ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಗೌರವಾನ್ವಿತ ಶ್ರೀ ಜಾನ್ ಕೆರಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಅಮೆರಿಕ ಅಧ್ಯಕ್ಷ ಶ್ರೀ ಜೋ ಬಿಡೆನ್ ಅವರ ಶುಭಾಶಯಗಳನ್ನು ಶ್ರೀ ಜಾನ್ ಕೆರಿ ಪ್ರಧಾನಮಂತ್ರಿ ಅವರಿಗೆ ತಲುಪಿಸಿದರು. ಇದೇ ಸಂದರ್ಭದಲ್ಲಿ ಶ್ರೀ ನರೇಂದ್ರ ಮೋದಿ ಅವರು, ಕ್ವಾಡ್ ನಾಯಕರ ಶೃಂಗ ಸಭೆ ಸೇರಿದಂತೆ ಇತ್ತೀಚೆಗೆ ಅಮೆರಿಕ ಅಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ್ದನ್ನು ಸ್ಮರಿಸಿಕೊಂಡರು. ಅಲ್ಲದೇ ಅಧ್ಯಕ್ಷ ಶ್ರೀ ಬಿಡೆನ್ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಕಮಲಾ ಹ್ಯಾರಿ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸುವಂತೆ ವಿನಂತಿಸಿದರು.
ಎರಡು ದಿನಗಳ ಭಾರತ ಭೇಟಿ ಸಂದರ್ಭದಲ್ಲಿ ನಡೆದ ಫಲಪ್ರದ ಮತ್ತು ಪ್ರಗತಿದಾಯಕ ಸಮಾಲೋಚನೆ ಬಗ್ಗೆ ಅವರು ಮಾಹಿತಿ ನೀಡಿದರು. ಹವಾಮಾನ ಬದಲಾವಣೆ ಕುರಿತ ಕ್ರಮಗಳು ಒಳಗೊಂಡಂತೆ ಮಹತ್ವಾಕಾಂಕ್ಷೆಯ ನವೀಕೃತ ಇಂಧನ ವಲಯದ ಯೋಜನೆಗಳ ಕುರಿತು ಶ‍್ರೀ ಜಾನ್ ಕೆರಿ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರು. ಬರುವ 2021 ರ ಏಪ್ರಿಲ್ 22-23 ರಂದು ಹವಾಮಾನ ಬದಲಾವಣೆ ಕುರಿತ ನಾಯಕರ ಶೃಂಗ ಸಭೆ ಬಗ್ಗೆ ಪ್ರಧಾನಮಂತ್ರಿ ಅವರಿಗೆ ವಿವರ ನೀಡಿದರು.
ಪ್ಯಾರೀಸ್ ಒಪ್ಪಂದದ ಅಡಿಯಲ್ಲಿ ದೇಶ ನಿರ್ಧರಿಸಿರುವ ಕೊಡುಗೆಗಳನ್ನು ಪೂರೈಸಲು ಭಾರತ ಬದ್ಧವಾಗಿದೆ. ಈ ಬದ್ಧತೆಗಳನ್ನು ಪೂರೈಸುವ ಕೆಲವೇ ದೇಶಗಳಲ್ಲಿ ಭಾರತ ಕೂಡ ಪ್ರಮುಖ ರಾಷ್ಟ್ರವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಕೈಗೆಟುಕುವ ರೀತಿಯಲ್ಲಿ ಹಸಿರು ತಂತ್ರಜ್ಞಾನ, ಅಗತ್ಯವಾದ ಆರ್ಥಿಕ ನೆರವು ಒದಗಿಸುವ ಮೂಲಕ ಭಾರತದ ಹವಾಮಾನ ಯೋಜನೆಗಳನ್ನು ಬೆಂಬಲಿಸುವುದಾಗಿ ಶ್ರೀ ಕೆರಿ ಹೇಳಿದರು.
ಭಾರತ ಮತ್ತು ಅಮೆರಿಕ ನಡುವಿನ ಸಹಕಾರ, ನಿರ್ದಿಷ್ಟವಾಗಿ ಹಣಕಾಸಿನ ನಾವಿನ್ಯತೆ ಮತ್ತು ತ್ವರಿತವಾಗಿ ಹಸಿರು ತಂತ್ರಜ್ಞಾನ ನಿಯೋಜನೆಯಂತಹ ಕ್ರಮಗಳು ಇತರೆ ದೇಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.