ಜಾರ್ಖಂಡ್ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್ ಜಿ, ಮುಖ್ಯಮಂತ್ರಿ ಶ್ರೀ ಹೇಮಂತ್ ಸೊರೆನ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಜಿ, ಜಾರ್ಖಂಡ್ ಸರ್ಕಾರದ ಸಚಿವರು, ಸಂಸದ ನಿಶಿಕಾಂತ್ ಜಿ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಸಂಸದರು ಮತ್ತು ಶಾಸಕರು, ಮಹಿಳೆಯರು ಮತ್ತು ಗೌರವಾನ್ವಿತರೆ,
ಬಾಬಾ ಧಾಮಕ್ಕೆ ಭೇಟಿ ನೀಡಿದ ನಂತರ ಎಲ್ಲರೂ ಸಂತಸಗೊಂಡಿದ್ದಾರೆ. ಇಂದು ದಿಯೋಘರ್‌ನಿಂದ ಜಾರ್ಖಂಡ್‌ನ ಅಭಿವೃದ್ಧಿಗೆ ಉತ್ತೇಜನ ನೀಡಲು ನಾವೆಲ್ಲರೂ ಸವಲತ್ತು ಪಡೆದಿದ್ದೇವೆ. ಬಾಬಾ ಬೈದ್ಯನಾಥರ ಆಶೀರ್ವಾದದಿಂದ ಇಂದು 16,000 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳು ಉದ್ಘಾಟನೆಯಾಗಿವೆ ಮತ್ತು ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇವು ಜಾರ್ಖಂಡ್‌ನ ಆಧುನಿಕ ಸಂಪರ್ಕ, ಶಕ್ತಿ, ಆರೋಗ್ಯ, ನಂಬಿಕೆ ಮತ್ತು ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡಲಿವೆ. ನಾವು ದಿಯೋಘರ್ ವಿಮಾನ ನಿಲ್ದಾಣ ಮತ್ತು ದಿಯೋಘರ್ ಏಮ್ಸ್ (ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ) ಬಗ್ಗೆ ಬಹಳ ದಿನಗಳಿಂದ ಕನಸು ಕಂಡಿದ್ದೆವು. ಈ ಕನಸು ಇದೀಗ ನನಸಾಗುತ್ತಿದೆ.
ಸ್ನೇಹಿತರೆ,
ಈ ಯೋಜನೆಗಳು ಜಾರ್ಖಂಡ್‌ನ ಲಕ್ಷಾಂತರ ಜನರಿಗೆ ಜೀವನವನ್ನು ಸುಲಭಗೊಳಿಸುವುದಲ್ಲದೆ, ವ್ಯಾಪಾರ, ಉದ್ಯಮ, ಪ್ರವಾಸೋದ್ಯಮ, ಉದ್ಯೋಗ ಮತ್ತು ಸ್ವಯಂ-ಉದ್ಯೋಗಕ್ಕಾಗಿ ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಜಾರ್ಖಂಡ್‌ನ ಎಲ್ಲಾ ಜನರನ್ನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಯೋಜನೆಗಳನ್ನು ಜಾರ್ಖಂಡ್‌ನಲ್ಲಿ ಪ್ರಾರಂಭಿಸಲಾಗುತ್ತಿದೆ, ಆದರೆ ಜಾರ್ಖಂಡ್ ಹೊರತುಪಡಿಸಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳು ನೇರ ಪ್ರಯೋಜನ ಪಡೆಯುತ್ತವೆ. ಒಂದು ರೀತಿಯಲ್ಲಿ, ಈ ಯೋಜನೆಗಳು ಪೂರ್ವ ಭಾರತದ ಅಭಿವೃದ್ಧಿಗೂ ಉತ್ತೇಜನ ನೀಡುತ್ತವೆ.
