1.ಗೌರವಾನ್ವಿತ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು 2022 ಸೆಪ್ಟೆಂಬರ್ 05-08ರ ವರೆಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತ ಭೇಟಿ ಸಂದರ್ಭದಲ್ಲಿ ಬಾಂಗ್ಲಾ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿದರು. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಹುತಾತ್ಮರಾದ ಮತ್ತು ಗಂಭೀರ ಗಾಯಗೊಂಡ ಭಾರತೀಯ ಸಶಸ್ತ್ರ ಪಡೆಗಳ 200 ಯೋಧರ ಕುಟುಂಬಗಳ ವಿದ್ಯಾರ್ಥಿಗಳಿಗೆ "ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ವಿದ್ಯಾರ್ಥಿವೇತನ" ಅನಾವರಣ ಕಾರ್ಯಕ್ರಮದಲ್ಲಿ ಹಸೀನಾ ಅವರು ಪಾಲ್ಗೊಂಡಿದ್ದರು. ಅಲ್ಲದೆ, ಭಾರತ ಮತ್ತು ಬಾಂಗ್ಲಾದೇಶದ ಉದ್ಯಮ ಸಮುದಾಯ 2022 ಸೆಪ್ಟೆಂಬರ್ 7ರಂದು ಆಯೋಜಿಸಿದ್ದ ಉದ್ಯಮ ಮತ್ತು ವ್ಯವಹಾರ ಕಾರ್ಯಕ್ರಮ ಉದ್ದೇಶಿಸಿ ಅವರು ಭಾಷಣ ಮಾಡಿದರು.

2.2022 ಸೆಪ್ಟೆಂಬರ್ 6ರಂದು ಉಭಯ ಪ್ರಧಾನ ಮಂತ್ರಿಗಳು ನಿರ್ಬಂಧಿತ ಸಭೆ ನಡೆಸಿದರು. ನಂತರ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಈ ಸಭೆಗಳು ಅತ್ಯಂತ ಸ್ನೇಹಮಯಿ ಮತ್ತು ಸೌಹಾರ್ದತೆಯಿಂದ ಜರುಗಿವೆ. ಎರಡೂ ರಾಷ್ಟ್ರಗಳ ಸಾರ್ವಭೌಮತ್ವ, ಸಮಾನತೆ, ಪರಸ್ಪರ ನಂಬಿಕೆ ಮತ್ತು ತಿಳುವಳಿಕೆ ದಾಟಿ, ಎಲ್ಲರನ್ನೂ ಒಳಗೊಂಡ ದ್ವಿಪಕ್ಷೀಯ ಪಾಲುದಾರಿಕೆ ಪ್ರತಿಬಿಂಬಿಸುವ ದೀರ್ಘ, ಐತಿಹಾಸಿಕ ಮತ್ತು ಸೋದರತ್ವ ಸಂಬಂಧಗಳು ಮತ್ತು ಪ್ರಜಾಪ್ರಭುತ್ವದ ಬಹು ಹಂಚಿಕೆಯ ಮೌಲ್ಯಗಳ ಆಧಾರದ ಮೇಲೆ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ಅತ್ಯುತ್ತಮ ಸ್ಥಿತಿ ಮುಂದುವರೆಯುತ್ತಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು. 

3.ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ, ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ಮತ್ತು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50 ವರ್ಷಗಳ ಆಚರಣೆಗಳಲ್ಲಿ ಪಾಲ್ಗೊಳ್ಳಲು 2021 ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾದೇಶ ಭೇಟಿಯನ್ನು ಉಭಯ ನಾಯಕರು ಸ್ಮರಿಸಿದರು. ಅದಾದ ನಂತರ 2021 ಡಿಸೆಂಬರ್ ನಲ್ಲಿ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಬಾಂಗ್ಲಾದೇಶದ ವಿಜಯ ದಿನದ ಸುವರ್ಣ ಮಹೋತ್ಸವದ ಆಚರಣೆಯ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

4.ಉಭಯ ಪ್ರಧಾನ ಮಂತ್ರಿಗಳು ಎರಡೂ ದೇಶಗಳ ಉನ್ನತ ಮಟ್ಟದ ಭೇಟಿ, ಮಾತುಕತೆಗಳ ನಿರಂತರ ವಿನಿಮಯಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಇದು ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುತ್ತಿದೆ. 2022 ಜೂನ್ ನಲ್ಲಿ ನವದೆಹಲಿಯಲ್ಲಿ ನಡೆದ 2 ದೇಶಗಳ ವಿದೇಶಾಂಗ ಸಚಿವರ ನೇತೃತ್ವದ ಜಂಟಿ ಸಲಹಾ ಆಯೋಗದ 7ನೇ ಸಭೆಯ ಯಶಸ್ವಿಯನ್ನು ಎರಡೂ ರಾಷ್ಟ್ರಗಳು ನೆನಪಿಸಿಕೊಂಡವು.

5.ರಾಜಕೀಯ ಮತ್ತು ಭದ್ರತಾ ಸಹಕಾರ, ರಕ್ಷಣೆ, ಗಡಿ ನಿರ್ವಹಣೆ, ವ್ಯಾಪಾರ ಮತ್ತು ಸಂಪರ್ಕ, ಜಲಸಂಪನ್ಮೂಲ, ವಿದ್ಯುತ್ ಮತ್ತು ಇಂಧನ, ಅಭಿವೃದ್ಧಿ ಸಹಕಾರ, ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಪರ್ಕ ಸೇರಿದಂತೆ ದ್ವಿಪಕ್ಷೀಯ ಸಹಕಾರದ ಸಂಪೂರ್ಣ ಹರವು ಕುರಿತು ಇಬ್ಬರು ಪ್ರಧಾನ ಮಂತ್ರಿಗಳು ಚರ್ಚೆ ನಡೆಸಿದರು. ಪರಿಸರ, ಹವಾಮಾನ ಬದಲಾವಣೆ, ಸೈಬರ್ ಭದ್ರತೆ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ(ಐಸಿಟಿ), ಬಾಹ್ಯಾಕಾಶ ತಂತ್ರಜ್ಞಾನ, ಹಸಿರು ಇಂಧನ ಮತ್ತು ನೀಲಿ ಆರ್ಥಿಕತೆಯಂತಹ ಹೊಸ ಕ್ಷೇತ್ರಗಳಲ್ಲಿ ಸಹಕಾರ ಹೊಂದಲು ನಾಯಕರು ಒಪ್ಪಿಕೊಂಡರು.

6.ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ವಿವಿಧ ಅಂಶಗಳನ್ನು ಅವರು ಚರ್ಚಿಸಿದರು. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಪರಿಣಾಮ ಮತ್ತು ಜಾಗತಿಕ ಬೆಳವಣಿಗೆಗಳಿಂದ ಎದುರಾದ ಪೂರೈಕೆ ಸರಪಳಿಯ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು, ಉಭಯ ನಾಯಕರು ಈ ಪ್ರದೇಶದ ಸಮೃದ್ಧಿ ಮತ್ತು ಅಭಿವೃದ್ಧಿಗಾಗಿ ಸ್ನೇಹ ಮತ್ತು ಪಾಲುದಾರಿಕೆಯ ಉತ್ಸಾಹದಲ್ಲಿ ಹೆಚ್ಚಿನ ಸಹಯೋಗ ಹೊಂದುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

