ಚೀಣಾ ಕಮ್ಯೂನಿಸ್ಟ್ ಪಾರ್ಟಿಯ ಕೇಂದ್ರೀಯ ರಾಜಕೀಯ ಮತ್ತು ಕಾನೂನು ವ್ಯವಹಾರಗಳ ಕಾರ್ಯದರ್ಶಿ ಘನತೆವೆತ್ತ ಶ್ರೀ ಮೆಂಗ್ ಜಿಯಾಂಜು ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಕಳೆದ ಎರಡು ವರ್ಷಗಳಲ್ಲಿ ಭಾರತ ಮತ್ತು ಚೀಣಾ ನಡುವೆ ಉನ್ನತ ಮಟ್ಟದ ವಿನಿಮಯ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು, ಮತ್ತು ಇಂಥ ಭೇಟಿಗಳು ಎರಡೂ ರಾಷ್ಟ್ರಗಳ ನಡುವೆ ಕಾರ್ಯತಂತ್ರಾತ್ಮಕ ತಿಳಿವಳಿಕೆ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ ಎಂದರು.
2015ರ ಮೇ ತಿಂಗಳಿನಲ್ಲಿ ತಾವು ಚೀಣಾಗೆ ಕೈಗೊಂಡಿದ್ದ ಯಶಸ್ವೀ ದ್ವಿಪಕ್ಷೀಯ ಭೇಟಿ ಮತ್ತು 2016ರ ಸೆಪ್ಟೆಂಬರ್ ನಲ್ಲಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಹ್ಯಾಂಗ್ಶುಗೆ ಭೇಟಿ ನೀಡಿದ್ದನ್ನು ಪ್ರಧಾನಮಂತ್ರಿಯವರು ಹೆಮ್ಮೆಯಿಂದ ಸ್ಮರಿಸಿದರು.
ಇಬ್ಬರೂ ನಾಯಕರು, ಭಯೋತ್ಪಾದನೆ ನಿಗ್ರಹಕ್ಕೆ ದ್ವಿಪಕ್ಷೀಯ ಸಹಕಾರ ಸೇರಿದಂತೆ ಪರಸ್ಪರ ಹಿತದ ವಿಚಾರಗಳ ಬಗ್ಗೆ ಚರ್ಚಿಸಿದರು. ಭಯೋತ್ಪಾದನೆಯು ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಭಯಾನಕ ಭೀತಿ ಒಡ್ಡಿದೆ ಎಂದು ಹೇಳಿದರು ಮತ್ತು ಭಾರತ ಮತ್ತು ಚೀಣಾ ನಡುವೆ ಭಯೋತ್ಪಾದನೆ ಸಂಬಂಧಿತ ವಿಷಯಗಳ ನಿಗ್ರಹಕ್ಕೆ ಹೆಚ್ಚುತ್ತಿರುವ ಸಹಕಾರವನ್ನು ಸ್ವಾಗತಿಸಿದರು