ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಆಗಸ್ಟ್ 6ರಂದು ಸಂಜೆ 6 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರು ಮತ್ತು ವ್ಯಾಪಾರ ಮತ್ತು ವಾಣಿಜ್ಯ ವಲಯದ ಪಾಲುದಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು “ಸ್ಥಳೀಯ ಉತ್ಪನ್ನಗಳನ್ನು ಜಾಗತಿಕರಣಗೊಳಿಸುವುದು- ವಿಶ್ವಕ್ಕಾಗಿ ಮೇಕ್ ಇನ್ ಇಂಡಿಯಾ”ಗೆ ಕರೆ ನೀಡಲಿದ್ದಾರೆ.
ರಫ್ತುಗಳು ವಿಶೇಷವಾಗಿ ಕಾರ್ಮಿಕ ಆಧಾರಿತ ವಲಯಗಳಲ್ಲಿ ಬೃಹತ್ ಉದ್ಯೋಗ ಸೃಷ್ಟಿ ಸಾಮರ್ಥ್ಯವನ್ನು ಹೊಂದಿವೆ, ಇದು ತಯಾರಿಕಾ ವಲಯದ ಮೇಲೆ ಮತ್ತು ಒಟ್ಟಾರೆ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಜಾಗತಿಕ ವ್ಯಾಪಾರದಲ್ಲಿ ತನ್ನ ಪಾಲು ಹಾಗು ರಫ್ತು ಪಾಲನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡುವುದು ಈ ಸಂವಾದದ ಉದ್ದೇಶವಾಗಿದೆ.
ಸಂವಾದದ ಉದ್ದೇಶ ಜಾಗತಿಕ ಬೇಡಿಕೆಗಳನ್ನು ಪೂರೈಸಲು ಸ್ಥಳೀಯ ಸಾಮರ್ಥ್ಯಗಳನ್ನು ಬಳಕೆ ಮಾಡಿಕೊಳ್ಳುವುದು ಮತ್ತು ನಮ್ಮ ರಫ್ತು ಸಾಮರ್ಥ್ಯವನ್ನು ವಿಸ್ತರಿಸುವ ಮೂಲಕ ಎಲ್ಲ ಪಾಲುದಾರರಿಗೆ ಶಕ್ತಿ ತುಂಬುವುದಾಗಿದೆ.
ಕೇಂದ್ರ ವಾಣಿಜ್ಯ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರೂ ಸಹ ಸಂವಾದದಲ್ಲಿ ಭಾಗವಹಿಸಲಿದ್ದಾರೆ. 25ಕ್ಕೂ ಅಧಿಕ ಇಲಾಖೆಗಳ ಕಾರ್ಯದರ್ಶಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು, ರಫ್ತು ಉತ್ತೇಜನ ಮಂಡಳಿ ಮತ್ತು ವಾಣಿಜ್ಯ ಒಕ್ಕೂಟಗಳ ಸದಸ್ಯರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.