7.ದ್ವಿಪಕ್ಷೀಯ ಮತ್ತು ಉಪ-ಪ್ರಾದೇಶಿಕ ರೈಲು, ರಸ್ತೆ ಮತ್ತು ಇತರ ಸಂಪರ್ಕ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮಹತ್ವವನ್ನು ಇಬ್ಬರು ನಾಯಕರು ಪ್ರಸ್ತಾಪಿಸಿದರು. ಟೋಂಗಿ-ಅಖೌರಾ ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತನೆ, ರೈಲ್ವೆ ರೋಲಿಂಗ್ ದಾಸ್ತಾನು ಪೂರೈಕೆ, ಬಾಂಗ್ಲಾದೇಶ ರೈಲ್ವೆಯ ಸಿಬ್ಬಂದಿಗೆ ಸಾಮರ್ಥ್ಯ ವೃದ್ಧಿ, ಬಾಂಗ್ಲಾದೇಶ ರೈಲ್ವೆಯ ಸುಧಾರಿತ ಸೇವೆಗಳಿಗೆ ಐಟಿ ಪರಿಹಾರಗಳ ಹಂಚಿಕೆಯಂತಹ ಪ್ರಗತಿಯಲ್ಲಿರುವ  ದ್ವಿಪಕ್ಷೀಯ ಉಪಕ್ರಮಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. ಕೌನಿಯಾ-ಲಾಲ್ಮೊನಿರ್ಹತ್-ಮೊಗಲ್ಘಾಟ್-ಹೊಸ ಗಿಟಾಲ್ದಾಹಾ ಸಂಪರ್ಕ, ಹಿಲಿ ಮತ್ತು ಬಿರಾಂಪುರ ನಡುವೆ ಸಂಪರ್ಕ  ಸ್ಥಾಪಿಸುವುದು, ಬೆನಾಪೋಲ್-ಜಶೋರ್ ಮಾರ್ಗದ ಉದ್ದಕ್ಕೂ ಮಾರ್ಗ ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳು ಮತ್ತು ರೈಲು ನಿಲ್ದಾಣಗಳ ಉನ್ನತೀಕರಣ, ಬುರಿಮರಿ ಮತ್ತು ಚಂಗ್ರಬಂಧ ನಡುವಿನ ಸಂಪರ್ಕ ಮರುಸ್ಥಾಪನೆ ಮತ್ತಿತರ ಹೊಸ ಉಪಕ್ರಮಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. ಸಿರಾಜ್‌ಗಂಜ್ ಮತ್ತಿತರ ಕಡೆ  ಕಂಟೈನರ್ ಡಿಪೋ ನಿರ್ಮಾಣ ಮತ್ತು ದ್ವಿಪಕ್ಷೀಯ ಅಭಿವೃದ್ಧಿ ಸಹಕಾರದ ಅಡಿ, ಈ ಯೋಜನೆಗಳಿಗೆ ಹಣಕಾಸು ಸಾಧನಗಳ ಶ್ರೇಣಿಯ ಮೂಲಕ ಆರ್ಥಿಕ ಸಂಪನ್ಮೂಲ ಅನ್ವೇಷಿಸಲು ಉಭಯ ನಾಯಕರು  ಒಪ್ಪಿಗೆ ಸೂಚಿಸಿದರು. ಅನುದಾನದಲ್ಲಿ 20 ಬ್ರಾಡ್-ಗೇಜ್ ಡೀಸೆಲ್ ಲೋಕೊಮೋಟಿವ್(ಇಂಜಿನ್‌)ಗಳನ್ನು ಒದಗಿಸುವ ಭಾರತದ ಇಂಗಿತವನ್ನು ಬಾಂಗ್ಲಾದೇಶ ಸ್ವಾಗತಿಸಿತು.

8.ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರ ಬೆಳವಣಿಗೆಯನ್ನು ಶ್ಲಾಘಿಸಿದರು. ಏಷ್ಯಾದಲ್ಲಿ ಬಾಂಗ್ಲಾದೇಶಕ್ಕೆ ಭಾರತವು ಅತಿದೊಡ್ಡ ರಫ್ತು ತಾಣವಾಗಿ ಹೊರಹೊಮ್ಮುತ್ತಿದೆ. ಭಾರತದಿಂದ ಅಕ್ಕಿ, ಗೋಧಿ, ಸಕ್ಕರೆ, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯಂತಹ ಅಗತ್ಯ ಆಹಾರ ಪದಾರ್ಥಗಳನ್ನು ಸಮರ್ಪಕ ಪ್ರಮಾಣದಲ್ಲಿ ಪೂರೈಕೆ ಮಾಡುವಂತೆ ಬಾಂಗ್ಲಾದೇಶ, ಭಾರತಕ್ಕೆ ಮನವಿ ಮಾಡಿತು. ಭಾರತದ ಪ್ರಚಲಿತ ಪೂರೈಕೆ ಪರಿಸ್ಥಿತಿಗಳ ಆಧಾರದ ಮೇಲೆ ಬಾಂಗ್ಲಾದೇಶದ ಮನವಿಗಳನ್ನು ಅನುಕೂಲಕರವಾಗಿ ಪರಿಗಣಿಸಲಾಗುವುದು, ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಭಾರತ ಭರವಸೆ ನೀಡಿತು.

9.ಭಾರತ-ಬಾಂಗ್ಲಾದೇಶ ಗಡಿಯ ಶಾಂತಿಯುತ ನಿರ್ವಹಣೆಯು ಹಂಚಿಕೆಯ ಆದ್ಯತೆಯಾಗಿದೆ ಎಂದು ಪ್ರಸ್ತಾಪಿಸಿದ ಉಭಯ ನಾಯಕರು, ತ್ರಿಪುರಾ ವಲಯದಿಂದ ಪ್ರಾರಂಭವಾಗುವ ಫೆನ್ಸಿಂಗ್ ಸೇರಿದಂತೆ ಶೂನ್ಯ ರೇಖೆಯಿಂದ 150 ಯಾರ್ಡ್‌ಗಳ ಒಳಗೆ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಕೆಲಸ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಾಂತಿಯುತ ಮತ್ತು ಅಪರಾಧ-ಮುಕ್ತ ಗಡಿ ನಿರ್ವಹಿಸುವುದು ಇದರ ಉದ್ದೇಶವಾಗಿದೆ.

10.ಗಡಿ ಭಾಗದ ಹಿಂಸಾಚಾರ ಘಟನೆಗಳಿಂದ ಆಗುತ್ತಿದ್ದ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತೃಪ್ತಿ ವ್ಯಕ್ತಪಡಿಸಿದ ನಾಯಕರು, ಈ ಸಂಖ್ಯೆಯನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು. ಶಸ್ತ್ರಾಸ್ತ್ರಗಳು, ಮಾದಕ ದ್ರವ್ಯಗಳು ಮತ್ತು ನಕಲಿ ಕರೆನ್ಸಿಗಳ ಕಳ್ಳಸಾಗಣೆ ವಿರುದ್ಧ ಮತ್ತು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆಯನ್ನು ತಡೆಗಟ್ಟಲು 2 ಗಡಿ ಕಾವಲು ಪಡೆಗಳ ನಿರಂತರ ಪ್ರಯತ್ನಗಳಿಗೆ ಎರಡೂ ಕಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ತೊಡೆದುಹಾಕಲು ತಮ್ಮ ಬಲವಾದ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಗಡಿ ಪ್ರದೇಶ ಮತ್ತು ಅದರಾಚೆಗಿನ ಭಯೋತ್ಪಾದನೆ, ಹಿಂಸಾತ್ಮಕ ಉಗ್ರವಾದ ಮತ್ತು ಮೂಲಭೂತವಾದದ ಹರಡುವಿಕೆ ಎದುರಿಸಲು ಮತ್ತು ಸಮರ್ಥವಾಗಿ ತಡೆಯಲು ತಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಇಬ್ಬರೂ ನಾಯಕರು ನಿರ್ಧರಿಸಿದರು.

