ನನ್ನ ಪ್ರೀತಿಯ ಸಹೋದರ, ಸಹೋದರಿಯರೇ,
ಮಿತ್ರರೇ, ತಾನು ಬೆಳೆದ ನಳನಳಿಸುವ ಬೆಳೆಯನ್ನು ಕಂಡಾಗ ರೈತನಿಗಾಗುವ ಅನುಭವ, ತಾನು ಶ್ರಮಪಟ್ಟು ಮಾಡಿದ ಮಡಿಕೆ, ಮಣ್ಣಿನ ಪಾತ್ರೆ, ಮಣ್ಣಿನ ದೀಪವನ್ನು ಕಂಡಾಗ ಕುಂಬಾರಿನಿಗಾಗುವ ಸಂತೋಷ, ಸುಂದರ ವಸ್ತ್ರವನ್ನು ಮಾಡಿದ ನಂತರ ಯಾವುದೇ ನೇಕಾರನಿಗಾಗುವ ಉತ್ಸಾಹದ ಅನುಭವ ಇಂದು ನನಗಾಗುತ್ತಿದೆ. ಇದೀಗ ಸ್ವಲ್ಪ ಹೊತ್ತಿನ ಮೊದಲು ದೇಶದ 125 ಕೋಟಿ ಭಾರತೀಯರ ಆಸೆಯನ್ನು, ಅವರ ಭಾವನೆಯನ್ನು ಹೊತ್ತು ನಾನಿಲ್ಲಿಗೆ ಆಗಮಿಸಿದ್ದೇನೆ.
ಘೋಘಾದಿಂದ ದಹೇಜ್ ಮಧ್ಯೆ ಸಮುದ್ರ ಮಾರ್ಗದಲ್ಲಿ ಕಳೆದ ಪ್ರತಿಕ್ಷಣ ಕೂಡಾ ಕಳೆದುಹೋಗುತ್ತಿರುವ ಪ್ರತಿ ನಿಮಿಷವೂ ಕೂಡಾ ಒಂದು ಇತಿಹಾಸವನ್ನು ಬರೆಯುತ್ತಿದೆ, ನೂತನ ಭವಿಷ್ಯದ ಬಾಗಿಲನ್ನು ತೆರೆಯುತ್ತಿದೆ ಎಂದು ನನಗನ್ನಿಸುತ್ತಿತ್ತು, ಇದೇ ದ್ವಾರದ ಮೂಲಕ ಮುನ್ನಡೆದು ನೂತನ ಭಾರತವನ್ನು ಬಲಿಷ್ಟವನ್ನಾಗಿ ಮಾಡೋಣ, ನವ ಭಾರತದ ಕನಸನ್ನು ನನಸು ಮಾಡೋಣ. ದೇಶದ ಜನಶಕ್ತಿಯಿಂದಲೇ ಮತ್ತು ಆ ಜನಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳುವ ಕನಸನ್ನು ಸರದಾರ್ ಪಟೇಲರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ತನಕ ಎಲ್ಲರೂ ಕಂಡಿದ್ದರು. ಇಂದು ನಾವು ಅವರ ಕನಸಿನೊಂದಿಗೆ ಹೊಂದಿಕೊಂಡ ಒಂದು ಸವಾಲನ್ನು ದಾಟಿ ಮುನ್ನಡೆದಿದ್ದೇವೆ.
ಘೋಘಾ – ದಹೇಜ್ ನಡುವಣ ಈ ಸಮುದ್ರ ಮಾರ್ಗ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನ ಕೋಟ್ಯಾನುಕೋಟಿ ಜನರ ಜೀವನವನ್ನು ಮತ್ತಷ್ಟು ಸುಖಕರವನ್ನಾಗಿ ಮಾಡಿರುವುದೇ ಅಲ್ಲದೇ ಅವರನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ.
ಈ ಸಮುದ್ರಯಾನ (ಹಡಗು) ಸೇವೆಯಿಂದ ಈ ಸಂಪೂರ್ಣ ಕ್ಷೇತ್ರದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಒಂದು ಹೊಸ ಶೆಕೆ ಪ್ರಾರಂಭವಾಗಲಿದೆ. ಈ ವ್ಯವಸ್ಥೆಯ ಸದುಪಯೋಗ ಪಡೆಯುವ ಮೂಲಕ ಇಲ್ಲಿನ ಯುವಜನರು ಹೊಸ ಉದ್ಯೋಗಾವಕಾಶಗಳನ್ನು ಪಡೆಯಲಿದ್ದಾರೆ. ಕರಾವಳಿ ಮೀನುಗಾರಿಕೆ ಮತ್ತು ಕರಾವಳಿ ಪ್ರವಾಸೋದ್ಯಮದ ಒಂದು ಹೊಸ ಅಧ್ಯಾಯ ಇದರೊಂದಿಗೆ ಪ್ರಾರಂಭವಾಗಲಿದೆ. ಭವಿಷ್ಯದಲ್ಲಿ ನಾವೆಲ್ಲರೂ ಈ ಹಡಗು ಸೇವೆಯಿಂದ.... ಇಲ್ಲಿಗೆ ಆಗಮಿಸಿರುವ ಎಲ್ಲರೂ ಗಮನವಿಟ್ಟು ಕೇಳಿ, ಭವಿಷ್ಯದಲ್ಲಿ ಈ ಹಡಗು ಸೇವೆಯಿಂದ ಹಜೀರಾ, ಪೀಪಾವಾವೋ, ಜಾಫರಾಬಾದ್, ದಮನ್ ದೀವ್ ಈ ಎಲ್ಲ ಮಹತ್ವಪೂರ್ಣ ಜಾಗಗಳನ್ನು ಈ ಹಡಗು ಸೇವೆ ಜೋಡಿಸಲಿದೆ.
ಸೂರತ್ ನಿಂದ ಮುಂದೆ ಹಾಜೀರಾವರೆಗೆ ಹಾಗೂ ಮುಂಬೈ ತನಕ ಈ ಹಡಗು ಸೇವೆಯನ್ನು ವಿಸ್ತರಿಸುವ ಸರ್ಕಾರದ ಯೋಜನೆಯಿದೆಯೆಂದು ನನಗೆ ತಿಳಿಸಲಾಯಿತು. ಕಛ್ ನ ಕರಾವಳಿಯಲ್ಲೂ ಈ ರೀತಿಯ ಯೋಜನೆಯನ್ನು ಪ್ರಾರಂಭಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಇನ್ನೂ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಪ್ರಯತ್ನಗಳಿಗೆ ನಾನು ರಾಜ್ಯ ಸರ್ಕಾರಕ್ಕೆ ಶುಭಾಶಯಗಳನ್ನು ಕೋರುತ್ತೇನೆ. ಕೇಂದ್ರ ಸರ್ಕಾರದಿಂದ ತಮಗೆ ಎಲ್ಲ ರೀತಿಯ ನೆರವು ದೊರಕುವುದೆಂಬ ಭರವಸೆಯನ್ನು ನಾನು ನೀಡುತ್ತೇನೆ.