ಸ್ನೇಹಿತರೆ,
ದೇಶವು ಕಳೆದ 8 ವರ್ಷಗಳಿಂದ ರಾಜ್ಯಗಳ ಅಭಿವೃದ್ಧಿಯ ಮೂಲಕ ರಾಷ್ಟ್ರದ ಅಭಿವೃದ್ಧಿ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ಜಾರ್ಖಂಡ್ ಅನ್ನು ಹೆದ್ದಾರಿಗಳು, ರೈಲು ಮಾರ್ಗಗಳು, ವಾಯುಮಾರ್ಗಗಳು ಮತ್ತು ಜಲಮಾರ್ಗಗಳೊಂದಿಗೆ ಸಂಪರ್ಕಿಸುವ ನಮ್ಮ ಪ್ರಯತ್ನದಲ್ಲಿ ಕಳೆದ 8 ವರ್ಷಗಳಲ್ಲಿ ಅದೇ ಮನೋಭಾವವು ಅತ್ಯುನ್ನತವಾಗಿದೆ. 13 ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲಾ ಯೋಜನೆಗಳು ಬಿಹಾರ, ಪಶ್ಚಿಮ ಬಂಗಾಳ ಮತ್ತು ದೇಶದ ಇತರೆ ಭಾಗಗಳೊಂದಿಗೆ ಜಾರ್ಖಂಡ್ ಸಂಪರ್ಕವನ್ನು ಬಲಪಡಿಸಲಿದೆ. ಮಿರ್ಜಾಚೌಕಿ ಮತ್ತು ಫರಕ್ಕಾ ನಡುವೆ ನಿರ್ಮಿಸಲಾಗುತ್ತಿರುವ ಚತುಷ್ಪಥ ಹೆದ್ದಾರಿ ಇಡೀ ಸಂತಾಲ್ ಪರಗಣಕ್ಕೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಿದೆ. ರಾಂಚಿ-ಜಮ್ ಶೆಡ್ ಪುರ ಹೆದ್ದಾರಿಯು ಈಗ ರಾಜ್ಯದ ರಾಜಧಾನಿ ಮತ್ತು ಕೈಗಾರಿಕಾ ನಗರಗಳ ನಡುವಿನ ಪ್ರಯಾಣದ ಸಮಯ ಮತ್ತು ಸಾರಿಗೆ ವೆಚ್ಚ ಎರಡನ್ನೂ ಗಣನೀಯವಾಗಿ ಕಡಿಮೆ ಮಾಡುತ್ತದೆ. ಪಾಲ್ಮಾ ಗುಮ್ಲಾ ವಿಭಾಗದಿಂದ ಛತ್ತೀಸ್‌ಗಢಕ್ಕೆ ಉತ್ತಮ ಪ್ರವೇಶ ಸಿಗಲಿದೆ. ಪಾರಾದೀಪ್ ಬಂದರಿನಿಂದ ಜಾರ್ಖಂಡ್‌ಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುವುದು ಸುಲಭ ಮತ್ತು ಅಗ್ಗವಾಗಲಿದೆ. ಇಂದು ರೈಲು ಜಾಲದ ವಿಸ್ತರಣೆಯು ಈ ಪ್ರದೇಶದಾದ್ಯಂತ ಹೊಸ ರೈಲುಗಳಿಗೆ ಮಾರ್ಗಗಳನ್ನು ತೆರೆದಿದೆ, ರೈಲು ಸಾರಿಗೆಯನ್ನು ವೇಗಗೊಳಿಸುತ್ತದೆ. ಈ ಎಲ್ಲಾ ಸೌಲಭ್ಯಗಳು ಜಾರ್ಖಂಡ್‌ನ ಕೈಗಾರಿಕಾ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿವೆ.
ಸ್ನೇಹಿತರೆ,
4 ವರ್ಷಗಳ ಹಿಂದೆ ದಿಯೋಘರ್ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ನಾನಾ ಅಡೆತಡೆಗಳ ಹೊರತಾಗಿಯೂ, ಈ ಯೋಜನೆಯಲ್ಲಿ ತ್ವರಿತ ಪ್ರಗತಿ ಸಾಧಿಸಲಾಗಿದೆ, ಇಂದು ಜಾರ್ಖಂಡ್ 2ನೇ ವಿಮಾನ ನಿಲ್ದಾಣ ಪಡೆಯುತ್ತಿದೆ. ದಿಯೋಘರ್ ವಿಮಾನ ನಿಲ್ದಾಣವು ಪ್ರತಿ ವರ್ಷ ಸುಮಾರು 5 ಲಕ್ಷ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಇದರಿಂದ ಅನೇಕರಿಗೆ ಬಾಬಾನ ದರ್ಶನ ಪಡೆಯಲು ಸುಲಭವಾಗುತ್ತದೆ.