11.ಭಾರತ ಮತ್ತು ಬಾಂಗ್ಲಾದೇಶ ಜಂಟಿ ನದಿಗಳ ಆಯೋಗದ (23-25 ಆಗಸ್ಟ್ 2022, ನವದೆಹಲಿ) 38ನೇ ಸಚಿವರ ಸಭೆಯ ಯಶಸ್ಸಿಗೆ ಉಭಯ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. ಉಭಯ ರಾಷ್ಟ್ರಗಳ ನಡುವಿನ ಸಾಮಾನ್ಯ ಗಡಿಯಲ್ಲಿರುವ ನದಿ ಕುಶಿಯಾರಾದಿಂದ ನೀರನ್ನು ಬಳಸುವ ಕುರಿತು ಭಾರತ ಮತ್ತು ಬಾಂಗ್ಲಾದೇಶ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಸ್ವಾಗತಿಸಿದರು. ಬಾಂಗ್ಲಾದೇಶವು ತನ್ನ ನೀರಾವರಿ ಅಗತ್ಯಗಳನ್ನು ಪರಿಹರಿಸಲು ಮತ್ತು ದಕ್ಷಿಣ ಅಸ್ಸಾಂಗೆ ನೀರಿನ ಯೋಜನೆಗಳನ್ನು ಸುಗಮಗೊಳಿಸಲು ಈ ಒಪ್ಪಂದ ಸಹಾಯ ಮಾಡುತ್ತದೆ.

12.ತ್ರಿಪುರಾ ರಾಜ್ಯದ ತುರ್ತು ನೀರಾವರಿ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಫೆನಿ ನದಿಯ ಮೇಲಿನ ಮಧ್ಯಂತರ ನೀರು ಹಂಚಿಕೆ ಒಪ್ಪಂದಕ್ಕೆ ಆದಷ್ಟು ಬೇಗ ಸಹಿ ಹಾಕಲು ಭಾರತ ಮನವಿ ಮಾಡಿತು. ಬಾಂಗ್ಲಾದೇಶವು ಭಾರತದ ಈ ಮನವಿಗೆ ಸ್ಪಂದಿಸಿದೆ.  ತ್ರಿಪುರಾದ ಸಬ್ರೂಮ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಫೆನಿ ನದಿಯಿಂದ 1.82 ಕ್ಯೂಸೆಕ್ ನೀರನ್ನು ಪಡೆಯುವ ಕುರಿತು ಉಭಯ ದೇಶಗಳ ನಡುವೆ ಏರ್ಪಟ್ಟ 2019ರ ತಿಳಿವಳಿಕೆ ಒಪ್ಪಂದದಂತೆ ಭಾರತವು ನೀರು ಸಂಗ್ರಹ ಬಾವಿ(ಇನ್ ಕೇಟ್ ವೆಲ್) ನಿರ್ಮಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಬಾಂಗ್ಲಾದೇಶಕ್ಕೆ ಭಾರತ ಧನ್ಯವಾದಗಳನ್ನು ಅರ್ಪಿಸಿತು.

13.ದ್ವಿಪಕ್ಷೀಯ ಸಂಬಂಧದಲ್ಲಿ ನೀರಿನ ನಿರ್ವಹಣೆಯ ಪ್ರಾಮುಖ್ಯತೆಯನ್ನು ಗುರುತಿಸಿದ ನಾಯಕರು, ದತ್ತಾಂಶ ವಿನಿಮಯಕ್ಕೆ ಆದ್ಯತೆ ನೀಡಲು ಮತ್ತು ಮಧ್ಯಂತರ ನೀರು ಹಂಚಿಕೆ ಒಪ್ಪಂದಗಳ ಮಾರ್ಗಸೂಚಿ ರೂಪಿಸಲು, ಹೆಚ್ಚುವರಿ ನದಿಗಳನ್ನು ಸೇರಿಸುವ ಮೂಲಕ ಸಹಕಾರದ ಪ್ರದೇಶ ವಿಸ್ತರಿಸಲು ಜಂಟಿ ನದಿಗಳ ಆಯೋಗದ ನಿರ್ಧಾರವನ್ನು ಶ್ಲಾಘಿಸಿದರು. ಗಂಗಾನದಿ ನೀರು ಹಂಚಿಕೆ ಒಪ್ಪಂದ, 1996ರ ನಿಬಂಧನೆಗಳ ಅಡಿ, ಬಾಂಗ್ಲಾದೇಶ ಸ್ವೀಕರಿಸಿದ ನೀರಿನ ಮಿತಕಾರಿ ಬಳಕೆಯ ಅಧ್ಯಯನ ನಡೆಸಲು ಜಂಟಿ ತಾಂತ್ರಿಕ ಸಮಿತಿಯ ರಚನೆಯನ್ನು ನಾಯಕರು ಸ್ವಾಗತಿಸಿದರು.

14.ಹಿಂದಿನ ಮಾತುಕತೆಗಳ ಬಗ್ಗೆ ಮೆಲುಕು ಹಾಕಿದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು, ತೀಸ್ತಾ ನದಿ ನೀರಿನ ಹಂಚಿಕೆಯ ಮಧ್ಯಂತರ ಒಪ್ಪಂದ ಮುಕ್ತಾಯಗೊಳಿಸಲು ಬಾಂಗ್ಲಾದೇಶದ ದೀರ್ಘಕಾಲೀನ ಬಾಕಿಯಿರುವ ಮನವಿಯನ್ನು ಪುನರುಚ್ಚರಿಸಿದರು, ಅದರ ಕರಡನ್ನು 2011ರಲ್ಲಿ ಅಂತಿಮಗೊಳಿಸಲಾಗಿದೆ. ನದಿಗಳ ಮಾಲಿನ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಾಮಾನ್ಯ ನದಿಗಳಿಗೆ ಸಂಬಂಧಿಸಿದಂತೆ ನದಿಯ ಪರಿಸರ ಮತ್ತು ನದಿ ಸಂಚಾರವನ್ನು ಸುಧಾರಿಸಲು ಒಟ್ಟಾಗಿ ಕೆಲಸ ಮಾಡುವಂತೆ ಇಬ್ಬರೂ ನಾಯಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

15.ಉಪ-ಪ್ರಾದೇಶಿಕ ಸಹಕಾರ ಹೆಚ್ಚಿಸುವ ಉತ್ಸಾಹದಲ್ಲಿ, ಬಾಂಗ್ಲಾದೇಶದ ಪರ್ಬತಿಪುರದ ಮೂಲಕ, ಕತಿಹಾರ್ (ಬಿಹಾರ)ನಿಂದ ಬೋರ್‌ನಗರ(ಅಸ್ಸಾಂ)ಕ್ಕೆ ಪ್ರಸ್ತಾವಿತ ಹೆಚ್ಚಿನ ಸಾಮರ್ಥ್ಯದ 765 ಕೆವಿ ಪ್ರಸರಣ ಮಾರ್ಗ  ಒಳಗೊಂಡಂತೆ 2 ದೇಶಗಳ ವಿದ್ಯುತ್ ಗ್ರಿಡ್‌ಗಳನ್ನು ಏಕಕಾಲದಲ್ಲಿ ಸಂಪರ್ಕಿಸುವ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಇಬ್ಬರು ನಾಯಕರು ಒಪ್ಪಿಗೆ ಸೂಚಿಸಿದರು. ವಿದ್ಯುತ್ ವಲಯದಲ್ಲಿ ಉಪ-ಪ್ರಾದೇಶಿಕ ಸಹಕಾರ ಬಲಪಡಿಸಲು ಒಪ್ಪಿಗೆ ನೀಡಲಾಯಿತು. ಬಾಂಗ್ಲಾದೇಶವು ಭಾರತದ ಮೂಲಕ ನೇಪಾಳ ಮತ್ತು ಭೂತಾನ್‌ನಿಂದ ವಿದ್ಯುತ್ ಆಮದು ಮಾಡಿಕೊಳ್ಳಲು ಮನವಿ ಮಾಡಿತು. ಇದಕ್ಕಾಗಿ ಮಾರ್ಗಸೂಚಿಗಳು ಈಗಾಗಲೇ ಭಾರತದಲ್ಲಿ ಜಾರಿಯಲ್ಲಿವೆ ಎಂದು ಭಾರತ ಮಾಹಿತಿ ನೀಡಿತು.