ಸರ್ಕಾರದ ಈ ಪ್ರಯತ್ನ ದಹೇಜ್ ನಿಂದ ಹಿಡಿದು ಸಂಪೂರ್ಣ ದಕ್ಷಿಣ ಗುಜರಾತ್ ನ ಅಭಿವೃದ್ಧಿಯ ವಿಷಯದಲ್ಲಿ ಸರ್ಕಾರದ ಬದ್ಧತೆಗೆ ಒಂದು ಜೀವಂತ ಉದಾಹರಣೆಯಾಗಿದೆ. ಬರೂಚ್ ಸಹಿತ ದಕ್ಷಿಣ ಗುಜರಾತ್ ನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡಲು ದಹೇಜ್ ಮತ್ತು ಹಾಜೀರಾದಂತಹ ಕ್ಷೇತ್ರಗಳಿಗೆ ನಾವು ವಿಶೇಷ ಗಮನ ನೀಡುತ್ತಿದ್ದೇವೆ. ಪೆಟೋಲಿಯಂ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಬಂಡವಾಳ ಕ್ಷೇತ್ರದ ಸ್ಥಾಪನೆಯ ಜತೆ ಜತೆಗೆ ರೈಲ್ವೆ ಸಂಪರ್ಕ, ರಸ್ತೆ ಜೋಡಣೆಯ ಕ್ಷೇತ್ರದಲ್ಲಿ ಆಗಿರುವ ಕಾರ್ಯಗಳನ್ನು ಬಹುಶ: ಈ ಮೊದಲು ಯಾರೂ ಯೋಚಿಸಿರಲಿಕ್ಕಿಲ್ಲ.
ಹಾಜೀರಾದಲ್ಲಿ ಕೂಡಾ ಮೂಲಭೂತ ಸೌಕರ್ಯಗಳ ಜತೆಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ ಮುಂಬಯಿ – ದಿಲ್ಲಿ ಕೈಗಾರಿಕಾ ಕಾರಿಡಾರ್ ನ ಲಾಭ ಈ ಕ್ಷೇತ್ರಗಳಿಗೆ ದೊರೆಯಲಿದೆ. ಗುಜರಾತ್ ನ ಕಡಲ ಅಭಿವೃದ್ಧಿ ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ. ಈಗ ಇಲ್ಲಿ ಆರಂಭವಾಗಿರುವ ರೋ – ರೋ ಹಡಗು ಸೇವೆಯ ಯೋಜನೆ ಕೂಡ ಇನ್ನಿತರ ರಾಜ್ಯಗಳಿಗೆ ಒಂದು ಮಾದರಿ ಯೋಜನೆಯಾಗಿ ಕಾರ್ಯ ನಿರ್ವಹಿಸುತ್ತದೆ.
ನಾವು ಅನೇಕ ವರ್ಷಗಳ ಸತತ ಪ್ರಯತ್ನದ ಮೂಲಕ ಈ ರೀತಿಯ ಯೋಜನೆಗಳಿಗೆ ಒದಗಬಹುದಾದ ತೊಂದರೆಗಳನ್ನು ಅರಿತು, ಅವನ್ನು ದೂರ ಮಾಡಿದ್ದೇವೆ, ಭವಿಷ್ಯದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕಾದರೆ, ತೊಂದರೆಗಳು ಆದಷ್ಟು ಕಡಿಮೆಯಾಗಬೇಕು, ಈ ದಿಕ್ಕಿನಲ್ಲಿ ಗುಜರಾತ್ ರಾಜ್ಯ ಒಂದು ದೊಡ್ಡ ಕಾರ್ಯವನ್ನು ಮಾಡಿದೆ.
ಮಿತ್ರರೇ, ಸಾವಿರಾರು ವರ್ಷಗಳಿಂದ ಜಲಮಾರ್ಗದ ವಿಷಯದಲ್ಲಿ ಭಾರತ ಬೇರೆಲ್ಲ ದೇಶಗಳಿಗಿಂತ ಬಹಳಷ್ಟು ಮುಂದಿತ್ತು. ನಮ್ಮ ತಂತ್ರಜ್ಞಾನ ಬೇರೆಲ್ಲ ದೇಶಗಳಿಗಿಂತ ಬಹಳ ಶ್ರೇಷ್ಠವಾಗಿತ್ತು. ಆದರೆ ಗುಲಾಮಗಿರಿಯ ಕಾಲಘಟ್ಟದಲ್ಲಿ ನಾವು ನಮ್ಮ ಶ್ರೇಷ್ಠತೆಯನ್ನು ಇತಿಹಾಸದಿಂದ ಕಲಿಯುವುದನ್ನು ಕಡಿಮೆ ಮಾಡಿದೆವು ಮಾತ್ರವಲ್ಲ ಮರೆಯುತ್ತಾ ಸಾಗಿದೆವು ಎಂಬುದು ಕೂಡಾ ಅಷ್ಟೇ ಸತ್ಯ. ನೂತನ ಅನ್ವೇಷಣೆಗಳು ಕಡಿಮೆಯಾಗುವುದಷ್ಟೇ ಅಲ್ಲ ನಮ್ಮಲ್ಲಿದ ಕಾರ್ಯಕ್ಷಮತೆ ಕೂಡಾ ಇತಿಹಾಸದ ಭಾಗವಾಗಿ ಹೋಯಿತು. ಯಾವ ದೇಶದ ನೌಕಾಯಾನ ಸಾಮರ್ಥ್ಯವನ್ನು ಸಂಪೂರ್ಣ ವಿಶ್ವ ಗುರುತಿಸುತ್ತಿತ್ತೋ, ಆ ದೇಶದ ಜಲ ಸಾರಿಗೆ ಸ್ವಾತಂತ್ರ್ಯಾ ನಂತರ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಯಿತು, ಎಲ್ಲರೂ ಮರೆಯುವಂತಾಯಿತು.
ಮಿತ್ರರೇ, ಇಂದು ದೇಶದ ರಸ್ತೆ ಸಾರಿಗೆಯ ಭಾಗ ಶೇಕಡಾ 55 ರಷ್ಟಿದೆ, ಸರಕು ಸಾಗಣಿಕೆಯ ಶೇಕಡಾ 35ರಷ್ಟನ್ನು ರೈಲ್ವೆ ವಹಿಸಿಕೊಂಡಿದೆ, ಆದರೆ ಅತ್ಯಂತ ಕಡಿಮೆ ವೆಚ್ಚದ ಜಲ ಸಾರಿಗೆ ಶೇಕಡಾ 5 ಅಥವಾ 6 ರಷ್ಟಿದೆ. ಆದರೆ ಬೇರೆ ದೇಶಗಳಲ್ಲಿ ಜಲ ಮಾರ್ಗ ಅಥವಾ ಸಮುದ್ರ ಸಾರಿಗೆಯ ಭಾಗ ಸರಿ ಸುಮಾರು ಶೇಕಡಾ 30ಕ್ಕಿಂತ ಹೆಚ್ಚಿದೆ. ಇದೇ ನಮಗೆ ಸವಾಲಾಗಿದ್ದು ಇದನ್ನು ಬದಲಾಯಿಸುವ ಸಂಕಲ್ಪವನ್ನಿಟ್ಟುಕೊಂಡು ನಾವು ಮುಂದುವರಿಯಬೇಕಿದೆ.
