​​​​​​​“ನಮ್ಮ ಬುಡಕಟ್ಟು ಸಹೋದರ ಹಾಗೂ ಸಹೋದರಿಯರು ಬದಲಾವಣೆಯ ಹಾದಿಯನ್ನು ತುಳಿದಿದ್ದು, ಸರಕಾರ ಅವರಿಗೆ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನೂ ಒದಗಿಸುತ್ತಿದೆ”
“ಗೋಧ್ರಾದಲ್ಲಿ ಗೋವಿಂದ ಗುರು ವಿಶ್ವವಿದ್ಯಾಲಯ ಹಾಗೂ ನರ್ಮದಾದಲ್ಲಿ ಬಿರ್ಸಾ ಮುಂಡಾ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣದ ಅತ್ಯುನ್ನತ ಸಂಸ್ಥೆಗಳನ್ನಾಗಿ ರೂಪಿಸಲಾಗಿದೆ”
“ಇದೇ ಮೊದಲ ಬಾರಿಗೆ ಅಭಿವೃದ್ಧಿ ಹಾಗೂ ನೀತಿ ನಿರೂಪಣೆ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವ ಭಾವನೆ ಬುಡಕಟ್ಟು ಸಮುದಾಯದವರಲ್ಲಿ ಮೂಡಿದೆ”
“ಬುಡಕಟ್ಟು ಸಮುದಾಯದವರ ಹಿರಿಮೆ ಎನಿಸಿರುವ ಸ್ಥಳಗಳು ಹಾಗೂ ನಂಬಿಕೆಯ ಪ್ರದೇಶಗಳ ಅಭಿವೃದ್ಧಿಯು ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿದೆ”

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಇಂದು ಗುಜರಾತ್ ಮತ್ತು ಇಡೀ ದೇಶದ ಬುಡಕಟ್ಟು ಸಮಾಜಕ್ಕೆ ಬಹಳ ನಿರ್ಣಾಯಕ ದಿನವಾಗಿದೆ. ಸ್ವಲ್ಪ ಸಮಯದ ಹಿಂದೆ ನಾನು ಮಾನ್ ಗಢ್ ಧಾಮ್ ನಲ್ಲಿದ್ದೆ. ಮತ್ತು 'ಆಜಾದಿ ಕಾ ಅಮೃತ್ ಮಹೋತ್ಸವ'ದಲ್ಲಿ, ಮಾನ್ ಗಢ್ ಧಾಮ್ ನಲ್ಲಿ ಗೋವಿಂದ ಗುರು ಸೇರಿದಂತೆ ಸಾವಿರಾರು ಹುತಾತ್ಮ ಬುಡಕಟ್ಟು ಸಹೋದರ ಮತ್ತು ಸಹೋದರಿಯರಿಗೆ ಗೌರವ ಸಲ್ಲಿಸುವ ಮೂಲಕ ಬುಡಕಟ್ಟು ಜನರ ಮಹಾನ್ ತ್ಯಾಗಕ್ಕೆ ವಂದಿಸುವ ಅವಕಾಶ ನನಗೆ ದೊರಕಿತು. ಈಗ ನಾನು ನಿಮ್ಮೊಂದಿಗೆ ಜಂಬುಘೋಡದಲ್ಲಿದ್ದೇನೆ ಮತ್ತು ಜಂಬೂಘೋಡವು ನಮ್ಮ ಬುಡಕಟ್ಟು ಸಮಾಜದ ಮಹಾನ್ ಬಲಿದಾನಕ್ಕೆ ಸಾಕ್ಷಿಯಾಗಿದೆ. ಇಂದು ನಾವು ಶಹೀದ್ ಜೋರಿಯಾ ಪರಮೇಶ್ವರ, ರೂಪ್ ಸಿಂಗ್ ನಾಯಕ್, ಗಲಾಲಿಯಾ ನಾಯಕ್, ರಾವ್ ಜಿದಾ ನಾಯಕ್ ಮತ್ತು ಬಾಬರಿಯಾ ಗಲ್ಮಾ ನಾಯಕ್ ಅವರಂತಹ ಅಮರ ಹುತಾತ್ಮರಿಗೆ ಗೌರವ ಸಲ್ಲಿಸುವ ಅವಕಾಶವನ್ನು ಪಡೆದಿದ್ದೇವೆ. ಇಂದು ನಾವು ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳೊಂದಿಗೆ ಮೂಲಭೂತ ಸೌಲಭ್ಯಗಳನ್ನೂ ವಿಸ್ತರಿಸುತ್ತಿದ್ದೇವೆ, ಅದಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತಿದೆ ಮತ್ತು ಈ ಯೋಜನೆಗಳು ಬುಡಕಟ್ಟು ಸಮಾಜದ ಗರಿಮೆಯೊಂದಿಗೆ ನಂಟು ಹೊಂದಿವೆ. ಗೋವಿಂದ ಗುರು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕಟ್ಟಡ ತುಂಬಾ ಸುಂದರವಾಗಿದೆ. ಮತ್ತು ಈ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯ ಅಥವಾ ಕೇಂದ್ರೀಯ ಶಾಲೆಯನ್ನು ಸ್ಥಾಪಿಸುವುದರೊಂದಿಗೆ, ನನ್ನ ಮುಂದಿನ ಪೀಳಿಗೆಯು ದೇಶದ ಧ್ವಜವನ್ನು ಹೆಮ್ಮೆಯಿಂದ ಎತ್ತಿಹಿಡಿಯುತ್ತದೆ. ಈ ಎಲ್ಲ ಯೋಜನೆಗಳಿಗಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! 

ಸೋದರ, ಸೋದರಿಯರೇ, 

ಜಂಬೂಫೋಡ ನನಗೆ ಹೊಸದೇನಲ್ಲ. ನಾನು ಹಲವಾರು ಬಾರಿ ಇಲ್ಲಿಗೆ ಬಂದಿದ್ದೇನೆ. ನಾನು ಈ ಭೂಮಿಗೆ ಬಂದಾಗಲೆಲ್ಲಾ, ನಾನು ಒಂದು ಪವಿತ್ರ ಸ್ಥಳಕ್ಕೆ ಬಂದಿದ್ದೇನೆ ಎಂದು ನನಗೆ ಭಾಸವಾಗುತ್ತದೆ. ಜಂಬೂಫೋಡ ಮತ್ತು ಇಡೀ ಪ್ರದೇಶದಲ್ಲಿ, 1857ರ ಕ್ರಾಂತಿಯಲ್ಲಿ ಹೊಸ ಚೈತನ್ಯವನ್ನು ತುಂಬಿದ ನಾಯ್ಕಡಾ ಚಳವಳಿಯು ಹೊಸ ಪ್ರಜ್ಞೆಯನ್ನು ಪ್ರದರ್ಶಿಸಿತು. ಪರಮೇಶ್ವರ ಜೋರಿಯಾ ಅವರು ಈ ಚಳವಳಿಯನ್ನು ವಿಸ್ತರಿಸಿದ್ದರು, ಮತ್ತು ರೂಪ್ ಸಿಂಗ್ ನಾಯಕ್ ಕೂಡ ಅವರೊಂದಿಗೆ ಸೇರಿದ್ದರು. 1857ರ ಕ್ರಾಂತಿಯ ಸಮಯದಲ್ಲಿ ತಾತ್ಯಾ ಟೋಪೆ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಆದರೆ ತಾತ್ಯಾ ಟೋಪೆಯೊಂದಿಗೆ ಹೋರಾಡಿದವರು ಇಲ್ಲಿನ ವೀರಬಂಕಾಗೆ ಸೇರಿದವರು ಎಂದು ಅನೇಕ ಜನರಿಗೆ ತಿಳಿದಿರಲಿಕ್ಕಿಲ್ಲ.

ಅವರಿಗೆ ತಾಯ್ನಾಡಿನ ಬಗ್ಗೆ ಪ್ರೀತಿ ಇತ್ತು ಮತ್ತು ಅದ್ಭುತವಾದ ಧೈರ್ಯವಿತ್ತು. ಅವರು ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದರೂ, ಬ್ರಿಟಿಷ್ ಆಡಳಿತವನ್ನು ಅಲುಗಾಡಿಸಿದ್ದರು ಮತ್ತು ಬಲಿದಾನಕ್ಕೆ ಎಂದಿಗೂ ಹಿಂಜರಿಯಲಿಲ್ಲ. ಆ ಪವಿತ್ರ ಸ್ಥಳದ ಮುಂದೆ ಅಂದರೆ ವೀರರನ್ನು ಗಲ್ಲಿಗೇರಿಸಿದ ವೃಕ್ಷದ ಮುಂದೆ ನಿಂತು ತಲೆಬಾಗಿ ನಮಸ್ಕರಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. 2012 ರಲ್ಲಿ, ನಾನು ಅಲ್ಲಿ ಒಂದು ಪುಸ್ತಕವನ್ನು ಸಹ ಬಿಡುಗಡೆ ಮಾಡಿದ್ದೆ.

