ಮಾನ್ಯ ಅಧ್ಯಕ್ಷರೇ,
ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಜಿಲ್ ಬಿಡೆನ್ ಅವರಿಗೂ ಸಹ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನೀವು ನನ್ನನ್ನು ಮತ್ತು ನಮ್ಮ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸಿದ ರೀತಿಗೆ ಮತ್ತು ಇಂದು ನೀವು ಭಾರತೀಯ ಸಮುದಾಯಕ್ಕೆ ಶ್ವೇತಭವನದ ಬಾಗಿಲು ತೆರೆದಿದ್ದಕ್ಕಾಗಿ ನಾನು ನಿಮಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಅಮೆರಿಕ ಮತ್ತು ಭಾರತದ ನಡುವಿನ ಭವಿಷ್ಯದ ಕಾರ್ಯತಂತ್ರದ ಸಂಬಂಧವನ್ನು ವೀಕ್ಷಿಸಲು ಸಾವಿರಾರು ಭಾರತೀಯರು ನಮ್ಮ ನಡುವೆ ಇದ್ದರು.
ಘನತೆವೆತ್ತ ಅಧ್ಯಕ್ಷರೇ,
ನೀವು ಯಾವಾಗಲೂ ಭಾರತದ ಹಿತೈಷಿಗಳಾಗಿರುತ್ತೀರಿ ಮತ್ತು ನಿಮಗೆ ಯಾವಾಗ ಮತ್ತು ಎಲ್ಲಿ ಅವಕಾಶ ಸಿಕ್ಕಿದರೂ, ನೀವು ಯಾವಾಗಲೂ ಭಾರತ ಅಮೆರಿಕ ಸಂಬಂಧಗಳ ಪ್ರಾಮುಖ್ಯತೆಗೆ ಹೆಚ್ಚಿನ ಒತ್ತು ನೀಡಿದ್ದೀರಿ. 8 ವರ್ಷಗಳ ಹಿಂದೆ, ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡುವಾಗ, ನೀವು ಬಹಳ ಮುಖ್ಯವಾದ ವಿಷಯವನ್ನು ಹೇಳಿದ್ದು ನನಗೆ ಇನ್ನೂ ನೆನಪಿದೆ. "ನಮ್ಮ ಗುರಿ ಭಾರತದ ಉತ್ತಮ ಸ್ನೇಹಿತನಾಗುವುದು." ಎಂದು ನೀವು ಹೇಳಿದ್ದೀರಿ. ನಿಮ್ಮ ಈ ಮಾತುಗಳು ಇಂದಿಗೂ ಅನುರಣಿಸುತ್ತಿವೆ. ಭಾರತದ ಬಗೆಗಿನ ನಿಮ್ಮ ವೈಯಕ್ತಿಕ ಬದ್ಧತೆಯು ಹಲವಾರು ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಸ್ಫೂರ್ತಿ ನೀಡುತ್ತದೆ.
ಇಂದು, ಭಾರತ ಮತ್ತು ಅಮೆರಿಕವು ಬಾಹ್ಯಾಕಾಶದ ಎತ್ತರದಿಂದ ಸಮುದ್ರದ ಆಳದವರೆಗೆ, ಪ್ರಾಚೀನ ಸಂಸ್ಕೃತಿಯಿಂದ ಕೃತಕ ಬುದ್ಧಿಮತ್ತೆಯವರೆಗೆ ಪ್ರತಿ ಕ್ಷೇತ್ರದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ.
ರಾಜತಾಂತ್ರಿಕ ದೃಷ್ಟಿಕೋನದಿಂದ ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಬಂದಾಗ, ಇದು ಸಾಮಾನ್ಯವಾಗಿ ಔಪಚಾರಿಕ ಜಂಟಿ ಹೇಳಿಕೆಗಳು, ಕಾರ್ಯಕಾರಿ ಗುಂಪುಗಳು ಮತ್ತು ತಿಳುವಳಿಕೆಯ ಜ್ಞಾಪಕ ಪತ್ರಗಳ ಬಗ್ಗೆ ಇರುತ್ತದೆ. ಖಂಡಿತಾ ಇದು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ, ಆದರೆ ಭಾರತ ಅಮೆರಿಕ ಸಂಬಂಧವನ್ನು ಮುಂದಕ್ಕೆ ಸಾಗಿಸುವ ನಿಜವಾದ ಎಂಜಿನ್ ನಮ್ಮ ಬಲವಾದ ಜನರ ಸಂಬಂಧವಾಗಿದೆ. ಶ್ವೇತಭವನದ ಹೊರಗಿನ ಹುಲ್ಲುಹಾಸಿನ ಮೇಲೆ ಈ ಎಂಜಿನ್ನಿನ ಸದ್ದನ್ನು ನಾವು ಕೇಳಿದ್ದೇವೆ.
ಘನತೆವೆತ್ತ ಅಧ್ಯಕ್ಷರೇ,
ನೀವು ಹೇಳಿದ್ದನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ. ಇಂದಿನ ಕ್ಷಿಪ್ರವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ, ಎಲ್ಲರ ಕಣ್ಣುಗಳು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳಾದ ಭಾರತ ಮತ್ತು ಅಮೆರಿಕದ ಮೇಲೆ ನೆಟ್ಟಿವೆ. ಪ್ರಜಾಪ್ರಭುತ್ವ ಮೌಲ್ಯಗಳು, ಜಾಗತಿಕ ಶಾಂತಿ ಮತ್ತು ಸ್ಥಿರತೆ ಮತ್ತು ಮನುಕುಲದ ಕಲ್ಯಾಣದಲ್ಲಿ ನಂಬಿಕೆಯಿಡುವ ಎಲ್ಲಾ ಶಕ್ತಿಗಳಿಗೆ ನಮ್ಮ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಪಾಲುದಾರಿಕೆ ಅತ್ಯಂತ ನಿರ್ಣಾಯಕ ಮತ್ತು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ ಎಂದು ನಾನು ನಂಬುತ್ತೇನೆ.
ಇಡೀ ಪ್ರಪಂಚದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನಾವು ಒಟ್ಟಾಗಿ ಖಂಡಿತವಾಗಿಯೂ ಯಶಸ್ವಿಯಾಗುತ್ತೇವೆ ಎಂದು ನನಗೆ ವಿಶ್ವಾಸವಿದೆ.
ಇಂದಿನ ನಮ್ಮ ಮಾತುಕತೆಯ ಸಮಯದಲ್ಲಿ, ನಾವು ಅಂತಹ ಅನೇಕ ವಿಷಯಗಳನ್ನು ಚರ್ಚಿಸುತ್ತೇವೆ ಮತ್ತು ನಮ್ಮ ಕಾರ್ಯತಂತ್ರದ ಸಂಬಂಧಕ್ಕೆ ಹೊಸ ಆಯಾಮವನ್ನು ಸೇರಿಸುತ್ತೇವೆ. ಮತ್ತೊಮ್ಮೆ ನಾನು ನಮ್ಮ ಸ್ನೇಹಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.