ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮದ್ ಮುಯಿಝು ಅವರು 7ನೇ ಅಕ್ಟೋಬರ್ 2024ರಂದು ಭೇಟಿಯಾಗಿದ್ದರು. ದ್ವಿಪಕ್ಷೀಯ ಸಂಬಂಧಗಳ ವಿಚಾರವಾಗಿ ವಿಸ್ತೃತವಾಗಿ ಸಮಗ್ರವಾಗಿ ಪರಿಶೀಲಿಸಿದ ಉಭಯ ನಾಯಕರು ಎರಡೂ ದೇಶಗಳ ಜನರ ಒಳಿತಿಗಾಗಿ ಐತಿಹಾಸಿಕವೆನಿಸುವ ಇನ್ನಷ್ಟು ನಿಕಟ ಮತ್ತು ವಿಶೇಷ ಸಂಬಂಧವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಈವರೆಗೆ ಸಾಧಿಸಿದ ಪ್ರಗತಿಯ ಪರಿಶೀಲನೆ ನಡೆಸಿದರು.

2. ಭಾರತದ ಪ್ರಧಾನ ಮಂತ್ರಿಯವರು ಮಾಲ್ಡೀವ್ಸ್‌ನೊಂದಿಗಿನ ಸಂಬಂಧಕ್ಕೆ ಭಾರತವು ತನ್ನ 'ನೆರೆಹೊರೆಯ ಮೊದಲ' ನೀತಿ ಮತ್ತು ʼವಿಷನ್ ಸಾಗರ್ʼ ಅಡಿಯಲ್ಲಿ ಕಲ್ಪಿಸಿರುವ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದರು. ಹಾಗೆಯೇ ಮಾಲ್ಡೀವ್ಸ್‌ನ ಅಭಿವೃದ್ಧಿಯ ಪಯಣ ಮತ್ತು ಆದ್ಯತೆಗಳಲ್ಲಿ ನೆರವಾಗುವಲ್ಲಿನ ಭಾರತದ ಅಚಲ ಬದ್ಧತೆ ಕುರಿತಂತೆಯೂ ಪುನರುಚ್ಚರಿಸಿದರು. ಭಾರತದ ಸಕಾಲಿಕ ತುರ್ತು ಆರ್ಥಿಕ ನೆರವಿಗೆ ಮಾಲ್ಡೀವ್ಸ್‌ನ ಅಧ್ಯಕ್ಷರು ಧನ್ಯವಾದಗಳನ್ನು ಅರ್ಪಿಸಿದರು. ಮುಖ್ಯವಾಗಿ ಮಾಲ್ಡೀವ್ಸ್‌ಗೆ ಆರ್ಥಿಕತೆಯ ನೆರವಿನ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಕಳೆದ ಮೇ ತಿಂಗಳಲ್ಲಿ 100 ದಶಲಕ್ಷ ಅಮೆರಿಕನ್‌ ಡಾಲರ್‌ ಮೌಲ್ಯದ ಖಜಾನೆ ಬಿಲ್‌ಗಳಿಗೆ (ಟಿ- ಬಿಲ್‌) ತನ್ನ ಚಂದಾದಾರಿಕೆಯನ್ನು ಮುಂದುವರಿಸಿದೆ. ಹಾಗೆಯೇ 2024ರ ಸೆಪ್ಟೆಂಬರ್‌ನಲ್ಲಿ ಇನ್ನೊಂದು ವರ್ಷಕ್ಕೆ ನವೀಕರಿಸುವ ಮೂಲಕ ಆರ್ಥಿಕ ಅನುಕೂಲತೆಯನ್ನು ಹೆಚ್ಚಿಸಿ ನೆರವಾಗಿದೆ. ಮಾಲೆಯಲ್ಲಿ 2014ರ ಕಾಣಿಸಿಕೊಂಡಿದ್ದ ಜಲಕ್ಷಾಮ ಹಾಗೂ ಕೋವಿಡ್- 19 ಸಾಂಕ್ರಾಮಿಕ ವೈರಾಣು ಹಾವಳಿ ಸಂದರ್ಭವೂ ಸೇರಿದಂತೆ ಕಳೆದ ದಶಕದಲ್ಲಿ ಭಾರತ ಅಗತ್ಯವಿರುವ ಸಮಯದಲ್ಲೆಲ್ಲಾ ಮಾಲ್ಡೀವ್ಸ್‌ಗೆ ನೆರವಾಗುತ್ತಾ 'ಮೊದಲ ಪ್ರತಿಕ್ರಿಯೆ' ದೇಶವಾಗಿ ನಿರಂತರವಾಗಿ ತಮ್ಮ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

3. ಮಾಲ್ಡೀವ್ಸ್‌ನ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಅವರು ದ್ವಿಪಕ್ಷೀಯ ಕರೆನ್ಸಿ ವಿನಿಮಯದ ಭಾಗವಾಗಿ ಮಾಲ್ಸೀವ್ಸ್‌ ನೀಡಲಿರುವ 400 ದಶಲಕ್ಷ ಅಮೆರಿಕನ್‌ ಡಾಲರ್‌ ಹಣವನ್ನು ಪಡೆದು 30 ಶತಕೋಟಿ ಮೌಲ್ಯದ ಭಾರತೀಯ ಕರೆನ್ಸಿ ನೀಡಲು ಒಪ್ಪಿಗೆ ನೀಡಿ ಬೆಂಬಲವನ್ನು ವಿಸ್ತರಿಸುವ ಭಾರತ ಸರ್ಕಾರದ ನಿರ್ಧಾರಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮುಂದೆಯೂ ಮಾಲ್ಡೀವ್ಸ್‌ನ ಆರ್ಥಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರಕ್ಕೆ ಸೂಕ್ತ ಕ್ರಮಗಳನ್ನು ಜಾರಿಗೊಳಿಸಲು ಸಹ ನಾಯಕರು ಒಪ್ಪಿದ್ದಾರೆ.