 ಸ್ನೇಹಿತರೇ,

ನಾವು ಬಹಳ ಹಿಂದೆಯೇ ಗುಜರಾತ್ ನಲ್ಲಿ ಒಂದು ಪ್ರಮುಖ ಕಾರ್ಯ ಪ್ರಾರಂಭಿಸಿದ್ದೇವೆ. ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಮತ್ತು ಮುಂದಿನ ತಲೆಮಾರು ನಮ್ಮ ಪೂರ್ವಜರ ಶೌರ್ಯದ ಕಾರ್ಯವನ್ನು ಅರಿಯಲು ಅನುವಾಗುವಂತೆ ಶಾಲೆಗಳಿಗೆ ಹುತಾತ್ಮರ ಹೆಸರನ್ನು ಇಡುವ ಸಂಪ್ರದಾಯವನ್ನು ಪ್ರಾರಂಭಿಸಲಾಯಿತು. ಇದರ ಪರಿಣಾಮವಾಗಿ, ಸಂತ ಜೋರಿಯಾ ಪರಮೇಶ್ವರ ಮತ್ತು ರೂಪ್ ಸಿಂಗ್ ನಾಯಕ್ ಅವರ ಹೆಸರುಗಳನ್ನು ಇಡುವ ಮೂಲಕ ನಾವು ವಡೆಕ್ ಮತ್ತು ದಂಡಿಯಾಪುರದ ಶಾಲೆಗಳನ್ನು ಅಮರಗೊಳಿಸಿದೆವು. ಇಂದು ಈ ಶಾಲೆಗಳು ಹೊಸ ನೋಟ, ಪೀಠೋಪಕರಣಗಳು ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜಾಗಿವೆ. ಇಂದು ಈ ಶಾಲೆಗಳಲ್ಲಿ ಈ ಇಬ್ಬರು ಬುಡಕಟ್ಟು ವೀರರ ಭವ್ಯ ಪ್ರತಿಮೆಗಳನ್ನು ಅನಾವರಣಗೊಳಿಸುವ ಸುಯೋಗ ನನಗೆ ಸಿಕ್ಕಿದೆ. ಈ ಶಾಲೆಗಳು ಈಗ ಶಿಕ್ಷಣ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸಮಾಜ ನೀಡಿದ ಕೊಡುಗೆಯ ಭಾಗವಾಗಲಿವೆ.

ಸೋದರ, ಸೋದರಿಯರೇ,

ಸುಮಾರು 20-22 ವರ್ಷಗಳ ಹಿಂದೆ ನೀವು ಗುಜರಾತ್ ಗೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡುವ ಮೊದಲು ಬುಡಕಟ್ಟು ಪ್ರದೇಶಗಳ ಸ್ಥಿತಿಯನ್ನು ನೀವು ನೆನಪಿಸಿಕೊಳ್ಳಬಹುದು. ಇಂದಿನ 20-22 ವರ್ಷ ವಯಸ್ಸಿನ ಯುವಕ ಯುವತಿಯರಿಗೆ ಆಗ ನೀವು ಯಾವ ಸವಾಲುಗಳ ಅಡಿಯಲ್ಲಿ ಬದುಕಬೇಕಾಗುತ್ತಿತ್ತು ಎಂಬುದರ ಬಗ್ಗೆ ಸಹ ತಿಳಿದಿರುವುದಿಲ್ಲ. ಈ ಹಿಂದೆ ದಶಕಗಳ ಕಾಲ ಅಧಿಕಾರದಲ್ಲಿದ್ದವರು ಬುಡಕಟ್ಟು ಮತ್ತು ಬುಡಕಟ್ಟು ಏತರ ಪ್ರದೇಶಗಳ ನಡುವೆ ಭಾರಿ ಅಭಿವೃದ್ಧಿಯ ಅಂತರವನ್ನು ಸೃಷ್ಟಿಸಿದ್ದರು. ತಾರತಮ್ಯ ವ್ಯಾಪಕವಾಗಿತ್ತು. ಬುಡಕಟ್ಟು ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇತ್ತು, ಪರಿಸ್ಥಿತಿಗಳು ಹೇಗಿದ್ದವು ಎಂದರೆ, ನಮ್ಮ ಬುಡಕಟ್ಟು ಪ್ರದೇಶಗಳಲ್ಲಿನ ಮಕ್ಕಳು ಶಾಲೆಗೆ ಹೋಗಬೇಕಾದರೂ ಸಹ, ಅದು ಒಂದು ಸಮಸ್ಯೆಯಾಗಿತ್ತು. ಕೆಲವು ವಾಹನಗಳು ಠಕ್ಕರ್ ಬಾಪಾ ಅವರ ಆಶ್ರಮದಿಂದ ಶಾಲೆಗಳನ್ನು ತಲುಪುತ್ತಿದ್ದವು. ಅಪೌಷ್ಟಿಕತೆ ಮತ್ತು ಆಹಾರದ ಕೊರತೆ ಇತ್ತು. 13-14 ವರ್ಷ ವಯಸ್ಸಿನ ಹುಡುಗಿಯರ ದೈಹಿಕ ಬೆಳವಣಿಗೆಯು ಸರಿಯಾದ ರೀತಿಯಲ್ಲಿ ಆಗುತ್ತಿರಲಿಲ್ಲ. ಆದರೆ ಈಗ, 'ಎಲ್ಲರೊಂದಿಗೆ ಎಲ್ಲರ ಪ್ರಯತ್ನ' ಎಂಬ ದೃಷ್ಟಿಕೋನದಿಂದ, ನಾವು ಈ ಪರಿಸ್ಥಿತಿಯನ್ನು ನಿವಾರಿಸುವ ಕೆಲಸ ಮುಂದುವರಿಸಿದ್ದೇವೆ. ಈ ಬದಲಾವಣೆಯನ್ನು ತರಲು, ನನ್ನ ಬುಡಕಟ್ಟು ಸಹೋದರ ಸಹೋದರಿಯರು ಉಪಕ್ರಮವನ್ನು ಕೈಗೊಂಡರು ಮತ್ತು ನನ್ನೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಡೆದರು. ಇಂದು, ಸಾವಿರಾರು ಬುಡಕಟ್ಟು ಸಹೋದರರು ಮತ್ತು ಸಹೋದರಿಯರು, ಲಕ್ಷಾಂತರ ಜನರು ಅಸಂಖ್ಯಾತ ಬದಲಾವಣೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಒಂದು ಸಂಗತಿಯನ್ನು ಮರೆಯಬಾರದು. ಈ ಬದಲಾವಣೆಗಳು ರಾತ್ರೋರಾತ್ರಿ ಅಥವಾ ಒಂದೇ ದಿನದಲ್ಲಿ ಆಗಲಿಲ್ಲ. ಇದಕ್ಕೆ ಸಾಕಷ್ಟು ಕಠಿಣ ಪರಿಶ್ರಮದ ಅಗತ್ಯವಿತ್ತು. ಯೋಜನೆಗಳನ್ನು ರೂಪಿಸಬೇಕಾಗಿತ್ತು ಮತ್ತು ಬುಡಕಟ್ಟು ಕುಟುಂಬಗಳು ಸಹ ಗಂಟೆಗಟ್ಟಲೆ ಕೆಲಸ ಮಾಡಿ ನನಗೆ ಬೆಂಬಲ ನೀಡಿವೆ. ಈ ಬದಲಾವಣೆಯನ್ನು ಈ ರೀತಿಯಾಗಿ ಜಾರಿಗೆ ತರಲಾಗಿದೆ. ಬುಡಕಟ್ಟು ಪ್ರದೇಶಗಳ ಬಗ್ಗೆ ಹೇಳುವುದಾದರೆ, ಪ್ರಾಥಮಿಕದಿಂದ ಮಾಧ್ಯಮಿಕ ಶಾಲೆಗಳವರೆಗೆ ದು ಮಾತು ಹತ್ತು ಸಾವಿರ ಹೊಸ ಶಾಲೆಗಳನ್ನು ನಿರ್ಮಿಸಲಾಯಿತು. ಸುಮ್ಮನೆ ಊಹಿಸಿಕೊಳ್ಳಿ! ನಮ್ಮಲ್ಲಿ ಡಜನ್ ಗಟ್ಟಲೆ ಏಕಲವ್ಯ ಮಾದರಿ ಶಾಲೆಗಳು, ಬಾಲಕಿಯರಿಗಾಗಿ ವಿಶೇಷ ವಸತಿ ಶಾಲೆಗಳು ಮತ್ತು ಆಧುನಿಕ ಆಶ್ರಮ ಶಾಲೆಗಳಿವೆ. ಇದಲ್ಲದೆ, ನಾವು ನಮ್ಮ ಹೆಣ್ಣುಮಕ್ಕಳಿಗೆ ಶಾಲೆಗಳಿಗೆ ಹೋಗಲು ಉಚಿತ ಬಸ್ ಸೌಲಭ್ಯವನ್ನು ಮತ್ತು ಶಾಲೆಗಳಲ್ಲಿ ಪೌಷ್ಟಿಕ ಆಹಾರವನ್ನು ಸಹ ಒದಗಿಸಿದ್ದೇವೆ.

