2021 ರಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ಮಾಡಿದ ಜನಪರ ಘೋಷಣೆ ಮತ್ತು ಪಿಎಂಜಿಕೆಎವೈ ಅಡಿಯಲ್ಲಿ ಹೆಚ್ಚುವರಿ ಆಹಾರ ಭದ್ರತೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ-ಹಂತ 7) ಯನ್ನು ಇನ್ನೂ 3 ತಿಂಗಳ ಅವಧಿಗೆ ಅಂದರೆ 2022ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು ತನ್ನ ಅನುಮೋದನೆ ನೀಡಿದೆ.
ಕೋವಿಡ್ ಪರಿಣಾಮಗಳ ತೀವ್ರತೆ ಕಡಿಮೆಯಾತ್ತಿರುವಾಗ ಮತ್ತು ವಿವಿಧ ಕಾರಣಗಳಿಂದಾಗಿ ಅಭದ್ರತೆಯ ಹಿನ್ನೆಲೆಯಲ್ಲಿ ಜಗತ್ತು ಅದರ ಪರಿಣಾಮಗಳ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ಭಾರತವು ದುರ್ಬಲ ವರ್ಗಗಳಿಗೆ ಆಹಾರ ಭದ್ರತೆಯನ್ನು ಯಶಸ್ವಿಯಾಗಿ ಒದಗಿಸುತ್ತಿದೆ ಮತ್ತು ಜನ ಸಾಮಾನ್ಯರಿಗೆ ಆಹಾರಧಾನ್ಯಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಜನರು ಜಾಗತಿಕ ಸಾಂಕ್ರಾಮಿಕ ರೋಗದ ಅವಧಿಯ ಸಂಕಷ್ಟಗಳನ್ನು ಅನುಭವಿಸಿರುವುದನ್ನು ಮನಗಂಡಿರುವ ಸರ್ಕಾರ, ಮುಂಬರುವ ಪ್ರಮುಖ ಹಬ್ಬಗಳಾದ ನವರಾತ್ರಿ, ದಸರಾ, ಮಿಲಾದ್-ಉನ್-ನಬಿ, ದೀಪಾವಳಿ, ಛತ್ ಪೂಜೆ, ಗುರುನಾನಕ್ ದೇವ್ ಜಯಂತಿ, ಕ್ರಿಸ್ಮಸ್ ಇತ್ಯಾದಿಗಳಲ್ಲಿ ಅವರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅನುವಾಗುವಂತೆ ಸಮಾಜದ ಬಡ ಮತ್ತು ದುರ್ಬಲ ವರ್ಗಗಳನ್ನು ಬೆಂಬಲಿಸಲು ಪಿಎಂಜಿಕೆಎವೈಯನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಲು ನಿರ್ಧರಿಸಿದೆ. ಇದನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ, ಸರ್ಕಾರವು ಮೂರು ತಿಂಗಳವರೆಗೆ ಪಿ.ಎಂ.ಜಿ.ಕೆ.ಎ.ವೈ.ಯ ಈ ವಿಸ್ತರಣೆಯನ್ನು ಅನುಮೋದಿಸಿದೆ, ಇದರಿಂದ ಅವರು ಯಾವುದೇ ಆರ್ಥಿಕ ಸಂಕಷ್ಟವಿಲ್ಲದೆ ಆಹಾರ ಧಾನ್ಯಗಳ ಸುಲಭ ಲಭ್ಯತೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಕಲ್ಯಾಣ ಯೋಜನೆಯಡಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) (ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳು) ಅಡಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳಿಗೆ, ನೇರ ಲಾಭ ವರ್ಗಾವಣೆ (ಡಿಬಿಟಿ) ಅಡಿಯಲ್ಲಿ ಬರುವವರು ಸೇರಿದಂತೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸಲಾಗುತ್ತದೆ.
