಿ ಡಿಜಿಟಲ್ ತಂತ್ರಜ್ಞಾನಗಳು ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಪ್ರಧಾನಮಂತ್ರಿಗಳು ಉಲ್ಲೇಖಿಸಿದರು ಮತ್ತು ಡಿಜಿಟಲ್ ರೂಪಾಂತರ, ಬೆಂಬಲಕ್ಕಾಗಿ ಜಂಟಿ ಯೋಜನೆಗಳ ಪ್ರಚಾರದ ಮೂಲಕ ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಭಾರತ-ಜಪಾನ್ ಡಿಜಿಟಲ್ ಪಾಲುದಾರಿಕೆಯ ಅಡಿಯಲ್ಲಿ ಬೆಳೆಯುತ್ತಿರುವ ಸಹಕಾರವನ್ನು ಸ್ವಾಗತಿಸಿದರು. ಭಾರತೀಯಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ಜಪಾನ್ ಮತ್ತು ಜಪಾನಿನ ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶಗಳನ್ನು ಒದಗಿಸಲು ಮತ್ತು ಐಒಟಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್  ಮತ್ತು ಬೆಳವಣಿಗೆಯಾಗುತ್ತಿರುವ ಇತರ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಹಯೋಗವನ್ನು ಒದಗಿಸುವುದು. ಆ ನಿಟ್ಟಿನಲ್ಲಿ, ಜಪಾನಿನ ಐಸಿಟಿ ವಲಯಕ್ಕೆ ಕೊಡುಗೆ ನೀಡಲು ಹೆಚ್ಚು ನುರಿತ ಭಾರತೀಯ ಐಟಿ ವೃತ್ತಿಪರರನ್ನು ಆಕರ್ಷಿಸಲು ಎದುರು ನೋಡುತ್ತಿರುವುದಾಗಿ ಪ್ರಧಾನಿ ಕಿಶಿದಾ  ಹೇಳಿದರು. ಉದಯೋನ್ಮುಖ ಭಾರತೀಯ ನವೋದ್ಯಮಗಳಿಗೆ ನಿಧಿಯನ್ನು ಕ್ರೋಢೀಕರಿಸಲು "ಭಾರತ-ಜಪಾನ್ ನಿಧಿಗಳ ನಿಧಿಯ" ಪ್ರಗತಿಯನ್ನು ಅವರು ಸ್ವಾಗತಿಸಿದರು. ಸೈಬರ್‌ ಭದ್ರತೆ ಮತ್ತು ಐಸಿಟಿ ಕ್ಷೇತ್ರಗಳಲ್ಲಿ ಸಹಕಾರ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಸ್ವಾಗತಿಸುತ್ತಾ, ಸೈಬರ್ ವಲಯದಲ್ಲಿ ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಗತಿಯನ್ನು ಅವರು ಶ್ಲಾಘಿಸಿದರು ಮತ್ತು ವಿಶ್ವಸಂಸ್ಥೆಯನ್ನು ಒಳಗೊಂಡಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರ ಸೈಬರ್ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದನ್ನು ಇನ್ನಷ್ಟು ಬಲಗೊಳಿಸಲು ದೃಢೀಕರಿಸಲಾಯಿತು. 5ಜಿ, ಓಪನ್ ಆರ್ ಎಎನ್ , ದೂರಸಂಪರ್ಕ ಜಾಲ ಭದ್ರತೆ,  ಜಲಾಂತರ್ಗಾಮಿ ಕೇಬಲ್ ವ್ಯವಸ್ಥೆಗಳು ಮತ್ತು ಕ್ವಾಂಟಮ್ ಕಮ್ಯುನಿಕೇಶನ್‌ಗಳಂತಹ ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ಸಹಕರಿಸುವ ಮುನ್ನೋಟವನ್ನು ಅವರು ಹಂಚಿಕೊಂಡರು. 2020ರ ನವೆಂಬರ್ ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರದ ಭಾರತ-ಜಪಾನ್ ಜಂಟಿ ಸಮಿತಿಯ 10 ನೇ ಸಭೆಯನ್ನು ನಡೆಸುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಸ್ವಾಗತಿಸಿದರು ಮತ್ತು ಚಂದ್ರ ಉಪಗ್ರಹದ ಸಂಶೋಧನಾ ಜಂಟಿ ಯೋಜನೆಗೆ ಎದುರು ನೋಡುತ್ತಿರುವುದಾಗಿ ಹೇಳಿದರು. ತಂತ್ರಜ್ಞಾನ ವಿನ್ಯಾಸ, ಅಭಿವೃದ್ಧಿ, ಆಡಳಿತ ಮತ್ತು ಬಳಕೆಯ ಮೇಲಿನ ಕ್ವಾಡ್ ತತ್ವಗಳಿಂದ ರೂಪಿಸಲ್ಪಟ್ಟ  ತಂತ್ರಜ್ಞಾನಗಳ ದೃಷ್ಟಿಯನ್ನು ಎಲ್ಲಾ ಸಮಾನ ಮನಸ್ಕ ರಾಷ್ಟ್ರಗಳು ಮತ್ತಷ್ಟು ಹಂಚಿಕೊಳ್ಳಬಹುದು ಎಂದು ಆ ಪ್ರಯತ್ನಗಳನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.

ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಹಲವು ವರ್ಷಗಳಿಂದ ಜಪಾನ್‌ ನೆರವು ನೀಡುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಜಪಾನ್ ಒಟ್ಟು 300 ಶತಕೋಟಿ ಯೆನ್ (ಐಎನ್ ಆರ್ 20400 ಕೋಟಿಗೂ ಹೆಚ್ಚು) ಒದಗಿಸುವ ಏಳು ಯೆನ್ ಸಾಲ ಯೋಜನೆಗಳಿಗೆ ಸಂಬಂಧಿಸಿದ ನೋಟುಗಳ ವಿನಿಮಯಕ್ಕೆ ಸಹಿ ಹಾಕಿರುವುದನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲಿನ ( ಎಂಎಎಚ್ ಎಸ್ ಆರ್ ) ಪ್ರಮುಖ ದ್ವಿಪಕ್ಷೀಯ ಸಹಕಾರ ಯೋಜನೆಯಲ್ಲಿನ ಪ್ರಗತಿಯ ಬಗ್ಗೆ ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ಈ ಯೋಜನೆಯು ಭಾರತ-ಜಪಾನ್ ಸಹಯೋಗದ ಪ್ರಮುಖ ಸಂಕೇತವಾಗಿದೆ ಮತ್ತು ತಂತ್ರಜ್ಞಾನದ ವರ್ಗಾವಣೆಗೆ ಕಾರಣವಾಗುತ್ತದೆ ಎಂದು ಅವರು ದೃಢಪಡಿಸಿದರು. ಇದು ಭಾರತದಲ್ಲಿ ರೈಲ್ವೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಅವರು ಪುನರುಚ್ಚರಿಸಿದರು. ಎಂಎಎಚ್ ಎಸ್ ಆರ್ ಮತ್ತು ಭಾರತದಲ್ಲಿನ ವಿವಿಧ ಮೆಟ್ರೋ ಯೋಜನೆಗಳಲ್ಲಿ ಜಪಾನ್‌ನ ಸಹಕಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು ಮತ್ತು ಪಾಟ್ನಾ ಮೆಟ್ರೋಗಾಗಿ ಯೋಜಿತ ಪೂರ್ವಸಿದ್ಧತಾ ಸಮೀಕ್ಷೆಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಯೋಗದ ಯೋಜನೆಗಳ ಮಹತ್ವವನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು. ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಯೋಜನೆಗಳಲ್ಲಿನ ಪ್ರಗತಿಯನ್ನು ಒಪ್ಪಿಕೊಂಡರು ಮತ್ತು ಆಸಿಯಾನ್, ಪೆಸಿಫಿಕ್ ದ್ವೀಪ ರಾಷ್ಟ್ರಗಳು ಮತ್ತು ಇತರರಿಗೆ ಅಂತಹ ಸಹಕಾರದ ವಿಸ್ತರಣೆ ಎದುರು ನೋಡಲಾಗುತ್ತಿದೆ ಎಂದರು. ಭಾರತದ ಈಶಾನ್ಯ ಪ್ರದೇಶದ ಸುಸ್ಥಿರ ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಆಗ್ನೇಯ ಏಷ್ಯಾದೊಂದಿಗೆ ಪ್ರದೇಶದ ಸಂಪರ್ಕವನ್ನು ಹೆಚ್ಚಿಸುವುದಕ್ಕಾಗಿ ಆಕ್ಟ್ ಈಸ್ಟ್ ಫೋರಮ್ (ಎಇಎಫ್) ಮೂಲಕ ತಮ್ಮ ನಿರಂತರ ಸಹಯೋಗದ ಪ್ರಾಮುಖ್ಯವನ್ನು ಅವರು ಶ್ಲಾಘಿಸಿದರು. ಭಾರತದ ಈಶಾನ್ಯ ಪ್ರದೇಶದ ಸುಸ್ಥಿರ ಅಭಿವೃದ್ಧಿಗಾಗಿ ಭಾರತ-ಜಪಾನ್ ಉಪಕ್ರಮ" ವನ್ನು ಅವರು ಸ್ವಾಗತಿಸಿದರು, ಇದರಲ್ಲಿ ಈಶಾನ್ಯ ಪ್ರದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ“ಈಶಾನ್ಯದಲ್ಲಿ ಬಿದಿರು ಮೌಲ್ಯ ಸರಪಳಿಯನ್ನು ಬಲಪಡಿಸುವ ಉಪಕ್ರಮ" ಮತ್ತು ಆರೋಗ್ಯ ರಕ್ಷಣೆ, ಅರಣ್ಯ ಸಂಪನ್ಮೂಲಗಳ ನಿರ್ವಹಣೆ, ಸಂಪರ್ಕ ಮತ್ತು ಸಹಕಾರ ವಿಚಾರಗಳು ಸೇರಿವೆ.