16.ಬಾಂಗ್ಲಾದೇಶದ ಇಂಧನ ಬೇಡಿಕೆಗಳನ್ನು ಪರಿಹರಿಸಲು ಕೊಡುಗೆ ನೀಡುವ ಭಾರತ-ಬಾಂಗ್ಲಾದೇಶ ಫ್ರೆಂಡ್ ಶಿಪ್  ಪೈಪ್‌ಲೈನ್‌ನಲ್ಲಿ ಆಗಿರುವ ಪ್ರಗತಿ ಕುರಿತು ಇಬ್ಬರೂ ನಾಯಕರು ಪರಾಮರ್ಶೆ ನಡೆಸಿದರು, ಆದಷ್ಟು ಬೇಗ ಯೋಜನೆ ಪೂರ್ಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಅಗತ್ಯ ಪೂರೈಸಲು ಸಹಾಯ ಮಾಡುವಂತೆ ಬಾಂಗ್ಲಾದೇಶವು ಭಾರತಕ್ಕೆ ಮನವಿ ಮಾಡಿತು. ಎರಡೂ ಕಡೆಯ ಅಧಿಕೃತ ಏಜೆನ್ಸಿಗಳ ನಡುವೆ ಚರ್ಚೆಗೆ ಅನುಕೂಲ ಮಾಡುವುದಾಗಿ ಭಾರತ ಒಪ್ಪಿಗೆ ಸೂಚಿಸಿತು. ಅಸ್ಸಾಂ ಮತ್ತು ಮೇಘಾಲಯದಲ್ಲಿ ವಿನಾಶಕಾರಿ ಪ್ರವಾಹ ಕಾಣಿಸಿಕೊಂಡಾಗ, ಬಾಂಗ್ಲಾದೇಶದ ಮೂಲಕ ಅಸ್ಸಾಂನಿಂದ ತ್ರಿಪುರಾಕ್ಕೆ ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕೆಂಟ್‌ಗಳ ಸಾಗಣೆಗೆ ಅವಕಾಶ ಕಲ್ಪಿಸಿದ ಬಾಂಗ್ಲಾದೇಶದ ಸಮಯೋಚಿತ ಬೆಂಬಲವನ್ನು ಭಾರತ ಶ್ಲಾಘಿಸಿದೆ. ಬಾಂಗ್ಲಾದೇಶಕ್ಕೆ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ನೋಂದಾಯಿತ ಜಿ2ಜಿ ಪೂರೈಕೆದಾರನಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅನ್ನು ಸೇರ್ಪಡೆಗೊಳಿಸುವ ಬಾಂಗ್ಲಾದೇಶದ ನಿರ್ಧಾರವನ್ನು ಭಾರತವು ಸ್ವಾಗತಿಸಿದೆ.

17.ಅಭಿವೃದ್ಧಿ ಪಾಲುದಾರಿಕೆಯಲ್ಲಿ 2 ಕಡೆಯ ಸದೃಢ ಸಹಕಾರಕ್ಕೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಅಭಿವೃದ್ಧಿ ಉದ್ದೇಶದ ನಿಧಿಗಳನ್ನು ವಿತರಿಸಿದ ಭಾರತದ ದಕ್ಷತೆಯನ್ನು ಬಾಂಗ್ಲಾದೇಶ  ಶ್ಲಾಘಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ನಿಧಿಯ ವಿತರಣೆಯಲ್ಲಿ  ಭಾರತ ಉನ್ನತ ಅಭಿವೃದ್ಧಿ ಪಾಲುದಾರ ರಾಷ್ಟ್ರವಾಗಿದೆ.

18.ಚಟ್ಟೋಗ್ರಾಮ್ ಮತ್ತು ಮೊಂಗ್ಲಾ ಬಂದರುಗಳ ಬಳಕೆ ಒಪ್ಪಂದ(ಎಸಿಎಂಪಿ)ದ ಅಡಿ, ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಇಬ್ಬರು ನಾಯಕರು ಸ್ವಾಗತಿಸಿದರು, ಶೀಘ್ರವೇ ಅದರ ಸಂಪೂರ್ಣ ಕಾರ್ಯಾಚರಣೆ ಎದುರು ನೋಡುತ್ತಿರುವುದಾಗಿ ಅವರು ಹೇಳಿದರು. ಮೂರನೇ ದೇಶದ ಆಮದು-ರಫ್ತು(ಎಕ್ಸಿಮ್) ಸರಕುಗಳನ್ನು 2015ರ ದ್ವಿಪಕ್ಷೀಯ ಕರಾವಳಿ ಶಿಪ್ಪಿಂಗ್ ಒಪ್ಪಂದಕ್ಕೆ ಸೇರಿಸಿ, ಒಡಂಬಡಿಕೆ ವಿಸ್ತರಿಸುವ ಕಾರ್ಯಕ್ಕೆ ಭಾರತ ತನ್ನ ಮನವಿ ಪುನರುಚ್ಚರಿಸಿತು. ಉಭಯ ದೇಶಗಳ ನಡುವೆ ನೇರ ಹಡಗು ಸಂಪರ್ಕವನ್ನು ತ್ವರಿತವಾಗಿ ಅನ್ವೇಷಿಸಲು ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.  ಒಳನಾಡಿನ ಜಲ ಸಾರಿಗೆ ಮತ್ತು ವ್ಯಾಪಾರ ಮಾರ್ಗಗಳು 5 ಮತ್ತು 6 (ಧುಲಿಯನ್‌ನಿಂದ ರಾಜ್‌ಶಾಹಿವರೆಗೆ -ಅರಿಚಾವರೆಗೆ ವಿಸ್ತರಣೆ) ಹಾಗೂ 9 ಮತ್ತು 10 (ದೌಡ್‌ಕಂಡಿಯಿಂದ ಸೋನಮುರಾ) ಶಿಷ್ಟಾಚಾರದ ಅಡಿ, ನದಿ ಸೇವೆಗಳನ್ನು ಪ್ರಾರಂಭಿಸುವ ನಿರ್ಧಾರವನ್ನು ಜಾರಿಗೆ ತರಲು ಅವರು ಒಪ್ಪಿಕೊಂಡರು. ತ್ರಿಪುರವನ್ನು ಬಾಂಗ್ಲಾದೇಶದೊಂದಿಗೆ ಸಂಪರ್ಕ ಕಲ್ಪಿಸುವ ಫೆನಿ ನದಿಯ ಮೇಲಿನ ಮೈತ್ರಿ ಸೇತುವೆಯ ಕಾರ್ಯಾಚರಣೆ ಆರಂಭಕ್ಕೆ ಉಳಿದಿರುವ ಮೂಲಸೌಕರ್ಯ, ವಲಸೆ ಮತ್ತು ಕಸ್ಟಮ್ಸ್ ಸೌಲಭ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಬಾಂಗ್ಲಾದೇಶಕ್ಕೆ ಭಾರತ ಮನವಿ ಮಾಡಿತು.