ಪಿ.ಎಂ.ಜಿ.ಕೆ.ಎ.ವೈ.ಯ ಆರನೇ ಹಂತದವರೆಗೆ ಭಾರತ ಸರ್ಕಾರಕ್ಕೆ ಸುಮಾರು 3.45 ಲಕ್ಷ ಕೋಟಿ ರೂ.ಗಳ ಆರ್ಥಿಕ ಹೊರೆ ಬಿದ್ದಿದೆ. ಈ ಯೋಜನೆಯ ಏಳನೇ ಹಂತಕ್ಕಾಗಿ ಸುಮಾರು 44,762 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚದೊಂದಿಗೆ, ಪಿ.ಎಂ.ಜಿ.ಕೆ.ಎ.ವೈ.ಯ ಒಟ್ಟಾರೆ ವೆಚ್ಚವು ಎಲ್ಲಾ ಹಂತಗಳಿಗೆ ಸುಮಾರು 3.91 ಲಕ್ಷ ಕೋಟಿ ರೂ.ಗಳಾಗಲಿದೆ.
ಪಿ.ಎಂ.ಜಿ.ಕೆ.ಎ.ವೈ. ಹಂತ VIIರಲ್ಲಿ ಆಹಾರ ಧಾನ್ಯಗಳ ಒಟ್ಟು ಹೊರಹರಿವು ಸುಮಾರು 122 ಲಕ್ಷ ಮೆಟ್ರಿಕ್ ಟನ್ ಆಗುವ ಸಾಧ್ಯತೆಯಿದೆ. 1ರಿಂದ 7ನೇ ಹಂತದ ಆಹಾರ ಧಾನ್ಯಗಳ ಒಟ್ಟು ಹಂಚಿಕೆ ಸುಮಾರು 1121 ಲಕ್ಷ ಮೆಟ್ರಿಕ್ ಟನ್ ಆಗಿದೆ.
ಇಲ್ಲಿಯವರೆಗೆ, ಪಿಎಂಜಿಕೆಎವೈ 25 ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅದರ ವಿವರ ಈ ಕೆಳಗಿನಂತಿದೆ
• ಹಂತ 1 ಮತ್ತು 2 (8 ತಿಂಗಳುಗಳು): 20ರ ಏಪ್ರಿಲ್' ನಿಂದ 20ರ ನವೆಂಬರ್ ವರೆಗೆ
• ಹಂತ-III ರಿಂದ V (11 ತಿಂಗಳುಗಳು) : 21ರ ಮೇ ತಿಂಗಳಿಂದ ರಿಂದ 22 ರ ಮಾರ್ಚ್'ವರೆಗೆ
• ಆರನೇ ಹಂತ (6 ತಿಂಗಳುಗಳು) : 22ರ ಏಪ್ರಿಲ್' ನಿಂದ 22ರ ಸೆಪ್ಟೆಂಬರ್ ವರೆಗೆ.
ಕೋವಿಡ್-19 ಬಿಕ್ಕಟ್ಟಿನ ಕಠಿಣ ಸಮಯದಲ್ಲಿ ಪ್ರಾರಂಭವಾದ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂ-ಜಿಕೆಎವೈ), ಬಡವರು, ನಿರ್ಗತಿಕರು ಮತ್ತು ದುರ್ಬಲ ಕುಟುಂಬಗಳು / ಫಲಾನುಭವಿಗಳಿಗೆ ಆಹಾರ ಭದ್ರತೆಯನ್ನು ಒದಗಿಸಿದೆ, ಇದರಿಂದಾಗಿ ಅವರು ಆಹಾರ ಧಾನ್ಯಗಳ ಅಲಭ್ಯತೆಯಿಂದಾಗಿ ಅಥವಾ ಕೊರತೆಯಿಂದಾಗಿ ತೊಂದರೆಗೊಳಗಾಗುವುದು ತಪ್ಪಿದೆ. ಇದು ಫಲಾನುಭವಿಗಳಿಗೆ ಸಾಮಾನ್ಯವಾಗಿ ವಿತರಿಸಲಾಗುವ ಮಾಸಿಕ ಆಹಾರ ಧಾನ್ಯಗಳ ಪ್ರಮಾಣವನ್ನು ದುಪ್ಪಟ್ಟುಗೊಳಿಸಿದೆ.
ಹಿಂದಿನ ಹಂತಗಳ ಅನುಭವವನ್ನು ಗಮನಿಸಿದರೆ, ಪಿಎಂಜಿಕೆಎವೈ-7 ರ ಕಾರ್ಯಕ್ಷಮತೆಯು ಈ ಹಿಂದೆ ಸಾಧಿಸಿದ ಕಾರ್ಯಕ್ಷಮತೆಯಷ್ಟೇ ಉನ್ನತ ಮಟ್ಟದಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿದೆ.