1. ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಬಾಂಧವ್ಯದ 25ನೇ ವರ್ಷಆಚರಿಸುತ್ತಿರುವ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹುಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2017ರ ಜುಲೈ4-6ರವರೆಗೆ ಇಸ್ರೇಲ್ ಗೆ ಭೇಟಿ ನೀಡಿದ್ದರು. ಭಾರತೀಯ ಪ್ರಧಾನಮಂತ್ರಿಯವರ ಈಪ್ರಪ್ರಥಮ ಇಸ್ರೇಲ್ ಭೇಟಿ ತಮ್ಮ ಜನರ ನಡುವಿನ ಶಾಶ್ವತ ಸ್ನೇಹವನ್ನು ಬಲಪಡಿಸಿತು ಮತ್ತು ದ್ವಿಪಕ್ಷೀಯ ಸಂಬಂಧವನ್ನು ಒಂದು ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತೀಕರಿಸಿತು.

2. ಶತ ಶತಮಾನಗಳ ತಮ್ಮ ಪರಂಪರೆಯನ್ನು ಪೋಷಿಸಿರುವ ಎರಡು ನಾಗರಿಕತೆಗಳನ್ನಷ್ಟೇ ಅವರು ಪ್ರತಿನಿಧಿಸಲಿಲ್ಲ, ಬದಲಾಗಿ ಇಬ್ಬರೂ ನಾಯಕರು ತಮ್ಮ ಸಂಬಂಧದ ಪೂರ್ಣ ಸಾಮರ್ಥ್ಯವನ್ನು ಕಂಡುಕೊಳ್ಳುವ ವಿಶಾಲ ತಳಹದಿಯ ಬಾಂಧವ್ಯವನ್ನು ನಿರ್ಮಿಸುವ ತಮ್ಮ ಇಂಗಿತವನ್ನು ಅವರು ದೃಢಪಡಿಸಿದರು. ಹೀಗೆ ಮಾಡುವಾಗ ಅವರು, ಇತಿಹಾಸದುದ್ದಕ್ಕೂ, ಯಹೂದಿ ಸಮುದಾಯ ಸದಾ ಭಾರತದಲ್ಲಿ ನೆಲೆ ಕಂಡುಕೊಂಡಿತ್ತು ಮತ್ತು ಅವರನ್ನು ಆತ್ಮೀಯತೆ ಮತ್ತು ಗೌರವದೊಂದಿಗೆ ನಡೆಸಿಕೊಳ್ಳಲಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

3. ತಮ್ಮ ರಾಜತಾಂತ್ರಿಕ ಬಾಂಧವ್ಯದ ಕಾಲು ಶತಮಾನದ ಬಳಿಕ ಅಭಿವೃದ್ಧಿಯನ್ನು ಪರಾಮರ್ಶಿಸಿದ ಇಬ್ಬರೂ ನಾಯಕರು, ಎರಡೂ ದೇಶಗಳ ಗುರಿ ಮತ್ತು ಆಶೋತ್ತರಗಳನ್ನು ಬಿಂಬಿಸುವ ನೀತಿ ಮತ್ತು ಕ್ರಮಗಳಿಗೆ ಹಾಗೂ ವಿಸ್ತೃತ ಶ್ರೇಣಿಯ ರಂಗದಲ್ಲಿ ತಮ್ಮ ಸಹಯೋಗಾತ್ಮಕ ಪ್ರಯತ್ನಗಳನ್ನು ವಿಸ್ತರಿಸಲು ಒಪ್ಪಿಗೆ ಸೂಚಿಸಿದರು. ಅಭಿವೃದ್ಧಿ, ತಂತ್ರಜ್ಞಾನ, ನಾವೀನ್ಯತೆ, ಉದ್ಯಮಶೀಲತೆ, ರಕ್ಷಣಾ ಮತ್ತು ಭದ್ರತೆಗಳಲ್ಲಿ ಎರಡು ದೇಶಗಳು ನಿಕಟ ಪಾಲುದಾರರಾಗಲಿವೆ ಎಂದು ಅವರು ತಿಳಿಸಿದರು