ಜನರಿಂದ ಜನರ ವಿನಿಮಯ, ಪ್ರವಾಸೋದ್ಯಮ ಮತ್ತು ಕ್ರೀಡೆಗಳ ಮೂಲಕ 2022 ರಲ್ಲಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ನೇ ವಾರ್ಷಿಕೋತ್ಸವದ ದೃಷ್ಟಿಯಿಂದ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೆಚ್ಚು ದೃಢವಾದ ಮತ್ತು ಪೂರಕವಾಗಿಸುವ ತಮ್ಮ ಸಂಕಲ್ಪವನ್ನು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಭಾರತ-ಜಪಾನ್ ಸೌಹಾರ್ದದ ಪ್ರತೀಕವಾಗಿ ವಾರಾಣಸಿಯಲ್ಲಿ ರುದ್ರಾಕ್ಷ ಕನ್ವೆನ್ಷನ್ ಕೇಂದ್ರ ತೆರೆಯುವುದನ್ನು ಸ್ವಾಗತಿಸಿದರು. ಭಾರತದಲ್ಲಿ ಜಪಾನಿ ಭಾಷಾ ಶಿಕ್ಷಣ ಮತ್ತು ತರಬೇತಿಯಲ್ಲಿ ಮಾಡಿದ ಪ್ರಗತಿಯನ್ನು ಶ್ಲಾಘಿಸಿದರು ಮತ್ತು ಜಪಾನ್ ಸಾಗರೋತ್ತರ ಸಹಕಾರ ಸ್ವಯಂಸೇವಕರ (ಜೆಒಸಿವಿ) ಯೋಜನೆಯ ಮೂಲಕ ಈ ಉಪಕ್ರಮವನ್ನು ವಿಸ್ತರಿಸಲು ನಿರ್ಧರಿಸಿದರು.