ದೇಶದ ಅರ್ಥವ್ಯವಸ್ಥೆಯ ಶೇಕಡಾ 18ರಷ್ಟು ಹೊರೆ ಸರಕು ಸಾಗಣಿಕೆಯ ಮೇಲೆ ಅವಲಂಬಿಸಿದೆ ಎಂಬು ತಿಳಿದು ತಮಗೆ ಆಶ್ಚರ್ಯವಾಗಬಹುದು. ಅಂದರೆ ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸರಕು ಸಾಣಾಣಿಕೆಗೆ ತಗುಲುವ ವೆಚ್ಚ ಬೇರೆ ದೇಶಗಳಿಗೆ ಹೋಲಿಸಿದರೆ ಬಹಳ ಅಧಿಕವಾಗಿದೆ. ಅಧಿಕ ಸಾಗಾಣಿಕಾ ವೆಚ್ಚದ ಕಾರಣದಿಂದಾಗಿ ದೇಶದ ಬಡ ವ್ಯಕ್ತಿಗೆ ಅವಶ್ಯವಾದ ವಸ್ತುವಿನ ಬೆಲೆ ಹೆಚ್ಚಾಗುತ್ತದೆ. ಜಲಸಾರಿಗೆಗೆ ಹೆಚ್ಚಿನ ಒತ್ತನ್ನು ನೀಡಿ, ಸರಕು ಸಾಗಾಣಿಕೆಯನ್ನು ಜಲ ಮಾರ್ಗದ ಮೂಲಕ ನಿರ್ವಹಿಸಿದರೆ ವೆಚ್ಚವನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ಈ ರೀತಿ ಮಾಡಲು ನಮ್ಮ ಬಳಿ ಸಾಧನಗಳು, ಮೂಲಭೂತ ಸೌಕರ್ಯಗಳು ಮತ್ತು ಸಾಮರ್ಥ್ಯ ಎಲ್ಲವೂ ನಮ್ಮ ಬಳಿ ಇದೆ.
ಸ್ನೇಹಿತರೆ, ನಮ್ಮ ದೇಶದಲ್ಲಿ 7,500 ಕಿಲೋಮೀಟರ್ ಉದ್ದದ ಸಮುದ್ರ ತೀರ ಮತ್ತು ನದಿಗಳ ಮೂಲಕ ದೊರೆಯುವ 14,500 ಕಿಲೋ ಮೀಟರ್ ಉದ್ದದ ಆಂತರಿಕ ಜಲಮಾರ್ಗವಿದೆ. ಒಂದು ರೀತಿಯಲ್ಲಿ 21,000 ಕಿಲೋಮೀಟರ್ ಉದ್ದದ ಜಲಮಾರ್ಗವನ್ನು ನೀಡುವ ಮೂಲಕ ಭಾರತ ಮಾತೆಯ ಆಶೀರ್ವಾದ ನಮಗೆ ಈಗಾಗಲೇ ದೊರೆತಿದೆ. ವರ್ಷಗಳ ಕಾಲ ನಾವು ಈ ನಿಧಿಯನ್ನು ನಿರ್ಲಕ್ಷಿಸಿದ್ದಷ್ಟೇ ಅಲ್ಲ ಈ ನಿಧಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬ ಅರಿವೂ ಕೂಡಾ ನಮಗಿರಲಿಲ್ಲ.
ನಮ್ಮ ಮೊದಲ ಬಂದರು ನೀತಿ 1995ರಲ್ಲಿ ರಚನೆಯಾಯಿತು ಎಂದು ತಿಳಿದರೆ ತಮಗೆ ಆಶ್ಚರ್ಯವಾಗಬಹುದು. 1947ರಲ್ಲಿ ಸ್ವಾತಂತ್ರ ಬಂದರೂ ಬಂದರು ನೀತಿ ರಚನೆಯಾದದ್ದು 1995ರಲ್ಲಿ, ಎಷ್ಟು ವಿಳಂಬ ಮಾಡಲಾಯಿತು. ಈ ಮೊದಲು ಬಂದರು ಅಭಿವೃದ್ಧಿಗಾಗಿ ಯಾವುದೇ ದೂರದೃಷ್ಟಿಯನ್ನು ಇಟ್ಟುಕೊಂಡು ಕಾರ್ಯ ನಿರ್ವಹಣೆ ಆಗುತ್ತಿರಲಿಲ್ಲ. ಈ ಕಾರಣದಿಂದಾಗಿ ದೇಶ ಲಕ್ಷಾಂತರ ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಬೇಕಾಗಿತ್ತು.
ನಾನು ತಮಗೆ ಒಂದು ಉದಾಹರಣೆಯನ್ನು ನೀಡಬಯಸುತ್ತೇನೆ. ನಾವು ಕಲ್ಲಿದ್ದಲನ್ನು ಜಲ ಮಾರ್ಗದ ಮೂಲಕ ಸಾಗಿಸಬಯಸಿದರೆ, ಪ್ರತಿಟನ್, ಪ್ರತಿಕಿಲೋಮೀಟರ್ ಗೆ ತಗಲುವ ವೆಚ್ಚ 20 ಪೈಸೆ. ಆದರೇ ಇದೇ ಕಾರ್ಯವನ್ನು ನಾವು ರೈಲ್ವೆ ಮಾರ್ಗದ ಮೂಲಕ ಮಾಡಿದರೆ ತಗಲುವ ವೆಚ್ಚ 50 ರೂಪಾಯಿಗಳು. ಅಂದರೆ 20 ಪೈಸೆಯ ಬದಲಿಗೆ 50 ರೂಪಾಯಿಗಳು, ಇದೇ ಕಾರ್ಯವನ್ನು ರಸ್ತೆ ಮಾರ್ಗದ ಮೂಲಕ ಮಾಡಿದರೆ ವೆಚ್ಚ ಎಷ್ಟು ಪಟ್ಟು ಹೆಚ್ಚಾಗಬಹುದು ಎಂಬುದನ್ನು ತಾವು ಯೋಚಿಸಿ. ತಾವೇ ಹೇಳಿ, ನಾವು ಕಡಿಮೆ ವೆಚ್ಚದಲ್ಲಿ ಕಲ್ಲಿದ್ದಲನ್ನು ಸಾಗಾಟ ಮಾಡಬೇಕೋ ಬೇಡವೋ? ಇಂದೂ ಕೂಡಾ ಕಲ್ಲಿದ್ದಲಿನ ಸಾಗಾಣಿಕೆ ರೈಲ್ವೆ ಮಾರ್ಗದ ಮೂಲಕವೇ ನಡೆಯುತ್ತಿದೆ ಎಂದು ತಿಳಿದರೆ ತಮಗೆ ಆಶ್ಚರ್ಯವಾಗುತ್ತದೆ. ದಶಕಗಳಿಂದ ನಡೆದು ಬಂದಿರುವ ಈ ವ್ಯವಸ್ಥೆಯನ್ನು ಬದಲು ಮಾಡುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಸರ್ಕಾರ ಇದಕ್ಕಾಗಿ ಸತತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಮಿತ್ರರೇ, ನಾವು ಯಾವುದಾದರೂ ಹೊಸ ಮನೆಯನ್ನು ಕೊಂಡಾಗ ಆ ಮನೆಗೆ ಬೇರೆ ಬೇರೆ ಪ್ರದೇಶಗಳಿಂದ ಇರುವ ಸಂಪರ್ಕದ ಬಗ್ಗೆ ವಿಚಾರ ಮಾಡುತ್ತೇವೆ, ರಸ್ತೆ ಮಾರ್ಗವಿದೆಯೋ ಇಲ್ಲವೋ, ರೈಲ್ವೆ ಸಂಪರ್ಕವಿದೆಯೋ, ಇಲ್ಲವೋ, ಎಲ್ಲಿಯಾದರೂ ಹೋಗಬೇಕಾದರೆ ಬಸ್ ಸೌಲಭ್ಯ ದೊರಕಬಹುದೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ನಾವು ಯಾವುದಾದರೂ ಹೊಸ ವ್ಯವಹಾರವನ್ನು ಪ್ರಾರಂಭಿಸಬೇಕಾದರೆ, ಆ ಪ್ರದೇಶಕ್ಕೆ ಇರಬಹುದಾದ ಸಂಪರ್ಕ ವ್ಯವಸ್ಥೆಯ ಬಗ್ಗೆ ಪರಿಶೀಲಿಸುತ್ತೇವೆ. ಆ ಪ್ರದೇಶಕ್ಕೆ ಸಾಮಾಗ್ರಿಗಳ ಸಾಗಾಟಕ್ಕೆ ಯಾವುದೇ ತೊಂದರೆಗಳೂ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ.
ನಮ್ಮ ಸಾಮಾನ್ಯ ವಿಚಾರಧಾರೆಗಳು ಹೀಗಿದ್ದಾಗ, ನಮ್ಮ ಉದ್ದಿಮೆಗಳು ಸಮುದ್ರ ತೀರದಿಂದ ಏಕೆ ದೂರವಿರಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ಸಾಮಗ್ರಿಗಳು ಮತ್ತು ಸಿದ್ಧಗೊಂಡ ಸಾಮಗ್ರಿಗಳು ಜಲಮಾರ್ಗವನ್ನು ಅವಲಂಬಿಸಿದ್ದೇ ಆದಲ್ಲಿ, ಸಮುದ್ರ ತೀರದಲ್ಲೇ ಕೈಗಾರಿಕಾ ಬಂದರನ್ನು ಅಭಿವೃದ್ಧಿ ಪಡಿಸಬೇಕೆಂಬ ವಿಚಾರ ಉದ್ಭವಿಸುವುದು ಸಹಜವಲ್ಲವೇ. ಇದರಿಂದ ಸರಕು ಸಾಗಣಿಕೆಯ ವೆಚ್ಚ ಕಡಿಮೆಯಾಗುವುದಲ್ಲದೇ, ಸರಳ ವ್ಯಾಪಾರಕ್ಕೆ ಹೆಚ್ಚಿನ ನೆರವು ದೊರಕುವುದು. ದೇಶದಲ್ಲಿ ಅಗತ್ಯವಾಗಿರುವ ಕೈಗಾರಿಕೆಗಳನ್ನು ದೇಶಾದ್ಯಂತ ಎಲ್ಲಿಯಾದರೂ ಸ್ಥಾಪಿಸಬಹುದು. ಆದರೆ ಹೊರದೇಶಕ್ಕೆ ಸಾಗಿಸಬೇಕಾದ ಸಾಮಗ್ರಿಗಳ ಉತ್ಪಾದನಾ ಘಟಕಗಳನ್ನು ನಾವು ಸಮುದ್ರ ತೀರದಲ್ಲಿ ಸ್ಥಾಪಿಸಬಹುದಾದರೆ ಹೆಚ್ಚು ಅನುಕೂಲವಾಗುವುದಲ್ಲದೇ ಹೆಚ್ಚು ಲಾಭದಾಯಕವೂ ಕೂಡಾ ಆಗುವುದು.
ಸ್ನೇಹಿತರೇ, ಸಾಗಾಣಿಕ ವಲಯಗಳಲ್ಲಿ ಒಂದು ಮಾತಿದೆ, ನಾಳೆ ಬರಬಹುದಾದ ತೊಂದರೆಗಳನ್ನು ತಾವು ಇಂದು ಬಗೆಹರಿಸಿಕೊಳ್ಳುತ್ತಿದ್ದೀರೆಂದರೆ ತಾವು ಈಗಾಗಲೇ ಬಹಳಷ್ಟು ವಿಳಂಬ ಮಾಡಿದ್ದೀರಿ. ತಮ್ಮ ಸುತ್ತಮುತ್ತಲ ರಸ್ತೆಯಲ್ಲಿ ದಿನ ನಿತ್ಯ ಸಂಚಾರ ದಟ್ಟಣೆ ಆಗುತ್ತಿದ್ದು, ಅಲ್ಲಿ ಯಾರಾದರೂ ಮೇಲ್ಸೆತುವೆ ನಿರ್ಮಿಸಬೇಕೆಂದು ನಿರ್ಣಯಿಸಿದರೆ, ಆ ಮೇಲ್ಸೆತುವೆ ನಿರ್ಮಾಣವಾದ ನಂತರ ಆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚಿ ಮೇಲ್ಸೆತುವೆ ಮೇಲೆ ಕೂಡಾ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಇದೇ ರೀತಿ ಆಗುತ್ತಿದೆ. ಆದುದರಿಂದ ಸಾರಿಗೆ ವಲಯದಲ್ಲಿ ಕೂಡಾ ಸರ್ಕಾರ ಅವಶ್ಯಕತೆಗೆ ಅನುಗುಣವಾಗಿ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಮಂತ್ರ ಪಿ ಫಾರ್ ಪಿ. - ಪೋರ್ಟ್ಸ್ ಫಾರ್ ಪ್ರಾಸ್ಪೆರಿಟಿ - ಬಂದರು ಸಮೃದ್ಧಿಯ ಪ್ರವೇಶ ದ್ವಾರ. ಸಾಗರಮಾಲದಂತಹ ಯೋಜನೆ ಈ ದೃಷ್ಟಿಕೋನದ ಒಂದು ಸಂಕೇತ. ಈ ಯೋಜನೆಯನ್ನು 2020 – 2035 ರ ತನಕದ ಅವಶ್ಯಕತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಇದರ ಅನ್ವಯ ಸರ್ಕಾರ ಇಂದಿನಿಂದ 2035ನ್ನು ದೃಷ್ಟಿಯಲ್ಲಿಟ್ಟುಕೊಂಡು 400 ಕ್ಕೂ ಅಧಿಕ ಯೋಜನೆಗಳಿಗೆ ಬಹಳಷ್ಟು ಬಂಡವಾಳ ಹೂಡುತ್ತಿದೆ.
