ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಭೂತಾನ್ ಭೇಟಿಗೆ ಮುನ್ನ ನೀಡಿರುವ ಹೇಳಿಕೆ.
“ನಾನು 17-18 ಆಗಸ್ಟ್ 2019 ರಂದು ಭೂತಾನ್ ದೇಶಕ್ಕೆ ಭೇಟಿ ನೀಡಲಿದ್ದೇನೆ.
ಪ್ರಸ್ತುತ ಅವಧಿಯ ಆರಂಭದಲ್ಲೇ ನಾನು ಭೂತಾನ್ ಗೆ ಭೇಟಿ ನೀಡುತ್ತಿರುವುದು, ನಮ್ಮ ನೆರೆಯ ವಿಶ್ವಾಸಾರ್ಹ ಸ್ನೇಹಿತ ಭೂತಾನ್ ನೊಂದಿಗೆ ಭಾರತದ ಸಂಬಂಧಗಳಿಗೆ ಸರ್ಕಾರ ನೀಡುವ ಹೆಚ್ಚಿನ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಭಾರತ ಮತ್ತು ಭೂತಾನ್ ವ್ಯಾಪಕ ಅಭಿವೃದ್ಧಿ ಸಹಭಾಗಿತ್ವ, ಪರಸ್ಪರ ಲಾಭದಾಯಕ ಜಲಶಕ್ತಿ ಸಹಕಾರ ಮತ್ತು ಬಲವಾದ ವ್ಯಾಪಾರ ಮತ್ತು ಆರ್ಥಿಕ ಸಂಪರ್ಕಗಳಿಂದ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿವೆ. ಇವುಗಳನ್ನು ಆಧ್ಯಾತ್ಮಿಕ ಪರಂಪರೆ ಮತ್ತು ಜನರ ನಡುವಿನ ಸಂಬಂಧಗಳಿಂದ ಬಲಪಡಿಸಲಾಗಿದೆ.
ಕಳೆದ ವರ್ಷ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ ಸುವರ್ಣ ಮಹೋತ್ಸವವನ್ನು ಉಭಯ ದೇಶಗಳು ಜಂಟಿಯಾಗಿ ಆಚರಿಸಿದ್ದವು.
ಭಾರತ-ಭೂತಾನ್ ಸಹಭಾಗಿತ್ವವು ಇಂದು ವಿಶೇಷ ಪಾತ್ರವನ್ನು ಹೊಂದಿದೆ ಮತ್ತು ಇದು ಭಾರತ ಸರ್ಕಾರದ ‘ನೆರೆಹೊರೆಯವರು ಮೊದಲು’ ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ.
ಗೌರವಾನ್ವಿತ ದೊರೆ ನಾಲ್ಕನೇ ಡ್ರುಕ್ ಗಯಲ್ಪೊ ಹಾಗೂ ಭೂತಾನ್ ಪ್ರಧಾನಿಯವರೊಂದಿಗೆ ನಮ್ಮ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಹರಹು ಕುರಿತು ಫಲಪ್ರದ ಚರ್ಚೆ ನಡೆಸಲು ನಾನು ಉತ್ಸುಕನಾಗಿದ್ದೇನೆ. ಭೂತಾನ್‌ನ ಪ್ರತಿಷ್ಠಿತ ರಾಯಲ್ ಯೂನಿವರ್ಸಿಟಿಯಲ್ಲಿ ಯುವ ಭೂತಾನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲೂ ಸಹ ನಾನು ಎದುರು ನೋಡುತ್ತಿದ್ದೇನೆ.
ನನ್ನ ಭೇಟಿಯು ಭೂತಾನ್‌ನೊಂದಿಗಿನ ನಮ್ಮ ಸಮಯ ಪರೀಕ್ಷಿತ ಮತ್ತು ಮೌಲ್ಯಯುತ ಸ್ನೇಹವನ್ನು ಉತ್ತೇಜಿಸುತ್ತದೆ ಮತ್ತು ಎರಡೂ ದೇಶಗಳ ಜನರ ಸಮೃದ್ಧ ಭವಿಷ್ಯ ಮತ್ತು ಪ್ರಗತಿಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ”