ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮಹಾನಿರ್ದೇಶಕರಾದ ಶ್ರೀ ರಾಫೆಲ್ ಮರಿಯಾನೋ ಗ್ರೋಸಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಶಾಂತಿ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿಯ ಸುರಕ್ಷಿತ ಮತ್ತು ಸುಭದ್ರ ಬಳಕೆಗೆ ಭಾರತದ ನಿರಂತರ ಬದ್ಧತೆಯನ್ನು ಪ್ರಧಾನಮಂತ್ರಿ ಖಚಿತಪಡಿಸಿದರು. ವಿವಿಧ ಶಕ್ತಿಯ ಮಿಶ್ರಣ ಬಳಕೆಗಾಗಿ ಪರಿಸರ ಸ್ನೇಹಿ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಪಾಲನ್ನು ಹೆಚ್ಚಿಸುವ ಭಾರತದ ಮಹತ್ವಾಕಾಂಕ್ಷೆಯ ಗುರಿಗಳನ್ನು ಪ್ರಧಾನಮಂತ್ರಿಯವರು ಶ್ರೀ ಗ್ರೋಸಿ ಹಂಚಿಕೊಂಡರು.
ಜವಾಬ್ದಾರಿಯುತ ಪರಮಾಣು ಶಕ್ತಿಯಾಗಿ ಭಾರತದ ಸುಸ್ಪಷ್ಟ ದಾಖಲೆಯನ್ನು ಹಾಗೂ ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಮಹಾನಿರ್ದೇಶಕರಾದ ಶ್ರೀ ರಾಫೆಲ್ ಅವರು ಶ್ಲಾಘಿಸಿದರು. ವಿಶೇಷವಾಗಿ ಸ್ಥಳೀಯ ಪರಮಾಣು ವಿದ್ಯುತ್ ಸ್ಥಾವರಗಳ ಅಭಿವೃದ್ಧಿ ಮತ್ತು ನಿಯೋಜನೆಗಳ ಕುರಿತು ಸಂತಸ ವ್ಯಕ್ತ ಪಡಿಸಿದರು. ಸಾಮಾಜಿಕ ಪ್ರಯೋಜನಗಳಿಗಾಗಿ ನಾಗರಿಕ ಪರಮಾಣು ಅನ್ವಯಗಳಲ್ಲಿ ಭಾರತದ ಜಾಗತಿಕ ನಾಯಕತ್ವದ ಪಾತ್ರವನ್ನು ಅವರು ಶ್ಲಾಘಿಸಿದರು. ಆರೋಗ್ಯ, ಆಹಾರ, ನೀರು ಸಂಸ್ಕರಣೆ, ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಮಾನವಕುಲವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಪರಮಾಣು ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಭಾರತ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಅವರು ಉಲ್ಲೇಖಿಸಿ ಮಾತನಾಡಿದರು.
ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು ಮತ್ತು ಮೈಕ್ರೊ-ರಿಯಾಕ್ಟರ್‌ಗಳು ಸೇರಿದಂತೆ ನಿವ್ವಳ ಶೂನ್ಯ ಬದ್ಧತೆಗಳನ್ನು ಪೂರೈಸುವಲ್ಲಿ ಪರಮಾಣು ಶಕ್ತಿಯ ಪಾತ್ರವನ್ನು ವಿಸ್ತರಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಮಹಾನಿರ್ದೇಶಕರಾದ ಶ್ರೀ ಗ್ರೋಸಿ ಅವರು ಐ.ಎ.ಇ.ಎ. ಮತ್ತು ಭಾರತದ ನಡುವಿನ ಮಹೋನ್ನತ ಮಟ್ಟದ ಪಾಲುದಾರಿಕೆಗೆ ತಮ್ಮ ಮೆಚ್ಚುಗೆಯನ್ನು ತಿಳಿಸಿದರು. ಅನೇಕ ದೇಶಗಳಿಗೆ ಸಹಾಯ ಮಾಡಿರುವ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳಿಗಾಗಿ ಅವರು ಭಾರತವನ್ನು ಶ್ಲಾಘಿಸಿದರು. ಜಾಗತಿಕ ದಕ್ಷಿಣದಲ್ಲಿ ನಾಗರಿಕ ಪರಮಾಣು ತಂತ್ರಜ್ಞಾನದ ಅನ್ವಯಿಕೆಗಳನ್ನು ವಿಸ್ತರಿಸಲು ಭಾರತ ಮತ್ತು ಐ.ಎ.ಇ.ಎ ನಡುವಿನ ಸಹಕಾರದ ಮಾರ್ಗಗಳನ್ನು ಅನ್ವೇಷಿಸಲು ಎರಡೂ ಕಡೆಯವರು ಈ ಸಂದರ್ಭದಲ್ಲಿ ಒಪ್ಪಿಕೊಂಡರು.