ಸಹೋದರ ಸಹೋದರಿಯರೇ,

ಜೂನ್ ತಿಂಗಳಲ್ಲಿ, ಸುಡುವ ಬಿಸಿಲಿನಲ್ಲಿ, ನಾನು ಮತ್ತು ನನ್ನ ಸಹೋದ್ಯೋಗಿಗಳು ಕನ್ಯಾ ಕೆಲವಾಣಿ ರಥದೊಂದಿಗೆ ಹಳ್ಳಿಯಿಂದ ಹಳ್ಳಿಗೆ ಅಲೆದಾಡುತ್ತಿದ್ದೆವು ಎಂಬುದು ನಿಮಗೆ ನೆನಪಿರಬಹುದು. ನಾವು ಪ್ರತಿ ಹಳ್ಳಿಗೆ ಹೋಗಿ ಬಾಲಕಿಯರಿಗೆ ಶಿಕ್ಷಣ ನೀಡಲು ಜನರನ್ನು ಪ್ರೋತ್ಸಾಹಿಸುತ್ತಿದ್ದೆವು. ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಶಿಕ್ಷಣಕ್ಕಾಗಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಸುಮ್ಮನೆ ಊಹಿಸಿಕೊಳ್ಳಿ! ಉಮರ್ ಗಾಂವ್ ನಿಂದ ಅಂಬಾಜಿಯವರೆಗಿನ ನಮ್ಮ ಬುಡಕಟ್ಟು ಪ್ರದೇಶವು ತುಂಬಾ ವಿಶಾಲವಾಗಿದೆ. ಯುವ ಬುಡಕಟ್ಟು ಬಾಲಕ ಮತ್ತು ಬಾಲಕಿಯರು ವೈದ್ಯರು ಮತ್ತು ಎಂಜಿನಿಯರ್ ಗಳಾಗಲು ಬಯಸಿದರೂ, ಅಲ್ಲಿ ವಿಜ್ಞಾನ ಶಾಲೆ ಇರಲಿಲ್ಲ. ಹೀಗಾಗಿ ಅವರು ತಮ್ಮ ಕನಸುಗಳು ಹೇಗೆ ನನಸು ಮಾಡಿಕೊಳ್ಳಲು ಸಾಧ್ಯ? ನಾವು ಆ ಸಮಸ್ಯೆಯನ್ನು ಪರಿಹರಿಸಿದೆವು ಮತ್ತು ಹನ್ನೆರಡನೇ ತರಗತಿಯವರೆಗೆ ವಿಜ್ಞಾನ ಶಾಲೆಗಳನ್ನು ಪ್ರಾರಂಭಿಸಿದೆವು. ಇಂದು, ಎರಡು ದಶಕಗಳಲ್ಲಿ, 11 ವಿಜ್ಞಾನ ಕಾಲೇಜುಗಳು, 11 ವಾಣಿಜ್ಯ ಕಾಲೇಜುಗಳು, 23 ಕಲಾ ಕಾಲೇಜುಗಳು ಮತ್ತು ನೂರಾರು ವಸತಿ ನಿಲಯಗಳನ್ನು ತೆರೆಯಲಾಗಿದೆ. ನಮ್ಮ ಬುಡಕಟ್ಟು ಯುವಕರು ಜೀವನದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡಲು ನಾವು ಈ ಉಪಕ್ರಮವನ್ನು ತೆಗೆದುಕೊಂಡಿದ್ದೇವೆ. ಸುಮಾರು 20-25 ವರ್ಷಗಳ ಹಿಂದೆ ಗುಜರಾತಿನ ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳ ತೀವ್ರ ಕೊರತೆ ಇತ್ತು. ಮತ್ತು ಇಂದು ಎರಡು ಬುಡಕಟ್ಟು ವಿಶ್ವವಿದ್ಯಾಲಯಗಳಿವೆ. ಗೋಧ್ರಾದ ಗೋವಿಂದ್ ಗುರು ವಿಶ್ವವಿದ್ಯಾಲಯ ಮತ್ತು ನರ್ಮದಾದ ಬಿರ್ಸಾ ಮುಂಡಾ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದ ಅತ್ಯುತ್ತಮ ಸಂಸ್ಥೆಗಳಾಗಿವೆ. ಇಲ್ಲಿ ಅತ್ಯುತ್ತಮ ಉನ್ನತ ಶಿಕ್ಷಣಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿದ್ದು, ನನ್ನ ಬುಡಕಟ್ಟು ಸಮಾಜದ ಮುಂದಿನ ತಲೆಮಾರು ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲಿವೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಕ್ಯಾಂಪಸ್ ನೊಂದಿಗೆ, ಗೋವಿಂದ್ ಗುರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ  ಸೌಲಭ್ಯಗಳು ಮತ್ತಷ್ಟು ಹೆಚ್ಚಾಗಲಿವೆ. ಒಂದು ರೀತಿಯಲ್ಲಿ, ಅಹಮದಾಬಾದ್ ನ ಕೌಶಲ್ಯ ವಿಶ್ವವಿದ್ಯಾಲಯದ ಕ್ಯಾಂಪಸ್, ಪಂಚಮಹಲ್ ಮತ್ತು ಇತರ ಬುಡಕಟ್ಟು ಪ್ರದೇಶಗಳೆರಡಕ್ಕೂ ಪ್ರಯೋಜನಕಾರಿಯಾಗಿದೆ. ಇದು ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಡ್ರೋನ್ ಪೈಲಟ್ ಪರವಾನಗಿಗಳನ್ನು ನೀಡುತ್ತಿರುವ ದೇಶದ ಮೊದಲ ವಿಶ್ವವಿದ್ಯಾಲಯ ಇದಾಗಿದೆ, ಇದರಿಂದ ನಮ್ಮ ಬುಡಕಟ್ಟು ಬಾಲಕ ಮತ್ತು ಬಾಲಕಿಯರು ಡ್ರೋನ್ ಗಳನ್ನು ನಿರ್ವಹಿಸಬಹುದು ಮತ್ತು ಆಧುನಿಕ ಜಗತ್ತನ್ನು ಪ್ರವೇಶಿಸಬಹುದು. 'ವನಬಂಧು ಕಲ್ಯಾಣ ಯೋಜನೆ' ಕಳೆದ ದಶಕಗಳಲ್ಲಿ ಬುಡಕಟ್ಟು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಿದೆ. 'ವನಬಂಧು ಕಲ್ಯಾಣ ಯೋಜನೆ'ಯ ವಿಶೇಷತೆಯೆಂದರೆ - ಒಂದು ವಿಷಯಕ್ಕೆ ಏನು, ಎಷ್ಟು ಮತ್ತು ಎಲ್ಲಿ ಅಗತ್ಯವಿದೆ - ಎಂಬುದನ್ನು ಹಳ್ಳಿಯಲ್ಲಿ ಕುಳಿತಿರುವ ನನ್ನ ಬುಡಕಟ್ಟು ಸಹೋದರ ಮತ್ತು ಸಹೋದರಿಯರು ನಿರ್ಧರಿಸುತ್ತಾರೆಯೇ ಹೊರತು ಗಾಂಧಿನಗರವಲ್ಲ. 

