ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ನಿನ್ನೆ ಮಾಘ ಪೌರ್ಣಮಿಯಿತ್ತು. ಮಾಘ ಮಾಸ ವಿಶೇಷವಾಗಿ ನದಿಗಳು, ಸರೋವರಗಳು ಮತ್ತು ಜಲಮೂಲಗಳಿಗೆ ಸಂಬಂಧಿಸಿದ್ದಾಗಿದೆ ಎಂದು ನಂಬಲಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಹೀಗೆ ಹೇಳಲಾಗಿದೆ :-

“ಮಾಘೆ ನಿಮಗ್ನಃ ಸಲಿಲೆ ಸುಶೀತೆ, ವಿಮುಕ್ತಪಾಪಾಃ ತ್ರಿದಿವಮ್ ಪ್ರಯಾಂತಿ”

ಇದರರ್ಥ ಮಾಘ ಮಾಸದಲ್ಲಿ ಯಾವುದೇ ಪವಿತ್ರ ಜಲಾಶಯದಲ್ಲಿ ಸ್ನಾನ ಮಾಡುವುದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶ್ವದ ಎಲ್ಲ ಸಮಾಜಗಳಲ್ಲೂ ನದಿಗೆ ಸಂಬಂಧಿಸಿದ ಒಂದಲ್ಲ ಒಂದು ಸಂಪ್ರದಾಯವಿದ್ದೇ ಇರುತ್ತದೆ. ನದಿತಟದಲ್ಲಿ ಅನೇಕ ನಾಗರಿಕತೆಗಳು ವಿಕಸನಗೊಂಡಿವೆ. ನಮ್ಮ ಸಂಸ್ಕೃತಿ ಸಾವಿರಾರು ವರ್ಷಗಳಷ್ಟು ಪುರಾತನವಾದ್ದರಿಂದ ಇದರ ವ್ಯಾಪ್ತಿ ನಮ್ಮಲ್ಲಿ ಸ್ವಲ್ಪ ಹೆಚ್ಚಾಗೇ ಇದೆ. ಭಾರತದ ಒಂದಲ್ಲಾ ಒಂದು ಮೂಲೆಯಲ್ಲಿ ಜಲಕ್ಕೆ ಸಂಬಂಧಿಸಿದ ಯಾವುದಾದರೊಂದು ಆಚರಣೆ ನಡೆಯದೇ ಇರುವಂತಹ ದಿನವೇ ಇಲ್ಲ. ಮಾಘ ಮಾಸದಲ್ಲಂತೂ ಜನರು ತಮ್ಮ ಮನೆ ಕುಟುಂಬ, ಸುಖ ಸೌಕರ್ಯಗಳನ್ನು ತೊರೆದು ತಿಂಗಳು ಪೂರ್ತಿ ನದೀತೀರಕ್ಕೆ ವಾಸಿಸಲು ತೆರಳುತ್ತಾರೆ. ಈ ಬಾರಿ ಹರಿದ್ವಾರದಲ್ಲಿ ಕುಂಭ ಮೇಳ ಜರುಗುತ್ತಿದೆ. ನೀರು ನಮಗೆ ಜೀವನ, ನಂಬಿಕೆ ಮತ್ತು ವಿಕಾಸದ ಮೂಲವಾಗಿದೆ. ನೀರು ಒಂದು ರೀತಿ ಸ್ಪರ್ಶಮಣಿಗಿಂತಲೂ ಮಹತ್ವಪೂರ್ಣವಾಗಿದೆ. ಸ್ಪರ್ಶಮಣಿಯ ಸ್ಪರ್ಶದಿಂದ ಕಬ್ಬಿಣವೂ ಬಂಗಾರವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ, ನೀರಿನ ಸ್ಪರ್ಶವೂ ಜೀವನಕ್ಕೆ, ಅಭಿವೃದ್ಧಿಗೆ ಅತ್ಯವಶ್ಯಕವಾಗಿದೆ. ಸ್ನೇಹಿತರೆ, ಮಾಘಮಾಸಕ್ಕೂ ಮತ್ತು ನೀರಿಗೂ ಇರುವ ಸಂಬಂಧಕ್ಕೆ ಇನ್ನೊಂದು ಕಾರಣವಿದೆ. ಇದರ ನಂತರ ಚಳಿಗಾಲ ಮುಗಿದುಹೋಗುತ್ತದೆ ಮತ್ತು ಬೇಸಿಗೆ ಅಡಿಯಿಡುತ್ತದೆ. ಆದ್ದರಿಂದ ಜಲಸಂರಕ್ಷಣೆಗೆ ನಾವು ಈಗಿನಿಂದಲೇ ಪ್ರಯತ್ನ ಮಾಡಬೇಕು. ಕೆಲ ದಿನಗಳ ನಂತರ ಇದೇ ಮಾರ್ಚ್ ತಿಂಗಳ 22 ರಂದು ‘ವಿಶ್ವ ಜಲ ದಿನಾಚರಣೆಯೂ’ ಇದೆ.

ನನಗೆ ಉತ್ತರ ಪ್ರದೇಶದ ಆರಾಧ್ಯ ಅವರು ಹೀಗೆ ಪತ್ರ ಬರೆದಿದ್ದಾರೆ-

ವಿಶ್ವದಲ್ಲಿ ಕೋಟ್ಯಂತರ ಜನರು ತಮ್ಮ ಜೀವನದ ಬಹಳಷ್ಟು ಸಮಯವನ್ನು ನೀರಿನ ಕೊರತೆಯನ್ನು ನೀಗಿಸುವುದರಲ್ಲೇ ವ್ಯಯಿಸುತ್ತಾರೆ. ‘ನೀರಿಲ್ಲದೆ ಎಲ್ಲವೂ ಬರಡು’ ಎಂದು ಸುಮ್ಮನೇ ಹೇಳಲಾಗಿಲ್ಲ. ನೀರಿನ ಸಂಕಷ್ಟವನ್ನು ಬಗೆಹರಿಸಲು ಪಶ್ಚಿಮ ಬಂಗಾಳದ ‘ಉತ್ತರ ದೀನಾಜ್ ಪುರ್’ ನಿಂದ ಸುಜೀತ್ ಜಿ ಅವರು ತುಂಬಾ ಒಳ್ಳೆಯ ಸಂದೇಶವನ್ನು ಕಳುಹಿಸಿದ್ದಾರೆ. ಸುಜೀತ್ ಅವರುಹೀಗೆ ಬರೆದಿದ್ದಾರೆ – ಪ್ರಕೃತಿ ಜಲರೂಪದಲ್ಲಿ ನಮಗೆ ಒಂದು ಸಾಮೂಹಿಕ ಕೊಡುಗೆಯನ್ನು ನೀಡಿದೆ. ಆದ್ದರಿಂದ ಅದನ್ನು ಸಂರಕ್ಷಿಸುವ ಜವಾಬ್ದಾರಿಯೂ ಎಲ್ಲರಿಗೂ ಸೇರಿದ್ದು. ಇವರು ಹೇಳಿದ್ದು ಸರಿಯೇ, ಸಾಮೂಹಿಕ ಕೊಡುಗೆಯಾದ್ದರಿಂದ ಸಾಮೂಹಿಕ ಜವಾಬ್ದಾರಿಯೂ ಇದೆ. ಸುಜೀತ್ ಅವರು ಸರಿಯಾಗೇ ಹೇಳಿದ್ದಾರೆ. ನದಿ, ಹಳ್ಳ ಕೊಳ್ಳ, ಮಳೆ ಅಥವಾ ಅಂತರ್ಜಲ, ಇವು ಎಲ್ಲರಿಗಾಗಿವೆ.

ಸ್ನೇಹಿತರೆ, ಒಂದು ಕಾಲದಲ್ಲಿ, ಗ್ರಾಮಗಳಲ್ಲಿ ಎಲ್ಲರೂ ಸೇರಿ ಬಾವಿಗಳು ಮತ್ತು ಹೊಂಡಗಳ ಸಂರಕ್ಷಣೆಯನ್ನು ಮಾಡುತ್ತಿದ್ದರು, ತಮಿಳುನಾಡಿನ ತಿರುಅಣ್ಣಾಮಲೈಯಲ್ಲಿ ಈಗ ಇಂಥದೇ ಒಂದು ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸ್ಥಳೀಯರು ತಮ್ಮ ಬಾವಿಗಳ ಸಂರಕ್ಷಣೆಗೆ ಆಂದೋಲನ ಕೈಗೊಂಡಿದ್ದಾರೆ. ಇವರು ತಮ್ಮ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಬಳಕೆಯಲ್ಲಿರದ ಬಾವಿಗಳ ಪುನರುಜ್ಜೀವನಕ್ಕೆ ಮುಂದಾಗಿದ್ದಾರೆ.

ಮಧ್ಯಪ್ರದೇಶದ ಅಗ್ರೋತಾ ಗ್ರಾಮದ ಬಬಿತಾ ರಾಜ್ ಪೂತ್ ಅವರು ಕೂಡಾ ಮಾಡುತ್ತಿರುವ ಕೆಲಸದಿಂದ ಕೂಡಾ ನಿಮಗೆಲ್ಲರಿಗೂ ಪ್ರೇರಣೆ ದೊರೆಯಲಿದೆ. ಬಬಿತಾ ಅವರ ಗ್ರಾಮ ಬುಂದೇಲ್ ಖಂಡದಲ್ಲಿದೆ. ಅವರ ಗ್ರಾಮದ ಬಳಿ ಹಿಂದೆ ಬಹುದೊಡ್ಡ ಕೊಳವಿತ್ತು. ಅದು ಒಣಗಿಹೋಗಿತ್ತು. ಅವರು ಗ್ರಾಮದ ಇತರ ಮಹಿಳೆಯರೊಡಗೂಡಿ ಕೊಳದವರೆಗೆ ನೀರನ್ನು ಹರಿಸಲು ಕಾಲುವೆಯೊಂದನ್ನು ನಿರ್ಮಿಸಿದರು. ಬಿದ್ದ ಮಳೆ ನೀರು ಈ ಕಾಲುವೆ ಮೂಲಕ ಕೊಳಕ್ಕೆ ಬಂದು ಸೇರುತ್ತಿತ್ತು. ಈಗ ಕೊಳ ನೀರಿನಿಂದ ತುಂಬಿ ತುಳುಕುತ್ತಿದೆ.