4. ಅಭಿವೃದ್ಧಿಯ ಕೇಂದ್ರವನ್ನು ಗುರುತಿಸಿದ ಭಾರತ ಮತ್ತು ಇಸ್ರೇಲ್ ಜಲ ಮತ್ತು ಕೃಷಿಯಲ್ಲಿ ವ್ಯೂಹಾತ್ಮಕ ಪಾಲುದಾರಿಕೆ ಸ್ಥಾಪಿಸಲು ಸಮ್ಮತಿಸಿದರು. ಇದು ಜಲ ಸಂರಕ್ಷಣೆ, ತ್ಯಾಜ್ಯ ಜಲ ಸಂಸ್ಕರಣೆ ಮತ್ತು ಅದನ್ನು ಕೃಷಿಗೆ ಬಳಸುವುದು, ಸಾಗರದ ನೀರಿನಿಂದ ಉಪ್ಪು ಬೇರ್ಪಡಿಸುವುದು, ನೀರಿನ ಬಳಕೆಯಲ್ಲಿ ಸುಧಾರಣೆ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗಂಗೆ ಮತ್ತು ಇತರ ನದಿಗಳ ಶುದ್ಧೀಕರಣ, ಮಾಡುವುದರ ಮೇಲೆ ಗಮನ ಹರಿಸಲಿದೆ. ಇದು ರೈತರ ಉತ್ಪಾದನೆ ಸಂಘಟನೆ(ಎಫ್.ಪಿ.ಓ.)ಗಳು;ಗುಣಮಟ್ಟದ ಬಿತ್ತನೆ ಸಾಮಗ್ರಿಗಳು; ಸುಗ್ಗಿಯ ನಂತರದ ತಂತ್ರಜ್ಞಾನದ ಕೌಶಲವರ್ಗಾವಣೆ, ಪಿಪಿಪಿ, ಬಿ2ಬಿ ಮತ್ತು ಇತರ ಮಾದರಿಗಳನ್ನೊಳಗೊಂಡ ಮಾರುಕಟ್ಟೆಸಂಪರ್ಕಗಳನ್ನು ಅಳವಡಿಸಿಕೊಂಡು ಇಸ್ರೇಲ್ ವಿದೇಶಾಂಗ ಸಚಿವಾಲಯದ ಉಸ್ತುವಾರಿಯಲ್ಲಿರುವ (ಮಾಶಾವ್) ಮತ್ತು ಭಾರತದ ಕೃಷಿ ಸಚಿವಾಲಯದ ಅಡಿಯಲ್ಲಿ ಪ್ರಸ್ತುತ ಇರುವ ಉತ್ಕೃಷ್ಟತೆ ಕೇಂದ್ರ (ಸಿ.ಓ.ಇ.)ಗಳನ್ನು ವಾಣಿಜ್ಯಾತ್ಮಕವಾಗಿ ಸದೃಢ ವಾಣಿಜ್ಯ ಮಾದರಿಗಳಾಗಿ ಬಲವರ್ಧನೆ ಮತ್ತು ವಿಸ್ತರಣೆ ಮಾಡುವುದನ್ನು ಒಳಗೊಂಡಿದೆ.

5. ಇಬ್ಬರೂ ಪ್ರಧಾನಮಂತ್ರಿಗಳು ವಾಣಿಜ್ಯ ಮತ್ತು ಹೂಡಿಕೆಯ ದ್ವಿಪಕ್ಷೀಯ ಸಂಪೂರ್ಣ ಸಾಮರ್ಥ್ಯದ ಸಾಕಾರದ ಮಹತ್ವವನ್ನು ಉಲ್ಲೇಖಿಸಿದರು. ಈ ನಿಟ್ಟಿನಲ್ಲಿ ಶೀಘ್ರವೇ ಶಿಫಾರಸುಗಳೊಂದಿಗೆ ಹೊರಬರುವಂತೆ ಭಾರತ –ಇಸ್ರೇಲ್ ಸಿಇಓ ವೇದಿಕೆಗೆ ಸ್ಪರ್ಧೆ ಒಡ್ಡಿದರು. ಇಬ್ಬರೂ ನಾಯಕರು, ನಾವಿನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ದ್ವಿಪಕ್ಷೀಯ ಸಹಕಾರ ಉತ್ತೇಜಿಸುವ ಅಗತ್ಯ ಒತ್ತಿಹೇಳಿದರು ಮತ್ತು ನವೋದ್ಯಮ ರಂಗದಲ್ಲಿ ಹೆಚ್ಚಿನ ಸಹಯೋಗಕ್ಕೆ ಕರೆ ನೀಡಿದರು.

