If there is any creation made by man which is immortal its India’s constitution: PM Modi
It’s not easy to make a constitution which binds the country, says the PM
Constitution is not just a book but also contains social philosophy says, PM Modi
Our constitution has kept us on the path democracy, says PM Modi
GST has unified the nation & dream of one tax one nation has been made possible, says PM Modi
Legislature should have the independence of making laws, the executive should have independence in taking decisions: PM
Nearly 18 lakh pre litigated and 22 lakh pending cases have been cleared: PM
ದೇಶದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಶ್ರೀ ದೀಪಕ್ ಮಿಶ್ರಾ, ಸಚಿವ ಸಂಪುಟದ ನನ್ನ ಸಹೋದ್ಯೋಗಿ ಕಾನೂನು ಸಚಿವರಾದ ಶ್ರೀ ರವಿಶಂಕರ್ ಪ್ರಸಾದ್, ಕಾನೂನು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಡಾ. ಬಿ.ಎಸ್. ಚೌಹಾನ್, ನೀತಿ ಆಯೋಗದ ಉಪಾಧ್ಯಕ್ಷರಾದ ಡಾ. ರಾಜೀವ್ ಕುಮಾರ್, ಕೇಂದ್ರ ಕಾನೂನು ರಾಜ್ಯ ಸಚಿವರಾದ ಶ್ರೀ ಪಿ.ಪಿ. ಚೌಧರಿ, ಈ ಸಭಾಂಗಣದಲ್ಲಿ ಉಪಸ್ಥಿತರಿರುವ ಎಲ್ಲ ಗಣಮಾನ್ಯರೇ, ಸಹೋದರ, ಸಹೋದರಿಯರೆ,
ಭಾರತೀಯ ಪ್ರಜಾಪ್ರಭುತ್ವದಲ್ಲಿ ಇಂದು ಅತ್ಯಂತ ಪವಿತ್ರ ಮತ್ತು ಮಹತ್ವಪೂರ್ಣ ದಿನ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮ ಎಂದು ನಾವು ಯಾವುದನ್ನಾದರೂ ಕರೆಯಬಹುದಾದರೆ ಅದು ನಮ್ಮ ಸಂವಿಧಾನ. ಈ ಆತ್ಮವನ್ನು, ಈ ಗ್ರಂಥವನ್ನು 68 ವರ್ಷಗಳ ಮೊದಲು ನಾವು ಸ್ವೀಕರಿಸಿದ್ದು ಒಂದು ಮಹತ್ವಪೂರ್ಣ ಕ್ಷಣ. ಈ ದಿನದಂದು ಒಂದು ರಾಷ್ಟ್ರವಾಗಿ ನಮ್ಮ ಮುಂದಿನ ನಿಯಮಗಳು, ನಿರ್ದೇಶನಗಳು ಹೇಗಿರಬೇಕೆಂದು ನಿರ್ಧರಿಸಿದ ದಿನ. ಆ ನಿಯಮಗಳು, ಆ ಸಂವಿಧಾನದಲ್ಲಿ ಉಲ್ಲೇಖಿಸಿರುವ ಪ್ರತಿಯೊಂದು ಶಬ್ಧಗಳು ನಮಗೆ ಅತ್ಯಂತ ಪವಿತ್ರ ಮತ್ತು ಪೂಜನೀಯವಾಗಿದೆ.
ಈ ದಿನ, ದೇಶದ ಸಂವಿಧಾನ ರಚನೆಕಾರರಿಗೆ ನಮನ ಸಲ್ಲಿಸುವ ದಿನವೂ ಆಗಿದೆ. ಸ್ವಾತಂತ್ರದ ನಂತರ ದೇಶದ ಕೋಟ್ಯಾಂತರ ಜನ ಹೊಸ ಭರವಸೆಯೊಂದಿಗೆ ಮುನ್ನಡೆಯುವ ಕನಸು ಕಾಣುತ್ತಿದ್ದ ಸಂದರ್ಭದಲ್ಲಿ, ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೂಡಾ ಉತ್ಸಾಹ ವರ್ಧಿಸುವಂತೆ ಎಲ್ಲರಿಗೂ ಸಮ್ಮತವಾಗುವಂತೆ ದೇಶದ ಮುಂದೆ ಒಂದು ಸಂವಿಧಾನವನ್ನು ಪ್ರಸ್ತುತಪಡಿಸುವುದು ಸುಲಭದ ಮಾತಾಗಿರಲಿಲ್ಲ. ಹತ್ತು ಹಲವು ಧರ್ಮಗಳಿರುವ, ನೂರಕ್ಕೂ ಹೆಚ್ಚು ಭಾಷೆಗಳಿರುವ, ಸಾವಿರದ ಏಳುನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ, ಹಳ್ಳಿ, ನಗರ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನರಿರುವ ದೇಶದಲ್ಲಿ, ತಮ್ಮದೇ ನಂಬಿಕೆಗಳನ್ನು ಹೊಂದಿರುವ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತಾ, ಎಲ್ಲರ ನಂಬಿಕೆಗಳನ್ನೂ ಗೌರವಿಸುವಂತಾ ಒಂದು ಮಹತ್ವಪೂರ್ಣ ಸಂವಿಧಾನವನ್ನು ರಚಿಸುವುದು ಸುಲಭದ ಕಾರ್ಯವಾಗಿರಲಿಲ್ಲ.
ಸಮಯದ ಜತೆ ಜತೆಗೆ ನಮ್ಮ ಸಂವಿಧಾನವೂ ಎಲ್ಲ ಸವಾಲುಗಳನ್ನು ದಾಟಿ ಮುನ್ನಡೆಯುತ್ತಿರುವುದಕ್ಕೆ ಈ ಸಭಾಂಗಣದಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಸಮಯದ ಜತೆಗೆ ದೇಶದ ಮುಂದೆ ಬರಬಹುದಾದ ಸವಾಲುಗಳಿಗೆ ಈ ಸಂವಿಧಾನ ಪರಿಹಾರವನ್ನು ನೀಡುವುದಿಲ್ಲ ಎಂಬ ಕೆಲವು ಜನರ ಅನುಮಾನಗಳನ್ನು ಸಂವಿಧಾನವು ಸುಳ್ಳು ಮಾಡಿದೆ.
ನಮ್ಮ ಭಾರತೀಯ ಸಂವಿಧಾನದಲ್ಲಿ ವ್ಯಾಖ್ಯೆಗೆ ನಿಲುಕದ, ನೀತಿ ನಿಯಮಗಳಿಗೆ ದೊರಕದ ವಿಷಯಗಳಿಲ್ಲ. ಸಂವಿಧಾನದ ಈ ಶಕ್ತಿಯ ಬಗ್ಗೆ ಸಂವಿಧಾನ ಸಭೆಯ ಮಧ್ಯಂತರ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಸಿನ್ಹಾ ಅವರು “ ಮಾನವನಿಂದ ರಚಿತವಾದ ಯಾವುದಾದರೂ ಅಮರ ಗ್ರಂಥವಿರುವುದಾದರೆ ಅದು ಭಾರತೀಯ ಸಂವಿಧಾನ” ಎಂದು ಹೇಳಿದ್ದಾರೆ.
ನಮ್ಮ ಸಂವಿಧಾನ ಎಷ್ಟು ಜೀವಂತಿಕೆಯಿಂದ ಇದೆಯೋ ಅಷ್ಟೇ ಸೂಕ್ಷ್ಮವೂ ಕೂಡಾ ಆಗಿದೆ. ನಮ್ಮ ಸಂವಿಧಾನವು ಎಷ್ಟು ಉತ್ತರದಾಯಿತ್ವವಾಗಿದೆಯೋ ಅಷ್ಟೇ ಸಮರ್ಥ ಕೂಡಾ ಆಗಿದೆ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ಸ್ವತ: ಸಂವಿಧಾನದ ಬಗ್ಗೆ ಮಾತನಾಡುತ್ತಾ “ ಇದು ಕಾರ್ಯಸಾಧ್ಯ ಹಾಗೂ, ಹೊಂದಿಕೊಳ್ಳುವಂತಹದ್ದಾಗಿದೆ. ಶಾಂತಿ ಇರಲಿ, ಯುದ್ಧದ ಸಮಯವಿರಲಿ, ದೇಶವನ್ನು ಒಂದುಗೂಡಿಸುವ ಶಕ್ತಿ ಇದರಲ್ಲಿದೆ” ಎಂದು ಹೇಳಿದ್ದರು. ಬಾಬಾ ಸಾಹೇಬ್ ಅವರು “ ಸಂವಿಧಾನವನ್ನು ಮುಂದಿಟ್ಟುಕೊಂಡು ಯಾವುದಾದರೂ ತಪ್ಪುಗಳಾದಾಗ್ಯೂ ಕೂಡಾ, ಆ ತಪ್ಪು ಸಂವಿಧಾನದ್ದು ಆಗಿರುವುದಿಲ್ಲ, ಸಂವಿಧಾನವನ್ನು ಪಾಲನೆ ಮಾಡಬೇಕಾದ ಸಂಸ್ಥೆಗಳದ್ದಾಗಿದೆ” ಎಂದು ಹೇಳಿದ್ದರು.
ಸಹೋದರ, ಸಹೋದರಿಯರೇ, ಈ 68 ವರ್ಷಗಳಲ್ಲಿ ನಮ್ಮ ಸಂವಿಧಾನವು ನಮಗೆ ಒಬ್ಬ ಪೋಷಕರ ರೀತಿಯಲ್ಲಿ ಸರಿದಾರಿಯಲ್ಲಿ ನಡೆಯುವುದನ್ನು ಕಲಿಸಿಕೊಟ್ಟಿದೆ. ನಮ್ಮ ಸಂವಿಧಾನವು ಒಬ್ಬ ರಕ್ಷಕನ ರೀತಿಯಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಹಾದಿ ತಪ್ಪುವುದರಿಂದ ರಕ್ಷಿಸಿ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದೆ. ಈ ರಕ್ಷಕನ ಪರಿವಾರದ ಸದಸ್ಯರ ರೂಪದಲ್ಲಿ ನಾವೆಲ್ಲರೂ ಈ ಸಭಾಂಗಣದಲ್ಲಿ ಸೇರಿದ್ದೇವೆ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ನಾವೆಲ್ಲರೂ ಈ ಪರಿವಾರದ ಸದಸ್ಯರೇ ಅಲ್ಲವೇ.