ಸ್ನೇಹಿತರೆ,
ಸ್ನೇಹಿತರು,
ಹವಾಯಿ ಚಪ್ಪಲ್ ಧರಿಸಿದವರೂ ವಿಮಾನ ಪ್ರಯಾಣವನ್ನು ಆನಂದಿಸಬಹುದು ಎಂದು ಯೋಚಿಸಿ ನಮ್ಮ ಸರ್ಕಾರ ಉಡಾನ್ ಯೋಜನೆಯನ್ನು ಪ್ರಾರಂಭಿಸಿದೆ ಎಂದು ನನ್ನ ಸಹೋದ್ಯೋಗಿ ಜ್ಯೋತಿರಾದಿತ್ಯ ಜಿ ಉಲ್ಲೇಖಿಸಿರುವಂತೆ, ಇಂದು ದೇಶದೆಲ್ಲೆಡೆ ಸರಕಾರದ ಪ್ರಯತ್ನಗಳ ಲಾಭ ಕಾಣುತ್ತಿದೆ. ಉಡಾನ್ ಯೋಜನೆಯಡಿ ಕಳೆದ 5-6 ವರ್ಷಗಳಲ್ಲಿ 70ಕ್ಕೂ ಹೆಚ್ಚು ಹೊಸ ಸ್ಥಳಗಳನ್ನು ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಅಥವಾ ವಾಟರ್ ಏರೋಡ್ರೋಮ್‌ಗಳೊಂದಿಗೆ ಸಂಪರ್ಕಿಸಲಾಗಿದೆ. ಇಂದು, ಸಾಮಾನ್ಯ ನಾಗರಿಕರು 400ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ವಿಮಾನ ಪ್ರಯಾಣ ಸೌಲಭ್ಯ ಆನಂದಿಸುತ್ತಿದ್ದಾರೆ. ಉಡಾನ್ ಯೋಜನೆಯಡಿ ಇಲ್ಲಿಯವರೆಗೆ 1 ಕೋಟಿ ಪ್ರಯಾಣಿಕರು ಅತ್ಯಂತ ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಬಳಸಿದ್ದಾರೆ. ವಿಮಾನ ನಿಲ್ದಾಣವನ್ನು ಮೊದಲ ಬಾರಿಗೆ ನೋಡಿದ ಮತ್ತು ಮೊದಲ ಬಾರಿಗೆ ವಿಮಾನ ಹತ್ತಿದ ಲಕ್ಷಾಂತರ ಮಂದಿ ಇದ್ದಾರೆ. ನನ್ನ ಬಡ ಮತ್ತು ಮಧ್ಯಮ ವರ್ಗದ ಸಹೋದರರು ಮತ್ತು ಸಹೋದರಿಯರು, ಒಂದು ಕಾಲದಲ್ಲಿ ಪ್ರಯಾಣಕ್ಕಾಗಿ ಬಸ್ ಮತ್ತು ರೈಲುಗಳನ್ನು ಅವಲಂಬಿಸಿದ್ದರು. ಈಗ ವಿಮಾನದಲ್ಲಿ ಸೀಟ್ ಬೆಲ್ಟ್ ಧರಿಸಲು ಕಲಿತಿದ್ದಾರೆ. ಇಂದು ದಿಯೋಘರ್‌ನಿಂದ ಕೋಲ್ಕತಾಗೆ ವಿಮಾನ ಹಾರಾಟ ಪ್ರಾರಂಭವಾಗಿದೆ ಎಂದು ನನಗೆ ಸಂತೋಷವಾಗಿದೆ. ರಾಂಚಿ, ಪಾಟ್ನಾ ಮತ್ತು ದೆಹಲಿಗೆ ಶೀಘ್ರವಾಗಿ ವಿಮಾನಗಳನ್ನು ಪ್ರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ದಿಯೋಘರ್ ನಂತರ, ಬೊಕಾರೊ ಮತ್ತು ದುಮ್ಕಾದಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ ಕೆಲಸ ನಡೆಯುತ್ತಿದೆ. ಅಂದರೆ, ಮುಂದಿನ ದಿನಗಳಲ್ಲಿ ಜಾರ್ಖಂಡ್‌ನಲ್ಲಿ ವೈಮಾನಿಕ ಸಾರಿಗೆ ಸಂಪರ್ಕ ಉತ್ತಮಗೊಳ್ಳಲಿದೆ.