6. ವಾಣಿಜ್ಯೋದ್ಯಮ ನಡೆಸುವ ಪುರುಷ ಮತ್ತು ಮಹಿಳೆಯರ ಪ್ರಯಾಣಕ್ಕೆ ಅವಕಾಶ ನೀಡುವ ಮಹತ್ವನ್ನು ಗುರುತಿಸಿದ ಭಾರತ ಮತ್ತು ಇಸ್ರೇಲ್, ಐದು ವರ್ಷಗಳವರೆಗೆ ಬಹು ಬಾರಿ ಪ್ರಯಾಣಿಸುವ ವಿಸಾ ಮಂಜೂರಾತಿ ಹೆಚ್ಚಿನ ಆರ್ಥಿಕ ಮತ್ತು ವಾಣಿಜ್ಯ ವಿನಿಮಯ ಉತ್ತೇಜಿಸುತ್ತದೆ ಎಂಬುದನ್ನು ಒತ್ತಿ ಹೇಳಿದರು.

7. ದ್ವಿಪಕ್ಷೀಯ ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ ಎರಡೂ ಕಡೆಗಳಿಂದ ಹೂಡಿಕೆಯನ್ನು ಸಂರಕ್ಷಿಸುವ ಒಪ್ಪಂದಕ್ಕೆ ಮಾತುಕತೆ ನಡೆಸಲು ಇಬ್ಬರೂ ಪ್ರಧಾನಮಂತ್ರಿಯವರು ಸಮ್ಮಿತಿಸಿದರು.

8. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಇಸ್ರೇಲ್ ನ ತಾಂತ್ರಿಕ ನಾವಿನ್ಯತೆಯ ರಾಷ್ಟ್ರೀಯ ಪ್ರಾಧಿಕಾರಗಳು ಎರಡೂ ಕಡೆಗಳಿಂದ ತಲಾ 20 ದಶಲಕ್ಷ ಅಮೆರಿಕನ್ ಡಾಲರ್ ಕೊಡುಗೆಯೊಂದಿಗೆ ಭಾರತ ಇಸ್ರೇಲ್ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವಿನ್ಯತೆ ನಿಧಿ (ಐ4ಎಫ್) ಸ್ಥಾಪನೆಗೆ ತಿಳಿವಳಿಕೆ ಒಪ್ಪಂದ ಆಖೈರುಗೊಳಿಸಿರುವುದನ್ನು ಇಬ್ಬರೂ ಪ್ರಧಾನಮಂತ್ರಿಯವರು ಸ್ವಾಗತಿಸಿದರು. ಈ ತಿಳಿವಳಿಕೆ ಒಪ್ಪಂದವು ವಾಣಿಜ್ಯ ಆನ್ವಯಿಕಗಳಿಗೆ ಸಮರ್ಥವಾದ ನಾವಿನ್ಯ ತಂತ್ರಜ್ಞಾನ ಮತ್ತು ಉತ್ಪನ್ನಗಳ ಅಭಿವೃದ್ಧಿಗೆ ಕಾರಣವಾಗುವಂಥ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ ಕೈಗೊಳ್ಳಲು ಭಾರತ ಮತ್ತು ಇಸ್ರೇಲ್ ಉದ್ದಿಮೆಗಳಿಗೆ ಮೂಲಧನ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

