ಫ್ರಾನ್ಸ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಶ್ರೀ ಎಮ್ಯುನುಯಲ್ ಬೊನ್ನೆ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ, ರಕ್ಷಣಾ ಮತ್ತು ಕಾರ್ಯತಂತ್ರ ಸಹಕಾರ ಸೇರಿದಂತೆ ಭಾರತ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ ಪ್ರಮುಖ ವಿಷಯಗಳಲ್ಲಿ ಉಭಯ ದೇಶಗಳು ಸಾಧಿಸಿರುವ ಪ್ರಗತಿ ಬಗ್ಗೆ ಪ್ರಧಾನಮಂತ್ರಿ ಅವರು ತೃಪ್ತಿ ವ್ಯಕ್ತಪಡಿಸಿದರು.
ಶ್ರೀ ಬೊನ್ನೆ ಅವರು, ಸಾಗರ ಸಹಕಾರ ಮತ್ತು ಬಹುಪಕ್ಷೀಯ ಸಹಕಾರ ಸೇರಿದಂತೆ ಹಲವು ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳಲ್ಲಿ ಭಾರತ-ಫ್ರಾನ್ಸ್ ನಡುವಿನ ಸಹಕಾರ ಸಂಬಂಧದ ಕುರಿತು ಪ್ರಧಾನಮಂತ್ರಿ ಅವರಿಗೆ ಮಾಹಿತಿಯನ್ನು ನೀಡಿದರು.
ಪ್ರಧಾನಮಂತ್ರಿ ಅವರು ಇತ್ತೀಚೆಗೆ ಅಧ್ಯಕ್ಷ ಮಾಕ್ರೋನ್ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನೆನಪಿಸಿಕೊಂಡರು ಮತ್ತು ಅವರ ಆರೋಗ್ಯದಿಂದ ಇರುವಂತೆ ಶುಭ ಕೋರಿದರು. ಅಲ್ಲದೆ, ಅವರು ಅನುಕೂಲಕರ ಪರಿಸ್ಥಿತಿಯನ್ನು ನೋಡಿಕೊಂಡು ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಅವರು ಅಧ್ಯಕ್ಷರಿಗೆ ಪುನಃ ಆಹ್ವಾನ ನೀಡಿದರು.
2021ರ ಜನವರಿ 7ರಂದು ನಡೆದ ಭಾರತ-ಫ್ರಾನ್ಸ್ ಕಾರ್ಯತಂತ್ರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲು ಶ್ರೀ ಎಮ್ಯುನುಯಲ್ ಬೊನ್ನೆ ಅವರು ಭಾರತಕ್ಕೆ ಭೇಟಿ ನೀಡಿದ್ದರು.