ಗೌರವಾನ್ವಿತ, ಡೆನ್ಮಾರ್ಕಿನ ಪ್ರಧಾನ ಮಂತ್ರಿ ಅವರೇ, ನಿಯೋಗದ ಸದಸ್ಯರೇ, ಮಾಧ್ಯಮದ ಸ್ನೇಹಿತರೇ, ಶುಭ ಸಂಜೆ ಮತ್ತು ನಮಸ್ಕಾರ,
ಗೌರವಾನ್ವಿತ ಪ್ರಧಾನ ಮಂತ್ರಿ ಅವರೇ ಅದ್ಭುತ ಸ್ವಾಗತ ನೀಡಿದುದಕ್ಕಾಗಿ ಮತ್ತು ನನಗೆ ಹಾಗು ನನ್ನ ನಿಯೋಗಕ್ಕೆ ಡೆನ್ಮಾರ್ಕಿನಲ್ಲಿ ಆತಿಥ್ಯ ಒದಗಿಸಿದುದಕ್ಕಾಗಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ನಿಮ್ಮ ಸುಂದರ ದೇಶಕ್ಕೆ ಇದು ನನ್ನ ಮೊದಲ ಭೇಟಿ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನನಗೆ ನಿಮ್ಮನ್ನು ಭಾರತದಲ್ಲಿ ಸ್ವಾಗತಿಸುವ ಅವಕಾಶ ದೊರಕಿತ್ತು. ಈ ಎರಡು ಭೇಟಿಗಳ ಮೂಲಕ ನಮಗೆ ನಮ್ಮ ಬಾಂಧವ್ಯಗಳಲ್ಲಿ ನಿಕಟತೆ ಮತ್ತು ಚಲನಶೀಲತೆಯನ್ನು ತರಲು ಸಾಧ್ಯವಾಗಿದೆ. ನಮ್ಮೆರಡು ದೇಶಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ಮಾತ್ರವೇ ಹಂಚಿಕೊಳ್ಳುತ್ತಿರುವುದಲ್ಲ ಕಾನೂನಿನ ಆಡಳಿತದ ಜೊತೆ ಉಭಯ ಕಡೆಗಳಲ್ಲು ಪರಸ್ಪರ ಪೂರಕವಾದಂತಹ ಶಕ್ತಿಗಳಿವೆ.
ಸ್ನೇಹಿತರೇ,
2020 ರ ಅಕ್ಟೋಬರ್ ತಿಂಗಳಲ್ಲಿ ನಡೆದ ಭಾರತ-ಡೆನ್ಮಾರ್ಕ್ ವರ್ಚುವಲ್ ಶೃಂಗದಲ್ಲಿ ನಾವು ನಮ್ಮ ಬಾಂಧವ್ಯಗಳಿಗೆ ಹಸಿರು ವ್ಯೂಹಾತ್ಮಕ ಸಹಭಾಗಿತ್ವದ ಸ್ಥಾನಮಾನ ನೀಡಿದೆವು. ಇಂದು ನಮ್ಮ ಸಮಾಲೋಚನೆಗಳಲ್ಲಿ ನಮ್ಮ ಹಸಿರು ವ್ಯೂಹಾತ್ಮಕ ಸಹಭಾಗಿತ್ವಕ್ಕೆ ಸಂಬಂಧಿಸಿ ಜಂಟಿ ಕಾರ್ಯ ಯೋಜನೆಯನ್ನು ಪರಾಮರ್ಶಿಸಿದೆವು.
ವಿವಿಧ ವಲಯಗಳಲ್ಲಿ , ಅದರಲ್ಲೂ ವಿಶೇಷವಾಗಿ ಮರುನವೀಕೃತ ಇಂಧನ, ಆರೋಗ್ಯ, ಬಂದರುಗಳು, ಶಿಪ್ಪಿಂಗ್, ವೃತ್ತಾಕಾರದ ಆರ್ಥಿಕತೆ ಮತ್ತು ಜಲ ನಿರ್ವಹಣೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹವಾದಂತಹ ಪ್ರಗತಿ ಆಗಿರುವುದು ನನಗೆ ಸಂತೋಷದಾಯಕ ಸಂಗತಿಯಾಗಿದೆ. ಭಾರತದಲ್ಲಿ ಇನ್ನೂರಕ್ಕೂ ಅಧಿಕ ಡ್ಯಾನಿಶ್ ಕಂಪೆನಿಗಳು ಪವನ ವಿದ್ಯುತ್, ಶಿಪ್ಪಿಂಗ್, ಸಲಹಾ ಸಂಸ್ಥೆಗಳಾಗಿ, ಆಹಾರ ಸಂಸ್ಕರಣೆ, ಇಂಜಿನಿಯರಿಂಗ್ ಸಹಿತ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಾಚರಿಸುತ್ತಿವೆ. ಭಾರತದಲ್ಲಿ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವಿದೆ ಮತ್ತು ನಮ್ಮ ಬೃಹತ್ ಆರ್ಥಿಕತೆ ಸುಧಾರಣೆಗಳ ಫಲವಾಗಿ
ಹೆಚ್ಚುತ್ತಿರುವುದರ ಪ್ರಯೋಜನಗಳನ್ನು ಪಡೆಯಬಹುದಾದಂತಹ ಇತರ ಅನೇಕ ಕ್ಷೇತ್ರಗಳಿವೆ. ಡ್ಯಾನಿಶ್ ಕಂಪೆನಿಗಳಿಗೆ ಹೂಡಿಕೆಗೆ ವಿಪುಲ ಅವಕಾಶಗಳಿವೆ ಮತ್ತು ಭಾರತದ ಮೂಲಸೌಕರ್ಯ ವಲಯದಲ್ಲಿ ಹಾಗು ಹಸಿರು ಉದ್ಯಮಗಳಲ್ಲಿ ಡ್ಯಾನಿಶ್ ಪೆನ್ಶನ್ ಫಂಡ್ ಗಳಿಗೆ ಅವಕಾಶಗಳಿವೆ.