ಕಳೆದ 14-15 ವರ್ಷಗಳಲ್ಲಿ, ನಮ್ಮ ಬುಡಕಟ್ಟು ಪ್ರದೇಶಗಳಲ್ಲಿ ಈ ಯೋಜನೆಯಡಿ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ. ದೇಶದಲ್ಲಿ ಅನೇಕ ರಾಜ್ಯಗಳಿವೆ, ಅವು ಬುಡಕಟ್ಟು ಸೌಲಭ್ಯ ವಿಸ್ತರಣೆಗಾಗಿ ಅಗತ್ಯವಾದಷ್ಟು ಬಜೆಟ್ ಅನ್ನು ನಿಗದಿಪಡಿಸಿಲ್ಲ. ಆದರೆ ಇದು ಬುಡಕಟ್ಟು ಸಮಾಜದ ಬಗ್ಗೆ ನಮ್ಮ ಪ್ರೀತಿ, ಭಾವನೆಗಳು ಮತ್ತು ಭಕ್ತಿಯ ಪ್ರತಿಬಿಂಬವಾಗಿದೆ. ಮುಂಬರುವ ವರ್ಷಗಳಲ್ಲಿ, ಅದರ ವಿಸ್ತರಣೆಯಲ್ಲಿ ಹೊಸದಾಗಿ ಒಂದು ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಮಾಡಲಾಗುವುದು ಎಂದು ಗುಜರಾತ್ ಸರ್ಕಾರ ಖಚಿತಪಡಿಸಿದೆ. ಇಂದು, ನಾವು ಬುಡಕಟ್ಟು ಪ್ರದೇಶಗಳ ಪ್ರತಿಯೊಂದು ಮನೆಗೂ ಕೊಳವೆ ಮೂಲಕ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಮತ್ತು ಇಡೀ ಬುಡಕಟ್ಟು ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ನಾನು ಹೊಸದಾಗಿ ಮುಖ್ಯಮಂತ್ರಿಯಾದಾಗ, ಆ ಸಮಯದಲ್ಲಿನ ಶಾಸಕರು ತಮ್ಮ ಪ್ರದೇಶಗಳಿಗೆ ಕೇವಲ ಕೈ ಪಂಪ್ ಅನ್ನು ಮಾತ್ರ ಕೇಳುತ್ತಿದ್ದರು. ಮತ್ತು ಕೈ ಪಂಪ್ ಗೆ ಅನುಮೋದನೆ ನೀಡಿದರೆ, ಅವರು ಸಂಭ್ರಮಿಸುತ್ತಿದ್ದರು. ಹಳ್ಳಿಗಳಲ್ಲಿ ಅಂತಹ ದಿನಗಳು ಇದ್ದವು. ಆದರೆ ಈಗ ಮೋದಿ ಸಾಹೇಬ್ ಮತ್ತು ಭೂಪೇಂದ್ರಭಾಯಿ ಅವರು ಪ್ರತಿ ಮನೆಗೂ ಕೊಳವೆ ಮೂಲಕ ನೀರು ಸರಬರಾಜು ಮಾಡಲು ಪ್ರಾರಂಭಿಸಿದ್ದಾರೆ. ಇದಲ್ಲದೆ, ಪಂಚಮಹಲ್ ನಂತಹ ಬುಡಕಟ್ಟು ಪ್ರದೇಶಗಳಲ್ಲಿ ಹೈನುಗಾರಿಕೆ ಕ್ಷೇತ್ರದ ವಿಷಯದಲ್ಲಿ ಸಂಪೂರ್ಣ ಅಭಿವೃದ್ಧಿಯ ಕೊರತೆ ಇತ್ತು. ಇಂದು ನಮ್ಮೊಂದಿಗೆ ಜೇತಾಭಾಯ್ ಇದ್ದಾರೆ. ಈಗ ಪಂಚಮಹಲ್ ಡೈರಿ ಅಮುಲ್ ನೊಂದಿಗೆ ಸ್ಪರ್ಧಿಸುತ್ತಿದೆ. ಇಲ್ಲಿ ಈ ಮಟ್ಟದ ಅಭಿವೃದ್ಧಿಯಿದೆ. ನಮ್ಮ ಬುಡಕಟ್ಟು ಸಹೋದರಿಯರನ್ನು ಸಶಕ್ತಗೊಳಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ನಾವು 'ಸಖಿ ಮಂಡಲ್' ಗಳನ್ನು ರಚಿಸಿದ್ದೇವೆ. ಈ ಸಖಿ ಮಂಡಲಗಳು ಬ್ಯಾಂಕುಗಳಿಂದ ಹೆಚ್ಚು ಹೆಚ್ಚು ಹಣವನ್ನು ಪಡೆಯುವುದನ್ನು ನಾವು ಖಚಿತಪಡಿಸಿದ್ದೇವೆ. ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡಲು ನಾವು ವ್ಯವಸ್ಥೆಗಳನ್ನು ಸಹ ಮಾಡಿದ್ದೇವೆ. ಗುಜರಾತಿನಲ್ಲಿ ಕೈಗಾರಿಕೀಕರಣವು ಹೇಗೆ ವೇಗವಾಗಿ ಬೆಳೆಯುತ್ತಿದೆಯೋ ಅದೇ ರೀತಿ ನನ್ನ ಯುವ ಬುಡಕಟ್ಟು ಸಹೋದರ ಸಹೋದರಿಯರು ಸಹ ಇದರ ಪ್ರಯೋಜನವನ್ನು ಪಡೆಯಬೇಕು. ಇಂದು ನೀವು ಹಲೋಲ್ ಅಥವಾ ಕಲೋಲ್ ಗೆ ಹೋದರೆ, ನನ್ನ ಪಂಚಮಹಲ್ ನ ಬುಡಕಟ್ಟು ಯುವಕರು ಬಹುತೇಕ ಪ್ರತಿಯೊಂದು ಕಾರ್ಖಾನೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಉದ್ಯೋಗಿಗಳಾಗಿದ್ದಾರೆ. ನಾವು ಈ ಕೆಲಸವನ್ನು ಮಾಡಿದ್ದೇವೆ. ಇಲ್ಲದಿದ್ದರೆ, ಈ ಹಿಂದೆ ನಮ್ಮ ಹೆಚ್ಚಿನ ಬುಡಕಟ್ಟು ಸಹೋದರ ಸಹೋದರಿಯರು ಕಛ್-ಕಾಥೇವಾಡದ ಸುತ್ತಲೂ ರಸ್ತೆ ನಿರ್ಮಾಣ ಕಾರ್ಯದಲ್ಲಿ ನಿರತರಾಗುತ್ತಿದ್ದರು.   ಇಂದು ಅವರು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮೂಲಕ ಗುಜರಾತ್ ನ ಪ್ರಗತಿಯಲ್ಲಿ ಪಾಲುದಾರರಾಗುತ್ತಿದ್ದಾರೆ. ನಾವು ಆಧುನಿಕ ತರಬೇತಿ ಕೇಂದ್ರಗಳು, ವೃತ್ತಿಪರ ಕೇಂದ್ರಗಳು, ಐಟಿಐಗಳು, ಕಿಸಾನ್ ವಿಕಾಸ್ ಕೇಂದ್ರಗಳನ್ನು ತೆರೆಯುತ್ತಿದ್ದೇವೆ, ಇದರ ಮೂಲಕ 18 ಲಕ್ಷ ಬುಡಕಟ್ಟು ಯುವಕರಿಗೆ ತರಬೇತಿ ಮತ್ತು ಉದ್ಯೋಗವನ್ನು ನೀಡಲಾಗುತ್ತಿದೆ. ನನ್ನ ಬುಡಕಟ್ಟು ಸಹೋದರ ಸಹೋದರಿಯರೇ, 20-25 ವರ್ಷಗಳ ಹಿಂದೆ, ಹಿಂದಿನ ಸರ್ಕಾರಗಳು ಈ ಎಲ್ಲ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ನಿಮಗೆ ತಿಳಿದಿರಬಹುದು ಅಥವಾ ತಿಳಿಯದೇ ಇರಬಹುದು ಆದರೆ ಉಮರ್ ಗಾಂವ್ ನಿಂದ ಅಂಬಾಜಿ ಮತ್ತು ಡಾಂಗ್ ವರೆಗಿನ ವಲಯ ತಲೆತಲಾಂತರಗಳಿಂದ ಸಿಕಲ್ ಸೆಲ್ ರೋಗದಿಂದ ಪೀಡಿತವಾಗಿತ್ತು! ಆದರೆ ರೋಗವನ್ನು ನಿರ್ಮೂಲನೆ ಮಾಡಲು ನಾವು ಉಪಕ್ರಮವನ್ನು ತೆಗೆದುಕೊಂಡಿದ್ದೇವೆ. ಈ ಸಿಕಲ್ ಸೆಲ್ ರೋಗವನ್ನು ತೊಡೆದುಹಾಕಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಾವು ದೇಶಾದ್ಯಂತ ಸಂಶೋಧನಾ ಕಾರ್ಯವನ್ನು ಪ್ರೋತ್ಸಾಹಿಸಿದ್ದೇವೆ, ವಿವಿಧ ವಿಜ್ಞಾನಿಗಳನ್ನು ಭೇಟಿ ಮಾಡಿದ್ದೇವೆ ಮತ್ತು ಇದಕ್ಕಾಗಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ನಾವು ಖಂಡಿತವಾಗಿಯೂ ಪರಿಹಾರ ಹುಡುಕುತ್ತೇವೆ ಎಂಬ ವಿಶ್ವಾಸ ನನಗಿದೆ. ನಾವು ನಮ್ಮ ಬುಡಕಟ್ಟು ಪ್ರದೇಶಗಳಲ್ಲಿ ಸಣ್ಣ ಚಿಕಿತ್ಸಾಲಯಗಳನ್ನು ಮತ್ತು ಈಗ ಯೋಗಕ್ಷೇಮ ಕೇಂದ್ರಗಳನ್ನು ತೆರೆದಿದ್ದೇವೆ. ನಮ್ಮಲ್ಲಿ ವೈದ್ಯಕೀಯ ಕಾಲೇಜುಗಳಿವೆ. ಈಗ ನಮ್ಮ ಹೆಣ್ಣುಮಕ್ಕಳು ನರ್ಸಿಂಗ್ ಕೋರ್ಸ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಾನು ದಾಹೋದ್ ನಲ್ಲಿ ಕೆಲವು ಬುಡಕಟ್ಟು ಹೆಣ್ಣುಮಕ್ಕಳನ್ನು ಭೇಟಿಯಾದೆ. ಅವರು ಉನ್ನತ ವ್ಯಾಸಂಗಕ್ಕೆ ಹೋಗಿದ್ದರು. ಅವರು ವಿದೇಶದಲ್ಲಿ ಉದ್ಯೋಗಗಳನ್ನು ಪಡೆದಿರುವುದಾಗಿ ನನಗೆ ಮಾಹಿತಿ ನೀಡಿದರು. ಈಗ ಅವರು ನರ್ಸಿಂಗ್ ಕೆಲಸಗಳಿಗಾಗಿ ಇತರ ದೇಶಗಳಿಗೆ ಹೋಗುತ್ತಾರೆ. 