ಸ್ನೇಹಿತರೆ, ಉತ್ತರಾಖಂಡ್ ನ ಬಾಗೇಶ್ವರ್ ದಲ್ಲಿರುವ ಜಗದೀಶ್ ಕುನಿಯಾಲ್ ಅವರ ಕೆಲಸ ನಮಗೆ ಬಹಳಷ್ಟು ಕಲಿಸುತ್ತದೆ. ಜಗದೀಶ್ ಅವರ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶ ನೀರಿಗಾಗಿ ಪ್ರಾಕೃತಿಕ ಮೂಲವನ್ನು ಅವಲಂಬಿಸಿದ್ದವು. ಆದರೆ ಹಲವಾರು ವರ್ಷಗಳ ಹಿಂದೆ ಈ ನೀರಿನ ಮೂಲ ಒಣಗಿಹೋಗಿತ್ತು. ಇದರಿಂದ ಸಂಪೂರ್ಣ ಪ್ರದೇಶಕ್ಕೆ ನೀರಿನ ಸಮಸ್ಯೆ ಹೆಚ್ಚುತ್ತಲೇ ಹೋಯಿತು. ಜಗದೀಶ್ ಅವರು ಈ ಸಮಸ್ಯೆಗೆ ಗಿಡ ನೆಡುವ ಮೂಲಕ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದರು. ಅವರು ಸಂಪೂರ್ಣ ಪ್ರದೇಶದಲ್ಲಿ ಗ್ರಾಮದ ಜನರೊಂದಿಗೆ ಸೇರಿ ಸಾವಿರಾರು ಗಿಡಗಳನ್ನು ನೆಟ್ಟರು. ಆ ಪ್ರದೇಶದ ಒಣಗಿಹೋಗಿದ್ದ ನೀರಿನ ಮೂಲ ಇಂದು ಮತ್ತೆ ತುಂಬಿದೆ.

ಸ್ನೇಹಿತರೆ, ಈ ರೀತಿ ನೀರಿನ ಬಗ್ಗೆ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಭಾರತದ ಹೆಚ್ಚಿನ ಭಾಗಗಳಲ್ಲಿ ಮೇ-ಜೂನ್ ನಲ್ಲಿ ಮಳೆ ಆರಂಭವಾಗುತ್ತದೆ. ನಾವು ಈಗಿನಿಂದಲೇ ನಮ್ಮ ಸುತ್ತಮುತ್ತಲ ನೀರಿನ ಮೂಲಗಳ ಸ್ವಚ್ಛತೆಗೆ, ಮಳೆ ನೀರು ಸಂಗ್ರಹಕ್ಕೆ, 100 ದಿನಗಳ ಆಂದೋಲನವನ್ನು ಆರಂಭಿಸಬಹುದೇ? ಇದೇ ವಿಚಾರದೊಂದಿಗೆ ಕೆಲ ದಿನಗಳ ನಂತರ ಜಲಶಕ್ತಿ ಸಚಿವಾಲಯದಿಂದ ‘Catch the Rain’ ಎಂಬ ಆಂದೋಲನವನ್ನು ಆರಂಭಿಸಲಾಗುವುದು. ‘Catch the rain, where it falls, when it falls.’ ಎಂಬುದು ಈ ಆಂದೋಲನದ ಧ್ಯೇಯವಾಕ್ಯವಾಗಿದೆ. ನಾವು ಈಗಿನಿಂದಲೇ ಒಗ್ಗೂಡೋಣ. ಈಗಾಗಲೇ ಇರುವ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ದುರಸ್ಥಿ ಮಾಡಿಸೋಣ. ಗ್ರಾಮಗಳಲ್ಲಿ ಕೆರೆ ಕಾಲುವೆಗಳನ್ನು ಸ್ವಚ್ಛಗೊಳಿಸೋಣ. ಜಲಮೂಲಗಳಿಗೆ ಸಾಗುವ ನೀರಿನ ಮಾರ್ಗದಲ್ಲಿನ ಅಡೆತಡೆಗಳನ್ನು ತೊಡೆದುಹಾಕಿದರೆ ಹೆಚ್ಚೆಚ್ಚು ವರ್ಷಗಳವರೆಗೆ ಹೆಚ್ಚೆಚ್ಚು ಮಳೆ ನೀರನ್ನು ಸಂಗ್ರಹಿಸಬಹುದಾಗಿದೆ.

ನನ್ನ ಪ್ರಿಯ ದೇಶಬಾಂಧವರೆ, ಮಾಘಮಾಸ ಮತ್ತು ಅದರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮಹತ್ವದ ಕುರಿತು ಚರ್ಚೆಯಾದಾಗಲೆಲ್ಲ ಒಂದು ಹೆಸರು ಪ್ರಸ್ತಾಪವಾಗುತ್ತದೆ. ಆ ಹೆಸರು ಸಂತ ರವಿದಾಸ್ ಅವರದ್ದು. ಮಾಘ ಪೌರ್ಣಮಿಯಂದೇ ಸಂತ ರವಿದಾಸ್ ಅವರ ಜಯಂತಿ ಆಚರಿಸಲಾಗುತ್ತದೆ. ಇಂದಿಗೂ ಸಂತ ರವಿದಾಸ್ ಅವರ ಮಾತುಗಳು ಮತ್ತು ಜ್ಞಾನ ದಾರಿದೀಪವಾಗಿವೆ. ಅವರು ಹೀಗೆ ಹೇಳಿದ್ದರು...

ಏಕೈ ಮಾತಿ ಕೆ ಸಬ್ ಭಾಂಡೆ,

ಸಬ್ ಕಾ ಏಕೌ ಸಿರಜನಹಾರ್

ರವಿದಾಸ್ ವ್ಯಾಪೈ ಏಕೈ ಘಟ ಭೀತರ,

ಸಬಕೌ ಏಕೈ ಘಡೈ ಕುಮ್ಹಾರ್

ಅಂದರೆ, ನಾವೆಲ್ಲರೂ ಒಂದೇ ಮಣ್ಣಿನ ಪಾತ್ರೆಗಳಿದ್ದಂತೆ. ನಮ್ಮೆಲ್ಲರ ನಿರ್ಮಾತೃ ಒಬ್ಬನೇ, ಸಂತ ರವಿದಾಸ್ ಅವರು ಸಮಾಜದಲ್ಲಿ ವ್ಯಾಪಿಸಿರುವಂತಹ ವಿಕೃತಿಗಳ ಬಗ್ಗೆ ಎಂದಿಗೂ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಈ ವಿಕೃತಿಗಳನ್ನು ಸಮಾಜದ ಮುಂದಿಟ್ಟರು, ಅದರಿಂದ ಹೊರಬರುವ ಮಾರ್ಗ ಸೂಚಿಸಿದರು, ಮೀರಾಜಿ ಕೂಡಾ ಇದನ್ನೇ ಹೇಳಿದ್ದರು

‘ಗುರು ಮಿಲಿಯಾ ರೈದಾಸ್, ದೀನ್ಹಿ ಜ್ಞಾನ ಕಿ ಗುಟಕಿ’

ನಾನು ಸಂತ ರವಿದಾಸ್ ಅವರ ಜನ್ಮಸ್ಥಳ ವಾರಾಣಸಿಯೊಂದಿಗೆ ಸಂಬಂಧ ಹೊಂದಿರುವುದು ನನ್ನ ಸೌಭಾಗ್ಯ. ಆ ತೀರ್ಥಕ್ಷೇತ್ರದಲ್ಲಿ ಸಂತ ರವಿದಾಸ್ ಅವರ ಜೀವನದ ಆಧ್ಯಾತ್ಮಿಕ ಉತ್ತುಂಗದ ಮತ್ತು ಅವರ ಜ್ಞಾನದ ಬೆಳಕಿನ ಅನುಭವ ನನಗೆ ಆಗಿದೆ. ಸ್ನೇಹಿತರೆ, ರವಿದಾಸ್ ಅವರು ಹೀಗೆ ಹೇಳುತ್ತಿದ್ದರು-

