ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೊರಿಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಮೂನ್ ಜಯಿ ಇನ್ ; ಜಿಂಬಾಬ್ವೆಯ ಅಧ್ಯಕ್ಷ ಘನತೆವೆತ್ತ ಶ್ರೀ ಇ.ಡಿ. ಮನಂಗಗಂಗ್ವ; ಮತ್ತು ಮೊಜಾಂಬಿಕ್ ಅಧ್ಯಕ್ಷ ಘನತೆವೆತ್ತ ಶ್ರೀ ಫಿಲಿಪ್ ಜಕಿಂಟೋ ನ್ಯೂಸಿ ಅವರುಗಳಿಂದ ದೂರವಾಣಿ ಕರೆ ಸ್ವೀಕರಿಸಿದರು, ಅವರೆಲ್ಲರೂ ಇತ್ತೀಚೆಗೆ ಭಾರತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ವಿಜಯಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಪ್ರಧಾನಮಂತ್ರಿಯವರು ಕೊರಿಯಾ ಗಣರಾಜ್ಯದ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿದ್ದಕ್ಕಾಗಿ ಮತ್ತು ಅಭಿನಂದಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. 2019ರ ಫೆಬ್ರವರಿಯಲ್ಲಿ ತಾವು ಕೊರಿಯಾ ಗಣರಾಜ್ಯಕ್ಕೆ ನೀಡಿದ್ದ ಭೇಟಿಯನ್ನು ಅವರು ಆತ್ಮೀಯವಾಗಿ ಸ್ಮರಿಸಿದರು. ಪ್ರಥಮ ಮಹಿಳೆ ಕಿಮ್ ಅವರು 2018ರಲ್ಲಿ “ದೀಪೋತ್ಸವ” ಹಬ್ಬದಲ್ಲಿ ಭಾಗಿಯಾಗಲು ಭಾರತಕ್ಕೆ ಭೇಟಿ ನೀಡಿದ್ದನ್ನೂ ಸ್ಮರಿಸಿದರು ಮತ್ತು ಈ ಭೇಟಿ ಭಾರತ- ಆರ್.ಓ.ಕೆ. ಬಾಂಧವ್ಯಕ್ಕೆ ಹೊಸ ಅಧ್ಯಾಯ ಸೇರ್ಪಡೆ ಮಾಡಿದೆ ಎಂದು ಹೇಳಿದರು. ಎರಡೂ ರಾಷ್ಟ್ರಗಳ ನಡುವಿನ ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ತಮ್ಮ ದೃಢ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.
ಜಿಂಬಾಬ್ವೆಯ ಅಧ್ಯಕ್ಷ ಮನಂಗಗಂಗ್ವ ಅವರು ಆತ್ಮೀಯವಾಗಿ ಪ್ರಧಾನಮಂತ್ರಿಯವರಿಗೆ ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಸಾಧಿಸಿದ ದಿಗ್ವಿಜಯಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಧಾನಮಂತ್ರಿಯವರು ಅಧ್ಯಕ್ಷ ಮನಂಗಗಂಗ್ವ ಅವರಿಗೆ ಅವರ ಶುಭ ಹಾರೈಕೆಗಳಿಗೆ ಧನ್ಯವಾದ ಅರ್ಪಿಸಿದರು ಮತ್ತು ಜಿಂಬಾಬ್ವೆಯ ಇಬ್ಬರು ಮಾಧ್ಯಮ ವ್ಯಕ್ತಿಗಳು ಚುನಾವಣೆಯ ವರದಿಗಾರಿಕೆಗೆ ಭಾರತಕ್ಕೆ ಆಗಮಿಸಿದ್ದನ್ನು ಪ್ರಶಂಸಿಸಿದರು. ಪ್ರಧಾನಮಂತ್ರಿಯವರು ಭಾರತದ ಉಪರಾಷ್ಟ್ರಪತಿಯವರು ಕಳೆದ ವರ್ಷ ಜಿಂಬಾಬ್ವೆಗೆ ನೀಡಿದ ಯಶಸ್ವೀ ಭೇಟಿಯನ್ನೂ ಸ್ಮರಿಸಿದರು ಮತ್ತು ಭಾರತ – ಜಿಂಬಾಬ್ವೆ ಬಾಂಧವ್ಯವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗುವ ಆಶಯವನ್ನು ವ್ಯಕ್ತಪಡಿಸಿದರು.
ಈ ವರ್ಷದ ಆರಂಭದಲ್ಲಿ ಸಂಭವಿಸಿದ ಚಂಡಮಾರುತದಲ್ಲಿ ಉಂಟಾದ ಆಸ್ತಿಪಾಸ್ತಿ ಮತ್ತು ಜೀವಹಾನಿಗೆ ಪ್ರಧಾನಮಂತ್ರಿಯವರು ಮೊಜಾಂಬಿಕ್ ಅಧ್ಯಕ್ಷ ನ್ಯೂಸಿ ಅವರಿಗೆ ಸಂತಾಪವನ್ನು ಸೂಚಿಸಿದರು. ಆ ಸಂದರ್ಭದಲ್ಲಿ ಭಾರತದ ನೌಕಾಪಡೆ ನೀಡಿದ ಸಕಾಲಕ ನೆರವಿಗೆ ಪ್ರಧಾನಮಂತ್ರಿಯವರಿಗೆ ಅಧ್ಯಕ್ಷ ನ್ಯೂಸಿ ಅವರು ಧನ್ಯವಾದ ಅರ್ಪಿಸಿದರು. ಭಾರತವು ಮೊಜಾಂಬಿಕ್ ನೊಂದಿಗೆ ಪಾಲುದಾರಿಕೆ ಮತ್ತು ಏಕಮತ್ಯದೊಂದಿಗೆ ಸದಾ ಕಾಲ ನಿಲ್ಲುತ್ತದೆ ಎಂದು ತಿಳಿಸಿದರು.