9. ಎರಡೂ ರಾಷ್ಟ್ರಗಳ ಕೈಗಾರಿಕೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ವ್ಯಾಪಕ ಶ್ರೇಣಿಯ ಜ್ಞಾನ-ವಾಣಿಜ್ಯ ಪಾಲುದಾರಿಕೆ ಹೆಚ್ಚಿಸುವ ಮಹತ್ವವನ್ನು ಮನಗಂಡು 2018 ರಲ್ಲಿ ನಡೆಯಲಿರುವ ವಾರ್ಷಿಕ ತಂತ್ರಜ್ಞಾನ ಶೃಂಗಸಭೆಗಾಗಿ "ಪಾಲುದಾರ ರಾಷ್ಟ್ರ" ಎಂಬ ಭಾರತದ ಪ್ರಸ್ತಾಪವನ್ನು ಇಸ್ರೇಲ್ ಆಪ್ತವಾಗಿ ಸ್ವಾಗತಿಸಿದೆ.

10. ಎರಡೂ ದೇಶಗಳ ನಾಯಕರು ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ (ಐ.ಎಸ್.ಎ.) ನಡುವೆ ಸಾಗಿರುವ ಸಹಕಾರವನ್ನು ಸ್ವಾಗತಿಸಿದರು. ಎರಡೂ ದೇಶಗಳ ನಡುವೆ ಸಹಕಾರ ಹೆಚ್ಚಿಸುವ ಆಟೋಮಿಕ್ ಗಡಿಯಾರ, ಜಿಇಓ-ಎಲ್.ಇ.ಓ ಆಪ್ಟಿಕಲ್ ಸಂಪರ್ಕ, ಶೈಕ್ಷಣಿಕ ಸಹಯೋಗ ಮತ್ತು ಸಣ್ಣ ಉಪಗ್ರಹಗಳಿಗೆ ಎಲೆಕ್ಟ್ರಿಕ್ ಪ್ರೇರಣಶಕ್ತಿ ಒದಗಿಸುವ ಕುರಿತಾದ ಮೂರು ಒಪ್ಪಂದಗಳಿಗೆ ಅಂಕಿತ ಹಾಕಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು. ಪರಸ್ಪರರ ಲಾಭಕ್ಕಾಗಿ ಬೆಳೆಯುತ್ತಿರುವ ಬಾಂಧವ್ಯವನ್ನು ಹೆಚ್ಚಿಸುವಂತೆ ಅವರು ಎರಡೂ ಬಾಹ್ಯಾಕಾಶ ಸಂಸ್ಥೆಗಳಿಗೆ ಉತ್ತೇಜನ ನೀಡಿದರು. ಇಸ್ರೋ ಇತ್ತೀಚೆಗೆ ಇಸ್ರೇಲ್ ನ ನ್ಯಾನೋ ಉಪಗ್ರಹವನ್ನು ಉಡಾವಣೆ ಮಾಡಿದ್ದು ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಎಂದು ಇಬ್ಬರೂ ನಾಯಕರು ಉಲ್ಲೇಖಿಸಿದರು.