4. ದ್ವಿಪಕ್ಷೀಯ ಸಂಬಂಧವನ್ನು ಸಮಗ್ರ ಆರ್ಥಿಕ ಮತ್ತು ಕಡಲ ತೀರದ ಸುರಕ್ಷತೆಯಲ್ಲಿ ಪಾಲುದಾರಿಕೆಯನ್ನು ಸಮಗ್ರವಾಗಿ ಪರಿವರ್ತಿಸುವ ಗುರಿಯೊಂದಿಗೆ ಪರಸ್ಪರ ಸಹಕಾರಕ್ಕಾಗಿ ಹೊಸ ಚೌಕಟ್ಟನ್ನು ರೂಪಿಸಲು ಉಭಯ ರಾಷ್ಟ್ರದವರಿಗೂ ಇದು ಸಕಾಲ ಎಂಬುದಕ್ಕೆ ಸಮ್ಮತಿ ಸೂಚಿಸುವ ಜತೆಗೆ ಅದು ಜನರ-ಕೇಂದ್ರಿತ, ಭವಿಷ್ಯ-ಆಧಾರಿತ ಮತ್ತು ಇಚ್ಛೆಯನ್ನು ಹೊಂದಿದೆ ಎಂಬುದನ್ನು ಪುನರುಚ್ಚರಿಸಿದರು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದನ್ನು ಗಮನದಲ್ಲಿಟ್ಟುಕೊಂಡು ಉಭಯ ನಾಯಕರು ಈ ಕೆಳಕಂಡ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

I. ರಾಜಕೀಯ ಸಂಬಂಧಿತ ವಿಚಾರ ವಿನಿಮಯಗಳು

ನಾಯಕತ್ವ ಮತ್ತು ಸಚಿವರ ಹಂತಗಳಲ್ಲಿನ ವಿಚಾರ ವಿನಿಮಯವನ್ನು ಇನ್ನಷ್ಟು ತೀವ್ರಗೊಳಿಸುವ ಸಲುವಾಗಿ, ಉಭಯ ರಾಷ್ಟ್ರಗಳ ಸಂಸದರು ಮತ್ತು ಸ್ಥಳೀಯ ಸರ್ಕಾರದ ಪ್ರತಿನಿಧಿಗಳ ವಿನಿಮಯವನ್ನು ಸೇರ್ಪಡೆ ಮಾಡಿಕೊಂಡು ವಿಸ್ತರಿಸುವುದು. ಜೊತೆಗೆ, ದ್ವಿಪಕ್ಷೀಯ ಸಂಬಂಧಗಳ ಬೆಳವಣಿಗೆಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಕೊಡುಗೆಯನ್ನು ಗುರುತಿಸಿ, ಉಭಯ ಸಂಸತ್ತುಗಳ ನಡುವೆ ಪರಸ್ಪರ ಸಾಂಸ್ಥಿಕ ಸಹಕಾರವನ್ನು ಸಕ್ರಿಯಗೊಳಿಸುವ ನಿಟ್ಟಿಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ತೀರ್ಮಾನಿಸಿದರು.

II. ಅಭಿವೃದ್ಧಿ ಸಹಕಾರ

ಮಾಲ್ಡೀವ್ಸ್‌ನ ಜನರಿಗೆ ಈಗಾಗಲೇ ಅನುಕೂಲವಾಗುತ್ತಿರುವ ಅಭಿವೃದ್ಧಿ ಪಾಲುದಾರಿಕೆ ಯೋಜನೆಗಳ ಪ್ರಗತಿ ಕಾರ್ಯವನ್ನು ಪರಿಶೀಲಿಸಿ ಪರಿಗಣಿಸಲು ಎರಡೂ ರಾಷ್ಟ್ರದವರು ನಿರ್ಧರಿಸಿದರು.

i. ಬಂದರುಗಳು, ವಿಮಾನ ನಿಲ್ದಾಣಗಳು, ವಸತಿ ಸೌಲಭ್ಯ, ಆಸ್ಪತ್ರೆಗಳು, ರಸ್ತೆಗಳ ಸಂಪರ್ಕ ಜಾಲಗಳು, ಕ್ರೀಡಾ ಸೌಲಭ್ಯಗಳು, ಶಾಲೆಗಳು ಮತ್ತು ನೀರು ಮತ್ತು ಒಳಚರಂಡಿ ವ್ಯವಸ್ಥೆ ಸೇರಿದಂತೆ ಮಾಲ್ಡೀವ್ಸ್‌ನ ಅಗತ್ಯತೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಒಟ್ಟಾಗಿ ಕೆಲಸ ಮಾಡುವುದು;

ii. ವಸತಿ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಮಾಲ್ಡೀವ್ಸ್‌ಗೆ ನೆರವು ನೀಡುವುದು ಹಾಗೂ ಈಗಾಗಲೇ ಭಾರತದ ನೆರವಿನೊಂದಿಗೆ ಕಾರ್ಯಗತವಾಗುತ್ತಿರುವ ಸಮುದಾಯ ವಸತಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ವೇಗ ನೀಡುವುದು;

iii. ಪ್ರಮುಖವಾದ ʼಗ್ರೇಟರ್ ಮಾಲೆ ಸಂಪರ್ಕ ಯೋಜನೆʼಯನ್ನು (ಜಿಎಂಸಿಪಿ) ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡಲು ಹಾಗೂ ವಿಸ್ತರಣೆ ಕಾರ್ಯದ ಭಾಗವಾಗಿ ಥಿಲಾಫುಶಿ ಮತ್ತು ಗಿರಾವಾರು ದ್ವೀಪಗಳ ನಡುವೆ ಸಂಪರ್ಕ ಕಲ್ಪಿಸುವ ಬಗ್ಗೆ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳುವುದು;

iv. ಮಾಲೆ ಬಂದರಿನ ಮೇಲಿನ ದಟ್ಟಣೆಯನ್ನು ತಗ್ಗಿಸಲು ಹಾಗೂ ಮತ್ತು ಥಿಲಾಫುಶಿಯಲ್ಲಿ ಸರಕು ನಿರ್ವಹಣೆ ಸಾಮರ್ಥ್ಯವನ್ನು ಒದಗಿಸಲು ಥಿಲಾಫುಶಿ ದ್ವೀಪದಲ್ಲಿ ಅತ್ಯಾಧುನಿಕ ವಾಣಿಜ್ಯ ಬಂದರಿನ ಅಭಿವೃದ್ಧಿಗೆ ಸಹಕಾರ;