ಕರಮ್ ಬಂಧನ್ ಮೆ ಬಂಧ ರಹಿಯೊ, ಫಲ್ ಕಿ ನಾ ತಜ್ಜಿಯೋ ಆಸ್

ಕರ್ಮ್ ಮಾನವ ಕಾ ಧರ್ಮ ಹೈ, ಸತ್ ಭಾಖೌ ರವಿದಾಸ್

ಅಂದರೆ ನಾವು ನಿರಂತರವಾಗಿ ನಮ್ಮ ಕರ್ಮಗಳನ್ನು ಮಾಡುತ್ತಿರಬೇಕು, ಅದಕ್ಕೆ ಫಲ ಖಂಡಿತ ದೊರೆಯುತ್ತದೆ. ಅಂದರೆ ಕರ್ಮದಿಂದ ಸಿದ್ಧಿ ಖಂಡಿತ ಸಾಧ್ಯ. ನಮ್ಮ ಯುವಕರು ಸಂತ ರವಿದಾಸ್ ರಿಂದ ಖಂಡಿತ ಕಲಿಯಬೇಕಿದೆ. ಯುವಕರು ಯಾವುದೇ ಕೆಲಸ ಮಾಡಲು ತಮ್ಮನ್ನು ತಾವು ಹಳೆಯ ಪದ್ಧತಿಗಳಿಂದ ಬಂಧಿಸಿಕೊಳ್ಳಬಾರದು. ನೀವು ನಿಮ್ಮ ಜೀವನವನ್ನು ಸ್ವತಃ ನಿರ್ಧರಿಸಿ. ನಿಮ್ಮ ಪದ್ಧತಿಗಳನ್ನು ಸ್ವತಃ ರೂಪಿಸಿ. ನಿಮ್ಮ ಗುರಿಗಳನ್ನು ನೀವೇ ನಿರ್ಧರಿಸಿಕೊಳ್ಳಿ. ನಿಮ್ಮ ವಿವೇಚನೆ ಮತ್ತು ಆತ್ಮವಿಶ್ವಾಸ ಧೃಡವಾಗಿದ್ದರೆ ನೀವು ವಿಶ್ವದಲ್ಲಿ ಯಾವುದೇ ವಿಷಯಕ್ಕೆ ಹೆದರಬೇಕಿಲ್ಲ. ನಾನು ಏಕೆ ಹೀಗೆ ಹೇಳುತ್ತೇನೆಂದರೆ, ಹಲವಾರು ಬಾರಿ ನಮ್ಮ ಯುವಕರು ರೂಢಿಯಲ್ಲಿರುವ ಆಲೋಚನೆಗಳ ಒತ್ತಡದಿಂದ ತಮಗೆ ಇಷ್ಟವಾದ ಕೆಲಸವನ್ನು ಮಾಡಲಾಗುತ್ತಿಲ್ಲ. ಆದ್ದರಿಂದ ಹೊಸತನ್ನು ಆಲೋಚಿಸುವಲ್ಲಿ ಮತ್ತು ಹೊಸತನ್ನು ಮಾಡಲು ನೀವು ಎಂದಿಗೂ ಸಂಕೋಚಪಟ್ಟುಕೊಳ್ಳಬಾರದು. ಇದೇ ರೀತಿ ಸಂತ ರವಿದಾಸ್ ಅವರು ಮತ್ತೊಂದು ಮಹತ್ವಪೂರ್ಣ ಸಂದೇಶ ನೀಡಿದ್ದಾರೆ. ಅದು –‘ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ’ ಎಂಬುದಾಗಿದೆ. ನಾವು ನಮ್ಮ ಕನಸುಗಳಿಗಾಗಿ ಬೇರೆಯವರನ್ನು ಅವಲಂಬಿಸುವುದು ಒಳ್ಳೆಯದಲ್ಲ.ಯಾವುದು ಹೇಗಿದೆಯೋ ಅದು ಹಾಗೆಯೇ ಮುಂದುವರಿಯಲಿ. ಸಂತ ರವಿದಾಸ್ ಅವರು ಎಂದಿಗೂ ಇದನ್ನು ಪ್ರೋತ್ಸಾಹಿಸಲಿಲ್ಲ. ದೇಶದ ನಮ್ಮ ಯುವಜನತೆ ಕೂಡ ಹೀಗೆ ಮಾಡುತ್ತಿಲ್ಲ ಎಂಬುದನ್ನು ನಾವು ಕಾಣಬಹುದು. ಇಂದು ನಾನು ದೇಶದ ಯುವಜನತೆಯಲ್ಲಿ ನವ ಚೈತನ್ಯವನ್ನು ಕಂಡಾಗ ಸಂತ ರವಿದಾಸ್ ಅವರು ನಮ್ಮ ಯುವಜನತೆ ಬಗ್ಗೆ ಖಂಡಿತ ಹೆಮ್ಮೆಪಡುತ್ತಿದ್ದರು ಎಂದು ನನಗೆ ಅನ್ನಿಸುತ್ತದೆ.

ನನ್ನ ಪ್ರಿಯ ದೇಶಬಾಂಧವರೆ, ಇಂದು ‘ರಾಷ್ಟ್ರೀಯ ವಿಜ್ಞಾನ ದಿನ’ವೂ ಹೌದು. ಇಂದು ಭಾರತದ ಮಹಾನ್ ವಿಜ್ಞಾನಿ ಡಾ ಸಿ ವಿ ರಾಮನ್ ಅವರ ಸಂಶೋಧನೆ ‘ರಾಮನ್ ಎಫೆಕ್ಟ್’ ಗೆ ಅರ್ಪಿತವಾಗಿದೆ. ರಾಮನ್ ಎಫೆಕ್ಟ್ ಸಂಶೋಧನೆ ವಿಜ್ಞಾನದ ದಿಕ್ಕನ್ನೇ ಬದಲಿಸಿದೆ ಎಂದು ಕೇರಳದಿಂದ ಯೋಗೇಶ್ವರನ್ ಅವರು ನಮೋ ಆಪ್ ನಲ್ಲಿ ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ಅತ್ಯುತ್ತಮ ಸಂದೇಶವನ್ನು ನಾಸಿಕ್ ನಿಂದ ಸ್ನೇಹಿಲ್ ಅವರು ಕಳುಹಿಸಿದ್ದಾರೆ. ನಮ್ಮ ದೇಶದಲ್ಲಿ ಅಸಂಖ್ಯಾತ ವಿಜ್ಞಾನಿಗಳಿದ್ದಾರೆ. ಅವರ ಕೊಡುಗೆಯಿಲ್ಲದೇ ವಿಜ್ಞಾನ ಇಷ್ಟೊಂದು ಸಾಧನೆ ಮಾಡಲಾಗದು ಎಂದು ಸ್ನೇಹಿಲ್ ಅವರು ಬರೆದಿದ್ದಾರೆ. ನಾವು ವಿಶ್ವದ ಇತರ ವಿಜ್ಞಾನಿಗಳ ಬಗ್ಗೆ ಹೇಗೆ ತಿಳಿದಿದ್ದೆವೆಯೋ ಹಾಗೆಯೇ ನಾವು ಭಾರತದ ವಿಜ್ಞಾನಿಗಳ ಬಗ್ಗೆಯೂ ಅರಿಯಬೇಕು. ನಾನೂ ಮನದ ಮಾತಿನ ಈ ಶ್ರೋತೃಗಳ ಮಾತನ್ನು ಒಪ್ಪುತ್ತೇನೆ. ನಮ್ಮ ಯುವಜನತೆ ಭಾರತದ ವೈಜ್ಞಾನಿಕ ಇತಿಹಾಸ ಹಾಗೂ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳಲಿ, ಅರ್ಥೈಸಿಕೊಳ್ಳಲಿ ಮತ್ತು ಚೆನ್ನಾಗಿ ಓದಲಿ ಎಂದು ನಾನು ಕೂಡ ಬಯಸುತ್ತೇನೆ. ಸ್ನೇಹಿತರೆ, ನಾವು ವಿಜ್ಞಾನದ ಬಗ್ಗೆ ಮಾತನಾಡುವಾಗ ಜನರು ಇದನ್ನು ಭೌತವಿಜ್ಞಾನ, ರಾಸಾಯನಿಕ ವಿಜ್ಞಾನ ಮತ್ತು ಪ್ರಯೋಗಾಲಯಗಳಿಗೆ ಸೀಮಿತಗೊಳಿಸುತ್ತಾರೆ, ಆದರೆ ವಿಜ್ಞಾನದ ವಿಸ್ತಾರ ಇದಕ್ಕಿಂತ ಬಹಳ ದೊಡ್ಡದಾಗಿದೆ ಮತ್ತು ‘ಆತ್ಮನಿರ್ಭರ್ ಭಾರತ್’ / ಸ್ವಾವಲಂಬಿ ಭಾರತ ಆಂದೋಲನದಲ್ಲಿ ವಿಜ್ಞಾನದ ಕೊಡುಗೆ ಬಹಳ ದೊಡ್ಡದು. ನಾವು ವಿಜ್ಞಾನವನ್ನು ಲ್ಯಾಬ್ ಟು ಲ್ಯಾಂಡ್ ಎಂಬ ಮಂತ್ರದೊಂದಿಗೆ ಮುಂದುವರಿಸಬೇಕಿದೆ.

ಉದಾಹರಣೆಗೆ ಹೈದ್ರಾಬಾದ್ ನ ಚಿಂತಲ ವೆಂಕಟ ರೆಡ್ಡಿಯವರಿದ್ದಾರೆ -

ರೆಡ್ಡಿಯವರ ವೈದ್ಯ ಮಿತ್ರರೊಬ್ಬರು ‘ವಿಟಮಿನ್ ಡಿ’ ಕೊರತೆಯಿಂದಾಗುವ ರೋಗಗಳು ಮತ್ತು ಅಪಾಯಗಳ ಬಗ್ಗೆ ಹೇಳಿದ್ದರು. ರೆಡ್ಡಿಯವರು ಒಬ್ಬ ಕೃಷಿಕ. ಈ ಸಮಸ್ಯೆಯ ಪರಿಹಾರಕ್ಕೆ ಏನು ಮಾಡಬಹುದು ಎಂದು ಯೋಚಿಸಿದರು. ನಂತರ ಅವರು ಶ್ರಮಪಟ್ಟು ‘ವಿಟಮಿನ್ ಡಿ’ ಯುಕ್ತ ಗೋಧಿ ಮತ್ತು ಅಕ್ಕಿಯ ತಳಿಗಳನ್ನು ಸಿದ್ಧಪಡಿಸಿದರು. ಇದೇ ತಿಂಗಳು ಅವರಿಗೆ ಜಿನೀವಾದ ವಿಶ್ವದ ಬೌದ್ಧಿಕ ಸ್ವತ್ತು ಸಂಸ್ಥೆಯಿಂದ, ಪೇಟೆಂಟ್ ಕೂಡಾ ದೊರೆತಿದೆ. ಕಳೆದ ವರ್ಷ ವೆಂಕಟ ರೆಡ್ಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ನಮ್ಮ ಸರ್ಕಾರದ ಸೌಭಾಗ್ಯ.

ಇದೇ ರೀತಿ, ಲದ್ದಾಖ್ ನ ಉರಗೆನ್ ಫುತ್ಸೌಗ್ ಅವರು ಕೂಡಾ ನಾವೀನ್ಯಪೂರ್ಣ ಕೆಲಸ ಮಾಡುತ್ತಿದ್ದಾರೆ. ಇಷ್ಟೊಂದು ಎತ್ತರದ ಪ್ರದೇಶದಲ್ಲಿ ಕೃಷಿ ಕೈಗೊಂಡು ಸೈಕ್ಲಿಕ್ ರೀತಿಯಲ್ಲಿ ಸಾವಯವ ಕೃಷಿಯಿಂದ ಸುಮಾರು 20 ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಂದರೆ ಅವರು ಒಂದು ಬೆಳೆಯ ತ್ಯಾಜ್ಯಗಳನ್ನು ಮತ್ತೊಂದು ಬೆಳೆಗೆ ಗೊಬ್ಬರವಾಗಿ ಬಳಸುತ್ತಿದ್ದಾರೆ. ಇದು ಅದ್ಭುತ ವಿಷಯವಲ್ಲವೇ.

