ಮಾಲ್ಡೀವ್ಸ್ ವಿದೇಶಾಂಗ ಸಚಿವ ಶ್ರೀ ಅಬ್ದುಲ್ಲಾ ಶಾಹಿದ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಶ್ರೀ ಅಬ್ದುಲ್ಲಾ ಶಾಹಿದ್ ಆರನೇ ಭಾರತ-ಮಾಲ್ಡೀವ್ಸ್ ಜಂಟಿ ಆಯೋಗದ ಸಭೆಗಾಗಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.
ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ನೇತೃತ್ವದ ಸರ್ಕಾರದ ಮೊದಲ ವರ್ಷದಲ್ಲಿ ವಿದೇಶಾಂಗ ಸಚಿವರಾಗಿ ಶಾಹಿದ್ ಅವರ ಸಾಧನೆ ಬಗ್ಗೆ ಪ್ರಧಾನಿಯವರು ಅವರಿಗೆ ಅಭಿನಂದನೆ ಸಲ್ಲಿಸಿದರು. ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ವರ್ಧಿತ ಮಟ್ಟದ ಮತ್ತು ದ್ವಿಪಕ್ಷೀಯ ಸಹಕಾರದ ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಪ್ರಧಾನಿಯವರು ತೃಪ್ತಿ ವ್ಯಕ್ತಪಡಿಸಿದರು. 6 ನೇ ಜೆಸಿಎಂ ಸಭೆಯಲ್ಲಿ ನಡೆದ ಚರ್ಚೆಗಳು ಉಭಯ ದೇಶಗಳ ನಡುವಿನ ಪರಸ್ಪರ ಲಾಭದಾಯಕ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ಗಾಢವಾಗಿಸಲು, ಪ್ರಗತಿಯನ್ನು ಪರಿಶೀಲಿಸಲು ಮತ್ತು ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷೆಯ ಮಾರ್ಗವನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಶಕ್ತಿಯುತವಾದ, ಪ್ರಜಾಪ್ರಭುತ್ವದ, ಸಮೃದ್ಧ ಮತ್ತು ಶಾಂತಿಯುತ ಮಾಲ್ಡೀವ್ಸ್ ಗಾಗಿ ಮಾಲ್ಡೀವ್ಸ್ ಸರ್ಕಾರವನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವ ಭಾರತದ ಬದ್ಧತೆಯನ್ನು ಪ್ರಧಾನಿ ಮೋದಿಯವರು ಪುನರುಚ್ಚರಿಸಿದರು.
ಭಾರತ-ಮಾಲ್ಡೀವ್ಸ್ ಸಂಬಂಧವನ್ನು ವೃದ್ಧಿಸಲು ದೂರದೃಷ್ಟಿಯ ಮತ್ತು ಶಕ್ತಿಯುತವಾದ ನಾಯಕತ್ವಕ್ಕಾಗಿ ವಿದೇಶಾಂಗ ಸಚಿವ ಶಾಹಿದ್ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ಜಾರಿಗೆ ಬರುತ್ತಿರುವ ವಿವಿಧ ಅಭಿವೃದ್ಧಿ ಸಹಕಾರ ಉಪಕ್ರಮಗಳಲ್ಲಿ ಭಾರತದ ನೀಡುತ್ತಿರುವ ಬೆಂಬಲಕ್ಕಾಗಿ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಾಲ್ಡೀವ್ಸ್ ನಾಯಕತ್ವದ ತನ್ನ ‘ಇಂಡಿಯಾ ಫಸ್ಟ್’ ನೀತಿ ಮತ್ತು ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಬದ್ಧತೆಯನ್ನು ಅವರು ತಿಳಿಸಿದರು.