v. ಇಹವಂಧಿಪ್ಪೊಲ್ಹು ಮತ್ತು ಮಾಲ್ಡೀವ್ಸ್‌ನ ಗಾಧೂ ದ್ವೀಪಗಳಲ್ಲಿ ʼಮಾಲ್ಡೀವ್ಸ್ ಎಕನಾಮಿಕ್ ಗೇಟ್‌ವೇʼ ಯೋಜನೆಗೆ ಕೊಡುಗೆ ನೀಡುವ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯಗಳು ಮತ್ತು ಬಂಕರಿಂಗ್ ಸೇವೆಗಳ ಅಭಿವೃದ್ಧಿಗೆ ಸಹಯೋಗವನ್ನು ಗುರುತಿಸುವುದು;

vi. ಭಾರತೀಯ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಹನಿಮಾಧು ಮತ್ತು ಗ್ಯಾನ್ ವಿಮಾನ ನಿಲ್ದಾಣಗಳು ಹಾಗೂ ಮಾಲ್ಡೀವ್ಸ್‌ನ ಇತರ ವಿಮಾನ ನಿಲ್ದಾಣಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಜಂಟಿಯಾಗಿ ಕಾರ್ಯ ನಿರ್ವಹಿಸುವುದು. ಆ ನಿಟ್ಟಿನಲ್ಲಿ, ಎರಡೂ ಕಡೆಯವರು ವಿಮಾನಯಾನ ಸಂಪರ್ಕವನ್ನು ಬಲಪಡಿಸಲು, ಹೂಡಿಕೆ ಆಕರ್ಷಿಸಲು ಮತ್ತು ಈ ವಿಮಾನ ನಿಲ್ದಾಣಗಳ ಸಮರ್ಥ ನಿರ್ವಹಣೆಗಾಗಿ ಸೂಕ್ತ ಕ್ರಮಗಳನ್ನು ವಹಿಸಲು ತೀರ್ಮಾನ.

vii. "ಕೃಷಿ ಆರ್ಥಿಕ ವಲಯ" ಸ್ಥಾಪನೆ ಮತ್ತು ಹಾ ಧಾಲು ಹವಳ ಪ್ರದೇಶದಲ್ಲಿ ಪ್ರವಾಸೋದ್ಯಮ ಸಂಬಂಧಿ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಂಟಿಯಾಗಿ ಕೆಲಸ ಮಾಡಲು ಮತ್ತು ಭಾರತದ ನೆರವಿನೊಂದಿಗೆ ಹಾ ಅಲಿಫು ಹವಳದಲ್ಲಿ ಮತ್ಸ್ಯ  ಸಂಸ್ಕರಣೆ ಮತ್ತು ಕ್ಯಾನಿಂಗ್ ಸೌಲಭ್ಯ ಕಲ್ಪಿಸುವುದು;

viii. ಭಾರತ- ಮಾಲ್ಡೀವ್ಸ್ ಜನಕೇಂದ್ರಿತ ಅಭಿವೃದ್ಧಿ ಪಾಲುದಾರಿಕೆಯನ್ನು ಮಾಲ್ಡೀವ್ಸ್‌ನ ಪ್ರತಿಯೊಂದು ಭಾಗಕ್ಕೂ ಕೊಂಡೊಯ್ಯಲು ಯಶಸ್ವಿ "ಅತ್ಯುನ್ನತ ಪರಿಣಾಮ ಸಮುದಾಯ ಅಭಿವೃದ್ಧಿ ಯೋಜನೆ"ಗಳಿಗೆ (ಹೈ ಇಂಪ್ಯಾಕ್ಟ್ ಕಮ್ಯುನಿಟಿ ಡೆವಲಪ್‌ಮೆಂಟ್‌ ಪ್ರಾಜೆಕ್ಟ್ಸ್‌) ಹೆಚ್ಚುವರಿ ಹಣಕಾಸು ಒದಗಿಸುವ ಮೂಲಕ ಮತ್ತಷ್ಟು ವಿಸ್ತರಣೆಗೆ ಒತ್ತು.

III. ವ್ಯಾಪಾರ ಮತ್ತು ಆರ್ಥಿಕ ಸಹಕಾರ

ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಗೆ ಸಾಧ್ಯವಿರುವ ಬಿಟ್ಟು ಹೋಗಿರುವ ಎಲ್ಲ ಅವಕಾಶಗಳ ಬಳಸಿಕೊಳ್ಳಲು ಉಭಯ ರಾಷ್ಟ್ರದವರ ಸಮ್ಮತಿ:

i. ಉಭಯ ದೇಶಗಳ ನಡುವೆ ಸರಕು ಮತ್ತು ಸೇವೆಗಳ ವ್ಯಾಪಾರದ ಮೇಲೆ ಕೇಂದ್ರೀಕರಿಸುವ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಗಳನ್ನು ಪ್ರಾರಂಭಿಸುವುದು;

ii. ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸಲು ಮತ್ತು ವಿದೇಶಿ ಕರೆನ್ಸಿಗಳ ಮೇಲಿನ ಅವಲಂಬನೆಯನ್ನು ಸಾಧ್ಯವಾದಷ್ಟು ತಗ್ಗಿಸುವ ಗುರಿಯೊಂದಿಗೆ ಸ್ಥಳೀಯ ಕರೆನ್ಸಿಗಳಲ್ಲೇ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ವ್ಯಾಪಾರ ವಹಿವಾಟು ನಡೆಸುವ ವ್ಯವಸ್ಥೆ ತರುವುದು;

iii. ದ್ವಿಪಕ್ಷೀಯ ಹೂಡಿಕೆಗಳಿಗೆ ಉತ್ತೇಜನ ಹಾಗೂ ಎರಡು ವ್ಯಾಪಾರ ಕೇಂದ್ರಗಳು ಹಾಗೂ ಘಟಕಗಳ ನಡುವೆ ನಿಕಟ ವ್ಯವಹಾರಕ್ಕೆ ಉತ್ತೇಜನ; ಹೂಡಿಕೆ ಅವಕಾಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಹಾಗೂ ವ್ಯಾಪಾರ- ವ್ಯವಹಾರವನ್ನು ಇನ್ನಷ್ಟು ಸರಳ- ಸುಲಭಗೊಳಿಸಲು ಕ್ರಮಗಳನ್ನು(ಈಸ್‌ ಆಫ್‌ ಡೂಯಿಂಗ್‌) ತೆಗೆದುಕೊಳ್ಳುವುದು;

iv. ಶೈಕ್ಷಣಿಕ ಸಂಪರ್ಕ ವ್ಯವಸ್ಥೆಗಳ ಸ್ಥಾಪನೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಸಹಕಾರವನ್ನು ವಿಸ್ತರಿಸುವುದು ಸೇರಿದಂತೆ ಕೃಷಿ, ಮೀನುಗಾರಿಕೆ, ಸಮುದ್ರಶಾಸ್ತ್ರ ಮತ್ತು ನೀಲಿ (ಸಾಗರ) ಆರ್ಥಿಕತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಮೂಲಕ ಮಾಲ್ಡೀವ್ಸ್ ತನ್ನ ಆರ್ಥಿಕ ವೈವಿಧ್ಯದ ಪ್ರಯತ್ನಗಳನ್ನು ಬೆಂಬಲಿಸುವುದು;

v. ಮಾರುಕಟ್ಟೆ ವ್ಯವಹಾರದ ಬಗ್ಗೆ ಪ್ರಚಾರ ಮತ್ತು ಸಹಯೋಗದ ಪ್ರಯತ್ನಗಳ ಮೂಲಕ ಉಭಯ ದೇಶಗಳ ನಡುವೆ ಪ್ರವಾಸೋದ್ಯಮ ಉತ್ತೇಜಿಸುವ ಪ್ರಯತ್ನಗಳನ್ನು ವೃದ್ಧಿಸುವುದು.

IV. ಡಿಜಿಟಲ್ ಮತ್ತು ಆರ್ಥಿಕ ಸಹಕಾರ

ಡಿಜಿಟಲ್ ಮತ್ತು ಹಣಕಾಸು ಕ್ಷೇತ್ರದಲ್ಲಿನ ಬೆಳವಣಿಗೆಗಳು ಆಡಳಿತ ಮತ್ತು ಸೇವೆಗಳ ವಿತರಣೆಯ ಮೇಲೆ ಪರಿವರ್ತನೆಯ ಗಂಭೀರ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಎರಡು ಕಡೆಯವರು ಒಪ್ಪಿಕೊಂಡರು:

i. ಸುಧಾರಿತ ಡಿಜಿಟಲ್ ಮತ್ತು ಹಣಕಾಸು ಸೇವೆಗಳ ಅನುಷ್ಠಾನದಲ್ಲಿ ಪರಿಣತಿಯನ್ನು ಹಂಚಿಕೊಳ್ಳುವುದು;

ii. ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ವ್ಯವಸ್ಥೆ, ವಿಶಿಷ್ಟ ಡಿಜಿಟಲ್ ಗುರುತು (ಯುನಿಕ್‌ ಡಿಜಿಟಲ್‌ ಐಡೆಂಟಿಟಿ), ಗತಿ ಶಕ್ತಿ ಯೋಜನೆ ಮತ್ತು ಇತರ ಡಿಜಿಟಲ್ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿನ (ಡಿಪಿಐ)ಸಹಕಾರದಿಂದ ಇ-ಆಡಳಿತ ವ್ಯವಸ್ಥೆ ಇನ್ನಷ್ಟು ವಿಸ್ತರಣೆ ಹಾಗೂ ಮಾಲ್ಡೀವ್ಸ್‌ನ ಜನರಿಗೂ ಡಿಜಿಟಲ್‌ ಮಾಧ್ಯಮಗಳ ಮೂಲಕ
ಸೇವೆಗಳ ವಿತರಣೆಗೆ ಉತ್ತೇಜನ;

iii. ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ಹಣ ಪಾವತಿಯನ್ನು ಸುಗಮ, ಸರಳಗೊಳಿಸುವ ಸಲುವಾಗಿ ಮಾಲ್ಡೀವ್ಸ್‌ನಲ್ಲಿ ರುಪೇ ಕಾರ್ಡ್ ಬಳಕೆಗೆ ಮುಕ್ತಗೊಳಿಸುವುದನ್ನು ಸ್ವಾಗತಿಸುವ ಜತೆಗೆ, ಭಾರತಕ್ಕೆ ಭೇಟಿ ನೀಡುವ ಮಾಲ್ಡೀವ್ಸ್ ಪ್ರಜೆಗಳಿಗೂ ಇದೇ ರೀತಿಯ ಸೇವೆಗಳನ್ನು ವಿಸ್ತರಿಸಲು ನಿಕಟವಾಗಿ ಕೆಲಸ ಮಾಡುವುದು.

V. ಶಕ್ತಿ (ಇಂಧನ) ಸಹಕಾರ

ಸುಸ್ಥಿರ ಅಭಿವೃದ್ಧಿಯನ್ನು ಖಾತರಿಪಡಿಸುವಲ್ಲಿ ಇಂಧನ ಭದ್ರತೆಯ ಪಾತ್ರವೂ ಗಮನಾರ್ಹ. ಹಾಗಾಗಿ ಸೌರಶಕ್ತಿ ಮತ್ತು ಇತರ ನವೀಕರಿಸಬಹುದಾದ ಇಂಧನ ಮತ್ತು ಇಂಧನ ದಕ್ಷತೆಯ ಯೋಜನೆಗಳ ಅನುಷ್ಠಾನದ ಮೂಲಕ ಸಹಕಾರವನ್ನು ಅನ್ವೇಷಿಸಲು ಎರಡೂ ಕಡೆಯವರ ಸಮ್ಮತಿ. ಆ ಮೂಲಕ ಇಂಧನ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಮಾಲ್ಡೀವ್ಸ್ ತನ್ನ ಎನ್‌ಡಿಸಿ  ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುವುದು. ತರಬೇತಿ, ಪರಸ್ಪರ ಭೇಟಿಗಳ ವಿನಿಮಯ, ಜಂಟಿ ಸಂಶೋಧನೆ, ತಾಂತ್ರಿಕ ಪ್ರಾಜೆಕ್ಟ್‌ಗಳು ಮತ್ತು ಹೂಡಿಕೆ ಉತ್ತೇಜನವನ್ನು ಒಳಗೊಂಡಿರುವ ಸಾಂಸ್ಥಿಕ ಪಾಲುದಾರಿಕೆಯ ಚೌಕಟ್ಟನ್ನು ಎರಡೂ ಕಡೆಯವರು ರೂಪಿಸುವುದು.