ಇದೇ ರೀತಿ ಗುಜರಾತ್ ನ ಪಾಟನ್ ಜಿಲ್ಲೆಯಲ್ಲಿ ಕಾಮರಾಜ್ ಭಾಯಿ ಚೌಧರಿಯವರು ಮನೆಯಲ್ಲೇ ನುಗ್ಗೆಕಾಯಿಯ ಉತ್ಕೃಷ್ಟ ಬೀಜಗಳನ್ನು ಉತ್ಪಾದಿಸಿದ್ದಾರೆ. ಇದನ್ನು ಕೆಲವು ಜನರು ಸರ್ಗವಾ, ಮೋರಿಂಗಾ, ಡ್ರಮ್ ಸ್ಟಿಕ್ ಎಂದು ಕೂಡಾ ಕರೆಯುತ್ತಾರೆ. ಉತ್ತಮ ಬೀಜಗಳಿಂದ ಬೆಳೆಯುವ ನುಗ್ಗೆಯ ಗುಣಮಟ್ಟ ಕೂಡಾ ಉತ್ತಮವಾಗಿರುತ್ತದೆ. ತಮ್ಮ ಫಸಲನ್ನು ಅವರು ಈಗ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಸ್ನೇಹಿತರೆ, ಇತ್ತೀಚೆಗೆ ಚಿಯಾ ಸೀಡ್ಸ್ ಹೆಸರನ್ನು ಬಹಳ ಕೇಳಿರುತ್ತೀರಿ. ಆರೋಗ್ಯ ಜಾಗೃತಿ ಹೊಂದಿರುವರು ಇದಕ್ಕೆ ಬಹಳ ಮಹತ್ವ ನೀಡುತ್ತಾರೆ. ವಿಶ್ವದಲ್ಲಿ ಇದಕ್ಕೆ ಬಹಳ ಬೇಡಿಕೆಯಿದೆ. ಭಾರತದಲ್ಲಿ ಇದನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಆದರೆ ಈಗ ಚಿಯಾ ಬೀಜಗಳಲ್ಲೂ ಸ್ವಾವಲಂಬನೆಗೆ ಜನರು ಮುಂದಾಗಿದ್ದಾರೆ. ಇದೇ ರೀತಿ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಹರಿಶ್ಚಂದ್ರ ಅವರು ಚಿಯಾ ಬೀಜಗಳ ಕೃಷಿ ಮಾಡುತ್ತಿದ್ದಾರೆ. ಚಿಯಾ ಬೀಜಗಳ ಕೃಷಿ ಅವರ ಆದಾಯ ಹೆಚ್ಚಿಸುತ್ತದೆ ಮತ್ತು ಸ್ವಾವಲಂಬಿ ಭಾರತಕ್ಕೂ ಸಹಕಾರಿಯಾಗಲಿದೆ.

ಸ್ನೇಹಿತರೆ, ಕೃಷಿ ತ್ಯಾಜ್ಯದಿಂದಲೂ ಆದಾಯ ಹೆಚ್ಚಳದ ಪ್ರಯತ್ನಗಳು ದೇಶಾದ್ಯಂತ ಯಶಸ್ವಿಯಾಗಿ ಸಾಗಿವೆ. ಮಧುರೈನ ಮುರುಗೇಸನ್ ಅವರು ಬಾಳೆ ತ್ಯಾಜ್ಯದಿಂದ ಹಗ್ಗವನ್ನು ತಯಾರಿಸುವ ಯಂತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಮುರುಗೇಸನ್ ಅವರ ಈ ಆವಿಷ್ಕಾರದಿಂದ ಪರಿಸರ ಮತ್ತು ತ್ಯಾಜ್ಯಕ್ಕೂ ಪರಿಹಾರ ಸಿಗುತ್ತದೆ. ಅಲ್ಲದೆ ರೈತರಿಗೆ ಹೆಚ್ಚಿನ ಆದಾಯದ ಮಾರ್ಗವಾಗುವುದು.

ಸ್ನೇಹಿತರೆ, ‘ಮನದ ಮಾತಿನ’ ಶ್ರೋತೃಗಳಿಗೆ ಇಷ್ಟೊಂದು ಸಾಧಕರ ಬಗ್ಗೆ ಹೇಳುವ ನನ್ನ ಉದ್ದೇಶ ಏನು ಎಂದರೆ, ನಾವೆಲ್ಲರೂ ಇವರಿಂದ ಸ್ಪೂರ್ತಿ ಪಡೆಯಬೇಕು. ದೇಶದ ಪ್ರತಿಯೊಬ್ಬ ನಾಗರಿಕನೂ ತಮ್ಮ ಜೀವನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡಾಗ ಪ್ರತಿ ಕ್ಷೇತ್ರದಲ್ಲೂ, ಪ್ರಗತಿಗೆ ಮಾರ್ಗಗಳು ಹುಟ್ಟಿಕೊಳ್ಳುತ್ತವೆ ಮತ್ತು ದೇಶ ಕೂಡ ಸ್ವಾವಲಂಬಿಯಾಗುತ್ತದೆ. ದೇಶದ ಪ್ರತಿ ನಾಗರಿಕನೂ ಇದನ್ನು ಮಾಡಬಲ್ಲ ಎಂಬ ವಿಶ್ವಾಸ ನನಗಿದೆ.

ನನ್ನ ಪ್ರಿಯ ದೇಶಬಾಂಧವರೆ, ಕೋಲ್ಕತ್ತಾದ ರಂಜನ್ ಅವರು ತಮ್ಮ ಪತ್ರದಲ್ಲಿ ಬಹಳ ಆಸಕ್ತಿಕರ ಮತ್ತು ಮೂಲಭೂತ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಜೊತೆಗೆ ಬಹಳ ಉತ್ತಮ ರೀತಿಯಲ್ಲಿ ಅದಕ್ಕೆ ಉತ್ತರ ನೀಡಲು ಪ್ರಯತ್ನಿಸಿದ್ದಾರೆ. ನಾವು ಸ್ವಾವಲಂಬಿಯಾಗುವ ಕುರಿತು ಮಾತನಾಡುವಾಗ ಇದು ನಮಗೆ ಅನ್ವಯಿಸುವ ಬಗೆಯನ್ನು ಅವರು ವಿವರಿಸಿದ್ದಾರೆ. ಇದೇ ಪ್ರಶ್ನೆಗೆ ಉತ್ತರ ರೂಪದಲ್ಲಿ ಅವರು ಸ್ವತಃ ಹೀಗೆ ಬರೆದಿದ್ದಾರೆ – “ಸ್ವಾವಲಂಬಿ ಭಾರತ ಆಂದೋಲನ" ಕೇವಲ ಸರ್ಕಾರಿ ನೀತಿಯಲ್ಲ ಬದಲಿಗೆ ಅದು ಒಂದು ರಾಷ್ಟ್ರೀಯ ಚೈತನ್ಯವಾಗಿದೆ.” ಸ್ವಾವಲಂಬಿಯಾಗುವುದು ಎಂದರೆ ತಮ್ಮ ಅದೃಷ್ಟದ ಬಗ್ಗೆ ತಾವೇ ನಿರ್ಧರಿಸುವುದು ಎಂದು ಅವರು ನಂಬಿದ್ದಾರೆ. ರಂಜನ್ ಬಾಬು ಅವರ ಮಾತು ನೂರಕ್ಕೆ ನೂರು ಸತ್ಯ. ಅವರ ಮಾತನ್ನು ಮುಂದುವರಿಸಿ, ಸ್ವಾವಲಂಬನೆಯ ಮೊದಲ ಶರತ್ತು ನಮ್ಮ ದೇಶೀಯ ಉತ್ಪನ್ನಗಳ ಬಗ್ಗೆ ಹೆಮ್ಮೆ, ಸ್ವದೇಶಿಯರಿಂದ ಸಿದ್ಧಗೊಳಿಸಲಾದ ವಸ್ತುಗಳ ಬಗ್ಗೆ ಹೆಮ್ಮೆ ಎಂದು ಹೇಳಬಯಸುತ್ತೇನೆ. ಪ್ರತಿಯೊಬ್ಬ ದೇಶವಾಸಿಯೂ ಹೆಮ್ಮಪಟ್ಟಾಗ, ಪ್ರತಿಯೊಬ್ಬ ದೇಶವಾಸಿಯೂ ಕೈಜೋಡಿಸಿದಾಗ ಸ್ವಾವಲಂಬಿ ಭಾರತ ಎಂಬುದು ಕೇವಲ ಆರ್ಥಿಕ ಆಂದೋಲನವಾಗಿರದೇ ರಾಷ್ಟ್ರೀಯ ಚೈತನ್ಯವಾಗಿ ಬದಲಾಗುತ್ತದೆ. ಆಕಾಶದಲ್ಲಿ ಸ್ವದೇಶಿ ಯುದ್ಧ ವಿಮಾನ ತೇಜಸ್ ಕಸರತ್ತು ತೋರುವುದನ್ನು ನಾವು ನೋಡಿದಾಗ, ಭಾರತದಲ್ಲಿ ತಯಾರಿಸಲಾದ ಟ್ಯಾಂಕ್, ಭಾರತದಲ್ಲಿ ತಯಾರಿಸಲಾದ ಮಿಸೈಲ್ ನಮ್ಮ ಹೆಮ್ಮೆಯನ್ನು ಹೆಚ್ಚಿಸುತ್ತವೆ. ಸಮೃದ್ಧ ದೇಶಗಳಲ್ಲಿ ನಾವು ಮೆಟ್ರೋ ರೈಲುಗಳ ಕೋಚ್ ಗಳನ್ನು ನೋಡಿದಾಗ, ಡಜನ್ ಗಟ್ಟಲೆ ದೇಶಗಳಿಗೆ ಭಾರತದಲ್ಲಿ ಸಿದ್ಧವಾದ ಕೊರೊನಾ ವೈರಾಣು ಲಸಿಕೆ ತಲುಪಿಸುವುದನ್ನು ಕಂಡಾಗ ಸ್ವಾಭಿಮಾನದಿಂದ ಬೀಗುತ್ತೇವೆ. ಕೇವಲ ದೊಡ್ಡ ವಸ್ತುಗಳೇ ನಮ್ಮ ದೇಶವನ್ನು ಸ್ವಾವಲಂಬಿಗೊಳಿಸುತ್ತವೆ ಎಂದಲ್ಲ. ಭಾರತದಲ್ಲಿ ಸಿದ್ಧಗೊಳ್ಳುವ ವಸ್ತ್ರಗಳು, ಭಾರತದ ಕೌಶಲ್ಯಯುತ ಕುಶಲಕರ್ಮಿಗಳಿಂದ ತಯಾರಿಸಲಾದ ಕರಕುಶಲ ವಸ್ತುಗಳು, ಭಾರತದ ಎಲೆಕ್ಟ್ರಾನಿಕ್ ಉಪಕರಣಗಳು, ಭಾರತದ ಮೊಬೈಲ್ ಗಳು, ಎಲ್ಲ ಕ್ಷೇತ್ರದಲ್ಲೂ ಹೆಮ್ಮೆಪಡುವಂತಾಗಬೇಕಿದೆ. ನಾವು ಇದೇ ಆಲೋಚನೆಯೊಂದಿಗೆ ಮುಂದುವರಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಸ್ವಾವಲಂಬಿಯಾಗಬಲ್ಲೆವು. ಸ್ನೇಹಿತರೆ, ಸ್ವಾವಲಂಬಿ ಭಾರತದ ಈ ಮಂತ್ರ ದೇಶದ ಪ್ರತಿಯೊಂದು ಗ್ರಾಮವನ್ನು ತಲುಪುತ್ತಿದೆ ಎಂಬುದು ನನಗೆ ಸಂತಸ ತಂದಿದೆ. ಬಿಹಾರದ ಬೇತಿಯಾದಲ್ಲೂ ಇದೇ ಆಗಿದೆ. ಇದರ ಬಗ್ಗೆ ನಾನು ಮಾಧ್ಯಮದಲ್ಲಿ ಓದಿದೆ.