ಸ್ನೇಹಿತರೆ,
ಸಂಪರ್ಕದ ಜೊತೆಗೆ, ಕೇಂದ್ರ ಸರ್ಕಾರವು ದೇಶದ ಧರ್ಮ, ನಂಬಿಕೆ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಲು ಒತ್ತು ನೀಡುತ್ತಿದೆ. ಬಾಬಾ ಬೈದ್ಯನಾಥ ಧಾಮದಲ್ಲೂ ಪ್ರಸಾದ ಯೋಜನೆಯಡಿ ಆಧುನಿಕ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಸಮಗ್ರ ವಿಧಾನದೊಂದಿಗೆ ಕೆಲಸ ಮಾಡಿದಾಗ, ಸಮಾಜದ ಪ್ರತಿಯೊಂದು ವರ್ಗ ಮತ್ತು ವಲಯವು ಪ್ರವಾಸೋದ್ಯಮ ರೂಪದಲ್ಲಿ ಹೊಸ ಆದಾಯ ಪಡೆಯುತ್ತದೆ. ಬುಡಕಟ್ಟು ಪ್ರದೇಶದಲ್ಲಿ ಇಂತಹ ಆಧುನಿಕ ಸೌಲಭ್ಯಗಳು ಈ ಪ್ರದೇಶದ ಭವಿಷ್ಯವನ್ನು ಬದಲಾಯಿಸಲಿವೆ.
ಸ್ನೇಹಿತರೆ,
ಅನಿಲ ಆಧಾರಿತ ಆರ್ಥಿಕತೆಯ ಕಡೆಗೆ ದೇಶದ ಪ್ರಯತ್ನಗಳು ಕಳೆದ 8 ವರ್ಷಗಳಲ್ಲಿ ಜಾರ್ಖಂಡ್‌ಗೆ ಹೆಚ್ಚು ಪ್ರಯೋಜನ ನೀಡಿವೆ. ಪೂರ್ವ ಭಾರತದಲ್ಲಿ ಜಾರಿಯಲ್ಲಿರುವ ಮೂಲಸೌಕರ್ಯಗಳ ಪ್ರಕಾರ, ಇಲ್ಲಿ ಅನಿಲ ಆಧಾರಿತ ಜೀವನ ಮತ್ತು ಉದ್ಯಮ ಅಸಾಧ್ಯವೆಂದು ಪರಿಗಣಿಸಲಾಗಿದೆ. ಆದರೆ ಪ್ರಧಾನ ಮಂತ್ರಿ ಊರ್ಜ ಗಂಗಾ ಯೋಜನೆ ಹಳೆಯ ಚಿತ್ರಣವನ್ನು ಬದಲಾಯಿಸುತ್ತಿದೆ. ಕೊರತೆಯನ್ನು ಅವಕಾಶಗಳಾಗಿ ಪರಿವರ್ತಿಸಲು ನಾವು ಹಲವಾರು ಹೊಸ ಹೆಗ್ಗುರುತಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇಂದು ಬೊಕಾರೊ-ಅಂಗುಲ್ ವಿಭಾಗದ ಉದ್ಘಾಟನೆಯು ಜಾರ್ಖಂಡ್ ಮತ್ತು ಒಡಿಶಾದ 11 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಜಾಲ ವಿಸ್ತರಿಸಲಿದೆ. ಇದು ಮನೆಗಳಿಗೆ ಪೈಪ್‌ಗಳ ಮೂಲಕ ಅಗ್ಗದ ಅನಿಲ ಒದಗಿಸುವುದಲ್ಲದೆ, ಸಿಎನ್‌ಜಿ ಆಧಾರಿತ ಸಾರಿಗೆ, ವಿದ್ಯುತ್ ಮತ್ತು ರಸಗೊಬ್ಬರಗಳು, ಉಕ್ಕು, ಆಹಾರ ಸಂಸ್ಕರಣೆ, ಕೋಲ್ಡ್ ಸ್ಟೋರೇಜ್ ಸೇರಿದಂತೆ ಅನೇಕ ಕೈಗಾರಿಕೆಗಳು ಸಹ ಪ್ರಚೋದನೆ ಪಡೆಯುತ್ತವೆ.
