ಮುಸ್ಲಿಂ ಉಲೇಮರು, ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಮತ್ತು ಇತರ ಪ್ರಮುಖ ವ್ಯಕ್ತಿಗಳ ನಿಯೋಗದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಸಮಗ್ರ ಪ್ರಗತಿ, ಅಲ್ಪಸಂಖ್ಯಾತರೂ ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳಿಗಾಗಿ ನಿಯೋಗ ಪ್ರಧಾನಮಂತ್ರಿಯವರನ್ನು ಅಭಿನಂದಿಸಿತು. ಭಾರತದಿಂದ ಹಜ್ ಗೆ ಬರುವ ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸಿರುವ ಸೌದಿ ಸರ್ಕಾರದ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿಯೋಗ, ಈ ವಿಷಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸಿತು.
ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಪ್ರಧಾನಮಂತ್ರಿಯವರು ಆರಂಭಿಸಿರುವ ಅಭಿಯಾನಕ್ಕೆ ನಿಯೋಗವು ಹೃದಯಪೂರ್ವಕವಾಗಿ ಮತ್ತು ಒಕ್ಕೊರಲಿನಿಂದ ಬೆಂಬಲ ಸೂಚಿಸಿತು. ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದ ಬಡಜನರಿಗೆ ಅದರಲ್ಲೂ ಅಲ್ಪಸಂಖ್ಯಾರಿಗೆ ಹೆಚ್ಚಾಗಿ ಲಾಭವಾಗಲಿದೆ ಎಂಬುದನ್ನು ನಿಯೋಗ ಒಪ್ಪಿಕೊಂಡಿತು.
ವಿಶ್ವದಾದ್ಯಂತದ ರಾಷ್ಟ್ರಗಳೊಂದಿಗೆ ಬಾಂಧವ್ಯ ಬಲಪಡಿಸಲು ಪ್ರಧಾನಮಂತ್ರಿಯವರು ಕೈಗೊಂಡಿರುವ ಪ್ರಯತ್ನಗಳಿಗೂ ನಿಯೋಗ ಅಭಿನಂದನೆ ಸಲ್ಲಿಸಿತು ಮತ್ತು ಇಂದು ವಿಶ್ವದ ಪ್ರತಿಯೊಂದು ಮೂಲೆಯಲ್ಲಿರುವ ಭಾರತೀಯನಲ್ಲೂ ಹೆಮ್ಮೆಯ ಪ್ರಜ್ಞೆ ಮೂಡಿದೆ ಎಂದು ಹೇಳಿತು.
ನಿಯೋಗದ ಸದಸ್ಯರು ಸ್ವಚ್ಛ ಭಾರತದೆಡೆಗೆ ಅವರು ಕೈಗೊಂಡ ನಿರ್ಧಾರವನ್ನೂ ಪ್ರಶಂಸಿಸಿದರು.
ಭಾರತದಲ್ಲಿರುವ ಯುವಕರು ತೀವ್ರಗಾಮಿತ್ವವನ್ನು ಯಶಸ್ವಿಯಾಗಿ ಪ್ರತಿರೋಧಿಸಿದ್ದಾರೆ, ಇದರ ಪರಿಣಾಮ ಇಂದು ಜಗತ್ತಿನ ಹಲವು ಕಡೆ ಆಗಿದೆ ಎಂದೂ ಪ್ರಧಾನಿ ಹೇಳಿದರು. ಇದರ ಶ್ರೇಯ ದೀರ್ಘ, ನಮ್ಮ ಜನರ ವಿನಿಮಯಿತ ಪರಂಪರೆಗೆ ಸಲ್ಲಬೇಕು ಎಂದರು, ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಸಂಘಟಿತ ಜವಾಬ್ದಾರಿಯಾಗಿದೆ ಎಂದೂ ಹೇಳಿದರು. ಭಾರತದ ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಬಾಂಧವ್ಯವು ಎಂದಿಗೂ ಭಯೋತ್ಪಾದನೆಯ ಮಹಾಪಾತಕದ ವಿನ್ಯಾಸಕ್ಕೆ ಅಥವಾ ಅದರ ಪ್ರಾಯೋಜಕರು ಯಶಸ್ವಿಯಾಗಲು ಅವಕಾಶ ನೀಡುವುದಿಲ್ಲ ಎಂದರು. ಪ್ರಧಾನಮಂತ್ರಿಯವರು ಬಡತನದಿಂದ ಮೇಲೆತ್ತಲು ಮತ್ತು ಲಾಭದಾಯಕವಾದ ಉದ್ಯೋಗಕ್ಕೆ ಪ್ರಮುಖವಾದ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯ ಮಹತ್ವವನ್ನು ಪ್ರತಿಪಾದಿಸಿದರು.
ಭಾರತದಿಂದ ಹಜ್ ಯಾತ್ರೆ ಕೈಗೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳ ಮಾಡಿರುವ ಸೌದಿ ಅರೇಬಿಯಾ ಸರ್ಕಾರದ ನಿರ್ಧಾರವನ್ನು ಪ್ರಶಂಸಿಸಿದ ಪ್ರಧಾನಿಯವರು, ಭಾರತೀಯ ಮುಸ್ಲಿಮರ ಬಗ್ಗೆ ವಿದೇಶಗಳಲ್ಲಿ ಧನಾತ್ಮಕ ಭಾವನೆ ಇದೆ ಎಂದು ತಿಳಿಸಿದರು.
ನಿಯೋಗದ ಸದಸ್ಯರಲ್ಲಿ ಇಮಾಮ್ ಉಮರ್ ಅಹ್ಮದ್ ಇಲಾಯ್ಸಿ (ಭಾರತದ ಮುಖ್ಯ ಇಮಾಮ್, ಮಾಸ್ಕ್ ಗಳ ಇಮಾಮರ ಅಖಿಲ ಭಾರತ ಸಂಘಟನೆ); ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಮೀರ್ ಉದ್ದೀನ್ ಶಾ (ಅಲೀಘರ್ ಮುಸ್ಲಿ ವಿಶ್ವವಿದ್ಯಾಲಯದ ಕುಲಪತಿ); ಮೈ ಇಕ್ಬಾಲ್ (ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರು); ತಲಾತ್ ಅಹ್ಮದ್ (ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಉಪ ಕುಲಪತಿ); ಮತ್ತು ಶಹೀದ್ ಸಿದ್ದಿಕಿ (ಉರ್ದು ಪತ್ರಕರ್ತ) ಸೇರಿದ್ದರು.
ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ (ಸ್ವತಂತ್ರ ನಿರ್ವಹಣೆ) ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ಶ್ರೀ. ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವ ಶ್ರೀ. ಎಂ.ಜೆ. ಅಕ್ಬರ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.