19.ಬಾಂಗ್ಲಾದೇಶ, ಭೂತಾನ್, ಇಂಡಿಯಾ ಮತ್ತು ನೇಪಾಳ(ಬಿಬಿಐಎನ್) ನಡುವಿನ ಮೋಟಾರು ವಾಹನ ಒಪ್ಪಂದದ ಆರಂಭಿಕ ಕಾರ್ಯಾಚರಣೆಯ ಮೂಲಕ ದ್ವಿಪಕ್ಷೀಯ ಮತ್ತು ಉಪ-ಪ್ರಾದೇಶಿಕ ಸಂಪರ್ಕ ಸುಧಾರಿಸುವ ಪ್ರಯತ್ನಗಳನ್ನು ತ್ವರಿತಗೊಳಿಸಲು ಇಬ್ಬರು ನಾಯಕರು ಒಪ್ಪಿಕೊಂಡರು. ಪಶ್ಚಿಮ ಬಂಗಾಳದ ಹಿಲಿಯಿಂದ ಬಾಂಗ್ಲಾದೇಶದ ಮೂಲಕ ಮೇಘಾಲಯದ ಮಹೇಂದ್ರ ಗಂಜ್‌ವರೆಗಿನ ಹೆದ್ದಾರಿ ಸೇರಿದಂತೆ ಹೊಸ ಉಪ-ಪ್ರಾದೇಶಿಕ ಸಂಪರ್ಕ ಯೋಜನೆಗಳನ್ನು ಪ್ರಾರಂಭಿಸಲು ಸಹಕಾರ ನೀಡುವಂತೆ ಭಾರತ, ಬಾಂಗ್ಲಾದೇಶಕ್ಕೆ ಮನವಿ ಮಾಡಿತು. ಈ ನಿಟ್ಟಿನಲ್ಲಿ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಪ್ರಸ್ತಾಪಿಸಿದರು. ಅದೇ ಉತ್ಸಾಹದಲ್ಲಿ ಬಾಂಗ್ಲಾದೇಶವು, ಪ್ರಗತಿಯಲ್ಲಿರುವ ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ ಯೋಜನೆಯ ಉಪಕ್ರಮದಲ್ಲಿ ಪಾಲುದಾರರಾಗಲು ತನ್ನ ಉತ್ಸುಕತೆ ಪುನರುಚ್ಚರಿಸಿತು.

20.ನಿರ್ದಿಷ್ಟ ಭೂ ಕಸ್ಟಮ್ಸ್ ಸ್ಟೇಷನ್‌ಗಳು, ವಿಮಾನ ನಿಲ್ದಾಣಗಳು, ಬಂದರುಗಳ ಮೂಲಕ ತೃತೀಯ ರಾಷ್ಟ್ರಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡಲು ಬಾಂಗ್ಲಾದೇಶಕ್ಕೆ ತನ್ನ ಭೂಪ್ರದೇಶದ ಮೂಲಕ ಉಚಿತ ಸಾರಿಗೆ ನೀಡಿದೆ ಎಂದು ಭಾರತ ಮಾಹಿತಿ ನೀಡಿದೆ. ಈ ನಿಟ್ಟಿನಲ್ಲಿ, ಬಾಂಗ್ಲಾದೇಶದ ಉದ್ಯಮ ಸಮುದಾಯ ತೃತೀಯ ರಾಷ್ಟ್ರಗಳಿಗೆ ತನ್ನ ಸರಕುಗಳನ್ನು ಸಾಗಿಸಲು ತನ್ನ ಬಂದರು ಮೂಲಸೌಕರ್ಯವನ್ನು ಬಳಸಿಕೊಳ್ಳುವಂತೆ ಭಾರತ ಆಹ್ವಾನ ನೀಡಿತು. ಭಾರತವು ತನ್ನ ಉತ್ಪನ್ನಗಳನ್ನು ನೇಪಾಳ ಮತ್ತು ಭೂತಾನ್‌ಗೆ ರಫ್ತು ಮಾಡಲು ಬಾಂಗ್ಲಾದೇಶಕ್ಕೆ ಉಚಿತ ಸಾರಿಗೆ  ಒದಗಿಸುತ್ತಿದೆ. ಹೊಸದಾಗಿ ಉದ್ಘಾಟನೆಗೊಂಡ ಚಿಲಹಟಿ - ಹಲ್ದಿಬರಿ ಮಾರ್ಗದ ಮೂಲಕ ಭೂತಾನ್‌ನೊಂದಿಗೆ ರೈಲು ಸಂಪರ್ಕ ಬಳಸಲು ಅವಕಾಶ ಕಲ್ಪಿಸುವಂತೆ ಬಾಂಗ್ಲಾದೇಶ ಭಾರತಕ್ಕೆ ಕೋರಿತು. ಅದರ ಕಾರ್ಯಸಾಧ್ಯತೆಯ ಆಧಾರದ ಮೇಲೆ ಮನವಿ ಪರಿಗಣಿಸುವುದಾಗಿ ಭಆರತ ತಿಳಿಸಿದೆ. ಚಿಲಾಹಟಿ - ಹಲ್ದಿಬರಿ ಕ್ರಾಸಿಂಗ್‌ನಲ್ಲಿ ಗಡಿಯಾಚೆಗಿನ ರೈಲು ಸಂಪರ್ಕಗಳನ್ನು ಕಾರ್ಯಸಾಧ್ಯವಾಗುವಂತೆ ಮಾಡಲು, ಬಂದರು ನಿರ್ಬಂಧಗಳನ್ನು ತೆಗೆದುಹಾಕುವಂತೆ ಭಾರತ, ಬಾಂಗ್ಲಾದೇಶಕ್ಕೆ ಮನವಿ ಮಾಡಿತು.

21.ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಎರಡೂ ದೇಶಗಳಿಗೆ ಪ್ರಯೋಜನಕಾರಿ ಎಂದು ಇತ್ತೀಚಿಗೆ ಶಿಫಾರಸು ಮಾಡಿದ ಜಂಟಿ ಕಾರ್ಯಸಾಧು ಅಧ್ಯಯನವನ್ನು ಇಬ್ಬರು ನಾಯಕರು ಸ್ವಾಗತಿಸಿದರು. 2022ರ ಕ್ಯಾಲೆಂಡರ್ ವರ್ಷದಲ್ಲೇ ಸಂಧಾನ ಮಾತುಕತೆಗಳನ್ನು ಪ್ರಾರಂಭಿಸಲು ಮತ್ತು ಬಾಂಗ್ಲಾದೇಶ ಕನಿಷ್ಠ  ಅಭಿವೃದ್ಧಿ ಹೊಂದಿದ ದೇಶ(ಎಲ್ ಡಿಸಿ)ದ ಸ್ಥಾನಮಾನದಿಂದ ಮೇಲೇರುವ ಸಮಯದಲ್ಲೇ ಅವುಗಳನ್ನು ಪೂರ್ಣಗೊಳಿಸಲು ಅವರು ಎರಡೂ ಕಡೆಯ ವ್ಯಾಪಾರ ವಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

