ಪ್ರಧಾನ ಮಂತ್ರಿಗಳು ಸ್ವೀಕರಿಸಿದ ನೆನಪಿನ ಕಾಣಿಕೆಗಳ ಪ್ರದರ್ಶನ ಮತ್ತು ಇ-ಹರಾಜು ಅಕ್ಟೋಬರ್ 24, ಇಂದು ಮುಕ್ತಾಯಗೊಂಡಿದೆ. ಈ ಹರಾಜಿಗೆ ಅಭೂತಪೂರ್ವ ಸ್ಪಂದನೆ ಲಭಿಸಿದೆ ಮತ್ತು ಸಾವಿರಾರು ಕೂಗುಬೆಲೆ ಲಭಿಸಿದವು. ಇ-ಹರಾಜಿನಿಂದ ಲಭಿಸಿದ ಸಂಪೂರ್ಣ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಕಾಣಿಕೆಯಾಗೆ ನೀಡಲಾಗುವುದು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೊರೆತ ಒಟ್ಟು 2772 ನೆನಪಿನ ಕಾಣಿಕೆಗಳ ಮಾರಾಟಕ್ಕೆ ಸೆಪ್ಟೆಂಬರ್ 14 ರಿಂದ ಕೇಂದ್ರ ಸಂಸ್ಕೃತಿ ಇಲಾಖೆ ಇ-ಹರಾಜು ಆಯೋಜಿಸಿತ್ತು. ನವ ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಆಧುನಿಕ ಕಲೆಯ ರಾಷ್ಟ್ರೀಯ ಪ್ರದರ್ಶನಾಲಯ) ದಲ್ಲಿ ಈ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ನೆನಪಿನ ಕಾಣಿಕೆಗಳು ವಿಭಿನ್ನ ವಸ್ತುಗಳಾದ ವರ್ಣ ಚಿತ್ರಗಳು, ಶಿಲ್ಪ ಕಲೆಗಳು, ಶಾಲ್, ಜಾಕೆಟ್ ಮತ್ತು ಸಾಂಪ್ರದಾಯಿಕ ಸಂಗೀತ ವಾದ್ಯಗಳು ಮುಂತಾದ ಅಪರೂಪದ ವಸ್ತುಗಳನ್ನು ಒಳಗೊಂಡಿದ್ದವು.
ಆರಂಭದಲ್ಲಿ ಅಕ್ಟೋಬರ್ 3 ರ ವರೆಗೆ ಇ-ಹರಾಜನ್ನು ಹಮ್ಮಿಕೊಳ್ಳುವ ಯೋಜನೆ ಇತ್ತು. ಆದರೆ, ಸಾರ್ವಜನಿಕರ ಅಭೂತಪೂರ್ವ ಪ್ರತಿಕ್ರಿಯೆಯ ಹಿನ್ನಲೆಯಲ್ಲಿ ಮತ್ತು ಹೆಚ್ಚೆಚ್ಚು ಜನರು ಪಾಲ್ಗೊಳ್ಳ ಬೇಕು ಎಂಬ ಮನವಿಯ ಮೇರೆಗೆ ಹರಾಜು ಪ್ರಕ್ರಿಯೆಯನ್ನು ಮತ್ತೆ ಮೂರು ವಾರಗಳ ವರೆಗೆ ಮುಂದುಬರೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇಂದಿನ ಮಾಹಿತಿ ಪ್ರಕಾರ ಹರಾಜಿಗಿಡಲಾದ ಎಲ್ಲ ವಸ್ತುಗಳು ಮಾರಾಟವಾಗಿವೆ. ಅನಿಲ್ ಕಪೂರ್, ಅರ್ಜುನ್ ಕಪೂರ್ ಮತ್ತು ಗಾಯಕ ಕೈಲಾಶ್ ಖೇರ್ ರಂತಹ ಬಾಲಿವುಡ್ ತಾರೆಯರೂ ಸೇರಿದಂತೆ, ಸೆಲೆಬ್ರಿಟಿಗಳೂ, ರಾಜಕೀಯ ನೇತಾರರು, ಕಾರ್ಯಕರ್ತರು ಹರಾಜಿನಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರು.
ಹರಾಜಿನಲ್ಲಿ ಪ್ರದರ್ಶಿಸಿದ ವಸ್ತುಗಳಲ್ಲಿ ಪುಟ್ಟ ಗಣಪತಿ ಮೂರ್ತಿ ಮತ್ತು ಕಮಲದ ಆಕಾರದ ಅಲಂಕಾರಿಕ ಪೆಟ್ಟಿಗೆ ಕನಿಷ್ಠ 500 ರೂಪಾಯಿ ದರ ನಿಗದಿ ಪಡಿಸಲಾಗಿತ್ತು. ಅತ್ಯಂತ ಹೆಚ್ಚು 2.5 ಲಕ್ಷ ಯೂಪಾಯಿ ಬೆಲೆಯ, ಮಾಹಾತ್ಮ ಗಾಂಧಿ ಅವರೊಂದಿಗೆ ಪ್ರಧಾನ ಮಂತ್ರಿ ಅವರ ಚಿತ್ರವಿರುವ ತ್ರಿವರ್ಣದ ಅಕ್ರಿಲಿಕ್ ಪೆಯಿಂಟಿಂಗ್ ಗೆ ಅತ್ಯಧಿಕ 25 ಲಕ್ಷ ರೂಪಾಯಿಗಳ ಕೂಗು ಬೆಲೆ ಲಭಿಸಿತು.
ಪ್ರಧಾನ ಮಂತ್ರಿ ಅವರು ತಮ್ಮ ತಾಯಿಯಿಂದ ಆಶೀರ್ವಾದ ಪಡೆಯುತ್ತಿದ್ದ ಫ್ರೇಮ್ ಹೊಂದಿದ ಛಾಯಾ ಚಿತ್ರವೊಂದಕ್ಕೆ ರೂ. 1000 ಮೂಲ ಬೆಲೆಯಿದ್ದು, ಅದಕ್ಕೆ ರೂ. 20 ಲಕ್ಷ ಕೂಗು ಬೆಲೆ ಲಭಿಸಿತು. ಹರಾಜಿನಲ್ಲಿದ್ದ ಇನ್ನಿತರ ಪ್ರಸಿದ್ಧ ವಸ್ತುಗಳೆಂದರೆ, ಮಣಿಪುರಿ ಜಾನಪದ ಕಲೆ (ಮೂಲ ಬೆಲೆ ರೂ. 50,000, ಮಾರಾಟವಾದ ಬೆಲೆ ರೂ. 10 ಲಕ್ಷ), ಕರುವಿಗೆ ಹಾಲುಣಿಸುತ್ತಿರುವ ಹಸುವಿನ ಲೋಹದ ಶಿಲ್ಪ (ಮೂಲ ಬೆಲೆ ರೂ. 4,000, ಮಾರಾಟವಾದ ಬೆಲೆ ರೂ. 10 ಲಕ್ಷ) ಮತ್ತು 14 ಸೆ. ಮೀ. ನ ಸ್ವಾಮಿ ವಿವೇಕಾನಂದರ ಲೋಹದ ಪ್ರತಿಮೆ (ಮೂಲ ಬೆಲೆ ರೂ. 4,000, ಹರಾಜಾದ ಬೆಲೆ ರೂ. 6 ಲಕ್ಷ).