ಸ್ನೇಹಿತರೆ, ಈ ಸಂವಿಧಾನ ದಿನ ನಮಗೊಂದು ಮಹತ್ವಪೂರ್ಣ ಸವಾಲನ್ನು ಹೊತ್ತು ತಂದಿದೆ. ನಮ್ಮ ರಕ್ಷಕ, ನಮ್ಮ ಸಂವಿಧಾನ ನಮ್ಮಿಂದ ನಿರೀಕ್ಷಿಸಿದ್ದ ಕಾರ್ಯವನ್ನು ಒಂದು ಪರಿವಾರದ ಸದಸ್ಯರಾಗಿ ನಾವು ಪಾಲಿಸಿದ್ದೇವೆಯೇ? ಒಂದೇ ಪರಿವಾರದ ಸದಸ್ಯರಾಗಿ ನಾವು ಪರಸ್ಪರ ಸಹಕರಿಸುತ್ತಾ, ಒಟ್ಟುಗೂಡಿ ಕಾರ್ಯ ನಿರ್ವಹಿಸಲು ಪ್ರಯತ್ನ ಪಟ್ಟಿದ್ದೇವೆಯೇ?
ಸಹೋದರ, ಸಹೋದರಿಯರೇ, ಈ ಪ್ರಶ್ನೆ ಕೇವಲ ನ್ಯಾಯಾಂಗ ಅಥವಾ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜನಗಳಿಗಷ್ಟೆ ಸೀಮಿತವಾಗಿರುವುದಿಲ್ಲ, ದೇಶದ ಕೋಟ್ಯಾಂತರ ಜನರ ಗಮನ ಕೇಂದ್ರಿಕೃತವಾಗಿರುವ ಸಂಸ್ಥೆಗಳು, ವಿಭಿನ್ನ ಅಂಗಗಳನ್ನು ಅವಲಂಬಿಸಿದೆ. ಈ ಸಂಸ್ಥೆಗಳ ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ಹೆಜ್ಜೆಗಳು ಜನರ ಜೀವನದ ಮೇಲೆ ಪ್ರಭಾವವನ್ನು ಬೀರುತ್ತವೆ. ಈ ಸಂಸ್ಥೆಗಳು ದೇಶದ ಅಭಿವೃದ್ಧಿಗಾಗಿ, ದೇಶದ ಅವಶ್ಯಕತೆಗಳನ್ನು ಅರಿತುಕೊಂಡು, ದೇಶದ ಮುಂದಿರುವ ಸವಾಲುಗಳನ್ನು ಅರಿತು, ದೇಶದ ಜನರ ಆಸೆ, ಆಕಾಂಕ್ಷೆಗಳನ್ನು ತಿಳಿದು, ಒಬ್ಬರಿಗೊಬ್ಬರು ಸಹಕರಿಸುತ್ತಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.
ಸಹೋದರ, ಸಹೋದರಿಯರೇ, 75 ವರ್ಷಗಳ ಮೊದಲು 1942 ರಲ್ಲಿ ಗಾಂಧೀಜಿ ಅವರು ಭಾರತ ಬಿಟ್ಟು ತೊಲಗಿ ಹೋರಾಟಕ್ಕೆ ಆಹ್ವಾನ ನೀಡಿದ್ದರು. ಆಗ ದೇಶದಲ್ಲಿ ಒಂದು ಹೊಸ ಶಕ್ತಿ ತುಂಬಿತ್ತು. ಪ್ರತಿಯೊಂದು ಹಳ್ಳಿ, ಪ್ರತಿಯೊಂದು ನಗರ, ಪ್ರತಿಯೊಂದು ಪ್ರದೇಶದಲ್ಲಿ ಆ ಶಕ್ತಿ ಹರಡಿತು. ಇದರ ಪರಿಣಾಮವೇ, ಮುಂದಿನ ಐದು ವರ್ಷಗಳಲ್ಲಿ ನಮಗೆ ಸ್ವಾತಂತ್ರ ಲಭಿಸಿತು, ನಾವು ಸ್ವತಂತ್ರವಾದೆವು.
ನಾವು ಇಂದಿನಿಂದ ಐದು ವರ್ಷಗಳ ನಂತರ ಸ್ವಾತಂತ್ರದ 75 ವರ್ಷಗಳನ್ನು ಆಚರಿಸುತ್ತೇವೆ. ಈ ಐದು ವರ್ಷಗಳಲ್ಲಿ ನಾವು ಒಂದುಗೂಡಿ, ಭಾರತೀಯ ಸ್ವಾತಂತ್ರ ಹೋರಾಟಗಾರರು ಕಂಡ ಕನಸನ್ನು ನನಸು ಮಾಡಬೇಕಿದೆ. ಇದಕ್ಕಾಗಿ ಸಂವಿಧಾನದಿಂದ ಶಕ್ತಿ ಪಡೆದುಕೊಂಡ ಎಲ್ಲ ಸಂಸ್ಥೆಗಳು ತಮ್ಮ ಶಕ್ತಿಯನ್ನು ಒಂದುಗೂಡಿಸಿಕೊಳ್ಳಬೇಕಿದೆ. ಆ ಶಕ್ತಿಯನ್ನು ಕೇವಲ ನವ ಭಾರತ ನಿರ್ಮಾಣದ ಕನಸನ್ನು ನನಸು ಮಾಡುವುದಕ್ಕಾಗಿ ವಿನಿಯೋಗಿಸಬೇಕಾಗಿದೆ.
ಸ್ನೇಹಿತರೆ, ದಶಕಗಳ ನಂತರ ಜನರ ಭಾವನೆಗಳಲ್ಲಿ ಒಂದು ರೀತಿಯ ಶಕ್ತಿ ಕಂಡುಬರುತ್ತಿರುವುದರಿಂದ ಇಂದು ಈ ಮಾತುಗಳು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ವಿಶ್ವದಲ್ಲಿ ಭಾರತ ಇಂದು ಅತ್ಯಂತ ಯುವ ದೇಶವಾಗಿದೆ. ಈ ಯುವ ಶಕ್ತಿಗೆ ಹೊಸ ದಿಕ್ಕು ದಿಸೆಯನ್ನು ನೀಡುವುದಕ್ಕಾಗಿ ದೇಶದ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳು ಒಟ್ಟುಗೂಡಿ ಕಾರ್ಯ ಮಾಡುವ ಅವಶ್ಯಕತೆ ಇದೆ.
20ನೇ ಶತಮಾನದಲ್ಲಿ ನಾವು ಇಂತಹ ಒಂದು ಅವಕಾಶದಿಂದ ವಂಚಿತರಾಗಿದ್ದೆವು. ಈಗ 21ನೇ ಶತಮಾನದಲ್ಲಿ ಭಾರತವನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ಯಲು, ನವಭಾರತದ ನಿರ್ಮಾಣಕ್ಕೆ, ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ಎಲ್ಲರೂ ಒಟ್ಟುಗೂಡಿ ಕಾರ್ಯ ನಿರ್ವಹಿಸುವ, ಪರಸ್ಪರ ಬಲಗೊಳ್ಳುವ ಸಂಕಲ್ಪ ಮಾಡಬೇಕಿದೆ.
ಸಹೋದರ ಸಹೋದರಿಯರೆ, ದೇಶದ ಮುಂದಿರುವ ಸಮಸ್ಯೆಗಳಿಂದ ಹೊರಬರುವುದಕ್ಕಾಗಿ ಒಂದುಗೂಡಬೇಕಾದ ಮಹತ್ವವನ್ನು ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಒಂದು ಚರ್ಚೆಯ ಸಂದರ್ಭದಲ್ಲಿ ವಿಸ್ತಾರವಾಗಿ ತಿಳಿಸಿದ್ದರು. “ದೇಶದ ಬಡತನವನ್ನು ನಿರ್ಮೂಲನ ಮಾಡುವುದಕ್ಕಾಗಿ, ಕೊಳಚೆ ನಿರ್ಮೂಲನಕ್ಕಾಗಿ, ಹಸಿವು ಮತ್ತು anಅನಾರೋಗ್ಯವನ್ನು ಹೊಡೆದೋಡಿಸುವುದಕ್ಕಾಗಿ, ಭೇದಭಾವವನ್ನು ಕೊನೆಗಾಣಿಸುವುದಕ್ಕಾಗಿ, ಶೋಷಣೆಯನ್ನು ತೊಡೆದು ಹಾಕುವುದಕ್ಕಾಗಿ, ಬದುಕಿನ ಹೊಸ ವಾತಾವರಣವನ್ನು ಸುನಿಶ್ಚಿತಗೊಳುಸುವಲ್ಲಿ ನಾವು ಸದಾ ಪ್ರಯತ್ನಶೀಲರಾಗಿರಬೇಕು. ನಾವು ಒಂದು ದೊಡ್ಡ ಕಾರ್ಯವನ್ನು ಮಾಡುತ್ತಿದ್ದೇವೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ, ಸಹಾನುಭೂತಿ ದೊರೆಯುವುದೆಂಬ ವಿಶ್ವಾಸ ನಮಗಿದೆ. ಸಮಾಜದ ಎಲ್ಲ ವರ್ಗದ ಜನರ ಸಹಕಾರ ನಮಗೆ ದೊರೆಯಲಿದೆ.”