11. ಆರೋಗ್ಯ ರಕ್ಷಣೆಯ ಬೃಹತ್ ದತ್ತಾಂಶ ವಿಶ್ಲೇಷಣೆ ಸೇರಿದಂತೆ ಮಹತ್ವದ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಬೆಂಬಲಿಸುವ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಯೋಗ ಉನ್ನತೀಕರಿಸಲು ಎರಡೂ ಕಡೆಯವರು ಒಪ್ಪಿರುವುದನ್ನು ಪ್ರಧಾನಮಂತ್ರಿಯವರು ತೃಪ್ತಿಯಿಂದ ಉಲ್ಲೇಖಿಸಿದರು, ಪರಸ್ಪರ ಬಲ ಮತ್ತು ಆಸಕ್ತಿ ಇರುವ ಮಹತ್ವದ ಕ್ಷೇತ್ರಗಳಲ್ಲಿ ಜಾಲ ಸಂಪರ್ಕಿತ ಉತ್ಕೃಷ್ಟ ಸಂಶೋಧನಾ ಕೇಂದ್ರ ಸ್ಥಾಪನೆ ಸೇರಿದಂತೆ ಹೆಚ್ಚಿನ ವೈಜ್ಞಾನಿಕ ಸಹಯೋಗದ ಸಾಧ್ಯತೆಗಳನ್ನು ಬಳಸಿಕೊಳ್ಳಲು ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಭಾರತ ಇಸ್ರೇಲ್ ಜಂಟಿ ಸಮಿತಿಗೆ ಅವರು ನಿರ್ದೇಶನ ನೀಡಿದರು. 12. ಹಲವು ವರ್ಷಗಳಿಂದ ಇರುವ ದ್ವಿಪಕ್ಷೀಯ ರಕ್ಷಣಾ ಸಹಕಾರ ಪ್ರಾಮುಖ್ಯತೆಯನ್ನು ಪುನರುಚ್ಚಿರಿಸುವ ಮೂಲಕ, ಈ ಕ್ಷೇತ್ರದಲ್ಲಿನ ಭವಿಷ್ಯದ ಬೆಳವಣಿಗೆಗಳು 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ವಿಶೇಷ ಒತ್ತು ನೀಡಲು ಇಸ್ರೇಲ್ ನಿಂದ ತಂತ್ರಜ್ಞಾನದ ವರ್ಗಾವಣೆ ಸೇರಿದಂತೆ ರಕ್ಷಣಾ ಉತ್ಪನ್ನಗಳ ಜಂಟಿ ಅಭಿವೃದ್ಧಿಗೆ ಗಮನಹರಿಸಬೇಕು ಎಂಬುದಕ್ಕೆ ಒಪ್ಪಿಗೆ ಸೂಚಿಸಲಾಯಿತು.

13. ಖಾಸಗಿ ಮತ್ತು ಸರ್ಕಾರಿ ಮಟ್ಟದಲ್ಲಿ ಭಾರತ ಮತ್ತು ಇಸ್ರೇಲ್ ಎರಡೂ ಸೈಬರ್ ಕ್ಷೇತ್ರದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಉತ್ತೇಜಿಸಲು ಬದ್ಧವಾಗಿವೆ. ಎರಡೂ ದೇಶಗಳ ಪ್ರಧಾನಮಂತ್ರಿಯವರು ತಮ್ಮ ರಾಷ್ಟ್ರೀಯ ಸೈಬರ್ ಪ್ರಾಧಿಕಾರಗಳ ನಡುವೆ ಹೆಚ್ಚಿನ ಮಾತುಕತೆಗೆ ಒತ್ತು ನೀಡಿದರು ಮತ್ತು ಈ ಕ್ಷೇತ್ರದಲ್ಲಿನ ಸಹಕಾರವನ್ನು ವೇಗಗೊಳಿಸುವ ಮತ್ತು ವಿಸ್ತರಿಸುವ ಹಾಗೂ ಇದರ ಅನುಷ್ಠಾನಕ್ಕೆ ಮಾರ್ಗಸೂಚಿ ರೂಪಿಸುವ ಮಹತ್ವ ಪ್ರತಿಪಾದಿಸಿದರು. ಸೈಬರ್ ಭದ್ರತೆಯ ಪ್ರದೇಶದಲ್ಲಿ ಸಹಕಾರ ಚೌಕಟ್ಟಿನ ಮೂಲಕ ಸೈಬರ್ ಸಮಸ್ಯೆಗಳ ಮೇಲೆ ತಮ್ಮ ವಿಸ್ತೃತ ನೆಲೆಯ ಸಹಕಾರವನ್ನು ಹೆಚ್ಚಿಸುವ ಮತ್ತು ಇನ್ನಷ್ಟು ಸಾಂಸ್ಥೀಕರಣಗೊಳಿಸುವ ಮೌಲ್ಯವನ್ನು ಎರಡೂ ಪಕ್ಷಗಳು ಗುರುತಿಸಿವೆ.

14. ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಯೋತ್ಪಾದನೆ ಭೀತಿ ಒಡ್ಡಿರುವುದನ್ನು ಮನಗಂಡು, ಇಬ್ಬರೂ ಪ್ರಧಾನಮಂತ್ರಿಗಳು, ಎಲ್ಲ ಸ್ವರೂಪದ ಭಯೋತ್ಪಾದನೆಯ ವಿರುದ್ಧದ ಹೋರಾಟದ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದರು. ಯಾವುದೇ ಕಾರಣದ ಮೇಲೆ ಭಯೋತ್ಪಾದಕ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಪ್ರತಿಪಾದಿಸಿದರು. ಭಯೋತ್ಪಾದಕರು, ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಜಾಲಗಳು ಮತ್ತು ಅವುಗಳಿಗೆ ಉತ್ತೇಜನ, ಬೆಂಬಲ ಮತ್ತು ಹಣಕಾಸು ನೆರವು ನೀಡುವ ಅಥವಾ ಸುರಕ್ಷಿತ ತಾಣ ಪೂರೈಸುವವರ ಮತ್ತು ಭಯೋತ್ಪಾದನೆ ಗುಂಪುಗಳ ವಿರುದ್ಧ ಕಠಿಣ ಕ್ರಮದ ಅಗತ್ಯವನ್ನು ಒತ್ತಿ ಹೇಳಿದರು. ಭಯೋತ್ಪಾದಕ ಸಂಘಟನೆಗಳು ಯಾವುದೇ ಡಬ್ಲ್ಯುಎಂಡಿ ಅಥವಾ ತಂತ್ರಜ್ಞಾನ ಹೊಂದದಂತೆ ಖಾತ್ರಿಪಡಿಸಿಕೊಳ್ಳುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ಇಬ್ಬರೂ ನಾಯಕರು ಅಂತಾರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕುರಿತ ಸಮಗ್ರ ಒಪ್ಪಂದ (ಸಿಸಿಐಟಿ)ದ ಶೀಘ್ರ ಅನುಷ್ಠಾನಕ್ಕೆ ಸಹಕಾರ ನೀಡುವ ಬದ್ಧತೆಯನ್ನು ಪ್ರಕಟಿಸಿದರು.

15. ತಾಯ್ನಾಡು ಮತ್ತು ಸಾರ್ವಜನಿಕ ಸುರಕ್ಷತೆ ಕುರಿತ ಸಹಕಾರ ಒಪ್ಪಂದದಲ್ಲಿ ಅಡಕವಾಗಿರುವ ಅಂಶಗಳ ಮತ್ತು ಒಪ್ಪಂದದ ಸಮರ್ಥ ಮತ್ತು ಸೂಕ್ತ ಮಾದರಿಯ ಅನುಷ್ಠಾನಕ್ಕೆ ವಿವಿಧ ಕಾರ್ಯಪಡೆಗಳನ್ನು ಉತ್ತೇಜಿಸುವ ಬದ್ಧತೆಯನ್ನು ಪುನಸುಚ್ಚರಿಸಿದರು. 16. ಇಬ್ಬರೂ ಪ್ರಧಾನಮಂತ್ರಿಗಳು ಉನ್ನತ ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿನ ಹೆಚ್ಚಿನ ಸಹಕಾರದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಇದನ್ನು ಸೂಕ್ತ ಒಪ್ಪಂದ ಮತ್ತು ಜಂಟಿ ಸಂಶೋಧನಾ ಅನುದಾನ ಕಾರ್ಯಕ್ರಮಗಳ ಮೂಲಕ ಉತ್ತೇಜಿಸಲು ಸಮ್ಮತಿಸಿದರು.