ಬೇತಿಯಾದ ನಿವಾಸಿ ಪ್ರಮೋದ್ ಅವರು ದಿಲ್ಲಿಯಲ್ಲಿ ಒಬ್ಬ ಟೆಕ್ನಿಶಿಯನ್ ಆಗಿ LED Bulb ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಬಲ್ಬ್ ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅರಿತರು. ಆದರೆ ಕೊರೊನಾದಿಂದಾಗಿ ಅವರು ತಮ್ಮ ಮನೆಗೆ ಹಿಂದಿರುಗಬೇಕಾಯಿತು. ಹಿಂದಿರುಗಿದ ಮೇಲೆ ಪ್ರಮೋದ್ ಅವರು ಏನು ಮಾಡಿದರು ನಿಮಗೆ ಗೊತ್ತೇ? ಅವರು ಸ್ವತಃ LED Bulb ತಯಾರಿಸುವ ಚಿಕ್ಕ ಘಟಕವನ್ನು ಸ್ಥಾಪಿಸಿದರು. ಅವರು ತಮ್ಮ ಕ್ಷೇತ್ರದ ಕೆಲ ಯುವಕರ ಸಹಾಯ ಪಡೆದು ಕೆಲವೇ ತಿಂಗಳುಗಳಲ್ಲಿ ತಮ್ಮ ಮನೆಯಲ್ಲೇ ಇದ್ದುಕೊಂಡು ಕಾರ್ಖಾನೆಯ ಕೆಲಸಗಾರನಿಂದ ಮಾಲೀಕನಾಗುವ ಪಯಣವನ್ನು ಪೂರ್ಣಗೊಳಿಸಿದರು.

ಮತ್ತೊಂದು ಉದಾಹರಣೆ-ಉತ್ತರ ಪ್ರದೇಶದ ಗಢಮುಕ್ತೇಶ್ವರದ್ದು. ಗಢಮುಕ್ತೇಶ್ವರ್ ನ ಶ್ರೀ ಸಂತೋಷ್‌ ಅವರು ಕೊರೊನಾ ಕಾಲದಲ್ಲಿ ಅವರು ಸಂಕಷ್ಟವನ್ನು ಅವಕಾಶವನ್ನಾಗಿ ಹೇಗೆ ಪರಿವರ್ತಿಸಿದರು ಎಂಬ ಬಗ್ಗೆ ಬರೆಯುತ್ತಾರೆ. ಸಂತೋಷ್‌ ಅವರ ಪೂರ್ವಜರು ಅದ್ಭುತ ಕುಶಲಕರ್ಮಿಗಳಾಗಿದ್ದರು, ಅವರು ಚಾಪೆ ಹೆಣೆಯುತ್ತಿದ್ದರು. ಕೊರೊನಾ ಸಮಯದಲ್ಲಿ ಬಾಕಿ ಕೆಲಸಗಳೆಲ್ಲ ನಿಂತುಹೋದಾಗ ಇವರು ಉತ್ಸಾಹ ಮತ್ತು ಹುರುಪಿನಿಂದ ಚಾಪೆ ಹೆಣೆಯುವ ಕೆಲಸ ಆರಂಭಿಸಿದರು. ಬಹುಬೇಗ ಅವರಿಗೆ ಉತ್ತರ ಪ್ರದೇಶ ಮಾತ್ರವಲ್ಲ ಬೇರೆ ರಾಜ್ಯಗಳಿಂದ ಚಾಪೆಗಳಿಗೆ ಬೇಡಿಕೆ ಬರಲಾರಂಭಿಸಿತು. ಬಹಳ ವರ್ಷಗಳ ಹಳೆಯ ಈ ಸುಂದರ ಕಲೆಗೆ ಹೊಸ ಶಕ್ತಿ ದೊರೆತಿದೆ ಎಂದೂ ಸಂತೋಷ್‌ ಅವರು ಹೇಳಿದ್ದಾರೆ.

ಸ್ನೇಹಿತರೆ, ದೇಶದಲ್ಲಿ ‘ಸ್ವಾವಲಂಬಿ ಭಾರತ ಆಂದೋಲನಕ್ಕೆ’ ಹೀಗೆ ಕೊಡುಗೆ ನೀಡಿದ ಇಂಥ ಉದಾಹರಣೆಗಳು ಬಹಳಷ್ಟಿವೆ. ಇಂದು ಸಾಮಾನ್ಯ ಜನರ ಮನದಲ್ಲಿ ಹರಿವ ಒಂದು ಭಾವನೆಯಾಗಿ ಇದು ನೆಲೆಸಿದೆ.

ನನ್ನ ಪ್ರಿಯ ದೇಶಬಾಂಧವರೆ, ನಾನು ನಮೋ ಆಪ್ ನಲ್ಲಿ ಗುಡಗಾಂವ್ ನಿವಾಸಿ ಮಯೂರ್ ಅವರ ಒಂದು ಆಸಕ್ತಿಕರ ಪೋಸ್ಟ್ ನೋಡಿದೆ. ಅವರು ಪ್ರಕೃತಿ ಮತ್ತು ಪಕ್ಷಿ ವೀಕ್ಷಣೆಯ ಒಲವು ಹೊಂದಿದವರಾಗಿದ್ದಾರೆ. ನಾನು ಹರಿಯಾಣದಲ್ಲಿರುತ್ತೇನೆ. ಆದರೆ ನೀವು ಅಸ್ಸಾಂ ಜನತೆ ಬಗ್ಗೆ ಅದರಲ್ಲೂ ವಿಶೇಷವಾಗಿ ಕಾಜಿರಂಗಾ ಜನತೆ ಬಗ್ಗೆ ಮಾತನಾಡಿ ಎಂದು ಬಯಸುತ್ತೇನೆ ಎಂದು ಮಯೂರ್ ಅವರು ಬರೆದಿದ್ದಾರೆ. ಮಯೂರ್ ಅವರು ಆ ಪ್ರದೇಶದ ಹೆಮ್ಮೆ ಎಂದು ಕರೆಯಲ್ಪಡುವ ಘೇಂಡಾಮೃಗಗಳ ಬಗ್ಗೆ ಮಾತನಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಮಯೂರ್ ಅವರು ಕಾಜಿರಂಗಾದಲ್ಲಾದ ವಾಟರ್ ಫೌಲ್ ಗಳ ಸಂಖ್ಯೆಯಲ್ಲಾದ ಹೆಚ್ಚಳದ ಬಗ್ಗೆ ಅಸ್ಸಾಂ ಜನತೆಯನ್ನು ಪ್ರಶಂಸಿಸಬೇಕೆಂದು ಕೇಳಿಕೊಂಡಿದ್ದಾರೆ. ವಾಟರ್ ಫೌಲ್ ಗಳನ್ನು ಸಾಮಾನ್ಯ ಶಬ್ದಗಳಲ್ಲಿ ಏನೆಂದು ಕರೆಯಬಹುದು ಎಂದು ನಾನು ಹುಡುಕುತ್ತಿದ್ದೆ. ಆಗ ಒಂದು ಶಬ್ದ ದೊರೆಯಿತು –ಜಲಪಕ್ಷಿ. ಇವು ಮರದ ಮೇಲಲ್ಲದೆ ಬಾತುಕೋಳಿಯಂತೆ ನೀರಿನಲ್ಲಿ ವಾಸಿಸುತ್ತವೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಪ್ರಾಧಿಕಾರ ವಾರ್ಷಿಕ ಜಲಪಕ್ಷಿಗಳ ಗಣತಿ ಮಾಡುತ್ತಾ ಬಂದಿದೆ. ಈ ಗಣತಿಯಿಂದ ಜಲಪಕ್ಷಿಗಳ ಸಂಖ್ಯೆ ಬಗ್ಗೆ ತಿಳಿಯುತ್ತದೆ. ಅಲ್ಲದೆ ಅವುಗಳ ನೆಚ್ಚಿನ ವಾಸಸ್ಥಾನದ ಬಗ್ಗೆ ಕೂಡ ಮಾಹಿತಿ ದೊರೆಯುತ್ತದೆ. ಈಗ 2-3 ವಾರಗಳ ಹಿಂದೆ ಮತ್ತೊಮ್ಮೆ ಸಮೀಕ್ಷೆ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಜಲಪಕ್ಷಿಗಳ ಸಂಖ್ಯೆ ಸುಮಾರು ಶೇ 175 ರಷ್ಟು ಹೆಚ್ಚಾಗಿದೆ ಎಂದು ಕೇಳಿ ನಿಮಗೂ ಸಂತೋಷವಾಗಬಹುದು. ಈ ಗಣತಿ ಸಮಯದಲ್ಲಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 112 ತಳಿಯ ಪಕ್ಷಿಗಳನ್ನು ನೋಡಬಹುದಾಗಿದೆ. ಇವುಗಳಲ್ಲಿ 58 ತಳಿಗಳು ಯುರೋಪ್, ಮಧ್ಯ ಏಷ್ಯಾ ಮತ್ತು ಪೂರ್ವ ಏಷ್ಯಾದ ವಿವಿಧ ಪ್ರದೇಶಗಳಿಂದ ಬಂದಂತಹ ಚಳಿಗಾಲದ ವಲಸಿಗ ಪಕ್ಷಿಗಳಾಗಿವೆ. ಇಲ್ಲಿ ಉತ್ತಮ ಜಲಸಂರಕ್ಷಣೆ ಜೊತೆಗೆ ಮಾನವ ಚಟುವಟಿಕೆ ಅತ್ಯಂತ ಕಡಿಮೆ ಇರುವುದೇ ಇದಕ್ಕೆ ಮಹತ್ವಪೂರ್ಣ ಕಾರಣವಾಗಿವೆ. ಕೆಲವು ವಿಷಯಗಳಲ್ಲಿ ಸಕಾರಾತ್ಮಕ ಮಾನವ ಹಸ್ತಕ್ಷೇಪವೂ ಪ್ರಮುಖ ಕಾರಣವಾಗಿರುತ್ತದೆ.