ಆ ನಿಟ್ಟಿನಲ್ಲಿ ಮುಂದುವರಿದು ಹೇಳುವುದಾದರೆ, ಮಾಲ್ಡೀವ್ಸ್‌ಗೆ "ಒಂದು ಸೂರ್ಯ ಒಂದು ಜಗತ್ತು ಒಂದು ಗ್ರಿಡ್‌ʼ (ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್) ಉಪಕ್ರಮದಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ಕ್ರಮಗಳನ್ನು ಗುರುತಿಸಲು ಎರಡೂ ಕಡೆಯವರು ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳುವುದು.

VI. ಆರೋಗ್ಯ ಸಹಕಾರ

ಉಭಯ ದೇಶದವರ ಸಮ್ಮತಿ:

i. ಭಾರತದಲ್ಲಿನ ಮಾಲ್ಡೀವ್ಸ್‌ನ ಜನರಿಗೆ ಸುರಕ್ಷಿತ, ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ ಚಾಲ್ತಿಯಲ್ಲಿರುವ ಆರೋಗ್ಯ ಸಹಕಾರವನ್ನು ಇನ್ನಷ್ಟು ಸದೃಢಗೊಳಿಸುವುದು. ಭಾರತದಲ್ಲಿನ ಆಸ್ಪತ್ರೆಗಳು ಮತ್ತು ಸೌಲಭ್ಯಗಳ ನಡುವಿನ ಸಂಪರ್ಕ ಜೋಡಣೆಗೆ ಉತ್ತೇಜನ ಮತ್ತು ಮಾಲ್ಡೀವ್ಸ್‌ನಲ್ಲಿ ಆರೋಗ್ಯ- ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ ಆರೋಗ್ಯ ಸೇವೆಗಳ ಸಂಪರ್ಕ, ಸಂವಹನ ವ್ಯವಸ್ಥೆಯನ್ನು ಸುಧಾರಿಸುವುದು;

ii. ಮಾಲ್ಡೀವ್ಸ್ ಸರ್ಕಾರದ ವತಿಯಿಂದ ಭಾರತೀಯ ಫಾರ್ಮಾಕೋಪಿಯಾವನ್ನು ಗುರುತಿಸುವ ನಿಟ್ಟಿನಲ್ಲಿ ಕಾರ್ಯ ನಿವಹಿಸುವುದು. ಹಾಗೆಯೇ, ಮಾಲ್ಡೀವ್ಸ್‌ನಾದ್ಯಂತ ಭಾರತ-ಮಾಲ್ಡೀವ್ಸ್ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿ, ಭಾರತದಿಂದ ಕೈಗೆಟುಕುವ ಮತ್ತು ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುವ ಮೂಲಕ ಮಾಲ್ಡೀವ್ಸ್‌ನ ಆರೋಗ್ಯ ಭದ್ರತಾ ಪ್ರಯತ್ನಗಳಿಗೆ ಕೊಡುಗೆ ನೀಡುವುದು;

iii.  ಮಾಲ್ಡೀವ್ಸ್‌ನಲ್ಲಿನ ಕೇಂದ್ರ ಮತ್ತು ಪ್ರಾದೇಶಿಕ ಮಾನಸಿಕ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಮತ್ತು ನೆರವಿನ ವ್ಯವಸ್ಥೆಗಳನ್ನು ಸುಧಾರಿಸಲು ಒಟ್ಟಾಗಿ ಕೆಲಸ ಮಾಡುವುದು;

iv. ಸುಧಾರಿತ ಕೌಶಲ್ಯ ಮತ್ತು ಜ್ಞಾನ ವೃದ್ಧಿಗೆ ಪೂರಕವಾಗಿ ಆರೋಗ್ಯ ವೃತ್ತಿಪರರಿಗೆ ತರಬೇತಿ ಕಾರ್ಯಕ್ರಮಗಳ ಮೂಲಕ ಸಹಕಾರ ನೀಡುವುದು;

v. ಕ್ಯಾನ್ಸರ್, ಬಂಜೆತನದಂತಹ ಸಮಸ್ಯೆಗಳು ಸೇರಿದಂತೆ ಸಾಮಾನ್ಯ ಆರೋಗ್ಯ ಸವಾಲುಗಳನ್ನು ಎದುರಿಸಲು ಆರೋಗ್ಯ ಸಂಶೋಧನಾ ಉಪಕ್ರಮಗಳಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುವುದು;

vi. ಮಾದಕ ವಸ್ತು ವ್ಯಸನ ಮುಕ್ತ ಮತ್ತು ಪುನರ್ವಸತಿ ಕ್ರಮಗಳ ಬಗ್ಗೆ ಪರಿಣತಿ ಹಂಚಿಕೊಳ್ಳುವಲ್ಲಿ ಒಟ್ಟಾಗಿ ಕೆಲಸ ಮಾಡುವುದು ಮತ್ತು ಮಾಲ್ಡೀವ್ಸ್‌ನಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ನೆರವಾಗುವುದು;

vii. ಮಾಲ್ಡೀವ್ಸ್‌ನಲ್ಲಿ ತುರ್ತು ವೈದ್ಯಕೀಯ ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಒಟ್ಟಾಗಿ ಕೆಲಸ ಮಾಡುವುದು.

VII. ರಕ್ಷಣಾ ಮತ್ತು ಭದ್ರತಾ ಸಹಕಾರ

ಭಾರತ ಮತ್ತು ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಸಾಮಾನ್ಯ ಸವಾಲುಗಳನ್ನು ಹಂಚಿಕೊಳ್ಳುವುದರಿಂದ ಉಭಯ ದೇಶಗಳ ಭದ್ರತೆ ಮತ್ತು ಅಭಿವೃದ್ಧಿಗೆ ಬಹು ಆಯಾಮದ ಪರಿಣಾಮಗಳನ್ನು ಕಾಣಬಹುದಾಗಿದೆ. ನೈಸರ್ಗಿಕ ಪಾಲುದಾರರಾಗಿ ಅವರು ಭಾರತ ಮತ್ತು ಮಾಲ್ಡೀವ್ಸ್ ಹಾಗೂ ವಿಶಾಲ ಹಿಂದೂ ಮಹಾಸಾಗರದ ಪ್ರದೇಶದ ಜನರ ಅನುಕೂಲಕ್ಕಾಗಿ ಕಡತ ತೀರ ಮತ್ತು ಭದ್ರತಾ ಸಹಕಾರವನ್ನು ಮುನ್ನಡೆಸುವಲ್ಲಿ ಒಟ್ಟಾಗಿ ಕೆಲಸ ಮಾಡಲು ನಿರ್ಧಾರ.