22.ಉಭಯ ದೇಶಗಳ ನಡುವಿನ ವ್ಯಾಪಾರ ಸುಗಮಗೊಳಿಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ನಾಯಕರು, ಭೂ ಕಸ್ಟಮ್ಸ್ ಸ್ಟೇಷನ್‌ಗಳು, ಲ್ಯಾಂಡ್ ಪೋರ್ಟ್‌ಗಳಲ್ಲಿ ಮೂಲಸೌಕರ್ಯ ಉನ್ನತೀಕರಣ ಮತ್ತು ಉನ್ನತ ದರ್ಜೆಯ ಸೌಲಭ್ಯಗಳನ್ನು ಒದಗಿಸುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು. ಕಸ್ಟಮ್ ಕೇಂದ್ರಗಳಲ್ಲಿ, ಗುರುತಿಸಲಾದ ಭೂಮಿಯಲ್ಲಿ ಬಂದರು ನಿರ್ಬಂಧಗಳು ಮತ್ತು ಇತರ ಸುಂಕರಹಿತ ಅಡೆತಡೆಗಳನ್ನು ತೆಗೆದುಹಾಕುವುದು ಅಗತ್ಯ ಎಂದು ಪ್ರತಿಪಾದಿಸಿದರು. ಭಾರತದ ಈಶಾನ್ಯ ರಾಜ್ಯಗಳ ಗಡಿಯಲ್ಲಿ ಅಗರ್ತಲಾ-ಅಖೌರಾದಿಂದ ಇಂಟೆಗ್ರೇಟೆಡ್ ಚೆಕ್ ಪೋಸ್ಟ್ ಪ್ರಾರಂಭಿಸಿ, ಸುಲಭವಾಗಿ ಮಾರುಕಟ್ಟೆ ಪ್ರವೇಶಕ್ಕೆ ಅನುವು ಕಲ್ಪಿಸುವ ಜತೆಗೆ, ಬಂದರು ನಿರ್ಬಂಧಗಳನ್ನು ತೊಡೆದುಹಾಕಬೇಕು ಎಂದು ಭಾರತ ಮನವಿಯನ್ನು ಪುನರುಚ್ಚರಿಸಿತು. ಪೆಟ್ರಾಪೋಲ್-ಬೆನಾಪೋಲ್ ಇಂಟೆಗ್ರೇಟೆಡ್ ಚೆಕ್ ಪೋಸ್ಟ್ ನಲ್ಲಿ 2ನೇ ಸರಕು ಸಾಗಣೆ ಗೇಟ್‌ನ ಅಭಿವೃದ್ಧಿಗೆ ಹಣ ನೀಡುವ ಭಾರತದ ಪ್ರಸ್ತಾವನೆಯಲ್ಲಿ ಮಾಡಿದ ಪ್ರಗತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

23.ಉಭಯ ನಾಯಕರು ದ್ವಿಪಕ್ಷೀಯ ರಕ್ಷಣಾ ಸಂಬಂಧ ವಲವರ್ಧನೆಗೆ ತೃಪ್ತಿ ವ್ಯಕ್ತಪಡಿಸಿದರು. ರಕ್ಷಣಾ ವಲಯದ ಸಾಲ ಸೌಲಭ್ಯ ಯೋಜನೆಗಳನ್ನು ಆದಷ್ಟು ಬೇಗ ಅಂತಿಮಗೊಳಿಸಲು ಒಪ್ಪಿಗೆ ಸೂಚಿಸಿದರು. ಇದು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ಬಾಂಗ್ಲಾದೇಶ ಸಶಸ್ತ್ರ ಪಡೆಗಳಿಗೆ ವಾಹನಗಳ ಆರಂಭಿಕ ಖರೀದಿ ಯೋಜನೆಗಳನ್ನು ಸುಗಮಗೊಳಿಸಿರುವುದನ್ನು ಭಾರತ ಸ್ವಾಗತಿಸಿದೆ, ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸಲು ಎದುರು ನೋಡುತ್ತಿದೆ. ಹೆಚ್ಚಿನ ಕಡಲ ಭದ್ರತೆಗಾಗಿ ಕರಾವಳಿ ರಾಡಾರ್ ವ್ಯವಸ್ಥೆ  ಒದಗಿಸುವ 2019ರ ತಿಳಿವಳಿಕೆ ಪತ್ರ ಅಥವಾ ಒಡಂಬಡಿಕೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸುವಂತೆ ಭಾರತ ಮನವಿ ಪುನರುಚ್ಚರಿಸಿತು.

24.ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ಲಸಿಕೆ ಮೈತ್ರಿ ಮತ್ತು ಬಾಂಗ್ಲಾದೇಶಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ, ಬಾಂಗ್ಲಾದೇಶದ ಔಷಧಗಳನ್ನು ಭಾರತಕ್ಕೆ ಉಡುಗೊರೆಯಾಗಿ ನೀಡಿಕೆ ಸೇರಿದಂತೆ ಉಭಯ ದೇಶಗಳ ನಡುವಿನ ನಿಕಟ ಸಹಕಾರವನ್ನು ಸ್ವಾಗತಿಸಿದ ಉಭಯ ನಾಯಕರು, ಜನರ-ಜನರ ನಡುವಿನ ಸಂಬಂಧವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ರೈಲು, ರಸ್ತೆ, ವೈಮಾನಿಕ ಮತ್ತು ಜಲಮಾರ್ಗಗಳ ಸಂಪರ್ಕ ಪುನಾರಂಭದ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಭಾರತವು ಹೆಚ್ಚಿನ ರಸ್ತೆ ಮತ್ತು ರೈಲು ಮಾರ್ಗಗಳಲ್ಲಿ ವಲಸೆ ಚೆಕ್ ಪೋಸ್ಟ್‌ ಸೌಲಭ್ಯಗಳನ್ನು ಪುನಃ ತೆರೆದಿವುದನ್ನು ಬಾಂಗ್ಲಾದೇಶ ಸ್ವಾಗತಿಸಿತು. ಸಂಚಾರಕ್ಕೆ ಅನುಕೂಲವಾಗುವಂತೆ ಎಲ್ಲಾ ಲ್ಯಾಂಡ್ ಪೋರ್ಟ್‌ಗಳು, ಇಂಟೆಗ್ರೇಟೆಡ್ ಚೆಕ್ ಪೋಸ್ಟ್ ಗಳಲ್ಲಿ ಪೂರ್ವ-ಕೋವಿಡ್ ಮಟ್ಟಕ್ಕೆ ವಲಸೆ ಸೌಲಭ್ಯಗಳನ್ನು ಮರುಸ್ಥಾಪಿಸುವಂತೆ ಅದು ಭಾರತಕ್ಕೆ ಮನವಿ ಮಾಡಿತು.  2022 ಜೂನ್ ನಿಂದ ಭಾರತ-ಬಾಂಗ್ಲಾದೇಶ ನಡುವಿನ 3ನೇ ಪ್ರಯಾಣಿಕ ರೈಲು ಮಿತಾಲಿ ಎಕ್ಸ್‌ಪ್ರೆಸ್‌ ನಿಯಮಿತ ಸೇವೆಗಳನ್ನು ಪ್ರಾರಂಭಿಸಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

25.ಬಂಗಬಂಧು (ಮುಜೀಬ್: ದಿ ಮೇಕಿಂಗ್ ಆಫ್ ಎ ನೇಷನ್) ಕುರಿತು ಜಂಟಿಯಾಗಿ ನಿರ್ಮಿಸಲಾದ ಚಲನಚಿತ್ರದ ಆರಂಭಿಕ ಬಿಡುಗಡೆಗಾಗಿ ಎದುರು ನೋಡುತ್ತಿರುವುದಾಗಿ ಇಬ್ಬರೂ ನಾಯಕರು ತಿಳಿಸಿದರು. ಬಾಂಗ್ಲಾದೇಶದ ಮುಜೀಬ್ ನಗರದಿಂದ ಐತಿಹಾಸಿಕ ರಸ್ತೆಯಾದ "ಶಾಧಿನೋಟಾ ಶೋರೋಕ್"ನಿಂದ ಭಾರತ-ಬಾಂಗ್ಲಾದೇಶದ ಗಡಿ ಭಾಗ ಪಶ್ಚಿಮ ಬಂಗಾಳದ ನಾಡಿಯಾವರೆಗೆ ಕಾರ್ಯಾಚರಣೆ ಹಾಗೂ 1971ರ ಬಾಂಗ್ಲಾದೇಶದ ವಿಮೋಚನಾ ಯುದ್ಧ ಕುರಿತ ಸಾಕ್ಷ್ಯಚಿತ್ರ ನಿರ್ಮಾಣ ಸೇರಿದಂತೆ ಇತರ ಉಪಕ್ರಮಗಳ ಅನುಷ್ಠಾನಕ್ಕೆ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದರು.  1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಅಪರೂಪದ ವೀಡಿಯೊ ತುಣುಕಿನ ಜಂಟಿ ಸಂಕಲನ ಹೊರತರುವ ಇಂಗಿತವನ್ನು ಬಾಂಗ್ಲಾದೇಶ ಪ್ರಸ್ತಾಪಿಸಿತು. ಭಾರತದ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಂಗಬಂಧು ಪೀಠದ ಸ್ಥಾಪಿಸಿರುವುದಕ್ಕೆ ಬಾಂಗ್ಲಾದೇಶ ಮೆಚ್ಚುಗೆ ವ್ಯಕ್ತಪಡಿಸಿದೆ.