ಅಸ್ಸಾಂನ ಶ್ರೀ ಜಾದವ್ ಪಾಯೆಂಗ್ ಅವರನ್ನೇ ನೋಡಿ. ನಿಮ್ಮಲ್ಲಿ ಕೆಲವರಿಗೆ ಅವರ ಬಗ್ಗೆ ಗೊತ್ತಿರಬಹುದು. ಻ಅವರ ಕೆಲಸಗಳಿಗೆ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಶ್ರೀ ಜಾದವ್ ಪಾಯೆಂಗ್ ಅವರು ಅಸ್ಸಾಂನ ಮಜೂಲಿ ದ್ವೀಪದಲ್ಲಿ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಕೃಷಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರು ವನ ಸಂರಕ್ಷಣೆಗಾಗಿ ಕೆಲಸ ಮಾಡುತ್ತಾರೆ ಮತ್ತು ಜನರಿಗೆ ಸಸಿ ನೆಡುವ ಹಾಗೂ ಜೀವವೈವಿಧ್ಯ ಸಂರಕ್ಷಣೆಗೆ ಉತ್ತೇಜಿಸುವಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಸ್ನೇಹಿತರೆ, ಅಸ್ಸಾಂನಲ್ಲಿ ನಮ್ಮ ದೇಗುಲಗಳು ಕೂಡ ಪ್ರಕೃತಿ ಸಂರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರವಹಿಸುತ್ತಿವೆ. ನೀವು ದೇವಾಲಯಗಳಿಗೆ ಭೇಟಿ ನೀಡಿದರೆ ಪ್ರತಿ ದೇವಾಲಯದಲ್ಲೂ ಪುಷ್ಕರಣಿ ಇರುವುದನ್ನು ನೋಡುತ್ತೀರಿ. ಹಜೊನಲ್ಲಿರುವ ಹಯಗ್ರೀವ ಮದೇಬ್ ಮಂದಿರ, ಸೋನಿತ್ ಪುರದಲ್ಲಿರುವ ನಾಗಶಂಕರ ಮಂದಿರ ಮತ್ತು ಗುವಾಹಾಟಿಯಲ್ಲಿರುವ ಉಗ್ರತಾರಾ ಮಂದಿಗಳ ಬಳಿ ಇಂಥ ಪುಷ್ಕರಣಿಗಳು ಬಹಳಷ್ಟಿವೆ. ಅಳಿವಿನ ಻಻ಅಂಚಿನಲ್ಲಿರುವ ಆಮೆಗಳ ತಳಿಗಳ ಸಂರಕ್ಷಣೆಗೆ ಇವುಗಳನ್ನು ಬಳಸಲಾಗುತ್ತಿದೆ. ಅಸ್ಸಾಂನಲ್ಲಿ ಅತ್ಯಂತ ಹೆಚ್ಚು ತಳಿಗಳ ಆಮೆಗಳನ್ನು ಕಾಣಬಹುದು. ದೇವಾಲಯಗಳ ಈ ಪುಷ್ಕರಣಿಗಳು ಆಮೆಗಳ ಸಂರಕ್ಷಣೆಗೆ, ಸಂತಾನೋತ್ಪತ್ತಿಗೆ ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಅತ್ಯುತ್ತಮ ಸ್ಥಳವಾಗಬಲ್ಲವು.

ನನ್ನ ಪ್ರಿಯ ದೇಶಬಾಂಧವರೆ, ಆವಿಷ್ಕಾರಕ್ಕೆ ವಿಜ್ಞಾನಿಗಳಾಗಿರಬೇಕೆಂದು ಕೆಲ ಜನರು ಅಂದುಕೊಂಡಿದ್ದಾರೆ. ಇತರರಿಗೆ ಪಾಠ ಮಾಡಲು ಅಧ್ಯಾಪಕರಾಗುವುದು ಅವಶ್ಯಕ ಎಂದು ಇನ್ನು ಕೆಲವರು ಯೋಚಿಸುತ್ತಾರೆ. ಇಂಥ ವಿಚಾರಗಳಿಗೆ ಸವಾಲೆಸೆಯುವವರು ಎಂದಿಗೂ ಪ್ರಶಂಸೆಗೆ ಪಾತ್ರರು. ಸೈನಿಕನಾಗಲು ಯಾರಿಗಾದರೂ ತರಬೇತಿ ನೀಡಿದರೆ, ಅವನು ಸೈನಿಕನೇ ಅಗುವುದು ಅವಶ್ಯಕವೇ? ಹೌದು, ಅದು ಅಗತ್ಯ ಎಂದು ನೀವು ಯೋಚಿಸಬಹುದು. ಆದರೆ ಇಲ್ಲಿ ಸ್ವಲ್ಪ ಬದಲಾವಣೆಯಾಗಿದೆ

ಮೈಗೌ ನಲ್ಲಿ ಕಮಲ್ ಕಾಂತ್ ಅವರು ಮಾಧ್ಯಮದ ಒಂದು ವರದಿಯನ್ನು ಹಂಚಿಕೊಂಡಿದ್ದಾರೆ, ಅದು ಸ್ವಲ್ಪ ಭಿನ್ನವಾಗಿದೆ. ಒಡಿಶಾದ ಅರಾಖುಡಾದಲ್ಲಿ ಒಬ್ಬ ಸಜ್ಜನರಿದ್ದಾರೆ – ಅವರೇ ನಾಯಕ್ ಸರ್. ಇವರ ಹೆಸರು ಸಿಲು ನಾಯಕ್ ಆದರೆ ಎಲ್ಲರೂ ಅವರನ್ನು ನಾಯಕ್ ಸರ್ ಎಂದೇ ಕರೆಯುತ್ತಾರೆ. ವಾಸ್ತವದಲ್ಲಿ ಅವರು Man on a Mission ಆಗಿದ್ದಾರೆ. ಅವರು ಸೇನೆಯಲ್ಲಿ ಸೇರಬೇಕೆಂದು ಕೊಳ್ಳುವವರಿಗೆ ಇವರು ತರಬೇತಿ ನೀಡುತ್ತಾರೆ. ನಾಯಕ್ ಸರ್ ಅವರ ಸಂಸ್ಥೆ ಹೆಸರು ಮಹಾಗುರು ಬೆಟಾಲಿಯನ್ ಎಂದಿದೆ. ಇದರಲ್ಲಿ ದೈಹಿಕ ಸದೃಢತೆಯಿಂದ ಸಂದರ್ಶನದವರೆಗೆ ಮತ್ತು ಬರೆಯುವುದರಿಂದ ತರಬೇತಿವರೆಗೆ, ಎಲ್ಲ ಅಂಶಗಳ ಬಗ್ಗೆ ತಿಳಿಸಲಾಗುತ್ತದೆ. ಇವರಿಂದ ತರಬೇತಿ ಪಡೆದವರು ಭೂಸೇನೆ, ನೌಕಾಪಡೆ, ವಾಯುಪಡೆ, ಸಿಆರ್ ಪಿ ಎಫ್, ಬಿ ಎಸ್ ಎಫ್ ಹೀಗೆ ವಿವಿಧ ಸೇನಾಪಡೆಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸಿಲು ನಾಯಕ್ ಅವರು ಸ್ವತಃ ಒಡಿಶಾ ಪೋಲಿಸ್ ಪಡೆಯಲ್ಲಿ ಭರ್ತಿಯಾಗಲು ಪ್ರಯತ್ನಿಸಿದ್ದರು ಆದರೆ ಅವರು ಸಫಲರಾಗಿರಲಿಲ್ಲ. ಇದರ ಹೊರತಾಗಿ ಅವರು ತಾವು ಪಡೆದ ತರಬೇತಿಯಿಂದ ಹಲವು ಯುವಜನರನ್ನು ರಾಷ್ಟ್ರಸೇವೆಗೆ ಯೋಗ್ಯರಾಗಿಸಿದ್ದಾರೆ ಎಂದು ತಿಳಿದು ನಿಮಗೆ ಮತ್ತಷ್ಟು ಆಶ್ಚರ್ಯವಾಗಬಹುದು. ಬನ್ನಿ, ಅವರು ನಮ್ಮ ದೇಶಕ್ಕಾಗಿ ಮತ್ತಷ್ಟು ನಾಯಕರನ್ನು ಸೃಷ್ಟಿಸಲಿ ಎಂದು ನಾವೆಲ್ಲ ಶುಭಹಾರೈಸೋಣ