ಇಂದು, ನಾವು ಭಾರತ-ಇ.ಯು. ಸಂಬಂಧಗಳು, ಭಾರತ –ಫೆಸಿಫಿಕ್ ಮತ್ತು ಉಕ್ರೇನ್ ಸಹಿತ ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನು ಚರ್ಚಿಸಿದೆವು. ಭಾರತ-ಇ.ಯು. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು ಸಾಧ್ಯವಾದಷ್ಟು ಬೇಗ ಪೂರ್ಣಗೊಳ್ಳುತ್ತವೆ ಎಂಬ ಆಶಯ ನಮ್ಮದಾಗಿದೆ. ನಾವು ಮುಕ್ತ, ಒಳಗೊಳ್ಳುವ ಮತ್ತು ನಿಯಮಾಧಾರಿತ ಭಾರತ-ಫೆಸಿಫಿಕ್ ವಲಯವನ್ನು ಖಾತ್ರಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದೇವೆ. ಉಕ್ರೇನಿನಲ್ಲಿ ತಕ್ಷಣವೇ ಕದನ ವಿರಾಮಕ್ಕೆ ಆಗ್ರಹಿಸಿದ್ದೇವೆ ಮತ್ತು ಮಾತುಕತೆಗೆ ಮುಂದಾಗುವಂತೆ ಒತ್ತಾಯ ಮಾಡಿದ್ದೇವೆ. ಸಮಸ್ಯೆಯನ್ನು ಪರಿಹರಿಸಲು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆಯೂ ಒತ್ತಾಯಿಸಿದ್ದೇವೆ. ವಾತಾವರಣ ಕ್ಷೇತ್ರಕ್ಕೆ ಸಂಬಂಧಿಸಿ ನಮ್ಮ ಸಹಕಾರದ ಬಗ್ಗೆ ಚರ್ಚಿಸಿದ್ದೇವೆ. ಭಾರತವು ಗ್ಲಾಸ್ಗೋ ಸಿ.ಒ.ಪಿ.-26 ರಲ್ಲಿ ಕೈಗೊಂಡ ತೀರ್ಮಾನಗಳನ್ನು ಈಡೇರಿಸುವಲ್ಲಿ ಬದ್ಧವಾಗಿದೆ. ಉತ್ತರ ಧ್ರುವ ವಲಯದಲ್ಲಿ ಸಹಕಾರಕ್ಕೆ ಹೆಚ್ಚಿನ ಅವಕಾಶಗಳನ್ನು ಶೋಧಿಸಲೂ ನಾವು ಒಪ್ಪಿಕೊಂಡಿದ್ದೇವೆ.
ಗೌರವಾನ್ವಿತರೇ,
ಭಾರತ ಮತ್ತು ಡೆನ್ಮಾರ್ಕ್ ನಡುವಣ ಸಂಬಂಧ ನಿಮ್ಮ ನಾಯಕತ್ವದಲ್ಲಿ ಹೊಸ ಎತ್ತರಗಳನ್ನು ತಲುಪುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ನಾಳೆ ನಡೆಯಲಿರುವ ಎರಡನೇ ಭಾರತ-ನಾರ್ಡಿಕ್ ಶೃಂಗದ ಆತಿಥ್ಯವನ್ನು ತಾವು ವಹಿಸಿಕೊಂಡಿರುವುದಕ್ಕೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಂದು ಭಾರತೀಯ ವಲಸೆಗಾರರ ಕಾರ್ಯಕ್ರಮದಲ್ಲಿ ಪಾಲ್ಗೊಂಡುದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದರಲ್ಲಿ ಪಾಲ್ಗೊಳ್ಳಲು ತಾವು ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿದ್ದೀರಿ. ಇದು ಭಾರತೀಯ ಸಮುದಾಯದ ಬಗ್ಗೆ ತಾವು ಇಟ್ಟಿರುವ ಪ್ರೀತಿಯ ಸಂಕೇತವಾಗಿದೆ.
ಧನ್ಯವಾದಗಳು