ಈ ಬೇರೆ ಬೇರೆ ಯೋಜನೆಗಳಿಗೆ ಸುಮಾರು 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಗರಮಾಲಾ ಯೋಜನೆ ನಿಶ್ಚಿತವಾಗಿಯೂ ನವ ಭಾರತದ ಹೆಗ್ಗುರುತಾಗಲಿದೆ.
ಮಿತ್ರರೇ, ಸಮುದ್ರದ ಮೂಲಕ ಬೇರೆ ದೇಶಗಳೊಂದಿಗೆ ಸಂಬಂಧ ಸ್ಥಾಪಿಸಲು ನಮಗೆ ಅತ್ಯಾಧುನಿಕ ಬಂದರುಗಳ ಅವಶ್ಯಕತೆ ಇದೆ. ನಮ್ಮ ಆರ್ಥಿಕತೆಗೆ ಬಂದರುಗಳು ಶ್ವಾಸಕೋಶಗಳಿದ್ದಂತೆ. ಬಂದರುಗಳು ರೋಗಗ್ರಸ್ತವಾದರೆ, ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಲು ವಿಫಲವಾದರೆ, ನಾವು ಅಧಿಕ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ದೇಹದಲ್ಲಿ ಶ್ವಾಸಕೋಶದ ಮೂಲಕ ಆಮ್ಲಜನಕವು ಹೃದಯದಿಂದ ಪಂಪ್ ಆಗಿ ನರಗಳ ಮೂಲಕ ದೇಹದ ಬೇರೆ ಬೇರೆ ಸ್ಥಾನಗಳಿಗೆ ತಲುಪುತ್ತದೆ, ಅದೇ ರೀತಿ ಆರ್ಥಿಕತೆಯಲ್ಲಿ ಈ ಪಾತ್ರ ರೈಲು ಮಾರ್ಗ, ರಸ್ತೆಮಾರ್ಗ, ವಾಯು ಮಾರ್ಗ ಮತ್ತು ಜಲಮಾರ್ಗದ ಮೂಲಕ ನಡೆಯುತ್ತದೆ. ಅಕಸ್ಮಾತ್ ನರಗಳಲ್ಲಿ ರಕ್ತದ ಪೂರೈಕೆ ಕಡಿಮೆ ಆದರೆ, ಆಮ್ಲಜನಕದ ಕೊರತೆಯಾದರೆ, ದೇಹ ದುರ್ಬಲವಾಗುತ್ತದೆ. ಅದೇ ರೀತಿ ಸಂಪರ್ಕ ಸರಿ ಇಲ್ಲದಿದ್ದರೆ, ದೇಶದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆ. ಆದುದರಿಂದ ಮೂಲಭೂತ ಸೌಕರ್ಯ ಮತ್ತು ಸಂಪರ್ಕ ಈ ಎರಡೂ ಕ್ಷೇತ್ರಗಳ ಬಗ್ಗೆ ಸರ್ಕಾರ ಅಧಿಕ ಒತ್ತು ನೀಡುತ್ತಿದೆ.
ಮಿತ್ರರೇ, ಸರ್ಕಾರದ ಸತತ ಪ್ರಯತ್ನದ ಫಲವಾಗಿ ಕಳೆದ ಮೂರು ವರ್ಷಗಳಲ್ಲಿ ದೇಶದ ಬಂದರು ವಲಯದಲ್ಲಿ ಒಂದು ದೊಡ್ಡ ಪರಿವರ್ತನೆ ಕಂಡು ಬಂದಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ಈ ವಲಯದಲ್ಲಿ ಸಾಮರ್ಥ್ಯ ಹೆಚ್ಚಳವಾಗಿದೆ. ನಷ್ಟದಲ್ಲಿ ನಡೆಯುತ್ತಿದ್ದ ಬಂದರುಗಳು ಮತ್ತು ಸರ್ಕಾರಿ ಕಂಪನಿಗಳ ಪರಿಸ್ಥಿತಿ ಬದಲಾಗಿದೆ. ಸರ್ಕಾರದ ಗಮನ ಬಂದರು ಸೇವೆಗೆ ಹೊಂದಿಕೊಂಡಂತಿರುವ ಕೌಶಲ್ಯಾಭಿವೃದ್ಧಿಯ ಕಡೆಗೂ ಇದೆ.
ಒಂದು ಅಂದಾಜಿನ ಪ್ರಕಾರ ಮುಂಬರುವ ದಿನಗಳಲ್ಲಿ ದೇಶದ ವಿಭಿನ್ನ ಭಾಗಗಳಲ್ಲಿ ಕೇವಲ ಸಾಗರಮಾಲ ಯೋಜನೆಯಿಂದ ಒಂದು ಕೋಟಿ ಉದ್ಯೋಗದ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಸಾಗಣಿಕೆಯು ಸಂಪೂರ್ಣ ಆಧುನಿಕ ಹಾಗೂ ಸಂಯೋಜಿತವಾಗಿರುವಂತೆ ಸರ್ಕಾರ ಒಂದು ನೀತಿಯನ್ನು ರೂಪಿಸುತ್ತಿದೆ.
ಇಂದು ಅನೇಕ ಕಡೆ ತಾವು ಸಂಚಾರ ದಟ್ಟಣೆಯನ್ನು ಗಮನಿಸಿರುತ್ತೀರಿ. ಅದೇ ರೀತಿ ನಮ್ಮ ಬಂದರುಗಳಲ್ಲೂ ಕೂಡಾ ದಟ್ಟಣೆ ಉಂಟಾಗುತ್ತದೆ. ಬಂದರುಗಳಲ್ಲಿ ಉಂಟಾಗುವ ದಟ್ಟಣೆಯಿಂದ ಸಾಗಾಣಿಕಾ ವೆಚ್ಚ ಹೆಚ್ಚಾಗುತ್ತದೆ, ಕಾಯುವಿಕೆಯ ಸಮಯ ಅಧಿಕವಾಗಿರುತ್ತದೆ. ಹೇಗೆ ನಾವು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಕಾಯುತ್ತಿರುತ್ತೇವೆಯೋ, ಯಾವುದೇ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲವೋ, ಅದೇ ರೀತಿ ಸಮುದ್ರದಲ್ಲಿ ಹಡಗುಗಳೂ ಕೂಡಾ ಸರಕು ಇಳಿಸುವ ಮತ್ತು ಸಾಮಾನು ತುಂಬುವ ನಿರೀಕ್ಷೆಯಲ್ಲಿ ನಿಂತಿರುತ್ತವೆ. ಕೇವಲ ಹಡಗುಗಳು ಮಾತ್ರ ನಿಂತಿರುವುದಿಲ್ಲ, ಸಂಪೂರ್ಣ ಅರ್ಥವ್ಯವಸ್ಥೆ ಸ್ಥಬ್ಧವಾಗಿರುತ್ತದೆ. ಆದುದರಿಂದ ಬಂದರುಗಳ ಆಧುನೀಕರಣ ಅತ್ಯಂತ ಅವಶ್ಯಕವಾಗಿದ್ದು, ಅಡಚಣೆಗಳನ್ನು ದೂರ ಮಾಡಬೇಕಿದೆ.