ಮಾಲ್ಡೀವ್ಸ್ ತನ್ನ ವಿಶಾಲವಾದ ವಿಶೇಷ ಆರ್ಥಿಕ ವಲಯದೊಂದಿಗೆ, ಕಡಲ್ಗಳ್ಳತನ, ಅಕ್ರಮ, ವರದಿಯಾಗದ ಹಾಗೂ ಅನಿಯಂತ್ರಿತ (ಐಯುಯು) ಮೀನುಗಾರಿಕೆ, ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಭಯೋತ್ಪಾದನೆ ಸೇರಿದಂತೆ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಕಡಲಿನ ಸವಾಲುಗಳಿಗೆ ಒಡ್ಡಿಕೊಂಡಿದೆ. ಭಾರತವು ವಿಶ್ವಾಸಾರ್ಹ ಮತ್ತು ಅವಲಂಬಿತ ಪಾಲುದಾರನಾಗಿ, ಮಾಲ್ಡೀವ್ಸ್‌ನ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಪರಿಣತಿಯನ್ನು ಹಂಚಿಕೊಳ್ಳಲು, ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಜಂಟಿ ಸಹಕಾರ ಕ್ರಮಗಳನ್ನು ಕೈಗೊಳ್ಳಲು ಮಾಲ್ಡೀವ್ಸ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲು ಉಭಯ ದೇಶಗಳು ಒಪ್ಪಿದವು; ಭಾರತದ ನೆರವಿನೊಂದಿಗೆ ʼಉತ್ತುರು ತಿಲಾ ಫಲ್ಹುʼ (ಯುಟಿಎಫ್‌) ನಲ್ಲಿ ಜಾರಿಯಾಗುತ್ತಿರುವ ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಎನ್‌ಡಿಎಫ್‌)- ʼಏಕಥಾʼ ಬಂದರು ಯೋಜನೆಯು ಎಂಎನ್‌ಡಿಎಫ್‌ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಗಣನೀಯವಾಗಿ ಕೊಡುಗೆ ನೀಡುತ್ತದೆ ಎಂದು ಸಹ ಅವರು ಸಮ್ಮತಿಸಿದರು. ಹಾಗೆಯೇ ಅದನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಂಪೂರ್ಣ ಬೆಂಬಲ ನೀಡಲು ಕೂಡ ಒಪ್ಪಿಕೊಂಡರು.

ಕೆಳಕಂಡ ವಿಚಾರಗಳಲ್ಲಿ ಎರಡು ಕಡೆಯವರ ಸಮ್ಮತಿ:

i. ಎಂಎನ್‌ಡಿಎಫ್‌ನ ಸಾಮರ್ಥ್ಯಗಳನ್ನು ಹೆಚ್ಚಿಸಲು ರಕ್ಷಣಾ ವಲಯದ ವೇದಿಕೆಗಳು ಮತ್ತು ಸ್ವತ್ತುಗಳನ್ನು ಮಾಲ್ಡೀವ್ಸ್‌ಗೆ ಒದಗಿಸಿ ಉತ್ತೇಜಿಸುವ ಮೂಲಕ ಮಾಲ್ಡೀವ್ಸ್‌ ಸರ್ಕಾರವು ತನ್ನ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಅದರ ಕಡಲ ತೀರ ಮತ್ತು ಭದ್ರತಾ ಅವಶ್ಯಕತೆಗಳನ್ನು ಮುಂದುವರಿಸುವಲ್ಲಿ ಸಹಕರಿಸುವುದು; 

ii. ರಾಡಾರ್ ವ್ಯವಸ್ಥೆಗಳು ಮತ್ತು ಇತರ ಸುಧಾರಿತ ಸಲಕರಣೆಗಳನ್ನು ಒದಗಿಸುವುದರೊಂದಿಗೆ ಎಂಎನ್‌ಡಿಎಫ್‌ನ ಕಣ್ಗಾವಲು ಮತ್ತು ಮೇಲ್ವಿಚಾರಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಾಲ್ಡೀವ್ಸ್‌ಗೆ ಸಹಕಾರ ನೀಡುವುದು

iii. ಮಾಲ್ಡೀವ್ಸ್ ಸರ್ಕಾರದ ಅಗತ್ಯಕ್ಕೆ ತಕ್ಕಂತೆ ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ ಸೇರಿದಂತೆ, ಹೈಡ್ರೋಗ್ರಾಫಿಕ್ ವಿಷಯಗಳಲ್ಲಿ ಮಾಲ್ಡೀವ್ಸ್‌ಗೆ ಅಗತ್ಯ ಬೆಂಬಲ ನೀಡುವುದು; 

iv. ವಿಪತ್ತು ನಿರ್ವಹಣೆ- ಸ್ಪಂದನೆ, ಅಪಾಯಗಳನ್ನು ತಗ್ಗಿಸುವುದು,  ಮಾದರಿ ನಿರ್ವಹಣಾ ಕ್ರಮಗಳ (ಎಸ್‌ಒಪಿ) ಅಭಿವೃದ್ಧಿ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಹಕಾರದ ಬಲವರ್ಧನೆ;

v. ಮೂಲಸೌಕರ್ಯ, ತರಬೇತಿ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆಯ ಮೂಲಕ ಸಾಮರ್ಥ್ಯಗಳ ಅಭಿವೃದ್ಧಿಗೆ ಸಹಕಾರ ನೀಡಿ ಮಾಲ್ಡೀವ್ಸ್‌ಗೆ ನೆರವಾಗುವುದು.

