ಸಿಂಗಾಪುರದ ಉಪಪ್ರಧಾನ ಮಂತ್ರಿ ಹಾಗೂ ಹಣಕಾಸು ಸಚಿವ ಶ್ರೀ ಹೆಂಗ್ ಸ್ವೀ ಕೀಟ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿದರು.
ಸಿಂಗಾಪುರದ ಪ್ರಧಾನ ಮಂತ್ರಿ ಶ್ರೀ ಲೀ ಹ್ಸೀನ್ ಲೂಂಗ್ ಹಾಗೂ ಮಿನಿಸ್ಟರ್ ಎಮೆರಿಟಸ್ ಗೊ ಚೋಕ್ ಟೋಂಗ್ ಅವರ ಶುಭಾಶಯಗಳನ್ನು ಶ್ರೀ ಹೆಂಗ್ ಸ್ವೀ ಕೀಟ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ತಿಳಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅವರೊಂದಿಗೆ ನಡೆಸಿದ ಫಲದಾಯಕ ಚರ್ಚೆಗಳನ್ನು ನೆನಪಿಸಿಕೊಂಡು, ತಮ್ಮ ವತಿಯಿಂದ ಅವರಿಗೆ ಶುಭಾಶಯಗಳನ್ನು ತಿಳಿಸುವಂತೆ ಉಪಪ್ರಧಾನ ಮಂತ್ರಿ ಶ್ರೀ ಹೆಂಗ್ ಸ್ವೀ ಕೀಟ್ ಅವರನ್ನು ವಿನಂತಿಸಿದರು.
ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ಕಳೆದ ತಿಂಗಳು ನ್ಯೂಯಾರ್ಕ್ನಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಸಿಂಗಾಪುರದ ಪ್ರಧಾನ ಮಂತ್ರಿ ಶ್ರೀ ಲೀ ಹ್ಸೀನ್ ಲೂಂಗ್ ಅವರು ಭಾಗವಹಿಸಿದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಧನ್ಯವಾದಗಳನ್ನು ತಿಳಿಸಿದರು.
ಭಾರತ ಸರಕಾರ ಕೈಗೊಳ್ಳುತ್ತಿರುವ ಪರಿವರ್ತನಾತ್ಮಕ ಕ್ರಮಗಳ ಬಗ್ಗೆ ಶ್ಲಾಘಿಸಿದ ಉಪಪ್ರಧಾನ ಮಂತ್ರಿ ಶ್ರೀ ಕೀಟ್, ಈ ಕ್ರಮಗಳಿಂದ ವಿಶೇಷವಾಗಿ ಮೂಲಭೂತ ಸೌಕರ್ಯಗಳ ವಲಯದಲ್ಲಿ ಹೂಡಿಕೆಗಳ ಅವಕಾಶಗಳು ಹೆಚ್ಚಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಣಕಾಸು ವಲಯದ ತಂತ್ರಜ್ಞಾನ ಸೇರಿದಂತೆ ಎಲ್ಲ ಬಗೆಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಹಾಗೂ ಸಿಂಗಾಪುರದ ಮಧ್ಯೆ ಸಹಕಾರ ವೃದ್ಧಿಯಾಗುತ್ತಿದೆ ಎಂದು ಅವರು ತಿಳಿಸಿದರು.
ಉಭಯ ರಾಷ್ಟ್ರಗಳ ಮಧ್ಯೆ ಹೂಡಿಕೆ ಹಾಗೂ ವ್ಯಾಪಾರದ ಸಂಬಂಧಗಳು ಬಲಿಷ್ಠವಾಗುತ್ತಿರುವ ಕುರಿತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದರು. ಸಿಂಗಾಪುರದಲ್ಲಿ ರುಪೇ ಕಾರ್ಡ್ ಹಾಗೂ ಭೀಮ್ ಆಪ್ ಕಾರ್ಯಾರಂಭಗೊಂಡಿರುವುದರಿಂದ ಹಣಕಾಸು ವಹಿವಾಟುಗಳಿಗೆ ಅನುಕೂಲವಾಗಲಿದೆ ಎಂದು ಅವರು ನುಡಿದರು. ಸಿಂಗಾಪುರದ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಚೆನ್ನೈನಲ್ಲಿ ನಡೆದ ಎರಡನೇ ಜಂಟಿ ಹ್ಯಾಕಾಥಾನ್ ಕಾರ್ಯಕ್ರಮ ಯಶಸ್ವಿಯಾಗಿದ್ದನ್ನು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ಈ ಎಲ್ಲ ಬೆಳವಣಿಗೆಗಳು ಉಭಯ ದೇಶಗಳ ನಡುವಿನ ನಿಕಟ ಸಮುದಾಯ, ವ್ಯಾಪಾರ ಹಾಗೂ ಆವಿಷ್ಕಾರಗಳ ಕ್ಷೇತ್ರದಲ್ಲಿನ ಸಂಬಂಧಗಳ ಅಭಿವೃದ್ಧಿಯನ್ನು ಬಿಂಬಿಸುತ್ತವೆ ಎಂದು ಅವರು ತಿಳಿಸಿದರು.