ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಂಡಿರುವ ಶ್ರೀಲಂಕಾದ ಹಣಕಾಸು ಸಚಿವ, ಗೌರವಾನ್ವಿತ ಬಾಸಿಲ್ ರಾಜಪಕ್ಸೆ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ದ್ವಿಪಕ್ಷೀಯ ಆರ್ಥಿಕ ಸಹಕಾರ ವೃದ್ಧಿಗಾಗಿ ಎರಡೂ ದೇಶಗಳು ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಹಣಕಾಸು ಸಚಿವ ರಾಜಪಕ್ಸೆ ಅವರು ಪ್ರಧಾನಿಗೆ ವಿವರಿಸಿದರು ಮತ್ತು ಶ್ರೀಲಂಕಾದ ಆರ್ಥಿಕತೆಗೆ ಭಾರತ ನೀಡಿದ ಬೆಂಬಲಕ್ಕೆ ಧನ್ಯವಾದ ತಿಳಿಸಿದರು.
ಭಾರತದ 'ನೆರೆಹೊರೆಗೆ ಮೊದಲ ಆದ್ಯತೆ' ನೀತಿ ಮತ್ತು ʻಸಾಗರ್ʼ( S.A.G.A.R - ವಲಯದಲ್ಲಿರುವ ಎಲ್ಲರಿಗೂ ಭದ್ರತೆ ಮತ್ತು ಪ್ರಗತಿ) ಸಿದ್ಧಾಂತದಲ್ಲಿ ಶ್ರೀಲಂಕಾ ಹೊಂದಿರುವ ಕೇಂದ್ರ ಪಾತ್ರದ ಬಗ್ಗೆ ಪ್ರಧಾನಿ ಮಾತನಾಡಿದರು. ಶ್ರೀಲಂಕಾದ ಸ್ನೇಹಪರ ಜನತೆಗೆ ಭಾರತ ಬೆಂಬಲ ಮುಂದುವರಿಸುತ್ತದೆ ಎಂದು ಅವರು ಪುನರುಚ್ಚರಿಸಿದರು.
ಸಾಂಸ್ಕೃತಿಕ ವಲಯ ಸೇರಿದಂತೆ ಎರಡೂ ದೇಶಗಳ ಜನರ ನಡುವಿನ ಸಂಬಂಧಗಳು ಗಾಢವಾಗುತ್ತಿರುವ ಬಗ್ಗೆ ಹಣಕಾಸು ಸಚಿವ ರಾಜಪಕ್ಸೆ ಅವರು ಗಮನ ಸೆಳೆದರು. ಬೌದ್ಧ ಮತ್ತು ರಾಮಾಯಣ ಪ್ರವಾಸೋದ್ಯಮ ಸರ್ಕ್ಯೂಟ್‌ಗಳ ಜಂಟಿ ಪ್ರಚಾರ ಸೇರಿದಂತೆ ಪ್ರವಾಸಿಗರ ಹರಿವು ಹೆಚ್ಚಳಕ್ಕೆ ಇರುವ ಸಮರ್ಥ ಅವಕಾಶಗಳ ಬಗ್ಗೆ ಪ್ರಧಾನಿ ಮಾತನಾಡಿದರು.