17. ಭಾರತ ಮತ್ತು ಇಸ್ರೇಲ್ ನಡುವಿನ ಜನರ ಸಂಪರ್ಕ ಹೆಚ್ಚಳಕ್ಕಿಂತ ಮಿಗಿಲಾದ್ದು ಯಾವುದೂ ಇಲ್ಲ ಎಂದ ಇಬ್ಬರೂ ನಾಯಕರು, ಭಾರತ ಮತ್ತು ಇಸ್ರೇಲ್ ನಡುವೆ ವಾಯುಯಾನ ಸಂಪರ್ಕ ಹೆಚ್ಚಿಸುವ ಮೂಲಕ ಎರಡೂ ಕಡೆಯ ಪ್ರಯಾಣ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೆ ಅವಕಾಶ ಕಲ್ಪಿಸಲು ಸಮ್ಮತಿ ಸೂಚಿಸಿದರು.

18. ಎರಡೂ ಸಮಾಜಗಳನ್ನು ಹತ್ತಿರಕ್ಕೆ ತರುವಲ್ಲಿ ಭಾರತದಲ್ಲಿ ಯಹೂದಿ ಸಮುದಾಯ ಮತ್ತು ಇಸ್ರೇಲ್ ನಲ್ಲಿ ಭಾರತೀಯ ಮೂಲದ ಯಹೂದಿಗಳು ನೀಡಿರುವ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ತೆರೆಯುವುದಾಗಿದ ಪ್ರಕಟಿಸಿದರು. ಇದನ್ನು ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು ಅವರು ಆಪ್ತವಾಗಿ ಸ್ವಾಗತಿಸಿ, ಭಾರತೀಯ ಸಂಸ್ಕೃತಿಗೆ ತಮ್ಮ ಆಳವಾದ ಗೌರವ ವ್ಯಕ್ತಪಡಿಸಿದರು ಮತ್ತು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿ ಮಾಡುವ ಮೂಲಕ ಯೋಗಾಭ್ಯಾಸವನ್ನು ಉತ್ತೇಜಿಸುವ ಪ್ರಧಾನಿ ಮೋದಿ ಅವರ ಪ್ರಾಯೋಜಕತ್ವವನ್ನು ನೆನಪಿಸಿಕೊಂಡರು.

19. ಇಬ್ಬರೂ ಪ್ರಧಾನಮಂತ್ರಿಯವರು ಇಸ್ರೇಲ್ ನಲ್ಲಿನ ಭಾರತೀಯ ಆರೈಕೆ –ನೀಡುವವರ ಕೊಡುಗೆಯನ್ನು ಗುರುತಿಸಿದರು ಮತ್ತು ಅವರ ನಿಯಮಿತ ಮಾದರಿಯ ಆಗಮನದ ಮುಂದುವರಿಕೆಗೆ ಅವಕಾಶ ಒದಗಿಸಲು ಪರಸ್ಪರ ಒಪ್ಪಿಗೆಯ ಒಪ್ಪಂದದ ಇಂಗಿತವನ್ನು ವ್ಯಕ್ತಪಡಿಸಿದರು.

20. ಇಬ್ಬರೂ ಪ್ರಧಾನಮಂತ್ರಿಗಳು ಇಸ್ರೇಲ್-ಪ್ಯಾಲಸ್ತೀನ್ ಶಾಂತಿ ಪ್ರಕ್ರಿಯೆಯ ಕುರಿತ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ವಲಯದಲ್ಲಿ ತತ್ ಕ್ಷಣದ ಮತ್ತು ದೀರ್ಘಕಾಲೀನ ಶಾಂತಿ ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪರಸ್ಪರ ಮಾನ್ಯತೆ ಮತ್ತು ಭದ್ರತಾ ವ್ಯವಸ್ಥೆಗಳ ಆಧಾರದ ಮೇಲೆ ಇರುವ ಆರಂಭಿಕ ಸಮಾಲೋಚನೆಯ ಪರಿಹಾರಕ್ಕಾಗಿ ತಮ್ಮ ಬೆಂಬಲವನ್ನು ಅವರು ದೃಢಪಡಿಸಿದರು. ಈ ಭೇಟಿಯ ವೇಳೆ ಈ ಕೆಳಕಂಡ ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು:

i. ಭಾರತ – ಇಸ್ರೇಲ್ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಂತ್ರಜ್ಞಾನ ನಾವಿನ್ಯತೆ ನಿಧಿ (14 ಎಫ್) ಸ್ಥಾಪನೆಗಾಗಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಇಸ್ರೇಲ್ ನ ರಾಷ್ಟ್ರೀಯ ತಂತ್ರಜ್ಞಾನ ನಾವಿನ್ಯತೆ ಪ್ರಾಧಿಕಾರದ ನಡುವೆ ತಿಳಿವಳಿಕೆ ಒಪ್ಪಂದ.