ಸಾಗರಮಾಲಾ ಯೋಜನೆಯ ಮತ್ತೊಂದು ಹಂತವೆಂದರೆ ನೀಲಿ ಆರ್ಥಿಕತೆ. ಈ ಮೊದಲು ಜನರು ಕೇವಲ ಸಾಗರ ಆರ್ಥಿಕತೆಯ ಬಗ್ಗೆ ಮಾತ್ರ ತಿಳಿದುಕೊಂಡಿದ್ದರು. ಆದರೆ ನಾವೀಗ ನೀಲಿ ಆರ್ಥಿಕತೆಯ ಬಗ್ಗೆ ಮಾತನಾಡುತ್ತೇವೆ. ನೀಲಿ ಆರ್ಥಿಕತೆ ಎಂದರೆ ಆರ್ಥಿಕತೆ ಮತ್ತು ಪರಿಸರ ವಿಜ್ಞಾನದ ಮೈತ್ರಿ. ನೀಲಿ ಆರ್ಥಿಕತೆಯು, ಆರ್ಥಿಕತೆಯ ಜತೆ ಜತೆಗೆ ಸಮುದ್ರದೊಂದಿಗೆ ಸೇರಿಕೊಂಡಿರುವ ಪರಿಸರ ವ್ಯವಸ್ಥೆಗೂ ಬಲ ನೀಡಲಿದೆ.
18 ಮತ್ತು 19 ನೇ ಶತಮಾನದ ಕೈಗಾರಿಕಾ ಕ್ರಾಂತಿ ನೆಲದ ಮೇಲೆ ಆಗಿದ್ದರೆ 21 ನೇ ಶತಮಾನದ ಕೈಗಾರಿಕಾ ಕ್ರಾಂತಿ ಸಮುದ್ರದ ಮೂಲಕ ಆಗಲಿದೆ, ನೀಲಿ ಆರ್ಥಿಕತೆಯ ಮೂಲಕ ಉಂಟಾಗಲಿದೆ.
ಮಿತ್ರರೆ, ನಮ್ಮ ಇಂದಿನ ಅವಶ್ಯಕತೆ ಮತ್ತು ಸವಾಲುಗಳನ್ನು ಗಮನಿಸಿದಾಗ ನಮಗೆ ಸಮುದ್ರ ಶಕ್ತಿಯ ಉಪಯೋಗ ಹೆಚ್ಚು ಹೆಚ್ಚು ಪಡೆದುಕೊಳ್ಳುವುದು ಅವಶ್ಯಕವೆಂದು ಅನಿಸುತ್ತದೆ. ನೀಲಿ ಆರ್ಥಿಕತೆಯ ಸಾಮರ್ಥ್ಯ ಹೆಚ್ಚು ಉಪಯೋಗ ನವ ಭಾರತ ನಿರ್ಮಾಣಕ್ಕೆ ನೆರವಾಗಬಲ್ಲದು.
ಆಹಾರ ಸುರಕ್ಷತೆಗೆ ನೀಲಿ ಆರ್ಥಿಕತೆಯ ಉಪಯೋಗ ಪಡೆದುಕೊಳ್ಳಬಹುದು. ನಮ್ಮ ಮೀನುಗಾರ ಸಹೋದರರು ಸಮುದ್ರ ಮಣಿಯ ವ್ಯವಸಾಯ ಮಾಡಿ, ಅದರಲ್ಲಿ ಮೌಲ್ಯವರ್ಧಿತ ಸೇವೆಯನ್ನು ನೀಡುವಂತಾದರೆ ಅವರ ಆದಾಯ ಕೂಡಾ ಹೆಚ್ಚಾಗಬಲ್ಲದು. ಇದೇ ರೀತಿ ನೀಲಿ ಆರ್ಥಿಕತೆ, ಇಂಧನ ಕ್ಷೇತ್ರದಲ್ಲಿ, ಗಣಿ ಕ್ಷೇತ್ರದಲ್ಲಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೂಡಾ ನವಭಾರತಕ್ಕೆ ಒಂದು ದೊಡ್ಡ ಆಧಾರವಾಗಬಲ್ಲದು.
ಸ್ನೇಹಿತರೇ, ಈ ಸರ್ಕಾರ ದೇಶದಲ್ಲಿ ಒಂದು ನೂತನ ಕಾರ್ಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುತ್ತಿದೆ. ಜವಾಬ್ಧಾರಿಯುತ ಮತ್ತು ಉತ್ತರದಾಯಿ ಪಾರದರ್ಶಿ ಕಾರ್ಯ ಸಂಸ್ಕೃತಿಯ ಅಭಿವೃದ್ಧಿ. ಇಂದು ಇದೇ ರೀತಿಯ ಕಾರ್ಯ ವಿಧಾನದಿಂದ ವಿವಿಧ ಯೋಜನೆಗಳಲ್ಲಿ ವೇಗವಾಗಿ ಕಾರ್ಯ ನಡೆಯುತ್ತಿದೆ. ದೇಶದಲ್ಲಿ ಇಂದು ದ್ವಿಗುಣ ವೇಗದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ದ್ವಿಗುಣ ವೇಗದಲ್ಲಿ ರೈಲ್ವೆ ಹಳಿ ಜೋಡಣಾ ಕಾರ್ಯ ನಡೆಯುತ್ತಿದೆ.
ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿಗಾ ವಹಿಸಲು ದ್ರೋಣ್ ನಿಂದ ಹಿಡಿದು ಉಪಗ್ರಹದ ಮೂಲಕ ಉಸ್ತುವಾರಿ ವಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಮಗೆ ಪಾಸ್ ಪೋರ್ಟ್ ಬೇಗನೆ ದೊರೆಯುವಂತಾಗಲೂ ಏನಾದರೂ ಕಾರಣವಿರಬೇಕು. ತಮಗೆ ಅಡುಗೆ ಅನಿಲ ಸಂಪರ್ಕ ಬೇಗನೆ ದೊರೆಯುವಂತಾಗಲೂ ಯಾವುದಾದರೂ ಕಾರಣವಿರಬೇಕು. ಆದಾಯ ತೆರಿಗೆ ಮರುಪಾವತಿಗಾಗಿ ತಾವು ತಿಂಗಳುಗಟ್ಟಲೆ ಕಾಯದಂತಿರಲು ಯಾವುದಾದರೂ ಸಕಾರಣವಿರಬೇಕು, ಈ ಬದಲಾವಣೆಗಳು ತಮ್ಮ ಜೀವನದಲ್ಲಿ ಕಂಡುಬರುತ್ತಿದ್ದು, ಸರ್ಕಾರದ ಕಾರ್ಯ ವಿಧಾನದಲ್ಲಿ ಮಾಡಲಾಗಿರುವ ಬದಲಾವಣೆಗಳೇ ಇದಕ್ಕೆ ಕಾರಣವಾಗಿದೆ. ಈ ಕಾರ್ಯ ವಿಧಾನದಿಂದ ದೇಶದ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ತಂತ್ರಜ್ಞಾನದ ಸಹಕಾರದಿಂದ ಅವರ ಹಕ್ಕನ್ನು ಅವರಿಗೆ ನೀಡಲಾಗುತ್ತಿದೆ.
ಗುಜರಾತಿನಲ್ಲಿ ತಾವು ನನಗೆ ಕಲಿಸಿಕೊಟ್ಟ ವಿಷಯಗಳು ಅನುಭವ ನನಗೆ ದಿಲ್ಲಿಯಲ್ಲಿ ಕೆಲಸಕ್ಕೆ ಬರುತ್ತಿದೆ. ಹುಡುಕಿ ಹುಡುಕಿ ದಾಖಲೆಗಳನ್ನು ತೆಗೆಸುತ್ತಿದ್ದು, ದಶಕಗಳ ಕಾಲ ತೂಗುಯ್ಯಾಲೆಯಲ್ಲಿದ್ದ ಯೋಜನೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ನಾವೊಂದು “ಪ್ರಗತಿ” ಹೆಸರಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಇದರ ಮೂಲಕ ಇಲ್ಲಿಯವರೆಗೆ 9 laಲಕ್ಷ ಕೋಟಿ ರೂಪಾಯಿಗೂ ಅಧಿಕ ಯೋಜನೆಗಳ ಸಮೀಕ್ಷೆಯನ್ನು ಮಾಡಲಾಗಿದೆ. ಪ್ರಗತಿಯಲ್ಲಿ ಸಮೀಕ್ಷೆ ನಡೆಸಿದ ನಂತರ ನಾಲ್ಕು ನಾಲ್ಕು ದಶಕಗಳ ಕಾಲ ಸ್ಥಗಿತಗೊಂಡಿದ್ದ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದುವರೆದಿದ್ದೇವೆ.
ಈ ಸರ್ಕಾರ ದೇಶದಲ್ಲಿ ಪ್ರಾಮಾಣಿಕ ಅರ್ಥವ್ಯವಸ್ಥೆ ಮತ್ತು ಪ್ರಾಮಾಣಿಕ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಶೀಲವಾಗಿದೆ. ನೋಟು ಅಮಾನ್ಯೀಕರಣ ಕೇವಲ ಕಪ್ಪುಹಣವನ್ನು ತಿಜೋರಿಯಿಂದ ಹೊರತೆಗೆದು ಬ್ಯಾಂಕ್ ಗಳಿಗೆ ತಲುಪಿಸುವುದಷ್ಟೇ ಅಲ್ಲ ದೇಶಾದ್ಯಂತ ಒಂದು ರೀತಿಯ ಸ್ವಚ್ಚತಾ ಅಭಿಯಾನ ಪ್ರಾರಂಭವಾಗುವುದಕ್ಕೆ ಸಹಕಾರಿಯಾಗಿದೆ.
ಇದೇ ರೀತಿ ಜಿ ಎಸ್ ಟಿ ಮೂಲಕ ದೇಶಕ್ಕೆ ಒಂದು ಹೊಸ ವ್ಯಾಪಾರ ಸಂಸ್ಕೃತಿ ದೊರೆಯುತ್ತಿದೆ. ಈ ಮೊದಲು ಲಾರಿ, ಟ್ರಕ್ ಚಾಲಕರು ತಮ್ಮ ವಾಹನಗಳನ್ನು ಚೆಕ್ ಪೋಸ್ಟ್ ಗಳಲ್ಲಿ ಗಂಟೆಗಟ್ಟಲೆ ನಿಲ್ಲಿಸಬೇಕಾಗಿತ್ತು. ಜಿ ಎಸ್ ಟಿ ಬಂದ ಬಳಿಗೆ ಎಲ್ಲ ಚೆಕ್ ಪೋಸ್ಟ್ ಗಳು ಕಡಿಮೆಯಾದವು. ಯಾವ ಸರಕು ವಾಹನ ತನ್ನ ಗಮ್ಯವನ್ನು ತಲುಪಲು ಐದು ದಿನಗಳನ್ನು ತೆಗೆದುಕೊಳ್ಳುತ್ತಿತ್ತೋ ಆ ಸಮಯ ಈಗ ಮೂರು ದಿನಕ್ಕೆ ತಲುಪಿದೆ. ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಬರಲು, ತೆಗೆದುಕೊಂಡು ಹೋಗಲು ತಗಲುತ್ತಿದ್ದ ವೆಚ್ಚ ಕಡಿಮೆಯಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಆಗುತ್ತಿದ್ದ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಜಿ ಎಸ್ ಟಿ ಬಂದ ಬಳಿಕ ನಿಂತಿದೆ. ಗುತ್ತಿಗೆ ವ್ಯವಹಾರಗಳಿಂದ ಹಣ ನುಂಗುತ್ತಿದ್ದ ವ್ಯಕ್ತಿಗಳು ಮೋದಿಯ ಮೇಲೆ ಕೋಪಗೊಂಡಿರುತ್ತಾರೋ ಇಲ್ಲವೋ ನೀವೇ ಹೇಳಿ? ಅವರಿಗೆ ಮೋದಿಯ ಮೇಲೆ ಕೋಪ ಬರುತ್ತದೋ, ಇಲ್ಲವೋ? ಆದರೆ ದೇಶದ ನಾಗರಿಕರಿಗೆ ಒಳಿತಾಗಬೇಕೋ, ಬೇಡವೋ? ದೇಶದ ನಾಗರಿಕರಿಗೆ ಲಾಭವಾಗಬೇಕೋ, ಬೇಡವೋ?