ಸಹೋದರ, ಸಹೋದರಿಯರೇ, ಸಂವಿಧಾನ ನಿರ್ಮಾತೃಗಳ ಈ ಮಹಾನ್ ಚಿಂತನೆಗಳ ಕಾರಣದಿಂದಾಗಿಯೇ ನಮ್ಮ ಸಂವಿಧಾನ ಒಂದು ಸಾಮಾಜಿಕ ದಾಖಲೆ ಎಂದು ಪರಿಗಣಿಸಲಾಗಿದೆ. ಇದು ಕೇವಲ ಒಂದು ಕಾನೂನು ಪುಸ್ತಕವಲ್ಲ, ಇದರಲ್ಲಿ ಒಂದು ಸಮಾಜದ ದರ್ಶನ ಕೂಡಾ ಇದೆ. 14 ಆಗಸ್ಟ್ 1947 ರಂದು ಅಂದರೆ, ನಮಗೆ ಸ್ವಾತಂತ್ರ್ಯ ದೊರೆಯುವ ಕೆಲವೇ ಕ್ಷಣಗಳ ಮೊದಲು ಬಾಬು ರಾಜೇಂದ್ರ ಪ್ರಸಾದ್ ಅವರು ಹೇಳಿದ ಈ ಮಾತುಗಳು ಇಂದೂ ಕೂಡಾ ಅಷ್ಟೇ ಪ್ರಸ್ತುತವಾಗಿದೆ. ನಮ್ಮೆಲ್ಲರ ಮುಖ್ಯ ಉದ್ದೇಶ ದೇಶದ ಸಾಮಾನ್ಯ ನಾಗರಿಕನ ಜೀವನವನ್ನು ಉತ್ತಮ ಪಡಿಸುವುದಾಗಿದೆ. ಅವರನ್ನು ಬಡತನ, ಕೊಳಚೆ, ಹಸಿವು, ಅನಾರೋಗ್ಯ ಇವೆಲ್ಲವುಗಳಿಂದ ಮುಕ್ತ ಮಾಡಬೇಕಿದೆ. ಅವರಿಗೂ ಸಮಾನ ಅವಕಾಶಗಳು ನೀಡಬೇಕಿದೆ, ಅವರಿಗೆ ನ್ಯಾಯ ದೊರಕಬೇಕು, ಅವರಿಗೆ ಅವರ ಅಧಿಕಾರಗಳನ್ನು ನೀಡಬೇಕಿದೆ. ಈ ಕಾರ್ಯವನ್ನು ಎಲ್ಲ ಸಂಸ್ಥೆಗಳು ಒಂದು ಸಂಕಲ್ಪ ಮಾಡುವ ಮೂಲಕ ಪೂರ್ಣಗೊಳಿಸಬೇಕಿದೆ.
ಇದೇ ಸಭೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಂದು ಮಹತ್ವಪೂರ್ಣ ವಿಚಾರವನ್ನು ಮಂಡಿಸಿದ್ದರು, “ಎಲ್ಲಿಯ ತನಕ ನಾವು ಉನ್ನತ ಹುದ್ದೆಗಳಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಅಂತ್ಯ ಮಾಡುವುದಿಲ್ಲವೋ, ಸ್ವಜಾತಿ ಪ್ರೇಮವನ್ನು ಬೇರು ಸಮೇತ ಕಿತ್ತೊಗೆಯುವುದಿಲ್ಲವೋ, ಅಧಿಕಾರದ ದುರಾಸೆ, ಲಾಭ ಗಳಿಸುವ ಲಾಲಸೆ, ಕಳ್ಳದಂಧೆಯನ್ನು ದೂರ ಮಾಡುವುದಿಲ್ಲವೋ ಅಲ್ಲಿಯ ತನಕ ಆಡಳಿತದಲ್ಲಿ ದಕ್ಷತೆ ಹೆಚ್ಚುವುದಿಲ್ಲ ಅಲ್ಲದೆ, ಜನಸಾಮಾನ್ಯರ ಜೀವನದೊಂದಿಗೆ ಹೊಂದಿಕೊಂಡ ವಸ್ತುಗಳನ್ನು ಅವರಿಗೆ ಸುಲಭವಾಗಿ ತಲುಪಿಸಲು ಸಾಧ್ಯವಾಗುವುದಿಲ್ಲ.”
ಮಿತ್ರರೇ, ಈ ಮಾತುಗಳನ್ನು ಸ್ವಾತಂತ್ರ್ಯ ದೊರೆಯುವ ಕೆಲವೇ ಕ್ಷಣಗಳ ಮೊದಲು ನುಡಿಯಲಾಗಿತ್ತು. 14 ಆಗಸ್ಟ್ 1947 ದೇಶದ ಆಂತರಿಕ ದೌರ್ಬಲ್ಯಗಳ ಅರಿವಿನೊಂದಿಗೆ ಜವಾಬ್ಧಾರಿಯುತ ಭಾವನೆಯಿತ್ತು. ಆ ದೌರ್ಬಲ್ಯಗಳನ್ನು ಹೇಗೆ ದೂರ ಮಾಡಬೇಕೆಂಬ ಅರಿವೂ ಕೂಡಾ ಇತ್ತು. ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಆ ದೌರ್ಬಲ್ಯಗಳನ್ನು ದೂರ ಮಾಡಲಾಗದಿರುವುದು ನಮ್ಮ ದೌರ್ಭಾಗ್ಯ. ಆದುದರಿಂದ ಕಾರ್ಯಾಂಗ, ನ್ಯಾಯಾಂಗ ಹಾಗು ಶಾಸಕಾಂಗ ಈ ಮೂರು ವಿಭಾಗಗಳು ಕೂಡಿ ಬದಲಾದ ಪರಿಸ್ಥಿತಿಯಲ್ಲಿ ಹೇಗೆ ಮುಂದುವರಿಯಬೇಕೆಂಬ ಬಗ್ಗೆ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ನಾವು ಯಾರು ಸರಿ, ಯಾರು ತಪ್ಪು ಎಂದು ಹೇಳಲಾಗದು. ನಮ್ಮ ನಮ್ಮ ಕೊರತೆಗಳನ್ನು ನಾವು ಅರಿತಿದ್ದೇವೆ, ನಮ್ಮ ಶಕ್ತಿಯ ಪರಿಚಯ ಕೂಡಾ ನಮಗಿದೆ.
ಸಹೋದರ, ಸಹೋದರಿಯರೇ, ಈ ಸಮಯ ಭಾರತಕ್ಕೆ ಸ್ವರ್ಣಯುಗದಂತೆ. ಅನೇಕ ವರ್ಷಗಳ ನಂತರ ದೇಶದಲ್ಲಿ ಆತ್ಮವಿಶ್ವಾಸದ ವಾತಾವರಣ ಮೂಡಿದೆ. ನಿಶ್ಚಿತವಾಗಿಯೂ ಇದರ ಹಿಂದೆ ದೇಶದ 125 ಕೋಟಿ ಭಾರತೀಯರ ಇಚ್ಚಾಶಕ್ತಿ ಕೆಲಸ ಮಾಡುತ್ತಿದೆ. ಈ ಸಕಾರಾತ್ಮಕ ವಾತಾವರಣವನ್ನು ಆಧಾರವಾಗಿಟ್ಟುಕೊಂಡು ನಾವು ನವ ಭಾರತ ನಿರ್ಮಾಣದಲ್ಲಿ ಮುನ್ನಡೆಯಬೇಕಿದೆ. ಸಾಮರ್ಥ್ಯ ಮತ್ತು ಸಂಪನ್ಮೂಲಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. ಕೇವಲ ಸಮಯದ ಬಗ್ಗೆ ಕಾಳಜಿ ವಹಿಸಬೇಕಷ್ಟೆ.
ನಮ್ಮ ಬಳಿ ಸಾಕಷ್ಟು ಸಮಯವಿದೆ, ಮುಂಬರುವ ಪೀಳಿಗೆ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಾರೆ, ಎಲ್ಲ ತೊಂದರೆಗಳನ್ನು ಅವರೇ ಎದುರಿಸುತ್ತಾರೆ ಎಂದು ನಾವು ಭಾವಿಸಿದ್ದರೆ, ಇತಿಹಾಸ ನಮ್ಮನ್ನೆಂದು ಕ್ಷಮಿಸುವುದಿಲ್ಲ. ಏನೇ ಮಾಡುವುದಿದ್ದರೂ ಈಗಲೇ ಮಾಡಬೇಕು, ಈ ಕ್ಷಣದಲ್ಲೇ ಮಾಡಬೇಕು. ಈ ಕಾರ್ಯದ ಫಲ ನಮಗೆ ದೊರಕುವುದಿಲ್ಲ ಎಂಬ ಭಾವನೆಯಿಂದ ನಾವು ಕಾರ್ಯ ನಿರ್ವಹಿಸದೇ ಇರಬಾರದು.
ಮಿತ್ರರೇ, ಸರ್ಕಾರದ ಭೂಮಿಕೆ ನಿಯಂತ್ರಕಕ್ಕಿಂತ ಹೆಚ್ಚಾಗಿ ಸೌಕರ್ಯಗಳ ಬಗ್ಗೆ ಇರಬೇಕೆಂಬುದು ನನ್ನ ಅನಿಸಿಕೆ. ಇಂದು ಪಾಸ್ ಪೋರ್ಟ್ ಎಷ್ಟು ಬೇಗ ದೊರಕುತ್ತಿದೆ ಎಂಬುದು ತಮಗೆಲ್ಲರಿಗೂ ತಿಳಿದಿರಬೇಕು. ಹೆಚ್ಚೆಂದರೆ ಎರಡು ಅಥವಾ ಮೂರು ದಿನಗಳಲ್ಲಿ ದೊರಕುತ್ತಿದೆ. ಈ ಮೊದಲು ಇದಕ್ಕೆ ಎರಡು ಅಥವಾ ಮೂರು ತಿಂಗಳು ತಗಲುತ್ತಿತ್ತು. ಕಳೆದ ಎರಡು ಮೂರು ವರ್ಷಗಳಿಂದ ತಮ್ಮ ಆದಾಯ ತೆರಿಗೆ ಮರುಪಾವತಿಯೂ ಕೂಡಾ ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ.