26.ಉಭಯ ದೇಶಗಳ ನಡುವೆ ನಾವೀನ್ಯದ ಪಾಲುದಾರಿಕೆ ಉತ್ತೇಜಿಸಲು, ಬಾಂಗ್ಲಾದೇಶದ ಸ್ಟಾರ್ಟಪ್ ಮೊದಲ ನಿಯೋಗದ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಉಭಯ ನಾಯಕರು ತಿಳಿಸಿದರು. ಮುಂಬರುವ ತಿಂಗಳುಗಳಲ್ಲಿ ಯುವ ವಿನಿಮಯ ಕೇಂದ್ರಗಳನ್ನು ಪುನಾರಂಭಿಸುವ ಬಗ್ಗೆ ಎರಡೂ ರಾಷ್ಟ್ರಗಳು ತೃಪ್ತಿ ವ್ಯಕ್ತಪಡಿಸಿದವು. ಭಾರತದಲ್ಲಿನ ವೈದ್ಯಕೀಯ ಸೌಲಭ್ಯಗಳಲ್ಲಿ ಬಾಂಗ್ಲಾದೇಶದ ಮುಕ್ತಿಜೋಧ(ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸದಸ್ಯರು)ಗಳಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವ ಭಾರತದ ಉಪಕ್ರಮಕ್ಕೆ ಬಾಂಗ್ಲಾದೇಶ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದೆ.

27.ಕರಾವಳಿ ಭಾಗದ ದಟ್ಟಾರಣ್ಯ ಮತ್ತು ಈ ಪರಿಸರ ವ್ಯವಸ್ಥೆಯನ್ನು ಅವಲಂಬಿಸಿರುವ ಜನರು ಸುಸ್ಥಿರವಾಗಿ ಬದುಕುವಂತೆ ಅನುವು ಕಲ್ಪಿಸಲು, ಶೀಘ್ರವೇ ಜಂಟಿ ಕಾರ್ಯಕಾರಿ ಗುಂಪಿನ ಸಭೆ(ಜೆಡಬ್ಲ್ಯುಜಿ) ಆಯೋಜಿಸುವುದು ಸೇರಿದಂತೆ 'ಸುಂದರ ವನಗಳ ಸಂರಕ್ಷಣೆ' ಕುರಿತಾದ 2011ರ ತಿಳಿವಳಿಕೆ ಒಪ್ಪಂದದ ಪರಿಣಾಮಕಾರಿ ಅನುಷ್ಠಾನಕ್ಕೆ ನಾಯಕರು ಒತ್ತು ನೀಡಿದರು.

28.ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ಪ್ರಾಮುಖ್ಯತೆಗೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದರು. ಬಾಹ್ಯಾಕಾಶದ ಶಾಂತಿಯುತ ಬಳಕೆ, ಹಸಿರು ಇಂಧನ, ಪರಮಾಣು ಶಕ್ತಿಯ ಶಾಂತಿಯುತ ಬಳಕೆ ಹಣಕಾಸು, ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ತಂತ್ರಜ್ಞಾನ ಸಕ್ರಿಯಗೊಳಿಸಿದ ಸೇವೆಗಳ ವಲಯಗಳಲ್ಲಿ ಸಹಕಾರ ಹೆಚ್ಚಿಸಲು ಎರಡೂ ಕಡೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

29.ಪ್ರಾದೇಶಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ, ಮ್ಯಾನ್ಮಾರ್‌ನ ರಾಖೈನ್ ರಾಜ್ಯದಿಂದ ಬಲವಂತವಾಗಿ ಸ್ಥಳಾಂತರಗೊಂಡ ಲಕ್ಷಾಂತರ ಜನರಿಗೆ ಆಶ್ರಯ ಮತ್ತು ಮಾನವೀಯ ನೆರವು ನೀಡುವಲ್ಲಿ ಬಾಂಗ್ಲಾದೇಶದ ಉದಾರತೆಗೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿತು. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಎರಡನ್ನೂ ಬೆಂಬಲಿಸುವ ತನ್ನ ನಿರಂತರ ಬದ್ಧತೆಯನ್ನು ಅದು ಒತ್ತಿ ಹೇಳಿತು. ಬಲವಂತವಾಗಿ ಸ್ಥಳಾಂತರಗೊಂಡ ಈ ಜನರು ತಮ್ಮ ತಾಯ್ನಾಡಿಗೆ ಸುರಕ್ಷಿತವಾಗಿ, ಸುಸ್ಥಿರವಾಗಿ ಮತ್ತು ತ್ವರಿತವಾಗಿ ಹಿಂದಿರುವುದನ್ನು  ಖಚಿತಪಡಿಸಿಕೊಳ್ಳುವ ಪ್ರಯತ್ನ ಮುಂದುವರಿಸುವುದಾಗಿ ಭಾರತ ತನ್ನ ಬದ್ಧತೆ ಪುನರುಚ್ಚರಿಸಿತು.

30.ಪ್ರಾದೇಶಿಕ ಸಂಸ್ಥೆಗಳ ಮೂಲಕ ಪ್ರಾದೇಶಿಕ ಸಹಕಾರ ಬಲಪಡಿಸಲು ಕೆಲಸ ಮಾಡುವ ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಬಿಮ್ ಸ್ಟೆಕ್ ಸಮ್ಮೇಳನ ಆಯೋಜನೆ ಮತ್ತು ಮತ್ತು ಅದರ ಮೂಲಸೌಕರ್ಯ ಅಭಿವೃದ್ಧಿಪಡಿಸಿದ ಬಾಂಗ್ಲಾದೇಶದ ಕೊಡುಗೆಯನ್ನು ಭಾರತ ಶ್ಲಾಘಿಸಿದೆ. ಇಂಡಿಯನ್ ಓಷನ್ ರಿಮ್ ಅಸೋಸಿಯೇಷನ್ (IORA) ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಾಂಗ್ಲಾದೇಶಕ್ಕೆ ಭಾರತ ತನ್ನ ಬೆಂಬಲ ಪುನರುಚ್ಚರಿಸಿತು.