ನನ್ನ ಬುಡಕಟ್ಟು ಯುವಕರು ಜಗತ್ತಿನಲ್ಲಿ ತಮಗಾಗಿ ಒಂದು ಸ್ಥಾನವನ್ನು ಪಡೆಯುತ್ತಿದ್ದಾರೆ. ಸಹೋದರ ಸಹೋದರಿಯರೇ, ನರೇಂದ್ರ-ಭೂಪೇಂದ್ರ ಅವರ ಈ ಡಬಲ್ ಇಂಜಿನ್ ಸರ್ಕಾರವು ಬುಡಕಟ್ಟು ಪ್ರದೇಶಗಳಲ್ಲಿ 1400 ಕ್ಕೂ ಹೆಚ್ಚು ಆರೋಗ್ಯ-ಯೋಗಕ್ಷೇಮ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಮೊದಲು, ಸಣ್ಣ ಕಾಯಿಲೆಗಳಿಗೆ ಸಹ ನಗರಗಳಿಗೆ ಹೋಗಬೇಕಾಗುತ್ತಿತ್ತು. ಅಲ್ಲಿ ರಾತ್ರಿಯನ್ನು ಪಾದಚಾರಿ ರಸ್ತೆಗಳಲ್ಲಿ ಕಳೆಯಬೇಕಾಗುತ್ತಿತ್ತು. ಅವರು ಸೂಕ್ತವಾದ ಔಷಧಿಯನ್ನು ಪಡೆದರೆ,   ಒಳ್ಳೆಯದಾಗುತ್ತಿತ್ತು; ಇಲ್ಲದಿದ್ದರೆ ಅವನು ಬರಿಗೈಯಲ್ಲಿ ಹಿಂದಿರುಗಬೇಕಾಗಿತ್ತು. ಸಹೋದರರೇ, ನಾವು ಈ ಹಳೆಯ ಸ್ಥಿತಿಯನ್ನು ಬದಲಾಯಿಸುತ್ತಿದ್ದೇವೆ. ಈಗ ಗೋಧ್ರಾ-ಪಂಚಮಹಲ್ ತನ್ನದೇ ಆದ ವೈದ್ಯಕೀಯ ಕಾಲೇಜನ್ನು ಹೊಂದಿದೆ. ನಮ್ಮ ಮಕ್ಕಳು ಇಲ್ಲಿ ವೈದ್ಯರಾಗುತ್ತಾರೆ. ಎರಡನೆಯದಾಗಿ, ಅವರು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿದೆ. ಈಗ ಬಡ ಪೋಷಕರ ಮಕ್ಕಳು ಸಹ ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಮೂಲಕ ವೈದ್ಯರು ಮತ್ತು ಎಂಜಿನಿಯರ್ ಗಳಾಗಲು ಸಾಧ್ಯವಾಗುತ್ತದೆ. ಅವರಿಗೆ ಇಂಗ್ಲಿಷ್ ಬಾರದಿದ್ದರೂ, ಅವರ ಭವಿಷ್ಯವು ಹಾಳಾಗುವುದಿಲ್ಲ. ಗೋಧ್ರಾ ವೈದ್ಯಕೀಯ ಕಾಲೇಜಿನ ಹೊಸ ಕಟ್ಟಡದ ಕೆಲಸವು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಇದರೊಂದಿಗೆ, ದಾಹೋದ್, ಇಡೀ ಸಬರ್ಕಾಂತ, ಬನಸ್ಕಾಂತ ಮತ್ತು ವಲ್ಸಾದ್ ವಲಯ – ಉಮರ್ಗಾಂವ್ ನಿಂದ ಅಂಬಾಜಿಯವರೆಗೆ - ವೈದ್ಯಕೀಯ ಕಾಲೇಜು ಹೊಂದಲಿವೆ. 

ಸೋದರ, ಸೋದರಿಯರೇ,

ನಮ್ಮ ಸರ್ವ ಪ್ರಯತ್ನಗಳೊಂದಿಗೆ, ಇಂದು ನಾವು ಬುಡಕಟ್ಟು ಜಿಲ್ಲೆಗಳಲ್ಲಿ ಅರಣ್ಯ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆಗಳನ್ನು ನಿರ್ಮಾಣ ಖಚಿತಪಡಿಸಿಕೊಂಡಿದ್ದೇವೆ ಮತ್ತು ಅವರ ದೂರದ ಮೂಲೆಯವರೆಗಿನ ಗುಡಿಸಲುಗಳಲ್ಲಿ 24 ಗಂಟೆಗಳ ವಿದ್ಯುತ್ ಅನ್ನು ಸಹ ಖಚಿತಪಡಿಸಿದ್ದೇವೆ. ಮತ್ತು ನಾವು ಇಂದು ಅದರ ಫಲಿತಾಂಶ ನೋಡುತ್ತಿದ್ದೇವೆ.

ಸಹೋದರ ಸಹೋದರಿಯರೇ,

ಗುಜರಾತ್ ನ ಡಾಂಗ್ ಜಿಲ್ಲೆ ರಾಜ್ಯದಲ್ಲಿ 24 ಗಂಟೆಗಳ ಕಾಲ ವಿದ್ಯುತ್ ಪಡೆದ ಮೊದಲ ಜಿಲ್ಲೆ ಎಂದು ನಿಮಗೆ ತಿಳಿದಿರಬಹುದು. ಮತಗಳನ್ನು ಪಡೆಯುವುದೇ ನನ್ನ ಏಕೈಕ ಉದ್ದೇಶವಾಗಿದ್ದಿದ್ದರೆ, ಅಹಮದಾಬಾದ್, ಸೂರತ್, ರಾಜ್ಕೋಟ್ ಅಥವಾ ವಡೋದರಾದಂತಹ ದೊಡ್ಡ ನಗರಗಳಿಗೆ ಈ 24 ಗಂಟೆಗಳ ವಿದ್ಯುತ್ ಸೌಲಭ್ಯ ಯೋಜನೆಯನ್ನು ನಾನು ತರುತ್ತಿದ್ದೆ. ಆದರೆ ನಾನು ಬುಡಕಟ್ಟು ಜಿಲ್ಲೆಯನ್ನು ಆರಿಸಿಕೊಂಡೆ ಏಕೆಂದರೆ ನನ್ನ ಹೃದಯವು ನನ್ನ ಬುಡ ಇಟ್ಟು ಸಹೋದರರ ಮೇಲಿದೆ. ನನ್ನ ಬುಡಕಟ್ಟು ಸಹೋದರ ಸಹೋದರಿಯರ ಆಶೀರ್ವಾದದಿಂದ, ನಾವು ಈ ಕೆಲಸವನ್ನು ಮುಂದುವರಿಸಿದೆವು, ಶೀಘ್ರದಲ್ಲೇ ಇದು ಇಡೀ ಗುಜರಾತ್ ನಲ್ಲಿ ಪೂರ್ಣಗೊಂಡಿತು. ಇದರ ಪರಿಣಾಮವಾಗಿ, ಬುಡಕಟ್ಟು ಪ್ರದೇಶಗಳಲ್ಲಿ ಕೈಗಾರಿಕೆಗಳು ಬರಲು ಪ್ರಾರಂಭಿಸಿದವು ಮತ್ತು ಮಕ್ಕಳು ಆಧುನಿಕ ಶಿಕ್ಷಣವನ್ನು ಪಡೆಯಲು ಪ್ರಾರಂಭಿಸಿದರು. ಮತ್ತು ಗೋಲ್ಡನ್ ಕಾರಿಡಾರ್ ಜೊತೆಗೆ, ಅವಳಿ ನಗರಗಳು ಅಭಿವೃದ್ಧಿ ಹೊಂದಲು ಪ್ರಾರಂಭಿಸಿದವು. ಈಗ ಪಂಚಮಹಲ್ ಮತ್ತು ದಾಹೋಡ್ ಹಿಂದೆ ಉಳಿದಿಲ್ಲ. ವಡೋದರಾ, ಹಲೋಲ್ ಮತ್ತು ಕಲೋಲ್ ಕೂಡ ಇದೇ ರೀತಿ ಅಭಿವೃದ್ಧಿಗೊಂಡಿವೆ. ಈಗ ಪಂಚಮಹಲ್ ನಗರೀಕರಣಗೊಂಡಂತೆ ತೋರುತ್ತದೆ.