ವ್ಯವಸ್ಥೆ ಒಂದು ವೇಗ ಪಡೆದುಕೊಳ್ಳುತ್ತಿರುವುದನ್ನು ತಾವು ಗಮನಿಸಿರಬಹುದು. ಈ ವೇಗ ಕೇವಲ ತಮಗಷ್ಟೇ ಅಲ್ಲ, ದೇಶದ ಬಡ, ಮಧ್ಯಮ ಹೀಗೆ ಎಲ್ಲರ ಜೀವನವನ್ನು ಇದು ಸುಲಭ ಮಾಡುತ್ತಿದೆ.
ಸಿ ಮತ್ತು ಡಿ ಗುಂಪಿನ ನೌಕರಿಗೆ ಸಂದರ್ಶನವನ್ನು ರದ್ದು ಮಾಡಿದ್ದರಿಂದ ಎಷ್ಟು ಜನ ಯುವಕರಿಗೆ ಪ್ರಯೋಜನವಾಯಿತು, ಎಷ್ಟು ಸಮಯ ಉಳಿಯಿತು, ಎಷ್ಟು ಹಣ ಉಳಿಯಿತು ಎಂಬುದನ್ನು ತಾವು ಯೋಚಿಸಿ. ದಾಖಲೆಗಳಿಗೆ ಈ ಮೊದಲು ಗೆಜೆಟೆಡ್ ಅಧಿಕಾರಿಗಳು ಧೃಡೀಕರಿಸಬೇಕಾದ್ದು ಅತ್ಯವಶ್ಯವಾಗಿತ್ತು, ಈಗ ಆ ಕೆಲಸ ಕೂಡ ಮಾಡಬೇಕಾಗಿಲ್ಲ. ಈ ಕಾರ್ಯಕ್ಕಾಗಿ ಅನಾವಶ್ಯಕವಾಗಿ ಇಲ್ಲಿ ಅಲ್ಲಿ ಓಡಾಡಬೇಕಾದ ಅವಶ್ಯಕತೆ ಇಲ್ಲ. ನಿಮಗೆ ಯಾರಾದರೂ ಗೆಜೆಟೆಡ್ ಅಧಿಕಾರಿಗಳು ಗೊತ್ತಾ, ಯಾವುದಾರದೂ ಶಾಸಕರು, ಸಂಸತ್ ಸದಸ್ಯರ ಪರಿಚಯ ಇದೆಯಾ ಎಂದು ಅವರಿವರನ್ನು ಕೇಳಬೇಕಾದ ಪ್ರಮೇಯ ಈಗ ಬರುವುದಿಲ್ಲ.
ಮಿತ್ರರೇ, ಯಾರೂ ಕ್ಲೈಮ್ ಮಾಡದಂತಹ (ಹಕ್ಕು ಸಾಧಿಸದಂತಹ) 27 ಸಾವಿರ ಕೋಟಿ ರೂಪಾಯಿಗಳು ನಮ್ಮ ದೇಶದಲ್ಲಿ ಇತ್ತು ಎಂದು ತಿಳಿದರೆ ತಮಗೆ ಆಶ್ಚರ್ಯವಾಗಬಹುದು. ಈ ಹಣವನ್ನು ನಮ್ಮ ದೇಶದ ಕಾರ್ಮಿಕರು, ಶ್ರಮಿಕರು ತಮ್ಮ ಭವಿಷ್ಯ ನಿಧಿಯಲ್ಲಿ ತೊಡಗಿಸಿಕೊಂಡಿದ್ದರು, ನಂತರದಲ್ಲಿ ತಮ್ಮ ಕಾರ್ಯ ಸ್ಥಳ ಬದಲಾಯಿಸಿದ ಕಾರಣ ಈ ಹಣವನ್ನು ಅವರು ಪಡೆದುಕೊಂಡಿರಲಿಲ್ಲ. ಒಂದು ಸಲ ಊರನ್ನು ಬಿಟ್ಟ ನಂತರ ಮತ್ತೆ ಯಾರು ಹೋಗುತ್ತಾರೆ, ಈ ಹಣಕ್ಕಾಗಿ ಯಾರು ಓಡಾಡುತ್ತಾರೆ ಎಂಬ ಭಾವನೆ ಇತ್ತು.
ಇದು ನಮ್ಮ ಕಾರ್ಮಿಕರ ಮತ್ತು ಮಧ್ಯಮ ಮರ್ಗದ ಕೆಲಸಗಾರರ ಬಹಳ ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕಾಗಿ ಈ ಸರ್ಕಾರ yಯೂನಿವರ್ಸಲ್ ಅಕೌಂಟ್ ನಂಬರ್ (ಸಾರ್ವತ್ರಿಕ ಖಾತೆ ಸಂಖ್ಯೆ) ಮಾಡಿ ಈ ಸಮಸ್ಯೆಯನ್ನು ಬಗೆಹರಿಸಿದೆ. ಈಗ ಕಾರ್ಮಿಕರು ಎಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರ ಬಳಿ ಈ ಸಂಖ್ಯೆ ಇರುತ್ತದೆ. ಈ ಸಂಖ್ಯೆಯ ಸಹಾಯದಿಂದ ಅವರು ಎಲ್ಲಿ ಬೇಕಾದರೂ ತಮ್ಮ ಭವಿಷ್ಯನಿಧಿಯಿಂದ ಹಣ ತೆಗೆಯಬಹುದಾಗಿದೆ.
ಮಿತ್ರರೇ, ಬೃಹದಾರಣ್ಯಕ್ ಉಪನಿಷದ್ ನಲ್ಲಿ ಹೇಳಿರುವಂತೆ,
ತದೇತತ್ – ಕ್ಷತ್ರಸ್ಯ ಕ್ಷತ್ರಂ ಯದ್ಧರ್ಮ:
ತಸ್ಮಾದ್ಧರ್ಮಾತ್ ಪರಂ ನಾಸ್ತಿ,
ಅತೋ ಅಬಲೀಯಾನ್ ಬಲಿಯಾನ್ಸ್ಮಾಶಂಸತೇ ಧರ್ಮೇಣ
ಯಥಾ ರಾಜ್ಞಾ ಏವಂ
ಅಂದರೆ ರಾಜರ ರಾಜ ಕಾನೂನು. ಕಾನೂನಿಗೂ ಮೀರಿದ್ದು ಏನೂ ಇಲ್ಲ. ರಾಜನ ಶಕ್ತಿ ಕಾನೂನಿನಲ್ಲಿ ಅಡಕವಾಗಿದೆ. ಬಡವರು ಮತ್ತು ಅಶಕ್ತರಿಗೆ ಹೋರಾಡುವಂತೆ ಕಾನೂನು ಶಕ್ತಿ ತುಂಬುತ್ತದೆ ಮತ್ತು ಅವರನ್ನು ಸಮರ್ಥರನ್ನಾಗಿ ಮಾಡುತ್ತದೆ. ಈ ಮಂತ್ರವನ್ನಿಟ್ಟುಕೊಂಡು ನಮ್ಮ ಸರ್ಕಾರ ಕೂಡಾ ಹಲವು ಹೊಸ ಕಾನೂನುಗಳನ್ನು ರಚನೆ ಮಾಡಿ, ಹಲವು ಹಳೆಯ ಕಾನೂನುಗಳನ್ನು ರದ್ದು ಮಾಡಿ ಸುಗಮ ಜೀವನ ಸಾಗಿಸಲು ಅನುವು ಮಾಡಿಕೊಟ್ಟಿದೆ.
ಕಳೆದ ಮೂರು – ಮೂರುವರೆ ವರ್ಷದಲ್ಲಿ ಸುಮಾರು 1200 ಹಳೆಯ ಕಾನೂನುಗಳನ್ನು ರದ್ದು ಮಾಡಲಾಗಿದೆ. ಹೇಗೆ ಸರ್ದಾರ್ ಪಟೇಲ್ ಅವರು ದೇಶದ ಏಕೀಕರಣ ಮಾಡಿದ್ದರೋ, ಅದೇ ರೀತಿ, ದೇಶವನ್ನು ಏಕತೆಯ ಸೂತ್ರದಲ್ಲಿ ಬಂಧಿಸುವಂತಹ ಕಾರ್ಯ ಜಿ ಎಸ್ ಟಿ ಮೂಲಕ ನಡೆದಿದೆ. ದಶಕಗಳ ನಂತರ “ಒಂದು ದೇಶ – ಒಂದು ತೆರಿಗೆ” ಯ ಕನಸು ನನಸಾಗಿದೆ.
ಇದೇ ರೀತಿಯಲ್ಲಿ ದಿವ್ಯಾಂಗರಿಗಾಗಿ ಇರುವ ಕಾನೂನಿನಲ್ಲಿ ಬದಲಾವಣೆಯ ನಿರ್ಧಾರವಾಗಿರಲಿ, ಎಸ್ ಸಿ / ಎಸ್ ಟಿ ಕಾನೂನನ್ನು ಮತ್ತಷ್ಟು ಕಠಿಣ ಮಾಡುವ ನಿರ್ಧಾರವಾಗಿರಲಿ, ಅನಿಯಂತ್ರಿತ ಬಿಲ್ಡರ್ ಗಳನ್ನು ತಡೆಗಟ್ಟಲು ರಚನೆಯಾದ ಕಾನೂನು “ರೇರಾ”, ಇವೆಲ್ಲವನ್ನು ಜನಸಾಮಾನ್ಯರು ದಿನನಿತ್ಯ ಎದುರಿಸುತ್ತಿದ್ದ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಬಹುದೆಂಬ ಉದ್ದೇಶದಿಂದ ರಚನೆ ಮಾಡಲಾಗಿದೆ.