vi. ಭಾರತದ ನೆರವಿನೊಂದಿಗೆ ಮಾಲೆಯಲ್ಲಿ ನಿರ್ಮಾಣವಾಗುತ್ತಿರುವ ಅತ್ಯುನ್ನತ ʼಮಾಲ್ಡೀವಿಯನ್ ರಕ್ಷಣಾ ಸಚಿವಾಲಯʼ  (ಎಂಒಡಿ) ಕಟ್ಟಡವನ್ನು ಆದಷ್ಟು ಶೀಘ್ರವಾಗಿ ಉದ್ಘಾಟಿಸುವುದು. ಇದರಿಂದ ಮಾಲ್ಡೀವಿಯನ್‌ ರಕ್ಷಣಾ ಸಚಿವಾಲಯದ ಆಧುನಿಕ ಮೂಲಸೌಕರ್ಯ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಲಿದೆ;

vii. ಭಾರತದಲ್ಲಿ ಐಟಿಇಸಿ ಕಾರ್ಯಕ್ರಮಗಳು ಮತ್ತು ಇತರ ವರ್ಗೀಕೃತ ತರಬೇತಿ ಕಾರ್ಯಕ್ರಮಗಳ ಅಡಿ ಎಂಎನ್‌ಡಿಎಫ್‌,  ಮಾಲ್ಡೀವ್ಸ್ ಪೊಲೀಸ್ ಸೇವೆಗಳು (ಎಂಪಿಎಸ್‌) ಮತ್ತು ಮಾಲ್ಡೀವ್ಸ್‌ನ ಇತರ ಭದ್ರತಾ ಸಂಸ್ಥೆಗಳಿಗೆ ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ ಸ್ಲಾಟ್‌ಗಳನ್ನು ಹೆಚ್ಚಿಸುವುದು;

viii. ಎಂಎನ್‌ಡಿಎಫ್‌ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಮೇಲ್ದರ್ಜೆಗೇರಿಸಲು ಹಣಕಾಸಿನ ನೆರವು ವಿಸ್ತರಣೆ.

VIII. ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ

ಮಾಲ್ಡೀವ್ಸ್‌ನ ಮಾನವ ಸಂಪನ್ಮೂಲ ಅಭಿವೃದ್ಧಿ ಅಗತ್ಯಗಳಿಗೆ ಧನಾತ್ಮಕ ಕೊಡುಗೆ ನೀಡಿರುವಂತಹ ಚಾಲ್ತಿಯಲ್ಲಿರುವ ನಾನಾ ರೀತಿಯ ಸಾಮರ್ಥ್ಯ ನಿರ್ಮಾಣ ಉಪಕ್ರಮಗಳನ್ನು ಪರಿಶೀಲಿಸಿ, ಮಾಲ್ಡೀವ್ಸ್‌ನ ಅಗತ್ಯತೆ ಮತ್ತು ಆದ್ಯತೆ ಅನುಸಾರ ತರಬೇತಿ ಹಾಗೂ ಸಾಮರ್ಥ್ಯ ನಿರ್ಮಾಣಕ್ಕೆ ನೀಡುತ್ತಿರುವ ಬೆಂಬಲವನ್ನು ಮತ್ತಷ್ಟು ವಿಸ್ತರಿಸಲು ಎರಡೂ ದೇಶದ ಕಡೆಯವರು ಒಪ್ಪಿದರು; ಕೆಳಕಂಡ ಅಂಶಗಳಿಗೂ ಒಪ್ಪಿಗೆ ಸೂಚಿಸಿದರು:

i. ಮಾಲ್ಡೀವ್ಸ್‌ನ ಸರಕಾರಿ ನೌಕರರು ಹಾಗೂ ಸ್ಥಳೀಯ ಸರ್ಕಾರದ ಪ್ರತಿನಿಧಿಗಳಿಗೆ ವರ್ಗೀಕೃತ ತರಬೇತಿ ಕಾರ್ಯಕ್ರಮಗಳನ್ನು ಮುಂದುವರಿಸುವುದು.

ii. ಮಾಲ್ಡೀವ್ಸ್‌ನ ಆರ್ಥಿಕತೆಯಲ್ಲಿ ಮಹಿಳೆಯರ ಪಾಲುದಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಕೇಂದ್ರಿತ ಅಭಿವೃದ್ಧಿಗೆ ಅಗತ್ಯ ಕೌಶಲ್ಯ ತರಬೇತಿ ನೀಡಲು ಹಾಗೂ ಮಾಲ್ಡೀವಿಯನ್‌ ಮಹಿಳಾ ಉದ್ಯಮಿಗಳಿಗೆ ಅಗತ್ಯ ಸಹಕಾರ, ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮ ಪ್ರಾರಂಭಿಸುವುದು;

iii. ಯುವಕರ ನಾವೀನ್ಯತೆ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮಾಲ್ಡೀವ್ಸ್‌ನಲ್ಲಿ ಸ್ಟಾರ್ಟ್-ಅಪ್ ಇನ್‌ಕ್ಯುಬೇಟರ್- ಆಕ್ಸಿಲರೇಟರ್ ವ್ಯವಸ್ಥೆ ಸ್ಥಾಪನೆಗೆ ಸಹಕರಿಸುವುದು.

IX. ಜನರಿಂದ ಜನರ ಸಂಪರ್ಕಗಳು

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಜನರಿಂದ ಜನರ ಸಂಪರ್ಕವು ಎರಡು ದೇಶಗಳ ನಡುವಿನ ವಿಶೇಷ ಮತ್ತು ವಿಶಿಷ್ಟ ಸಂಬಂಧಗಳ ತಳಹದಿಯಾಗಿ ಉಳಿದಿದೆ. ಎರಡೂ ಕಡೆಯವರು ಈ ಸಂಬಂಧಗಳನ್ನು ಗಾಢವಾಗಿಸಲು ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿ ತೀರ್ಮಾನ ಕೈಗೊಂಡರು:

ಬೆಂಗಳೂರಿನಲ್ಲಿ ಮಾಲ್ಡೀವ್ಸ್‌ನ ರಾಯಭಾರ ಕಚೇರಿ ಮತ್ತು ಅಡ್ಡು ನಗರದಲ್ಲಿ ಭಾರತದ ರಾಯಭಾರ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ಧನಾತ್ಮಕವಾಗಿ ಕಾರ್ಯಪ್ರವೃತ್ತರಾಗುವುದು. ಇದು ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಜತೆಗೆ ಹೆಚ್ಚಿನ ಜನರಿಂದ ಜನರ ಸಂಪರ್ಕಗಳ ವಿಸ್ತರಣೆಗೆ ಕೊಡುಗೆ ನೀಡಲಿದೆ;

ii. ಸುಗಮ ಪ್ರಯಾಣ, ಆರ್ಥಿಕ ವ್ಯವಹಾರಗಳಿಗೆ ಉತ್ತೇಜನ ಮತ್ತು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ವಿಮಾನಯಾನ ಹಾಗೂ ಸಮುದ್ರಯಾನ ಸಂಪರ್ಕ ಸೌಲಭ್ಯಗಳನ್ನು ವೃದ್ಧಿಸುವುದು; 

iii ಮಾಲ್ಡೀವ್ಸ್‌ನಲ್ಲಿ ಅದರ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣ ಸಂಸ್ಥೆಗಳು, ಕೌಶಲ್ಯ ಕೇಂದ್ರಗಳು ಮತ್ತು ಅತ್ಯುನ್ನತ ಕೇಂದ್ರಗಳ ಸ್ಥಾಪನೆ;

iv. ಮಾಲ್ಡೀವ್ಸ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಐಸಿಸಿಆರ್‌ ಪೀಠ  ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವುದು.

X. ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಯಲ್ಲಿ ಸಹಕಾರ

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ನಿಕಟ ಸಹಕಾರವು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಉಭಯ ರಾಷ್ಟ್ರಗಳಿಗೆ ಪ್ರಯೋಜನಗಳನ್ನು ಒದಗಿಸಿದೆ ಮತ್ತು ಸಮಾನ ಹಿತಾಸಕ್ತಿಯ ವಿಷಯಗಳಲ್ಲಿ ಪರಸ್ಪರರ ಧ್ವನಿಯನ್ನು ಹೆಚ್ಚಿಸಿದೆ. ಕೊಲಂಬೊ ಭದ್ರತಾ ಸಮ್ಮೇಳನ (ಸಿಎಸ್‌ಸಿ- ಕೊಲಂಬೊ ಸೆಕ್ಯುರಿಟಿ ಕಾನ್‌ಕ್ಲೇವ್‌) ಚಾರ್ಟರ್‌ಗೆ ಇತ್ತೀಚೆಗೆ ಸಹಿ ಹಾಕುವುದರೊಂದಿಗೆ ಭಾರತ ಹಾಗೂ ಮಾಲ್ಡೀವ್ಸ್‌ ಸ್ಥಾಪಕ ಸದಸ್ಯ ರಾಷ್ಟ್ರಗಳಾಗಿವೆ. ಆ ಮೂಲಕ ಉಭಯ ರಾಷ್ಟ್ರಗಳಿಗೂ ಸಮಾನವೆನಿಸಿರುವ ಕಡತ ತೀರ ಹಾಗೂ ಸುರಕ್ಷತಾ ಹಿತಾಸಕ್ತಿಗಳ ಮೂಲಕ ಸುರಕ್ಷಿತ, ಸಂರಕ್ಷಿತ ಹಾಗೂ ಶಾಂತಿಯುತ ಹಿಂದೂ ಮಹಾಸಾಗರ ಪ್ರದೇಶ ವಾತಾವರಣ ಸೃಷ್ಟಿಸುವ ಗುರಿ ಸಾಧನೆಗೆ ಇನ್ನಷ್ಟು ಸಂಘಟಿತವಾಗಿ ಅನ್ಯೋನ್ಯತೆಯಿಂದ ಕೆಲಸ ಮಾಡುವುದಾಗಿ ಪುನರುಚ್ಚರಿಸಿವೆ. ಬಹುಪಕ್ಷೀಯ ವೇದಿಕೆಗಳಲ್ಲೂ ಒಟ್ಟಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು.

4. ಹಿಂದೂ ಮಹಾಸಾಗರ ಪ್ರದೇಶ ಸೇರಿದಂತೆ ಭಾರತ ಮತ್ತು ಮಾಲ್ಡೀವ್ಸ್‌ನ ಜನರ ಸಾಮಾನ್ಯ ಅನುಕೂಲಕ್ಕಾಗಿ ಎರಡೂ ದೇಶಗಳ ನಡುವಿನ ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆಯನ್ನು ಮುನ್ನಡೆಸುವ ಉದ್ದೇಶದಿಂದ ಸಹಕಾರದ ರೂಪುರೇಷೆಗಳನ್ನು ಸಕಾಲಿಕ ಮತ್ತು ಸಮರ್ಥ ರೀತಿಯಲ್ಲಿ ಕಾರ್ಯಗತಗೊಳಿಸುವಂತೆ ನಾಯಕರು ಭಾರತ ಹಾಗೂ ಮಾಲ್ಡೀವ್ಸ್‌ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ದೂರದರ್ಶಿತ್ವದ ವಿಷನ್‌ ಡಾಕ್ಯುಮೆಂಟ್‌ನ ಅನುಷ್ಠಾನ ಪ್ರಗತಿಯ ಮೇಲ್ವಿಚಾರಣೆಗಾಗಿ ಹೊಸದಾಗಿ ಉನ್ನತ ಮಟ್ಟದ ಅತ್ಯುನ್ನತರ ಗುಂಪು (ಹೈ ಲೆವೆಲ್‌ ಕೋರ್‌ ಗ್ರೂಪ್‌) ಸ್ಥಾಪಿಸಲು ಅವರು ತೀರ್ಮಾನಿಸಿದರು. ಈ ಗುಂಪಿನ ನಾಯಕತ್ವ ವಹಿಸುವ ಬಗ್ಗೆ ಎರಡೂ ಕಡೆಯವರು ಪರಸ್ಪರ ಚರ್ಚಿಸಿ ನಿರ್ಧರಿಸಲಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Annual malaria cases at 2 mn in 2023, down 97% since 1947: Health ministry

Media Coverage

Annual malaria cases at 2 mn in 2023, down 97% since 1947: Health ministry
NM on the go

Nm on the go

Always be the first to hear from the PM. Get the App Now!
...
Prime Minister condoles passing away of Shri MT Vasudevan Nair
December 26, 2024

The Prime Minister, Shri Narendra Modi has condoled the passing away of Shri MT Vasudevan Nair Ji, one of the most respected figures in Malayalam cinema and literature. Prime Minister Shri Modi remarked that Shri MT Vasudevan Nair Ji's works, with their profound exploration of human emotions, have shaped generations and will continue to inspire many more.

The Prime Minister posted on X:

“Saddened by the passing away of Shri MT Vasudevan Nair Ji, one of the most respected figures in Malayalam cinema and literature. His works, with their profound exploration of human emotions, have shaped generations and will continue to inspire many more. He also gave voice to the silent and marginalised. My thoughts are with his family and admirers. Om Shanti."