ಸ್ನೇಹಿತರೆ, ಕೆಲವೊಮ್ಮೆ ಬಹಳ ಸಣ್ಣ ಮತ್ತು ಸಾಧಾರಣ ಸವಾಲುಗಳೂ ಮನಸ್ಸನ್ನು ಹಿಂಡಿಬಿಡುತ್ತವೆ. ಈ ಪ್ರಶ್ನೆಗಳು ದೊಡ್ಡವೇ ಇರಬೇಕೆಂದೇನಿಲ್ಲ ಬಹಳ ಸರಳವಾಗಿರಬಹುದು. ಆದರೂ ಅವು ನಮ್ಮನ್ನು ಚಿಂತನೆಗೊಳಪಡಿಸುತ್ತವೆ. ಕೆಲ ದಿನಗಳ ಹಿಂದೆ ಹೈದ್ರಾಬಾದ್ ನ ಅಪರ್ಣಾ ರೆಡ್ಡಿಯವರು ನನಗೆ ಇಂಥದೇ ಪ್ರಶ್ನೆ ಕೇಳಿದ್ದರು. ಅವರು – ನೀವು ಇಷ್ಟೊಂದು ವರ್ಷಗಳಿಂದ ಪ್ರಧಾನಮಂತ್ರಿಯಾಗಿದ್ದೀರಿ, ಹಲವು ವರ್ಷ ಮುಖ್ಯಮಂತ್ರಿಗಳಾಗಿದ್ದಿರಿ, ನಿಮಗೆ ಮಾಡುವುದು ಇನ್ನೂ ಏನಾದರೂ ಬಾಕಿಯಿದೆ ಎಂದೆನ್ನಿಸಿದೆಯೇ? ಎಂದು ಕೇಳಿದ್ದರು. ಅಪರ್ಣಾ ಅವರ ಪ್ರಶ್ನೆ ಬಹಳ ಸಹಜವಾದದ್ದು ಆದರೆ ಅಷ್ಟೇ ಕಠಿಣವಾದದ್ದು. ನಾನು ಈ ಪ್ರಶ್ನೆ ಬಗ್ಗೆ ಆಲೋಚಿಸಿದೆ ಮತ್ತು ನನನ್ನೇ ಕೇಳಿಕೊಂಡೆ – ನಾನು ವಿಶ್ವದ ಪ್ರಾಚೀನ ಭಾಷೆ ತಮಿಳು ಕಲಿಯಲು ಹೆಚ್ಚಿನ ಪ್ರಯತ್ನ ನಡೆಸಲಿಲ್ಲ ಹಾಗಾಗಿ ಕಲಿಯಲಾಗಲಿಲ್ಲ. ಇದು ವಿಶ್ವದೆಲ್ಲೆಡೆ ಜನಪ್ರಿಯವಾಗಿರುವ ಸುಂದರ ಭಾಷೆಯಾಗಿದೆ. ಬಹಳ ಜನರು ನನಗೆ ತಮಿಳು ಸಾಹಿತ್ಯದ ಗುಣಮಟ್ಟ ಮತ್ತು ಇದರಲ್ಲಿ ಬರೆಯಲಾದ ಕವಿತೆಗಳ ಗಹನವಾದ ಅರ್ಥಗಳ ಬಗ್ಗೆ ಹೇಳಿದ್ದಾರೆ. ಭಾರತ ನಮ್ಮ ಸಂಸ್ಕೃತಿ ಮತ್ತು ಗೌರವದ ಪ್ರತೀಕವಾಗಿರುವ ಇಂಥ ಹಲವಾರು ಭಾಷೆಗಳ ತವರಾಗಿದೆ. ಭಾಷೆಗಳ ಬಗ್ಗೆ ಮಾತನಾಡುತ್ತಿರುವಾಗ ನಾನು ನಿಮಗೆ ಒಂದು ಪುಟ್ಟ ಆಸಕ್ತಿಕರ ಸೌಂಡ್ ಕ್ಲಿಪ್ ಕೇಳಿಸಬಯಸುತ್ತೇನೆ

## (sound clip Statue of Unity-no need to transcribe the byte)

ಈಗ ನೀವು ಕೇಳಿದ್ದು- ಏಕತಾ ಪ್ರತಿಮೆ ಬಗ್ಗೆ ಒಬ್ಬ ಗೈಡ್ ಸಂಸ್ಕೃತದಲ್ಲಿ ವಿಶ್ವದಲ್ಲೇ ಅತಿ ಎತ್ತರದ ಸರ್ದಾರ್ ಪಟೇಲರ ಪ್ರತಿಮೆ ಬಗ್ಗೆ ಜನರಿಗೆ ವಿವರಿಸುತ್ತಿದ್ದಾರೆ. ಕೇವಾಡಿಯಾದಲ್ಲಿ 15 ಕ್ಕೂ ಹೆಚ್ಚು ಗೈಡ್ ಗಳು ಸುಲಲಿತವಾಗಿ ಸಂಸ್ಕೃತದಲ್ಲಿ ಜನರಿಗೆ ವಿವರಿಸುತ್ತಾರೆ. ಈಗ ನಾನು ಮತ್ತೊಂದು ಧ್ವನಿ ಕೇಳಿಸುತ್ತೇನೆ

## (sound clip Cricket commentary- no need to transcribe the byte)

ಇದನ್ನು ಕೇಳಿ ನೀವು ಕೂಡ ಆಶ್ಚರ್ಯಗೊಂಡಿರಬಹುದು. ಇದು ಸಂಸ್ಕೃತದಲ್ಲಿ ಹೇಳುತ್ತಿರುವ ಕ್ರಿಕೆಟ್ ಕಾಮೆಂಟ್ರಿ. ವಾರಾಣಸಿಯಲ್ಲಿ ಸಂಸ್ಕೃತ ಮಹಾವಿದ್ಯಾಲಯಗಳಲ್ಲಿ ಕ್ರಕೆಟ್ ಸ್ಪರ್ಧೆ ನಡೆಯುತ್ತದೆ. ಅವುಗಳೆಂದರೆ, ಶಾಸ್ತ್ರಾರ್ಥ ಮಹಾವಿದ್ಯಾಲಯ, ಸ್ವಾಮಿ ವೇದಾಂತಿ ವೇದ ವಿದ್ಯಾಪೀಠ, ಶ್ರೀ ಬ್ರಹ್ಮವೇದ ವಿದ್ಯಾಲಯ ಮತ್ತು ಅಂತಾರಾಷ್ಟ್ರೀಯ ಚಂದ್ರಮೌಳಿ ದತ್ತಿ ಸಂಸ್ಥೆ ಮಹಾ ವಿದ್ಯಾಲಯಗಳಾಗಿವೆ. ಈ ಪಂದ್ಯಾವಳಿಯ ಮ್ಯಾಚ್ ಗಳಲ್ಲಿ ಸಂಸ್ಕೃತದಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತದೆ, ನಿಮಗೆ ಈ ವಿವರಣೆಯ ಪುಟ್ಟ ಭಾಗವನ್ನು ನಿಮಗೆ ಕೇಳಿಸಿದೆ. ಇದಷ್ಟೇ ಅಲ್ಲ ಈ ಪಂದ್ಯಾವಳಿಯಲ್ಲಿ ಕ್ರಿಕೆಟಿಗರು ಮತ್ತು ವೀಕ್ಷಕ ವಿವರಣಾಕಾರರು ಪಾರಂಪರಿಕ ಉಡುಪುಗಳಲ್ಲಿ ಕಾಣಿಸುತ್ತಾರೆ. ನಿಮಗೆ ಚೈತನ್ಯ, ರೋಮಾಂಚನ ಮತ್ತು ಕುತೂಹಲ ಎಲ್ಲವೂ ಒಂದೇ ಬಾರಿ ಬೇಕೆಂದುಕೊಂಡಲ್ಲಿ ನೀವು ಪಂದ್ಯಗಳ ವೀಕ್ಷಕ ವಿವರಣೆಯನ್ನು ಕೇಳಬೇಕು. ಟಿವಿಗಳು ಬಳಕೆಗೆ ಬರುವ ಮೊದಲು ಕ್ರಿಕೆಟ್ ಮತ್ತು ಹಾಕಿಯಂತಹ ಕ್ರೀಡೆಗಳ ರೋಮಾಂಚನವನ್ನು ಅನಭವಿಸಲು ಕ್ರೀಡಾ ವೀಕ್ಷಕ ವಿವರಣೆಯೊಂದೇ ಮಾಧ್ಯಮವಾಗಿತ್ತು. ಟೆನ್ನಿಸ್ ಮತ್ತು ಫುಟ್ ಬಾಲ್ ವೀಕ್ಷಕ ವಿವರಣೆಯನ್ನು ಬಹಳ ಉತ್ತಮವಾಗಿ ಪ್ರಸ್ತುತಪಡಿಸಲಾಗುತ್ತದೆ. ಯಾವ ಕ್ರೀಡೆಗಳಲ್ಲಿ ವೀಕ್ಷಕ ವಿವರಣೆ ಬಹಳ ಉತ್ತಮವಾಗಿ ಪ್ರಸ್ತುತಪಡಿಸಲಾಗುತ್ತದೆಯೋ ಅವುಗಳ ಪ್ರಚಾರ-ಪ್ರಸಾರ ಕೂಡಾ ಅಷ್ಟೇ ವೇಗವಾಗಿ ಆಗುತ್ತದೆ. ನಮ್ಮಲ್ಲಿ ಕೂಡ ಬಹಳಷ್ಟು ಭಾರತೀಯ ಕ್ರೀಡೆಗಳಿವೆ ಆದರೆ ಅವುಗಳಲ್ಲಿ ವೀಕ್ಷಕ ವಿವರಣೆಯ ಪರಂಪರೆಯಿಲ್ಲ. ಹಾಗಾಗಿ ಅವು ಅಳಿವಿನ ಅಂಚಿಗೆ ಸರಿಯುತ್ತಿವೆ. ಬೇರೆ ಬೇರೆ ಕ್ರೀಡೆಗಳ - ಅದರಲ್ಲೂ ವಿಶೇಷವಾಗಿ ಭಾರತೀಯ ಕ್ರೀಡೆಗಳ ಉತ್ತಮ ವೀಕ್ಷಕ ವಿವರಣೆಯನ್ನು ಹೆಚ್ಚೆಚ್ಚು ಭಾಷೆಗಳಲ್ಲಿ ಏಕೆ ಅಳವಡಿಸಿಕೊಳ್ಳಬಾರದು ಎಂದು ನನ್ನ ಮನದಲ್ಲಿ ಒಂದು ವಿಚಾರವಿದೆ. ಇದನ್ನು ಪ್ರೋತ್ಸಾಹಿಸುವ ಕುರಿತು ನಾವು ಖಂಡಿತ ಯೋಚಿಸಬೇಕು. ನಾನು ಕ್ರೀಡಾ ಸಚಿವಾಲಯ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಈ ಕುರಿತು ಚರ್ಚಿಸುವ ಬಗ್ಗೆ ಆಗ್ರಹಿಸುತ್ತೇನೆ.