ಮಿತ್ರರೇ, ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಕಪ್ಪು ಹಣದ ವಿರುದ್ಧ ವಿಶೇಷ ತನಿಖಾ ದಳದ ರಚನೆಯನ್ನು ಮೂರು ವರ್ಷಗಳ ತನಕ ಮುಂದೂಡುತ್ತಾ ಬಂದಿದ್ದು ಈ ಸಭಾಂಗಣದಲ್ಲಿ ಉಪಸ್ಥಿತರಿರುವ ತಮಗೆಲ್ಲರಿಗೂ ಅರಿವಿರಬಹುದು. ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ಮೂರು ದಿನದಲ್ಲಿ ವಿಶೇಷ ತನಿಖಾ ದಳದ ರಚನೆ ಮಾಡಿತು. ಈ ನಿರ್ಧಾರ ಕೂಡಾ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧವಾಗಿದ್ದು, ಅದೇ ರೀತಿ ಸಾಮಾನ್ಯ ನಾಗರಿಕರಿಗೂ ಸಂಬಂಧ ಪಟ್ಟದ್ದಾಗಿತ್ತು. ದೇಶದಲ್ಲಿ ನಡೆಯುವ ಭ್ರಷ್ಟಾಚಾರ, ಕಪ್ಪು ಹಣದ ಪ್ರತಿಯೊಂದು ವ್ಯವಹಾರಗಳು ದೇಶದ ಬಡವರ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ ಅಲ್ಲದೇ, ಅವರ ಜೀವನದಲ್ಲಿ ತೊಂದರೆಗಳನ್ನು ತಂದೊಡ್ಡುತ್ತದೆ.
ಸಹೋದರ, ಸಹೋದರಿಯರೇ, ನಾವು ದೇಶದ ಜನ ಸಾಮಾನ್ಯರ ಸಮಸ್ಯೆಗಳನ್ನು ಅರಿತು ಹಲವು ದೊಡ್ಡ ಮತ್ತು ಸಣ್ಣ ನಿರ್ಧಾರಗಳನ್ನು ತೆಗೆದುಕೊಂಡೆವು, ನಮ್ಮ ನಿರ್ಧಾರಗಳು ನಿಖರವಾಗಿದ್ದುದಲ್ಲದೇ, ಸಂವೇದನಶೀಲವೂ ಕೂಡಾ ಆಗಿತ್ತು. ಮಿತ್ರರೇ, ಜೀವನ ಮಟ್ಟ ಸುಧಾರಿಸುವತ್ತ ಗಮನ ಕೇಂದ್ರಿಕರಿಸಿದರ ನೇರ ಪರಿಣಾಮ ದೇಶದಲ್ಲಿ ಸುಗಮ ವ್ಯವಹಾರದ ಶ್ರೇಣಿಯಲ್ಲಿ ಕೂಡಾ ಗಣನೀಯ ಏರಿಕೆ ಕಂಡುಬಂದಿತು. 2014ಕ್ಕೆ ಮೊದಲು ದೇಶದ ಸುಗಮ ವ್ಯವಹಾರದ ಶ್ರೇಣಿ 142ನೇ ಸ್ಥಾನದಲ್ಲಿದ್ದರೆ, ಈಗ ಅದು 100ನೇ ಸ್ಥಾನಕ್ಕೆ ತಲುಪಿದೆ.
ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡಾ ಈ ದಿಕ್ಕಿನಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ನನಗೆ ಸಂತಸ ತಂದಿದೆ. ಈ ವರ್ಷ ರಾಷ್ಟ್ರ ಮಟ್ಟದಲ್ಲಿ ನಡೆದ ಲೋಕ್ ಅದಾಲತ್ ನಲ್ಲಿ ಸುಮಾರು 18 ಲಕ್ಷ ಪ್ರೀ ಲಿಟಿಗೇಶನ್ (ಮೊಕದ್ದಮೆ ಪೂರ್ವ) ಹಾಗು 22 ಲಕ್ಷ ಬಾಕಿ ಉಳಿದ ಪ್ರಕರಣಗಳನ್ನು ಇತ್ಯರ್ಥ ಮಾಡಿರುವುದಾಗಿ ನನಗೆ ತಿಳಿಸಿದ್ದಾರೆ.
ಸಹೋದರ, ಸಹೋದರಿಯರೇ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿರುವ ಪ್ರಕರಣಗಳಲ್ಲಿ, ಕೆಲವೊಂದು ಪ್ರಕರಣಗಳು ಪರಸ್ಪರ ಮಾತುಕತೆಗಳಿಂದ ಅಥವಾ ಯಾರದ್ದಾದರೂ ಮಧ್ಯಸ್ಥಿಕೆಯಿಂದ ಬಗೆಹರಿಯಬಲ್ಲವು ಎಂದು ಈ ಅಂಕಿ ಅಂಶಗಳನ್ನು ಗಮನಿಸಿದಾಗ ತಿಳಿದು ಬರುತ್ತದೆ. ಈ ಪ್ರಕರಣಗಳು ಎಷ್ಟು ವರ್ಷಗಳಿಂದ ನ್ಯಾಯಾಲಯಗಳಲ್ಲಿ ಬಾಕಿ ಇತ್ತು ಎಂದು ನನಗೆ ತಿಳಿದಿಲ್ಲ. ಆದರೆ ನಿಶ್ಚಿತವಾಗಿಯೂ ಇಂತಹ ಪ್ರಕರಣಗಳು ಬಗೆಹರಿದಿರುವುದರಿಂದ ನಮ್ಮ ನ್ಯಾಯಾಲಯಗಳ ಮೇಲಿದ್ದ ಹೊರೆ ಬಹಳಷ್ಟು ಕಡಿಮೆಯಾಗಿದೆ. ಇದರಿಂದಾಗಿ ಲೋಕ್ ಅದಾಲತ್ ಗಳ ಮೇಲಿನ ನಂಬಿಕೆ ಬಹಳಷ್ಟು ಹೆಚ್ಚಾಗಿದೆ. ನಮ್ಮ ನ್ಯಾಯಲಯಗಳಲ್ಲಿ ಬಾಕಿ ಇರುವ ಕೋಟ್ಯಾಂತರ ಪ್ರಕರಣಗಳು ಇಂತಹ ಲೋಕ್ ಅದಾಲತ್ ಗಳಿಂದ ಬಗೆಹರಿಯುತ್ತವೆ ಎಂದು ನನಗನಿಸುತ್ತಿದೆ.
ಬಾಕಿ ಇರುವ ಪ್ರಕರಣಗಳ ಬಗ್ಗೆ ಮುಖ್ಯ ನ್ಯಾಯಾಧೀಶರು ಕಳೆದ ಸೆಪ್ಟೆಂಬರ್ ನಲ್ಲಿ ಎಲ್ಲ ಹೈಕೋರ್ಟ್ ಗಳ ನ್ಯಾಯಾಧೀಶರುಗಳಿಗೆ ಪತ್ರ ಬರೆದಿರುವುದಾಗಿ ನನಗೆ ತಿಳಿಸಲಾಯಿತು. ಮನವಿಗಳ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಅವರು ನಮ್ಮ ನ್ಯಾಯ ವ್ಯವಸ್ಥೆಯ ಅದರಲ್ಲೂ ವಿಶೇಷವಾಗಿ ಅಪರಾಧ ನ್ಯಾಯ ವ್ಯವಸ್ಥೆಯ ದುರ್ಬಲತೆ ಎಂದು ಭಾವಿಸಿದ್ದಾರೆ. ಕೆಲವೊಂದು ಪ್ರಕರಣಗಳ ವಿಚಾರಣೆಗಾಗಿ ಶನಿವಾರವೂ ಕೂಡಾ ವಿಶೇಷ ಪೀಠಗಳು ಕಾರ್ಯ ನಿರ್ವಹಿಸಬಹುದೆಂಬ ಸಲಹೆ ನನಗೆ ಬಹಳ ಸಂತಸ ತಂದಿದೆ. ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ತಮಿಳುನಾಡು ಮತ್ತು ಗುಜರಾತ್ ನಲ್ಲಿ ಸಂಜೆ ನ್ಯಾಯಾಲಯಗಳು ಕಾರ್ಯ ನಿರ್ವಹಿಸುವ ಪ್ರಯೋಗ ಕೂಡಾ ನಡೆಯುತ್ತಿದೆ. ಈ ರೀತಿಯ ಪ್ರಯೋಗಗಳನ್ನು ಉಳಿದ ರಾಜ್ಯಗಳಲ್ಲಿಯೂ ಕೈಗೊಳ್ಳಬಹುದಾಗಿದೆ.
ಮಿತ್ರರೇ, ನ್ಯಾಯಾಂಗ ವ್ಯವಸ್ಥೆಯಲ್ಲಿ ಕೂಡಾ ತಂತ್ರಜ್ಞಾನದ ಹೆಚ್ಚಿನ ಬಳಕೆ ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬಹಳಷ್ಟು ಸಹಕಾರಿಯಾಗಲಿದೆ. ಇ-ಕೋರ್ಟ್ ಗಳು ಹೆಚ್ಚಿದಂತೆಲ್ಲ, ರಾಷ್ಟ್ರೀಯ ನ್ಯಾಯಾಂಗ ಡಾಟಾ ಗ್ರಿಡ್ ವಿಸ್ತಾರವಾದಂತೆಲ್ಲ, ಜನಗಳಿಗೆ ನ್ಯಾಯಾಲಯಗಳಲ್ಲಿ ಆಗುತ್ತಿದ್ದ ತೊಂದರೆಗಳು ಕಡಿಮೆಯಾಗುತ್ತವೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಬಂದೀಖಾನೆ ಮತ್ತು ನ್ಯಾಯಲಯಗಳ ಸಂಪರ್ಕ ಬೆಳೆದರೆ ನ್ಯಾಯಾಲಯ ಮತ್ತು ಬಂಧೀಖಾನೆ ಆಡಳಿತಕ್ಕೆ ಬಹಳಷ್ಟು ನೆರವಾಗುವುದು.