ಸ್ನೇಹಿತರೆ,

ನಮ್ಮ ದೇಶದಲ್ಲಿ ಶತಮಾನಗಳಿಂದ ವ್ಯಾಪಕವಾಗಿ ಬುಡಕಟ್ಟು ಸಮಾಜವು ಅಸ್ತಿತ್ವದಲ್ಲಿತ್ತೇ ಅಥವಾ ಭೂಪೇಂದ್ರಭಾಯಿ ಮತ್ತು ನರೇಂದ್ರ ಭಾಯಿ ಅವರ ಸರ್ಕಾರಗಳು ಅಸ್ತಿತ್ವಕ್ಕೆ ಬಂದ ನಂತರ ಬುಡಕಟ್ಟು ಸಮಾಜವು ಹೊರಹೊಮ್ಮಿತೇ? ಖಂಡಿತ ಇಲ್ಲ! ಭಗವಾನ್ ರಾಮನ ಕಾಲದಲ್ಲಿ ಬುಡಕಟ್ಟು ಸಮಾಜವು ಅಸ್ತಿತ್ವದಲ್ಲಿರಲಿಲ್ಲವೇ? ಶಬರಿ ಮಾತಾ ಅವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದ್ದರಿಂದ, ಈ ಬುಡಕಟ್ಟು ಸಮಾಜವು ಅನಾದಿ ಕಾಲದಿಂದಲೂ ಇಲ್ಲೇ ಇದೆ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದರೂ, ಅಟಲ್ ಜೀ ಅವರು ಪ್ರಧಾನಮಂತ್ರಿಯಾಗಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವವರೆಗೂ ಬುಡಕಟ್ಟು ಜನಾಂಗದವರಿಗೆ ಸಮರ್ಪಿತವಾದ ಯಾವುದೇ ಸಚಿವಾಲಯವನ್ನು ರಚಿಸಲಾಗಿರಲಿಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅಲ್ಲಿಯವರೆಗೆ ಬುಡಕಟ್ಟು ಜನಾಂಗದವರಿಗೆ ಯಾವುದೇ ಸಚಿವಾಲಯವಾಗಲಿ, ಮಂತ್ರಿಯಾಗಲಿ, ಬಜೆಟ್ ಆಗಲಿ ಇರಲಿಲ್ಲ.. ಬುಡಕಟ್ಟು ಜನರ ಮೇಲಿನ ಬಿಜೆಪಿಯ ಪ್ರೀತಿಯಿಂದಾಗಿ, ದೇಶದಲ್ಲಿ ಪ್ರತ್ಯೇಕ ಬುಡಕಟ್ಟು ಸಚಿವಾಲಯವನ್ನು ರಚಿಸಲಾಯಿತು ಮತ್ತು ಮಂತ್ರಿಗಳನ್ನು ನೇಮಿಸಲಾಯಿತು. ಆಗ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಬಜೆಟ್ ವಿನಿಯೋಗವಾಗುತ್ತಿದೆ ಮತ್ತು ಹಣ ವೆಚ್ಚ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರವು 'ವಂದನ್' ನಂತಹ ಯೋಜನೆಗಳನ್ನು ರೂಪಿಸಿತು. ಪ್ರತಿಯೊಂದು ರೀತಿಯ ಅರಣ್ಯ ಉತ್ಪನ್ನಗಳು ಭಾರತದ ಸಂಪತ್ತು ಮತ್ತು ನಮ್ಮ ಬುಡಕಟ್ಟು ಜನರ ಆಸ್ತಿಯಾಗಿದೆ. ಆದ್ದರಿಂದ, ನಾವು ಆ ನಿಟ್ಟಿನಲ್ಲಿ ಕೆಲಸ ಮಾಡಿದೆವು. ಸುಮ್ಮನೆ ಊಹಿಸಿಕೊಳ್ಳಿ! ಬ್ರಿಟಿಷ್ ಯುಗದಲ್ಲಿ, ಎಂತಹ ಕಪ್ಪು ಕಾನೂನು ಇತ್ತು, ಅದು ಬುಡಕಟ್ಟು ಜನರನ್ನು ಉಸಿರುಗಟ್ಟಿಸುತ್ತಿತ್ತು. ಆ ನಿಯಮದ ಪ್ರಕಾರ, ಬಿದಿರನ್ನು ಮರವೆಂದು ವರ್ಗೀಕರಿಸಿದ್ದರಿಂದ ಬಿದಿರನ್ನು ಕತ್ತರಿಸಲು ಸಾಧ್ಯವಿರಲಿಲ್ಲ. ಮತ್ತು ಒಂದು ಮರವನ್ನು ಕತ್ತರಿಸಿದರೆ, ಆ ವ್ಯಕ್ತಿಯನ್ನು ಜೈಲಿಗೆ ಹಾಕಲಾಗುತ್ತದೆ. ಆದ್ದರಿಂದ ಈಗ, ನಾನು ಕಾನೂನನ್ನು ಬದಲಾಯಿಸಿದ್ದೇನೆ. ನಾನು ಬಿದಿರನ್ನು ಒಂದು ರೀತಿಯ ಹುಲ್ಲು ಎಂದು ವರ್ಗೀಕರಿಸಿದ್ದು, ಈಗ ಅದು ಮರವಲ್ಲ. ಈಗ ನನ್ನ ಬುಡಕಟ್ಟು ಸಹೋದರ ಸಹೋದರಿಯರು ಬಿದಿರನ್ನು ಬೆಳೆಯಬಹುದು, ಕತ್ತರಿಸಬಹುದು ಮತ್ತು ಮಾರಾಟ ಮಾಡಬಹುದು. ಅವರು ಬಿದಿರಿನಿಂದ ಸುಂದರವಾದ ವಸ್ತುಗಳನ್ನು ಕುಶಲತೆಯಿಂದ ತಯಾರಿಸುತ್ತಾರೆ ಮತ್ತು ಬಿದಿರಿನ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. ನಾವು ಬುಡಕಟ್ಟು ಜನರಿಂದ 80 ಕ್ಕೂ ಹೆಚ್ಚು ಅರಣ್ಯ ಉತ್ಪನ್ನಗಳನ್ನು ಎಂಎಸ್ಪಿಯಡಿ ಖರೀದಿಸುತ್ತಿದ್ದೇವೆ. ಬಿಜೆಪಿ ಸರ್ಕಾರವು ಬುಡಕಟ್ಟು ಜನರಿಗೆ ಪ್ರಾಮುಖ್ಯ ನೀಡುವ ಮೂಲಕ ಮತ್ತು ಅವರ ಜೀವನವನ್ನು ಸುಲಭಗೊಳಿಸುವ ಮೂಲಕ ಅವರ ಹೆಮ್ಮೆಯನ್ನು ಹೆಚ್ಚಿಸಿದೆ. ಅವರು ಪ್ರತಿಷ್ಠೆ ಮತ್ತು ಗೌರವದಿಂದ ಬದುಕಬಹುದು ಎಂದು ಖಚಿತಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸ್ನೇಹಿತರೇ,