ನನ್ನ ಪ್ರಿಯ ಯುವಜನರೆ, ಮುಂದಿನ ಕೆಲ ತಿಂಗಳುಗಳು ನಿಮ್ಮೆಲ್ಲರ ಜೀವನದಲ್ಲಿ ವಿಶೇಷವಾಗಿವೆ. ಹೆಚ್ಚಿನ ಯುವಜನರು ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ನೀವೆಲ್ಲ Warrior ಆಗಬೇಕು worrier ಅಲ್ಲ ಎಂಬುದು ನಿಮಗೆ ನೆನಪಿದೆ ತಾನೆ, ನಗುನಗುತ್ತಾ ಪರೀಕ್ಷೆ ಬರೆಯಲು ಹೋಗಬೇಕು ಮತ್ತು ಮುಗುಳುನಗುತ್ತಾ ಹಿಂದಿರುಗಬೇಕು. ಬೇರಾರೊಂದಿಗೆ ಅಲ್ಲದೆ ನಿಮ್ಮೊಂದಿಗೆ ನೀವು ಸ್ಪರ್ಧಿಸಬೇಕು. ಅಗತ್ಯವಿರುವಷ್ಟು ನಿದ್ದೆಯನ್ನು ಮಾಡಬೇಕು ಮತ್ತು ಸಮಯ ಪಾಲನೆಯನ್ನೂ ಮಾಡಬೇಕು. ಆಟ ಆಡುವುದನ್ನೂ ಬಿಡಬಾರದು ಏಕೆಂದರೆ ಯಾರು ಆಡುತ್ತಾರೋ ಅವರು ಬೆಳೆಯುತ್ತಾರೆ. Revision ಮತ್ತು ನೆನಪಿಟ್ಟುಕೊಳ್ಳುವ ಜಾಣ್ಮೆಯನ್ನು ತೋರಬೇಕು, ಅಂದರೆ ಒಟ್ಟಾರೆ ಪರೀಕ್ಷೆಯಲ್ಲಿ ನಿಮ್ಮ ಅತ್ಯುತ್ತಮವಾದುದನ್ನು ಪ್ರದರ್ಶಿಸಬೇಕು. ಇದೆಲ್ಲ ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿರಬಹುದು. ನಾವೆಲ್ಲ ಸೇರಿ ಇದನ್ನು ಸಾಧಿಸಲಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ನಾವೆಲ್ಲರೂ ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಭಾಗಿಯಾಗೋಣ. ಆದರೆ ಮಾರ್ಚ್ ನಲ್ಲಿ ನಡೆಯುವ ‘ಪರೀಕ್ಷಾ ಪೆ ಚರ್ಚಾ’ ಗಿಂತ ಮೊದಲು ಎಲ್ಲ exam warriors, ಪೋಷಕರು ಮತ್ತು ಶಿಕ್ಷಕರು, ತಮ್ಮ ಅನುಭವಗಳನ್ನು, ಸಲಹೆಗಳನ್ನು ಖಂಡಿತ ಹಂಚಿಕೊಳ್ಳಿ ಎಂಬುದು ನನ್ನ ಮನವಿ. ನೀವು ಮೈ ಗೌ ನಲ್ಲಿ ಹಂಚಿಕೊಳ್ಳಬಹುದು. ನರೇಂದ್ರ ಮೋದಿ ಆಪ್ ನಲ್ಲಿ ಹಂಚಿಕೊಳ್ಳಬಹುದು. ಈ ಬಾರಿಯ ‘ಪರೀಕ್ಷಾ ಪೆ ಚರ್ಚಾ’ ಸಭೆಗೆ ಯುವಜನತೆಯ ಜೊತೆಗೆ ಪೋಷಕರು ಮತ್ತು ಶಿಕ್ಷಕರೂ ಆಹ್ವಾನಿತರು. ಹೇಗೆ ಭಾಗವಹಿಸಬೇಕು, ಬಹುಮಾನ ಗೆಲ್ಲಬೇಕು, ಹೇಗೆ ನನ್ನ ಜೊತೆಗೆ ಚರ್ಚೆಗೆ ಅವಕಾಶ ಪಡೆಯಬೇಕು ಎಂಬ ಮಾಹಿತಿ ನಿಮಗೆ ಮೈ ಗೌ ನಲ್ಲಿ ಲಭ್ಯವಿದೆ. ಇಲ್ಲಿವರೆಗೆ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸುಮಾರು 40 ಸಾವಿರ ಪೋಷಕರು ಮತ್ತು 10 ಸಾವಿರ ಶಿಕ್ಷಕರು ಭಾಗವಹಿಸಿದ್ದಾರೆ. ನೀವು ಕೂಡ ಭಾಗವಹಿಸಿ. ಈ ಕೊರೊನಾ ಸಮಯದಲ್ಲಿ ನಾನು ಸ್ವಲ್ಪ ಬಿಡುವು ಮಾಡಿಕೊಂಡು exam warrior ಪುಸ್ತಕದಲ್ಲೂ ಕೆಲವು ಹೊಸ ಸೂತ್ರಗಳನ್ನು ಬರೆದಿದ್ದೇನೆ. ಇದರಲ್ಲಿ ಪೋಷಕರಿಗಾಗಿಯೂ ಕೆಲ ಸೂತ್ರಗಳನ್ನು ಸೇರಿಸಲಾಗಿದೆ. ಈ ಸೂತ್ರಗಳಿಗೆ ಸಂಬಂಧಿಸಿದ ಹಲವಾರು ಆಸಕ್ತಿಕರ ಚಟುವಟಿಕೆಗಳು ನರೇಂದ್ರ ಮೋದಿ ಆಪ್ ನಲ್ಲಿ ಲಭ್ಯವಿವೆ. ಅವು ನಿಮ್ಮಲ್ಲಿರುವ exam warrior ನನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನೀವು ಖಂಡಿತ ಇವುಗಳನ್ನು ಪ್ರಯತ್ನಿಸಿ ನೋಡಿ. ಎಲ್ಲ ಯುವ ಸ್ನೇಹಿತರಿಗೆ ಮುಂಬರುವ ಪರೀಕ್ಷೆಗಳಿಗೆ ಅನಂತ ಶುಭಹಾರೈಕೆಗಳು.

ನನ್ನ ಪ್ರಿಯ ದೇಶಬಾಂಧವರೆ, ಮಾರ್ಚ್ ನಮ್ಮ ಆರ್ಥಿಕ ವರ್ಷದ ಕೊನೆಯ ಮಾಸವಾಗಿರುತ್ತದೆ. ಆದ್ದರಿಂದ ನಿಮ್ಮಲ್ಲಿ ಬಹಳಷ್ಟು ಜನರು ಬಹಳ ಕಾರ್ಯನಿರತರಾಗಿರುತ್ತೀರಿ. ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆಯುತ್ತಿರುವುದರಿಂದ ನಮ್ಮ ವ್ಯಾಪಾರಿಗಳು ಮತ್ತು ಉದ್ಯಮಿ ಸ್ನೇಹಿತರು ಕೂಡಾ ಕಾರ್ಯನಿರತರಾಗಿದ್ದಾರೆ. ಈ ಎಲ್ಲ ಕೆಲಸಗಳ ಮಧ್ಯೆ ನಾವು ಕೊರೊನಾ ಬಗ್ಗೆ ಎಚ್ಚರವಹಿಸುವುದನ್ನು ಮರೆಯಬಾರದು. ನೀವೆಲ್ಲರೂ ಆರೋಗ್ಯದಿಂದಿರುತ್ತೀರಿ. ಸಂತೋಷದಿಂದಿರುತ್ತೀರಿ, ಕರ್ತವ್ಯಪಾಲನೆ ಮಾಡುತ್ತೀರಿ ಎಂದಾದಲ್ಲಿ ದೇಶ ತ್ವರಿತವಾಗಿ ಮುನ್ನಡೆಯುತ್ತಿರುತ್ತದೆ. ನಿಮ್ಮೆಲ್ಲರಿಗೂ ಮುಂಚಿತವಾಗಿಯೇ ಹಬ್ಬಗಳ ಹಾರ್ದಿಕ ಶುಭಾಶಯಗಳು. ಜೊತೆಗೆ ಕೊರೊನಾ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಉದಾಸೀನ ಸಲ್ಲದು.

ಅನಂತ ಅನಂತ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.