ಕಳೆದ ಎರಡು ವರ್ಷಗಳಲ್ಲಿ ಸುಮಾರು 1500 ನ್ಯಾಯಾಲಯಗಳು ವಿಡಿಯೋ ಸಂವಾದದ ಮೂಲಕ ಜೈಲುಗಳೊಂದಿಗೆ ಸಂಪರ್ಕ ಹೊಂದಿವೆ.
ದೇಶದ ದೂರ ಪ್ರದೇಶಗಳಲ್ಲಿ ಇರುವ ಜನರಿಗಾಗಿ, ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಕಾನೂನಿನ ಸಲಹೆ ನೀಡುವುದಕ್ಕಾಗಿ ಟೆಲಿ ಲಾ ಸ್ಕೀಮ್ ಪ್ರಾರಂಭಿಸಿರುವ ಬಗ್ಗೆಯೂ ನನಗೆ ತಿಳಿಸಲಾಯಿತು. ಈ ಯೋಜನೆಯ ವಿಸ್ತಾರ ಹೆಚ್ಚಿದಂತೆಲ್ಲ, ಜನರಿಗೆ ಅದರ ಪ್ರಯೋಜನ ಹೆಚ್ಚಾಗಿ ಲಭಿಸುವುದು.
ಜಸ್ಟೀಸ್ ಕ್ಲಾಕ್ ಎಂಬ ನೂತನ ಕಲ್ಪನೆ ನನಗೆ ಬಹಳ ಇಷ್ಟವಾಯಿತು. ಈ ಗಡಿಯಾರವನ್ನು ನ್ಯಾಯಾಂಗ ಇಲಾಖೆಯಲ್ಲಿ ಹಾಕಲಾಗಿದೆ. ಇದರಿಂದಾಗಿ, ಉತ್ತಮ ಕಾರ್ಯನಿರ್ವಹಿಸುವ ಜಿಲ್ಲಾ ನ್ಯಾಯಾಲಯಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಗಡಿಯಾರಗಳನ್ನು ಎಲ್ಲ ನ್ಯಾಯಾಲಯಗಳಲ್ಲಿ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಜಸ್ಟೀಸ್ ಕ್ಲಾಕ್ ಎಂಬುದು ಒಂದು ರೀತಿಯಲ್ಲಿ ನ್ಯಾಯಾಲಯಗಳಿಗೆ ಶ್ರೇಣಿ ನೀಡುವಲ್ಲಿ ಸಹಕಾರಿಯಾಗಲಿದೆ.
ಸ್ವಚ್ಚತೆಗಾಗಿ ಶ್ರೇಣಿ ನೀಡುವುದಕ್ಕೆ ಪ್ರಾರಂಭಿಸಿದ ಮೇಲೆ ನಗರಗಳಲ್ಲಿ ಒಂದು ರೀತಿಯ ಸ್ಪರ್ಧೆ ಪ್ರಾರಂಭವಾಯಿತು. ಕಾಲೇಜುಗಳಲ್ಲಿ ದರ್ಜೆ ನೀಡಲು ಪ್ರಾರಂಭಿಸಿದ ಮೇಲೆ ಅಲ್ಲಿಯೂ ಕೂಡಾ ಒಂದು ರೀತಿಯ ಸ್ಪರ್ಧೆ ಆರಂಭವಾಯಿತು. ಅದೇ ರೀತಿ ಜಸ್ಟೀಸ್ ಕ್ಲಾಕ್ ನ ವಿಸ್ತರಿಸಿ, ಅವಶ್ಯಕತೆಗಳಿಗೆ ಅನುಸಾರವಾಗಿ ಕೆಲವೊಂದು ಸುಧಾರಣೆಗಳನ್ನು ಮಾಡಿದ್ದೇ ಆದಲ್ಲಿ, ನ್ಯಾಯಾಲಯಗಳಲ್ಲಿ ಕೂಡಾ ವೃತ್ತಿಪರ ಸ್ಪರ್ಧೆ ಉಂಟಾಗುತ್ತದೆ. ಸ್ಪರ್ಧಾಭಾವ ಉಂಟಾದ ಕೂಡಲೇ ವ್ಯವಸ್ಥೆಯೂ ಕೂಡಾ ವೇಗ ಪಡೆದುಕೊಂಡು ಕಡಿಮೆ ಸಮಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುತ್ತದೆ ಎಂಬುದು ನನ್ನ ಅನುಭವ.
ನಾನು ಕಾನೂನನ್ನು ಅರಿತವನಲ್ಲ. ಆದರೆ ನ್ಯಾಯಾಲಯಗಳ ಸ್ಪರ್ಧೆಯಿಂದ ನ್ಯಾಯಪಾಲನೆ ಸುಲಭವಾಗುವುದರ ಜತೆಗೆ ಜೀವನಮಟ್ಟ ಸುಧಾರಣೆಯಾಗುವುದೆಂಬ ವಿಶ್ವಾಸ ನನಗಿದೆ.
ಜನಸಾಮಾನ್ಯರು ನ್ಯಾಯ ಪಡೆಯಲು ನ್ಯಾಯಾಲಯಗಳಿಗೆ ಆಗಮಿಸಲು ಭಯಪಡುತ್ತಾರೆ ಎಂದು ನಿನ್ನೆ ರಾಷ್ಟ್ರಪತಿಯವರೂ ಕೂಡಾ ತಮ್ಮ ಚಿಂತೆ ವ್ಯಕ್ತಪಡಿಸಿದ್ದರು. ಮಿತ್ರರೇ, ನಮ್ಮೆಲ್ಲರ ಪ್ರಯತ್ನದ ಪರಿಣಾಮವಾಗಿ ದೇಶದ ಸಾಮಾನ್ಯ ನಾಗರಿಕರು ನ್ಯಾಯಾಲಯಗಳ ಬಗ್ಗೆ ಯಾವುದೇ ಭಯಪಡದೆ, ಅವರಿಗೆ ಸಮಯಕ್ಕೆ ಸರಿಯಾಗಿ ನ್ಯಾಯ ದೊರಕಿ, ನ್ಯಾಯಾಲಯಗಳ ಪ್ರಕ್ರಿಯೆಯಲ್ಲಿ ಅವರಿಗೆ ಆಗಬಹುದಾದ ವೆಚ್ಚ ಕೂಡಾ ಕಡಿಮೆಯಾಗಬೇಕಾಗಿದೆ.
ಮಿತ್ರರೇ, ಇಂದು ಸಂವಿಧಾನ ದಿನದ ಸಂದರ್ಭದಲ್ಲಿ ನಾನು, ಜನವರಿ 2018 ಕ್ಕೆ ಮತ ಚಲಾಯಿಸುವ ಅಧಿಕಾರ ಪಡೆಯಲಿರುವ ಎಲ್ಲ ಯುವಜನತೆಗೆ ಶುಭಾಶಯಗಳನ್ನು ಕೋರುತ್ತೇನೆ. ಈ ಯುವಜನತೆ 21ನೇ ಶತಮಾನದಲ್ಲಿ ಜನಿಸಿದ್ದಾರೆ ಹಾಗು ಕೆಲವೇ ತಿಂಗಳುಗಳ ನಂತರ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. 21ನೇ ಶತಮಾನವನ್ನು ಭಾರತದ ಶತಮಾನವನ್ನಾಗಿಸುವ ಜವಾಬ್ಧಾರಿ ಈ ಯುವಜನತೆಯ ಮೇಲಿದೆ. ಇಂತಹ ಯುವಜನತೆಯನ್ನು ಮತ್ತಷ್ಟು ಬಲಿಷ್ಠರನ್ನಾಗಿಸಿ, ಅವರ ಶಕ್ತಿಯನ್ನು ಹೆಚ್ಚಿಸುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.