ಮೊದಲ ಬಾರಿಗೆ, ಬುಡಕಟ್ಟು ಸಮಾಜವನ್ನು ಅವರ ಅಭಿವೃದ್ಧಿಗಾಗಿ ನೀತಿ ನಿರೂಪಣೆಯಲ್ಲಿ ಪಾಲುದಾರರನ್ನಾಗಿ ಮಾಡಲಾಗಿದೆ. ಇದರ ಪರಿಣಾಮವಾಗಿ, ಬುಡಕಟ್ಟು ಸಮಾಜವು ಇಂದು ತನ್ನ ಕಾಲ ಮೇಲೆ ತಾನು ನಿಂತಿದೆ ಮತ್ತು ಇಡೀ ಗುಜರಾತ್ ಅನ್ನು ಪೂರ್ಣ ಬಲದಿಂದ ನಡೆಸುತ್ತಿದೆ. ಪ್ರತಿ ವರ್ಷ ನಮ್ಮ ದೇವರು, ಮಹಾನ್ ಬುಡಕಟ್ಟು ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಗೌರವ ದಿನವಾಗಿ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಆದ್ದರಿಂದ, ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ರಂದು. ಇಡೀ ದೇಶದಲ್ಲಿ ಬುಡಕಟ್ಟು ಗೌರವ ದಿನವಾಗಿ ಆಚರಿಸಲಾಗುತ್ತದೆ. ನಮ್ಮ ಬುಡಕಟ್ಟು ಸಮಾಜವು ಆತ್ಮಗೌರವ, ಧೈರ್ಯ ಮತ್ತು ಶೌರ್ಯದಿಂದ ತುಂಬಿದೆ ಎಂಬುದನ್ನು ಇಡೀ ದೇಶವೇ ತಿಳಿಯಲಿ. ಅವರು ಸ್ವಭಾವತಃ ತ್ಯಾಗಜೀವಿಗಳು ಮತ್ತು ಪರಿಸರದ ರಕ್ಷಕರಾಗಿದ್ದಾರೆ. ಭಾರತೀಯರಲ್ಲಿ ಜಾಗೃತಿ ಮೂಡಿಸಲು ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಬಡವರು, ದಲಿತರು, ವಂಚಿತರು ಮತ್ತು ಹಿಂದುಳಿದ ವರ್ಗಗಳು ಮತ್ತು ನನ್ನ ಬುಡಕಟ್ಟು ಸಹೋದರ ಮತ್ತು ಸಹೋದರಿಯರ ಆದಾಯ ಹೆಚ್ಚಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅವಿರತವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ಆದ್ದರಿಂದ ನಾವು 'ಯುವಕರಿಗೆ ಶಿಕ್ಷಣ ಮತ್ತು ಆದಾಯ, ರೈತರಿಗೆ ನೀರಾವರಿ ಮತ್ತು ವೃದ್ಧರಿಗೆ ಔಷಧಿ' ಬಗ್ಗೆ ಗಮನ ಹರಿಸುತ್ತಿದ್ದೇವೆ. ಇವುಗಳಿಗೆ ಯಾವುದೇ ಕೊರತೆ ಇರಬಾರದು. ಅದಕ್ಕಾಗಿಯೇ ನಾವು ಶಿಕ್ಷಣ, ಸಂಪಾದನೆ, ನೀರಾವರಿ ಮತ್ತು ಔಷಧಿಗೆ ಗಮನ ಹರಿಸಿದ್ದೇವೆ. ಕೊರೊನಾ 100 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗವಾಗಿತ್ತು. ಮತ್ತು ಮೂಢನಂಬಿಕೆ ಇರುವ ಜನರಿಗೆ ಸಾಂಕ್ರಾಮಿಕ ರೋಗದಿಂದ ಬದುಕುಳಿಯುವುದು ಕಷ್ಟಕರವಾಗಿತ್ತು. ನಾವು ಬುಡಕಟ್ಟು ಸಹೋದರರಿಗೆ ನೆರವಾದೆವು, ಅವರಿಗೆ ಉಚಿತ ಲಸಿಕೆಗಳನ್ನು ಒದಗಿಸಿದ್ದೇವೆ ಮತ್ತು ಮನೆಮನೆಗೆ ಲಸಿಕೆ ಅಭಿಯಾನಗಳನ್ನು ನಡೆಸಿದ್ದೇವೆ. ನಾವು ನನ್ನ ಬುಡಕಟ್ಟು ಸಹೋದರ ಸಹೋದರಿಯರ ಜೀವಗಳನ್ನು ಉಳಿಸಿದೆವು, ಮತ್ತು ಅವರ ಮನೆಗಳಲ್ಲಿ ಆಹಾರ ಮತ್ತು ಪಡಿತರವನ್ನು ಖಚಿತಪಡಿಸಿದೆವು, ಇದರಿಂದ ಯಾವುದೇ ಮಗುವು ಹಸಿವಿನಿಂದ ಮಲಗುವಂತಾಗಲಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ನಾವು 80 ಕೋಟಿ ಸಹೋದರ ಸಹೋದರಿಯರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದ್ದೇವೆ. ಬಡ ಕುಟುಂಬಗಳು ಅನಾರೋಗ್ಯದ ಸಂದರ್ಭದಲ್ಲಿ ಅತ್ಯುತ್ತಮ ಚಿಕಿತ್ಸೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ನಾವು ಪ್ರತಿ ಫಲಾನುಭವಿ ಕುಟುಂಬಕ್ಕೆ ಪ್ರತಿ ವರ್ಷ ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ಭರವಸೆ ನೀಡುತ್ತಿದ್ದೇವೆ. ಇದರರ್ಥ, ನೀವು ಇನ್ನೂ 40 ವರ್ಷಗಳ ಕಾಲ ಬದುಕಿದರೆ, ನೀವು 40 ಬಾರಿ ಹಣವನ್ನು ಪಡೆಯುತ್ತೀರಿ. ಆದರೆ ನೀವು ಅನಾರೋಗ್ಯಕ್ಕೆ ಒಳಗಾಗುವುದನ್ನು ನಾನು ಬಯಸುವುದಿಲ್ಲ. ಆದರೆ ನೀವು ಅನಾರೋಗ್ಯ ಪೀಡಿತರಾದರೆ, ಸಹೋದರರೇ, ಆಗ ನಾವು ನಿಮಗಾಗಿ ಇದ್ದೇವೆ. ಗರ್ಭಾವಸ್ಥೆಯಲ್ಲಿ, ನನ್ನ ತಾಯಂದಿರು ಮತ್ತು ಸಹೋದರಿಯರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರ ಹಣವನ್ನು ಪಡೆಯುತ್ತಾರೆ, ಇದರಿಂದ ಅವರು ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸಬಹುದು. ಇದು ಹುಟ್ಟಲಿರುವ ಮಗುವಿನ ದೈಹಿಕ ಬೆಳವಣಿಗೆಯನ್ನು ಸಹ ಖಚಿತಪಡಿಸುತ್ತದೆ. ಮತ್ತು ಜನಿಸಿದ ಮಗುವು ಯಾವುದೇ ಅಂಗವೈಕಲ್ಯದಿಂದ ಮುಕ್ತವಾಗಿರುತ್ತದೆ. ಇದು ಕುಟುಂಬ ಮತ್ತು ಸಮಾಜ ಎರಡಕ್ಕೂ ಒಳ್ಳೆಯದು.

ನಾವು ಸಣ್ಣ ರೈತರಿಗೆ ರಸಗೊಬ್ಬರ, ವಿದ್ಯುತ್ ಮತ್ತು ಅವರ ಬಿಲ್ ಗಳಲ್ಲಿ ವಿನಾಯಿತಿಯನ್ನು ಖಚಿತಪಡಿಸಿಕೊಳ್ಳಲು ಉಪಕ್ರಮಗಳನ್ನು ತೆಗೆದುಕೊಂಡಿದ್ದೇವೆ. 'ಕಿಸಾನ್ ಸಮ್ಮಾನ್ ನಿಧಿ'ಯ ಅಡಿಯಲ್ಲಿ ಪ್ರತಿ ವರ್ಷ ಮೂರು ಬಾರಿ ನನ್ನ ಬುಡಕಟ್ಟು ಜನರ ಖಾತೆಗಳಿಗೆ 2000 ರೂ.ಗಳನ್ನು ವರ್ಗಾಯಿಸಲಾಗುತ್ತಿದೆ. ಕಲ್ಲಿನ ಭೂಮಿಯ ಕಾರಣದಿಂದಾಗಿ, ಬಡ ರೈತರು ಜೋಳ ಅಥವಾ ಸಜ್ಜೆಯನ್ನು ಮಾತ್ರ ಬೆಳೆಯಬೇಕಾಗಿತ್ತು.  ಆದರೆ ಅವರು ತಮ್ಮ ಜಮೀನಿನಲ್ಲಿ ಉತ್ತಮ ರೀತಿಯಲ್ಲಿ ಬೇಸಾಯಮಾಡಬಹುದು ಎಂಬುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. ರಸಗೊಬ್ಬರವು ಪ್ರಪಂಚದಾದ್ಯಂತ ದುಬಾರಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಚೀಲ ರಸಗೊಬ್ಬರದ ಬೆಲೆ 2000 ರೂ. ಆದರೆ ಭಾರತ ಸರ್ಕಾರವು ಹೆಚ್ಚಿನ ವೆಚ್ಚವನ್ನು ಭರಿಸುತ್ತಿದ್ದು, ತನ್ನ ಬುಡಕಟ್ಟು, ಬಡ ರೈತರಿಗೆ ತೊಂದರೆಯಾಗದಂತೆ ಕೇವಲ 260 ರೂ.ಗಳಿಗೆ ರಸಗೊಬ್ಬರವನ್ನು ಒದಗಿಸುತ್ತಿದೆ. 

