ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ(ಯುಎನ್‌ಜಿಎ) 76ನೇ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಲ್ಡೀವ್ಸ್‌ನ ವಿದೇಶಾಂಗ ಸಚಿವರಾದ ಘನವೆತ್ತ ಅಬ್ದುಲ್ಲಾ ಶಾಹಿದ್ ಅವರು ಶುಕ್ರವಾರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಜುಲೈ 7, 2021ರಂದು ನ್ಯೂಯಾರ್ಕ್‌ನಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಆಯ್ಕೆ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಮಹಾಧಿವೇಶನದ ಗೌರವಾನ್ವಿತ ಅಧ್ಯಕ್ಷರಾಗಿ ಘನವೆತ್ತ ಅಬ್ದುಲ್ಲಾ ಶಾಹಿದ್ ಭಾರತಕ್ಕೆ ಭೇಟಿ ನೀಡಿದರು.
ಚುನಾವಣೆಯಲ್ಲಿ ಜಯಗಳಿಸಿದ ಶ್ರೀ ಅಬ್ದುಲ್ಲಾ ಶಾಹಿದ್ ಅವರನ್ನು ಅಭಿನಂದಿಸಿದ ಪ್ರಧಾನಿ, ಇದು ವಿಶ್ವ ವೇದಿಕೆಯಲ್ಲಿ ಹೆಚ್ಚುತ್ತಿರುವ ಮಾಲ್ಡೀವ್ಸ್‌ನ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
'ಭರವಸೆಯ ಅಧ್ಯಕ್ಷಸ್ಥಾನʼ ದೃಷ್ಟಿಕೋನದ ಹೇಳಿಕೆಗಾಗಿ ನೂತನ ಅಧ್ಯಕ್ಷರಿಗೆ ಪ್ರಧಾನ ಅಭಿನಂದಿಸಿದರು ಮತ್ತು ಅವರ ಅಧ್ಯಕ್ಷೀಯ ಅವಧಿಯಲ್ಲಿ ಭಾರತದಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರದ ಬಗ್ಗೆ ಭರವಸೆ ನೀಡಿದರು.
ವಿಶ್ವದ ಪ್ರಸ್ತುತ ವಾಸ್ತವತೆ ಮತ್ತು ವಿಶ್ವದ ಬಹುಸಂಖ್ಯಾತ ಜನರ ಆಶೋತ್ತರಗಳನ್ನು ಪ್ರತಿಬಿಂಬಿಸಲು ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಸೇರಿದಂತೆ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಗಳ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಕಂಡುಬಂದಿರುವ ತ್ವರಿತ ಬೆಳವಣಿಗೆಯ ಬಗ್ಗೆಯೂ ಪ್ರಧಾನಮಂತ್ರಿ ಮತ್ತು ಘನವೆತ್ತ ಅಬ್ದುಲ್ಲಾ ಶಾಹಿದ್ ಅವರು ಚರ್ಚಿಸಿದರು. ಕೋವಿಡ್-19 ಸಾಂಕ್ರಾಮಿಕದ ನಿರ್ಬಂಧಗಳ ಹೊರತಾಗಿಯೂ ದ್ವಿಪಕ್ಷೀಯ ಯೋಜನೆಗಳು ಉತ್ತಮವಾಗಿ ಪ್ರಗತಿ ಸಾಧಿಸುತ್ತಿವೆ ಎಂದು ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು. ಭಾರತದ ʻನೆರೆಯವರಿಗೆ ಮೊದಲ ಆದ್ಯತೆʼ ನೀತಿ ಮತ್ತು ʻಸಾಗರ್ʼ ದೃಷ್ಟಿಕೋನದ ಪ್ರಮುಖ ಆಧಾರಸ್ತಂಭವಾಗಿ ಮಾಲ್ಡೀವ್ಸ್‌ಗೆ ನೀಡಲಾದ ಮಹತ್ವವನ್ನು ಅವರು ಒತ್ತಿ ಹೇಳಿದರು.