ಪ್ರಧಾನ ಮಂತ್ರಿ ಮೋದಿಯವರು ಟೈಮ್ಸ್ ನೌ ಶೃಂಗಸಭೆಯಲ್ಲಿ ಮಾತನಾಡುತ್ತಾ ತೆರಿಗೆ ಪಾವತಿದಾರರಿಗೆ ಹೊರೆಯಾಗದಂತೆ ಸರ್ಕಾರ ಖಚಿತಪಡಿಸಿಕೊಳ್ಳುತ್ತದೆ ಎಂದು ಹೇಳಿದರು. ಭಾರತದಲ್ಲಿ ಪ್ರಕ್ರಿಯೆ ಕೇಂದ್ರಿತವಾಗಿದ್ದ ತೆರಿಗೆ ವ್ಯವಸ್ಥೆಯನ್ನು ಈಗ ಜನ ಕೇಂದ್ರಿತಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಎಸ್‌ಟಿ, ಈ ವರ್ಷದ ಬಜೆಟ್‌ನಲ್ಲಿ ಐಚ್ಛಿಕ ಆದಾಯ ತೆರಿಗೆ ಹಂತಗಳ ಪರಿಚಯ ಮತ್ತು ಕಾರ್ಪೊರೇಟ್ ತೆರಿಗೆಯ ಕಡಿತ ಮುಂತಾದ ಸುಧಾರಣೆಗಳನ್ನು ಕುರಿತು ಪ್ರಧಾನಿಯವರು ಮಾತನಾಡಿದರು. ಸರ್ಕಾರವು ಶೇ.14.4ರಷ್ಟಿದ್ದ ಸರಾಸರಿ ಜಿಎಸ್‌ಟಿ ದರವನ್ನು ಶೇ. 11.8 ಕ್ಕೆ ಇಳಿಸಿದೆ ಎಂದು ಅವರು ಹೇಳಿದರು. ಸ್ವಂತ ವಿವೇಚನೆ ಮತ್ತು ಕಿರುಕುಳವನ್ನು ಕೊನೆಗಾಣಿಸಲು ಆದಾಯ ತೆರಿಗೆ ಮೌಲ್ಯಮಾಪನ ಮತ್ತು ಮೇಲ್ಮನವಿಗಳನ್ನು ಮಾನವ ರಹಿತ ಮಾಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಿಯವರು ಪ್ರಮುಖವಾಗಿ ಪ್ರಸ್ತಾಪಿಸಿದರು.
ತೆರಿಗೆ ಪಾವತಿಯ ಪ್ರಾಮುಖ್ಯತೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಎಲ್ಲರಿಗೂ ಮೂಲಭೂತ ಸೌಕರ್ಯಗಳನ್ನು ಖಾತ್ರಿಪಡಿಸುವಲ್ಲಿ ಇದು ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿಗಾಗಿ ತೆರಿಗೆ ಪಾವತಿಸುವಂತೆ ಜನರನ್ನು ಒತ್ತಾಯಿಸಿದ ಪ್ರಧಾನಿ ಮೋದಿ, "ಮೂರು ಕೋಟಿಗೂ ಹೆಚ್ಚು ಜನ ವ್ಯಾಪಾರ ಅಥವಾ ಪ್ರವಾಸಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಅನೇಕ ಜನರು ಕಾರುಗಳನ್ನು ಖರೀದಿಸಿದ್ದಾರೆ. ಆದರೆ ಪರಿಸ್ಥಿತಿ ಹೇಗಿದೆಯೆಂದರೆ, 130 ಕೋಟಿ ಜನಸಂಖ್ಯೆಯಲ್ಲಿ ಕೇವಲ 1.5 ಕೋಟಿ ಜನ ಮಾತ್ರ ಆದಾಯ ತೆರಿಗೆ ಪಾವತಿಸಿದ್ದಾರೆ. ನಂಬಲಸಾಧ್ಯವಾದ ಸತ್ಯವೇನೆಂದರೆ ದೇಶದಲ್ಲಿ ಕೇವಲ 2,200 ಮಂದಿ ವೃತ್ತಿಪರರು ಮಾತ್ರ ವರ್ಷಕ್ಕೆ 1 ಕೋಟಿ ರೂ. ಆದಾಯವನ್ನು ಘೋಷಿಸಿಕೊಂಡಿದ್ದಾರೆ!" ಎಂದು ಅವರು ಹೇಳಿದರು.