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿ ವಲಯದಲ್ಲಿ ಸಹಕಾರವನ್ನು ಬಲಪಡಿಸುವ ಪ್ರಾಮುಖ್ಯವನ್ನು ಅವರು ಪುನರುಚ್ಚರಿಸಿದರು. ಕಳೆದ ವರ್ಷ 3,700 ಕ್ಕೂ ಹೆಚ್ಚು ಭಾರತೀಯರು ಜೆಐಎಂ (ಜಪಾನ್-ಇಂಡಿಯಾ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್) ಮತ್ತು ಜೆಇಸಿಗಳಲ್ಲಿ (ಜಪಾನೀಸ್ ಎಂಡೋವ್ಡ್ ಕೋರ್ಸ್‌ಗಳು) ತರಬೇತಿ ಪಡೆದಿದ್ದಾರೆ ಎಂಬ ಅಂಶವನ್ನು ಅವರು ಸ್ವಾಗತಿಸಿದರು. 2021ರ ಜನವರಿಯಲ್ಲಿ ಸಹಿ ಮಾಡಿದ ಸಹಕಾರದ ಜ್ಞಾಪಕ ಪತ್ರದ ಅಡಿಯಲ್ಲಿ ನಿರ್ದಿಷ್ಟ ಕೌಶಲ್ಯದ ಕಾರ್ಯಕರ್ತರ (ಎಸ್ ಎಸ್ ಡಬ್ಲೂ) ವ್ಯವಸ್ಥೆಯ ಕಾರ್ಯಾಚರಣೆಯನ್ನು ಅವರು ಸಂತೋಷದಿಂದ ಉಲ್ಲೇಖಿಸಿದರು.  ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಎಸ್ ಎಸ್ ಡಬ್ಲೂ ಪರೀಕ್ಷೆಗಳನ್ನು ಪ್ರಾರಂಭಿಸುವುದನ್ನು ಅವರು ಸ್ವಾಗತಿಸಿದರು ಮತ್ತು ಕೆಲವು ನುರಿತ ಕೆಲಸಗಾರರು ಈಗಾಗಲೇ ಎಸ್ ಎಸ್ ಡಬ್ಲೂ ಆಗಿ ಜಪಾನ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು. ತಾಂತ್ರಿಕ ಪ್ರಶಿಕ್ಷಣಾರ್ಥಿಗಳಾಗಿ ಸುಮಾರು 200 ಭಾರತೀಯರು ಜಪಾನ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಸದ್ಯ ಜಾರಿಯಲ್ಲಿರುವ ನೀತಿಗಳ ಮೂಲಕ ಜಪಾನಿನ ಆರ್ಥಿಕತೆಗೆ ಕೊಡುಗೆ ನೀಡಬಲ್ಲ ನುರಿತ ಭಾರತೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಲು ಒಗ್ಗೂಡಿ ಕೆಲಸ ಮಾಡಲು ಅವರು ಒಪ್ಪಿಕೊಂಡರು

 ಒಲಂಪಿಕ್ ಮತ್ತು ಪ್ಯಾರಾಲಿಂಪಿಕ್ ಗೇಮ್ಸ್ ಟೋಕಿಯೊ 2020 ರ ಯಶಸ್ಸಿಗೆ ಪ್ರಧಾನಿ ಕಿಶಿದಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು ಮತ್ತು ಪ್ರಧಾನಿ ಕಿಶಿದಾ ಅವರು ಭಾರತದ ಬೆಂಬಲಕ್ಕಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ಜನರಿಂದ ಜನರ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮತ್ತು ವಿಸ್ತರಿಸುವ ಅವಕಾಶವಾಗಿ ಜಪಾನ್‌ನ ಕಾನ್ಸಾಯ್‌ನ ಒಸಾಕಾ ಎಕ್ಸ್ ಪೋ 2025 ರಲ್ಲಿ ಭಾರತದ ಭಾಗವಹಿಸುವಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ದೃಢಪಡಿಸಿದರು. ಪ್ರಧಾನ ಮಂತ್ರಿ ಕಿಶಿದಾ ಅವರು ಭಾರತದ ಭಾಗವಹಿಸುವಿಕೆಯನ್ನು ಸ್ವಾಗತಿಸಿದರು ಮತ್ತು ಅದರ ಯಶಸ್ಸಿಗೆ ಪ್ರಧಾನಿ ಮೋದಿಯವರ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು. 

ನಾಯಕರ ವಾರ್ಷಿಕ ಪರಸ್ಪರ ಭೇಟಿಗಳ ಮೂಲಕ ಆಗಿರುವ ಸಾಧನೆಗಳ ಪ್ರಾಮುಖ್ಯವನ್ನು ಪ್ರಧಾನಮಂತ್ರಿಗಳು ಖಾತ್ರಿಪಡಿಸಿದರು ಮತ್ತು ಮುಂದಿನ  ಅಂತಹ ಭೇಟಿಗಳನ್ನು ಮುಂದುವರಿಸಲು ಎದುರು ನೋಡಲಾಗುತ್ತಿದೆ. ಪ್ರಧಾನಿ ಕಿಶಿದಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಅವರ ನಿಯೋಗದ ಸದಸ್ಯರಿಗೆ ನೀಡಿದ ಆತ್ಮೀಯತೆ ಮತ್ತು ಆತಿಥ್ಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಕ್ವಾಡ್ ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಜಪಾನ್‌ಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಬಹಳ  ಸಂತೋಷದಿಂದ ಆ ಆಹ್ವಾನವನ್ನು ಸ್ವೀಕರಿಸಿದರು.

 

ಭಾರತ ಗಣರಾಜ್ಯದ ಪ್ರಧಾನಮಂತ್ರಿ

ಜಪಾನ್ ಪ್ರಧಾನ ಮಂತ್ರಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.