ii. ಭಾರತ ಗಣರಾಜ್ಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಮತ್ತು ಇಸ್ರೇಲ್ ಸರ್ಕಾರದ ರಾಷ್ಟ್ರೀಯ ಮೂಲಸೌಕರ್ಯ, ಇಂಧನ ಮತ್ತು ಜಲ ಸಂಪನ್ಮೂಲ ಸಚಿವಾಲಯದ ನಡುವೆ ಭಾರತದಲ್ಲಿ ಜಲ ಸಂರಕ್ಷಣೆ ಅಭಿಯಾನಕ್ಕಾಗಿ ತಿಳಿವಳಿಕೆ ಒಪ್ಪಂದ.

iii. ಭಾರತ ಗಣರಾಜ್ಯದ ಉತ್ತರ ಪ್ರದೇಶ ಸರ್ಕಾರದ ಯು.ಪಿ. ಜಲ ನಿಗಮ ಮತ್ತು ಇಸ್ರೇಲ್ ಸರ್ಕಾರದ ರಾಷ್ಟ್ರೀಯ ಮೂಲಸೌಕರ್ಯ, ಇಂಧನ ಮತ್ತು ಜಲ ಸಂಪನ್ಮೂಲ ಸಚಿವಾಲಯದ ನಡುವೆ ಭಾರತದಲ್ಲಿ ನೀರಿನ ಬಳಕೆಯ ಸುಧಾರಣೆಗಾಗಿ ತಿಳಿವಳಿಕೆ ಒಪ್ಪಂದ.

iv. ಭಾರತ- ಇಸ್ರೇಲ್ ಅಭಿವೃದ್ಧಿ ಸಹಕಾರ – ಕೃಷಿಯಲ್ಲಿ 2018-2020ರ ಮೂರು ವರ್ಷಗಳ ಕಾರ್ಯ ಕಾರ್ಯಕ್ರಮ.

v. ಅಣು ಗಡಿಯಾರಗಳ ಕುರಿತ ಸಹಕಾರಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ (ಐಎಸ್.ಎ) ನಡುವೆ ಯೋಜನಾ ಸಹಕಾರ.

vi. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ (ಐಎಸ್.ಎ) ನಡುವೆ ಜಿಇಓ-ಎಲ್ಇಓ ಆಫ್ಟಿಕಲ್ ಸಂಪರ್ಕ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.

vii. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ (ಐಎಸ್.ಎ) ನಡುವೆ ಸಣ್ಣ ಉಪಗ್ರಹಗಳಿಗೆ ಎಲೆಕ್ಟ್ರಿಕ್ ಪ್ರೇರಕ ಶಕ್ತಿಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್ ಸರ್ಕಾರ ಮತ್ತು ಜನತೆಯ ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಪರಸ್ಪರರಿಗೆ ಅನುಕೂಲಕರವಾದ ದಿನದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ನೆತನ್ಯಾಹು ಅವರಿಗೆ ಆಹ್ವಾನ ನೀಡಿದರು. ಪ್ರಧಾನಿ ನೆತನ್ಯಾಹು ಅವರು ಈ ಆಹ್ವಾನವನ್ನು ಅಂಗೀಕರಿಸಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bad loans decline: Banks’ gross NPA ratio declines to 13-year low of 2.5% at September end, says RBI report

Media Coverage

Bad loans decline: Banks’ gross NPA ratio declines to 13-year low of 2.5% at September end, says RBI report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಡಿಸೆಂಬರ್ 2024
December 27, 2024

Citizens appreciate PM Modi's Vision: Crafting a Global Powerhouse Through Strategic Governance