31.ಬಾಂಗ್ಲಾ ಪ್ರಧಾನಿ ಭೇಟಿ ಸಂದರ್ಭದಲ್ಲಿ ಈ ಕೆಳಗಿನ ತಿಳಿವಳಿಕೆ ಒಪ್ಪಂದಗಳು ಮತ್ತು ಒಡಂಬಡಿಕೆಗಳಿಗೆ ಸಹಿ ಹಾಕಿ, ವಿನಿಮಯ ಮಾಡಿಕೊಳ್ಳಲಾಯಿತು:


ಎ.)ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ ಮತ್ತು ಬಾಂಗ್ಲಾದೇಶ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದ ನಡುವೆ ಭಾರತ ಮತ್ತು ಬಾಂಗ್ಲಾದೇಶವು ಸಾಮಾನ್ಯ ಗಡಿ ಭಾಗದ ನದಿ ಕುಶಿಯಾರಾದಿಂದ ನೀರು ಬಳಸಿಕೊಳ್ಳುವ ಕುರಿತಾದ ತಿಳಿವಳಿಕೆ ಪತ್ರ;

ಬಿ.)ಭಾರತದಲ್ಲಿ ಬಾಂಗ್ಲಾದೇಶ ರೈಲ್ವೆ ಸಿಬ್ಬಂದಿಗೆ ತರಬೇತಿ ನೀಡುವ ಕುರಿತು ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ರೈಲ್ವೆ ಮಂಡಳಿ  ಮತ್ತು ಬಾಂಗ್ಲಾದೇಶ ಸರ್ಕಾರದ ರೈಲ್ವೆ ಸಚಿವಾಲಯದ ನಡುವಿನ ತಿಳಿವಳಿಕೆ ಒಪ್ಪಂದ;

ಸಿ.)ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ರೈಲ್ವೆ ಮಂಡಳಿ ಮತ್ತು ಬಾಂಗ್ಲಾದೇಶ ಸರ್ಕಾರದ ರೈಲ್ವೆ ಸಚಿವಾಲಯದ ನಡುವೆ ಬಾಂಗ್ಲಾದೇಶ ರೈಲ್ವೆಗಾಗಿ ಎಫ್ಒಐಎಸ್(ಫ್ರೈಟ್ ಆಪರೇಷನ್ ಇನ್ ಫಾರ್ಮೇಷನ್ ಸಿಸ್ಟಮ್-ಸರಕು ಕಾರ್ಯಾಚರಣೆ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ)ನಂತಹ ಐಟಿ ವ್ಯವಸ್ಥೆ  ಮತ್ತು ಇತರೆ ಐಟಿ ಅಪ್ಲಿಕೇಷನ್ ಸಹಭಾಗಿತ್ವ ಹೊಂದುವ ಕುರಿತ ತಿಳಿವಳಿಕೆ ಒಪ್ಪಂದ;

ಡಿ.)ಭಾರತದ ಕೌನ್ಸಿಲ್ ಫಾರ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಮತ್ತು ಬಾಂಗ್ಲಾದೇಶದ ಬಾಂಗ್ಲಾದೇಶ ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ನಡುವಿನ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರದ ಕುರಿತಿ ತಿಳಿವಳಿಕೆ ಒಪ್ಪಂದ;

ಇ.)ನ್ಯೂಸ್‌ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಬಾಂಗ್ಲಾದೇಶ ಸ್ಯಾಟಲೈಟ್ ಕಂಪನಿ ಲಿಮಿಟೆಡ್ ನಡುವಿನ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ;

ಎಫ್.) ಪ್ರಸಾರ ಭಾರತಿ ಮತ್ತು ಬಾಂಗ್ಲಾದೇಶ ದೂರದರ್ಶನ ನಡುವಿನ ಪ್ರಸಾರ ಸಹಕಾರದ ತಿಳಿವಳಿಕೆ ಒಪ್ಪಂದ;

ಜಿ.)ಬಾಂಗ್ಲಾದೇಶದ ನ್ಯಾಯಾಂಗ ಅಧಿಕಾರಿಗಳಿಗೆ ಭಾರತದಲ್ಲಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಕುರಿತು ಭಾರತದ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ನಡುವಿನ ತಿಳಿವಳಿಕೆ ಒಪ್ಪಂದ.

32.ಬಾಂಗ್ಲಾ ಪ್ರಧಾನಿ ಭೇಟಿ ಸಂದರ್ಭದಲ್ಲಿ ಈ ಕೆಳಗಿನ ಕಾರ್ಯಕ್ರಮ, ಯೋಜನೆಗಳನ್ನು ಅನಾವರಣಗೊಳಿಸಲಾಗಿದೆ, ಘೋಷಿಸಲಾಗಿದೆ ಮತ್ತು ಬಿಡುಗಡೆ ಮಾಡಲಾಗಿದೆ:

ಎ.)ಬಾಂಗ್ಲಾದೇಶದ ರಾಂಪಾಲ್‌ನ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ಲಾಂಟ್‌ ಘಟಕ-1ರ ಉದ್ಘಾಟನೆ;

ಬಿ.) ರೂಪಶಾ ರೈಲ್ವೆ ಸೇತುವೆ ಉದ್ಘಾಟನೆ;

ಸಿ.)ಖುಲ್ನಾ - ದರ್ಶನ ರೈಲು ಮಾರ್ಗ ಮತ್ತು ಪರ್ಬೋತಿಪುರ್ - ಕೌನಿಯಾ ರೈಲು ಮಾರ್ಗ ನಿರ್ಮಾಣಕ್ಕಾಗಿ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಕನ್ಸಲ್ಟೆನ್ಸಿ ಗುತ್ತಿಗೆ ಒಪ್ಪಂದಗಳಿಗೆ ಸಹಿ ಹಾಕುವ ಘೋಷಣೆ.

ಡಿ.)23 ಭಾರತೀಯ ಭಾಷೆಗಳು ಮತ್ತು ದಕ್ಷಿಣ ಏಷ್ಯಾದ ಇತರೆ 5 ಭಾಷೆಗಳಲ್ಲಿ ಹೊರತಂದಿರುವ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ‘7ನೇ ಮಾರ್ಚ್ ಭಾಷಣ’ದ ಅನುವಾದ ಒಳಗೊಂಡಿರುವ ಕೃತಿಯನ್ನು ಬಾಂಗ್ಲಾ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.

ಇ.)ಅನುದಾನದ ಆಧಾರದ ಮೇಲೆ ಬಾಂಗ್ಲಾದೇಶ ರೈಲ್ವೆಗೆ 20 ಬ್ರಾಡ್ ಗೇಜ್ ಲೋಕೋಮೋಟಿವ್ಸ್(ಇಂಜಿನ್‌ಗಳು) ಕೊಡುಗೆ ಕುರಿತು ಘೋಷಣೆ ಅಥವಾ ಪ್ರಕಟಣೆ.

ಎಫ್.)ಬಾಂಗ್ಲಾದೇಶ ಸರ್ಕಾರದ ರಸ್ತೆ ಮತ್ತು ಹೆದ್ದಾರಿ ಇಲಾಖೆಗೆ ರಸ್ತೆ ನಿರ್ಮಾಣ ಉಪಕರಣಗಳು ಮತ್ತು ಯಂತ್ರೋಪಕರಣಗಳ ಪೂರೈಕೆ ಕುರಿತು ಪ್ರಕಟಣೆ.

33.ಭಾರತ ಸರ್ಕಾರ ಮತ್ತು ಭಾರತೀಯರು ನೀಡಿದ ಆತ್ಮೀಯ ಮತ್ತು ಉದಾರ ಆತಿಥ್ಯಕ್ಕಾಗಿ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಿ ಹಸೀನಾ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಆತ್ಮೀಯ ಆಹ್ವಾನ  ನೀಡಿದರು. ಉಭಯ ನಾಯಕರು ಎಲ್ಲಾ ಹಂತಗಳಲ್ಲಿ ಮತ್ತು ವೇದಿಕೆಗಳಲ್ಲಿ ಪರಸ್ಪರ ಸಂವಾದ  ಮುಂದುವರಿಸಲು ಎದುರು ನೋಡುತ್ತಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government