ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆಫ್ಘಾನಿಸ್ತಾನದಲ್ಲಿಂದು ನಡೆದ ಜಿ20 ರಾಷ್ಟ್ರಗಳ ನಾಯಕರ ವಿಶೇಷ ಶೃಂಗಸಭೆಯಲ್ಲಿ ವರ್ಚುವಲ್ ರೂಪದಲ್ಲಿ ಭಾಗವಹಿಸಿದ್ದರು. ಸದ್ಯ ಜಿ-20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಂಡಿರುವ ಇಟಲಿ ಈ ಶೃಂಗಸಭೆಯನ್ನು ಆಯೋಜಿಸಿತ್ತು ಮತ್ತು ಇಟಲಿಯ ಪ್ರಧಾನಮಂತ್ರಿ ಶ್ರೀ ಮಾರಿಯೊ ಡ್ರಾಘಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಫ್ಘಾನಿಸ್ತಾನದಲ್ಲಿನ ಮಾನವೀಯ ಸ್ಥಿತಿಗತಿ, ಭಯೋತ್ಪಾದನೆ ಮತ್ತು ಮಾನವ ಹಕ್ಕುಗಳು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಪರಿಶೀಲಿಸಲಾಯಿತು.
ಪ್ರಧಾನಮಂತ್ರಿ ಅವರು ತಮ್ಮ ಹೇಳಿಕೆಯಲ್ಲಿ ಆಫ್ಘಾನಿಸ್ತಾನದಲ್ಲಿನ ಸದ್ಯದ ಸ್ಥಿತಿಗತಿ ಕುರಿತು ಅವಲೋಕಿಸಲು ಇಟಲಿ ಅಧ್ಯಕ್ಷತೆಯಲ್ಲಿ ಜಿ20 ರಾಷ್ಟ್ರಗಳ ಸಭೆ ಆಯೋಜಿಸಿರುವ ಕ್ರಮವನ್ನು ಸ್ವಾಗತಿಸಿದರು. ಭಾರತ ಮತ್ತು ಆಫ್ಘಾನಿಸ್ತಾನದ ಜನರ ನಡುವೆ ಶತಮಾನಗಳಿಗೂ ಮಿಗಿಲಾದ ಸಂಬಂಧವಿದೆ ಎಂದು ಅವರು ಪ್ರತಿಪಾದಿಸಿದರು. ಕಳೆದ ಎರಡು ದಶಕಗಳಿಂದೀಚೆಗೆ ಭಾರತ ಆಫ್ಘಾನಿಸ್ತಾನದಲ್ಲಿ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಮತ್ತು ಯುವಜನರು ಹಾಗೂ ಮಹಿಳೆಯರ ಸಾಮರ್ಥ್ಯವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ನೀಡಿದೆ ಎಂದು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಅವರು ಆಫ್ಘಾನಿಸ್ತಾನದಲ್ಲಿ ಭಾರತ ಸುಮಾರು 500 ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸ್ಮರಿಸಿದರು.
ಆಫ್ಘನ್ ಜನರಲ್ಲಿ ಭಾರತದ ಸ್ನೇಹದ ಬಗ್ಗೆ ಉತ್ತಮ ಭಾವನೆ ಇದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಆಫ್ಘಾನಿಸ್ತಾನದ ಜನರು ಎದುರಿಸುತ್ತಿರುವ ಹಸಿವು ಮತ್ತು ಅಪೌಷ್ಟಿಕತೆಯ ನೋವನ್ನು ಪ್ರತಿಯೊಬ್ಬ ಭಾರತೀಯರೂ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು. ಮಾನವೀಯ ನೆರವಿಗೆ ಆಫ್ಘಾನಿಸ್ತಾನವು ತಕ್ಷಣದ ಮತ್ತು ಯಾವುದೇ ಅಡೆತಡೆ ಪ್ರವೇಶವನ್ನು ಹೊಂದಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯ ಖಾತ್ರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು.
ಆಫ್ಘನ್ ಭೂಪ್ರದೇಶ ಪ್ರಾದೇಶಿಕ ಮತ್ತು ಜಾಗತಿಕವಾಗಿ ತೀವ್ರವಾದ ಮತ್ತು ಭಯೋತ್ಪಾದನೆ ಮೂಲವಾಗದಂತೆ ಖಾತ್ರಿಪಡಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳ ಮತ್ತು ಮಾದಕದ್ರವ್ಯಗಳ ಕಳ್ಳಸಾಗಣೆ ತಡೆಯಲು ಭಯೋತ್ಪಾದನೆ ಮತ್ತು ತೀವ್ರವಾದದ ವಿರುದ್ಧ ಜಂಟಿ ಹೋರಾಟವನ್ನು ವೃದ್ಧಿಸಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ಕಳೆದ 20 ವರ್ಷಗಳ ಸಾಮಾಜಿಕ ಆರ್ಥಿಕ ಲಾಭವನ್ನು ಸಂರಕ್ಷಿಸಿಕೊಳ್ಳುವ ಉದ್ದೇಶದಿಂದ ಮತ್ತು ತೀವ್ರವಾದದ ಸಿದ್ಧಾಂತ ಹರಡದಂತೆ ನಿರ್ಬಂಧಿಸಲು ಆಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನೊಳಗೊಂಡಂತೆ ಎಲ್ಲರನ್ನೊಳಗೊಂಡ ಆಡಳಿತ ಅಸ್ಥಿತ್ವಕ್ಕೆ ಬರಬೇಕಿದೆ ಎಂದು ಪ್ರಧಾನಮಂತ್ರಿ ಕರೆ ನೀಡಿದರು. ಆಫ್ಘಾನಿಸ್ತಾನದಲ್ಲಿ ವಿಶ್ವ ಸಂಸ್ಥೆ ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಬೆಂಬಲಿಸುವುದಾಗಿ ಅವರು ಹೇಳಿದರು ಮತ್ತು ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 2593 ನಿರ್ಣಯದ ಸಂದೇಶವನ್ನು ಉಳಿಸಿಕೊಳ್ಳಲು ಜಿ-20 ರಾಷ್ಟ್ರಗಳಿಗೆ ಬೆಂಬಲ ನೀಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು. ಅಂತಾರಾಷ್ಟ್ರೀಯ ಸಮುದಾಯ ಒಗ್ಗೂಡಿ ಏಕರೂಪದ ಅಂತಾರಾಷ್ಟ್ರೀಯ ನಿಲುವನ್ನು ರೂಪಿಸಬೇಕು, ಅದು ಇಲ್ಲದಿದ್ದರೆ ಆಫ್ಘಾನಿಸ್ತಾನದ ಸ್ಥಿತಿಗತಿಯಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ತರುವುದು ಕಷ್ಟಕರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.