ಸಿಂಗಾಪುರದ ಉಪ ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವ ಶ್ರೀ ಲಾರೆನ್ಸ್ ವಾಂಗ್, ಸಿಂಗಾಪುರದ ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಶ್ರೀ ಗಾನ್ ಕಿಮ್ ಯಾಂಗ್ ಮತ್ತು ಭಾರತದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಒಳಗೊಂಡ ಭಾರತ-ಸಿಂಗಾಪುರ ಸಚಿವರ ಮಟ್ಟದ ಜಂಟಿ ನಿಯೋಗವು ಇಂದು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿತು. 2022ರ ಸೆಪ್ಟೆಂಬರ್ 17ರಂದು ನವದೆಹಲಿಯಲ್ಲಿ ನಡೆದ ಭಾರತ-ಸಿಂಗಾಪುರ ಸಚಿವರ ದುಂಡುಮೇಜಿನ (ಐಎಸ್ಎಂಆರ್) ಉದ್ಘಾಟನಾ ಅಧಿವೇಶನದ ಫಲಶ್ರುತಿಗಳ ಬಗ್ಗೆ ಸಚಿವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಇದು ಶ್ರೀ ಲಾರೆನ್ಸ್ ವಾಂಗ್ ಅವರು ಉಪಪ್ರಧಾನಮಂತ್ರಿಯಾಗಿ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ.
ಐ.ಎಸ್.ಎಂ.ಆರ್. ಸ್ಥಾಪನೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯ ಮತ್ತು ಭಾರತ-ಸಿಂಗಾಪುರ ದ್ವಿಪಕ್ಷೀಯ ಬಾಂಧವ್ಯದ ವಿಶಿಷ್ಟ ಸ್ವರೂಪವನ್ನು ಪ್ರತಿಬಿಂಬಿಸುವ ಒಂದು ಮಹತ್ವದ ಉಪಕ್ರಮವಾಗಿದೆ. ಸಚಿವರುಗಳು ಪ್ರಧಾನಮಂತ್ರಿಯವರಿಗೆ ಸಭೆಯಲ್ಲಿ ನಡೆದ ವಿಸ್ತೃತ ಶ್ರೇಣಿಯ ಚರ್ಚೆಗಳು, ವಿಶೇಷವಾಗಿ ಡಿಜಿಟಲ್ ಸಂಪರ್ಕ, ಫಿನ್ಟೆಕ್, ಹಸಿರು ಆರ್ಥಿಕತೆ, ಕೌಶಲ್ಯ ಅಭಿವೃದ್ಧಿ ಮತ್ತು ಆಹಾರ ಭದ್ರತೆಯ ಉದಯೋನ್ಮುಖ ಕ್ಷೇತ್ರಗಳ ಚರ್ಚೆಗಳ ಬಗ್ಗೆ ವಿವರಿಸಿದರು.
ಪ್ರಧಾನಮಂತ್ರಿಯವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಐ.ಎಸ್.ಎಂ.ಆರ್ ನಂತಹ ಉಪಕ್ರಮಗಳು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತವೆ ಎಂದು ಆಶಿಸಿದರು. ಸಿಂಗಾಪುರದ ಪ್ರಧಾನಮಂತ್ರಿ ಲೀ ಮತ್ತು ಅದರ ಜನತೆಗೆ ಪ್ರಧಾನಮಂತ್ರಿಯವರು ಶುಭ ಕೋರಿದರು.