ಇದೇ ಸಂದರ್ಭದಲ್ಲಿ ನಾನೊಂದು ಮಹತ್ವಪೂರ್ಣ ವಿಚಾರವನ್ನು ತಮ್ಮ ಮುಂದಿಡಲು ಬಯಸುತ್ತೇನೆ. ಕೇಂದ್ರ ಹಾಗೂ ರಾಜ್ಯಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆಸುವುದೇ ಈ ವಿಚಾರ. ಕಳೆದ ಕೆಲವು ಸಮಯಗಳಿಂದ ದೇಶದಲ್ಲಿ ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ಪ್ರತಿ 4 – 6 ತಿಂಗಳಿಗೊಮ್ಮೆ ನಡೆಯುವ ಚುನಾವಣೆಗಳ ಕಾರಣ ದೇಶದ ಬೊಕ್ಕಸಕ್ಕೆ ಆಗುತ್ತಿರುವ ಆರ್ಥಿಕ ಹೊರೆ, ಸಂಪನ್ಮೂಲಗಳ ಮೇಲೆ ಬೀಳಲಿರುವ ಹೊರೆಯ ಬಗ್ಗೆ ಅನೇಕ ರಾಜಕೀಯ ಪಕ್ಷಗಳು ಕೂಡಾ ಚಿಂತೆ ವ್ಯಕ್ತಪಡಿಸಿವೆ. 2009ರ ಲೋಕಸಭಾ ಚುನಾವಣೆಯನ್ನೇ ತೆಗೆದುಕೊಂಡರೇ, ಆ ವರ್ಷ ಚುನಾವಣೆ ನಡೆಸಲು ಸುಮಾರು 1100 ಕೋಟಿ ರೂಪಾಯಿಗಳ ವೆಚ್ಚವಾಗಿತ್ತು. ಹಾಗೆಯೇ 2014 ರ ಚುನಾವಣೆಗೆ ಸುಮಾರು 4 ಸಾವಿರ ಕೋಟಿ ರೂಪಾಯಿಗಳ ವೆಚ್ಚವಾಗಿತ್ತು. ಇದಲ್ಲದೇ ಅಭ್ಯರ್ಥಿಗಳ ವೆಚ್ಚ ಬೇರೆ. ಪ್ರತಿಯೊಂದು ಚುನಾವಣೆಗೆ ಸಾವಿರಾರು ಕಾರ್ಮಿಕರ ನಿಯೋಜನೆ, ಸುರಕ್ಷಾ ಪಡೆಗಳ ಲಕ್ಷಾಂತರ ಯೋಧರ ನಿಯೋಜನೆ ಕೂಡಾ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತದೆ. ಒಂದು ಬಾರಿ nItiನೀತಿ ಸಂಹಿತೆ ಜಾರಿಯಾದ ಕೂಡಲೇ ಸರ್ಕಾರ ಕೂಡಾ ಯಾವುದೇ ನಿರ್ಧಾರಗಳನ್ನು ಸುಲಭವಾಗಿ ತೆಗೆದುಕೊಳ್ಳಲು ಆಗುವುದಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ ವಿಶ್ವದ ಅನೇಕ ದೇಶಗಳಲ್ಲಿ ಚುನಾವಣೆಯ ದಿನಾಂಕ ನಿಗದಿಯಾಗಿರುತ್ತದೆ. ತಮ್ಮ ದೇಶದಲ್ಲಿ ಯಾವಾಗ, ಯಾವ ತಿಂಗಳಲ್ಲಿ ಚುನಾವಣೆ ನಡೆಯುವುದೆಂಬುದು ಆ ದೇಶದ ಜನರಿಗೆ ಅರಿವಿರುತ್ತದೆ. ಇದರಿಂದಾಗಬಹುದಾದ ಲಾಭವೆಂದರೆ ದೇಶದಲ್ಲಿ ಯಾವಾಗ ಚುನಾವಣೆ ನಡೆಯುವುದೆಂಬ ಚಿಂತೆ ಇರುವುದಿಲ್ಲ, ನೀತಿ ಯೋಜನಾ ಪ್ರಕ್ರಿಯೆ ಮತ್ತು ಅದರ ಅನುಷ್ಠಾನ ಹೆಚ್ಚು prಪರಿಣಾಮಕಾರಿಯಾಗಿರುತ್ತದೆ. ದೇಶದ ಸಂಪನ್ಮೂಲಗಳ ಮೇಲೆ ಹೆಚ್ಚಿನ ಹೊರೆ ಕೂಡಾ ಬೀಳುವುದಿಲ್ಲ.
ಈ ಮೊದಲು ದೇಶದಲ್ಲಿ ಒಂದೇ ಬಾರಿಗೆ ಚುನಾವಣೆ ಆಗಿದೆ ಹಾಗು ಅದು ಅತ್ಯಂತ ಸುಲಭ ಕೂಡಾ ಆಗಿತ್ತು. ಆದರೆ ನಮ್ಮದೇ ಆದ ದೌರ್ಬಲ್ಯಗಳ ಕಾರಣ ಈ ವ್ಯವಸ್ಥೆ ಮುರಿದು ಬಿತ್ತು. ನಾನು ಇಂದು ಸಂವಿಧಾನ ದಿನದ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ಈ ಬಗೆಗಿನ ಚರ್ಚೆಯನ್ನು ಮುಂದುವರಿಸುವಂತೆ ಆಗ್ರಹಿಸುತ್ತೇನೆ.
ಸಹೋದರ ಸಹೋದರಿಯರೇ, ಸ್ವಯ ನಿಯಂತ್ರಣವಿಲ್ಲದಿದ್ದರೆ, ಯಾವುದೇ ವ್ಯಕ್ತಿ ಅಥವಾ ಸರ್ಕಾರ ಅಥವಾ ಸಂಸ್ಥೆಗಳಿಗೆ ಒಂದಲ್ಲ ಒಂದು ದಿನ ಸಂಕಷ್ಟ ತಲೆದೂರುವುದು ನಿಶ್ಚಿತ. ಕಾಲ ಕಾಲಕ್ಕೆ ನಾವು ನಮ್ಮನ್ನು ನವೀಕರಿಸಿಕೊಳ್ಳುತ್ತೇವೆ, ಸ್ವನಿಯಂತ್ರಣದಿಂದ ಮುಂದುವರೆಯುತ್ತೇವೆ ಇದರಿಂದಾಗಿ ನಮ್ಮ ವ್ಯವಸ್ಥೆ ಬಲಗೊಂಡಿದೆ. ವಿಶೇಷವಾಗಿ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳ ಬಗ್ಗೆ ಹೇಳುವುದಾದರೆ, ಅವರುಗಳು ದೇಶದ ಹಿತಕ್ಕಾಗಿ, ಸಮಾಜದ ಹಿತಕ್ಕಾಗಿ ಸ್ವತ: ಅನೇಕ ನಿರ್ಬಂಧಗಳನ್ನು ಹೇರಿಕೊಂಡರು,
ಚುನಾವಣೆ ಸಮಯದಲ್ಲಿ ಜಾರಿಯಾಗುವ ನೀತಿ ಸಂಹಿತೆಯ ಬಗ್ಗೆ ಬಹಳಷ್ಟು ಜನರಿಗೆ ಅರಿವಿರುವುದಿಲ್ಲ. ಈ ನೀತಿ ಸಂಹಿತೆಯನ್ನು ಯಾವುದೇ ಕಾನೂನಿನ ಮೂಲಕ ಜಾರಿ ಮಾಡಲಾಗುವುದಿಲ್ಲ, ಬದಲಾಗಿ ಸ್ವತ: ರಾಜಕೀಯ ಪಕ್ಷಗಳು ತಮ್ಮ ಇಚ್ಚೆಯಂತೆ ಈ ನೀತಿ ಸಂಹಿತೆಯನ್ನು ಸ್ವೀಕರಿಸಿವೆ.
ಇದೇ ರೀತಿ ಸಂಸತ್ ನಲ್ಲಿ ಅನೇಕ ಕಾನೂನುಗಳನ್ನು ಜಾರಿ ಮಾಡುವ ಮೂಲಕ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನಾಯಕರು ಕ್ರಮಗಳನ್ನು ಕೈಗೊಂಡಿದ್ದಾರೆ. ರಾಜಕೀಯದಲ್ಲಿ ಸ್ವಚ್ಚತೆ, ಶುಚಿತ್ವ ತರಲು ಪ್ರಯತ್ನಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಯಾವುದೇ ಸಂಸ್ಥೆ ಇರಲಿ ಅದರಲ್ಲಿ ಸ್ವ ನಿಯಂತ್ರಣ, ಪರಿಶೀಲನೆ ಮತ್ತು ಸಮತೋಲನ ವ್ಯವಸ್ಥೆ ಸದೃಢವಾಗಿದ್ದಲ್ಲಿ, ಸಂಸ್ಥೆ ಮತ್ತು ಸಂಸ್ಥೆಯ ಅಂಗಸಂಸ್ಥೆಗಳು ಸದೃಢವಾಗಿರಬಲ್ಲದು.
ಇಂದು ಸಂವಿಧಾನದ ಮೂರು ಅಂಗಗಳ ಸಮತೋಲನದ ಬಗ್ಗೆ ಚರ್ಚೆ ನಡೆಯುತ್ತಿದೆ. ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವಣ ಸಮತೋಲನ ಸಂವಿಧಾನದ ಬೆನ್ನೆಲುಬು ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಈ ಸಮತೋಲನದ ಕಾರಣದಿಂದಾಗಿಯೇ ನಮ್ಮ ದೇಶ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ತೊಡೆದು ಹಾಕುವ ಎಲ್ಲ ಪ್ರಯತ್ನಗಳನ್ನು ತಳ್ಳಿ ಹಾಕಲಾಯಿತು.
ಮಿತ್ರರೇ, ಅಂದಿನ ಸಂದರ್ಭದಲ್ಲಿ ತನ್ನ ಐತಿಹಾಸಿಕ ನಿರ್ಣಯದಲ್ಲಿ ಸರ್ವೋಚ್ಚ ನ್ಯಾಯಾಲಯವು, “ಸಂವಿಧಾನದ ಮೂಲಭೂತ ಸ್ವರೂಪದ ಅಡಿಯಲ್ಲಿ, ಸಂವಿಧಾನದ ಮೂರೂ ಅಂಗಗಳು, ಸಂವಿಧಾನ ನಿಗದಿ ಪಡಿಸಿದ ಗಡಿಯನ್ನು ಮೀರಿ ಪರಸ್ಪರ ಗಡಿಯನ್ನು ದಾಟಿ ಹೋಗಲು ಸಾಧ್ಯವಿಲ್ಲ. ಇದು ಸಂವಿಧಾನದ ಪ್ರಬಲ ಸಿದ್ಧಾಂತದ ತಾರ್ಕಿಕ ಮತ್ತು ಮೂಲ ಅರ್ಥವಾಗಿದೆ” ಎಂದು ಹೇಳಿದೆ.
ಸಂವಿಧಾನದ ಈ ಬಲದ ಕಾರಣದಿಂದಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇದನ್ನು ಮೂಲಭೂತ ದಾಖಲೆ ಎಂದು ಪರಿಗಣಿಸಿದ್ದರು. ಈ ದಾಖಲೆ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಸ್ಥಿತಿ ಮತ್ತು ಶಕ್ತಿಯ ಅಧಿಕಾರಗಳನ್ನು ವಿವರಿಸುತ್ತದೆ.