ಸ್ನೇಹಿತರೆ,
ನಾವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮಂತ್ರವನ್ನು ಅನುಸರಿಸುತ್ತಿದ್ದೇವೆ. ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಅಭಿವೃದ್ಧಿ, ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಹೊಸ ಮಾರ್ಗಗಳನ್ನು ಕಂಡುಹಿಡಿಯಲಾಗುತ್ತಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳತ್ತ ಗಮನ ಹರಿಸಿ ಅಭಿವೃದ್ಧಿಯ ಆಶಯಕ್ಕೆ ಒತ್ತು ನೀಡಿದ್ದೇವೆ. ಇಂದು ಜಾರ್ಖಂಡ್‌ನ ಹಲವು ಜಿಲ್ಲೆಗಳು ಇದರ ಫಲವನ್ನು ಪಡೆಯುತ್ತಿವೆ. ನಮ್ಮ ಸರ್ಕಾರವು ಕಷ್ಟಕರವೆಂದು ಪರಿಗಣಿಸಲಾದ ಕಾಡು ಮತ್ತು ಪರ್ವತಗಳಿಂದ ಆವೃತವಾದ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತಿದೆ, ಸ್ವಾತಂತ್ರ್ಯದ ಹಲವು ದಶಕಗಳ ನಂತರ ವಿದ್ಯುತ್ ಪಡೆದ 18,000 ಹಳ್ಳಿಗಳಲ್ಲಿ ಹೆಚ್ಚಿನವು ದುರ್ಗಮ ಪ್ರದೇಶಗಳಿಂದ ಕೂಡಿವೆ. ಉತ್ತಮ ರಸ್ತೆಗಳಿಂದ ವಂಚಿತವಾಗಿರುವ ಪ್ರದೇಶಗಳಲ್ಲೂ ಗ್ರಾಮೀಣ, ಬುಡಕಟ್ಟು ಮತ್ತು ದುರ್ಗಮ ಪ್ರದೇಶಗಳ ಪಾಲು ಅತ್ಯಧಿಕವಾಗಿದೆ. ಕಳೆದ 8 ವರ್ಷಗಳಲ್ಲಿ ದುರ್ಗಮ ಪ್ರದೇಶಗಳಲ್ಲಿ ಗ್ಯಾಸ್ ಮತ್ತು ನೀರಿನ ಸಂಪರ್ಕಗಳನ್ನು ಒದಗಿಸಲು ಕಾರ್ಯಾಚರಣೆ ರೂಪದಲ್ಲಿ ಕೆಲಸ ಪ್ರಾರಂಭವಾಗಿದೆ. ಈ ಹಿಂದೆ ಉತ್ತಮ ಆರೋಗ್ಯ ಸೌಲಭ್ಯಗಳು ದೊಡ್ಡ ನಗರಗಳಿಗೆ ಮಾತ್ರ ಹೇಗೆ ಸೀಮಿತವಾಗಿದ್ದವು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಈಗ ಏಮ್ಸ್ ನ ಆಧುನಿಕ ಸೌಲಭ್ಯಗಳು ಜಾರ್ಖಂಡ್ ಜೊತೆಗೆ ಬಿಹಾರ ಮತ್ತು ಪಶ್ಚಿಮ ಬಂಗಾಳದ ದೊಡ್ಡ ಬುಡಕಟ್ಟು ಪ್ರದೇಶಗಳಿಗೆ ಲಭ್ಯವಿದೆ. ನಾವು ಜನರ ಅನುಕೂಲಕ್ಕಾಗಿ ಕ್ರಮಗಳನ್ನು ಕೈಗೊಂಡಾಗ, ರಾಷ್ಟ್ರದ ಸಂಪತ್ತು ಸೃಷ್ಟಿಯಾಗುತ್ತದೆ ಮತ್ತು ಅಭಿವೃದ್ಧಿಗೆ ಹೊಸ ಅವಕಾಶಗಳು ಸಹ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಈ ಎಲ್ಲಾ ಯೋಜನೆಗಳು ಸಾಕ್ಷಿಯಾಗಿವೆ. ಇದು ನಿಜವಾದ ಬೆಳವಣಿಗೆ. ಒಟ್ಟಾಗಿ ನಾವು ಅಂತಹ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕಾಗಿದೆ. ಮತ್ತೊಮ್ಮೆ, ನಾನು ಜಾರ್ಖಂಡ್ ಜನರನ್ನು ತುಂಬಾ ಅಭಿನಂದಿಸುತ್ತೇನೆ. ನಾನು ನಿಮಗೆ ಶುಭ ಹಾರೈಸುತ್ತೇನೆ. ತುಂಬಾ ಧನ್ಯವಾದಗಳು!