ಪ್ರಾಮಾಣಿಕತೆಯಿಂದ ಎಲ್ಲ ವ್ಯವಹಾರಗಳನ್ನು ನಡೆಸುವ, ಪ್ರಾಮಾಣಿಕತೆಯಿಂದ ಹಣ ಗಳಿಸುವ ಒಂದು ರೀತಿಯ ವ್ಯಾಪಾರಿ ಸಂಸ್ಕೃತಿ ಬೆಳೆಯಬೇಕಿದೆ. ನನ್ನ ಅನುಭವದ ಪ್ರಕಾರ ಯಾವುದೇ ವ್ಯಾಪಾರಿ ಕಳ್ಳತನ ಮಾಡಲು ಬಯಸುವುದಿಲ್ಲ. ಆದರೆ ಕೆಲವು ಕಾನೂನುಗಳು, ಕೆಲವು ಅಧಿಕಾರಿಗಳು, ಕೆಲವು ರಾಜಕೀಯ ನಾಯಕರು ವ್ಯಾಪಾರಿಗಳಿಗೆ ಆ ರೀತಿ ಮಾಡುವುದನ್ನು ಅನಿವಾರ್ಯವಾಗುವಂತೆ ಮಾಡುತ್ತಾರೆ. ನಾವು ಅವರಿಗೆ ಈ ಪ್ರಾಮಾಣಿಕತೆಯ ವಾತಾವರಣವನ್ನು ನಿರ್ಮಾಣ ಮಾಡುವ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ.
ಜಿ ಎಸ್ ಟಿ ಯೊಂದಿಗೆ ಸೇರಿಕೊಳ್ಳುತ್ತಿರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತಾವು ಗಮನಿಸಿ. ಜಿ ಎಸ್ ಟಿ ಅನುಷ್ಠಾನದ ನಂತರ ಪರೋಕ್ಷ ತೆರಿಗೆ ವ್ಯಾಪ್ತಿಗೆ 27 ಲಕ್ಷ ನಾಗರಿಕರು ಸೇರ್ಪಡೆಗೊಂಡಿದ್ದಾರೆ.
ಮಿತ್ರರೇ, ಮುಖ್ಯಧಾರೆಯಲ್ಲಿ ಸೇರಿಕೊಳ್ಳುತ್ತಿರುವ ವ್ಯಾಪಾರಿಗಳಲ್ಲಿ ಎಲ್ಲಿ ತಮ್ಮ ಹಳೆಯ ದಾಖಲೆಗಳನ್ನು ಪರಿಶೀಲಿಸುತ್ತಾರೋ ಎಂಬ ಭಯವಿದೆಯೆಂದು ನಾನು ಬಲ್ಲೆ. ಯಾರು ಪ್ರಾಮಾಣಿಕವಾಗಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬಯಸುತ್ತಾರೋ, ಮುಖ್ಯವಾಹಿನಿಯಲ್ಲಿ ಭಾಗವಹಿಸುವರೋ ಅಂತಹವರ ಯಾವುದೇ ಹಳೆಯ ದಾಖಲಾತಿಗಳನ್ನು ಯಾವುದೇ ಅಧಿಕಾರಿ ಪರಿಶೀಲಿಸುವಂತಹ ಕಾರ್ಯಕ್ಕೆ ನಾವು ಅವಕಾಶ ನೀಡುವುದಿಲ್ಲವೆಂಬ ಭರವಸೆಯನ್ನು ನಾನು ನೀಡುತ್ತೇನೆ.
ಸಹೋದರ, ಸಹೋದರಿಯರೇ, ಅನೇಕ ಸುಧಾರಣೆಗಳು ಮತ್ತು ಕಠಿಣ ನಿರ್ಧಾರಗಳ ಹೊರತಾಗಿಯೂ ದೇಶದ ಅರ್ಥವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಹೊರಬಂದ ಅಂಕಿಅಂಶಗಳ ಪ್ರಕಾರ ಕಲ್ಲಿದ್ದಲು, ವಿದ್ಯುತ್, ಉಕ್ಕು, ನೈಸರ್ಗಿಕ ಅನಿಲ ಇವೆಲ್ಲವುಗಳ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಭಾರತದ ವಿದೇಶಿ ವಿನಿಮಯ 30 ಸಾವಿರ ಕೋಟಿ ಡಾಲರ್ ನಿಂದ 40 ಸಾವಿರ ಕೋಟಿ ಡಾಲರ್ ಗೆ ಹೆಚ್ಚಾಗಿದೆ.
ದೇಶದ ಅರ್ಥವ್ಯವಸ್ಥೆಯ ಮೂಲ ಬಹಳ ಬಲಿಷ್ಟವಾಗಿದೆ ಎಂದು ಅನೇಕರು ಸಹಮತ ವ್ಯಕ್ತಪಡಿಸಿದ್ದಾರೆ. ನಾವು ಧಾರಣಾ ಕ್ಷೇತ್ರದಲ್ಲಿ ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ದೇಶದ ಅಂತಿಮ ಸಮರ್ಥನೀಯತೆಯನ್ನೂ ಕೂಡಾ ಪಾಲಿಸಿಕೊಂಡು ಬರಲಾಗುವುದು. ಬಂಡವಾಳ ಹೂಡಿಕೆ ಹೆಚ್ಚಿಸಲು ಮತ್ತು ಆರ್ಥಿಕ ಅಭಿವೃದ್ಧಿಗೆ ವೇಗ ನೀಡಲು ನಾವು ಅವಶ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ.
ಸ್ನೇಹಿತರೆ, ಇದು ಬದಲಾವಣೆಯ ಕಾಲ. ಸಂಕಲ್ಪದಿಂದ ಸಿದ್ಧಿಯನ್ನು ಪಡೆಯುವ ಕಾಲ. ನಾವೆಲ್ಲರೂ ನವಭಾರತ ಕಟ್ಟುವ ಸಂಕಲ್ಪವನ್ನು ಸ್ವೀಕರಿಸಬೇಕಾಗಿದೆ, ಅದನ್ನು ಸಿದ್ಧಿಸಬೇಕಾಗಿದೆ. ಇಂದು ಇಲ್ಲ ದಹೇಜ್ – ಘೋಘಾ ಸಮುದ್ರಯಾನ ಸೇವೆಯ ಮೂಲಕ ನವಭಾರತದ ಒಂದು ಹೊಸ ಅಧ್ಯಾಯ ಪ್ರಾರಂಭವಾಗಿದೆ.
ನಾನು ತಮ್ಮೆಲ್ಲರಿಗೂ ಮತ್ತೊಮ್ಮೆ ಶುಭಾಶಯಗಳನ್ನು ಕೋರುತ್ತಾ ಈ ನೂತನ ಸೇವೆಯ ಉಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕೆಂದು ಆಹ್ವಾನಿಸುತ್ತೇನೆ.
ಭಾರತ್ ಮಾತಾ ಕಿ ಜಯ್
ಭಾರತ್ ಮಾತಾ ಕಿ ಜಯ್
ಭಾರತ್ ಮಾತಾ ಕಿ ಜಯ್
ಎಲ್ಲರಿಗೂ ಧನ್ಯವಾದಗಳು.