“ಸಂವಿಧಾನದ ಉದ್ದೇಶ ಸರ್ಕಾರದ ಮೂರು ಅಂಗಗಳ ನಿರ್ಮಾಣ ಮಾಡುವುದಷ್ಟೇ ಅಲ್ಲ, ಅವುಗಳ ಆಧಿಕಾರದ ಪರಿಮಿತಿಗಳನ್ನು ನಿರ್ಧರಿಸುವುದೂ ಕೂಡಾ ಆಗಿದೆ. ಈ ಮೂರೂ ಅಂಗಗಳ ಪರಿಮಿತಿಗಳನ್ನು ನಿರ್ಧರಿಸದೇ ಹೋದಲ್ಲಿ ಸಂಸ್ಥೆಗಳಲ್ಲಿ ನಿರಂಕುಶತೆ ಸೃಷ್ಟಿಯಾಗಿ ಕಿರುಕುಳಗಳು ಪ್ರಾರಂಭವಾಗುತ್ತದೆ. ಆದುದರಿಂದ ಯಾವುದೇ ಕಾನೂನುಗಳನ್ನು ಜಾರಿ ಮಾಡುವ ಸ್ವಾತಂತ್ರ ಶಾಸಕಾಂಗಕ್ಕೆ ದೊರಕಬೇಕು ಮತ್ತು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ ಕಾರ್ಯಾಂಗಕ್ಕೆ ದೊರೆಯಬೇಕು ಹಾಗು ನ್ಯಾಯಾಂಗವು ಕಾನೂನನ್ನು ವ್ಯಾಖ್ಯಾನಿಸುವ ಸ್ವಾತಂತ್ರ್ಯವನ್ನು ಹೊಂದಿರಬೇಕು.” ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು.
ಬಾಬಾ ಸಾಹೇಬ್ ಅವರ ಮಾತುಗಳಂತೆ ನಾವು ಇಂದು ಇಲ್ಲಿಯ ತನಕ ತಲುಪಿದ್ದೇವೆ ಮತ್ತು ಹೆಮ್ಮೆಯಿಂದ ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ. ಸಂವಿಧಾನದ ಈ ಅಂಶವು, ಸಂವಿಧಾನದ ಮೂಲಭೂತ ರಚನೆಗೆ ಸಂಬಂಧಿಸಿದ ಮೂರೂ ಸಂಸ್ಥೆಗಳ ನಡುವಣ ಸಮತೋಲನದ ಬಗ್ಗೆ ಸರ್ವೋಚ್ಚ ನ್ಯಾಯಾಲಯವೂ ಕೂಡಾ ತನ್ನ ಅನೇಕ ನಿರ್ಣಯಗಳಲ್ಲಿ ತಿಳಿಸಿದೆ.
1967 ರ ಒಂದು ನಿರ್ಣಯದಲ್ಲಿ ಸರ್ವೋಚ್ಚ ನ್ಯಾಯಾಲಯವು, “ನಮ್ಮ ಸಂವಿಧಾನವು, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಪರಿಧಿಯನ್ನು ಬಹಳ ಸೂಕ್ಷ್ಮವಾಗಿ ನಿರ್ಧರಿಸಿದೆ. ತನ್ನ ಪರಿಧಿಯನ್ನು ಉಲ್ಲಂಘಿಸದೆ ಮೂರು ಅಂಗಗಳು ತಮ್ಮ ಶಕ್ತಿಯನ್ನು ಉಪಯೋಗಿಸಿಕೊಳ್ಳಬೇಕಾಗಿದೆ ಎಂದು ಸಂವಿಧಾನವು ಬಯಸುತ್ತದೆ”
ಎಂದು ಹೇಳಿದೆ.
ಸಹೋದರ, ಸಹೋದರಿಯರೇ, ನವಭಾರತ ನಿರ್ಮಾಣದ ಕನಸನ್ನು ನನಸು ಮಾಡುವ ಎಲ್ಲ ಪ್ರಯತ್ನಗಳನ್ನು ನಾವು ಮಾಡುತ್ತಿದ್ದು, ಇದರಿಂದ ಸಂವಿಧಾನವು ನಮಗೆ ಬೋಧಿಸಿದ ವಿಷಯಗಳ ಪ್ರಸ್ತುತತೆಯನ್ನು ಹೆಚ್ಚು ಮಾಡಿದೆ. ನಮ್ಮ ಸೀಮಿತ ಪರಿಧಿಯೊಳಗೆ ಇದ್ದುಕೊಂಡು ನಾವು ಜನತೆಯ ಆಸೆ ಆಕಾಂಕ್ಷೆಗಳನ್ನು ಪೂರ್ಣ ಮಾಡಬೇಕಿದೆ.
ಇಂದು ಸಂಪೂರ್ಣ ವಿಶ್ವ ಭಾರತದ ಕಡೆಗೆ ಬಹಳ ನಿರೀಕ್ಷೆಯೊಂದಿಗೆ ನೋಡುತ್ತಿದೆ. ಅವುಗಳ ಎಲ್ಲ ಸಮಸ್ಯೆಗಳ ಪರಿಹಾರ ಭಾರತದಲ್ಲಿ ದೊರೆಯುತ್ತಿದೆ. ಎಷ್ಟೋ ದೇಶಗಳು ಭಾರತದ ಅಭಿವೃದ್ಧಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಬಯಸುತ್ತಿವೆ. ಹೀಗಿರುವಾಗ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಂವಿಧಾನವು ನಿಗದಿಪಡಿಸಿದ ಪರಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ.
ಮಿತ್ರರೇ, ನಾನು ಕಾನೂನು ಆಯೋಗ ಮತ್ತು ನೀತಿ ಆಯೋಗಗಳು ಏರ್ಪಡಿಸಿರುವ ಈ ಕಾರ್ಯಕ್ರಮಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಂವಿಧಾನದ ಮೂರೂ ಅಂಗಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮನಸ್ಸಿನಿಂದ ತಮ್ಮ ಮಾತುಗಳನ್ನು ಮಂಡಿಸಿದ್ದಾರೆ. ಬಹಳಷ್ಟು ವಿದ್ವಾಂಸರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರ ಅಭಿಪ್ರಾಯಗಳಿಗೆ ಅದರದೇ ಆದ ಮಹತ್ವವಿದೆ. ಪ್ರಜಾಪ್ರಭುತ್ವ ಬಲಗೊಳ್ಳಲು ಈ ರೀತಿಯ ಸಂವಾದಗಳು ಬಹಳ ಅವಶ್ಯ. ಇದು ನಮ್ಮ ಪರಿಪಕ್ವತೆಯನ್ನು ತೋರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಹೊರಬಂದ ಕ್ರಿಯಾತ್ಮಕ ಅಂಶಗಳನ್ನು ಎಲ್ಲರೂ ಒಂದುಗೂಡಿ ಮುಂದುವರಿಸಿಕೊಂಡು ಹೋಗಬೇಕಿದೆ. ಸಂವಾದದ ಪ್ರಕ್ರಿಯೆ ನಿರಂತರವಾಗಿ ಮುಂದುವರಿದುಕೊಂಡು ಹೋಗುವಂತೆ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕಿದೆ.
ಸಹೋದರ, ಸಹೋದರಿಯರೇ, ಇಂದು ಪರಸ್ಪರ ಒಟ್ಟುಗೂಡಬೇಕಾದ ಅವಶ್ಯಕತೆ ಇದೆ. ಪ್ರತಿಯೊಂದು ಸಂಸ್ಥೆಗಳು ಪರಸ್ಪರ ಅರಿತುಕೊಳ್ಳಬೇಕಿದೆ, ಆ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಶೆಗಳನ್ನು ಅರ್ಥ ಮಾಡಿಕೊಳ್ಳಿ. ಈ ಮೂರು ಅಂಗಗಳು ಸಂವಿಧಾನದಲ್ಲಿ ಉಲ್ಲೇಖಿಸಿರುವ ಕರ್ತವ್ಯಗಳ ಬಗ್ಗೆ ಗಮನ ಹರಿಸಿದರೆ, ದೇಶದ ನಾಗರಿಕರಿಗೂ ಕೂಡಾ “ ತಾವು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ನನಗೇನಾಗಬೇಕು ಎಂಬ ಯೋಚನೆಯನ್ನು ಬಿಟ್ಟು ಸಮಾಜ ಮತ್ತು ದೇಶದ ಬಗ್ಗೆ ಚಿಂತಿಸಿ” ಎಂದು ಹೇಳಬಹುದಾಗಿದೆ.
ಸ್ನೇಹಿತರೆ, ಅಧಿಕಾರ – ಅಧಿಕಾರದ ಸಂಘರ್ಷದಲ್ಲಿ ಕರ್ತವ್ಯಗಳನ್ನು ಮರೆಯುವ ಅಪಾಯವಿದೆ, ಕರ್ತವ್ಯಗಳನ್ನು ಹಿಂದೆ ತಳ್ಳಿದರೆ ದೇಶ ಮುಂದೆ ಬರಲು ಸಾಧ್ಯವಿಲ್ಲ.
ನಾನು ಮತ್ತೊಮ್ಮೆ ತಮ್ಮೆಲ್ಲರಿಗೂ, ದೇಶದ ಎಲ್ಲ ನಾಗರಿಕರಿಗೂ ಸಂವಿಧಾನ ದಿನದ ಶುಭಾಶಯಗಳನ್ನು ಕೋರುತ್ತೇನೆ.
ತಮಗೆಲ್ಲರಿಗೂ ಬಹಳ ಧನ್ಯವಾದಗಳು.
ಜೈಹಿಂದ್….