ಇಂದು ನಾವು ಬಡವರಿಗೆ ಪಕ್ಕಾ ಮನೆಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಲು ಶ್ರಮಿತ್ತಿದ್ದೇವೆ; ಸಮಾಜದ ಈ ನಿರ್ಲಕ್ಷಿತ ವರ್ಗದ ಜೀವನವನ್ನು ಸುಧಾರಿಸಲು ಅನಿಲ ಮತ್ತು ನೀರಿನ ಸಂಪರ್ಕದಂತಹ ಇತರ ಸೌಲಭ್ಯಗಳನ್ನು ಒದಗಿಸಲು ನಾವು ಶ್ರಮಿಸುತ್ತಿದ್ದೇವೆ. ಇದು ಸಮಾಜದ ಪ್ರಗತಿಗೆ ಸಹಾಯ ಮಾಡುತ್ತದೆ. ಚಂಪಾನೇರ್, ಪವಗಢ, ಸೋಮನಾಥ, ಹಲ್ದಿಘಾಟಿ ಅಭಿವೃದ್ಧಿಯಂತಹ ಹಲವಾರು ಉದಾಹರಣೆಗಳು ನಮ್ಮಲ್ಲಿವೆ. ನಾವು ಬುಡಕಟ್ಟು ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸಲು ಮತ್ತು ಬುಡಕಟ್ಟು ವೀರರಿಗೆ ನಮಿಸಲು ಶ್ರಮಿಸುತ್ತಿದ್ದೇವೆ. ಪವಗಢದ ಕಾಳಿ ದೇವಿಯ ಬಗ್ಗೆ ಹೇಳುವುದಾದರೆ, ಬಹಳಷ್ಟು ಭಕ್ತರು ಆಶೀರ್ವಾದ ಪಡೆಯಲು ಪವಗಢಕ್ಕೆ ಭೇಟಿ ನೀಡುತ್ತಾರೆ. ಆದರೆ ಅದರ ಮೇಲ್ಭಾಗದಲ್ಲಿ ಯಾವುದೇ ಧ್ವಜವಿಲ್ಲ ಎಂದು ಅವರು ದೂರುತ್ತಿದ್ದರು. 500 ವರ್ಷಗಳ ಕಾಲ ನನ್ನ ಕಾಳಿ ದೇವಿಯ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ. ಆದರೆ ನೀವು ನಮ್ಮನ್ನು ಆಶೀರ್ವದಿಸಿದ ನಂತರ, ಮಹಾಕಾಳಿ ದೇವಿಯ ಧ್ವಜವು ಸೊಗಸಾಗಿ ಹಾರುತ್ತಿರುವುದನ್ನು ನೀವು ನೋಡಬಹುದು. ನೀವು ಶಾಮ್ಲಾಜಿಯ ಬಳಿಗೆ ಹೋದರೆ, ಕಾಲಿಯಾ ದೇವರ ದೇವಾಲಯವು ಎಷ್ಟು ನಿರ್ಲಕ್ಷ್ಯಕ್ಕೊಳಗಾಗಿತ್ತು ಎಂದು ನೀವು ನೋಡಿರಬಹುದು. ಕಾಲಿಯಾ ದೇವ್ ನನ್ನು ನನ್ನ ಬುಡಕಟ್ಟು ಜನರ ದೇವತೆ ಎಂದು ಕರೆಯಲಾಗುತ್ತದೆ. ಆದರೆ ಇಂದು ಅದನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿರುವ ಉಣ್ಣೈ ಮಾತಾ ದೇವಾಲಯ ಮತ್ತು ಶ್ರೀ ಅಂಬೆ ಧಾಮ್ ನಂತಹ ಈ ಎಲ್ಲಾ ಭಕ್ತಿ ಸ್ಥಳಗಳನ್ನು ನವೀಕರಿಸಲಾಗಿದೆ. ನನ್ನ ಅಭಿವೃದ್ಧಿ ಯೋಜನೆಗಳೊಂದಿಗೆ, ಲಕ್ಷಾಂತರ ಜನರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ದೇವಾಲಯಕ್ಕೆ ಹೋಗಲು ಮೇಲೆ ಏರುತ್ತಾರೆ ಎಂದು ನಾನು ಅರಿತಿದ್ದೇನೆ. ಅಂತೆಯೇ, ಸಪುತಾರಾ ಅಭಿವೃದ್ಧಿ, ಏಕತೆಯ ಪ್ರತಿಮೆ ಮತ್ತು ಈ ಒಟ್ಟಾರೆ ವಿಸ್ತರಣೆಯು ಬುಡಕಟ್ಟು ಜನರಿಗೆ ಉತ್ತೇಜನ ನೀಡಲಿದೆ.

ಸಹೋದರ ಸಹೋದರಿಯರೇ,

ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಜನರನ್ನು ಸಬಲೀಕರಣಗೊಳಿಸಲು ನಾನು ಶ್ರಮಿಸುತ್ತಿದ್ದೇನೆ. ಪಂಚಮಹಲ್ ಹೇಗಾದರೂ ಪ್ರವಾಸೋದ್ಯಮದ ತಾಣವಾಗಿದೆ. ಚಂಪಾನೇರ್ ಮತ್ತು ಪವಗಢಗಳು ತಮ್ಮ ಪ್ರಾಚೀನ ವಾಸ್ತುಶಿಲ್ಪ ಪರಂಪರೆಗೆ ಹೆಸರುವಾಸಿಯಾಗಿದ್ದು, ಈ ವಿಶ್ವ ಪರಂಪರೆಯನ್ನು ಮತ್ತು ಜಂಬೂಘೋಡದ ಅರಣ್ಯ ಜೀವನವನ್ನು ನೋಡಲು ಜನರು ಬರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ನಮ್ಮ ಹತ್ನಿ ಮಾತಾ ಜಲಪಾತ ಮತ್ತು ಕಾಡಾ ಅಣೆಕಟ್ಟು ಪ್ರವಾಸಿ ಆಕರ್ಷಣೆಯ ತಾಣಗಳಾಗಬೇಕು. ಧನಪುರಿಯಲ್ಲಿ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದು. ನಮ್ಮಲ್ಲಿ ಧನೇಶ್ವರಿ ಮಾತಾ, ಜಂದ್ ಹನುಮಾನ್ ಜೀ ಇದ್ದಾರೆ. ಮತ್ತು ನಾನು ನಿಮ್ಮನ್ನು ಚೆನ್ನಾಗಿ ಬಲ್ಲೆ. ಆದ್ದರಿಂದ, ಈ ಎಲ್ಲಾ ವಿಷಯಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂದು ನನಗೆ ತಿಳಿದಿದೆ.

ಸಹೋದರ ಸಹೋದರಿಯರೇ,

ಪ್ರವಾಸೋದ್ಯಮವನ್ನು ಹೇಗೆ ಅಭಿವೃದ್ಧಿಪಡಿಸುವುದು, ಉದ್ಯೋಗಾವಕಾಶಗಳನ್ನು ಹೇಗೆ ಹೆಚ್ಚಿಸಬಹುದು, ನಮ್ಮ ಬುಡಕಟ್ಟು ಹೆಮ್ಮೆಯ ಸ್ಥಳಗಳನ್ನು ಹೇಗೆ ಅಭಿವೃದ್ಧಿಪಡಿಸುವುದು ಮತ್ತು ಆದಾಯದ ಮೂಲಗಳನ್ನು ಹೇಗೆ ವಿಸ್ತರಿಸುವುದು ಎಂಬುದರ ಬಗ್ಗೆ ನಾವು ಯೋಚಿಸಬೇಕು. ನರೇಂದ್ರ-ಭೂಪೇಂದ್ರ ಅವರ ಈ ಡಬಲ್ ಎಂಜಿನ್ ಸರ್ಕಾರವು ಉಜ್ವಲ ಭವಿಷ್ಯಕ್ಕಾಗಿ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸುತ್ತಿದೆ ಏಕೆಂದರೆ ನಮ್ಮ ಉದ್ದೇಶಗಳು ಮತ್ತು ನೀತಿಗಳು ತುಂಬಾ ಸ್ಪಷ್ಟವಾಗಿವೆ. ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವ ಜನರು. ಆದುದರಿಂದ ಸಹೋದರ ಸಹೋದರಿಯರೇ, ಕಾಮಗಾರಿ ಯಾವ ವೇಗದಲ್ಲಿ ಸಾಗಿದೆಯೋ ಆ ವೇಗವನ್ನು ನಿಧಾನಗೊಳಿಸಲು ನಾವು ಬಿಡಬಾರದು. ನಾವು ಜಾಗರೂಕತೆಯಿಂದ ಮುಂದುವರಿಯಬೇಕು. ತಾಯಂದಿರು ಮತ್ತು ಸಹೋದರಿಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಮ್ಮನ್ನು ಆಶೀರ್ವದಿಸಲು ಬಂದಿರುವುದರಿಂದ, ಯಾವುದರ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ. ಅದು ಉಮರ್ ಗಾಂವ್ ನಿಂದ ಅಂಬಾಜಿಯವರೆಗಿನ ಬುಡಕಟ್ಟು ಪ್ರದೇಶವಾಗಿರಲಿ ಅಥವಾ ವಲ್ಸಾದ್ ನಿಂದ ಮುಂದ್ರಾವರೆಗಿನ ನನ್ನ ಮೀನುಗಾರರ ವಲಯವೇ ಆಗಿರಲಿ ಅಥವಾ ನಗರ ಪ್ರದೇಶವಾಗಿರಲಿ, ನಾವು ಇಡೀ ಗುಜರಾತ್ ಅನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕು! ಭಾರತದ ಅಭಿವೃದ್ಧಿಗಾಗಿ ನಾವು ಗುಜರಾತ್ ಅನ್ನು ಅಭಿವೃದ್ಧಿಪಡಿಸಬೇಕು. ಅಂತಹ ಧೈರ್ಯಶಾಲಿ ಹುತಾತ್ಮರಿಗೆ ನಮಸ್ಕರಿಸಿ ಮತ್ತು ಅವರಿಂದ ಸ್ಫೂರ್ತಿಯನ್ನು ಪಡೆದು, ನಾನು ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Double engine govt becoming symbol of good governance, says PM Modi

Media Coverage

Double engine govt becoming symbol of good governance, says PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government