ಕಝಕಿಸ್ತಾನ್, ಕಿರ್ಗಿಜ್ ಗಣರಾಜ್ಯ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ವಿದೇಶಾಂಗ ಸಚಿವರುಗಳು 2021 ಡಿಸೆಂಬರ್ 20 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಭಾರತ-ಮಧ್ಯ ಏಷ್ಯಾದ 3ನೇ ಸಂವಾದ ಸಭೆಯಲ್ಲಿ ಭಾಗವಹಿಸಲು ಮಧ್ಯ ಏಷ್ಯಾದ ದೇಶಗಳ ವಿದೇಶಾಂಗ ಸಚಿವರುಗಳು ನವದೆಹಲಿಗೆ ಭೇಟಿ ನೀಡುತ್ತಿದ್ದಾರೆ.
ಮಧ್ಯ ಏಷ್ಯಾದ ವಿದೇಶಾಂಗ ಸಚಿವರುಗಳು ತಮ್ಮ ರಾಷ್ಟ್ರಗಳ ಅಧ್ಯಕ್ಷರ ಶುಭಾಶಯಗಳನ್ನು ಪ್ರಧಾನಮಂತ್ರಿ ಮೋದಿಯವರಿಗೆ ಸಲ್ಲಿಸಿದರು ಮತ್ತು ಭಾರತದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ತಮ್ಮ ರಾಷ್ಟ್ರದ ನಾಯಕತ್ವ ಸಿದ್ಧವಾಗಿದೆ ಎಂದು ಒತ್ತಿ ಹೇಳಿದರು. 2021 ರ ಡಿಸೆಂಬರ್ 18-19 ರಂದು ಭಾರತದ ವಿದೇಶಾಂಗ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಭಾರತ-ಮಧ್ಯ ಏಷ್ಯಾ ಸಂವಾದದಲ್ಲಿ, ವ್ಯಾಪಾರ ಮತ್ತು ಸಂಪರ್ಕ, ಅಭಿವೃದ್ಧಿ ಪಾಲುದಾರಿಕೆ ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ಸೇರಿದಂತೆ ಪ್ರಾದೇಶಿಕ ವಿದ್ಯಮಾನಗಳ ಮೇಲೆ ಕೇಂದ್ರೀಕರಿಸಿ ನಡೆಸಲಾದ ಚರ್ಚೆಗಳ ಕುರಿತು ಪ್ರಧಾನಮಂತ್ರಿಯವರಿಗೆ ವಿವರ ನೀಡಿದರು.
ಭಾರತವು ತನ್ನ 'ವಿಸ್ತೃತ ನೆರೆಹೊರೆಯ' ಭಾಗವಾಗಿರುವ ಮಧ್ಯ ಏಷ್ಯಾದ ದೇಶಗಳೊಂದಿಗೆ ತನ್ನ ದೀರ್ಘಕಾಲದಿಂದ ಹೊಂದಿರುವ ಬಾಂಧವ್ಯಗಳಿಗೆ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ವರ್ಷ ಸ್ವಾತಂತ್ರ್ಯದ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಚಿವರುಗಳಿಗೆ ಅವರು ತಮ್ಮ ಅಭಿನಂದನೆಗಳನ್ನು ತಿಳಿಸಿದರು. ಅವರು 2015ರಲ್ಲಿ ಎಲ್ಲಾ ಮಧ್ಯ ಏಷ್ಯಾದ ದೇಶಗಳಿಗೆ ಮತ್ತು ನಂತರ ಕಝಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಕಿರ್ಗಿಜ್ ಗಣರಾಜ್ಯಕ್ಕೆ ಅವರ ಸ್ಮರಣೀಯ ಭೇಟಿಗಳನ್ನು ನೆನಪಿಸಿಕೊಂಡರು. ಈ ಪ್ರದೇಶದಲ್ಲಿ ಭಾರತೀಯ ಚಲನಚಿತ್ರಗಳು, ಸಂಗೀತ, ಯೋಗ ಇತ್ಯಾದಿಗಳ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಮತ್ತು ಮಧ್ಯ ಏಷ್ಯಾದ ನಡುವೆ ಸಾಂಸ್ಕೃತಿಕ ಮತ್ತು ಜನ ಸಂಪರ್ಕವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಭಾರತ ಮತ್ತು ಮಧ್ಯ ಏಷ್ಯಾದ ನಡುವಿನ ವರ್ಧಿತ ಆರ್ಥಿಕ ಸಹಕಾರದ ಸಾಮರ್ಥ್ಯವನ್ನು ಮತ್ತು ಆ ನಿಟ್ಟಿನಲ್ಲಿ ಸಂಪರ್ಕದ ಪಾತ್ರವನ್ನು ಅವರು ಒತ್ತಿ ಹೇಳಿದರು.
ಭಾರತ-ಮಧ್ಯ ಏಷ್ಯಾ ಸಂವಾದವು ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳಿಗೆ ಇಂಬು ನೀಡಿದೆ. ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳು ಮುಂದಿನ ವರ್ಷ ತಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 30 ನೇ ವಾರ್ಷಿಕೋತ್ಸವವನ್ನು ಆಚರಿಸಲಿವೆ.