ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು 2022 ಮಾ.21ರಂದು ಎರಡನೇ ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ. 2020 ಜೂನ್ 4ರಂದು ಉಭಯ ರಾಷ್ಟ್ರಗಳ ನಡುವೆ ಜರುಗಿದ ಚೊಚ್ಚಲ ವರ್ಚುವಲ್ ಶೃಂಗಸಭೆಯಲ್ಲಿ ಎರಡೂ ರಾಷ್ಟ್ರಗಳ ಸಂಬಂಧವನ್ನು ಸಮಗ್ರ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತೀಕರಿಸಲಾಗಿತ್ತು. ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಭಾಗವಾಗಿ, ಮತ್ತಷ್ಟು ಹೆಚ್ಚಿಸುವ ಸಲುವಾಗಿ 2ನೇ ಶೃಂಗಸಭೆ ಜರುಗುತ್ತಿದೆ.
ಮಾ.21ರ ವರ್ಚುವಲ್ ಶೃಂಗಸಭೆಯಲ್ಲಿ ಉಭಯ ನಾಯಕರು, ಚೊಚ್ಚಲ ಶೃಂಗಸಭೆಯ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಅಡಿ ಕೈಗೊಳ್ಳಲಾದ ವಿವಿಧ ಉಪಕ್ರಮಗಳ ಅನುಷ್ಠಾನ ಪ್ರಗತಿ ಕುರಿತು ಪರಾಮರ್ಶೆ ನಡೆಸಲಿದ್ದಾರೆ. ಅಲ್ಲದೆ, ವರ್ಚುವಲ್ ಶೃಂಗಸಭೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿವಿಧ ವಲಯಗಳಲ್ಲಿ ಕೈಗೊಳ್ಳಬಹುದಾದ ಹೊಸ ಉಪಕ್ರಮಗಳು ಮತ್ತು ಸಹಕಾರ ಬಲವರ್ಧನೆ ಕುರಿತು ಸಮಾಲೋಚನೆ ನಡೆಯಲಿದೆ. ಇಬ್ಬರೂ ನಾಯಕರು ವ್ಯಾಪಾರ, ನಿರ್ಣಾಯಕ ಖನಿಜ ಸಂಪತ್ತು, ವಲಸೆ ಮತ್ತು ಚಲನಶೀಲತೆ, ಶಿಕ್ಷಣ ಸೇರಿದಂತೆ ವಿವಿಧ ವಲಯಗಳಲ್ಲಿ ನಿಕಟ ಸಹಕಾರ ಹೊಂದಲು ಮತ್ತು ಮುಕ್ತ ಚರ್ಚೆ ನಡೆಸುವ ನಿರೀಕ್ಷೆ ಇದೆ.
ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚಿಸುತ್ತಾರೆ. ಈ ಶೃಂಗಸಭೆಯು ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹೊಂದಿರುವ ಪ್ರಾಮುಖ್ಯತೆ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಇರುವ ನಿಕಟ ಸಹಕಾರದ ಮೇಲೆ ಬೆಳಕು ಚೆಲ್ಲಲಿದೆ.
ಕೋವಿಡ್ -19 ಸಾಂಕ್ರಾಮಿಕ ಸೋಂಕಿನ ಹೊರತಾಗಿಯೂ, ಎರಡೂ ದೇಶಗಳು ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ, ಸೈಬರ್, ನಿರ್ಣಾಯಕ ಮತ್ತು ಕಾರ್ಯತಂತ್ರದ ವಸ್ತುಗಳು, ನೀರು, ಸಂಪನ್ಮೂಲ ನಿರ್ವಹಣೆ, ಹಾಗೆಯೇ ಸಾರ್ವಜನಿಕ ಆಡಳಿತ ಸೇರಿದಂತೆ ವ್ಯಾಪಕ ಕ್ಷೇತ್ರಗಳಲ್ಲಿ ನಿಕಟ ಸಹಯೋಗ ಮುಂದುವರೆಸುವ ಜತೆಗೆ, ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರ ಸಹಭಾಗಿತ್ವವು ಮುನ್ನಡೆಯ ವೇಗ ಕಾಯ್ದುಕೊಂಡಿದೆ.
2021 ಸೆಪ್ಟೆಂಬರ್ ನಲ್ಲಿ ಕೋವಿಡ್-19 ಸಾಂಕ್ರಾಮಿಕಿ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಜರುಗಿದ ಕ್ವಾಡ್ ನಾಯಕರು(ಚತುರ್ಮುಖ ನಾಯಕರು) ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಕಾಟ್ ಮಾರಿಸನ್ ಅವರು ಮುಖಾಮುಖಿ ಭೇಟಿಯಾಗಿದ್ದರು. ಆ ಸಂದರ್ಭದಲ್ಲೇ ಗ್ಲಾಸ್ಗೊದಲ್ಲಿ ಜರುಗಿದ ಹವಾಮಾನ ಬದಲಾವಣೆಯ ಸಿಒಪಿ-26 ಶೃಂಗಸಭೆಯ ಸೇಪಥ್ಯದಲ್ಲಿ ಉಭಯ ನಾಯಕರು 2021 ನವೆಂಬರ್ ನಲ್ಲಿ ಜಂಟಿಯಾಗಿ ‘ದ್ವೀಪ ರಾಷ್ಟ್ರಗಳಿಗೆ ಚೇತರಿಕಾದಾಯಕ ಮೂಲಸೌಕರ್ಯ’ ಹೆಸರಿನ ಉಪಕ್ರಮ ಅನಾವರಣಗೊಳಿಸಿದ್ದರು.