ಮಾನ್ಯ ಅಧ್ಯಕ್ಷರೇ, ನಿಮ್ಮನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ. ಇಂದು ನಾವು ಮತ್ತೊಂದು ಸಕಾರಾತ್ಮಕ ಮತ್ತು ಉಪಯುಕ್ತ ಕ್ವಾಡ್ ಶೃಂಗಸಭೆಯಲ್ಲಿ ಒಟ್ಟಿಗೆ ಭಾಗವಹಿಸಿದ್ದೇವೆ.
ಭಾರತ-ಯುಎಸ್‌ಎ ಕಾರ್ಯತಂತ್ರದ ಪಾಲುದಾರಿಕೆಯು ನಿಜವಾಗಿಯೂ ವಿಶ್ವಾಸದ ಪಾಲುದಾರಿಕೆಯಾಗಿದೆ.
ನಮ್ಮ ಪರಸ್ಪರ ಆಸಕ್ತಿಯ ಕ್ಷೇತ್ರಗಳು ಮತ್ತು ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಮ್ಮ ಸಾಮಾನ್ಯ ಆಸಕ್ತಿಗಳು ಈ ವಿಶ್ವಾಸದ ಬಂಧಗಳನ್ನು ಬಲಪಡಿಸಿವೆ.
ನಮ್ಮ ಪರಸ್ಪರ ಸಂಬಂಧಗಳು ಮತ್ತು ನಿಕಟ ಆರ್ಥಿಕ ಸಂಬಂಧಗಳು ಸಹ ನಮ್ಮ ಸಹಭಾಗಿತ್ವವನ್ನು ಅನನ್ಯವಾಗಿಸುತ್ತದೆ.
ನಮ್ಮ ನಡುವಿನ ವ್ಯಾಪಾರ ಮತ್ತು ಹೂಡಿಕೆಯು ನಿರಂತರವಾಗಿ ವಿಸ್ತರಿಸುತ್ತಿದೆ, ಆದರೂ ಅದು ಇನ್ನೂ ನಮ್ಮ ಸಾಮರ್ಥ್ಯಕ್ಕಿಂತ ಕಡಿಮೆಯಿದೆ.
ನಮ್ಮ ನಡುವಿನ ಭಾರತ-ಯುಎಸ್‌ಎ ಹೂಡಿಕೆ ಪ್ರೋತ್ಸಾಹಕ ಒಪ್ಪಂದದೊಂದಿಗೆ, ಹೂಡಿಕೆಯ ದಿಕ್ಕಿನಲ್ಲಿ ನಾವು ನೈಜ ಪ್ರಗತಿಯನ್ನು ಕಾಣುತ್ತೇವೆ ಎಂದು ನನಗೆ ಖಾತ್ರಿಯಿದೆ.
ನಾವು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುತ್ತಿದ್ದೇವೆ ಮತ್ತು ಜಾಗತಿಕ ವಿಷಯಗಳಲ್ಲಿ ಪರಸ್ಪರ ಸಮನ್ವಯವನ್ನು ಬಲಪಡಿಸುತ್ತಿದ್ದೇವೆ.
ನಮ್ಮ ಎರಡೂ ದೇಶಗಳು ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಒಂದೇ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತವೆ ಮತ್ತು ದ್ವಿಪಕ್ಷೀಯ ಮಟ್ಟದಲ್ಲಿ ಮಾತ್ರವಲ್ಲದೆ ಇತರ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ನಮ್ಮ ಹಂಚಿಕೆಯ ಮೌಲ್ಯಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳನ್ನು ರಕ್ಷಿಸಲು ಕೆಲಸ ಮಾಡುತ್ತಿವೆ. ನಿನ್ನೆ ಘೋಷಿಸಿದ ಕ್ವಾಡ್ ಮತ್ತು ಐಪಿಇಎಫ್ ಇದಕ್ಕೆ ಸಕ್ರಿಯ ಉದಾಹರಣೆಗಳಾಗಿವೆ. ಇಂದು ನಮ್ಮ ಚರ್ಚೆಯು ಈ ಧನಾತ್ಮಕ ಚಲನೆಗೆ ಹೆಚ್ಚಿನ ವೇಗವನ್ನು ನೀಡುತ್ತದೆ.
ಭಾರತ ಮತ್ತು ಯುಎಸ್ಎ ನಡುವಿನ ಸ್ನೇಹವು ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ, ವಿಶ್ವದ ಸುಸ್ಥಿರತೆಗಾಗಿ ಮತ್ತು ಮನುಕುಲದ ಯೋಗಕ್ಷೇಮಕ್ಕಾಗಿ ಉತ್ತಮ ಶಕ್ತಿಯಾಗಿ ಮುಂದುವರಿಯುತ್ತದೆ ಎಂದು ನನಗೆ ನಂಬಿಕೆಯಿದೆ.